ವಿದ್ಯಾರ್ಥಿ ಭವನ್‌, ಮಹಾಲಕ್ಷ್ಮಿ ಟಿಫನ್‌ ರೂಮ್‌, ಸಿಟಿಆರ್‌, ಎಂಟಿಆರ್‌, ರಾಘವೇಂದ್ರ ಸ್ಟೋರ್ಸ್‌, ವೀಣಾ ಸ್ಟೋರ್ಸ್‌, ಹೊಟೇಲ್‌ ದ್ವಾರಕಾ ಹೀಗೆ ನಮ್ಮ ಬೆಂಗಳೂರಿನಲ್ಲಿ ವರ್ಷಗಳಿಗೂ ಹಳೆಯ ಇತಿಹಾಸವಿರುವ ಹೊಟೇಲ್ಸ್‌ ಹಾಗೂ ರೆಸ್ಟೋರೆಂಟ್ಸ್ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಮಾತ್ರ ಕಾಣಸಿಗುತ್ತವೆ. ಇಂದಿನ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವಲ್ಲಿ ಸೋತು ಅನೇಕರು ಉದ್ಯಮವನ್ನು ತೊರೆದರೆ, ಇನ್ನೂ ಅನೇಕರು ರುಚಿಯಲ್ಲಿ ಬದಲಾವಣೆ ತರುವ ಮಾತೇ ಇಲ್ಲ, ಆದರೆ ಉಳಿದಂತೆ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತಂದಿದ್ದೇವೆ ಎನ್ನುತ್ತಾರೆ. ಅಂಥ ಇತಿಹಾಸ ಪ್ರಸಿದ್ಧ ರೆಸ್ಟೋರೆಂಟ್‌ಗಳ ಪೈಕಿ ಕೋಶಿಸ್‌ ಬಾರ್‌ ಹಾಗೂ ರೆಸ್ಟೋರೆಂಟ್‌ ಪ್ರಮುಖವಾದುದು.

ಇದನ್ನೂ ಓದಿ: ಪ್ಯಾಟೆ ಮಂದಿಗೆ ಹಳ್ಳಿ ಲೈಫ್‌ನ ಫೀಲ್!

ಎಂಜಿ ರೋಡ್‌ನ ಸೈಂಟ್‌ ಮಾರ್ಕ್ಸ್‌ ರಸ್ತೆಯಲ್ಲಿ 85 ವರ್ಷಗಳಿಂದಲೂ ನೆಲೆಕಂಡುಕೊಂಡಿರುವ ಕೋಶಿಸ್‌ ಬಾರ್‌ ಹಾಗೂ ರೆಸ್ಟೋರೆಂಟ್‌ ನ ಹುಟ್ಟು ಒಂದು ರೋಚಕ ಕತೆ. ಇದು ಬರಿಯ ರೆಸ್ಟೋರೆಂಟ್‌ ಮಾತ್ರವಲ್ಲ, ನೆನಪುಗಳೊಂದಿಗೆ ಬೆಸೆದುಕೊಂಡಿರುವ ಬಂಧನ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಂದರೆ ಸುಮಾರು 1940 ಕಾಲದಲ್ಲಿ ಕಾಲದಲ್ಲಿ ಕೇರಳ ಮೂಲದ ಪೋಳಿಚ್ಚೆರಿಕ್ಕಲ್‌ ಓಮ್ಮನ್‌ ಕೋಶಿ ಎಂಬವರು ತಾವು ಅದಾಗಲೇ ಸೇವೆ ಸಲ್ಲಿಸುತ್ತಿದ್ದ ಎಕ್ಸಿಕ್ಯುಟಿವ್‌ ಬ್ಯಾಂಕರ್‌ ವೃತ್ತಿಗೆ ರಾಜೀನಾಮೆ ನೀಡಿ, ಮುಂದೇನು ಎಂಬ ಯೋಚನೆಯೊಂದಿಗೆ ಬೆಂಗಳೂರಿನ ಎಂಜಿ ರಸ್ತೆಯ ಆಸುಪಾಸಿನಲ್ಲಿ ಸ್ವಂತ ಬೇಕರಿ ಉದ್ಯಮವನ್ನು ಪ್ರಾರಂಭಿಸಿದರು.

