-ಗಗನ್ ಚನ್ನಪ್ಪ

ವಿದೇಶ ಪ್ರವಾಸ ಮಾಡಬೇಕು ಎಂಬುದು ಬಹುತೇಕರ ಕನಸಾಗಿರುತ್ತದೆ.ಆದರೆ ಯಾವುದೇ ದೇಶಕ್ಕೆ ಭೇಟಿ ನೀಡುವ ಮೊದಲು, ಆ ಸ್ಥಳದ ಬಗ್ಗೆ ಎಲ್ಲಾ ಮಾಹಿತಿಯನ್ನು ಹೊಂದಿರುವುದು ಬಹಳ ಮುಖ್ಯ. ಪ್ರತಿಯೊಂದು ದೇಶದಲ್ಲೂ ಅವರದ್ದೇ ಆದ ಕೆಲವೊಂದು ನಿಯಮಗಳಿರುತ್ತದೆ. ಪ್ರಯಾಣಕ್ಕೂ ಮೊದಲೇ ನೀವು ಭೇಟಿ ನೀಡುವ ದೇಶದ ಬಗ್ಗೆ ತಿಳಿದುಕೊಂಡು ಮುಂದುವರಿದರೆ ಮಾತ್ರ ಯಾವುದೇ ಸಮಸ್ಯೆಗಳಿಲ್ಲದೆ ಪ್ರವಾಸವನ್ನು ಆನಂದಿಸಬಹುದು.ಇಲ್ಲದಿದ್ದರೆ ನೀವು ತಿಳಿದೋ ಅಥವಾ ತಿಳಿಯದೆಯೋ ಮಾಡಿದ ತಪ್ಪಿಗೆ ಭಾರೀ ದಂಡ ಪಾವತಿಸಬೇಕಾಗಿ ಬರಬಹುದು.ಇದು ನಿಮ್ಮ ಪ್ರವಾಸದ ಸುಂದರ ಕ್ಷಣಗಳನ್ನೂ ಹಾಳು ಮಾಡಬಹುದು. ಆದ್ದರಿಂದ ನೀವು ಈ ದೇಶಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಅವುಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ಉಗಿದರೆ ಉಗಿಸ್ಕೋತೀರಿ!

ವಿದೇಶ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಯಾವಾಗಲೂ ಸಿಂಗಾಪುರ ಮೊದಲ ಸ್ಥಾನದಲ್ಲಿರುತ್ತದೆ. ಆದರೆ ಅಲ್ಲಿನ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ. ಇದನ್ನು ನೀವು ತಿಳಿದುಕೊಳ್ಳದೇ ಪ್ರವಾಸ ಹೊರಟರೆ ಫಜೀತಿಗೆ ಸಿಕ್ಕಿಕೊಳ್ಳುವುದಂತೂ ಖಂಡಿತಾ. ಹೌದು ಸಿಂಗಾಪುರ ಬೀದಿಗಳಲ್ಲಿ ಉಗುಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಮತ್ತು ಮೂತ್ರ ವಿಸರ್ಜಿಸುವುದು ಕಂಡರೆ ಅಲ್ಲಿ ಭಾರೀ ದಂಡ ವಿಧಿಸಲಾಗುತ್ತದೆ. ಅಲ್ಲದೆ, ರಸ್ತೆ ದಾಟುವಾಗ ಅಜಾಗರೂಕತೆಯಿಂದ ವರ್ತಿಸಿದರೂ, ಜತೆಗೆ ಸಾರ್ವಜನಿಕ ಶೌಚಾಲಯವನ್ನು ಬಳಸಿದ ನಂತರ ಫ್ಲಶ್ ಮಾಡದಿದ್ದರೂ ಕೂಡ ನೀವು ಭಾರಿ ದಂಡವನ್ನು ಪಾವತಿಸಬೇಕಾಗಬಹುದು.

UAE Trip


ಮುತ್ತು ತರುವುದು ಕುತ್ತು!

ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದಲ್ಲೂ ಕೂಡ ಸಿಂಗಾಪುರದಂತೆ ಸ್ವಚ್ಛತೆಯ ಜತೆಗೆ ಭಾರತದಲ್ಲಿ ಇರದೇ ಇರುವಂಥ ಸಾಕಷ್ಟು ನಿಯಮಗಳಿವೆ. ನೀವು ನಿಮ್ಮ ಸಂಗಾತಿಯೊಂದಿಗೆ ಇಲ್ಲಿಗೆ ಭೇಟಿ ನೀಡಿದರೆ ಅವರ ಕೈ ಹಿಡಿಯುವುದು ಅಥವಾ ಸಾರ್ವಜನಿಕ ಸ್ಥಳದಲ್ಲಿ ಚುಂಬಿಸಿದರೆ, ನಿಮಗೆ ಜೈಲು ಶಿಕ್ಷೆ ಪಕ್ಕಾ.ಇದಲ್ಲದೇ ಇಲ್ಲಿ ಮಾದಕವಸ್ತು ಕಾನೂನು ತುಂಬಾ ಕಟ್ಟುನಿಟ್ಟಾಗಿದೆ. ನಿಮ್ಮಿಂದ ಎಲ್ಲಿಯಾದರೂ ನಿಯಮ ಉಲ್ಲಂಘನೆಯಾದರೆ ಜೈಲು ಶಿಕ್ಷೆಯ ಜತೆಗೆ ಭಾರೀ ದಂಡ ಪಾವತಿಸಬೇಕಾದೀತು.

ಡ್ರಗ್ ತಗೊಂಡ್ರೆ ಮರಣದಂಡನೆ!

ಅರಬ್ ದೇಶಗಳಿಗೆ ಅಂದ್ರೆ ಸೌದಿ ಅರೇಬಿಯಾಗೆ ಭೇಟಿ ನೀಡಿದಾಗ ನೀವು ಆದಷ್ಟು ಜಾಗರೂಕರಾಗಿರುವುದು ಅತ್ಯಂತ ಅಗತ್ಯ. ಇಲ್ಲಿ ನೀವು ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಮರಣ ದಂಡನೆಗೂ ಗುರಿಯಾಗುವ ಸಾಧ್ಯತೆಯಿದೆ. ಈ ದೇಶದಲ್ಲಿ, ನೀವು ಮಾದಕವಸ್ತುಗಳಿಗೆ ಸಂಬಂಧಿಸಿದಂತೆ ಏನಾದರೂ ನಿಯಮ ಉಲ್ಲಂಘನೆ ಮಾಡಿದರೆ, ನಿಮಗೆ ಮರಣದಂಡನೆ ವಿಧಿಸಬಹುದು. ಮೆಕ್ಕಾ ಮತ್ತು ಮದೀನಾದ ಕೆಲವು ಸ್ಥಳಗಳಲ್ಲಿ ಮುಸ್ಲಿಮೇತರ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ.

ಸರಕಾರದ ವಿರುದ್ಧ ಕೆಮ್ಮಂಗಿಲ್ಲ!

ಥೈಲ್ಯಾಂಡ್ ತನ್ನ ಕಠಿಣ ನಿಯಮಗಳಿಗೆ ಹೆಸರುವಾಸಿಯಾಗಿದೆ. ಈ ದೇಶವು ಮಾದಕ ವಸ್ತುಗಳ ಬಳಕೆಯ ಬಗ್ಗೆ ಬಹಳ ಕಠಿಣ ಕಾನೂನುಗಳನ್ನು ಹೊಂದಿದೆ. ಮಾದಕ ವ್ಯಸನಕ್ಕೆ ಇಲ್ಲಿ ಮರಣದಂಡನೆ ವಿಧಿಸಬಹುದು. ಇದಲ್ಲದೇ ಸರ್ಕಾರವನ್ನು ಟೀಕಿಸುವುದು ಅಥವಾ ಅವರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸುವುದು ಇಲ್ಲಿ ಜೀವಾವಧಿ ಶಿಕ್ಷೆಗೆ ಕಾರಣವಾಗುತ್ತದೆ. ಆದ್ದರಿಂದ ಪ್ರವಾಸದ ವೇಳೆ ಆದಷ್ಟು ಜಾಗರೂಕರಾಗಿರಿ.

