Tuesday, March 31, 2026
Tuesday, March 31, 2026

ಗುಜರಾತ್‌ ಪ್ರವಾಸ ಹೋಗುವವರಿಗೆ ಇದೆಲ್ಲಾ ಗೊತ್ತಿರಲಿ

ಕಛ್ ಜಿಲ್ಲೆಯ ಧೋರ್ಡೋ ಪ್ರದೇಶದಲ್ಲಿನ ಬಿಳಿ ಮರುಭೂಮಿ, ಪ್ರಕೃತಿಯ ಅದ್ಭುತ ವೈಭವವನ್ನು ಪ್ರತಿಬಿಂಬಿಸುವ ತಾಣ. ಕಣ್ಣು ಹಾಯಿಸಿದಷ್ಟು ದೂರ ಕಾಣುವ ಶುಭ್ರ ಬಿಳಿ ಬಣ್ಣದ ಉಪ್ಪಿನ ಪದರ ನಿಸರ್ಗದ ವೈಚಿತ್ರ್ಯಕ್ಕೆ ಕನ್ನಡಿ ಹಿಡಿದಿದೆ. ಕಛ್ ಪ್ರದೇಶ 7500 ಚದರ ಕಿಲೋಮಿಟರ್ ವಿಸ್ತೀರ್ಣವನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಉಪ್ಪು ಮರುಭೂಮಿಗಳಲ್ಲಿ ಒಂದಾಗಿದೆ. ಗ್ರೇಟ್ ರಣ್‌ ಆಫ್‌ ಕಚ್‌ನ ಸೂರ್ಯಾಸ್ತಗಳು ಕಣ್ಣಿಗೆ ಹಬ್ಬವೇ ಸರಿ. ಹುಣ್ಣಿಮೆಯ ರಾತ್ರಿಯಲ್ಲಿ ಈ ಪ್ರದೇಶದಲ್ಲಿ ನಿಂತು ಬೆಳಂದಿಂಗಳನ್ನು ನೋಡುವ ಅನುಭವ ವರ್ಣನಾತೀತವಾಗಿರುತ್ತದೆ. ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆ ಇಲ್ಲಿ ನಡೆಯುವ ರಣ್ ಉತ್ಸವ.

  • ಹೆಚ್.ವಿ. ವೀಣಾ

ಭಾರತದ ವಿವಿಧ ರಾಜ್ಯಗಳಿಗೆ ಪ್ರವಾಸ ಮಾಡುವ ಅಭಿರುಚಿಯಿರುವ ನಮಗೆ ವರ್ಷದ ಮೊದಲ ತಿಂಗಳಲ್ಲಿ ಗುಜರಾತ್ ಪ್ರವಾಸ ಕೈಗೊಳ್ಳುವ ಅವಕಾಶ ದೊರೆತಿತ್ತು. ಗುಜರಾತ್ ರಾಜ್ಯ ಪ್ರಮುಖ ಐತಿಹಾಸಿಕ, ಧಾರ್ಮಿಕ ಹಾಗೂ ಸುಂದರ ಸೈಸರ್ಗಿಕ ತಾಣಗಳನ್ನು ತೆರೆದಿಡುವ ಜತೆಗೆ ತನ್ನ ವೈವಿಧ್ಯಮಯ ಸಂಸ್ಕೃತಿ ಮತ್ತು ಆಹಾರ ಸಂಸ್ಕೃತಿಯನ್ನೂ ನಮ್ಮ ಮುಂದಿಡುತ್ತದೆ. ಇಲ್ಲಿನ ಜ್ಯೋರ್ತಿಲಿಂಗಗಳು, ದ್ವಾರಕಾನಾಥ, ಏಕತಾ ಪ್ರತಿಮೆ, ರಣ್ ಆಫ್ ಕಛ್, ರಾಣಿ ಕಾ ವವ್, ಗಿರ್ ವನ್ಯಧಾಮ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಲ್ಲಿ ನಡೆಯುವ ನವರಾತ್ರಿಯ ಸಂಭ್ರಮ, ರಣ್ ಉತ್ಸವ, ಕೈಟ್ ಫೆಸ್ಟಿವಲ್ ವಿಶ್ವದೆಲ್ಲೆಡೆಯ ಪರ್ಯಟಕರನ್ನು ತನ್ನತ್ತ ಸೆಳೆಯುತ್ತದೆ.

