ಜೆನ್- ಜಿಗಳನ್ನು ತಲುಪುವುದೇ ನಮ್ಮ ಮುಂದಿನ ಗುರಿ -ಶಿವರಾಮ್ ಬಾಬು
ನಮ್ಮ ಗ್ರಾಹಕರು ಕೇವಲ ವೈಲ್ಡ್‌ಲೈಫ್ ಫೊಟೋಗ್ರಫರ್‌ಗಳು ಅಥವಾ ಕನ್ಸರ್ವೇಷನಿಸ್ಟ್ ವರ್ಗಕ್ಕೆ ಸೀಮಿತವಾಗಿದೆ. ಆ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ನಾವು ನಮ್ಮ ಗ್ರಾಹಕ ವರ್ಗವನ್ನು ವಿಸ್ತರಿಸಬೇಕಿದೆ. ಉದಾಹರಣೆಗೆ, ಕಾರ್ಪೊರೆಟ್ ವಲಯವನ್ನು ಸಂಪೂರ್ಣವಾಗಿ ತಲುಪಿಲ್ಲ. ಸ್ಟೇಕೇಷನ್ ಅಥವಾ ವರ್ಕ್ ಫ್ರಮ್ ಹೋಮ್‌ಗೆ ತಕ್ಕಂತೆ ಅವರ ಜತೆ ಟೈ-ಅಪ್ ಮಾಡಿಕೊಂಡು ಹೊಸ ಗ್ರಾಹಕರನ್ನು ತಲುಪುವುದು ನಮ್ಮ ಮುಂದಿರುವ ಪ್ರಮುಖ ಸವಾಲು ಎನ್ನುತ್ತಾರೆ 'ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್' (JLR) ನೂತನ ವ್ಯವಸ್ಥಾಪಕ ನಿರ್ದೇಶಕರಾದ ಶಿವರಾಮ್ ಬಾಬು.
ಕರ್ನಾಟಕದ ಪ್ರಸಿದ್ಧ ಪರಿಸರ ಪ್ರವಾಸೋದ್ಯಮ ಸಂಸ್ಥೆಯಾದ 'ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್' (JLR) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ 2014ರ ಬ್ಯಾಚಿನ ಐಎಫ್‌ಎಸ್ (IFS) ಅಧಿಕಾರಿ ಶಿವರಾಮ್ ಬಾಬು ಅವರೊಂದಿಗೆ ನಡೆಸಿದ ಸಂಪೂರ್ಣ ಸಂದರ್ಶನ ಇಲ್ಲಿದೆ. ಸಂಸ್ಥೆಯ ಭವಿಷ್ಯದ ಯೋಜನೆಗಳು, ನೂತನ ಪ್ರಾಪರ್ಟಿಗಳು, ಡಿಜಿಟಲ್ ಮಾರ್ಕೆಟಿಂಗ್, ಪ್ರವಾಸಿಗರ ಜವಾಬ್ದಾರಿ ಹಾಗೂ ಪರಿಸರ ಸಂರಕ್ಷಣೆಯ ಕುರಿತಾದ ವಿವರವಾದ ವಿಚಾರಗಳನ್ನು ಅವರು ಪ್ರವಾಸಿ ಪ್ರಪಂಚದ ಜತೆಗೆ ಹಂಚಿಕೊಂಡಿದ್ದಾರೆ.
ಶಿವರಾಮ್ ಬಾಬು ಅವರು 2014ರ ಬ್ಯಾಚಿನ ಐಎಫ್‌ಎಸ್ (IFS) ಅಧಿಕಾರಿಯಾಗಿದ್ದಾರೆ. 2016ರಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅವರು ಕರ್ನಾಟಕಕ್ಕೆ ಆಗಮಿಸಿದರು. ತದನಂತರ ಹಾಸನ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತಮ್ಮ ಸೇವೆಯನ್ನು ಆರಂಭಿಸಿದ ಅವರು, ಬಳಿಕ ಮಲೆ ಮಹದೇಶ್ವರ ಬೆಟ್ಟದಲ್ಲಿ ಎಸಿಎಫ್ ಆಗಿ ಸೇವೆ ಸಲ್ಲಿಸಿದರು. ಆನಂತರ ಮೂರು ವರ್ಷಗಳ ಕಾಲ ಹಾಸನದಲ್ಲಿ ಡಿಎಫ್‌ಒ ಆಗಿ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ ಡಿಸಿಎಫ್ ಆಗಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಸಂಸ್ಥೆಗೆ ಬರುವುದಕ್ಕಿಂತ ಮುಂಚೆ ಅವರು ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಎರಡೂವರೆ ವರ್ಷಗಳ ಕಾಲ ಡಿಸಿಎಫ್ ಆಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಭದ್ರಾ ಜಲಾನಯನದ ಮಡಲಲ್ಲಿ ಅದ್ಭುತ ತಾಣ
ನಿಮ್ಮ ಈ ಅವಧಿಯಲ್ಲಿ JLRನಲ್ಲಿ ಏನೇನು ಯೋಜನೆಗಳಿವೆ?