Thailand trip (1)


ಇದು ಜಪಾನ- ಇಲ್ಲಿಲ್ಲ ಧೂಮಪಾನ ಮದ್ಯಪಾನ!

ಜಪಾನ್- ನೀವು ಜಪಾನ್‌ಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ನೀವು ಭಾರತದಲ್ಲಿ ಅಲ್ಲಲ್ಲಿ ಉಗುಳಿದಂತೆ ಅಲ್ಲಿ ಉಗುಳಲು ಅವಕಾಶವಿಲ್ಲ. ನೀವು ಸಾರ್ವಜನಿಕ ಸ್ಥಳದಲ್ಲಿ ತಪ್ಪಿ ಉಗುಳಿದರೆ ನೀವು ಇಲ್ಲಿ ದಂಡ ತೆರಬೇಕಾಗುತ್ತದೆ. ಈ ದೇಶದಲ್ಲಿ ಧೂಮಪಾನಕ್ಕಾಗಿ ಸ್ಥಳಗಳನ್ನು ಮಾಡಲಾಗಿದೆ, ನೀವು ಈ ಸ್ಥಳಗಳನ್ನು ಹೊರತುಪಡಿಸಿ ಬೇರೆಲ್ಲಿಯಾದರೂ ಧೂಮಪಾನ ಮಾಡಿದರೆ, ನಿಮಗೆ ದಂಡ ವಿಧಿಸಲಾಗುತ್ತದೆ. ಮದ್ಯಪಾನ ಮಾಡಿದ ನಂತರ ವಾಹನ ಚಲಾಯಿಸುವುದನ್ನು ಇಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪೋಸ್ ಓಕೆ ಎಕ್ಸ್ ಪೋಸ್ ನಾಟ್ ಓಕೆ!

ನೀವು ಕತಾರ್ ದೇಶಕ್ಕೆ ಭೇಟಿ ನೀಡಲು ಹೋದರೆ, ಕೆಲವು ಸ್ಥಳಗಳಲ್ಲಿ, ಮದ್ಯಪಾನ ಮಾಡುವುದನ್ನು ಇಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಸಂಗಾತಿಯನ್ನು ಚುಂಬಿಸುವುದನ್ನು ಇಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘನೆಯಾದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಇಲ್ಲಿನ ನಿಯಮವೆಂದರೆ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಭುಜಗಳು ಮತ್ತು ಮೊಣಕಾಲುಗಳನ್ನು ಮುಚ್ಚಿಕೊಳ್ಳುವಂಥ ಬಟ್ಟೆಗಳನ್ನು ಧರಿಸಬೇಕು.

Indonesia

ಗಲ್ಲು ಗಲ್ಲೆನುತಾ..

ನೀವು ಇಂಡೋನೇಷ್ಯಾಕ್ಕೆ ಭೇಟಿ ನೀಡಲು ಬಯಸಿದರೆ, ಇಲ್ಲಿನ ಮಾದಕ ವಸ್ತುಗಳ ಕಾನೂನು ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣ ಕಂಡು ಬಂದರೆ ಇಲ್ಲಿ ಮರಣದಂಡನೆ ವಿಧಿಸಲಾಗುತ್ತದೆ. ಇಲ್ಲಿನ ಪ್ರಸಿದ್ದ ಪ್ರವಾಸಿ ತಾಣವಾದ ಬಾಲಿಯಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವಾಗ ನೀವು ಡ್ರೆಸ್ ಕೋಡ್ ಅನ್ನು ಅನುಸರಿಸಬೇಕಾಗುತ್ತದೆ. ನಿಮ್ಮ ಸಂಗಾತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಚುಂಬಿಸುವುದು ಅಪರಾಧ.