ಹೀಲ್ ಇನ್ ಇಂಡಿಯಾ: ಜಾಗತಿಕ ವೈದ್ಯಕೀಯ ನಕ್ಷೆಯಲ್ಲಿ ಹೊಸ ಮೈಲಿಗಲ್ಲು
ಕೇಂದ್ರ ಸರ್ಕಾರದ 'ಹೀಲ್ ಇನ್ ಇಂಡಿಯಾ' ಉಪಕ್ರಮವು ಈ ಸಾಮರ್ಥ್ಯವನ್ನು ಕ್ರಮಬದ್ಧವಾಗಿ ಜಾಗತಿಕ ಮಟ್ಟದಲ್ಲಿ ಪರಿಚಯಿಸಿ ಭಾರತವನ್ನು ವಿಶ್ವಾಸಾರ್ಹ ಆರೋಗ್ಯ ತಾಣವನ್ನಾಗಿಸುವ ಮಹತ್ವಾಕಾಂಕ್ಷಿ ಪ್ರಯತ್ನವಾಗಿದೆ. ಇದರಿಂದ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲ, ಪ್ರವಾಸೋದ್ಯಮ ಮತ್ತು ಆರ್ಥಿಕ ವಲಯಕ್ಕೂ ದೊಡ್ಡ ಉತ್ತೇಜನ ಸಿಗಲಿದ್ದು, 2026ರ ವೇಳೆಗೆ ಸುಮಾರು 13 ಶತಕೋಟಿ ಡಾಲರ್ ಆದಾಯ ನಿರೀಕ್ಷಿಸಲಾಗಿದೆ.
- ಡಾ. ನರೇಂದ್ರ ಕೆ. ಶೆಟ್ಟಿ
ಭಾರತವು ಇಂದು ಕೇವಲ ಭೌಗೋಳಿಕ ಅಥವಾ ರಾಜಕೀಯ ಕಾರಣಗಳಿಂದ ಜಗತ್ತನ್ನು ಆಳುತ್ತಿಲ್ಲ, ಬದಲಾಗಿ ತನ್ನಲ್ಲಿರುವ ಸನಾತನ ಚಿಕಿತ್ಸಾ ಜ್ಞಾನದ ಮೂಲಕ ವಿಶ್ವಗುರುವಾಗುವ ಹಾದಿಯಲ್ಲಿದೆ. ಇಂದಿನ ಜಾಗತಿಕ ಸನ್ನಿವೇಶದಲ್ಲಿ ಆರೋಗ್ಯ ಸೇವೆ ಕೇವಲ ಚಿಕಿತ್ಸೆಯ ವಿಷಯವಾಗಿರದೆ, ಅದು ಆರ್ಥಿಕತೆ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯೊಂದಿಗೆ ಒಗ್ಗೂಡಿದ ವ್ಯವಸ್ಥೆಯಾಗಿದೆ. ಜಗತ್ತು ಕೇವಲ ರೋಗನಿರೋಧಕ ಶಕ್ತಿಯನ್ನಷ್ಟೇ ಅಲ್ಲ, ರೋಗ ಬರದಂತೆ ತಡೆಯುವ ವೆಲ್‌ನೆಸ್ ಸಂಸ್ಕೃತಿಯನ್ನು ಹುಡುಕುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ 'ಹೀಲ್ ಇನ್ ಇಂಡಿಯಾ' ಅಭಿಯಾನವು ಭಾರತವನ್ನು ಜಾಗತಿಕ ಮೆಡಿಕಲ್ ಟೂರಿಸಂ ಹಬ್ ಆಗಿ ರೂಪಿಸಲು ಕೈಗೊಂಡಿರುವ ಅತ್ಯಂತ ಶ್ಲಾಘನೀಯ ನಡೆಯಾಗಿದೆ. ಇದು ಕೇವಲ ವಿದೇಶಿ ರೋಗಿಗಳನ್ನು ಆಕರ್ಷಿಸುವ ಯೋಜನೆಯಾಗಿರದೆ, ಭಾರತದಲ್ಲಿರುವ ವೈದ್ಯಕೀಯ ಪರಿಣತಿ, ಮಾನವ ಸಂಪನ್ಮೂಲ, ಕಡಿಮೆ ವೆಚ್ಚದ ಗುಣಮಟ್ಟದ ಚಿಕಿತ್ಸೆ ಹಾಗೂ ಪ್ರಾಚೀನ ವೈದ್ಯಕೀಯ ಪರಂಪರೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವ ರಾಷ್ಟ್ರಮಟ್ಟದ ದೂರದೃಷ್ಟಿಯ ಹೆಜ್ಜೆಯಾಗಿದೆ.
