ಅಪರಿಚಿತರಾಗಿದ್ದರೂ ಪರಿಚಯವಿರುವ ಹೃದಯಗಳು!
ಸ್ಮೋಕಿಂಗ್ ಝೋನ್‌ನಲ್ಲಿ ಕುಳಿತಿದ್ದ ಯಾರೊಂದಿಗೋ ನಗುನಗುತ್ತಾ ಮಾತನಾಡುತ್ತಾ, ಸಿಗರೇಟು ಸೇದುತ್ತಿದ್ದವನನ್ನು ನೋಡಿ ಬೇಡವೆಂದರೂ ಮರುಕವಾಯಿತು. ಜ್ವಾಲಾಮುಖಿಯನ್ನೇ ಎದೆಯಲ್ಲಿಟ್ಟುಕೊಂಡರೂ ನಗುವ ವಿನಃ ಆ ಬಡಜೀವ ಇನ್ನೇನು ಮಾಡಬಹುದಿತ್ತು? ಗಂಡುಕುಲಕ್ಕೆ ಭಾವನೆಗಳನ್ನು ವ್ಯಕ್ತಪಡಿಸುವ, ಅತ್ತು ಹಗುರಾಗುವ ಸ್ವಾತಂತ್ರ್ಯವನ್ನು ಸಮಾಜ ಎಲ್ಲಿ ನೀಡಿದೆ? ಒಂದು ವೇಳೆ ಹಾಗೆ ಮಾಡಿದರೂ ಹೆಣ್ಣಿಗನೆಂಬ ಹಣೆಪಟ್ಟಿ ಸಿಗುವುದಂತೂ ನಿಜ.
-ವಾಣಿ ಸುರೇಶ್ ಕಾಮತ್
ಒಂದು ವಾರವಿಡೀ ಮಾತು, ತಿರುಗಾಟದಲ್ಲಿ ಸುಸ್ತಾಗಿ ಹೋಗಿದ್ದ ನನಗೆ ಅಂದು ಏಕಾಂತ ಬೇಕಿತ್ತು. ಸಮುದ್ರದ ದಂಡೆಯಲ್ಲಿ ಚಂದ್ರನ ಬೆಳಕಿನಲ್ಲಿ ಕೂತವಳಿಗೆ ಅಲೆಗಳ ನಾದವೇ ಪ್ರಿಯವೆನಿಸಿ, ಏರ್ ಪಾಡ್ಸ್ ಕೆಳಗಿಳಿಸಿದ್ದೆ. ಸ್ವಲ್ಪವೇ ದೂರದಲ್ಲಿದ್ದ ಬೀಚ್ ರೆಸ್ಟೊರೆಂಟಿನಿಂದ ಕೇಳಿ ಬರುತ್ತಿದ್ದ ಪಿಂಗಾಣಿಯ ಸದ್ದು, ಜನರ ಮಾತು-ನಗು, ಮೆಲುವಾದ ಸಂಗೀತ ಆ ನನ್ನ ಏಕಾಂತಕ್ಕೆ ಭಂಗವನ್ನಂತೂ ತಂದಿರಲಿಲ್ಲ. ಅಲ್ಲಿ ಕೂತು ಒಂದ್ಹತ್ತು ನಿಮಿಷಗಳು ಕಳೆದಿದ್ದವೋ ಏನೋ. ನನ್ನ ಹಿಂದಿನಿಂದ ಯಾರೋ ಬಂದು ಪಕ್ಕದಲ್ಲಿ ನಿಂತದ್ದು ಗೊತ್ತಾಗಿ, ತಲೆಯೆತ್ತಿ ನೋಡಿದರೆ ಅಲ್ಲಿ ಆ ಹುಡುಗ ನಿಂತಿದ್ದ. ಅವನೇನೋ ನನಗೆ ಹೊಸಬನಲ್ಲ. ಕಳೆದೊಂದು ವಾರದಿಂದ ನೋಡಿ ಪರಿಚಿತನಾಗಿದ್ದ. ಹಾಗಂತ ಪರಸ್ಪರ ಮುಗುಳ್ನಗೆಯ ವಿನಿಮಯ ಮಾಡಿಕೊಳ್ಳುತ್ತಿದ್ದೆವೇ ಹೊರತು ಒಂದಕ್ಷರವನ್ನೂ ಆಡಿರಲಿಲ್ಲ. ‘ನಾನಿಲ್ಲಿ ಕೂರಲೇ?’ ಎಂದವನಿಗೆ ಹೂಂ ಅಂದಿದ್ದೆ. ಕೂರಲು ಹೊರಟವನು ತನ್ನ ಕೈಯಲ್ಲಿದ್ದ ಬಿಯರ್ ಟಿನ್ ತೋರಿಸಿದಾಗ, ‘ಪರ್ವಾಗಿಲ್ಲ, ಕುಡೀರಿ’ ಎಂದಿದ್ದೆ. ಅಷ್ಟಕ್ಕೇ ಖುಷಿಯಾದವನಂತೆ ಕಂಡವ ನನ್ನಿಂದ ಎರಡಡಿ ದೂರದಲ್ಲಿ ಕೂತು, ಒಂದೆರಡು ಗುಟುಕು ಬಿಯರ್ ಹೀರಿ ಸುಮ್ಮನೆ ಕುಳಿತುಬಿಟ್ಟ.
ಸುಮ್ಮನೆಂದರೆ ಸುಮ್ಮನೆಯೇ! ನಾನೇ ಮೌನಿ ಎಂದುಕೊಂಡರೆ ಇವನು ಮಹಾಮೌನಿ ಎನಿಸುವಂತೆ, ಎಲ್ಲೋ ಕಳೆದುಹೋದವನಂತೆ ಕೂತಿದ್ದವನನ್ನು ನೋಡಿ ನನಗೊಂಚೂರು ಸಮಾಧಾನವಾಯಿತು. ಎಲ್ಲಿ ನನ್ನ ತಲೆ ತಿಂದು ಇಂಥ ಸುಂದರ ಸಂಜೆಯನ್ನು ಹಾಳು ಮಾಡುತ್ತಾನೋ ಎನ್ನುವ ಭಯ ನಿಧಾನಕ್ಕೆ ಕರಗತೊಡಗಿತು.

ಕಾಲುಗಂಟೆ ಕಳೆದ ನಂತರ ಮೌನ ನನಗೆಯೇ ಅಸಹನೀಯವೆನಿಸಿ, ‘ಏನು ಹೆಸರು?’ ಎಂದು ಕೇಳಿದೆ. ಕೂಡಲೇ ಹುಡುಗ ಚುರುಕಾದ. ಸ್ವಲ್ಪ ಹೊತ್ತು ಕಳೆಯುವಷ್ಟರಲ್ಲಿ ನಾವಿಬ್ಬರೂ ಹರಟೆ ಹೊಡೆಯಲು ಶುರು ಮಾಡಿದ್ದೆವು. ಉನ್ನತ ಶಿಕ್ಷಣ ಪಡೆದಿದ್ದ ಆತ ಕೈತುಂಬಾ ಸಂಪಾದಿಸುತ್ತಿದ್ದ. ನನ್ನ ಮಗನಿಗಿಂತ ನಾಲ್ಕು ವರ್ಷ ದೊಡ್ಡವ. ರಾಜಕೀಯ, ಸಿನಿಮಾ, ಸಾಹಿತ್ಯ ಎಂದೆಲ್ಲ ಮಾತನಾಡಿ ಮುಗಿದ ನಂತರ ವೈಯುಕ್ತಿಕ ವಿಚಾರದತ್ತ ಹೊರಳಿದ ಹುಡುಗ ಪುನಃ ತಣ್ಣಗಾಗತೊಡಗಿದ. ಬಿಯರ್ ಖಾಲಿ ಮಾಡಿ ನನ್ನತ್ತ ತಿರುಗಿದವನು ಮಾತನಾಡಲು ಶುರು ಮಾಡಿಯೇಬಿಟ್ಟ.
ಅವನೇನೋ ಜಿದ್ದಿಗೆ ಬಿದ್ದವನಂತೆ ಮಾತನಾಡುತ್ತಿದ್ದ. ಆದರೆ ನಾನು? ಬೇರೊಬ್ಬರ ಅತ್ಯಂತ ಖಾಸಗಿ ಜೀವನದ ಬಗ್ಗೆ ಕೇಳುವಷ್ಟು ಛಾತಿ ನಿಜವಾಗಿಯೂ ನನಗಿಲ್ಲ. ಅವನಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚದೆ, ಬೆಪ್ಪಳಂತೆ ಸುಮ್ಮನೆ ಕೇಳುತ್ತಿದ್ದವಳಿಗೆ ಮನವರಿಕೆಯಾದ ವಿಷಯವೆಂದರೆ ಅವನಿಗೂ ನನ್ನ ಪ್ರಶ್ನೆಗಳು, ಸಮಾಧಾನದ ಪುಕ್ಕಟೆ ಮಾತುಗಳು ಬೇಕಿರಲಿಲ್ಲ. ಅವನಿಗೆ ಬೇಕಾಗಿದ್ದದ್ದು ಅವನ ಮನದ ಮಾತುಗಳನ್ನು ಆಲಿಸುವ ಎರಡು ಕಿವಿಗಳು ಮಾತ್ರ! ಅವನು ನನ್ನ ಬಳಿ ಬಂದದ್ದೇ ತನ್ನ ನೋವನ್ನೆಲ್ಲಾ ಹೊರಹಾಕಿ ಹಗುರಾಗಲು ಎಂದು ತಿಳಿಯುತ್ತಿದ್ದಂತೆ ನನ್ನಲ್ಲಿ ಧೈರ್ಯ ತುಂಬತೊಡಗಿತು. ಗಂಟಲಲ್ಲಿ ಬಿಕ್ಕೊಂದು ಸಿಲುಕಿದಂತಾಗಿ, ಮಾತನಾಡಲು ಕಷ್ಟಪಡುತ್ತಿದ್ದವನ ಹೆಗಲ ಮೇಲೆ ಕೈ ಇಟ್ಟು, ‘ಒಮ್ಮೆ ಅತ್ತು ಬಿಡು’ ಎಂದು ಪಿಸುಗುಟ್ಟಿದೆ.
ಅಷ್ಟೇ. ಒಮ್ಮೆಲೇ ಮೇಘಸ್ಫೋಟವಾದಂತೆ ಹುಡುಗ ಅಳತೊಡಗಿದ. ದಶಕಗಳಿಂದ ಅವನು ಎದೆಯಾಳದಲ್ಲಿ ಮೂಟೆಕಟ್ಟಿ ಇಟ್ಟಿದ್ದ ನೋವು, ಅವಮಾನ, ಸೋಲು, ಹತಾಶೆ ಎಲ್ಲವೂ ಕಣ್ಣೀರಿನ ರೂಪದಲ್ಲಿ ಹರಿದುಹೋಗುತ್ತಿರುವುದನ್ನು ನೋಡಿ ದಿಗ್ಭ್ರಾಂತಳಾಗಿದ್ದೆ. ಇವನ್ಯಾರು, ಅದ್ಯಾಕೆ ಇವನು ನನ್ನ ಬಳಿ ಬಂದ, ಮುಂದೆ ನಾನೇನು ಮಾಡಲಿ ಎಂದು ಚಿಂತಿಸುತ್ತಿರುವಾಗ ಹುಡುಗನ ಅಳು ತಹಬಂದಿಗೆ ಬಂದಿತ್ತು. ಕಣ್ಣು, ಮೂಗು ಒರೆಸಿಕೊಂಡು ಸುಧಾರಿಸಿಕೊಂಡವನನ್ನು ನೋಡಿ, ಈಗ ಮಾತನಾಡುವ ಸರದಿ ನನ್ನದು ಎನ್ನುವಂತೆ, ‘ವ್ಹೈ ಮಿ?’ ಎಂದು ಕೇಳಿದ್ದೆ.
ಉತ್ತರಿಸಲು ಒಂದಿಷ್ಟು ಸಮಯ ತೆಗೆದುಕೊಂಡವನು ಸಂಕೋಚದಿಂದಲೇ ಮಾತಾಡಿದ್ದ. ‘ಒಂದು ವಾರದಿಂದ ನಿಮ್ಮನ್ನು ಗಮನಿಸ್ತಿದ್ದೆ. ನಿಮ್ಮದು ಜಡ್ಜ್ಮೆಂಟಲ್ ಸ್ವಭಾವ ಅಲ್ಲ ಅನ್ನಿಸ್ತು. ನಾವು ಮಾತೇ ಆಡದಿದ್ದರೂ ನೀವು ಯಾವುದೋ ಒಂದು ರೀತಿಯಲ್ಲಿ ನನಗೆ ಕನೆಕ್ಟ್ ಆಗುತ್ತಿದ್ದೀರಿ. ಅದೇನಂತ ಹೇಳಲೂ ನನಗೆ ಗೊತ್ತಿಲ್ಲ. ಸಾರಿ ಫಾರ್ ಟ್ರಬಲಿಂಗ್ ಯೂ.. ಬಂದೆ ಈಗ’ ಎಂದವನೇ ಎದ್ದು ಹೊರಟ.

ಈಗ ಎರಡನೆಯ ಬಾರಿ ದಿಗ್ಭ್ರಮೆಯಾಗುವ ಸರದಿ ನನ್ನದು. ನಾನು ಇನ್ನೊಬ್ಬ ವ್ಯಕ್ತಿಯ ರೆಡಾರ್‌ನಲ್ಲಿದ್ದೆ ಎನ್ನುವ ವಿಷಯವೇ ನನಗೆ ಉಸಿರುಗಟ್ಟಿಸುವಂಥದ್ದು! ತಾವರೆಯ ಎಲೆಯ ಮೇಲಿನ ನೀರಿನ ಹನಿಯಂಥಾ ಬದುಕನ್ನು ಬೇಕಂತಲೇ ಅಪ್ಪಿಕೊಂಡವಳು ನಾನು. ಇನ್ನೊಬ್ಬರ ವೈಯುಕ್ತಿಕ ಬದುಕಿನ ಬಗ್ಗೆ ತೃಣಮಾತ್ರವೂ ಆಸಕ್ತಿಯಿಲ್ಲದ ನನಗೆ ಜನರನ್ನು ಅಳೆಯುವ ವಿದ್ಯೆ ಅಪಥ್ಯ. ನಾನೆಲ್ಲೂ ‘ಫಿಟ್ ಇನ್’ ಆಗ್ತಿಲ್ಲ ಎನ್ನುವ ಕೊರಗನ್ನು ಕ್ರಮೇಣ ನನ್ನ ‘ಫ್ಲೆಕ್ಸ್’ ಆಗಿ ಬದಲಾಯಿಸಿಕೊಂಡವಳು ನಾನು. ಪರವಾಗಿಲ್ವೇ, ಹುಡುಗ ನನ್ನನ್ನು ಸರಿಯಾಗಿಯೇ ಅರ್ಥೈಸಿಕೊಂಡಿದ್ದಾನೆ ಎಂದು ಮೆಚ್ಚುತ್ತಲೇ ಅವನು ಹೋದತ್ತ ನೋಡಿದೆ.
ಸ್ಮೋಕಿಂಗ್ ಝೋನ್‌ನಲ್ಲಿ ಕುಳಿತಿದ್ದ ಯಾರೊಂದಿಗೋ ನಗುನಗುತ್ತಾ ಮಾತನಾಡುತ್ತಾ, ಸಿಗರೇಟು ಸೇದುತ್ತಿದ್ದವನನ್ನು ನೋಡಿ ಬೇಡವೆಂದರೂ ಮರುಕವಾಯಿತು. ಜ್ವಾಲಾಮುಖಿಯನ್ನೇ ಎದೆಯಲ್ಲಿಟ್ಟುಕೊಂಡರೂ ನಗುವ ವಿನಃ ಆ ಬಡಜೀವ ಇನ್ನೇನು ಮಾಡಬಹುದಿತ್ತು? ಗಂಡುಕುಲಕ್ಕೆ ಭಾವನೆಗಳನ್ನು ವ್ಯಕ್ತಪಡಿಸುವ, ಅತ್ತು ಹಗುರಾಗುವ ಸ್ವಾತಂತ್ರ್ಯವನ್ನು ಸಮಾಜ ಎಲ್ಲಿ ನೀಡಿದೆ? ಒಂದು ವೇಳೆ ಹಾಗೆ ಮಾಡಿದರೂ ಹೆಣ್ಣಿಗನೆಂಬ ಹಣೆಪಟ್ಟಿ ಸಿಗುವುದಂತೂ ನಿಜ.
ಚಿಕ್ಕಂದಿನಿಂದಲೇ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್ ನಂತಹ ಹತ್ತು ಹಲವು ‘ಮ್ಯಾನ್’ ಗಳು ಜಗತ್ತು ಉಳಿಯುವುದೇ ಗಂಡಿನಿಂದ ಎಂದು ಸಾಬೀತುಪಡಿಸುತ್ತಾರಲ್ಲಾ? ದುಷ್ಟರನ್ನು ಸದೆಬಡಿದು ಕುಟುಂಬವನ್ನು ರಕ್ಷಿಸುವ ನಾಯಕನಟನೇ ಆರಾಧ್ಯದೈವವಾಗುತ್ತಾನಲ್ಲಾ? ಹಾಗಿದ್ದ ಮೇಲೆ ಸಮಾಜ ಬಯಸುವಂತೆ ತಾನು ಯಾವತ್ತೂ ಶಕ್ತಿಶಾಲಿ ಎಂದು ತೋರಿಸಿಕೊಳ್ಳುತ್ತಾ, ಜವಾಬ್ದಾರಿಗಳ ಬೆಟ್ಟವನ್ನೇ ಹೊರುತ್ತಾ, ಯಾರ ಬಯಕೆಗೂ ‘ಇಲ್ಲ’ ಎನ್ನದೆ ಬದುಕುವುದೇ ಸಾರ್ಥಕ ಎಂದುಕೊಳ್ಳುತ್ತಾರಲ್ಲಾ? ವಿಷವನ್ನೇ ನುಂಗಿ ಲೋಕರಕ್ಷಣೆಗೈದ ಶಿವನನ್ನು ತಮಗೆ ಹೋಲಿಸಿಕೊಂಡು ತ್ಯಾಗಮಯಿ ಎಂದುಕೊಳ್ಳುತ್ತಾರಲ್ಲಾ? ಇವೆಲ್ಲದರ ನಡುವೆ ತನ್ನತನವನ್ನೇ ಕಳೆದುಕೊಂಡು, ಯಾರೊಂದಿಗೂ ಹೇಳಲಾಗದೆ ಮೂಗುಬ್ಬಸ ಸಹಿಸುತ್ತಾ, ಕೊನೆಗೆ ಮೊರೆಹೋಗುವುದು ಮದ್ಯ, ಮಾದಕವಸ್ತುಗಳಿಗೆ. ಗಂಡುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸುಳ್ಳು ಕೇಸುಗಳ ಬಗ್ಗೆ ಕಾನೂನು ಕೂಡ ಬಲವಾಗಿಲ್ಲ. ತನ್ನದೇ ಕುಟುಂಬ, ಸ್ನೇಹವಲಯವೆಲ್ಲ ಬರಡು ಭೂಮಿಯಂತೆ ಕಂಡ ಮೇಲೆ ಹೊರಗಿನವರ ಹೆಗಲು ಅರಸುವುದು ಸಹಜವೇ ತಾನೇ? ಇಲ್ಲದಿದ್ದರೆ ಸಂಪೂರ್ಣವಾಗಿ ಅಪರಿಚಿತಳಾಗಿದ್ದ ನನ್ನನ್ನು ಹುಡುಕಿ ಈತನ್ಯಾಕೆ ಬರುತ್ತಿದ್ದ?

ನನ್ನ ತಲೆ ಕೆಟ್ಟು ಮೊಸರಾಗಿ, ಇನ್ನಲ್ಲಿ ಕೂರಲು ಸಾಧ್ಯವಿಲ್ಲದೆ ಊಟ ಮಾಡಿ ಮಲಗಿದರೆ ಸಾಕೆನ್ನಿಸಿತ್ತು. ಅಲ್ಲೇ ಬಿದ್ದಿದ್ದ ಬಿಯರಿನ ಖಾಲಿ ಟಿನ್ನನ್ನು ಎತ್ತಿಕೊಂಡು ಹೊರಟಾಗ ಹುಡುಗ ನನ್ನತ್ತ ಬರತೊಡಗಿದ. ಖಾಲಿ ಟಿನ್ನಿನಂತೆ ಅವನೂ ಖಾಲಿಯಾಗಿದ್ದರಿಂದಲೋ ಏನೋ ಗಾಳಿಯಲ್ಲಿ ಹಾರುತ್ತಿರುವವನಂತೆ ಓಡೋಡಿ ಬಂದ. ಆದರೆ ನಾನು ಮಾತ್ರ ಮಣಭಾರ ಹೊತ್ತವಳಂತೆ ನಿಂತಿದ್ದೆ. ಯಾರನ್ನೂ ಹಚ್ಚಿಕೊಳ್ಳಬಾರದೆಂದು ಭೀಷ್ಮಪ್ರತಿಜ್ಞೆಗೈದಿರುವ ನನಗೆ ಯಾಕೋ ಈ ಹುಡುಗನ ಮೇಲೆ ಸಹಾನುಭೂತಿ ಮೂಡತೊಡಗಿತ್ತು.ಮುಗ್ಧ ಹೃದಯದ ಸಭ್ಯ ಹುಡುಗನೊಬ್ಬ ಕ್ರೂರ ಪ್ರಪಂಚದಲ್ಲಿ ಕಳೆದುಹೋಗುವುದು ಬೇಡ ಎನ್ನಿಸಿ, ‘ನಾನೊಂದು ಮಾತು ಹೇಳ್ತೇನೆ.ನಾನು ಜಡ್ಜ್ಮೆಂಟಲ್ ಆದೆ ಅಂದುಕೊಳ್ಳಬೇಡ. ಸಾಧ್ಯವಾದ್ರೆ ‘ಕುಡಿತ-ಎಳೆತ’ ಎರಡನ್ನೂ ಕಡಿಮೆ ಮಾಡು’ ಎಂದೆ. ‘ಐ ಪ್ರಾಮಿಸ್’ ಎಂದವನ ದನಿಯಲ್ಲಿದ್ದ ಆರ್ದ್ರತೆ ನನ್ನನ್ನು ತಟ್ಟದಿರಲಿಲ್ಲ.
ಅಲ್ಲಿಗೆ ನಮ್ಮಿಬ್ಬರ ದಾರಿ ಕವಲೊಡೆದಿತ್ತು. ನಾನು ರೆಸ್ಟೊರೆಂಟಿನತ್ತ ಹೊರಟರೆ ಆತ ಕೋಣೆಯ ದಾರಿ ಹಿಡಿದಿದ್ದ. ಮರುದಿನ ನನಗೆ ಹಗಲಾಗುವ ಹೊತ್ತಿಗೆ ಅವನು ಮತ್ತೊಂದು ದೇಶದಲ್ಲಿರುತ್ತಿದ್ದ. ನನ್ನ ಬದುಕಿನಲ್ಲಿ ಹೀಗೆ ಬಂದು ಹಾಗೆ ಹೋದವರಲ್ಲಿ ಅವನೂ ಒಬ್ಬನಾಗಿ ಹೋಗಿದ್ದ. ರೆಸ್ಟೋರೆಂಟಿನ ತುಂಬೆಲ್ಲ ನಗುಮುಖಗಳೇ ಕಂಡು, ಯಾವ ಮುಖದ ಹಿಂದೆ ಅದ್ಯಾವ ಕಥೆಗಳಿವೆಯೋ, ಆ ಕಥೆಗಳು ಯಾರ ಮುಂದೆ ಹರಡಲಿವೆಯೋ ಎನಿಸಿದಾಗ ದಾಸ್ತೋವ್ ಯೆಸ್ಕಿಯ ಮಾತೊಂದು ನೆನಪಾಯಿತು. ‘ಜೀವನದಲ್ಲಿ ಒಂದು ಬಾರಿ ನನ್ನಂಥಾ ವ್ಯಕ್ತಿಯನ್ನು ಭೇಟಿಯಾಗಿ, ಅವರ ಬಳಿ ಎಲ್ಲವನ್ನೂ ಮನಸ್ಸು ಬಿಚ್ಚಿ ಮಾತನಾಡಬೇಕು’ ಎಂದು. ಹತ್ತಿರ ಹತ್ತಿರ ನೂರೈವತ್ತು ವರ್ಷಗಳ ಹಿಂದೆ ಬರೆದ ಈ ಮಾತಿನಂತೆ ಇಂದಿಗೂ ಮನುಷ್ಯ ತನ್ನನ್ನು ತನ್ನಂತೆ ಅರ್ಥೈಸಿಕೊಳ್ಳಬಲ್ಲ ಇನ್ನೊಬ್ಬನನ್ನು ಹುಡುಕುತ್ತಾ ಅಲೆಯುತ್ತಿದ್ದಾನೆ.
ಇದಕ್ಕೆ ನಾನೂ ಹೊರತಲ್ಲ. ಆ ಹುಡುಗನೇನೋ ನನ್ನನ್ನು ಹುಡುಕಿದ. ನಾನು ಯಾರನ್ನು, ಎಲ್ಲಿ ಹುಡುಕಲಿ?