Monday, April 27, 2026
Monday, April 27, 2026

ಮಂಗಳೂರಿನಲ್ಲಿ 130 ವರ್ಷಗಳ ಐತಿಹಾಸಿಕ ಹೊಟೇಲ್‌

ಇಲ್ಲಿ ಲಕ್ಸುರಿ ಎನ್ನುವುದು ವಸ್ತುವಾಗಿ ಕಾಣುವುದಿಲ್ಲ. ಅದು ಹೊಟೇಲ್‌ನ ಸಿಬ್ಬಂದಿ ಮತ್ತು ಮಾಲೀಕರಾಗಿರುವ ಅಕ್ಕಮಕ್ಕ ಕುಟುಂಬ ನೀಡುವ ಆತಿಥ್ಯದಲ್ಲಿರುತ್ತದೆ. ಏಕೆಂದರೆ ಅವರು ಈ ಹೊಟೇಲ್‌ ಅನ್ನು ನಿರ್ವಹಿಸುತ್ತಿರುವುದು ಕೇವಲ ಉದ್ಯಮದ ದೃಷ್ಟಿಯಿಂದಲ್ಲ ಬದಲಿಗೆ ಅಕ್ಕಮಕ್ಕ ಅವರ ಐತಿಹಾಸಿಕ ಕೊಡುಗೆಯನ್ನು ಜೀವಂತವಾಗಿ ಕಾಪಾಡಿಕೊಳ್ಳುವ ದೃಷ್ಟಿಯಿಂದ.

ಮಂಗಳೂರು ಅಂದ್ರೆ ಫುಡ್ಡಿಗಳಿಗೆ ಮೊದಲು ನೆನಪಾಗೋದೇ ಕರಾವಳಿ ಫುಡ್‌. ಬಂಗುಡೆ, ಬೂತಾಯಿ, ಅಂಜಲ್‌, ಫ್ರಾನ್ಸ್‌ ಸೇರಿ ಸಾಕಷ್ಟು ಸೀ ಫುಡ್‌ಗಳು ಮನಃಪಟಲಗಳಲ್ಲಿ ಮೂಡಿಬರುತ್ತವೆ. ಇಂಥದ್ದೇ ಫುಡ್‌ಗಳನ್ನು ನೂರಾರು ವರ್ಷಗಳಿಂದ ಮಾಡಿ ಬಡಿಸುತ್ತಿರು ಒಂದು ಹೊಟೇಲ್‌ ಮಂಗಳೂರಿನಲ್ಲಿದೆ. ಅದರ ಹೆಸರು ಅಕ್ಕಮಕ್ಕ ಮೀಲ್ಸ್‌ ಹೊಟೇಲ್‌.

ಮೀನೂಟ

ಈ ಹೊಟೇಲ್‌ನಲ್ಲಿ ಮೀನೂಟವೇ ಹೆಚ್ಚು ಬೇಡಿಕೆಯ ಆಹಾರ. ಊಟದ ಜತೆಗೆ ನಿಮ್ಮಿಷ್ಟದ ಮೀನುಗಳನ್ನು ಆರ್ಡರ್‌ ಮಾಡಿ ಆಗಲೇ ಬಡಿಸಿಕೊಳ್ಳಬಹುದು. ಬಂಗುಡೆ ರವಾ ಫ್ರೈ, ಬೂತಾಯಿ ರವಾ ಫ್ರೈ, ಅಂಜಲ್‌ ಮಸಾಲ ಲಭ್ಯವಿದೆ.

ಇದನ್ನೂ ಓದಿ: ಅಜ್ಜನ ಪ್ರೀತಿಯ ಜತೆಗೆ ಅಜ್ಜಿಯ ಕೈರುಚಿ

130 ವರ್ಷಗಳ ಇತಿಹಾಸ

ಹಂಪನಕಟ್ಟೆಯಲ್ಲಿನ ಚಿಕ್ಕ ಹೊಟೇಲ್‌ ಇದಾಗಿದ್ದರೂ ಇದಕ್ಕಿರುವ ಐತಿಹಾಸಿಕ ಹಿನ್ನೆಲೆ ದೊಡ್ಡದು. 130 ವರ್ಷಗಳ ಹಿಂದೆ ಈ ಹೊಟೇಲ್‌ ಆರಂಭವಾಗಿತ್ತು. ಆಗ ಬ್ರಿಟಿಷ್‌ ಆಡಳಿತ ನೀಡಿದ್ದ ಸರ್ಟಿಫಿಕೇಟ್‌ ಇಂದಿಗೂ ಕಾಣಬಹುದು. ಅಕ್ಕಮಕ್ಕ ಎಂಬುವವರು ಅಂದು ಆರಂಭಿಸಿದ್ದ ಈ ಹೊಟೇಲ್‌ ಕೇವಲ ಹಸಿವು ನೀಗಿಸುವ ಹೊಟೇಲ್‌ ಆಗಿ ಉಳಿಯದೆ, ಬಡವ, ಅನಾರೋಗ್ಯ ಪೀಡಿತರಿಗೂ ತಮ್ಮ ಕೈಲಾದ ಸಹಾಯ ಮಾಡಿ ಖ್ಯಾತಿ ಗಳಿಸಿತ್ತು. ಈ ಖ್ಯಾತಿಯೇ ಈ ಹೊಟೇಲ್‌ ಅನ್ನು ಮುಂದುವರಿಸಲು ಕಾರಣವಾಯಿತು. ಇಂದು ಅಕ್ಕಮಕ್ಕ ಅವರ ಐದನೆಯ ತಲೆಮಾರಿನವರು ಈ ಹೊಟೇಲ್‌ ಜವಾಬ್ದಾರಿಯನ್ನು ಹೊತ್ತು ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ.

Untitled design - 2026-04-27T142229.693

ಸರಳ ಆಂಬಿಯನ್ಸ್‌

ಇಲ್ಲಿ ಎಲ್ಲೂ ಲಕ್ಸುರಿ ವಸ್ತುವಾಗಿ ಕಾಣುವುದಿಲ್ಲ. ಅದು ಹೊಟೇಲ್‌ನ ಸಿಬ್ಬಂದಿ ಮತ್ತು ಮಾಲೀಕರಾಗಿರುವ ಅಕ್ಕಮಕ್ಕ ಕುಟುಂಬ ನೀಡುವ ಆತಿಥ್ಯದಲ್ಲಿರುತ್ತದೆ. ಏಕೆಂದರೆ ಅವರು ಈ ಹೊಟೇಲ್‌ ಅನ್ನು ನಿರ್ವಹಿಸುತ್ತಿರುವುದು ಕೇವಲ ಉದ್ಯಮದ ದೃಷ್ಟಿಯಿಂದಲ್ಲ ಬದಲಿಗೆ ಅಕ್ಕಮಕ್ಕ ಅವರ ಐತಿಹಾಸಿಕ ಕೊಡುಗೆಯನ್ನು ಜೀವಂತವಾಗಿ ಕಾಪಾಡಿಕೊಳ್ಳುವ ದೃಷ್ಟಿಯಿಂದ. ಹಾಗಾಗಿ ಅವರು ಗ್ರಾಹಕರನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಆಹಾರ ತಯಾರಿಕೆಯಿಂದ ಹಿಡಿದು ಬಡಿಸುವ ತನಕ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಅಗ್ಗದ ಬೆಲೆ ದುಬಾರಿ ರುಚಿ

ಹಳೆಯ ರುಚಿ ಅಂತೀವಲ್ಲ ಥೇಟ್‌ ಹಾಗೆ, ನೂರಾರು ವರ್ಷಗಳಿಂದ ಈ ಹೊಟೇಲ್‌ ಅಸ್ತಿತ್ವದಲ್ಲಿದ್ದು, ಅಕ್ಕಮಕ್ಕ ಅವರ ಕುಟುಂಬವೇ ಅಂದಿನಿಂದ ಇಂದಿನವರೆಗೆ ಇಲ್ಲಿ ಆಹಾರ ತಯಾರಿಯ ಕೆಲಸವನ್ನು ನೋಡಿಕೊಳ್ಳುತ್ತಿದೆ. ಹಾಗಾಗಿ ಅವರು ತಯಾರಿಸುವ ಆಹಾರ ಇಲ್ಲಿನ ಜನಮನ ಗೆದ್ದಿದೆ. ಡೈಲಿ ಗಿರಾಕಿಗಳ ಸಂಖ್ಯೆಯೇ ಇಲ್ಲಿ ಹೆಚ್ಚು. ಇತಿಹಾಸ ತಿಳಿದವರು, ಪಕ್ಕಾ ಮಂಗಳೂರು ಶೈಲಿಯ ಮೀನೂಟ ಬಯಸುವವರು ಈ ಹೊಟೇಲ್‌ ಅನ್ನು ಹುಡುಕಿಕೊಂಡು ಬರುತ್ತಾರೆ. ಮೇಲಾಗಿ ಇಲ್ಲಿ ಆಹಾರದ ಬೆಲೆಗಳೂ ಕಮ್ಮಿ.

ಮನೆಯ ವಾತಾವರಣ

ಪಾಷ್‌ ಏರಿಯಾಗಳಲ್ಲಿನ ಹೊಟೇಲ್‌ಗಳಂತೆ ಆರ್ಡರ್‌ ಮಾಡಿದ ಅರ್ಧ ಗಂಟೆಗೆ ಸರ್ವ್‌ ಮಾಡುವ ಪ್ರಮೇಯ ಇಲ್ಲಿಲ್ಲ. ನೀವು ಆಗಿಂದಾಗಲೇ ಬಾಳೆ ಎಲೆಯ ಮೇಲೆ ನಿಮ್ಮ ನಿಮ್ಮ ಮೀಲ್‌ ಸವಿಯಬಹುದು. ಬಾಯಿಲ್ಡ್‌ ರೈಸ್‌ ಜತೆಗೆ ನಿಮ್ಮಿಷ್ಟದ ಮೀನು ನಿಮಗಾಗಿ ಗರಿಗರಿಯಾಗಿ ಕಾಯುತ್ತಿರುತ್ತದೆ. ಪಂಕ್ತಿ ಭೋಜನಕ್ಕೆ ಕುಳಿತ ಅನುಭವವಾಗುವುದು ಸಹಜ. ಏಕೆಂದರೆ ಈ ಹೊಟೇಲ್‌ ಸದಾ ಮೀನೂಟ ಪ್ರಿಯರಿಂದ ತುಂಬಿರುತ್ತದೆ.

Untitled design - 2026-04-27T142425.446

ಪಾರ್ಕಿಂಗ್‌ ಮಾತ್ರ ಕಷ್ಟ

ಹಂಪನಕಟ್ಟೆಯ ಮುಖ್ಯ ರಸ್ತೆಯಲ್ಲಿ ಈ ಪುಟ್ಟ ಹೊಟೇಲ್‌ ಇದೆ. ಹಾಗಾಗಿ ಇಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶ ಸಿಗುವುದು ಕಷ್ಟ. ನಿಮ್ಮ ವಾಹನಗಳನ್ನು ಹತ್ತಿರದ ಅವಕಾಶವಿರುವ ಸ್ಥಳಗಳಲ್ಲಿ ಪಾರ್ಕ್‌ ಮಾಡಿ ಬರುವುದು ಉತ್ತಮ. ಉಳಿದಂತೆ ಎಷ್ಟೇ ಜನ ಬಂದರೂ ಆಹಾರ ತಯಾರಿಸಿ ಬಡಿಸಲು ಹೊಟೇಲ್‌ ಸಿದ್ಧವಾಗಿರುತ್ತದೆ.

ದಾರಿ ಹೇಗೆ?

ಅಕ್ಕಮಕ್ಕ ಹೊಟೇಲ್‌ ಮಂಗಳೂರಿನ ಹಂಪನಕಟ್ಟೆ ಏರಿಯಾದಲ್ಲಿದೆ. ಮಂಗಳೂರಿನಲ್ಲೇ ರೈಲು ನಿಲ್ದಾಣವಿದೆ. ಮಂಗಳೂರು ವಿಮಾನ ನಿಲ್ದಾಣ ಬಜಪೆಯಲ್ಲಿದ್ದು, ಅಲ್ಲಿಂದ ಸರಕಾರಿ ಅಥವಾ ಖಾಸಗಿ ವಾಹನಗಳ ಮೂಲಕ ಹಂಪನಕಟ್ಟೆಗೆ ತಲುಪಬಹುದು.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