New Project (46)

ಕೋಶಿಯವರು ಮೊದಲ ಮೊದಲು ಆರ್ಮಿ ಬೇಸ್ಡ್‌ ಆರ್ಡರ್‌ಗಳಿಗೆ ಬೇಕರಿ ಉತ್ಪನ್ನಗಳನ್ನು ಸಪ್ಲೈ ಮಾಡುತ್ತಿದ್ದರು. ಬೇಡಿಕೆ ಹೆಚ್ಚುತ್ತಲೇ 1952-53ರ ವೇಳೆಗೆ ನಗರದ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿ ʻದಿ ಪೆರೇಡ್‌ ಕೆಫೆʼಯನ್ನು ಪ್ರಾರಂಭಿಸಿ, ಕಬ್ಬಿನ ಪೀಠೋಪಕರಣಗಳು, ಸೀಲಿಂಗ್‌ ಫ್ಯಾನುಗಳು ಮಾತ್ರವಲ್ಲದೇ ವಿಂಟೇಲ್‌ ಲುಕ್‌ ನೀಡುವ ಅನೇಕ ವಸ್ತುಗಳಿಂದ ಕೆಫೆಯನ್ನು ಅಲಂಕರಿಸಿ ವಸಾಹತುಶಾಹಿ ಯುಗದ ವಾತಾವರಣವನ್ನು ನಿರ್ಮಿಸಿದ್ದರು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಪ್ರಯತ್ನಗಳ ಮೂಲಕವೇ ಗ್ರಾಹಕರನ್ನು ಸೆಳೆಯುತ್ತಿದ್ದ ಈ ಕೆಫೆ, 1962ರ ವೇಳೆಗೆ ದಕ್ಷಿಣ ಭಾರತದ ಮೊದಲ ಹವಾನಿಯಂತ್ರಿತ ರೆಸ್ಟೋರೆಂಟ್‌ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಸಾಂಸ್ಕೃತಿಕ ಮಹತ್ವ

ಈ ಕೆಫೆ ಆ ಕಾಲದಲ್ಲಿಯೇ ಸಾಕಷ್ಟು ಸಾಂಸ್ಕೃತಿಕ ಮಹತ್ವವನ್ನು ಪಡೆದ ಆಹಾರ ಕೇಂದ್ರವಾಗಿ ಗುರುತಿಸಿಕೊಂಡಿತ್ತು, ಪತ್ರಕರ್ತರು, ಬರಹಗಾರರು, ಕಲಾವಿದರು ಮತ್ತು ರಾಜಕಾರಣಿಗಳಿಗೆ ನೆಚ್ಚಿನ ತಾಣವಾಗಿ ರೂಪುಗೊಂಡಿದ್ದ ಈ ಕೆಫೆಯಂತೂ ಗ್ರಾಹಕರಿಂದ ತುಂಬಿಕೊಳ್ಳುತ್ತಿತ್ತು. ಜವಾಹರ್‌ಲಾಲ್‌ ನೆಹರೂ, ಇಂಗ್ಲೆಂಡ್‌ನ ರಾಣಿ, ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಗಣ್ಯರು ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿ, ರುಚಿಕರ ಆಹಾರವನ್ನು ಸವಿದಿದ್ದಾರೆ. ಮಾಲೀಕರು ಕೇರಳ ಮೂಲದವರಾಗಿದ್ದರಿಂದ ಇಲ್ಲಿ ಕೇರಳದ ಸಾಂಪ್ರದಾಯಿಕ ಶೈಲಿಯ ಅಡುಗೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಮೂರನೇ ತಲೆಮಾರು ಕೈಯಲ್ಲಿ ಕೋಶೀಸ್‌ ರುಚಿ

New Project (44)

ಪಿ.ಒ.ಕೋಶಿ ಅವರ ನಂತರ ಈ ಉದ್ಯಮವನ್ನು ಅವರ ಮಕ್ಕಳು ವಹಿಸಿಕೊಂಡರು. ಪ್ರಸ್ತುತ ಮೂರನೇ ತಲೆಮಾರಿನವರಾದ ಪ್ರೇಮ್ ಕೋಶಿ ಮತ್ತು ಸಂತೋಷ್ ಕೋಶಿಯವರು ಕೋಶಿಸ್‌ ಬಾರ್‌ ಹಾಗು ರೆಸ್ಟೋರೆಂಟ್‌ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದು, ಇಂದಿಗೂ ಆಹಾರದ ರುಚಿಯಲ್ಲಿ ಸ್ವಲ್ಪವೂ ಬದಲಾವಣೆ ಕಂಡಿಲ್ಲ. ವಿಂಟೇಜ್‌ ಶೈಲಿ ಸೀಟಿಂಗ್‌ ವ್ಯವಸ್ಥೆಯ ಕೊಠಡಿಗಳು, ಜ್ಯುವೆಲ್‌ ಬಾಕ್ಸ್‌ ಎಂದು ಕರೆಯಲಾಗುವ ಪ್ರೀಮಿಯಂ ಶೈಲಿಯ ಕೊಠಡಿಗಳು ಸದ್ಯ ಇಲ್ಲಿನ ಪ್ರಮುಖ ಆಕರ್ಷಣೆ.

