ಸೀತಾ ನದಿಯ ಜಾಡಿನಲ್ಲಿ….
ಚೆಕ್‌ಪೋಸ್ಟ್ ದಾಟಿ ಚಿಕ್ಕ ಕಾಲು ಹಾದಿಯಲ್ಲಿ ಸಾಗುತ್ತಿದ್ದಂತೆ ಚಿಕ್ಕ ತೊರೆಯೊಂದು ಎದುರಾಗುತ್ತದೆ. ಅದನ್ನು ದಾಟಿ ಕಡಿದಾದ ಬೆಟ್ಟವನ್ನು ಹತ್ತಬೇಕು. ಕೆಲವು ಕಡೆ ಮೆಟ್ಟಿಲುಗಳಿವೆ. ಸುತ್ತಲೂ ಬೃಹತ್ ಮರಗಳು, ಕಂಡಷ್ಟೂ ಹಸಿರು. ಕಾಡನ್ನೇ ಕಾಣದವರಿಗೆ ಈ ಜಾಗ ಭಯವನ್ನು ಹುಟ್ಟಿಸಬಹುದು! ಏದುಸಿರು ಬಿಡುತ್ತ ಹತ್ತುವಾಗ ʻಅಯ್ಯೋ ಇನ್ನೆಷ್ಟು ದೂರನಪ್ಪʼ ಎಂದು ಗೊಣಗದೆ ಇರಲು ಸಾಧ್ಯವಿಲ್ಲ. ಸುಮಾರು ಒಂದೂವರೆ - ಎರಡು ಕಿಮೀ ಗಳಷ್ಟು ಕಾಲ್ನಡಿಗೆ ಮಾಡಲೇಬೇಕು
- ಅನಂತ್ ಹರಿತ್ಸ
ಆಗುಂಬೆಯ ಸೂರ್ಯಾಸ್ತವನ್ನು ನೋಡುವುದೇ ಸೊಗಸು. ಹಚ್ಚ ಹಸುರಿನ ಸಹ್ಯಾದ್ರಿ ಪರ್ವತಶ್ರೇಣಿ. ಬೆಳಗಿನ ಜಾವ ಮತ್ತು ಸಂಜೆಯ ಸಮಯದ ಮಂಜು ನೋಡುಗನಿಗೆ ಹಿತವಾದ ಅನುಭವವನ್ನು ಕೊಡುತ್ತದೆ. ಆಗುಂಬೆ ಘಾಟ್ ಶುರುವಾಗುತ್ತಿದ್ದಂತೆ ಹಿಂಡು ಹಿಂಡು ಕೋತಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ರೋಚಕ ತಿರುವಿರುವ ಘಾಟ್ ಇಳಿಯುತ್ತಿದ್ದಂತೆ ಮಧ್ಯದಲ್ಲಿ ಅಪರೂಪಕ್ಕೆಂಬಂತೆ ಸಿಂಗಳೀಕ (ಲಯನ್ ಟೇಲ್ಡ್ ಮಕಾಕ್), ಕಪ್ಪು ಮುಸಿಯಾಗಳೂ ಕಾಣಬಹುದು. ಆಗುಂಬೆಯ ಸಮೀಪದಲ್ಲಿ ಹೇಳಿಕೊಳ್ಳುವಂಥ ವಸತಿ ಸೌಲಭ್ಯವಿಲ್ಲ. ಹತ್ತಿರದ ತೀರ್ಥಹಳ್ಳಿ ಅಥವಾ ಹೆಬ್ರಿ, ಉಡುಪಿಗೆ ಬರಬೇಕು. ಪಶ್ಚಿಮ ಘಟ್ಟದ ಆಗುಂಬೆ ಕಾಳಿಂಗ ಸರ್ಪಗಳ ತವರು. ಚಿಟ್ಟೆಗಳು, ಕಪ್ಪೆಗಳ ವಿಭಿನ್ನ ಪ್ರಭೇದಗಳೂ ಇಲ್ಲಿವೆ. ಈ ಘಟ್ಟದ ದಟ್ಟ ಕಾನನದ ಮಧ್ಯೆ ಸೀತಾ ನದಿ ಜಲಪಾತವಾಗಿ ಹರಿಯುತ್ತದೆ.