ಸದ್ಯಕ್ಕೆ ನಾನು ಇನ್ನೂ ಎಲ್ಲವನ್ನೂ ಪರಿಶೀಲಿಸುತ್ತಿದ್ದೇನೆ. ಇದೇ ಮೊದಲ ಬಾರಿಗೆ ಫಾರೆಸ್ಟ್ ಡಿಪಾರ್ಟ್‌ಮೆಂಟ್‌ನಿಂದ ಟೂರಿಸಂ ಡಿಪಾರ್ಟ್‌ಮೆಂಟ್‌ಗೆ ಬಂದಿರುವುದರಿಂದ ಒಂದೊಂದಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಟೂರಿಸಂನಲ್ಲಿ ಏನೇನು ಮಾಡುತ್ತಾರೆ ಎಂದು ತಿಳಿದುಕೊಳ್ಳುತ್ತಿದ್ದೇನೆ. ನಮ್ಮ ಸಂಸ್ಥೆ ಈಗಾಗಲೇ ಉತ್ತಮ ಸ್ಥಿತಿಯಲ್ಲಿದೆ. ಜೆಎಲ್‌ಆರ್ ಈಗಾಗಲೇ ಲಾಭದಾಯಕ ಸಂಸ್ಥೆ. ಇದರ ಆದಾಯವನ್ನು ಇನ್ನಷ್ಟು ಜಾಸ್ತಿ ಮಾಡಬೇಕು. ಈಗ ಇರುವ ಆದಾಯಕ್ಕಿಂತ ಒಂದರಿಂದ ಎರಡು ಪಟ್ಟು ಹೆಚ್ಚು ಮಾಡುವುದು ನನ್ನ ಗುರಿಯಾಗಿದೆ. ನಾವು ಆತಿಥ್ಯ ಕ್ಷೇತ್ರದಲ್ಲಿ ಇರುವುದರಿಂದ ನಮ್ಮ ಸರ್ವಿಸ್ ಇನ್ನೂ ಉನ್ನತ ಮಟ್ಟದಲ್ಲಿರಬೇಕು. ಹಾಗೆಯೇ ಹೊಸ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.

JLRನ ರೆಸಾರ್ಟ್‌ಗಳ ದರಗಳು ಸಾಮಾನ್ಯ ಪ್ರವಾಸಿಗರಿಗೆ ಕೊಂಚ ದುಬಾರಿ ಎಂಬ ಅಭಿಪ್ರಾಯವಿದೆ. ಏನು ಹೇಳುತ್ತೀರಿ?
ಈಗ ನಮ್ಮಲ್ಲಿ ಕೆಲವು ಫ್ಲಾಗ್‌ಶಿಪ್ ಪ್ರಾಪರ್ಟೀಸ್ ಇವೆ, ಉದಾಹರಣೆಗೆ ಕಬಿನಿ, ಬಂಡೀಪುರ, ಭದ್ರಾ ಇತ್ಯಾದಿ. ಇವುಗಳಲ್ಲಿ ನೀಡುವ ಆಲ್- ಇನ್‌ಕ್ಲೂಸಿವ್ ಪ್ಯಾಕೇಜ್‌ಗಳು, ಉನ್ನತ ಮಟ್ಟದ ಸರ್ವಿಸ್‌ಗಳಿಂದಾಗಿ ವೆಚ್ಚ ಹೆಚ್ಚಿರುತ್ತದೆ. ಬೇರೆ ರೆಸಾರ್ಟ್‌ಗಳಲ್ಲಿ ಕೇವಲ ಹಾಸಿಗೆ ಮತ್ತು ಆಹಾರ ಕೊಟ್ಟು, ಸಫಾರಿ ಅಥವಾ ಇತರ ಚಟುವಟಿಕೆಗಳಿಗೆ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಆದರೆ, ನಮ್ಮಲ್ಲಿ ಎಲ್ಲವೂ ಒಳಗೊಂಡಿರುವುದರಿಂದ ಒಟ್ಟಾರೆ ಮೊತ್ತ ಜಾಸ್ತಿ ಅನಿಸಬಹುದು. ಆದರೆ, ಸಾಮಾನ್ಯ ಸಾರ್ವಜನಿಕರಿಗಾಗಿ ನಾವು ಅನೇಕ 'ನೇಚರ್ ಕ್ಯಾಂಪ್‌ಗಳನ್ನು' ನಡೆಸುತ್ತಿದ್ದೇವೆ. ನಮ್ಮಲ್ಲಿರುವ ಒಟ್ಟು 25 ಪ್ರಾಪರ್ಟೀಸ್‌ಗಳಲ್ಲಿ 19 ರೆಸಾರ್ಟ್‌ಗಳು ಹಾಗೂ 6 ನೇಚರ್ ಕ್ಯಾಂಪ್‌ಗಳಿವೆ. ಈ ನೇಚರ್ ಕ್ಯಾಂಪ್‌ಗಳ ದರ ಸಾಮಾನ್ಯ ಹೊಟೇಲ್‌ಗಳಂತೆಯೇ ಇರುತ್ತದೆ. ಜತೆಗೆ ಆಲ್-ಇನ್‌ಕ್ಲೂಸಿವ್ ಫುಡ್, ಸಫಾರಿ ಹಾಗೂ ಇತರೆ ಆ್ಯಕ್ಟಿವಿಟೀಸ್‌ಗಳು ಇದರಲ್ಲಿ ಸೇರಿರುತ್ತವೆ. ಹಾಗಾಗಿ ನೇಚರ್ ಕ್ಯಾಂಪ್‌ಗಳು ಸಾಮಾನ್ಯ ಜನರಿಗೆ ಸಂಪೂರ್ಣವಾಗಿ ತಲುಪುತ್ತವೆ. ಪ್ರೀಮಿಯಂ ಪ್ರಾಪರ್ಟಿಗಳಲ್ಲಿ ಆ ದರವನ್ನು ಕಾಯ್ದುಕೊಳ್ಳುವುದು ಅನಿವಾರ್ಯ. ಇದನ್ನು ಹೊರತುಪಡಿಸಿ ಸಣ್ಣ ಪ್ರಮಾಣದ, ಕಡಿಮೆ ಪ್ರಸಿದ್ಧಿಯ ರೆಸಾರ್ಟ್‌ಗಳ ದರಗಳು ಮಾರ್ಕೆಟ್ ಮಟ್ಟಕ್ಕೆ ತಕ್ಕಂತೆಯೇ ಇವೆ.
ಮುಂದಿನ ದಿನಗಳಲ್ಲಿ ಹೊಸ ಪ್ರಾಪರ್ಟಿಗಳನ್ನು ಪರಿಚಯಿಸುವ ಯೋಜನೆ ಇದೆಯೇ?
ಹೌದು. ಕಳೆದ ಬಜೆಟ್‌ನಲ್ಲಿ ಕೆಲವು ಪ್ರಾಜೆಕ್ಟ್‌ಗಳು ಅನೌನ್ಸ್ ಆಗಿದ್ದವು. ಅವುಗಳ ನಿರ್ಮಾಣ ಕೆಲಸ ಶುರುವಾಗುತ್ತದೆ. ಪ್ರಮುಖವಾಗಿ ಗದಗ ಜಿಲ್ಲೆಯ ಕಪ್ಪತಗುಡ್ಡದ ಬಳಿ ಮಾಡುತ್ತಿರುವ ಹೊಸ ಪ್ರಾಪರ್ಟಿ, ಭಾರತದಲ್ಲೇ ಮೊದಲ ಬಾರಿಗೆ 'ಎಂಜಿನಿಯರ್ಡ್ ಬ್ಯಾಂಬೂ' ಬಳಸಿ ನಿರ್ಮಿಸುತ್ತಿರುವ ಪ್ರಾಪರ್ಟಿಯಾಗಿದೆ. ಇದರೊಂದಿಗೆ ಪ್ರವಾಸೋದ್ಯಮ ಇಲಾಖೆಗಾಗಿ ನಾವೇ ನಿರ್ಮಿಸುತ್ತಿರುವ 'ಪ್ರವಾಸಿ ಸೌಧ' ಕಟ್ಟಡವನ್ನು ಸಹ ಎಂಜಿನಿಯರ್ಡ್ ಬ್ಯಾಂಬೂನಿಂದಲೇ ನಿರ್ಮಿಸಲಾಗುತ್ತಿದ್ದು, ಇದು ದೇಶದ ಮೊದಲ ಎಂಜಿನಿಯರ್ಡ್ ಬ್ಯಾಂಬೂ ಸರಕಾರಿ ಪ್ರಾಪರ್ಟಿಯಾಗಲಿದೆ. ಇದರ ಜತೆಗೆ ಮುಖ್ಯಮಂತ್ರಿಗಳ ಸೂಚನೆಯಂತೆ ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಮಂಗಳೂರಿನ ಸಸಿಹಿತ್ಲು ಭಾಗದಲ್ಲಿ ಹೊಸ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಹಾಗೆಯೇ ಗೋಕರ್ಣದಲ್ಲೂ ಹೊಸ ಪ್ರಾಪರ್ಟಿಗಾಗಿ ಡಿಪಿಆರ್ ಹಾಗೂ ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದು, ಅಂತಿಮ ಹಂತದಲ್ಲಿದೆ.
ಜನರು ಹಾಗೂ ವನ್ಯಜೀವಿಗಳ ನಡುವೆ ಇರಬೇಕಾದ ಅಂತರ ಹಾಗೂ ಸಾಮೀಪ್ಯ ಹೇಗೆ ಕಾಪಾಡಿಕೊಳ್ಳುತ್ತೀರಿ?
ನಮ್ಮಲ್ಲಿಗೆ ಬರುವ ಬಹುತೇಕ ಪ್ರವಾಸಿಗರು ಪರಿಸರ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವವರೇ ಆಗಿದ್ದಾರೆ. ಜೆಎಲ್‌ಆರ್ ಕಳೆದ 45 ವರ್ಷಗಳಿಂದ ನಡೆಯುತ್ತಿದ್ದು, ದೇಶದ ಪ್ರಮುಖ ಇಕೋ-ಟೂರಿಸಂ ಸಂಸ್ಥೆಯಾಗಿದೆ. ನಮ್ಮ ಪ್ರವಾಸಿಗರಲ್ಲಿ ವೈಲ್ಡ್‌ಲೈಫ್ ಕನ್ಸರ್ವೇಷನಿಸ್ಟ್‌ಗಳು, ಫೊಟೋಗ್ರಫರ್‌ಗಳು ಹಾಗೂ ಕುಟುಂಬ ಸಮೇತ ಬರುವವರೇ ಹೆಚ್ಚು. ನಾವು ಪ್ರತಿಯೊಂದು ಕ್ಯಾಂಪ್‌ನಲ್ಲೂ ನುರಿತ 'ಪರಿಸರ ತಜ್ಞ'ರನ್ನು ಇಟ್ಟಿದ್ದೇವೆ. ಕಾಡಿನೊಳಗೆ ಹೋದಾಗ ಧರಿಸಬೇಕಾದ ಬಟ್ಟೆ, ಕಾಯ್ದುಕೊಳ್ಳಬೇಕಾದ ಮೌನ, ಪ್ರಾಣಿಗಳಿಗೆ ತೊಂದರೆಯಾಗದಂತೆ ವೀಕ್ಷಿಸುವುದು ಹಾಗೂ ಸಣ್ಣ-ಪುಟ್ಟ ಗಿಡ-ಮರಗಳ ಬಗ್ಗೆಯೂ ಅವರು ಪ್ರವಾಸಿಗರಿಗೆ ಅರಿವು ಮೂಡಿಸುತ್ತಾರೆ. ಈ ರೀತಿ ನೇಚರ್ ಕುರಿತು ಶಿಕ್ಷಣ ನೀಡುವುದೇ ನಮ್ಮ ಮುಖ್ಯ ಉದ್ದೇಶ.
ಡಿಜಿಟಲ್ ಯುಗದಲ್ಲಿ ಜೆಎಲ್‌ಆರ್‌ನ ಪ್ರಚಾರದ ಬಗ್ಗೆ ಹೆಚ್ಚಿನ ಫೋಕಸ್ ಮಾಡುವ ಪ್ಲ್ಯಾನ್ ಇದೆಯೇ?
ಹೌದು, ಈಗಿನ ಕಾಲದಲ್ಲಿ ಮಾರ್ಕೆಟಿಂಗ್ ಸಂಪೂರ್ಣವಾಗಿ ಸೋಷಿಯಲ್ ಮೀಡಿಯಾ ಕಡೆಗೆ ವಾಲಿಕೊಂಡಿದೆ. ಇಷ್ಟು ವರ್ಷ ನಮಗೆ ಹಳೆಯ ಗ್ರಾಹಕರ 'ವರ್ಡ್ ಆಫ್ ಮೌತ್' ಪ್ರಚಾರವೇ ಪ್ರಮುಖವಾಗಿತ್ತು. ಆದರೆ, ಈಗ ನಾವು ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಅನ್ನು ಹೆಚ್ಚು ಬಳಸಿಕೊಳ್ಳಬೇಕಿದೆ. ನಮಗೆ ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಚಾನೆಲ್‌ಗಳಿದ್ದು, ಸಿಬ್ಬಂದಿ ಪ್ರತಿದಿನದ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಇದನ್ನು ಇನ್ನಷ್ಟು ಪ್ರೊಫೆಷನಲ್ ಆಗಿ ಮಾಡಲು ನಾವು ಯೋಜಿಸುತ್ತಿದ್ದೇವೆ.
ಹೊರಗಿನ ಖಾಸಗಿ ಲಕ್ಸುರಿ ರೆಸಾರ್ಟ್‌ಗಳಿಂದ ಜೆಎಲ್‌ಆರ್‌ಗೆ ಯಾವ ರೀತಿ ಕಾಂಪಿಟಿಷನ್ ಇದೆ?
ಕಾಂಪಿಟಿಷನ್ ಇದ್ದೇ ಇರುತ್ತದೆ. 45 ವರ್ಷಗಳ ಹಿಂದೆ ನಾವೇ ಮುಂಚೂಣಿಯಲ್ಲಿ ಇದ್ದೆವು. ಈಗ ಹೊಸ ರೆಸಾರ್ಟ್‌ಗಳು ಬಂದಿವೆ. ಆದರೆ, ಅವರ ಗ್ರಾಹಕರು ಬೇರೆ, ನಮಗೆ ಬರುವವರು ಬೇರೆ. ಅವರು ಲಕ್ಸುರಿಗೆ ಆದ್ಯತೆ ನೀಡಿದರೆ, ನಾವು ವನ್ಯಜೀವಿ ಹಾಗೂ ಪರಿಸರದ ಬಗ್ಗೆ ಫೋಕಸ್ ಮಾಡುತ್ತೇವೆ. ಹಾಗಂತ ನಾವು ನಾವು ಸುಮ್ಮನೆ ಕೂರಲಾಗುವುದಿಲ್ಲ. ಇಂದಿನ 'ಜೆನ್-ಜೀ಼' ಪೀಳಿಗೆಯ ನಿರೀಕ್ಷೆಗಳು ಬೇರೆ ಇವೆ. ಅವರು ನಮ್ಮ ಭವಿಷ್ಯದ ಗ್ರಾಹಕರು. ಹಾಗಾಗಿ ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್, ಅವರಿಂದ ಫೀಡ್‌ಬ್ಯಾಕ್ ಪಡೆದು ರೆಸಾರ್ಟ್‌ಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರುವ ಮೂಲಕ ಅವರನ್ನೂ ತಲುಪಲು ಯತ್ನಿಸುತ್ತೇವೆ.
ಮಳೆಗಾಲದ ಆಫ್-ಸೀಸನ್‌ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಏನಾದರೂ ಇತರ ಚಟುವಟಿಕೆಗಳನ್ನು ಪ್ಲ್ಯಾನ್ ಮಾಡಿದ್ದೀರಾ?
ನಾನು ಈ ಹಿಂದೆ ಕುದುರೆಮುಖದಲ್ಲಿದ್ದಾಗ ಗಮನಿಸಿದಂತೆ, ಕರ್ನಾಟಕದಲ್ಲಿ ಮಳೆಗಾಲದಲ್ಲಿ 'ಟ್ರೆಕ್ಕಿಂಗ್' ತುಂಬಾ ಖ್ಯಾತಿ ಪಡೆದಿದೆ. ಹಾಗಾಗಿ JLR ನ ಭಗವತಿ, ಆನೆಝರಿ, ಸೀತಾನದಿ, ಗಾಳಿಬೋರೆಯಂಥ ನೇಚರ್ ಕ್ಯಾಂಪ್‌ಗಳಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ಜೋಡಿಸಿ ಆಫ್-ಸೀಸನ್‌ನಲ್ಲಿ ಬಳಸಿಕೊಳ್ಳಲು ಯೋಜಿಸುತ್ತಿದ್ದೇವೆ.

JLRನಲ್ಲಿ ನೀವು ಕಾಣುವ ಸವಾಲುಗಳು ಯಾವುವು?
ನಮ್ಮ ಗ್ರಾಹಕರು ಕೇವಲ ವೈಲ್ಡ್‌ಲೈಫ್ ಫೊಟೋಗ್ರಫರ್‌ಗಳು ಅಥವಾ ಕನ್ಸರ್ವೇಷನಿಸ್ಟ್ ವರ್ಗಕ್ಕೆ ಸೀಮಿತವಾಗಿದೆ. ಆ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ನಾವು ನಮ್ಮ ಗ್ರಾಹಕ ವರ್ಗವನ್ನು ವಿಸ್ತರಿಸಬೇಕಿದೆ. ಉದಾಹರಣೆಗೆ, ಕಾರ್ಪೊರೆಟ್ ವಲಯವನ್ನು ಸಂಪೂರ್ಣವಾಗಿ ತಲುಪಿಲ್ಲ. ಸ್ಟೇಕೇಷನ್ ಅಥವಾ ವರ್ಕ್ ಫ್ರಮ್ ಹೋಮ್‌ಗೆ ತಕ್ಕಂತೆ ಅವರ ಜತೆ ಟೈ-ಅಪ್ ಮಾಡಿಕೊಂಡು ಹೊಸ ಗ್ರಾಹಕರನ್ನು ತಲುಪುವುದು ನಮ್ಮ ಮುಂದಿರುವ ಪ್ರಮುಖ ಸವಾಲು.
ಪ್ಲಾಸ್ಟಿಕ್ ತರುವುದನ್ನು ತಡೆಯಲು ಇನ್ನೂ ಕಟ್ಟುನಿಟ್ಟಿನ ನಿಯಮ ಜಾರಿಗೆ ತರುತ್ತೀರಾ?
ನಾವು ಆತಿಥ್ಯ ಕ್ಷೇತ್ರದಲ್ಲಿ ಇರುವುದರಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವುದು ಕಷ್ಟ. ಬದಲಿಗೆ ಮನವಿ ಮಾಡಬಹುದು. ಈಗಾಗಲೇ ನಮ್ಮ ಸಿಬ್ಬಂದಿ ಪ್ಲಾಸ್ಟಿಕ್ ಕವರ್ ಅಥವಾ ಆಹಾರ ತರುವುದನ್ನು ಪರಿಶೀಲಿಸಿ ತಡೆಯುತ್ತಿದ್ದಾರೆ. ಪ್ರವಾಸಿಗರಿಗೂ ಪ್ಲಾಸ್ಟಿಕ್‌ನಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಸಿ ಮನವರಿಕೆ ಮಾಡಿಕೊಟ್ಟರೆ, ಅವರು ಕೇವಲ ಜೆಎಲ್‌ಆರ್‌ನಲ್ಲಿ ಮಾತ್ರವಲ್ಲದೆ ತಮ್ಮ ಜೀವನಪೂರ್ತಿ ಪರಿಸರ ಸಂರಕ್ಷಕರಾಗುತ್ತಾರೆ.