ರಣ್‌ ಆಫ್‌ ಕಛ್‌ ಎಂಬ ಬಿಳಿ ಮರುಭುಮಿ

ಕಛ್ ಜಿಲ್ಲೆಯ ಧೋರ್ಡೋ ಪ್ರದೇಶದಲ್ಲಿನ ಬಿಳಿ ಮರುಭೂಮಿ, ಪ್ರಕೃತಿಯ ಅದ್ಭುತ ವೈಭವವನ್ನು ಪ್ರತಿಬಿಂಬಿಸುವ ತಾಣ. ಕಣ್ಣು ಹಾಯಿಸಿದಷ್ಟು ದೂರ ಕಾಣುವ ಶುಭ್ರ ಬಿಳಿ ಬಣ್ಣದ ಉಪ್ಪಿನ ಪದರ ನಿಸರ್ಗದ ವೈಚಿತ್ರ್ಯಕ್ಕೆ ಕನ್ನಡಿ ಹಿಡಿದಿದೆ. ಕಛ್ ಪ್ರದೇಶ 7500 ಚದರ ಕಿಲೋಮಿಟರ್ ವಿಸ್ತೀರ್ಣವನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಉಪ್ಪು ಮರುಭೂಮಿಗಳಲ್ಲಿ ಒಂದಾಗಿದೆ. ಗ್ರೇಟ್ ರಣ್‌ ಆಫ್‌ ಕಚ್‌ನ ಸೂರ್ಯಾಸ್ತಗಳು ಕಣ್ಣಿಗೆ ಹಬ್ಬವೇ ಸರಿ. ಹುಣ್ಣಿಮೆಯ ರಾತ್ರಿಯಲ್ಲಿ ಈ ಪ್ರದೇಶದಲ್ಲಿ ನಿಂತು ಬೆಳಂದಿಂಗಳನ್ನು ನೋಡುವ ಅನುಭವ ವರ್ಣನಾತೀತವಾಗಿರುತ್ತದೆ. ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆ ಇಲ್ಲಿ ನಡೆಯುವ ರಣ್ ಉತ್ಸವ. ಗುಜರಾತ್‌ನ ಶ್ರೀಮಂತ ಜನಪದ ಕಲೆ ಸಂಸ್ಕೃತಿಗೆ ಅದ್ಭುತ ವೇದಿಕೆ ಕಲ್ಪಿಸುವ ರಣ್ ಉತ್ಸವದಲ್ಲಿ ಒಂಟೆ ಸವಾರಿ, ಸ್ಥಳೀಯ ವೇಷ ಭೂಷಣ ಮತ್ತು ಪಗಡಿ ಧರಿಸಲು ಜತೆಗೆ ಫೊಟೋ ಕ್ಲಿಕ್ಕಿಸುವ ಇರುವ ಅವಕಾಶವನ್ನು ಪ್ರವಾಸಿಗರು ಬಿಡುವುದುಂಟೇ? ಉತ್ಸವದ ಸಂದರ್ಭದಲ್ಲಿ ಸರಕಾರ ಪ್ರವಾಸಿಗರಿಗಾಗಿ ಒದಗಿಸುವ ಟೆಂಟ್, ಸಿಟಿ ಸಾರಿಗೆ , ಮೂಲಭೂತ ವ್ಯವಸ್ಥೆಗಳು ಬಹಳ ಅಚ್ಚುಕಟ್ಟಾಗಿದ್ದವು. ʻಕಛ್ ನಹಿ ದೇಖಾ ತೊ ಕುಛ್ ನಹಿ ದೇಖಾʼ ಎನ್ನುವ ಮಾತು ಇಲ್ಲಿ ನಿಜಕ್ಕೂ ಅನ್ವರ್ಥವಾಗಿದೆ.

