Wednesday, August 12, 2026
Wednesday, August 12, 2026

ಪರಿಸರಕ್ಕೆ ಬೇಕಾಗಿರುವುದೇ ಆನೆ..

ಪ್ರತಿ ವರ್ಷ ಆಗಸ್ಟ್ 12 ರಂದು 'ವಿಶ್ವ ಆನೆಗಳ ದಿನ'ವನ್ನು ಆಚರಿಸಲಾಗುತ್ತದೆ. ಭೂಮಿಯ ಮೇಲಿನ ಅತಿ ದೊಡ್ಡ ಸಸ್ತನಿಯಾದ ಆನೆಗಳ ಗಾಂಭೀರ್ಯ, ಅವುಗಳ ಕರುಣೆ ಮತ್ತು ಪ್ರಕೃತಿಯಲ್ಲಿ ಅವು ವಹಿಸುವ ಮಹತ್ವದ ಪಾತ್ರವನ್ನು ಸ್ಮರಿಸಲು ಈ ದಿನವನ್ನು ಮೀಸಲಿಡಲಾಗಿದೆ. ಕಾಡಿನ ರಕ್ಷಕರಂತೆ ಕಾರ್ಯನಿರ್ವಹಿಸುವ ಈ ದೈತ್ಯ ಜೀವಿಗಳ ಸಂರಕ್ಷಣೆ ಮತ್ತು ಅವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಆಚರಣೆಯ ಮುಖ್ಯ ಉದ್ದೇಶ. ಈ ವಿಶೇಷ ದಿನದಂದು, ಆನೆಗಳ ಬದುಕಿನ 10 ವಿಸ್ಮಯಕಾರಿ ಮತ್ತು ಕುತೂಹಲಕಾರಿ ಸಂಗತಿಗಳು ನಿಮಗಾಗಿ.

ಪರಿಸರಕ್ಕೆ ನಿಜವಾಗಿಯೂ ಬೇಕಾಗಿರುವುದು ಆನೆ. ಆನೆ ಎಂಬ ಕಾಡಿನ ಪ್ರಾಣಿಯೂ ಹೌದು. ʼಆʼನಂದ ಮತ್ತು ʼನೆʼಮ್ಮದಿ ಎಂಬ ಆನೆಯೂ ಹೌದು. ಇವೆರಡೂ ಪರಿಸರಕ್ಕೆ ಬಹಳ ಮುಖ್ಯ. ಆನೆಗಳು ಎಂದರೆ ಬರಿ ಕಾಡಿನ ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ, ಧೈರ್ಯ, ಬುದ್ಧಿವಂತಿಕೆ ಮತ್ತು ದೀರ್ಘಾಯುಷ್ಯದ ಪ್ರತೀಕ. ಏಷ್ಯಾ ಮತ್ತು ಆಫ್ರಿಕದ ಕಾಡುಗಳಲ್ಲಿ ರಾಜ ಗಾಂಭೀರ್ಯದಿಂದ ಮೆರೆಯುವ ಈ ದೈತ್ಯ ಜೀವಿಯನ್ನು ನಾವೆಲ್ಲರೂ ಇಷ್ಟಪಡುತ್ತೇವೆ. ಆದರೆ, ಇಷ್ಟೊಂದು ಪ್ರಸಿದ್ಧವಾಗಿದ್ದರೂ ಇಂದು ಆನೆಗಳ ಅಸ್ತಿತ್ವಕ್ಕೆ ದೊಡ್ಡ ಕಂಟಕ ಎದುರಾಗಿದೆ. ಕಾಡುಗಳ ನಾಶ, ಬೇಟೆ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುವ ಶೋಷಣೆಯಿಂದಾಗಿ ಅವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