ಜೆನ್ ಜೀ಼ಗಳ ಜತೆ ಶ್ರೀಲಂಕಾ ಸುತ್ತಿ ಇಪ್ಪತ್ತು ವರ್ಷ ಚಿಕ್ಕವಳಾದೆ!
ವೈದ್ಯಕೀಯ ವೃತ್ತಿಪರತೆ ಭಾರತದ ದೊಡ್ಡ ಬಲ: ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಭಾರತಕ್ಕೆ ಇರುವ ಅತ್ಯಂತ ದೊಡ್ಡ ಶಕ್ತಿ ಎಂದರೆ ಅಭ್ಯಾಸಪೂರ್ಣ ವೈದ್ಯರು, ಶಸ್ತ್ರಚಿಕಿತ್ಸಕರು, ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಯ ಸಮೃದ್ಧ ಲಭ್ಯತೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪರಿಣಿತ ವೈದ್ಯಕೀಯ ಸೇವೆಗಳು ದುಬಾರಿ ಅಥವಾ ಸೀಮಿತವಾಗಿದ್ದರೆ, ಭಾರತದಲ್ಲಿ ಗುಣಮಟ್ಟ ಮತ್ತು ವೆಚ್ಚದ ಸಮತೋಲನವು ರೋಗಿಗಳಿಗೆ ವಿಶ್ವಾಸ ಮೂಡಿಸುತ್ತದೆ. ಇದೇ ಕಾರಣದಿಂದ ವಿದೇಶಿ ರೋಗಿಗಳು ಭಾರತವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ 'ಹೀಲ್ ಇನ್ ಇಂಡಿಯಾ' ಉಪಕ್ರಮವು ಈ ಸಾಮರ್ಥ್ಯವನ್ನು ಕ್ರಮಬದ್ಧವಾಗಿ ಜಾಗತಿಕ ಮಟ್ಟದಲ್ಲಿ ಪರಿಚಯಿಸಿ ಭಾರತವನ್ನು ವಿಶ್ವಾಸಾರ್ಹ ಆರೋಗ್ಯ ತಾಣವನ್ನಾಗಿಸುವ ಮಹತ್ವಾಕಾಂಕ್ಷಿ ಪ್ರಯತ್ನವಾಗಿದೆ. ಇದರಿಂದ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲ, ಪ್ರವಾಸೋದ್ಯಮ ಮತ್ತು ಆರ್ಥಿಕ ವಲಯಕ್ಕೂ ದೊಡ್ಡ ಉತ್ತೇಜನ ಸಿಗಲಿದ್ದು, 2026ರ ವೇಳೆಗೆ ಸುಮಾರು 13 ಶತಕೋಟಿ ಡಾಲರ್ ಆದಾಯ ನಿರೀಕ್ಷಿಸಲಾಗಿದೆ. ಜೊತೆಗೆ ಹೊಟೇಲ್, ಸಾರಿಗೆ, ಪ್ರವಾಸೋದ್ಯಮ ಸೇವೆಗಳು ಹಾಗೂ ಟಯರ್-2 ಮತ್ತು ಟಯರ್-3 ನಗರಗಳಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆಯ ಮೂಲಕ ಸ್ಥಳೀಯ ಆರ್ಥಿಕತೆಗೂ ಹೊಸ ಚೈತನ್ಯ ದೊರೆಯಲಿದೆ.

ಪ್ರವಾಸೋದ್ಯಮ ಮತ್ತು ಆರ್ಥಿಕತೆ: ಪ್ರಾಚೀನ ವೈದ್ಯಕೀಯ ಪದ್ಧತಿಗಳ ಜಾಗತೀಕರಣದ ಹಿನ್ನೆಲೆಯಲ್ಲಿ ಭಾರತದ ಆಯುರ್ವೇದ ಮತ್ತು ನ್ಯಾಚುರೋಪಥಿ ಇಂದು ವಿಶ್ವದಾದ್ಯಂತ ವಿಶೇಷ ಮನ್ನಣೆ ಪಡೆಯುತ್ತಿದ್ದು, ಇವು ಕೇವಲ ಪರ್ಯಾಯ ಚಿಕಿತ್ಸೆಗಳು ಅಲ್ಲ, ಸಮಗ್ರ ಆರೋಗ್ಯದ ವೈಜ್ಞಾನಿಕ ವ್ಯವಸ್ಥೆಗಳೆಂಬ ಅರಿವು ಬಲವಾಗುತ್ತಿದೆ. ಆಧುನಿಕ ಶಸ್ತ್ರಚಿಕಿತ್ಸೆಯೊಂದಿಗೆ ಆಯುರ್ವೇದವನ್ನು ಶಸ್ತ್ರಚಿಕಿತ್ಸೆಗೂ ಮುನ್ನ ದೇಹ ಮತ್ತು ಮನಸಿನ ಸಿದ್ಧತೆಗಾಗಿ ಹಾಗೂ ಶಸ್ತ್ರಚಿಕಿತ್ಸೆಯ ನಂತರ ವೇಗದ ಚೇತರಿಕೆಗಾಗಿ, ನೋವು ನಿರ್ವಹಣೆಗಾಗಿ, ರೋಗನಿರೋಧಕ ಶಕ್ತಿ ವೃದ್ಧಿಗಾಗಿ ಮತ್ತು ದೀರ್ಘಕಾಲಿಕ ಹಾಗೂ ಜೀವನಶೈಲಿ ಕಾಯಿಲೆಗಳ ನಿಯಂತ್ರಣಕ್ಕಾಗಿ ಸಮನ್ವಯಗೊಳಿಸುವ 'ಇಂಟಗ್ರೇಟೆಡ್ ಮೆಡಿಸಿನ್' ಮಾದರಿ ಚಿಕಿತ್ಸೆಯಲ್ಲಿ ನಿಜವಾದ ಕ್ರಾಂತಿಯನ್ನು ತರಬಲ್ಲದು. ಗಾಯಗಳ ಶಮನವನ್ನು ವೇಗಗೊಳಿಸುವ ಆಯುರ್ವೇದ ಮೂಲಿಕೆಗಳು ಮತ್ತು ನ್ಯಾಚುರೋಪಥಿಯ ನೈಸರ್ಗಿಕ ವಿಧಾನಗಳು ರೋಗಿಗಳಿಗೆ ಸಮಗ್ರ ಆರೈಕೆಯನ್ನು ಒದಗಿಸುತ್ತವೆ. ಈ ಸಮಗ್ರ ದೃಷ್ಟಿಕೋನವನ್ನು ಜಾಗತಿಕವಾಗಿ ಹರಡಿದರೆ, ಭಾರತವು ನಿಜವಾದ ಅರ್ಥದಲ್ಲಿ ವಿಶ್ವದ 'ವೆಲ್‌ನೆಸ್ ಹಬ್' ಆಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ.