ಇದನ್ನೂ ಓದಿ: Road to Heaven... ಕಛ್‌ನಿಂದ ಸ್ವರ್ಗಕ್ಕೆ ಮೂರೇ ಗೇಣು

ಏಕತಾ ಪ್ರತಿಮೆ

ಗುಜರಾತ್ ರಾಜ್ಯದ ನರ್ಮದಾ ನದಿಯ ತೀರದಲ್ಲಿನ ಕೆವಾಡಿಯಾ ಪ್ರದೇಶದಲ್ಲಿ ಏಕತಾ ಪ್ರತಿಮೆ ಇದೆ. ಇದು ಪ್ರತಿಯೊಬ್ಬ ಭಾರತೀಯನೂ ಒಮ್ಮೇ ಭೇಟಿ ನೀಡಲೇಬೇಕಾದ ಸ್ಥಳ. ನಮ್ಮ ದೇಶದ ಪ್ರಥಮ ಗೃಹ ಸಚಿವರು ಹಾಗೂ ಉಪಪ್ರಧಾನಿಗಳಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ಏಕತಾ ಪ್ರತಿಮೆಯು ಭಾರತದ ಅಖಂಡತೆ, ಏಕತೆ ಮತ್ತು ರಾಷ್ಟ್ರಭಕ್ತಿಯ ಪ್ರತಿರೂಪವಾಗಿದೆ. 182 ಮೀ ಎತ್ತರದ ಈ ಪ್ರತಿಮೆ, ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಭಾರತದ ತಾಂತ್ರಿಕ ಹಾಗೂ ಎಂಜಿನಿಯರಿಂಗ್ ಕೌಶಲ್ಯಕ್ಕೆ ವಿಶ್ವಕ್ಕೆ ಮಾದರಿಯಾಗಿದೆ. ಪ್ರತಿಮೆಯ ಒಳಭಾಗದಲ್ಲಿ ಮ್ಯೂಸಿಯಂ, ಪ್ರದರ್ಶನ ಗ್ಯಾಲರಿ, ವೀಕ್ಷಣಾ ಗ್ಯಾಲರಿಗಳು ಮನಸೆಳೆಯುವಂತಿವೆ. ವೀಕ್ಷಣಾ ಗ್ಯಾಲರಿಯಿಂದ ಕಾಣಸಿಗುವ ಸರ್ದಾರ್ ಸರೋವರ ಅಣೆಕಟ್ಟು ಮತ್ತು ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಸರಕಾರದ ದೂರದೃಷ್ಟಿಯ ಫಲವಾಗಿ ಗ್ರಾಮೀಣ ಪ್ರದೇಶವೊಂದು ಸಮೃದ್ಧವಾಗಿ ಅಭಿವೃದ್ಧಿಗೊಂಡಿರುವುದಕ್ಕೆ ಕೆವಾಡಿಯಾ ಗ್ರಾಮ ನಿದರ್ಶನವಾಗಿದೆ. ಪ್ರತಿಮೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬಣ್ಣಬಣ್ಣದ ಉದ್ಯಾನಗಳು, ಬೆಳಕಿನ ಪ್ರದರ್ಶನಗಳು, ಜಂಗಲ್ ಸಫಾರಿಗಳು ಪ್ರವಾಸಿಗರ ಆಕರ್ಷಣೆಗೆ ನಿರ್ಮಿಸಲಾಗಿದೆ. ಸಂಜೆ 7 ಗಂಟೆಗೆ ಪ್ರಾರಂಭವಾಗುವ ಲೇಸರ್ ಶೋ ಮೂಲಕ ಸರ್ದಾರರ ಜೀವನ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಸುಂದರ ಕಥನವನ್ನು ಕಣ್ತುಂಬಿಕೊಳ್ಳಬಹುದು.

Untitled design (17)

ಏಕತಾ ಪ್ರತಿಮೆಯ ಎಕರೆಗಟ್ಟಲೆ ಪ್ರದೇಶದಲ್ಲಿ ಪ್ರವಾಸಿಗರ ಓಡಾಟಕ್ಕೆ ಬಸ್ ವ್ಯವಸ್ಥೆ, ಎಸಿ ಬಸ್ ನಿಲ್ದಾಣ, ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಬಸ್ ವ್ಯವಸ್ಥೆಗಳ ಜತೆಗೆ ಇಲ್ಲಿ ಮಹಿಳಾ ಚಾಲಕರೇ ಇರುವ ಪಿಂಕ್ ಆಟೋಗಳು ಎಲ್ಲರ ಗಮನವನ್ನು ಸೆಳೆಯುತ್ತವೆ.

ಸೌರಾಷ್ಟ್ರೇ ಸೋಮನಾಥಂ. . .

ಹಿಂದೂ ಪುರಾಣಗಳಲ್ಲಿ ಜ್ಯೋರ್ತಿಲಿಂಗ ದರ್ಶನವು ಶಿವನ ಪರಮರೂಪದ ದರ್ಶನವೆಂಬ ನಂಬಿಕೆಯಿದೆ. ಗುಜರಾತ್ ಪ್ರವಾಸದ ಬಹುಮುಖ್ಯ ಭಾಗವೇ ಸೋಮನಾಥ ದೇವಾಲಯ ದರ್ಶನ. ಭಾರತದ ಪವಿತ್ರ ಶಿವಕ್ಷೇತ್ರಗಳಲ್ಲಿ ಒಂದಾಗಿರುವ ಸೋಮನಾಥ ದೇವಾಲಯ ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ಪಠಾಣ್ ನಗರದಲ್ಲಿದೆ. ಈ ಸ್ಥಳದಲ್ಲಿ ಕಪಿಲ, ಹಿರಣ ಮತ್ತು ಸರಸ್ವತಿ ನದಿಗಳು ಸಂದಿಸುವ ತ್ರಿವೇಣಿ ಸಂಗಮವನ್ನೂ ಕಾಣಬಹುದು.

ಅನೇಕ ಬಾರಿ ವಿದೇಶಿ ಆಕ್ರಮಗಳನ್ನು ಮೆಟ್ಟಿ ನಿಂತ ಸೋಮನಾಥ ದೇವಾಲಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಈ ದೇಗುಲಕ್ಕೆ ಸಹಸ್ರ ವರ್ಷಗಳು ತುಂಬಿದ ಸಂದರ್ಭದಲ್ಲಿ ಸೋಮನಾಥನ ದರ್ಶನದ ಭಾಗ್ಯ ದೊರೆತ ನಮ್ಮಲ್ಲಿ ಧನ್ಯತೆಯ ಭಾವವಿತ್ತು. ಸ್ವಾತಂತ್ರ್ಯದ ನಂತರದಲ್ಲಿ ದೇಗುಲದ ಮರುನಿರ್ಮಾಣಕ್ಕೆ ಅಡಿಗಲ್ಲು ಇರಿಸಿದ ಭಾರತದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲರ ಇಚ್ಛಾಶಕ್ತಿಯಿಂದ ಇಂದಿಗೂ ಸೋಮನಾಥ ದೇವಾಲಯದ ಧಾರ್ಮಿಕ ವೈಭವ ಹಾಗೂ ವಾಸ್ತುಶಿಲ್ಪದ ಶ್ರೀಮಂತಿಕೆ ಕಾಪಾಡಿಕೊಂಡು ಬರಲು ಸಹಕಾರಿಯಾಗಿದೆ.

ರಾಣಿ ಕಾ ವವ್

ಭಾರತದ ವಾಸ್ತು ಶಿಲ್ಪವು ಧಾರ್ಮಿಕ ನಂಬಿಕೆ, ವಿಜ್ಞಾನ, ಕಲೆ ಮತ್ತು ತಂತ್ರಜ್ಞಾನಗಳ ಸುಂದರ ಸಂಗಮ. ವಿವಿಧ ರಾಜವಂಶಗಳು, ಸಂಸ್ಕೃತಿಗಳು, ಭಾರತವನ್ನು ಐತಿಹಾಸಿಕವಾಗಿ ಶ್ರೀಮಂತಗೊಳಿಸಿವೆ. ಗುಜರಾತ್‌ನ ಪಠಾಣ್ ಪಟ್ಟಣದಲ್ಲಿ 11ನೆಯ ಶತಮಾನದಲ್ಲಿ ಸೋಲಂಕಿ ಅರಸರ ಸಮಯದಲ್ಲಿ ಈ ಕೊಳವನ್ನು ನಿರ್ಮಿಸಲಾಗಿದೆ. ಇದು ಗುಜರಾತ್‌ನ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕಾಲಕ್ರಮೇಣ ಸರಸ್ವತಿ ನದಿಯ ಪ್ರವಾಹದಿಂದ ಮಣ್ಣಿನಲ್ಲಿ ಮುಚ್ಚಲ್ಪಟ್ಟಿದ್ದ ಈ ಬಾವಿಯನ್ನು 20ನೆಯ ಶತಮಾನದಲ್ಲಿ ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಿಸಿದೆ. 2014ರಲ್ಲಿ ಯುನೆಸ್ಕೋ ಈ ತಾಣವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ.