ಇದನ್ನೂ ಓದಿ: ವಿಶ್ವ ಸಿಂಹ ದಿನ

ಕಾಡಿನ ಸಮತೋಲನ ಕಾಪಾಡಿಕೊಳ್ಳಲು ಆನೆಗಳು ಎಷ್ಟು ಮುಖ್ಯವೋ, ಅವುಗಳಿಗೂ ನೋವು-ನಲಿವು, ಭಾವನೆಗಳು ಇವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ. ನಾವು ಆನೆಗಳ ನೈಜ ಸ್ವಭಾವವನ್ನು ತಿಳಿದುಕೊಂಡಾಗ ಮಾತ್ರ ಅವುಗಳ ರಕ್ಷಣೆಗೆ ಧ್ವನಿ ಎತ್ತಲು ಸಾಧ್ಯ. ಆನೆಗಳು ಎಷ್ಟು ಅಚ್ಚರಿ ಹುಟ್ಟಿಸುವ ಜೀವಿಗಳು ಮತ್ತು ಅವುಗಳಿಗೆ ಮುಕ್ತವಾಗಿ ಬದುಕುವ ಹಕ್ಕು ಏಕೆ ಸಿಗಬೇಕು ಎಂದು ತಿಳಿಸುವ 10 ರೋಚಕ ಸಂಗತಿಗಳು ಇಲ್ಲಿವೆ.

ಇವುಗಳಿಗೂ ಅಗಲಿಕೆಯ ದುಃಖವಿದೆ!

ಮನುಷ್ಯರಂತೆಯೇ ಆನೆಗಳಿಗೂ ದುಃಖದ ಅರಿವಿದೆ. ತಮ್ಮ ಹಿಂಡಿನ ಯಾವುದಾದರೂ ಆನೆ ಸತ್ತುಹೋದರೆ, ಉಳಿದ ಆನೆಗಳು ಆ ದೇಹದ ಸುತ್ತಲೂ ಗಂಟೆಗಟ್ಟಲೆ ನಿಂತು ಕಣ್ಣೀರಿಡುತ್ತವೆ, ಮೌನ ಆಚರಿಸುತ್ತವೆ! ಕುಟುಂಬದ ಜತೆ ತಲತಲಾಂತರದಿಂದ ಗಟ್ಟಿ ಬಂಧ ಬೆಳೆಸಿಕೊಂಡಿರುವ ಈ ಜೀವಿಗಳಿಗೆ, ಹಿಂಡಿನ ಸದಸ್ಯರ ಅಗಲಿಕೆ ತೀವ್ರ ನೋವನ್ನುಂಟುಮಾಡುತ್ತದೆ.

Untitled design (93)

ತಮ್ಮನ್ನು ತಾವು ಗುರುತಿಸುತ್ತವೆ!

ಪ್ರಾಣಿ ಪ್ರಪಂಚದಲ್ಲಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ತಾನೇ ಗುರುತಿಸುವ ಸಾಮರ್ಥ್ಯ ಕೆಲವೇ ಕೆಲವು ಜೀವಿಗಳಿಗಿದೆ. ಅದರಲ್ಲಿ ಆನೆ ಪ್ರಮುಖವಾದದ್ದು! ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ಕಂಡಾಗ, ತಮ್ಮ ಸೊಂಡಿಲಿನಿಂದ ತಮ್ಮ ಮುಖ ಅಥವಾ ದೇಹವನ್ನು ಮುಟ್ಟಿ ಪರೀಕ್ಷಿಸಿಕೊಳ್ಳುತ್ತವೆ. ಇಷ್ಟು ಸೂಕ್ಷ್ಮ ಬುದ್ಧಿ ಮತ್ತು ಭಾವನೆಗಳಿರುವ ಪ್ರಾಣಿಗಳನ್ನು ಸರಪಳಿಗಳಲ್ಲಿ ಬಂಧಿಸಿಡುವುದು ಅವುಗಳ ಮನಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಆನೆಗಳಿಗೆ ಜಿಗಿಯಲು ಬರುವುದಿಲ್ಲ!

ಇದು ಕೇಳಲು ಕೊಂಚ ತಮಾಷೆಯೆನಿಸಿದರೂ ಸತ್ಯ! ಭೂಮಿಯ ಮೇಲಿರುವ ಸಸ್ತನಿಗಳಲ್ಲಿ ಕುಣಿಯಲು/ಜಿಗಿಯಲು ಬಾರದ ಏಕೈಕ ಪ್ರಾಣಿ ಎಂದರೆ ಆನೆ. ಅವುಗಳ ನಾಲ್ಕೂ ಕಾಲುಗಳು ಯಾವಾಗಲೂ ನೆಲದ ಮೇಲೆಯೇ ಇರುತ್ತವೆ. ಇಷ್ಟಿದ್ದರೂ, ಪ್ರದರ್ಶನಗಳಿಗಾಗಿ ಅಥವಾ ಸರ್ಕಸ್‌ಗಳಲ್ಲಿ ಆನೆಗಳನ್ನು ಜಿಗಿಯಲು, ಕಷ್ಟಕರ ಭಂಗಿಗಳಲ್ಲಿ ನಿಲ್ಲಲು ಬಲವಂತಪಡಿಸಿದಾಗ ಅವುಗಳ ನರಗಳು ಮತ್ತು ಮೂಳೆಗಳಿಗೆ ತೀವ್ರ ಹಾನಿಯಾಗುತ್ತದೆ.

ಕಾಲುಗಳಿಂದಲೇ ಕೇಳಿಸಿಕೊಳ್ಳುತ್ತವೆ!

ಆನೆಗಳು ಬರಿ ಚಿಹ್ನೆ ಅಥವಾ ಘೀಳಿಡುವ ಮೂಲಕಷ್ಟೇ ಸಂವಹನ ನಡೆಸುವುದಿಲ್ಲ, ಅವುಗಳ ಬಳಿ ಒಂದು ಸೀಕ್ರೆಟ್ ಸಂವಹನ ವ್ಯವಸ್ಥೆ ಇದೆ. ಆನೆಗಳು ಹೂಂಕರಿಸುವಾಗ ಉಂಟಾಗುವ ಕಡಿಮೆ ಆವರ್ತನದ ಕಂಪನಗಳು ನೆಲದ ಮೂಲಕ ಮೈಲುಗಟ್ಟಲೆ ದೂರ ಸಾಗುತ್ತವೆ. ಈ ಕಂಪನಗಳನ್ನು ಇತರ ಆನೆಗಳು ತಮ್ಮ ಕಾಲಿನ ಅಡಿಯಲ್ಲಿರುವ ವಿಶೇಷ ಜೀವಕೋಶಗಳ ಮೂಲಕ ಗ್ರಹಿಸುತ್ತವೆ. ಅಂದರೆ, ಕಣ್ಣಿಗೆ ಕಾಣದಷ್ಟು ದೂರದಲ್ಲಿದ್ದರೂ ಆನೆಗಳು ತಮ್ಮ ಕಾಲಿನ ಮೂಲಕವೇ ಸಂಕೇತಗಳನ್ನು ಗ್ರಹಿಸಿ ಅಪಾಯವನ್ನು ತಿಳಿಯಬಲ್ಲವು.

ಬೆಕ್ಕಿನಂತೆ ಆನೆಗಳೂ ಗುರ್‌ ಎನ್ನುತ್ತವೆ!

ಆನೆಗಳು ಸಂತೋಷವಾಗಿದ್ದಾಗ ಅಥವಾ ತಮ್ಮ ಮರಿಗಳೊಂದಿಗೆ ಮುದ್ದಾಡುವಾಗ, ಬೆಕ್ಕುಗಳು ಮಾಡುವಂತೆ ಸಣ್ಣಗೆ ‘ಗುರ್‌...’ ಎಂದು ಶಬ್ದ ಹೊರಡಿಸುತ್ತವೆ. ಆನೆ ಮರಿಗಳಿಗೆ ತಾಯಿಯ ಈ ಶಬ್ದ ಮತ್ತು ಕಂಪನಗಳು ಸಮಾಧಾನ ಹಾಗೂ ಸುರಕ್ಷತೆಯ ಭಾವನೆ ನೀಡುತ್ತವೆ. ಇಷ್ಟು ಆತ್ಮೀಯತೆ ಇರುವ ಜೀವಿಗಳನ್ನು ಪ್ರವಾಸೋದ್ಯಮದ ಲಾಭಕ್ಕಾಗಿ ತಾಯಿ-ಮರಿಯನ್ನು ಬೇರ್ಪಡಿಸುವುದು ನಿಜಕ್ಕೂ ಕ್ರೂರ.

ಇವುಗಳ ಗರ್ಭಾವಸ್ಥೆಯ ಅವಧಿ ದೀರ್ಘ!

