ಜೆನ್ ಜೀ಼ಗಳ ಜತೆ ಶ್ರೀಲಂಕಾ ಸುತ್ತಿ ಇಪ್ಪತ್ತು ವರ್ಷ ಚಿಕ್ಕವಳಾದೆ!
ನನಗೇನೋ ಕಿರಿಯರ ಸಹವಾಸ ಹಿತವಾಗಿರಬಹುದು, ಆದರೆ ಅವರುಗಳೂ ನನ್ನ ಗೆಳೆತನವನ್ನು ಬಯಸುವಾಗ ನಾನು ಅಚ್ಚರಿಗೊಂಡಿದ್ದೂ ಹೌದು. “ ವೈಬ್ಸ್ ಮ್ಯಾಚ್ ಆದರೆ ಸಾಕು ವಾಣಿ, ವಯಸ್ಸಲ್ಲ” ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿ, ಒಂದು ವಾರವಿಡೀ ನನ್ನೊಂದಿಗೆ ಕಳೆದುದನ್ನು ನಾನು ಹೇಗೆ ಮರೆಯಬಲ್ಲೆ? ಕ್ಯಾಂಡಿಯಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ಆಡಿದ ಅಂತಾಕ್ಷರಿ,ನುವಾರಾಎಲಿಯಾದ ನಡುಗುವ ಚಳಿರಾತ್ರಿಯಲ್ಲಿ ಮಾಡಿದ ಪಬ್ ಹಾಪ್ಪಿಂಗ್, ನನಗೆರಡು ಸ್ಕರ್ಟ್ ಕೊಡಿಸಲು ತಮಿಳಿನಲ್ಲಿ ಮಾಡಿದ ಚೌಕಾಶಿ, ಬೆಂತೋಟಾದ ಬೀಚ್ ರಿಸಾರ್ಟಿನಲ್ಲಿ ಮಾಡಿದ ಮಸ್ತಿ, ಕೊಲೊಂಬೋದಲ್ಲಿ ಆಡಿದ ವಿದಾಯದ ಮಾತುಗಳೆಲ್ಲಾ ಬೆಚ್ಚಗಿನ ನೆನಪುಗಳೇ!
- ವಾಣಿ ಸುರೇಶ್ ಕಾಮತ್
ಡಿಸೆಂಬರ್ 24, 2025. ಕೊಲೊಂಬೋದ ಏರ್‌ಪೋರ್ಟಿನಲ್ಲಿ ಕೂತು ಬೆಂಗಳೂರಿನ ಫ್ಲೈಟಿಗೆ ಕಾಯುತ್ತಿದ್ದೆ. ಅದು ಕ್ರಿಸ್‌ಮಸ್ ಹಬ್ಬದ ಸಮಯವಾಗಿದ್ದರಿಂದ ಇಡೀ ಏರ್‌ಪೋರ್ಟ್ ಸಿಂಗಾರಗೊಂಡಿತ್ತು. ಶ್ರೀಲಂಕಾದಲ್ಲಿ ಒಂದು ವಾರ ಅದ್ಹೇಗೆ ಕಳೆದುಹೋಯಿತು ಎಂದು ಅಚ್ಚರಿಪಡುತ್ತಾ, ಸಿಹಿನೆನಪುಗಳ ಲೋಕದಲ್ಲಿ ವಿಹರಿಸುತ್ತಿದ್ದವಳಿಗೆ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ರತಿನಂ ಕರೆದಾಗಲೇ ಎಚ್ಚರವಾದದ್ದು! ಆಗಷ್ಟೇ ನಮ್ಮೆದುರಿಗೇ ದಾಟಿ ಹೋದ ಸಾಂಟಾ ಕ್ಲಾಸ್‌ನನ್ನು ನಾನು ಗಮನಿಸಲೇ ಇಲ್ಲವೆಂದು ಅವಳು ಮುನಿಸು ತೋರಿಸಿದ್ದೂ ಆಯಿತು.
