Thursday, July 16, 2026
Thursday, July 16, 2026

ದ ಡ್ಯುಯಲ್ ರೂಮ್‌..

ʼಶೇಪ್ ಶಿಫ್ಟಿಂಗ್ ಸ್ಪೇಸ್ʼ ರೆಸ್ಟೋರೆಂಟ್ಸ್‌ ಬಗ್ಗೆ ಕೇಳಿದ್ದೀರಾ? ವಿದೇಶಗಳಲ್ಲಿ ಹೆಚ್ಚಿಗೆ ಹೆಸರು ಮಾಡಿರುವ ಇಂಥ ಪ್ರಯೋಗವೊಂದು ಸದ್ಯ ಸಿಲಿಕಾನ್‌ ಸಿಟಿಯಲ್ಲೂ ಸದ್ದು ಮಾಡುತ್ತಿದೆ. ಬೆಂಗಳೂರಿನ ಹೃದಯಭಾಗವಾಗಿರುವ ಇಂದಿರಾನಗರದಲ್ಲಿರುವ ʼದ ಡ್ಯುಯಲ್ ರೂಮ್ʼರೆಸ್ಟೋರೆಂಟ್‌ ಈಗ ಆಹಾರ ಪ್ರಿಯ ಮನಗೆದ್ದಿದೆ.

ಬೆಂಗಳೂರಿನಲ್ಲಿ ರುಚಿಕರವಾದ ಆಹಾರವನ್ನು ಸವಿಯಬೇಕೆಂದರೆ ಆಹಾರ ಪ್ರಿಯರಿಗೆ ಅನೇಕ ಆಯ್ಕೆಗಳಿವೆ. ಗಾಂಧಿಬಜಾರ್‌, ಕೋರಮಂಗಲ, ಬಸವನಗುಡಿ, ರಾಜರಾಜೇಶ್ವರಿ ನಗರ, ಚಾಮರಾಜಪೇಟೆ, ಜಯನಗರ ಹೀಗೆ ಹಲವು ಕಡೆ ಹರಡಿಕೊಂಡಿರುವ ಹೊಟೇಲ್‌, ರೆಸ್ಟೋರೆಂಟ್ಸ್‌ ಹಾಗೂ ಕೆಫೆಗಳು ಎಂಥವರಲ್ಲೂ ನಾಲಿಗೆ ರುಚಿ ಹತ್ತಿಸುತ್ತದೆ. ಅದರಲ್ಲೂ ಇಂದಿರಾನಗರವಂತೂ ಹೊಸ ಹೊಸ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳಿಗಾಗಿ ಸದಾ ಸುದ್ದಿಯಲ್ಲಿರುತ್ತದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಶುರುವಾಯ್ತು ಮೈಸೂರಿನ 'ಮೈಲಾರಿ' ಘಮ

ಇತ್ತೀಚೆಗೆ ಇಂದಿರಾನಗರದಲ್ಲಿ ಆಹಾರ ಪ್ರಿಯರ ಲಿಸ್ಟ್‌ಗೆ ಸೇರ್ಪಡೆಯಾದ ʼದ ಡ್ಯುಯಲ್ ರೂಮ್ʼ ತನ್ನ ವಿಶಿಷ್ಟ ಪರಿಕಲ್ಪನೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಹೆಸರಿನಂತೆಯೇ ಈ ಸ್ಥಳವು ಎರಡು ವಿಭಿನ್ನ ಅನುಭವಗಳನ್ನು ಒಂದೇ ಸೂರಿನಡಿ ನೀಡುವ ವಿಶಿಷ್ಟ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಾಮಾನ್ಯ ಕೆಫೆಯಂತೆ ಕಾಣುವ ಈ ಆಹಾರ ತಾಣ, ಹಗಲು ಮತ್ತು ರಾತ್ರಿಯ ವೇಳೆ ವಿಭಿನ್ನವಾಗಿ ಕಾಣಿಸಿಕೊಂಡು ಭಾರತದ ಮೊದಲ ʼಶೇಪ್ ಶಿಫ್ಟಿಂಗ್ ಸ್ಪೇಸ್ʼ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Untitled design (92)

ಹಗಲು ಕಾಫಿ.. ರಾತ್ರಿ ಕಾಕ್‌ಟೇಲ್‌

ಬೆಳಗ್ಗೆನಿಂದ ಮಧ್ಯಾಹ್ನದ ಸಮಯದಲ್ಲಿ ಈ ಕೆಫೆಗೆ ಭೇಟಿ ನೀಡಿದರೆ ಕಿವಿಗೆ ಹಿತವೆನಿಸುವ ಮ್ಯೂಸಿಕ್‌, ವಿಶಿಷ್ಟವಾದ ರುಚಿಕರ ಖಾದ್ಯಗಳು, ನೆಮ್ಮದಿಯ ವಾತಾವರಣ ಎಲ್ಲರನೂ ಸೆಳೆಯುತ್ತದೆ. ಸುಂದರವಾದ ಇಂಟೀರಿರ್ಸ್‌, ಆರಾಮದಾಯಕವಾದ ಸೀಟಿಂಗ್‌ ವ್ಯವಸ್ಥೆ ಮಾತ್ರವಲ್ಲದೆ ಆಫೀಸ್‌ ಕೆಲಸಗಳನ್ನು ಮಾಡುವುದಕ್ಕೂ ಅನುಕೂಲಕರ ವಾತಾವರಣ ಇಲ್ಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯಲು, ಬ್ರಂಚ್ ಡೇಟ್‌ಗೆ ಅಥವಾ ಕೆಲಸದ ಮಧ್ಯೆ ಕಾಫಿ ಸವಿಯಲು ಇದು ಸೂಕ್ತ ತಾಣ.

ಆದರೆ ಸಂಜೆ ಆರು ಗಂಟೆಯ ನಂತರ ʻದ ಡ್ಯುಯಲ್ ರೂಮ್ʼ ಸಂಪೂರ್ಣವಾಗಿ ತನ್ನ ರೂಪವನ್ನು ಬದಲಿಸಿಕೊಳ್ಳುತ್ತದೆ. ಸಂಗೀತ, ಬೆಳಕು, ವಾತಾವರಣ, ಮೆನು ಮಾತ್ರವಲ್ಲದೆ ಸಿಬ್ಬಂದಿಯ ಉಡುಪುಗಳವರೆಗೂ ಎಲ್ಲವೂ ಹೊಸ ರೂಪ ಪಡೆದು, ಕಿಕ್‌ ನೀಡುವ ಬಾರ್ ಆಗಿ ಬದಲಾಗುತ್ತದೆ. ವಿಶೇಷವಾಗಿ ಸೆವೆನ್‌ ಡೆಡ್ಲೀ ಸಿನ್ಸ್‌ ಅಂದರೆ ಏಳು ಮಹಾಪಾಪಗಳ ಪರಿಕಲ್ಪನೆಯೊಂದಿಗೆ ಸಿದ್ಧಪಡಿಸಲಾದ ಕಾಕ್‌ಟೇಲ್‌ಗಳು ಮತ್ತು ಅವುಗಳಿಗೆ ಹೊಂದುವ ಫುಡ್‌ ಕಾಂಬಿನೇಷನ್‌ ಈ ಸ್ಥಳದ ಪ್ರಮುಖ ಆಕರ್ಷಣೆ.

Untitled design (93)

ಸೋಶಿಯಲ್‌ ಮೀಡಿಯಾ ಕ್ರೇಜ್‌

ಆಹಾರವನ್ನು ಸವಿಯುವುದಷ್ಟೇ ಅಲ್ಲದೆ ಕಲರ್‌ಫುಲ್‌ ಪ್ರೆಸೆಂಟೇಶನ್‌ನೊಂದಿಗೆ ಅವುಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲು ಬಯಸುವವರಿಗಿದು ಸೂಕ್ತ ತಾಣ. ಯಾಕೆಂದರೆ ಸ್ಟ್ರಾಬೆರಿ ಕ್ರೀಮ್‌ನೊಂದಿಗೆ ತಯಾರಾಗುವ ಮಾಚಾ ಪಾನೀಯಗಳು, ಆಕರ್ಷಕ ಪ್ರೆಸೆಂಟೇಶನ್ ಹಾಗೂ ಕಲರ್‌ಫೂಲ್‌ ಫುಡ್‌ ಕಾಂಬಿನೇಷನ್‌ ಈ ಕೆಫೆಯ ಪ್ರಮುಖ ಆಕರ್ಷಣೆ.

ಸ್ಯಾಂಡ್ವಿಚ್‌ಗಳು, ಕೆಫೆ ಶೈಲಿಯ ಖಾದ್ಯಗಳು ಹಾಗೂ ಬಾರ್ ಸ್ನ್ಯಾಕ್ಸ್‌ಗಳು ಎಲ್ಲವೂ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುಮಾಡಿದೆ. ವಿಶೇಷವಾಗಿ ಪೆರುವಿಯನ್ ಲ್ಯಾಂಬ್ ನೂಡಲ್ಸ್ ಆಹಾರಪ್ರಿಯರ ಮನಗೆದ್ದಿದೆ. ಇಲ್ಲಿನ ಪ್ರತಿ ಕಾರ್ನರ್‌ ಸಹ ಸಿನಿಮಾಟಿಕ್‌ ಎಂಬಂತಿದ್ದು, ಅಚ್ಚುಕಟ್ಟಾಗಿ ಡಿಸೈನ್‌ ಮಾಡಲಾಗಿದೆ.

ಇಲ್ಲಿಗೆ ಭೇಟಿನೀಡಬೇಕೆಂದುಕೊಂಡರೆ ಬೆಳಗ್ಗೆ 8 ರಿಂದ ಮಧ್ಯರಾತ್ರಿ 1 ಗಂಟೆಯ ವರೆಗೂ ಅವಕಾಶವಿದೆ. ವಿಶೇಷ ದಿನಗಳಂದು ಗ್ರಾಹಕರಿಗಾಗಿ ಅನೇಕ ಆಫರ್‌ಗಳಿದ್ದು, ಅಪ್‌ ಡೇಟ್ಸ್‌ಗಾಗಿ ತಪ್ಪದೇ ಇನ್ಸ್ಟಾಗ್ರಾಮ್‌ ಫಾಲೋ ಮಾಡಬೇಕೆಂದು ಕೆಫೆ ಮಾಹಿತಿ ನೀಡಿದೆ.

ಒಟ್ಟಾರೆ, ದಿನದ ಸಮಯದಲ್ಲಿ ಶಾಂತವಾದ ಕಫೆ ಮತ್ತು ರಾತ್ರಿಯ ವೇಳೆ ಕಿಕ್‌ ನೀಡುವ ಬಾರ್ ಅನುಭವವನ್ನು ಒಂದೇ ಸೂರಿನಡಿ ನೀಡುತ್ತಿರುವ ʻದ ಡ್ಯುಯಲ್ ರೂಮ್ʼ, ಇಂದಿರಾನಗರದ ಹೊಸ ಟ್ರೆಂಡ್‌ಸೆಟ್ಟರ್ ಆಗಿ ಹೊರಹೊಮ್ಮಿದೆ. ಹೊಸ ಅನುಭವಗಳನ್ನು ಹುಡುಕುವ ಬೆಂಗಳೂರಿಗರಿಗಿದು ಒಳ್ಳೆಯ ಆಯ್ಕೆ.

ವಿಳಾಸ :

ದಿ ಡ್ಯುಯಲ್ ರೂಮ್, 616, 12ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಎಚ್‌ಎಎಲ್ (HAL) 2ನೇ ಹಂತ, ಇಂದಿರಾನಗರ, ಬೆಂಗಳೂರು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..