ನೆಲದ ಮೇಲಿನ ಪ್ರಾಣಿಗಳಲ್ಲೇ ಅತಿ ದೀರ್ಘ ಗರ್ಭಾವಸ್ಥೆ ಹೊಂದಿರುವುದು ಆನೆ. ಆನೆ ಮರಿಯೊಂದು ತಾಯಿಯ ಗರ್ಭದಲ್ಲಿ ಬರೋಬ್ಬರಿ 22 ತಿಂಗಳು ಇರುತ್ತದೆ. ಮರಿಯ ಮೆದುಳು ಮತ್ತು ದೇಹ ಸಂಪೂರ್ಣವಾಗಿ ಬೆಳವಣಿಗೆಯಾಗಲು ಇಷ್ಟು ಸುದೀರ್ಘ ಸಮಯ ಬೇಕು. ಇವುಗಳ ಸಂತಾನೋತ್ಪತ್ತಿ ಪ್ರಕ್ರಿಯೆ ನಿಧಾನವಾಗಿರುವುದರಿಂದ, ಬೇಟೆಯಿಂದಾಗಿ ಕಡಿಮೆಯಾಗುವ ಆನೆಗಳ ಸಂಖ್ಯೆ ಮತ್ತೆ ಚೇತರಿಸಿಕೊಳ್ಳಲು ದಶಕಗಳೇ ಬೇಕಾಗುತ್ತವೆ.

ಆನೆ ಮರಿಗಳು ಸೊಂಡಿಲು ಚೀಪುತ್ತವೆ!

ಮನುಷ್ಯರ ಮಗು ಸಮಾಧಾನಕ್ಕಾಗಿ ಬೆರಳು ಚೀಪುವುದನ್ನು ನೋಡಿರುತ್ತೀರಲ್ಲವೇ? ಹಾಗೆಯೇ, ಆನೆ ಮರಿಗಳೂ ಕೂಡ ತಮಗೆ ಭಯವಾದಾಗ ಅಥವಾ ಸಮಾಧಾನ ಬೇಕೆನಿಸಿದಾಗ ತಮ್ಮ ಸೊಂಡಿಲನ್ನು ಬಾಯಿಯಲ್ಲಿಟ್ಟು ಚೀಪುತ್ತವೆ! ತಾಯಿ ಮತ್ತು ಹಿಂಡಿನ ಬೆಂಬಲವಿಲ್ಲದೆ ಈ ಮರಿಗಳು ಬದುಕಲಾರವು. ಆದರೆ, ಪ್ರವಾಸಿಗರನ್ನು ರಂಜಿಸಲು ಇಂಥ ಕರುಗಳನ್ನು ತಾಯಿಯಿಂದ ಕಸಿದುಕೊಳ್ಳುವುದು ಅತ್ಯಂತ ದಯನೀಯ.

ಜೇನುನೊಣ ಕಂಡರೆ ಆನೆಗಳಿಗೆ ಭಯ!

ಇಷ್ಟೊಂದು ದೊಡ್ಡ ಆನೆಗೆ ಜೇನುನೊಣಗಳನ್ನು ಕಂಡರೆ ಭಯ ಎಂದರೆ ನಂಬುತ್ತೀರಾ? ಹೌದು! ಜೇನ್ನೊಣಗಳು ಆನೆಯ ಸೊಂಡಿಲ ಒಳಗೆ ಅಥವಾ ಕಣ್ಣಿನ ಸುತ್ತ ಚುಚ್ಚಿದರೆ ತೀವ್ರ ನೋವಾಗುತ್ತದೆ. ಹಾಗಾಗಿ, ಜೇನ್ನೊಣಗಳ ಶಬ್ದ ಕೇಳಿಸಿದ ತಕ್ಷಣ ಆನೆಗಳು ತಮ್ಮ ಹಿಂಡಿಗೆ ಎಚ್ಚರಿಕೆ ನೀಡಲು ಪ್ರತ್ಯೇಕವಾದ ಎಚ್ಚರಿಕೆಯ ಶಬ್ದ ಮಾಡುತ್ತವೆ!

ಆನೆಗಳಲ್ಲೂ ಇಂಟ್ರೋವರ್ಟ್‌ಗಳು ಇರುತ್ತವೆ!