ಪ್ರವಾಸೋದ್ಯಮ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಲಾಭ: ಈ ಯೋಜನೆಯ ಪ್ರಮುಖ ವಿಶೇಷತೆ ಎಂದರೆ, ಅದು ಕೇವಲ ಚಿಕಿತ್ಸೆಗೆ ಸೀಮಿತವಾಗಿರದೆ, ಪ್ರಕ್ರಿಯಾತ್ಮಕ ಹಾಗೂ ಸಂಸ್ಥೆಯ ಮಟ್ಟದಲ್ಲಿ ಬೆಂಬಲ ಒದಗಿಸುತ್ತಿದೆ. ವೀಸಾ ಸುಗಮತೆ, ಆಸ್ಪತ್ರೆಗಳ ಮಾನ್ಯತೆ, ಅಂತಾರಾಷ್ಟ್ರೀಯ ರೋಗಿಗಳ ಮಾರ್ಗದರ್ಶನ, ಗುಣಮಟ್ಟದ ಮಾನದಂಡಗಳು, ಇವೆಲ್ಲವೂ ಭಾರತವನ್ನು ವಿಶ್ವಾಸಾರ್ಹ ಆರೋಗ್ಯ ತಾಣವನ್ನಾಗಿಸುತ್ತವೆ. ಅಲ್ಲದೇ, ವೈದ್ಯಕೀಯ ಪ್ರವಾಸೋದ್ಯಮದ ವಿಸ್ತರಣೆ ಕೇವಲ ಆಸ್ಪತ್ರೆಗಳ ಲಾಭಕ್ಕೆ ಸೀಮಿತವಾಗಿರದೆ, ಹೊಟೇಲ್ ಉದ್ಯಮ, ಸ್ಥಳೀಯ ಪ್ರವಾಸೋದ್ಯಮ, ಔಷಧಿ ಉತ್ಪಾದನೆ, ಸಂಶೋಧನಾ ಚಟುವಟಿಕೆಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳಿಗೆ ಸಹಕಾರಿಯಾಗಲಿದೆ. ಇವುಗಳು ಆರ್ಥಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಆಯುರ್ವೇದ ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸಾ ಸಂಸ್ಥೆಗಳಿಗೆ, ಇದು ವಿದೇಶಿ ರೋಗಿಗಳ ಸೇವೆಯ ಜೊತೆಗೆ ಸಂಶೋಧನೆ, ತರಬೇತಿ ಮತ್ತು ಜಾಗತಿಕ ಸಹಕಾರದ ಹೊಸ ಅವಕಾಶಗಳನ್ನು ತೆರೆಯುತ್ತವೆ.

ಇನ್ನಷ್ಟು ಬೆಂಬಲ ಅಗತ್ಯ: 'ಹೀಲ್ ಇನ್ ಇಂಡಿಯಾ' ಯೋಜನೆಗಳು ಶ್ಲಾಘನೀಯವಾದರೂ, ಭಾರತವನ್ನು ನಿಜವಾದ ಅರ್ಥದಲ್ಲಿ ಜಾಗತಿಕ ಆರೋಗ್ಯ ತಾಣವನ್ನಾಗಿಸಲು ಇನ್ನಷ್ಟು ಕ್ರಮಗಳು ಅಗತ್ಯವೆಂಬುದು ಸ್ಪಷ್ಟ. ಆಯುರ್ವೇದ ಮತ್ತು ನ್ಯಾಚುರೋಪಥಿಗೆ ಹೆಚ್ಚಿನ ಸಂಶೋಧನಾ ಅನುದಾನ, ಜಾಗತಿಕ ಮಾನದಂಡಗಳಿಗೆ ಹೊಂದುವ ಚಿಕಿತ್ಸಾ ಪ್ರೋಟೋಕಾಲ್‌ಗಳ ರೂಪಿಸುವಿಕೆ, ಅಂತಾರಾಷ್ಟ್ರೀಯ ರೋಗಿಗಳಿಗಾಗಿ ವಿಶೇಷ ವೆಲ್‌ನೆಸ್ ಕೇಂದ್ರಗಳ ಸ್ಥಾಪನೆ ಹಾಗೂ ವೈದ್ಯಕೀಯ ವೆಲ್‌ನೆಸ್ ಪ್ರವಾಸೋದ್ಯಮಕ್ಕೆ ಏಕೀಕೃತ ಬ್ರಾಂಡಿಂಗ್ ಅವಶ್ಯಕವಾಗಿದೆ. ಬಜೆಟ್ 2026ರಲ್ಲಿ ಐದು ಪ್ರಾದೇಶಿಕ ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರಗಳ ಘೋಷಣೆ ಮತ್ತು ಆಯುಷ್ ಮೂಲಸೌಕರ್ಯಕ್ಕೆ ಹೂಡಿಕೆ ಸ್ವಾಗತಾರ್ಹ ಹೆಜ್ಜೆಯಾಗಿದ್ದರೂ, ಆಯುರ್ವೇದ ಔಷಧ ಸಂಶೋಧನೆಗೆ ಹೆಚ್ಚುವರಿ ಬೆಂಬಲ ಹಾಗೂ ವಿಮಾನ ನಿಲ್ದಾಣಗಳ ಸಮೀಪ ಸುಸಜ್ಜಿತ ಮೆಡಿಕಲ್ ಟೂರಿಸಂ ಹಬ್‌ಗಳ ನಿರ್ಮಾಣ ತ್ವರಿತಗೊಳ್ಳಬೇಕು. ಇವು ಜಾರಿಗೆ ಬಂದಾಗ ಮಾತ್ರ ಭಾರತವು 'ಗ್ಲೋಬಲ್ ಹೀಲಿಂಗ್ ಡೆಸ್ಟಿನೇಶನ್' ಎಂಬ ಹೆಗ್ಗಳಿಕೆಯನ್ನು ಸಂಪೂರ್ಣವಾಗಿ ಗಳಿಸಬಲ್ಲದು.
'ಹೀಲ್ ಇನ್ ಇಂಡಿಯಾ' ಒಂದು ಯೋಜನೆ ಮಾತ್ರವಲ್ಲ, ಅದು ಭಾರತದ ಜ್ಞಾನ ಪರಂಪರೆಯ ಪುನರುತ್ಥಾನದ ಘೋಷಣೆಯಾಗಿದೆ. ಇಲ್ಲಿ ಚಿಕಿತ್ಸೆಗೆ ಬರುವವರು ಕೇವಲ ರೋಗಮುಕ್ತರಾಗಿ ಹಿಂದಿರುಗುವುದಲ್ಲ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಹೋಗಬೇಕು ಎಂಬ ಸಮಗ್ರ ದೃಷ್ಟಿಕೋನವೇ ನಮ್ಮ ದೇಶದ ವೈಶಿಷ್ಟ್ಯ. ಈ ದಿಕ್ಕಿನಲ್ಲಿ 'ಹೀಲ್ ಇನ್ ಇಂಡಿಯಾ' ಬಲವಾದ ಹೆಜ್ಜೆಯಾಗಿದ್ದು, ಇನ್ನಷ್ಟು ಸಾಂಸ್ಥಿಕ ಹಾಗೂ ಪ್ರಕ್ರಿಯಾತ್ಮಕ ಬೆಂಬಲ ದೊರೆತರೆ ಭಾರತಕ್ಕೆ ಸಮನಾದ ಜಾಗತಿಕ ಹೀಲಿಂಗ್ ಡೆಸ್ಟಿನೇಶನ್ ಮತ್ತೊಂದಿಲ್ಲವೆಂಬುದು ನಿಶ್ಚಿತ.
( ಲೇಖಕರು: ಮುಖ್ಯ ಸ್ವಾಸ್ಥ್ಯ ಅಧಿಕಾರಿ ಕ್ಷೇಮವನ, ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆ)