Tuesday, February 24, 2026
Tuesday, February 24, 2026

ವಾಘಾ ಬಾರ್ಡರ್‌ನಲ್ಲಿ ವಂದೇ ಮಾತರಂ

ವಾಘಾ ಬಾರ್ಡರ್ ಎಂದು ಆ ಸ್ಥಳವನ್ನು ಕರೆದರೂ ನಾವು ಕುಳಿತು ನೋಡುವ `ಬೀಟಿಂಗ್ ದ ರಿಟ್ರೀಟ್’ ಸಂಭ್ರಮವು `ಅಟ್ಟರಿ’ ಎಂಬ ನಮ್ಮ ಭಾರತದ ನೆಲದಲ್ಲಿದೆ. ವಾಘಾ ಇರುವುದು ಪಾಕಿಸ್ತಾನದಲ್ಲಿ. ಅಟ್ಟರಿ ಮತ್ತು ವಾಘಾಗಳು ಕೂಡುವ ಸ್ಥಳದಲ್ಲಿ ಒಂದು `ಹೈ ಪ್ರೊಫೈಲ್ ಚೆಕ್ ಪೋಸ್ಟ್’ ನಿರ್ಮಿಸಿದ್ದಾರೆ. ಇದು `ವಾಘಾ ಬಾರ್ಡರ್/ ಭಾರತದ ಬಾಗಿಲು/ ಬಾಬ್ ಎ ಆಜಾದಿ’ ಎಂದೂ ಕರೆಯಲ್ಪಟ್ಟಿದೆ.

  • ವಿಶಾಲಾ ಆರಾಧ್ಯ

ಪಂಜಾಬ್‌ನ ಜನರನ್ನು ನೋಡುವುದು ಒಂದು ರೀತಿಯ ಖುಷಿ. ಅವರ ಉಡುಗೆ-ತೊಡುಗೆಗಳು ವಿಭಿನ್ನವಾಗಿರುತ್ತವೆ. ಇಲ್ಲಿನ ಸಾಂಪ್ರದಾಯಿಕ ಉಡುಗೆಗಳು ಇಲ್ಲಿನ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ತಿಳಿಸುತ್ತವೆ. ಪುರುಷರಿಗಾಗಿ ಪಂಜಾಬಿ ಸಲ್ವಾರ್ ಕಮೀಜ್ ಅಥವಾ ಪಟಿಯಾಲಾ ಸೂಟ್, ಕುರ್ತಾ ಪೈಜಾಮಾ, ಅಚ್ಕನ್, ಶೇರ್ವಾನಿ, ಪಠಾಣಿ ಸೂಟ್, ಲುಂಗಿ, ಧೋತಿ-ಕುರ್ತಾ, ಫುಲ್ಕರಿ ಜಾಕೆಟ್, ಜುಟ್ಟಿ, ತೆಹ್ಮತ್ ಮುಂತಾದವು ಪುರುಷರ ಜನಪ್ರಿಯ ಉಡುಪುಗಳು.

ಇದನ್ನೂ ಓದಿ: ಮೂರು ಲಕ್ಷ ಶಿಲ್ಪಿಗಳ ಕುಸುರಿ

ಮಹಿಳೆಯರು ಸಾಂಪ್ರದಾಯಿಕವಾಗಿ ಪಂಜಾಬಿ ಸಲ್ವಾರ್ ಕಮೀಜ್ ಅಥವಾ ಪಂಜಾಬಿ ಘಾಗ್ರಾವನ್ನು ಧರಿಸುತ್ತಾರೆ. ಪಟಿಯಾಲ ಸಲ್ವಾರ್, ಚುಡಿದಾರ್ ಸೂಟ್, ಲೆಹೆಂಗ ಚೋಲಿ, ಶರರಾ ಸೂಟ್, ಅನಾರ್ಕಲಿ ಸೂಟ್, ಪರಂಡಿ ಮುಂತಾದವು ಮಹಿಳೆಯರ ಜನಪ್ರಿಯ ಉಡುಗೆಗಳು.

ಜಾನಪದ ಹಾಡು, ನೃತ್ಯ ಮೇಳ, ಪ್ರೀತಿ ಮತ್ತು ಹೋರಾಟದ ಹಬ್ಬ, ಸಂಗೀತ-ಸಾಹಿತ್ಯ ಈ ರಾಜ್ಯದ ಸಾಂಸ್ಕೃತಿಕ ಜೀವನದ ಲಕ್ಷಣಗಳಾಗಿವೆ. ಪಂಜಾಬಿ ಕಲೆ ಮತ್ತು ಕರಕುಶಲ ವಸ್ತುಗಳು ದೇಶದಲ್ಲಿ ಹೆಸರುವಾಸಿಯಾಗಿವೆ. ಅದರಂತೆ ಇಲ್ಲಿನ ಆಹಾರ ಭಕ್ಷ್ಯಗಳೂ ಜನಪ್ರಿಯವಾಗಿವೆ. ಇಲ್ಲಿನ ಮಾಂಸಾಹಾರಿ - ಸಸ್ಯಾಹಾರಿಗಳಾಗಲಿ ಊಟದಲ್ಲಿ ಸದಾ ತೃಪ್ತರು ಎಂದು ಹೇಳಬಹುದು. ಪಂಜಾಬಿನ ಜನರು ಹೆಚ್ಚಾಗಿ ಬೆಣ್ಣೆ ಅಥವಾ ತುಪ್ಪದಲ್ಲಿ ಖಾದ್ಯವನ್ನು ಬೇಯಿಸುತ್ತಾರೆ. ಇಲ್ಲಿನ ತಂದೂರಿಯೂ ಜನಪ್ರಿಯ. ಅದರ ಹೊರತಾಗಿ ಫಿಶ್ ಕಬಾಬ್, ಫಿಶ್ ಟಿಕ್ಕಾ, ಅಮೃತಸರ ಮೀನುಗಳ ಭಕ್ಷ್ಯಗಳಿಗೆ ಹೆಸರಾಗಿದೆ.

Untitled design (26)

ವಾಘಾ ಬಾರ್ಡರ್‌ನಲ್ಲಿ ಇಂಡೋ ಪಾಕ್‌ ಧ್ವಜಗಳು

ಪಂಜಾಬ್ ರಾಜ್ಯದ ಅಮೃತಸರದಿಂದ 30 ಕಿಮೀ ಅಂತರದಲ್ಲಿರುವ ಅಟ್ಟರಿ/ ವಾಘಾ ಬಾರ್ಡರ್ ನೋಡಲು ನಾವು ಹೋಗಿದ್ದೆವು. ಅಲ್ಲಿ ಮೊದಲಿಗೆ ಚೆಕ್‌ಇನ್ ಇರುತ್ತದೆ. ನಮ್ಮ ಹಣದ ಪರ್ಸ್ ಮತ್ತು ಮೊಬೈಲ್ ಮಾತ್ರ ಒಳಗೆ ಬಿಡುತ್ತಾರೆ. ಒಳಗಡೆ ಹೋದಂತೆ ಅಲ್ಲಿ ಹೋಗುವವರಿಗೆ ಮೈ ರೋಮಾಂಚನವಾಗುತ್ತದೆ. ಏಕೆಂದರೆ ಅಲ್ಲಿ ಎರಡೂ ದೇಶ ಅಂದರೆ ಪಾಕಿಸ್ತಾನ ಮತ್ತು ಭಾರತದ ಧ್ವಜಗಳು ಆಕಾಶದಲ್ಲಿ ಹಾರಾಡುತ್ತಿರುತ್ತವೆ. ವಾಘಾ ಬಾರ್ಡರ್ ಎಂದು ಆ ಸ್ಥಳವನ್ನು ಕರೆದರೂ ನಾವು ಕುಳಿತು ನೋಡುವ `ಬೀಟಿಂಗ್ ದ ರಿಟ್ರೀಟ್’ ಸಂಭ್ರಮವು `ಅಟ್ಟರಿ’ ಎಂಬ ನಮ್ಮ ಭಾರತದ ನೆಲದಲ್ಲಿದೆ. ವಾಘಾ ಇರುವುದು ಪಾಕಿಸ್ತಾನದಲ್ಲಿ. ಅಟ್ಟರಿ ಮತ್ತು ವಾಘಾಗಳು ಕೂಡುವ ಸ್ಥಳದಲ್ಲಿ ಒಂದು `ಹೈ ಪ್ರೊಫೈಲ್ ಚೆಕ್ ಪೋಸ್ಟ್’ ನಿರ್ಮಿಸಿದ್ದಾರೆ. ಇದು `ವಾಘಾ ಬಾರ್ಡರ್/ ಭಾರತದ ಬಾಗಿಲು/ ಬಾಬ್ ಎ ಆಜಾದಿ’ ಎಂದೂ ಕರೆಯಲ್ಪಟ್ಟಿದೆ.

ಭಾರತ - ಪಾಕಿಸ್ತಾನ ವಿಭಜನೆಯಾದಾಗ ಈ ಉಭಯ ದೇಶಗಳ ನಡುವೆ ಗಡಿರೇಖೆಗಳು ಹುಟ್ಟಿದ್ದು ಗೊತ್ತಿರುವ ವಿಷಯ. ಇದೇ ಕಾರಣಕ್ಕೆ ಅಟ್ಟರಿ ಮತ್ತು ವಾಘಾದ ನಡುವೆ ಅಂತಾರಾಷ್ಟ್ರೀಯ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.

ಪ್ರತಿದಿನ ಸೂರ್ಯಾಸ್ತಕ್ಕೂ ಎರಡು ಗಂಟೆಗಳ ಮುನ್ನ ನಡೆಯುವ `ಬೀಟಿಂಗ್ ರೀಟ್ರೀಟ್ ಸೆರಮನಿ’ ಈ ಬಾಡರ್‌ನ ಗೇಟ್ ಮುಂದೆ ನಡೆಸಲಾಗುತ್ತದೆ. ಆಗ ಉಭಯ ದೇಶದ ನೂರಾರು ಜನ ಇಲ್ಲಿಗೆ ಬರುತ್ತಾರೆ. ಪಾಕಿಸ್ತಾನದ ರೈಸರ್‌ಗಳು ಮತ್ತು ಭಾರತದ ಬಿಎಸ್‌ಎಫ್‌ ಫೋರ್ಸ್ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಪ್ರದರ್ಶನ ನೀಡುತ್ತಾರೆ. ಉಭಯ ದೇಶಗಳ ವೀಕ್ಷಕರು ತಮ್ಮ ತಮ್ಮ ದೇಶದ ಘೋಷವಾಕ್ಯಗಳನ್ನು ಕೂಗುತ್ತಾ ಸಂಭ್ರಮಿಸುತ್ತಾರೆ.

Untitled design (25)

ನಾವು ಅಲ್ಲಿಗೆ ಹೋಗಿ ವೀಕ್ಷಕ ಜಾಗದಲ್ಲಿ ಕುಳಿತೆವು. ʻವಂದೇ ಮಾತರಂʼ ʻಹಿಂದೂಸ್ತಾನ್ ಜಿಂದಾಬಾದ್ʼಘೋಷಣೆಗಳು ಶುರುವಾದವು ನಾವೆಲ್ಲರೂ ಆ ಘೋಷ ವಾಕ್ಯಗಳಿಗೆ ಉತ್ತರವಾಗಿ ಘೋಷಣೆಗಳನ್ನು ಕೂಗಿದೆವು. ಭಾರತದ ಬ್ಯಾಂಡ್‌ಗಳ ಸದ್ದು ಅದಕ್ಕೆ ತಕ್ಕಂತೆ ಬಿಎಸ್‌ಎಫ್‌ ಯೋಧರ ಕವಾಯತ್ ನೋಡಿಯೇ ಕಣ್ತುಂಬಿಕೊಳ್ಳಬೇಕು. ನಮ್ಮ ದೇಶದ ಸರದಿಯಾದ ನಂತರ ಪಾಕಿಸ್ತಾನದ ಕಡೆಯವರು ಅವರ ದೇಶದ ಬ್ಯಾಂಡ್ ಡೋಲಕ್ ಅನ್ನು ನುಡಿಸುತ್ತಾ ಅಲ್ಲಿನ ರೈಸರ್‌ಗಳೂ ಕವಾಯತ್ ನಡೆಸುತ್ತಾರೆ. ಅವರ ದೇಶದ ಘೋಷಣೆ ಕೂಗುತ್ತಾ ಪ್ರದರ್ಶನ ಕೊಡುತ್ತಾರೆ.

`ಮೆರೆ ದೇಶ್ ಕೆ ಧರತಿ ಸೋನಾ ಉಗಲೇ ಹೀರೆ ಮೋತಿ’ ಹಾಡು ಮೂಡಿಬಂದಿತು. ಅಲ್ಲಿ ನೆರೆದಿದ್ದ ಸಾವಿರಾರು ಜನರು ಧ್ವನಿಯಾಗಿದ್ದರು. ನಾವೂ ಅದಕ್ಕೆ ಕೋರಸ್ ಆಗಿ `ಅಹಾ ಹ ಆ ಹಾ ಹಾ..’ಎಂದು ಹಾಡಿದೆವು. ಎರಡು ಗಂಟೆಗಳ ಕಾಲ ಎರಡೂ ದೇಶಗಳ ನಡುವೆ ನಡೆಯುವ ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಂಡು ಹೊರ ಬಂದರೆ ಒಂದು ಅದ್ಭುತ ಅನುಭವ ನಮ್ಮ ಮನದಲ್ಲಿ ಮೂಡುತ್ತದೆ. ಎರಡೂ ದೇಶಗಳು ಸೌಹಾರ್ದಯುತವಾಗಿ ಯಾವುದೇ ಗಡಿಗಳಿಲ್ಲದೆ, ದ್ವೇಷ ಅಸೂಯೆಗಳು ಇಲ್ಲದೆ ಇದ್ದರೆ ಎಷ್ಟು ಸೊಗಸಿತ್ತು ಅನಿಸಿತ್ತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat