ಹಳ್ಳಿಯ ಅಜ್ಜಿಮನೆಯನ್ನು ಮಿಸ್ ಮಾಡಿಕೊಂಡ್ರಾ..?
ನಗರ ಜೀವನದ ಗದ್ದಲದಿಂದ ದೂರವಾಗಿ ಮನಸ್ಸಿಗೆ ಶಾಂತಿ ಮತ್ತು ದೇಹಕ್ಕೆ ವಿಶ್ರಾಂತಿ ನೀಡುವ ಸ್ಥಳಗಳು ಇಂದಿನ ಕಾಲದಲ್ಲಿ ಬಹಳ ಅಗತ್ಯ. ಅಂಥ ವಿಶ್ರಾಂತಿ ತಾಣಗಳಲ್ಲಿ ಧಾತ್ರಿ ವನ ರೆಸಾರ್ಟ್ ಎಲ್ಲರ ಗಮನಸೆಳೆದಿದೆ. ಇದು ಪ್ರಕೃತಿಯ ಮಧ್ಯೆ ನಿರ್ಮಿಸಲಾದ ಹಸಿರು ಪರಿಸರ, ಶಾಂತ ವಾತಾವರಣ ಮತ್ತು ಆರಾಮದಾಯಕ ಸೌಲಭ್ಯಗಳೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವ ನೆಮ್ಮದಿಯ ತಾಣ.
ಧಾತ್ರಿ ವನ ರೆಸಾರ್ಟ್. ಹೆಸರು ಕೇಳಿದ ಕೂಡಲೇ ಅದ್ಧೂರಿ,ಐಷಾರಾಮಿ ರೆಸಾರ್ಟ್ ಇರಬಹುದೆಂಬ ಕಾಲ್ಪನಿಕ ಲೋಕಕ್ಕೆ ಹೋಗಬೇಡಿ.ಇದು ಪ್ರಕೃತಿಯ ನಡುವೆ ಅನೇಕ ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಸುಂದರ ಹಾಗೂ ಸರಳವಾದ ರೆಸಾರ್ಟ್. ಇದರ ಪ್ರಮುಖ ಆಕರ್ಷಣೆ ಇಲ್ಲಿನ ನೈಸರ್ಗಿಕ ವಾತಾವರಣ, ಹಸಿರು ತೋಟಗಳು, ಗಿಡ, ಮರ, ಬಳ್ಳಿಗಳ ನಡುವೆ ಸಿಗುವ ಸ್ವಚ್ಛ ಗಾಳಿ ಹಾಗೂ ಇವೆಲ್ಲದರಿಂದಾಗಿ ಮನಸ್ಸಿಗೆ ಸಿಗುವ ನೆಮ್ಮದಿ.
ಬೆಂಗಳೂರಿನ ಕ್ಯಾತಸಂದ್ರದಿಂದ ಕೆಸರಮಡು ರಸ್ತೆಗೆ ಬಂದರೆ ಅಲ್ಲಿನ ಕಾಶ್ಯಪವನದ ಧಾತ್ರಿ ಧಾರ್ಮಿಕ ಕೇಂದ್ರ ಕಾಣಸಿಗುತ್ತದೆ. ಇದು ಹಸಿರು ಮನೆ, ಅಥವಾ ಧಾತ್ರಿ ವನ ರೆಸಾರ್ಟ್ ಎಂಬುದಾಗಿಯೂ ಗುರುತಿಸಿಕೊಂಡಿದೆ. ಏಳು ತಲೆಮಾರಿನಿಂದಲೂ ನಡೆಸಿಕೊಂಡು ಬಂದು ಸುಧಾ ಮತ್ತು ರವಿ ಎಂಬ ದಂಪತಿ ಹಸ್ತಾಂತರಿಸಲ್ಪಟ್ಟ ಈ ವ್ಯವಸಾಯದ ಭೂಮಿಯಲ್ಲೇ ಪುಟ್ಟದಾದ ಗೂಡನ್ನು ನಿರ್ಮಿಸಿ, ಕಳೆದ 10 ವರ್ಷಗಳಿಂದೀಚೆಗೆ ʻಹಳ್ಳಿ ಅಜ್ಜಿ ಮನೆ ನೆನಪುʼ ಎಂಬ ವಿಶಿಷ್ಟ ಯೋಜನೆಯನ್ನು ಅತಿಥಿಗಳಿಗಾಗಿ ಆಯೋಜಿಸುತ್ತಲೇ ಬಂದಿದ್ದಾರೆ.
ಇದನ್ನೂ ಓದಿ: ಇದು ಜಗತ್ತಿನ ಮೊಟ್ಟಮೊದಲ ರೋಬೋ ಉದ್ಯೋಗಿ ಹೊಟೇಲ್
ಧಾತ್ರಿ ವನದ ವಿಶೇಷತೆಯೇನು ಗೊತ್ತಾ?
ಹಳ್ಳಿಯ ವಾತಾವರಣವನ್ನು ಮೆಚ್ಚಿಕೊಳ್ಳುವ ಮಂದಿಗೆ ಧಾತ್ರಿ ವನ ಬಹಳ ಒಳ್ಳೆಯ ಆಯ್ಕೆ. ಹಳ್ಳಿಯಲ್ಲಿರುವ ಅಜ್ಜಿಮನೆಯ ಜೀವನ ಹೇಗಿರುತ್ತದೆ ಎಂಬುದನ್ನು ಇಂದಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಪ್ರಾರಂಭವಾದ ಈ ಪ್ರಯೋಗ ಇಂದು ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿದೆ. ಹಳ್ಳಿ ಜೀವನದಲ್ಲಿ ಸಾಮಾನ್ಯವಾಗಿರುವ ರಾಗಿ ಬೀಸುವುದು, ಬಾವಿಯಿಂದ ನೀರು ಸೇದುವಂಥ ಅನೇಕ ವಿಚಾರಗಳನ್ನು ಖುದ್ದು ಅನುಭವಿಸುವ ಅವಕಾಶ ಇಲ್ಲಿದೆ.

ಕುಂಟೆ ಬಿಲ್ಲೆ, ಬೀರು ಚಂಡು, ಚೌಕಾಭಾರ, ಹುಲಿ ಕುರಿ ಆಟ, ಅಟ್ಟಗುಣಿ ಮಣೆ, ಭತ್ತ ಕುಟ್ಟುವುದು, ರಾಗಿ ಬೀಸುವುದು, ನೀರು ಸೇದುವುದು, ಮರ ಕೋತಿ ಆಟ, ಲಗೋರಿ, ಚಿನ್ನಿದಾಂಡು, ಬುಗುರಿ, ಕೋಲಾಟ, ಕಬ್ಬಡಿ, ಹಗ್ಗ ಜಗ್ಗಾಟ, ಸಂಖ್ಯೆಯಲ್ಲಿ ಊಹೆ, ಪಗಡೆ, ಹೂವು ಕಟ್ಟುವುದು, ರಂಗೋಲಿ ಹಾಕುವುದು ಹೀಗೆ ಇಲ್ಲಿರುವ ಮನರಂಜನೆಯ ಆಟಗಳೆಲ್ಲವೂ ದಶಕಗಳ ಹಿಂದಕ್ಕೆ ಮತ್ತೊಮ್ಮೆ ಪ್ರಯಾಣ ಬೆಳೆಸುವಂತೆ ಮಾಡುತ್ತದೆ.
ಹಳ್ಳಿ ಅಜ್ಜಿ ಮನೆ ನೆನಪು ಯೋಜನೆಯ ಹಿನ್ನೆಲೆ
ಹಳ್ಳಿ ಅಜ್ಜಿ ಮನೆ ನೆನಪು ಎಂಬ ಪರಿಕಲ್ಪನೆ ಹುಟ್ಟಿಕೊಂಡಿದ್ದೇ ಒಂದು ರೋಚಕ ಕತೆ. ಬೇಸಾಯವನ್ನೇ ಜೀವನದ ಉಸಿರಾಗಿಸಿಕೊಂಡಿದ್ದ ರವಿ ಅವರ ವರ್ಷಗಳ ಹಳೆಯ ಮನೆ ಪರಿಸರಕ್ಕೆ ಮನಸೋತ ಆ ಹಳ್ಳಿಗೆ ಬಂದಿದ್ದ ಕುಟುಂಬವೊಂದು, ಒಂದು ದಿನವಾದರೂ ಇಲ್ಲಿ ಕಾಲಕಳೆಯುವ ಅವಕಾಶ ನೀಡುವಂತೆ ರವಿ ಅವರ ಬಳಿ ಕೇಳಿಕೊಂಡಿದ್ದರು. ಅಲ್ಲದೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟವನ್ನೂ ಮಾಡುಕೊಡಲು ಕೇಳಿಕೊಂಡಿದ್ದರು. ಇದಕ್ಕೊಪ್ಪಿದ ರವಿ ಎಲ್ಲವನ್ನೂ ಅಚ್ಚುಕಟ್ಟಾಗಿ ನೆರವೇರಿದ್ದರು. ರವಿ ಅವರ ಆದರ- ಆತಿಥ್ಯಕ್ಕೆ ಮನಸೋತ ಈ ಬಳಗ, ಇದನ್ನೇ ಉದ್ಯಮವನ್ನಾಗಿಸುವಂತೆ ಮನವಿ ಮಾಡಿದ್ದರು. ಇದನ್ನು ಕಾರ್ಯರೂಪಕ್ಕೆ ತರಲು ತಿಂಗಳುಗಳ ಕಾಲ ಬೇಕಾಯಿತಾದರೂ ಈ ಪರಿಕಲ್ಪನೆ ಸದ್ಯ ನಗರಿಗರ ಮನಗೆದ್ದಿಗೆ.
ಆಹಾರವೇ ಹೈಲೈಟ್ಸ್
ಅತಿಥಿಗಳ ಆರೋಗ್ಯದ ಕಾಳಜಿಯಿರುವ ರವಿ ಹಾಗೂ ಕುಟುಂಬ ವಿಶೇಷವಾದ ಸಾತ್ವಿಕ ಆಹಾರದ ಮೆನುವನ್ನೇ ಸಿದ್ಧಪಡಿಸಿಕೊಂಡಿದೆ. ಬೆಳಗಿನ ಉಪಾಹಾರಕ್ಕೆ ಕೊಟ್ಟೆ ಕಡುಬು, ಹುರಿಟ್ಟು, ಅವಲಕ್ಕಿ ಹುಗ್ಗಿಯಿರುತ್ತದೆ. ಮಧ್ಯಾಹ್ನಕ್ಕೆ ರಾಗಿ ಮುದ್ದೆ, ತಂಬುಳಿ ಊಟ, ಕೆಂಪಕ್ಕಿ ಗಂಜಿ, ಹುರುಳಿ ಹಪ್ಪಳ, ಗಸಗಸೆ ಪಾಯಸ, ಗುಂಟೂರು ಚಿತ್ಸಾನ್ನ, ಮಸಾಲೆ ಮಜ್ಜಿಗೆ ಹೀಗೆ ವಿಶೇಷ ಆಯ್ಕೆಗಳಿರುತ್ತವೆ. ಪ್ರತಿ ಶನಿವಾರ, ಭಾನುವಾರ ಹಾಗೂ ಮಂಗಳಾರ, ಬುಧವಾರಗಳಂದು ಮಾತ್ರ ಇಲ್ಲಿಗೆ ಭೇಟಿ ನೀಡಿ ಕಾಲ ಕಳೆಯುವ ಅವಕಾಶವಿದ್ದು, ಮುಂಗಡ ಬುಕಿಂಗ್ ಅತೀ ಅಗತ್ಯವಾಗಿದೆ. ಒಂದು ದಿನಕ್ಕೆ 60 ಮಂದಿಯ ವರೆಗೂ ಬುಕಿಂಗ್ ಮಾಡಲು ಸಾಧ್ಯವಿದ್ದು, ವಯಸ್ಕರಿಗೆ 1100 ರು, 5 ವರ್ಷ ಮೇಲ್ಪಟ್ಟ ಮಕ್ಕಳಿಗೆ 800 ರು ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕವನ್ನೂ ವಿಧಿಸಲಾಗುವುದಿಲ್ಲ.

ಒಟ್ಟಿನಲ್ಲಿ, ಧಾತ್ರಿ ವನ ರೆಸಾರ್ಟ್ ಪ್ರಕೃತಿ, ಆರಾಮ ಮತ್ತು ಮನರಂಜನೆಗಳನ್ನು ಏಕಕಾಲಕ್ಕೆ ನೀಡುವ ವಿಶೇಷ ತಾಣವಾಗಿದೆ. ಕುಟುಂಬ ಸಮೇತರಾಗಿ ಇಲ್ಲಿಗೆ ಭೇಟಿನೀಡಿದರೆ ಸಾವಯವ ರುಚಿಯ ಆಹಾರವನ್ನು ಸವಿಯನ್ನುಣ್ಣುವುದರ ಜತೆಗೆ ಆಟವಾಡುತ್ತಾ ಕಾಲ ಕಳೆಯಬಹುದು, ಸುಂದರವಾದ ನೆನಪುಗಳ ಜತೆಗೆ ಮರಳಬಹುದು.
ಅಜ್ಜಿಮನೆಯ ಜೀವನ ಹೇಗಿರುತ್ತದೆ ಎಂಬುದನ್ನು ಇಂದಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಪ್ರಯೋಗವನ್ನು ಮಾಡಿದ್ದೇವೆ. ಇದು ನನ್ನ ಸೂರು, ಆದರೆ ಕಳೆದ 10 ವರ್ಷಗಳಿಂದ ಈ ಸೂರಿನ ಸೌಲಭ್ಯಗಳನ್ನು ನಗರವಾಸಿಗಳಿಗೆ ಪರಿಚಯಿಸಿ, ಇಲ್ಲಿ ಸಾತ್ವಿಕ ಆಹಾರ ಪದ್ಧತಿ, ದಶಕಗಳ ಹಿಂದಿನ ಕ್ರೀಡೆಗಳ ಪರಿಚಯ ಹೀಗೆ ಅನೇಕ ಚಟುವಟಿಕೆಗಳನ್ನು ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಲು ಸಾಧ್ಯವಾಗಿದೆ. ಆದರೆ ಎಲ್ಲರು ಕೇಳುವಂತೆ ವಾಸ್ತವ್ಯದ ಅವಕಾಶವನ್ನು ಇನ್ನೂ ಪ್ರಾರಂಭಿಸಬೇಕಿದೆ. ರಾತ್ರಿ ಕೈತುತ್ತಿನ ಊಟ, ಹಂಡೆ ಸ್ನಾನ, ಚಾರಣಕ್ಕೂ ಇರುವ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಸದ್ಯದಲ್ಲೇ ಈ ಯೋಜನೆಗಳು ಸಾಕಾರಗೊಳ್ಳಲಿವೆ.
- ಕೆ.ಎಸ್. ರವಿ, ಮಾಲೀಕ, ಧಾತ್ರಿ ವನ ರೆಸಾರ್ಟ್
ವಿಳಾಸ
ಕೆಸರಮಧು, ರಸ್ತೆ, ಕ್ಯಾತ್ಸಂದ್ರ, ಕರ್ನಾಟಕ 572104
ಮೊ: 9945179936, 9964426039