ಒಟ್ಟಿನಲ್ಲಿ ನೀವು ಬೆಂಗಳೂರಿನಲ್ಲಿದ್ದುಕೊಂಡು ಒಮ್ಮೆಯೂ ಕೋಶಿಸ್‌ ಕಾಫಿ ಸೆಂಟರ್‌, ಬಾರ್‌ ಹಾಗೂ ರೆಸ್ಟೋರೆಂಟ್‌ಗೆ ಒಮ್ಮೆಯೂ ಭೇಟಿ ನೀಡಿಲ್ಲವೆಂದರೆ ಬೆಂಗಳೂರಿನ ಇತಿಹಾಸದ ಒಂದು ಪುಟವನ್ನು ಮಿಸ್‌ ಮಾಡಿದಂತಾಗುತ್ತದೆ.

ಕೋಶಿಸ್‌ ಬಾರ್‌ ಆಂಡ್‌ ರೆಸ್ಟೋರೆಂಟ್‌ಗೆ ಅನೇಕ ವರ್ಷಗಳ ಇತಿಹಾಸವಿದೆ. ಆದರೆ ಸದ್ಯಕ್ಕಂತೂ ಇದರ ಮಾಲೀಕನೆಂಬ ಪಟ್ಟ ನನಗೆ ಬೇಕಿಲ್ಲ. ಓನರ್‌ ಎನ್ನುವುದಕ್ಕಿಂತ ಕೇರ್‌ ಟೇಕರ್‌ ಎಂದು ಕರೆಸಿಕೊಳ್ಳುವುದೇ ನನಗಿಷ್ಟ. ನನ್ನ ತಾತ ಕಟ್ಟಿ ಬೆಳೆಸಿರುವ ಈ ಉದ್ಯಮವನ್ನು ನಾವು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಬೇಕೆಂಬುದು ನನ್ನ ಉದ್ದೇಶ. ಅದಕ್ಕೆ ನ್ಯಾಯ ಒದಗಿಸಿದ್ದೇನೆಂಬ ನಂಬಿಕೆ ನನಗಿದೆ.
- ಪ್ರೇಮ್‌ ಕೋಶಿ, ಮಾಲೀಕರು
1940ರಲ್ಲಿ ಕೋಶಿಸ್‌ ಬೇಕರಿ ಉದ್ಯಮವನ್ನು ಪ್ರಾರಂಭಿಸಿದರು. 1953ರ ವೇಳೆ ಇದು ಮೆಕ್ಯಾನೈಸ್ಡ್‌ ಆಗಿತ್ತು. ದಕ್ಷಿಣ ಭಾರತದಲ್ಲೇ ಮೊದಲ ಮೆಕ್ಯಾನೈಸ್ಡ್‌ ಬೇಕರಿ ಎಂಬ ಹೆಗ್ಗಳಿಕೆಗೂ ಇದು ಕಾರಣವಾಯ್ತು. ನಮ್ಮಲ್ಲಿ ಎಲ್ಲದಕ್ಕೂ ಸಾಂಪ್ರದಾಯಿಕ ರೆಸಿಪಿ ಇವೆ. ಕಳೆದ ಸುಮಾರು 70 ವರ್ಷಗಳಿಂದಲೂ ಪ್ಲಂ ಕೇಕ್‌ಗೂ ಸಹ ಇಂಗ್ಲಿಷ್‌ ರೆಸಿಪಿಯನ್ನೇ ಅನುಸರಿಸುತ್ತೇವೆ.
- ಸಂತೋಷ್ ಕೋಶಿ, ಮಾಲೀಕರು

ವಿಳಾಸ:

39, ಸೇಂಟ್ ಮಾರ್ಕ್ಸ್ ರೋಡ್, ಶಾಂತಲಾ ನಗರ್, ಅಶೋಕ್ ನಗರ್, ಬೆಂಗಳೂರು, ಕರ್ನಾಟಕ 560001

ದೂರವಾಣಿ: 080 4149 6575