ಇದನ್ನೂ ಓದಿ: ಅಪರಿಚಿತರಾಗಿದ್ದರೂ ಪರಿಚಯವಿರುವ ಹೃದಯಗಳು!
ಆ ಸಾಂಟಾ ಕ್ಲಾಸ್‌ನನ್ನು ನೋಡದಿದ್ದರೇನಾಯ್ತು? ಆ ವಾರ ನನ್ನೊಂದಿಗಿದ್ದ ಈ ನಾಲಕ್ಕು ಹುಡುಗಿಯರು ಕೂಡ ಸಾಂಟಾ ಕ್ಲಾಸ್‌ನಂತೆ ನನಗೆ ಸರ್ಪ್ರೈಜ಼್ ಗಿಫ್ಟ್ ಕೊಟ್ಟವರೇ! ಜನರ ನಡುವೆಯಿದ್ದಾಗಲೂ ಖಾಲಿತನವನ್ನು ಅನುಭವಿಸುತ್ತಿದ್ದಾಗಲೆಲ್ಲಾ ನನ್ನಲ್ಲೇ ಏನೋ ಸಮಸ್ಯೆಯಿದೆ ಅಂದುಕೊಳ್ಳುತ್ತಿದ್ದವಳಿಗೆ 2025ನೇ ವರ್ಷ ಮುಗಿಯುವ ಹೊತ್ತಿಗೆ ಸತ್ಯದ ಅರಿವು ಮೂಡಿಸಿದವರು ಅವರು! “ಯೂ ಡೋಂಟ್ ಬಿಲಾಂಗ್ ಟು ಯುವರ್ ಜನರೇಶನ್. ಯೂ ಆರ್ ಸ್ಟಿಲ್ ಯಂಗ್ ಎಟ್ ಹಾರ್ಟ್!” ಎಂದು ಜೆನ್ ಜೀ಼ ಹುಡುಗಿಯೊಬ್ಬಳು ಅತ್ಯಂತ ಸರಳವಾಗಿ ನನ್ನ ಸಮಸ್ಯೆಗೆ ಪರಿಹಾರ ಸೂಚಿಸಿದಾಗ “ಹೌದಲ್ಲ” ಎನಿಸಿತ್ತು ನನಗೆ! ಅದದೇ ಸವೆದ ಮಾತುಗಳನ್ನಾಡುವ, ಸದಾ ಅನ್ಯರಲ್ಲಿ ಕೊಂಕು ಹುಡುಕುವ, ಕನಸು ಕಾಣಲೇ ಹೆದರುವ, ಬದಲಾವಣೆಯನ್ನೇ ಬಯಸದ, ಮುಖವಾಡದ ಬದುಕಿನಲ್ಲೇ ಧನ್ಯತೆಯನ್ನು ಕಾಣುವ ಜನರ ಮಧ್ಯೆ ಉಸಿರುಗಟ್ಟಿಸಿಕೊಂಡು ಓಡಾಡುತ್ತಿದ್ದ ನನಗೆ ಒಂಟಿತನ ಕಾಡದೇ ಇರುವುದೇ? ನನ್ನದೇ ನಿಲುಮೆ ಹೊಂದಿರುವ ಬೆರಳೆಣಿಕೆಯಷ್ಟು ಮಂದಿಯನ್ನು ಬಿಟ್ಟರೆ ನನ್ನೊಂದಿಗಿರುವವರೆಲ್ಲಾ ನನಗಿಂತ ಸಣ್ಣವರೇ! ಸಮಸ್ಯೆ ನನ್ನಲ್ಲಿಲ್ಲ, ನಾನು ಫಿಟ್ ಇನ್ ಆಗುವಂಥಾ ಪರಿಸರವನ್ನು ನಾನೇ ಹುಡುಕಿಕೊಂಡು ಹೋಗಬೇಕೆನ್ನುವ ಸತ್ಯ ಹೊಳೆಯಲು ಪ್ರವಾಸವೊಂದು ಕಾರಣವಾದದ್ದು ಸೋಜಿಗವೇ ಸರಿ!

ನನ್ನ ಶ್ರೀಲಂಕಾ ಪ್ರವಾಸವೇ ವಿಶಿಷ್ಟವಾದದ್ದು. ಮಹಿಳೆಯರಿಗಾಗಿಯೇ ಮೀಸಲಾಗಿದ್ದ ಆ ಟ್ರಿಪ್ಪಿನ ಟ್ರಾವೆಲ್ ಏಜೆನ್ಸಿ ಉತ್ತರಭಾರತದ್ದು. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ಪ್ರವಾಸಿಗರ ಅನುಭವದ ರೀಲ್ಸ್ ನೋಡಿ ಅದ್ಯಾವ ಧೈರ್ಯದ ಮೇಲೆ ನಾನೊಬ್ಬಳೇ ಹೊರಟೆನೋ, ದೇವರೇ ಬಲ್ಲ! ಆದರೆ ಟೀಮ್ ಲೀಡರ್ ಸಹಿತ ಮಿಕ್ಕ ಮೂರು ಜೆನ್ ಜೀ಼ ಹುಡುಗಿಯರು ನನ್ನೊಂದಿಗಿದ್ದು, ನನ್ನನ್ನು ಇಪ್ಪತ್ತು ವರ್ಷ ಚಿಕ್ಕವಳನ್ನಾಗಿಸಿದ್ದು ಕೂಡ ದೇವರು ಕೊಟ್ಟ ವರವೇ. ಆಂಟಿ ಎಂದು ಕರೆಸಿಕೊಳ್ಳುವ ಈ ವಯಸ್ಸಿನಲ್ಲಿ ನನ್ನನ್ನು ಮಾತ್ರ ಅವರು ಹೆಸರಿಡಿದು ಕರೆದು, ನನ್ನದೇ ವಯಸ್ಸಿನ ಇತರರನ್ನು ಆಂಟಿ ಎಂದು ಕರೆದಾಗ ನನಗೆ ಪುಳಕವಾಗದೇ ಇರುತ್ತದೆಯೇ!
ನನಗೇನೋ ಕಿರಿಯರ ಸಹವಾಸ ಹಿತವಾಗಿರಬಹುದು, ಆದರೆ ಅವರುಗಳೂ ನನ್ನ ಗೆಳೆತನವನ್ನು ಬಯಸುವಾಗ ನಾನು ಅಚ್ಚರಿಗೊಂಡಿದ್ದೂ ಹೌದು. “ ವೈಬ್ಸ್ ಮ್ಯಾಚ್ ಆದರೆ ಸಾಕು ವಾಣಿ, ವಯಸ್ಸಲ್ಲ” ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿ, ಒಂದು ವಾರವಿಡೀ ನನ್ನೊಂದಿಗೆ ಕಳೆದುದನ್ನು ನಾನು ಹೇಗೆ ಮರೆಯಬಲ್ಲೆ? ಕ್ಯಾಂಡಿಯಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ಆಡಿದ ಅಂತಾಕ್ಷರಿ,ನುವಾರಾಎಲಿಯಾದ ನಡುಗುವ ಚಳಿರಾತ್ರಿಯಲ್ಲಿ ಮಾಡಿದ ಪಬ್ ಹಾಪ್ಪಿಂಗ್, ನನಗೆರಡು ಸ್ಕರ್ಟ್ ಕೊಡಿಸಲು ತಮಿಳಿನಲ್ಲಿ ಮಾಡಿದ ಚೌಕಾಶಿ, ಬೆಂತೋಟಾದ ಬೀಚ್ ರಿಸಾರ್ಟಿನಲ್ಲಿ ಮಾಡಿದ ಮಸ್ತಿ, ಕೊಲೊಂಬೋದಲ್ಲಿ ಆಡಿದ ವಿದಾಯದ ಮಾತುಗಳೆಲ್ಲಾ ಬೆಚ್ಚಗಿನ ನೆನಪುಗಳೇ! ಮೋಜು, ಮಸ್ತಿ ಎಂದು ಓದಿ ಮೂಗು ಮುರಿಯುವ ಮೊದಲೇ ಹೇಳಿಬಿಡುತ್ತೇನೆ. ಸೀತಾಮಾತೆಯ ಹಾಗೂ ಹನುಮಾನ್ ಮಂದಿರಗಳಿಗೆ ಹೋಗುವ ದಿನದಂದು ಬೆಳಗ್ಗೆಯೇ ತಲೆಸ್ನಾನ ಮುಗಿಸಿ, ಫಲಾಹಾರ ಸೇವಿಸಿ, ಹನುಮಾನ್ ಚಾಲೀಸಾ ಪಠಿಸುತ್ತಾ ನಡೆದ ಇದೇ ಯುವತಿಯರನ್ನು ನೋಡಿದಾಗ ಜೆನ್ ಜೀ಼ಯ ಬಗ್ಗೆ ನನಗಿರುವ ಸದಭಿಪ್ರಾಯ ಗಟ್ಟಿಯಾದದ್ದಂತೂ ನಿಜ!