ಈ ಕೊಳ 23 ಮೀಟರ್ ಆಳವಿದ್ದು, ಪುರಾಣಗಳ ಕಥನ ಹಾಗೂ ಹಲವು ದೇವತೆಗಳ, ಅಪ್ಸರೆಯರ ಕೆತ್ತನೆಗಳನ್ನೊಳಗೊಂಡಿದ್ದು, ಇನ್ವರ್ಟೆಡ್ ಟೆಂಪಲ್ (ಒಳಮುಖವಾಗಿರುವ ದೇವಸ್ಥಾನ) ಎಂದೇ ಖ್ಯಾತಿಪಡೆದಿದೆ. ಧಾರ್ಮಿಕ ಆಚರಣೆಗಳ ಕೇಂದ್ರವಾಗಿದ್ದ ಈ ಸ್ಥಳವು ಮಳೆನೀರು ಸಂಗ್ರಹಣೆಯ ಶ್ರೇಷ್ಠ ಉದಾಹರಣೆಯಾಗಿ ಕಾಣುತ್ತದೆ. ಭಾರತದ ಶತಮಾನಗಳ ಪರಂಪರೆ ಹಾಗೂ ವೈಜ್ಞಾನಿಕ ಕೌಶಲ್ಯದ ಪ್ರತಿರೂಪವಾದ ರಾಣಿ ಕಾ ವವ್ ಚಿತ್ರವು ನಮ್ಮ 100 ರೂ. ನೋಟಿನ ಮೇಲೆ ಸ್ಥಾನ ಪಡೆದಿರುವುದು ಅದರ ಹಿರಿಮೆಗೆ ಸಂದ ಗೌರವ.

Untitled design (19)

ಪ್ರವಾಸಿಗರನ್ನು ಪ್ರೀತಿಯಿಂದ ಕಾಣುವ ಸ್ನೇಹಜೀವಿಗಳು

ಗುಜರಾತ್ ರಾಜ್ಯದ ಗುಂಡಿರಹಿತ ಅಗಲವಾದ ರಸ್ತೆಗಳು ನಮ್ಮ ಪಯಣವನ್ನು ಸುಗಮಗೊಳಿಸಿದವು. ಅಲ್ಲಿನ ಜನರಲ್ಲಿ ಧರ್ಮ ಮತ್ತು ಸಂಸ್ಕೃತಿ ಬಗೆಗಿನ ಜಾಗೃತಿ ಮತ್ತು ಆಸ್ಥೆ ನಮ್ಮನ್ನು ಚಕಿತಗೊಳಿಸಿದ್ದು ಸುಳ್ಳಲ್ಲ. ಪ್ರವಾಸದುದ್ದಕ್ಕೂ ನಾವು ಸವಿದ ಥೇಪ್ಲಾ, ಖಾಖ್ರ, ದಾಬೇಲಿ ಸೇರಿ ವಿವಿಧ ಸ್ಥಳೀಯ ಆಹಾರಗಳು ಗುಜರಾತ್ ಜನರು ಆಹಾರ ಪ್ರಿಯರೆಂಬುದನ್ನು ಒತ್ತಿ ಹೇಳುತ್ತಿದ್ದವು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಗುಜರಾತ್ ಭಾರತದ ಶ್ರೀಮಂತ ಪರಂಪರೆಗೆ ಮತ್ತಷ್ಟು ಮೆರಗು ತುಂಬಿದೆ. ಗುಜರಾತ್ ರಾಜ್ಯಕ್ಕೆ ಸಾಮಾನ್ಯವಾಗಿ ಅಕ್ಟೋಬರ್ ನಿಂದ ಫೆಬ್ರವರಿವರೆಗೆ ಪ್ರವಾಸ ಕೈಗೊಳ್ಳಬಹುದು. ಒಂದು ಪ್ರಮುಖ ಪ್ರವಾಸಿ ಸ್ಥಳದಿಂದ ಮತ್ತೊಂದಕ್ಕೆ ಕನಿಷ್ಠ 100 ಕಿಮೀ ಕ್ರಮಿಸುವುದು ಅನಿವಾರ್ಯ. ಹಾಗಾಗಿ ಉತ್ತಮ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು. ನಾವು ತೆರಳಿರುವ ಜಾಗದ ಮಹಿಮೆಯನ್ನು ಅಲ್ಲಿನ ಸ್ಥಳೀಯರು ಉದಾರವಾಗಿ ಹೆಮ್ಮೆಯಿಂದ ವಿವರಿಸುವುದು ವಿಶೇಷ. ತಮ್ಮ ರಾಜ್ಯ, ಸಂಸ್ಕೃತಿ ಪರಂಪರೆಗಳ ಬಗ್ಗೆ ಅತೀವ ಗೌರವವಿರುವ ಗುಜರಾತಿ ಜನರು, ಅತಿಥಿಗಳನ್ನು ಪ್ರೀತಿ ಆದರಗಳಿಂದ ಸ್ವಾಗತಿಸುವ ಸ್ನೇಹಜೀವಿಗಳು. ಈ ವರ್ಷ ನಿಮ್ಮ ಟೂರ್ ಪ್ಲಾನ್‌ನಲ್ಲಿ ಗುಜರಾತ್ ಖಂಡಿತ ಇರಲಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat