• ಜ್ಯೋತಿ ಪ್ರಸಾದ್

ಬೆಂಗಳೂರಿನ ಹೃದಯಭಾಗವಾದ ಎಂಜಿ ರಸ್ತೆಯ ಪಕ್ಕದಲ್ಲಿನ ಚರ್ಚ್ ಸ್ಟ್ರೀಟ್ ಸದಾ ಗಿಜಿಗುಟ್ಟುವ ತಾಣ. ಇಲ್ಲಿನ ವೈವಿಧ್ಯಮಯ ಆಹಾರ ತಾಣಗಳ ನಡುವೆ, ಶೋಭಾ ಮಾಲ್‌ನಲ್ಲಿ 'ಇಷಾರಾ' ಹೊಟೇಲ್‌ ಇದೆ. ಇದು ತನ್ನ ವಿಶಿಷ್ಟ ಪರಿಕಲ್ಪನೆಯಿಂದ ಪ್ರವಾಸಿಗರ ಹಾಗೂ ಆಹಾರ ಪ್ರಿಯರ ಗಮನ ಸೆಳೆಯುತ್ತಿದೆ. ರುಚಿಕರವಾದ ಊಟದ ಜತೆಗೆ ಉದಾತ್ತ ಸಾಮಾಜಿಕ ಉದ್ದೇಶದಿಂದ ಇಂದಿನ ಪೀಳಿಗೆಗೆ ಮಾದರಿಯಾಗಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ 130 ವರ್ಷಗಳ ಐತಿಹಾಸಿಕ ಹೊಟೇಲ್‌

'ಇಷಾರಾ' ಎಂದರೆ ಸನ್ನೆ ಅಥವಾ ಸಂಕೇತ ಎಂದರ್ಥ. ಇಲ್ಲಿನ ಬಹುತೇಕ ಸಿಬ್ಬಂದಿ ಶ್ರವಣದೋಷವುಳ್ಳವರು ಹಾಗೂ ಮಾತು ಬಾರದವರು. ಆದರೂ ಅವರ ಸೇವೆಯಲ್ಲಿ ಯಾವ ಕೊರತೆಯಿಲ್ಲ; ಬದಲಿಗೆ ಸುಂದರ ಮೌನ, ಅಚ್ಚುಕಟ್ಟು ನಿರ್ವಹಣೆ ಹಾಸುಹೊಕ್ಕಿದೆ. ನಾವು ಹೊಟೇಲ್‌ ಪ್ರವೇಶಿಸುತ್ತಿದ್ದಂತೆ ಹಸನ್ಮುಖಿ ಸಿಬ್ಬಂದಿ ಸನ್ನೆಯ ಮೂಲಕ ನಮ್ಮನ್ನು ಸ್ವಾಗತಿಸುತ್ತಾರೆ.

Untitled design (80)

ವಿಶಿಷ್ಟ ಸಂವಹನ ಶೈಲಿ

ಸಾಮಾನ್ಯವಾಗಿ ಹೊಟೇಲ್‌ಗಳಲ್ಲಿ ಆರ್ಡರ್ ನೀಡಲು ನಾವು ಮಾತಿನ ಮೊರೆ ಹೋಗುತ್ತೇವೆ. ಆದರೆ ಇಲ್ಲಿನ ಪದ್ಧತಿಯೇ ಬೇರೆ. ಪ್ರತಿ ಟೇಬಲ್‌ನ ಮೇಲಿರುವ ಮೆನು ಕಾರ್ಡ್‌ನಲ್ಲಿ ಪ್ರತಿಯೊಂದು ಖಾದ್ಯದ ಹೆಸರಿನ ಮುಂದೆ ಅದನ್ನು ಸನ್ನೆಯ ಮೂಲಕ ಹೇಗೆ ತಿಳಿಸಬೇಕು ಎಂಬ ಚಿತ್ರವಿರುತ್ತದೆ. ಯಾವುದನ್ನು ಆರ್ಡರ್‌ ಮಾಡಲು ಹೇಗೆ ಕೈಚಳಕ ಬಳಸಬೇಕೆಂದು ಸುಲಭವಾಗಿ ಅರ್ಥವಾಗುವಂತೆ ತೋರಿಸಲಾಗಿದೆ. ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ಈ ಸನ್ನೆಗಳ ಮೂಲಕ ನಡೆಯುವ ಸಂವಹನ ಒಂದು ಹೊಸ ಅನುಭವ ನೀಡುತ್ತದೆ. ಇದು ಕೇವಲ ಶುಚಿ-ರುಚಿಯಾದ ಭೋಜನಕ್ಕೆ ಮಾತ್ರ ಸೀಮಿತವಾಗಿರದೆ, ಭಾಷೆಯ ಹಂಗಿಲ್ಲದ ಆತ್ಮೀಯ ಸಂಬಂಧದ ಬೆಸುಗೆಯಂತೆ ಭಾಸವಾಗುತ್ತದೆ. ಅವರು ನೀಡುವ ಕಿರುಪುಸ್ತಕದ ಹಾಳೆಯಲ್ಲಿ ಬರೆದೂ ಗ್ರಾಹಕರು ಆರ್ಡರ್ ಮಾಡಬಹುದು. ನಮಗೆ ಖಾದ್ಯಗಳ ಬಗ್ಗೆ, ಅವುಗಳನ್ನು ಆರ್ಡರ್ ಮಾಡುವ ಬಗ್ಗೆ ಅಥವಾ ಬೇರೆ ಯಾವುದೇ ಅನುಮಾನಗಳಿದ್ದರೆ ತಾಳ್ಮೆಯಿಂದಲೇ ನಿವಾರಿಸುತ್ತಾರೆ.

ನೀವು ನಿಮ್ಮ ಹುಟ್ಟುಹಬ್ಬದ ಊಟವನ್ನು ಅಲ್ಲಿ ಸವಿಯುವವರಾಗಿದ್ದರೆ, ಈ ಸಿಬ್ಬಂದಿ ನಿಮ್ಮೊಂದಿಗೆ ನಿಂತು ಅವರ ಶೈಲಿಯಲ್ಲಿಯೇ ಸನ್ನೆಗಳ ಮೂಲಕ ಸಂಭ್ರಮಿಸುವುದು ಮನೋಜ್ಞವಾಗಿರುತ್ತದೆ.

ಇಷಾರಾ ಹೊಟೇಲ್‌, ತನ್ನ ಸಿಬ್ಬಂದಿಯ ಜತೆಗೆ 'ಮಲ್ಟಿ ಕ್ವಿಸಿನ್‘ ಆಹಾರದ ವಿವಿಧತೆಗೂ ಹೆಸರಾಗಿದೆ. ಭಾರತದ ವಿವಿಧ ಪ್ರಾಂತ್ಯಗಳ ವಿಶಿಷ್ಟ ಆಹಾರದ ರುಚಿ ಮತ್ತು ಸೊಗಡನ್ನು ಮೈಗೂಡಿಸಿಕೊಂಡಿರುವ ಹಲವು ಖಾದ್ಯಗಳನ್ನು ಇಲ್ಲಿ ಅಚ್ಚುಕಟ್ಟಾಗಿ ಉಣಬಡಿಸಲಾಗುತ್ತದೆ. ಉತ್ತರ ಭಾರತದ ಮಸಾಲೆ ಭರಿತ ಖಾದ್ಯಗಳಿಂದ ಹಿಡಿದು ದಕ್ಷಿಣ ಭಾರತದ ಸಾಂಪ್ರದಾಯಿಕ ರುಚಿಯವರೆಗೆ, ವಿವಿಧ ವೆಜ್ ಅಂಡ್‌ ನಾನ್ ವೆಜ್ ಆಹಾರಗಳು, ಬಗೆಬಗೆಯ ಪೇಯಗಳು, ವಿಶಿಷ್ಟ ಐಸ್‌ಕ್ರೀಮ್‌ ಮತ್ತು ಸಿಹಿ ತಿನಿಸುಗಳು, ಡೆಸರ್ಟ್‌ಗಳೂ ಲಭ್ಯ. ವಿಶಿಷ್ಟ ಸ್ಟಾರ್ಟರ್‌ಗಳು, ವಿವಿಧ ಬಗೆಯ ರೊಟ್ಟಿಗಳು, ಅನ್ನ ಹಾಗೂ ಕರಿಗಳು ಇಲ್ಲಿನ ವಿಶೇಷ. ಪ್ರತಿ ಖಾದ್ಯದಲ್ಲೂ ಗುಣಮಟ್ಟ ಮತ್ತು ತಾಜಾತನಕ್ಕೆ ಆದ್ಯತೆ ನೀಡಲಾಗುತ್ತದೆ. ಇಲ್ಲಿನ ಕಾಕ್‌ಟೇಲ್ ಮತ್ತು ಮಾಕ್‌ಟೇಲ್‌ಗಳು ನೋಡಲು ಆಕರ್ಷಕವಾಗಿದ್ದು, ಚೇತೋಹಾರಿ ರುಚಿ ಹೊಂದಿರುತ್ತವೆ.

Untitled design (78)

ಫ್ರೆಂಡ್ಸ್‌ ಅಂಡ್‌ ಫ್ಯಾಮಿಲಿ ಜತೆ ಟೈಮ್‌ ಸ್ಪೆಂಡ್‌ ಮಾಡಿ

ಶೋಭಾ ಮಾಲ್‌ನ ಮೊದಲನೆಯ ಮಹಡಿಯ ಒಳಗೆ ಈ ಹೊಟೇಲ್‌ ಇದ್ದು, ಒಳಾಂಗಣ ವಿನ್ಯಾಸ ಸರಳ ಮತ್ತು ಸುಂದರವಾಗಿದೆ. ಇಲ್ಲಿನ ಹಿತವಾದ ಬೆಳಕು, ಆರಾಮದಾಯಕ ಆಸನ ವ್ಯವಸ್ಥೆ, ಆಹ್ಲಾದಕರ ಸಂಗೀತ, ಆಧುನಿಕ ಶೈಲಿಯ ಅಲಂಕಾರ ಐಷಾರಾಮಿ ಫೀಲ್‌ ನೀಡುತ್ತವೆ. ಭೋಜನದ ಜತೆಗೆ ಗೆಳೆಯರೊಂದಿಗೆ ಸುಂದರ ಕ್ಷಣಗಳನ್ನು ಹಂಚಿಕೊಳ್ಳಲು ಅಥವಾ ಕುಟುಂಬದೊಂದಿಗೆ ಪ್ರಶಾಂತವಾಗಿ ಸಮಯ ಕಳೆಯಲು ಈ ಸ್ಥಳ ಅತ್ಯಂತ ಸೂಕ್ತವಾಗಿದೆ.

ಸಾಮಾಜಿಕ ಜವಾಬ್ದಾರಿ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದೈಹಿಕ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಉದ್ಯೋಗ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದು ಈ ಹೊಟೇಲ್‌ನ ದೊಡ್ಡ ಸಾಧನೆ. ಇಲ್ಲಿನ ಸಿಬ್ಬಂದಿಯ ಆತ್ಮವಿಶ್ವಾಸವನ್ನು ಕಂಡಾಗ, ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ ಎಂಬುದು ಮನವರಿಕೆಯಾಗುತ್ತದೆ. ಗ್ರಾಹಕರು ಇಲ್ಲಿಗೆ ಭೇಟಿನೀಡುವುದರಿಂದ ಕೇವಲ ತಮ್ಮ ಹಸಿವನ್ನು ತಣಿಸಿಕೊಳ್ಳುವುದು ಮಾತ್ರವಲ್ಲದೇ, ಇಂಥ ಮಾನವೀಯ ಪ್ರಯತ್ನಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ.

ಮಾಹಿತಿಗಾಗಿ

ಸ್ಥಳ: ಶೋಭಾ ಮಾಲ್, ಚರ್ಚ್ ಸ್ಟ್ರೀಟ್, ಬೆಂಗಳೂರು.

ಸಮಯ: ಬೆಳಗ್ಗೆ 11.30 - ರಾತ್ರಿ 11.30ರವರೆಗೆ.

ವಿಶೇಷತೆ: ಸನ್ನೆಯ ಮೂಲಕ ಸಂವಹನ ನಡೆಸುವ, ಹಸನ್ಮುಖಿ ಸಿಬ್ಬಂದಿಗಳು.