Wednesday, February 4, 2026
Wednesday, February 4, 2026

ಮೂರು ಲಕ್ಷ ಶಿಲ್ಪಿಗಳ ಕುಸುರಿ

ಗಮನಸೆಳೆದ ಮತ್ತೊಂದು ವಿಷಯವೆಂದರೆ, ಅಲ್ಲಲ್ಲಿ ಕಲ್ಲುಗಳ ಮೇಲೆ ಕಾಣಸಿಕ್ಕ ಶಿಲ್ಪಿಗಳ “ಹಾಜರಾತಿ”. ಒಂದುಗೆರೆ ಎಳೆದಿದ್ದರೆ ಪೂರ್ತಿದಿನದ ಹಾಜರಾತಿ ಎಂದು, ಒಂದು ಚುಕ್ಕಿ ಇದ್ದರೆ ಅರ್ಧದಿನದ ಹಾಜರಾತಿಯೆಂದು ಹೇಳಲಾಗುತ್ತದೆ. ಇದರ ಆಧಾರದ ಮೇಲೆ ಇಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಶಿಲ್ಪಿಗಳು ಕೆಲಸ ಮಾಡಿದರೆಂದು ನಂಬಲಾಗಿದೆ.

  • ಕೀರ್ತನಾ. ಎನ್. ಎಂ

ಒಂದು ಪ್ರವಾಸ ಎಷ್ಟರ ಮಟ್ಟಿಗೆ ನಮ್ಮನ್ನು ಸಮೃದ್ಧಿಗೊಳಿಸುತ್ತದೆ ಮತ್ತು ತಿಳಿಯುವ, ಕಲಿಯುವ ವಿಷಯ ಹೆಜ್ಜೆ ಹೆಜ್ಜೆಗೂ ಸಿಗುತ್ತದೆ ಎಂದು ಊರೂರು ಸುತ್ತಿದಾಗಲೇ ತಿಳಿಯುವುದು. ನಾವು ಹೊರಟದ್ದು ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿಗೆ.

ಮೂರು ದಿನಗಳ ರಜೆಯನ್ನು ಹೇಗೆ ಕಳೆಯುವುದು, ಯಾವೆಲ್ಲಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಬೇಕು ಎಂದು ಪ್ಲಾನ್ ಮಾಡಲು, ಈ ಮೊದಲೇ ಈ ಸ್ಥಳಕ್ಕೆ ಹೋಗಿಬಂದವರನ್ನು ಕೇಳಿದಾಗ, ‘ಅಯ್ಯೋ….’ಮೂರು ದಿನ ಜಾಸ್ತಿ! ಅಷ್ಟಾಗಿ ನೋಡಲು ಅಲ್ಲಿ ಏನೂ ಇಲ್ಲ. ಬರಿಯ ಕಲ್ಲಿನ ಕೋಟೆ, ಪೂಜೆಗೂ ಅರ್ಹವಲ್ಲದ ಭಗ್ನಗೊಂಡ ಗುಡಿಗಳು! ಒಂದೇ ದಿನದಲ್ಲಿ ನೀವು ಎಲ್ಲವನ್ನೂ ನೋಡಬಹುದು ಎಂದರು. ಅಚ್ಚರಿಯಾದರೂ ಹೊಸ ಜಾಗವಾದ್ದರಿಂದ ಇರಬಹುದು ಎಂದು ಸುಮ್ಮನಾದೆ. ಶಾಲೆಗಳಲ್ಲಿ ಓದಿದ್ದು ಅದರಲ್ಲೂ ನನಗೆ ಹೆಚ್ಚಾಗಿ ನೆನಪಿರುವುದೇ ಬ್ರಿಟಿಷ್ ಆಡಳಿತದ ಮುನ್ನ ಮತ್ತು ನಂತರದ ಬಾದಾಮಿ. ಬಳಿಕ ಮುಘಲರ ಧಾಳಿಗೆ ತುತ್ತಾಗಿ ಧ್ವಂಸಗೊಂಡ ಬಗ್ಗೆ. ಅದಲ್ಲದೆ ಬ್ರಿಟಿಷ್ ಇತಿಹಾಸಕಾರರು ಹಾಗೂ ನಮ್ಮ ನಾಡಿನ ಕೆಲವು ಪ್ರಸಿದ್ಧ ಇತಿಹಾಸಕಾರರು ತಮ್ಮ ಪುಸ್ತಕದಲ್ಲಿ ದಾಖಲಿಸಿರುವುದು.

ಇದನ್ನೂ ಓದಿ: ಸೀತಾ ನದಿಯ ಜಾಡಿನಲ್ಲಿ….

‘ಗೈಡ್ ಗೆ ಯಾಕೆ ದುಡ್ಡು ಕೊಡಬೇಕು. ನಾವೇ ಗೂಗಲ್ ನೋಡಿ ಹೋಗೋಣ’ ಎಂದು ನನ್ನನ್ನೂ ಸೇರಿದಂತೆ ಬಹಳಷ್ಟು ಜನ ಈ ತಪ್ಪನ್ನು ಮಾಡುತ್ತೇವೆ. ಆದರೆ ಗೂಗಲ್ ನಲ್ಲಿ ಓದುವುದು Pre-Preparation ಇದ್ದಂತೆ. ಸ್ಥಳಕ್ಕೆ ಹೋದಾಗ ಅಲ್ಲಿನ ಗೈಡ್ ಅಥವಾ ಸ್ಥಳೀಯರ ಮೂಲಕ ಆ ಜಾಗದ ಬಗ್ಗೆ ತಿಳಿದುಕೊಳ್ಳುವಷ್ಟು ವಿಷಯ ಯಾವ ಗೂಗಲ್ ಅಥವಾ ಚಾಟ್ ಜಿಪಿಟಿ ಕೂಡ ತಿಳಿಸಲಾಗದು. ಅಷ್ಟೆಲ್ಲಾ ಖರ್ಚು ಮಾಡಿ ಪ್ರವಾಸಕ್ಕೆ ಬರುವ ಜನರು ಸ್ಥಳೀಯ ಪುರಾಣ, ಇತಿಹಾಸ ತಿಳಿಸಿಕೊಡುವವರಿಗೆ ಸಾವಿರ ರುಪಾಯಿ ನೀಡಲು ಹಿಂದೇಟು ಹಾಕುವುದು ವಿಪರ್ಯಾಸ.

ನಮ್ಮ ಮೊದಲ ದಿನ ಶುರುವಾದದ್ದು ಬನಶಂಕರಿ ತಾಯಿಯ ದರ್ಶನದಿಂದ. ಈ ದೇವಾಲಯವು ತಿಲಕಾರಣ್ಯದಲ್ಲಿ ನೆಲೆಸಿರುವುದರಿಂದ ಇದನ್ನು ವನಶಂಕರಿ ಎಂದೂ ಮತ್ತು ದುರ್ಗಾಮಾಸುರ ಎಂಬ ರಾಕ್ಷಸನಿಂದ ಜನರನ್ನು ರಕ್ಷಿಸಿದ ಪಾರ್ವತಿ ದೇವಿಯ ಶಾಕಾಂಬರಿ ರೂಪವಾದುದ್ದರಿಂದ ಬನಶಂಕರಿ ಎಂದು ಕರೆಯಲಾಗುತ್ತದೆ.

ತಾಯಿಯ ದರುಶನವಾದ ನಂತರ ನಾವು ಹೊರಟದ್ದು ಬಾದಾಮಿ ಗುಹಾಂತರಕ್ಕೆ.

Untitled design (22)

ಎಂಟ್ರಿ ಟಿಕೆಟ್ ಪಡೆದು ಗೈಡ್ ಹುಡುಕುತ್ತಿದ್ದ ನಮ್ಮನ್ನು ನೋಡಿದ ಅಲ್ಲಿಯ ಸರ್ಟಿಫೈಡ್ ಗೈಡ್ ತನ್ನ ಪರಿಚಯವನ್ನು ನೀಡಿ ಬಾದಾಮಿಯ ಇತಿಹಾಸವನ್ನು ಹೇಳಲು ಶುರುಮಾಡಿಯೇ ಬಿಟ್ಟರು.

ಬಾದಾಮಿಯನ್ನು ಮೊದಲು ವಾತಾಪಿ ಎಂಬ ಹೆಸರಿನಿಂದ ಕರೆಯಲಾಗುತ್ತಿತು. ಇದರ ಹಿಂದೆ ಒಂದು ಸಣ್ಣ ದಂತಕಥೆ ಇದೆ. ಒಮ್ಮೆ ಇಲ್ವಲ ಮತ್ತು ವಾತಾಪಿ ಎಂಬ ರಾಕ್ಷಸ ಸಹೋದರರು ಈ ಪ್ರದೇಶದಲ್ಲಿ ವಾಸವಾಗಿದ್ದರು. ಇಲ್ವಲನು ಅತಿಥಿಗಳನ್ನು ಆಹ್ವಾನಿಸಿ, ವಾತಾಪಿಯನ್ನು ಕುರಿಯನ್ನಾಗಿ ಮಾಡಿ, ಅದರ ಮಾಂಸವನ್ನು ಅಡುಗೆ ಮಾಡಿ ಬಡಿಸುತ್ತಿದ್ದನು. ಊಟದ ನಂತರ, ಇಲ್ವಲನು "ವಾತಾಪಿ, ಹೊರಗೆ ಬಾ" ಎಂದು ಕರೆಯುತ್ತಿದ್ದನಂತೆ. ಆಗ ವಾತಾಪಿ ಹೊಟ್ಟೆಯಿಂದ ಹೊರಬಂದು ಜನರನ್ನು ಕೊಲ್ಲುತ್ತಿದ್ದನಂತೆ. ಒಮ್ಮೆ ಅಗಸ್ತ್ಯ ಋಷಿಗಳು ಈ ದಾರಿಯಲ್ಲಿ ಬಂದಾಗ, ಇಲ್ವಲನು ಅವರನ್ನು ಊಟಕ್ಕೆ ಆಹ್ವಾನಿಸಿದನಂತೆ. ಇಲ್ವಲನು ಅಗಸ್ತ್ಯರಿಗೆ ಊಟ ಬಡಿಸಿ ಅವರು ಅದನ್ನು ಸ್ವೀಕರಿಸಿದ ನಂತರ “ವಾತಾಪಿ, ಹೊರಗೆ ಬಾ" ಎಂದು ಕರೆದ. ಊಟವಾದ ತಕ್ಷಣ ಅಗಸ್ತ್ಯರು ಮೆಲ್ಲನೆ “ವಾತಾಪಿ, ಜೀರ್ಣವಾಗು” ಎಂದಿದ್ದರಿಂದ ವಾತಾಪಿ ಜೀರ್ಣವಾಗಿಹೋಗಿದ್ದ. ಆಗ ಅಗಸ್ತ್ಯರು ನಕ್ಕು “ನಿನ್ನ ಸಹೋದರ ವಾತಾಪಿಯನ್ನು ನಾನು ಈಗಾಗಲೇ ಜೀರ್ಣಿಸಿಕೊಂಡಿದ್ದೇನೆ, ಅವನು ಹೊರಗೆ ಬರಲು ಸಾಧ್ಯವಿಲ್ಲ" ಎಂದು ಹೇಳಿದರು.

ತನ್ನ ಸಹೋದರನ ಅಂತ್ಯವನ್ನು ಕೇಳಿ ಕೋಪಗೊಂಡ ಇಲ್ವಲನು, ಅಗಸ್ತ್ಯ ಋಷಿಯ ಮೇಲೆ ಆಕ್ರಮಣ ಮಾಡಿದಾಗ ಅಗಸ್ತ್ಯರು ಆತನನ್ನು ಭಸ್ಮ ಮಾಡಿದರು. ಅದರಿಂದ ಆ ಸ್ಥಳಕ್ಕೆ “ವಾತಾಪಿಪುರ” ಎಂಬ ಹೆಸರು ಬಂತೆಂದು ಸ್ಥಳಪುರಾಣದಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.

ನಂತರ ಚಾಲುಕ್ಯರ ಆಳ್ವಿಕೆಯ ಸಮಯದಲ್ಲಿ ಆ ಭೂಪ್ರದೇಶ ಮರಳುಗಲ್ಲಿನಿಂದ (Sandstone) ಕೂಡಿದ್ದರಿಂದ ಮತ್ತು ಅದರ ಬಣ್ಣ ಕೆಂಪಾದ - ಬಾದಾಮಿ ಬಣ್ಣ ಹೊಂದಿರುವುದರಿಂದ “ಬಾದಾಮಿ” ಎಂದು ಹೆಸರಿಸಲಾಯಿತು ಎಂದು ಇತಿಹಾಸದಲ್ಲಿ ಹೇಳಲಾಗಿದೆ.

ಬಾದಾಮಿಯಲ್ಲಿ ದಕ್ಷಿಣ ಬೆಟ್ಟವನ್ನು ಗುಹಾಂತರವಾಗಿಯೂ ಮತ್ತು ಉತ್ತರದ ಬೆಟ್ಟವನ್ನು ಕೋಟೆಯನ್ನಾಗಿಯೂ ನಿರ್ಮಿಸಲಾಗಿದೆ. ಈ ಎರಡು ಬೆಟ್ಟಗಳು ಇಲ್ವಲ ಮತ್ತು ವಾತಾಪಿ ಬೆಟ್ಟ ಎಂದೂ ಹಾಗೂ ಇವೆರಡರ ಮಧ್ಯ ಇರುವ ಕೊಳವನ್ನು ಅಗಸ್ತ್ಯಕೊಳ ಎಂದೂ ಗುರುತಿಸಲಾಗುತ್ತದೆ.

ಚಾಲುಕ್ಯರು ತಮ್ಮ ಆಡಳಿತದ ಆರಂಭದಲ್ಲಿ ಐಹೊಳೆಯನ್ನು ತಮ್ಮ ರಾಜಧಾನಿಯನ್ನಾಗಿಸಿದ್ದರು. ಆದರೆ ಕ್ರಮೇಣ ಬಾದಾಮಿಯ ಭೂ ರಚನೆಯು ತಮಗೆ ಸುರಕ್ಷಿತ ಮತ್ತು ಉತ್ತಮವಾಗಿದೆ ಎಂದು ತಿಳಿದು ಬಾದಾಮಿಯನ್ನು ತಮ್ಮ ರಾಜಧಾನಿಯನ್ನಾಗಿಸಿದರು. ವನದುರ್ಗ (ಕಾಡು), ಗಿರಿದುರ್ಗ (ಬೆಟ್ಟ) ಮತ್ತು ಜಲದುರ್ಗದಿಂದ (ನದಿ) ಸುತ್ತುವರಿದಿದ್ದ ಈ ಪ್ರದೇಶ ಚಾಲುಕ್ಯರ ಭದ್ರಕೋಟೆಯಾಯಿತು ಹಾಗೂ ಇತಿಹಾಸದಲ್ಲಿ “ಬಾದಾಮಿ ಚಾಲುಕ್ಯರು” ಎಂದೇ ಹೆಸರುವಾಸಿಯಾದರು.

6ನೇ ಶತಮಾನದಲ್ಲಿ ನಿರ್ಮಿಸಿದ ಈ ಭವ್ಯ ಗುಹಾಂತರಗಳಲ್ಲಿ 4 ಗುಹೆಗಳಿವೆ. ಮೊದಲನೆಯ ಗುಹೆ ಶಿವನದ್ದು, ಎರಡನೆಯ ಮತ್ತು ಮೂರನೆಯ ಗುಹೆ ವಿಷ್ಣುವಿನದ್ದು ಮತ್ತು ಕೊನೆಯ ಗುಹೆ ಜೈನ ಗುಹೆ. 28 ವರ್ಷಗಳ ಸುದೀರ್ಘ ಪರಿಶ್ರಮದ ಫಲವಾಗಿರುವ ಈ ಜಾಗದಲ್ಲಿ ಒಂದೊಂದು ಕಲ್ಲಿನ ಕೆತ್ತನೆಗಳಲ್ಲಿಯೂ ಧರ್ಮ ಸಹಿಷ್ಣುತೆ ಮತ್ತು ವಾಸ್ತುಶಿಲ್ಪದ ಅದ್ಭುತವನ್ನು ಕಾಣಬಹುದು.

ಭಾರತದ ಶಿಲ್ಪಕಲೆಯಲ್ಲಿ ಬಲು ಅಪರೂಪವಾದ 18 ಕೈಗಳುಳ್ಳ ನಟರಾಜನ ಮೂರ್ತಿಯಿಂದ ಶುರುವಾಗಿ ಜೈನತೀರ್ಥಂಕರನಾದ ಮಹಾವೀರನ ಮೂರ್ತಿಯವರೆಗೂ ಒಂದೊಂದು ಶಿಲ್ಪ, ಕಂಬಗಳೆಲ್ಲವೂ ಏಕಶಿಲೆಯಲಿಯೇ ಕೆತ್ತಲ್ಪಟ್ಟಿದೆ. ಚಾಲುಕ್ಯರ ರಾಜ ಲಾಂಛನ ವರಾಹನಾದ್ದರಿಂದ (ಹಂದಿ) ಹಲವು ವರಾಹಾವತಾರದ ಕೆತ್ತನೆಗಳು ಕಾಣಸಿಗುತ್ತವೆ. ಆ ಕಾಲದಲ್ಲಿ ನಾಣ್ಯದ ಮೇಲೆ ವರಾಹಸ್ವಾಮಿಯ ಚಿಹ್ನೆ ಇದುದ್ದರಿಂದ ನಾಣ್ಯಕ್ಕೆ “ವರಾಹ” ಎಂಬ ಹೆಸರು ಬಂತೆಂಬುದಾಗಿ ಹೇಳಲಾಗುತ್ತದೆ.

Untitled design (23)

ಇದರೊಂದಿಗೆ ಶಿವ, ಪಾರ್ವತಿ, ಭೃಗುಮಹರ್ಷಿಗಳ ಕಥೆ, ಅರ್ಧನಾರೀಶ್ವರ, ವಿಷ್ಣುವಿನ ಅವತಾರಗಳಾದ - ವಾಮನ ಮತ್ತು ನರಸಿಂಹ, ಹರಿಹರ ಮುಂತಾದ ಕೆತ್ತನೆಗಳು ಅದ್ಭುತವಾಗಿ ಮೂಡಿಬಂದಿದೆ. ಇದರೊಂದಿಗೆ ಗಮನಸೆಳೆದ ಮತ್ತೊಂದು ವಿಷಯವೆಂದರೆ, ಅಲ್ಲಲ್ಲಿ ಕಲ್ಲುಗಳ ಮೇಲೆ ಕಾಣಸಿಕ್ಕ ಶಿಲ್ಪಿಗಳ “ಹಾಜರಾತಿ”. ಒಂದುಗೆರೆ ಎಳೆದಿದ್ದರೆ ಪೂರ್ತಿದಿನದ ಹಾಜರಾತಿ ಎಂದು, ಒಂದು ಚುಕ್ಕಿ ಇದ್ದರೆ ಅರ್ಧದಿನದ ಹಾಜರಾತಿಯೆಂದು ಹೇಳಲಾಗುತ್ತದೆ. ಇದರ ಆಧಾರದ ಮೇಲೆ ಇಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಶಿಲ್ಪಿಗಳು ಕೆಲಸ ಮಾಡಿದರೆಂದು ನಂಬಲಾಗಿದೆ.

ಬಾದಾಮಿ ಗುಹೆಗಳ ಎದುರಲ್ಲಿಯೇ ಕಾಣಸಿಗುವ ಕೋಟೆಯು ಚಾಲುಕ್ಯರ ಅರಮನೆ ಇದ್ದ ಸ್ಥಳ. ಇದರೊಂದಿಗೆ ಭೂತನಾಥ, ಮಹಾಗಣಪತಿ, ಹನುಮಂತನ ಗುಡಿಗಳು ಇಲ್ಲಿ ಕಾಣಸಿಗುತ್ತದೆ. ನಂತರ ಇಲ್ಲಿ ಆಡಳಿತ ನಡೆಸಿದ ಪಲ್ಲವರು, ಸುಲ್ತಾನರು ಈ ಕೋಟೆಯನ್ನು ನವೀಕರಿಸಿದರೆಂದು ಹೇಳಲಾಗುತ್ತದೆ.

ಒಂದೊಂದು ಕಲ್ಲು ಒಂದೊಂದು ಕಥೆಯನ್ನು, ಶಿಲ್ಪಿಯ ಕೌಶಲ್ಯವನ್ನು ಸಾರಿಹೇಳುತ್ತದೆ. ಆದರೆ ಹೇಳುವವರಿಗೂ ಮತ್ತು ಕೇಳುವವರಿಗೂ ಸಮಯ, ಸಂಯಮ ಮತ್ತು ಆಸಕ್ತಿ ಬೇಕು ಅಷ್ಟೇ.

ಒಂದುಕಾಲದಲ್ಲಿ ಈ ಪ್ರದೇಶ 9900 ಹಳ್ಳಿಗಳನ್ನು ಹೊಂದಿತ್ತೆಂದು ಹೇಳಲಾಗುತ್ತದೆ. ಇಂದು ಬಾಗಲಕೋಟೆಯ ಒಂದು ತಾಲೂಕಾಗಿ, ಭವ್ಯ ಇತಿಹಾಸವನ್ನು ಜಗತ್ತಿಗೆ ಸಾರುತ್ತಿದೆ.

ನಾ ಕಂಡು ಕೇಳಿದ ಸಂಕ್ಷಿಪ್ತ ಬಾದಾಮಿ ಇತಿಹಾಸ ಇದು. ನಮ್ಮ ಮುಂದಿನ ನಿಲ್ದಾಣ ಪಟ್ಟದಕಲ್ಲು, ಮಹಾಕೂಟ ಮತ್ತು ಐಹೊಳೆಯಾಗಿತ್ತು.

ಪಾಯಿಂಟ್ಸ್

● ರಾಕ್ಷಸ ಸಹೋದರರ ವಾಸಸ್ಥಳವಾಗಿದ್ದ ಬಾದಾಮಿ

● ಚಾಲುಕ್ಯ ರಾಜಮನೆತನದ ಅಧಿದೇವತೆ ನೆಲೆಸಿರುವ ಬೀಡು

● ಶಿಲ್ಪಿಗಳ ಹಾಜರಾತಿ ಸೂಚಿಸುವ ಗೆರೆಗಳು

● ಹದಿನೆಂಟು ಕೈಗಳ ನಟರಾಜ ಶಿಲ್ಪ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..