ನಮ್ಮಂತೆಯೇ ಪ್ರತಿಯೊಂದು ಆನೆಗೂ ತನ್ನದೇ ಆದ ವ್ಯಕ್ತಿತ್ವ ಇರುತ್ತದೆ. ಕೆಲವು ಆನೆಗಳು ಎಲ್ಲರ ಜತೆ ಬೆರೆಯಲು ಇಷ್ಟಪಟ್ಟರೆ, ಇನ್ನು ಕೆಲವು ಆನೆಗಳು ನಾಚಿಕೆ ಸ್ವಭಾವದವಾಗಿದ್ದು, ಸಣ್ಣ ಗುಂಪಿನಲ್ಲಿ ಅಥವಾ ಒಂಟಿಯಾಗಿರಲು ಇಷ್ಟಪಡುತ್ತವೆ. ಪ್ರತಿಯೊಂದು ಆನೆಯೂ ವಿಶಿಷ್ಟ ಮತ್ತು ತನ್ನದೇ ಆದ ಸ್ವಭಾವ ಹೊಂದಿರುತ್ತದೆ.

ಆನೆಗಳೂ ಖಿನ್ನತೆಗೆ ಒಳಗಾಗುತ್ತವೆ!

ಆನೆಗಳು ಅತ್ಯಂತ ಸಾಮಾಜಿಕ ಜೀವಿಗಳು. ಇವುಗಳನ್ನು ಹಿಂಡಿನಿಂದ ಬೇರ್ಪಡಿಸಿ, ದೀರ್ಘಕಾಲ ಒಂಟಿಯಾಗಿ ಸರಪಳಿಯಲ್ಲಿ ಬಂಧಿಸಿಟ್ಟಾಗ, ಅವು ಮಾನಸಿಕವಾಗಿ ಕುಗ್ಗಿ 'ಖಿನ್ನತೆ'ಗೆ ಜಾರುತ್ತವೆ. ನಿರಂತರವಾಗಿ ತಲೆ ತೂಗುವುದು, ಒಂದೇ ಕಡೆ ಹೆಜ್ಜೆ ಹಾಕುವುದು ಇವುಗಳ ಮಾನಸಿಕ ಒತ್ತಡದ ಲಕ್ಷಣಗಳು.

ಆನೆಗಳು ಬರಿ ದೈತ್ಯಾಕಾರದ ಪ್ರಾಣಿಗಳಲ್ಲ, ಅವು ಮನುಷ್ಯರಂತೆಯೇ ಪ್ರೀತಿ, ಕರುಣೆ, ನೋವು ಮತ್ತು ದುಃಖವನ್ನು ಅನುಭವಿಸುವ ಸೂಕ್ಷ್ಮ ಮನಸಿನ ಜೀವ ಸಂಕುಲ. ಸ್ವಾರ್ಥಕ್ಕಾಗಿ ಇವುಗಳನ್ನು ಬಂಧಿಸುವುದು, ಪ್ರದರ್ಶನದ ವಸ್ತುವನ್ನಾಗಿ ಮಾಡುವುದು ಅಥವಾ ಪ್ರವಾಸೋದ್ಯಮದ ಹೆಸರಿನಲ್ಲಿ ಶೋಷಿಸುವುದು ಆನೆಗಳ ನೈಜ ಸ್ವಭಾವಕ್ಕೆ ಮಾಡುವ ಅನ್ಯಾಯ. ಈ 'ವಿಶ್ವ ಆನೆಗಳ ದಿನ'ದಂದು, ಆನೆ ಸವಾರಿ ಮತ್ತು ಮನೋರಂಜನೆಗಾಗಿ ಆನೆಗಳನ್ನು ಬಳಸುವ ಸ್ಥಳಗಳಿಗೆ ಪ್ರೋತ್ಸಾಹ ನೀಡದಿರಲು ನಿರ್ಧರಿಸೋಣ. ಆನೆಗಳಿಗೆ ಕಾಡಿನಲ್ಲಿ ಮುಕ್ತವಾಗಿ ಮತ್ತು ಸ್ವಚ್ಛಂದವಾಗಿ ಜೀವಿಸುವ ಹಕ್ಕಿದೆ. ಅವು ಸುರಕ್ಷಿತವಾಗಿದ್ದರೆ ಮಾತ್ರ ನಮ್ಮ ಭೂಮಿಯ ನೈಸರ್ಗಿಕ ಸಮತೋಲನ ಮತ್ತು ಕಾಡುಗಳು ಹಸಿರಾಗಿ ಉಳಿಯಲು ಸಾಧ್ಯ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!