ಇದನ್ನೂ ಓದಿ: ವೀಸಾ ವಿಷ್ಯ.. ತಿಳ್ಕೊಳೊ ಶಿಷ್ಯ
ತುಂಬಿ ಹರಿದಾಳೆ ಸೀತಾ
ಆಗುಂಬೆಯ ಘಾಟ್ ಇಳಿದು ಸೋಮೇಶ್ವರ ದಾಟಿ ಹೆಬ್ರಿ ಅಥವಾ ಉಡುಪಿಯ ಮಾರ್ಗ ಹಿಡಿಯುತ್ತಿದ್ದಂತೆ ಸೀತಾ ನದಿ ಸಿಗುತ್ತದೆ. ಅದಕ್ಕೂ ಮೊದಲು ಎಡಕ್ಕೆ ತಿರುಗಿ ಸುಮಾರು ಎಂಟು ಕಿಮೀ ಚಿಕ್ಕ ರಸ್ತೆಯಲ್ಲಿ ಸಾಗಿದರೆ, ಅರಣ್ಯ ಇಲಾಖೆಯ ಸೋಮೇಶ್ವರ ವನ್ಯಜೀವಿ ಅರಣ್ಯದ ಚೆಕ್‌ಪೋಸ್ಟ್ ಸಿಗುತ್ತದೆ. ಅಲ್ಲಿಗೆ ಹೆಬ್ರಿ, ಆಗುಂಬೆ, ಸೋಮೇಶ್ವರಗಳಿಂದಲೂ ಸಾರಿಗೆ ಸೌಕರ್ಯವಿಲ್ಲ. ಸ್ವಂತ ವಾಹನದಲ್ಲಿ ಹೋಗಬೇಕಾಗುತ್ತದೆ. ರಸ್ತೆ ಸಾಧಾರಣವಾಗಿದೆ. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೆ ಮುಗಿಸಿಕೊಂಡು ಕೂಡ್ಲು ತೀರ್ಥ ಜಲಪಾತಕ್ಕೆ ಚಾರಣ ಕೈಗೊಳ್ಳಬಹುದು. ಪ್ಲಾಸ್ಟಿಕ್‌ಗೆ ಅವಕಾಶವಿಲ್ಲ. ಪ್ಲಾಸ್ಟಿಕ್ ನೀರಿನ ಬಾಟಲ್ ತೆಗೆದುಕೊಂಡು ಹೋಗಬಹುದಾದರೂ ಮರಳಿ ಬರುವಾಗ ಜತೆಗೆ ಅದೇ ಪ್ಲಾಸ್ಟಿಕ್ ಬಾಟಲ್ ತಂದು ಚೆಕ್‌ಪೋಸ್ಟ್‌ನಲ್ಲಿ ತೋರಿಸಬೇಕಾಗುತ್ತದೆ. ಕ್ಯಾಮೆರಾ ತೆಗೆದುಕೊಂಡು ಹೋಗಬಹುದು.

ಚೆಕ್‌ಪೋಸ್ಟ್ ದಾಟಿ ಚಿಕ್ಕ ಕಾಲು ಹಾದಿಯಲ್ಲಿ ಸಾಗುತ್ತಿದ್ದಂತೆ ಚಿಕ್ಕ ತೊರೆಯೊಂದು ಎದುರಾಗುತ್ತದೆ. ಅದನ್ನು ದಾಟಿ ಕಡಿದಾದ ಬೆಟ್ಟವನ್ನು ಹತ್ತಬೇಕು. ಕೆಲವು ಕಡೆ ಮೆಟ್ಟಿಲುಗಳಿವೆ. ಸುತ್ತಲೂ ಬೃಹತ್ ಮರಗಳು, ಕಂಡಷ್ಟೂ ಹಸಿರು. ಕಾಡನ್ನೇ ಕಾಣದವರಿಗೆ ಈ ಜಾಗ ಭಯವನ್ನು ಹುಟ್ಟಿಸಬಹುದು! ಏದುಸಿರು ಬಿಡುತ್ತ ಹತ್ತುವಾಗ ʻಅಯ್ಯೋ ಇನ್ನೆಷ್ಟು ದೂರನಪ್ಪʼ ಎಂದು ಗೊಣಗದೆ ಇರಲು ಸಾಧ್ಯವಿಲ್ಲ. ಸುಮಾರು ಒಂದೂವರೆ - ಎರಡು ಕಿಮೀ ಗಳಷ್ಟು ಕಾಲ್ನಡಿಗೆ ಮಾಡಲೇಬೇಕು.
ಸೀತಾ ನದಿಯ ಲಹರಿ
ಜಲಪಾತ ಹತ್ತಿರವಾದಂತೆ ಅದರ ಭೋರ್ಗೆರೆತದ ಸದ್ದು ಕೇಳಿಸಿ ಇನ್ನೇನು ಬಂದೇ ಬಿಟ್ಟಿತು ಎಂದು ಖುಷಿಯಾಗುತ್ತದೆ. ಸಣ್ಣ ಸಣ್ಣ ಕಲ್ಲು ಬಂಡೆಗಳನ್ನು ದಾಟಿ ನಡೆಯುವಾಗ ಹುಷಾರಾಗಿರಬೇಕು. ದೂರದಲ್ಲಿ ಜಲಪಾತ ಗೋಚರವಾಗುತ್ತಿದ್ದಂತೆ ನಡೆದು ಬಂದ ಆಯಾಸವೆಲ್ಲ ಮಾಯವಾಗಿ ಬಿಡುತ್ತದೆ. ಮೊಣಕಾಲಿಗಿಂತ ಕಡಿಮೆ ಎತ್ತರಕ್ಕೆ ಹರಿಯುವ ಸ್ಫಟಿಕದಂಥ ಶುಭ್ರ ನೀರು. ಎದುರಿಗೆ ಬೃಹತ್ ಕಲ್ಲಿನ ಬೆಟ್ಟ. ಎಡ ಭಾಗದಲ್ಲಿ ಮುನ್ನೂರು ಅಡಿಗಳಿಂದ ಧುಮುಕುತ್ತಿರುವ ಸೀತಾ ನದಿ. ನೀರು ಬೀಳುವ ಜಾಗ ಕೊಳದಂತಿದ್ದು ಆಳವಾಗಿಲ್ಲ. ಜನಜಂಗುಳಿಯಿಲ್ಲ. ಯಾವುದೋ ದಟ್ಟಡವಿಯ ಕಣಿವೆಯ ಮಧ್ಯೆ ಇರುವಂತೆ ಭಾಸವಾಗುತ್ತದೆ. ವಿಹಾರಕ್ಕೆ, ಚಾರಣಕ್ಕೆ, ಮಕ್ಕಳು ನೀರಿನಲ್ಲಿ ಆಡಲು ಹೇಳಿ ಮಾಡಿಸಿದ ಜಾಗವಿದು.

ಸಿಕ್ಕಾಪಟ್ಟೆ ಮಳೆಯಾಗುವ ಪ್ರದೇಶವಾದ್ದರಿಂದ ಮಳೆಗಾಲದಲ್ಲಿ ಈ ಜಲಪಾತಕ್ಕೆ ಪ್ರವೇಶ ನಿಷಿದ್ಧ. ಬೇಸಗೆಯಲ್ಲಿ ಅಷ್ಟು ನೀರಿರುವುದಿಲ್ಲ. ಚಳಿಗಾಲದಲ್ಲಿ, ಬೇಸಗೆಗೆ ಮೊದಲು ಈ ಜಲಪಾತ ನೋಡಲು ಅಪ್ಯಾಯಮಾನವಾಗಿರುತ್ತದೆ. ಶೃಂಗೇರಿ, ಕಾರ್ಕಳ, ಉಡುಪಿ, ಕುಂದಾಪುರಕ್ಕೆ ಹತ್ತಿರವಾಗಿದೆ. ಇಪ್ಪತೈದು ಕಿಮೀ ಅಸುಪಾಸಿನಲ್ಲಿ ಕಾರ್ಕಳ-ಆಗುಂಬೆ ಮಾರ್ಗದಲ್ಲಿ ಇರುವ ವರಂಗ ಜೈನ ಬಸದಿಯನ್ನೂ ಇಲ್ಲಿಗೆ ಬಂದಾಗ ನೋಡಬಹುದು.
ದಾರಿ ಹೇಗೆ?
ಉಡುಪಿ ಮೂಲಕ ಕೂಡ್ಲು ತೀರ್ಥ ತಲುಪಬಹುದು
ಹೆಬ್ರಿಯಿಂದ ಕೇವಲ 20 ಕಿಮೀ ದೂರದಲ್ಲಿದೆ
ಬಸ್ಸು, ಕಾರು ಮತ್ತು ಬೈಕಿನ ಮೂಲಕ ಹೋಗಬಹುದು
ರಸ್ತೆ ಸಂಪರ್ಕದಿಂದ 4 ಮೀ ದೂರದಲ್ಲಿ ಜಲಪಾತವಿದೆ