ಜೆನ್ ಜೀ಼ (ಸುಮಾರು 13-28 ವರ್ಷ ವಯಸ್ಸಿನ) ಗಳ ಮುಕ್ತ ಚಿಂತನೆ, ನಿಷ್ಠುರತೆ, ಆರಾಮ ಜೀವನದ ಬಗ್ಗೆ ಜೋಕುಗಳು ಧಾರಾಳವಾಗಿ ಹರಿದಾಡುತ್ತಿದ್ದರೂ, ಆ ಪೀಳಿಗೆಯನ್ನು ಅಪಹಾಸ್ಯ ಮಾಡಲು ನನ್ನ ಮನಸ್ಸು ಒಪ್ಪದು. ನನ್ನ ಇಬ್ಬರು ಮಕ್ಕಳಿಂದ ಹಿಡಿದು ಸುತ್ತಮುತ್ತಲೂ ಇರುವ ಈ ಪೀಳಿಗೆಯನ್ನು ನಾನು ಸಾಕಷ್ಟು ಗಮನಿಸಿದ್ದೇನೆ. ಅಂಗೈಯಲ್ಲೇ ಡಿಜಿಟಲ್ ಪ್ರಪಂಚವನ್ನು ಧಾರಣೆ ಮಾಡಿಕೊಂಡಿರುವ ಇವರು ನೈಜ ಪ್ರಪಂಚವನ್ನು ಸುತ್ತಲು ಹಂಬಲಿಸುವ ಕಾರಣದಿಂದಲೇ ಇಂದು ಪ್ರವಾಸೋದ್ಯಮಕ್ಕೆ ಒಂದು ಉತ್ತೇಜನ ದೊರಕಿದೆ. ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್ಪೋರ್ಟಿನಲ್ಲಿ ಜೆನ್ ಜೀ಼ ಗಳಿಗೆಂದೇ ವಿಶೇಷವಾದ ಲೌಂಜ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಕಡಿಮೆ ಖರ್ಚಿನ ಏರ್ ಬಿಎನ್ಬಿ ಗಳಲ್ಲಿ ಇದ್ದುಕೊಂಡು, ಸ್ಥಳೀಯ ಜನರೊಂದಿಗೆ ಬೆರೆತು, ಪ್ರವಾಸದ ಅನುಭವವನ್ನು ಸವಿಯುವ ಮನಸ್ಥಿತಿ ಇವರದ್ದು. ಇಂಟರ್‌ನೆಟ್ಟಿನ ಮೂಲಕ ಆಫೀಸಿನ ಕೆಲಸವನ್ನೂ, ಪ್ರವಾಸವನ್ನೂ ಜತೆಯಾಗಿ ಮಾಡುವ ಡಿಜಿಟಲ್ ನೊಮಾಡ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇನ್ನೂ ಇಪ್ಪತ್ತು ವರ್ಷ ದಾಟದ ಮಕ್ಕಳು(?) ವಿದೇಶಗಳಿಗೆ ಹೋಗಿ ಬಾಡಿಗೆಯ ಕಾರುಗಳನ್ನು ರೈಟ್ ಹ್ಯಾಂಡ್ ಸೈಡಿನಲ್ಲಿ ಡ್ರೈವ್ ಮಾಡುವುದನ್ನು, ಸ್ಕೂಟರುಗಳಲ್ಲಿ ಊರು ಸುತ್ತುವುದನ್ನು ನೋಡಿ ನಾನು ಬೆರಗಾಗುತ್ತೇನೆ! “ಗ್ರೂಪಿನ ಜತೆ ಯಾಕೆ ಹೋಗ್ತೀರಾ? ಸೋಲೋ ಹೋಗಿ” ಎಂದು ನನ್ನನ್ನು ಉತ್ತೇಜಿಸುವ ಬಿಸಿರಕ್ತದ ಎದುರು, ದಶಕಗಳಿಂದ ನನ್ನೊಳಗೆ ಹೆಪ್ಪುಗೊಂಡಿರುವ ಭಯವನ್ನು ಬಿಡಿಸಿ ಹೇಳಲಾಗದೆ ತೊಳಲಾಡುತ್ತೇನೆ.

ಇಷ್ಟೇ ಅಲ್ಲ, ಅವಕಾಶ ಸಿಕ್ಕಿದಾಗಲೆಲ್ಲಾ ನಾನು ಇವರ ಬಳಿ ಕೇಳಿ ತಿಳಿದುಕೊಂಡ ಪ್ರವಾಸದ ಬಗ್ಗೆ ಅನಿಸಿಕೆ ಹೀಗಿದೆ. “ಪ್ರತಿಯೊಬ್ಬರೂ ಮದುವೆ, ಮಕ್ಕಳೆಂಬ ಜವಾಬ್ದಾರಿಯನ್ನು ಹೊರುವ ಮೊದಲು ಒಂದಿಷ್ಟು ಪ್ರಪಂಚವನ್ನು ನೋಡಿ. ಸಾಲ ಮಾಡಿ ಇನ್ಸ್ಟಾಗ್ರಾಮ್ ರೀಲ್ಸ್ ಗಳಿಗಾಗಿ ಪ್ರವಾಸಕ್ಕೆ ಹೊರಡಲೇಬೇಡಿ. ಹುಚ್ಚು ಸಾಹಸಗಳಿಂದ ದೂರವಿರಿ.ಮಿತಿಯನ್ನು ದಾಟಿ ಎಂದೂ ಕುಡಿಯಬೇಡಿ. ಗಟ್ ಫೀಲಿಂಗೇ ನಮ್ಮನ್ನು ಅಪಾಯದಿಂದ ಕಾಪಾಡುವುದರಿಂದ ಅದನ್ನಂತೂ ನಿರ್ಲಕ್ಷಿಸಬೇಡಿ. ಎಲ್ಲಕ್ಕಿಂತ ಹೆಚ್ಚಾಗಿ, ಸುರಕ್ಷತೆಯ ವಿಷಯ ಬಂದಾಗ ದುಡ್ಡಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಡಿ”
“ನಮ್ಮ ಬದುಕು, ನಮ್ಮಿಷ್ಟ” ಎಂದು ಹೇಳುತ್ತಲೇ, ತಮಗೆ ದೊರಕಿದ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ಬದಲಾಯಿಸದೆ, ಒತ್ತಡದ ಬದುಕನ್ನು ನಿಭಾಯಿಸುವ ಯುವಜನತೆ ನನಗೆ ಮುಂದಿನ ಪ್ರವಾಸಗಳಲ್ಲೂ ದೊರಕಲಿ. ನನ್ನ ಬಳಗ ಬೆಳೆಯಲಿ ಎನ್ನುವ ಆಸೆ ನನ್ನದು.