ಸಾಮಾನ್ಯವಾಗಿ ಕೆಫೆ ಅಂದ ತಕ್ಷಣ ನಮ್ಮ ಕಣ್ಣ ಮುಂದೆ ಬರೋದು ನಿಧಾನವಾಗಿ ಕಾಫಿ ಕುಡಿಯುತ್ತಾ, ಹರಟೆ ಹೊಡೆಯುವ ಒಂದು ಜಾಗ. ಆದರೆ, ಟೋಕಿಯೋದ ಕೊಯೆಂಜಿ ಅನ್ನೋ ಏರಿಯಾದಲ್ಲಿ ಒಂದು ಕೆಫೆ ಇದೆ, ಅದರ ಹೆಸರು 'ಮ್ಯಾನುಸ್ಕ್ರಿಪ್ಟ್ ರೈಟಿಂಗ್ ಕೆಫೆʼ. ಇಲ್ಲಿಗೆ ಬರುವುದು ಸುಲಭ, ಆದರೆ ಅಷ್ಟು ಬೇಗ ಹೊರಗೆ ಹೋಗುವುದು ಅಸಾಧ್ಯ! ಯಾಕೆ ಎಂದರೆ ಇದು ʼಡೆಡ್‌ಲೈನ್ʼ ಪ್ರೇಮಿಗಳಿಗಾಗಿಯೇ ಹುಟ್ಟಿಕೊಂಡಿರುವ ಒಂದು ವಿಶಿಷ್ಟ ಕೆಫೆ. ವಿಶೇಷವಾಗಿ ಬರಹಗಾರರಿಗಾಗಿಯೇ ಇರುವಂಥ ಕೆಫೆಯಿದು. ಕೆಲವರಿಗೆ ಡೆಡ್‌ಲೈನ್‌ಗೆ ಕೆಲಸ ಮಾಡಿ ಅಥವಾ ಬರೆದು ಮುಗಿಸುವ ಅಭ್ಯಾಸ ಇರುತ್ತದೆ. ಅಂಥವರಿಗೆ ಇದು ಸ್ವರ್ಗಸಮಾನ! ಇನ್ನು ಕೆಲವೊಮ್ಮೆ ಪ್ರಕಾಶಕರು ಪುಸ್ತಕ ನೀಡಲು ಡೆಡ್‌ಲೈನ್‌ ನೀಡಿರುತ್ತಾರೆ. ಆಗ ಇಂಥ ಕೆಫೆಗಳು ಸಹಕಾರಿಯಾಗುತ್ತವೆ.

ಮೊದಲು 'ಗೋಲ್ ಕಾರ್ಡ್' ಆಮೇಲೆ ಕಾಫಿ!

ನೀವು ಈ ಕೆಫೆ ಒಳಗೆ ಕಾಲಿಟ್ಟ ತಕ್ಷಣ ಸರ್ವರ್ ಬಂದು ಮೆನು ಕಾರ್ಡ್ ಕೊಡುವುದಿಲ್ಲ. ನಿಮ್ಮ ಕೈಗೆ ಒಂದು 'ಗೋಲ್ ಕಾರ್ಡ್' ಕೊಡುತ್ತಾರೆ. ಅದರಲ್ಲಿ ನೀವು ಇವತ್ತು ಏನು ಕೆಲಸ ಮುಗಿಸಬೇಕು ಅಂತ ಬರೆದು ವಾಪಸ್‌ ಅವರಿಗೆ ಕೊಡಬೇಕು. ಉದಾಹರಣಗೆ ʼದಿನಕ್ಕೆ 2000 ಪದಗಳನ್ನು ಮುಗಿಸಬೇಕು ಎಂದುಕೊಂಡಿದ್ದೇನೆʼ, ʼಎರಡು ಚಾಪ್ಟರ್‌ ಬರೆಯುತ್ತೇನೆʼ, ಹೀಗೆ ಯಾವ ಕೆಲಸ ಬೇಕಾದರೂ ಬರೆಯಬಹುದು. ಅದರೆ, ನೆನಪಿರಲಿ ಅವಿಷ್ಟು ಬರೆದು ಮುಗಿವವರೆಗೂ ಮನೆಗೆ ಹೋಗುವ ಹಾಗಿಲ್ಲ. ಅದಕ್ಕಾಗಿ ಎಷ್ಟು ಬರೆದು ಮುಗಿಸುವ ಧೈರ್ಯವಿರುತ್ತದೆಯೋ ಅಷ್ಟನ್ನು ಮಾತ್ರ ಗೋಲ್‌ ಆಗಿ ಇಟ್ಟುಕೊಂಡರೆ ಬಚಾವು. ಇಲ್ಲಿ ನಿಮ್ಮ ಗೌರವ ಮತ್ತು ಕೆಲಸ ಎರಡೂ ಪಣಕ್ಕಿಟ್ಟ ಹಾಗೆ.

Untitled design - 2026-05-01T194420.479

ಇಲ್ಲಿನ ವಾತಾವರಣ ಹೇಗಿರುತ್ತೆ?

ಕೆಫೆ ಒಳಗೆ ಬರೀ ಎಂಟು ಸೀಟುಗಳಿರುತ್ತವೆ. ನಾಲ್ಕು ವಿಂಡೋ ಸೀಟ್‌, ನಾಲ್ಕು ಒಳಗಿನ ಸೀಟ್‌. ಫ್ರೀ ವೈಫೈ, ಚಾರ್ಜಿಂಗ್‌ ಪೋರ್ಟ್‌ ಜತೆಗೆ ಲಾಪ್‌ಟಾಪ್‌ ಕೂಲಿಂಗ್‌ ಸ್ಪೇಸ್‌ ಕೂಡ ಇದೆ. ಪ್ರತಿಯೊಬ್ಬರೂ ತಮ್ಮ ಲ್ಯಾಪ್‌ಟಾಪ್ ಮುಂದೆ ತಪಸ್ಸು ಮಾಡುವರಂತೆ ಕುಳಿತು ಕೆಲಸ ಮಾಡುತ್ತಿರುತ್ತಾರೆ. ಇಡೀ ಕೆಫೆಯಲ್ಲಿ ಸ್ಮಶಾನ ಮೌನ! ಕೇಳಿಸೋದು ಬರೀ ಕೀಬೋರ್ಡ್ ಕುಟ್ಟುವ ಟಕ್-ಟಕ್ ಸದ್ದು ಮತ್ತು ಮಧ್ಯೆ ಮಧ್ಯೆ ಯಾರಾದರೂ ದೀರ್ಘವಾಗಿ ನಿಟ್ಟುಸಿರು ಬಿಟ್ಟ ಶಬ್ದ ಮಾತ್ರ. ಯಾರಿಗೂ ಹರಟೆ ಹೊಡೆಯಲು ಇಲ್ಲಿ ಅವಕಾಶವಿಲ್ಲ. ಇದೊಂಥರ ಎಕ್ಸಾಮ್ ಹಾಲ್ ಇದ್ದ ಹಾಗಿರುತ್ತದೆ. ಆದರೆ ನಾವೇ ದುಡ್ಡು ಕೊಟ್ಟು ಈ ಸಂಕಷ್ಟ ಮೈಮೇಲೆ ಎಳೆದುಕೊಂಡಿರ್ತೀವಿ ಅಷ್ಟೇ. ಇಲ್ಲಿನ ಮ್ಯಾನೇಜರ್ ಎಕ್ಸಾಂ ಇನ್ವಿಜಿಲೇಟರ್‌ ಇದ್ದ ಹಾಗೆ. ಪ್ರತಿ ಗಂಟೆಗೊಮ್ಮೆ ನಿಮ್ಮ ಬಳಿ ಬರುತ್ತಾರೆ. ʼಕೆಲಸ ಎಲ್ಲಿವರೆಗೆ ಬಂತು?ʼ ಎಂದು ಮೆಲ್ಲಗೆ ಕೇಳುತ್ತಾರೆ. ನಿಮಗೆ ಯಾವ ಮಟ್ಟದ ಒತ್ತಡ ಬೇಕು ಅನ್ನೋದನ್ನ್ನು ನೀವು ಮೊದಲೇ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಹಲವು ಅಯ್ಕೆಗಳಿವೆ. ʼನನಗೆ ಆಗಾಗ ಬಂದು ಕೇಳಿ ಒತ್ತಡ ಹಾಕುವ ಅವಶ್ಯಕತೆ ಇಲ್ಲ, ಹೆಚ್ಚು ಡಿಸ್ಟರ್ಬ್‌ ಮಾಡಬೇಡಿʼ, ʼಆಗಾಗ ಬಂದು ನನಪಿಸಿʼ, ʼನಾನು ಕೆಲಸ ಮಾಡದೆಯೇ ಸೋಮಾರಿಯಂತೆ ಕುಳಿತಿದ್ದರೆ ಬೈದು ಕೆಲಸ ಮಾಡಿಸಿʼ ಹೀಗೆ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.

ಇಲ್ಲಿನ ಮೆನು ಮತ್ತು ಖರ್ಚು

ಇಲ್ಲಿ ತಿನ್ನೋಕೆ ದೊಡ್ಡ ಲಿಸ್ಟ್ ಏನೂ ಇರಲ್ಲ. ʼನೀವು ಇಲ್ಲಿಗೆ ಬಂದಿರುವುದು ಕೆಲಸ ಮಾಡೋಕೆ, ಅವಕಾಡೊ ಟೋಸ್ಟ್ ತಿನ್ನೋಕಲ್ಲʼ ಎನ್ನುವುದು ಇವರ ಪಾಲಿಸಿ. ಆದರೂ ಕೆಲವು ತಿನಿಸುಗಳು ಇಲ್ಲಿ ಸಿಗುತ್ತವೆ. ಅನ್‌ಲಿಮಿಟೆಡ್ ಡಿಪ್ ಕಾಫಿ, ಬ್ಲ್ಯಾಕ್ ಟೀ ಮತ್ತು ಜಪಾನೀಸ್ ಟೀ ಸಿಗುತ್ತವೆ. ನೀವೇ ಹೋಗಿ ಹಾಕಿಕೊಳ್ಳಬೇಕು. ಒಂದು ವೇಳೆ ನಿಮಗೆ ಹಸಿವಾದರೆ ಕೆಫೆ ಎದುರು ಒಂದು ಬೇಕರಿಯಿದೆ. ಅಲ್ಲಿಂದ ನಿಮಗೆ ಏನು ಬೇಕೋ ಅದನ್ನು ತಂದು ತಿನ್ನಬಹುದು. ಮೊದಲ 30 ನಿಮಿಷಕ್ಕೆ ಸುಮಾರು 150 yen ಅಂದರೆ ೮೦ ರು. ಆಮೇಲೆ ಪ್ರತಿ ಗಂಟೆಗೆ 300 ಯೆನ್‌ ಅಂದರೆ 160 ರು. ಚಾರ್ಜ್ ಮಾಡ್ತಾರೆ. ನಿಮ್ಮ ಕಾಫಿ ಇಲ್ಲಿ ನಿಮ್ಮ ಕಷ್ಟ-ಸುಖದ ಏಕೈಕ ಸಂಗಾತಿ. ʼನಾನು ಇದನ್ನ ಮಾಡೇ ಮಾಡ್ತೀನಿʼ ಅನ್ನೋ ಕಾನ್ಫಿಡೆನ್ಸ್‌ನಿಂದ ʼಯಾಕಪ್ಪಾ ಇಷ್ಟೊಂದು ದೊಡ್ಡ ಗೋಲ್ ಇಟ್ಕೊಂಡೆʼ ಎಂಬ ಪಶ್ಚಾತ್ತಾಪದ ಭಾವನೆ ಮೂಡುವವರೆಗೂ ಈ ಕಾಫಿ ಮಾತ್ರ ಜತೆಗಿರುತ್ತದೆ.

Untitled design - 2026-05-01T194406.063

ಮಜವಾದ ಅನುಭವ

ಈ ಕೆಫೆಯಲ್ಲಿ ಕೂತಾಗ ನಮಗೆ ನಾವೇ ಒಂದು ಸೋಶಿಯಲ್ ಎಕ್ಸ್‌ಪರಿಮೆಂಟ್ ಮಾಡಿಕೊಂಡ ಹಾಗೆ ಅನಿಸುತ್ತದೆ. ಕಿಟಕಿಯಿಂದ ಹೊರಗೆ ನೋಡಿದರೆ ಎಲ್ಲರೂ ತಮ್ಮ ಪಾಡಿಗೆ ತಾವು ಏನೋ ಕೆಲಸ ಮಾಡುತ್ತಿರುತ್ತಾರೆ. ಗಾಡಿಗಳು ಓಡಾಡುತ್ತಿರುತ್ತವೆ. ಅದರೆ, ನೀವು ಮಾತ್ರ ಡೆಡ್‌ಲೈನ್‌ ಜತೆಗೆ ಯುದ್ಧ ಮಾಡುತ್ತಿರುತ್ತೀರಿ. ಕೆಲವೊಮ್ಮೆ ಇಂಥ ಒತ್ತಡದಲ್ಲೇ ಕೆಲಸ ಮುಗಿಯುತ್ತದೆ. ಬಹಳಷ್ಟು ಸಲ ಚೆನ್ನಾಗಿಯೂ ಆಗುತ್ತದೆ. ಕೊನೆಗೆ ಕೆಲಸ ಮುಗಿಸಿ, ಆ ಮ್ಯಾನೇಜರ್ ಕಡೆಯಿಂದ ಒಂದು 'ಓಕೆ' ಸಿಕ್ಕ ಮೇಲೆ ಹೊರಗೆ ಬಂದಾಗ ಖುಷಿ ಹಾಗೂ ನೆಮ್ಮದಿ ಎರಡೂ ಸಿಗಬಹುದು. ನಿಮಗೂ ಕೆಲಸ ಪೆಂಡಿಂಗ್ ಇಟ್ಟುಕೊಳ್ಳುವ ಅಭ್ಯಾಸ ಇದ್ದರೆ, ಟೋಕಿಯೋದ ಈ ಕೆಫೆಗೊಮ್ಮೆ ಹೋಗಿ ಎಲ್ಲ ಕೆಲಸ ಮುಗಿಸಿ ಬನ್ನಿ. ಇಂಥದ್ದೊಂದು ಕೆಫೆ ಬೆಂಗಳೂರಿನಲ್ಲೂ ಇದ್ದರೆ ಇಲ್ಲಿರುವ ಅನೇಕ ಬರಹಗಾರರು ಪ್ರಕಾಶಕರಿಂದ ಬೈಸಿಕೊಳ್ಳುವುದು ತಪ್ಪಬಹುದು. ಯಾರಾದರೂ ಇಂಥ ಕೆಫೆಯನ್ನು ಶುರು ಮಾಡುವ ಬಗ್ಗೆ ಯೋಚಿಸಬಹುದು.