ಲಾಗೋ ಡಿ ಸೋರಾಪಿಸ್ ಎಂಬ ಭುವನಸುಂದರಿ
ಹತ್ತಾರು ಮೈಲಿಗಳವರೆಗಿನ ಸೂಚಿಪರ್ಣ ಕಾಡುಗಳು, ಮಿಸುರೀನಾ, ಟ್ರೆ ಚಿಮೆ (Tre cime) ಪರ್ವತಗಳು ಹಾಗೂ ಕಾಡಿನಿ ಶಿಖರಗಳ(Cadini Towers)ವರೆಗಿನ ದೃಶ್ಯಕಾವ್ಯ ಮೂಡುತ್ತಾ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಹಾಗಂತ ಎಲ್ಲೂ ಎಚ್ಚರ ತಪ್ಪುವ ಹಾಗಿಲ್ಲ, ಒಂಚೂರು ಮೈಮರೆತರೂ ಹಾದಿಯ ಪಕ್ಕದಲ್ಲಿಯೇ ಆಳವಾದ ಕಣಿವೆಗಳಿಗೆ ಬೀಳುವ ಸಾಧ್ಯತೆಯಿರುತ್ತದೆ.
- ಪ್ರಸಾದ್ ಹೆಗಡೆ ತುಂಬೇಮನೆ
ಇವತ್ತಿನ ಆಧುನಿಕ ತಂತ್ರಜ್ಞಾನ ಹಾಗೂ ವಿಮಾನಯಾನ ಈ ಪ್ರಪಂಚವನ್ನು ಪ್ರಯಾಣಿಸಲು ಅದೆಷ್ಟೇ ಕಿರಿದಾಗಿಸಿರಬಹುದು. ಆದರೆ ಈ ಭೂಮಿಯೂ ಕೂಡ ಅಷ್ಟೇ ವಿಶಾಲವಾಗಿದೆ. ಎಷ್ಟು ಪಯಣಿಸಿದರೂ ಮುಗಿಯದಷ್ಟು, ಪ್ರತಿ ತಿರುವಿನಲ್ಲೂ ಹೊಸದೊಂದು ಅಚ್ಚರಿ ಮೂಡಿಸುವಷ್ಟು. ಬೇರೆ ಯಾವ ಗ್ರಹದಲ್ಲಿಯೂ ಕಂಡುಬರದ ನೀರೆಂಬ ‘ಜೀವಧಾರೆ’ ಈ ಗ್ರಹವನ್ನು ಜೀವ ಹಾಗೂ ಜೀವಂತಿಕೆಯಿಂದ ತುಂಬಿದೆ ಹಾಗೂ ಅಕ್ಷರಶಃ ಸ್ವರ್ಗಸದೃಶವನ್ನಾಗಿಸಿದೆ.
ಇದನ್ನೂ ಓದಿ: ಇವಳು ಸಿಕ್ಕಿಂನ ಪರಮ ಸುಂದರಿ...
ನೀಲ ಸುಂದರಿ
ಉತ್ತರ ಇಟಲಿಗೆ ಕಾಲಿಟ್ಟು ಅದಾಗಲೇ ಹತ್ತು ದಿನಗಳಾಗಿದ್ದ ನನ್ನ ಮನಸು, ʼಲಾಗೋ ಡಿ ಸೋರಾಪಿಸ್ʼ ಎಂಬ ಈ ನೀಲ ಸುಂದರಿಯನ್ನು ಕಾಣಲು ಹಲವಾರು ದಿನಗಳಿಂದ ತವಕಿಸುತ್ತಿತ್ತು. ಅಂದು ಜೂನ್ ಹನ್ನೆರಡರ ದಿನ, ನಾನು ಉಳಿದುಕೊಂಡಿದ್ದ ಹಾಸ್ಟೆಲ್ ನಿಂದ ಹೊರಟು ಔರಂಜೊ (Auronzo) ಹಾಗೂ ಮಿಸುರಿನ (Misurina) ಮಾರ್ಗವಾಗಿ ಬಸ್ ಬದಲಿಸುತ್ತಾ ತೆರಳಿ ʼPasso Tre Crociʼ ಎಂಬಲ್ಲಿ ಇಳಿದುಕೊಂಡು ಈ ಚಾರಣ ಆರಂಭಿಸಿದೆ. ಇಲ್ಲಿಂದ ಹೋಗಲು ಎರಡು ಮಾರ್ಗಗಳಿವೆ. ಮೊದಲನೆಯ ʼಟ್ರೇಲ್ ರೂಟ್ 215ʼ ಸಾಮಾನ್ಯ ಪ್ರವಾಸಿಗರಿಗಾಗಿ. ಎರಡನೆಯದು ಬದಲೀ ಮಾರ್ಗ ʼಟ್ರೇಲ್ ರೂಟ್ 216ʼ ಪರ್ವತವನ್ನು ಹತ್ತಿ ಇಳಿದು ಸರೋವರ ಸೇರುವ ಕಡಿದಾದ ಹಾದಿ, ವೃತ್ತಿಪರ ಪರ್ವತಾರೋಹಿಗಳಿಗೆ ಹೇಳಿ ಮಾಡಿಸಿದ್ದು.
ಅಂದು ನನ್ನ ಬಳಿ ಅಷ್ಟೊಂದು ಸಮಯ ಹಾಗೂ ಸಾಮರ್ಥ್ಯ ಇಲ್ಲದ ಕಾರಣ ನಾನು, ಟ್ರೇಲ್ 215ರ ಮೂಲಕ ಪರಿಕ್ರಮಿಸಲು ತೀರ್ಮಾನಿಸಿದೆ. ಈ ಮಾರ್ಗದಲ್ಲಿ ಆರಂಭದಲ್ಲಿಯೇ ಡೋಲೋಮಿಟಿ ಪರ್ವತಗಳ ತಪ್ಪಲಿನ ಕಾಡುಗಳನ್ನು ಪ್ರವೇಶಿಸುತ್ತೇವೆ.

ಮನಮೋಹಕ ಹೂವುಗಳು
ಕಾಡು ಹಾದಿಯ ಮೂಲಕ ನಡೆಯುತ್ತಾ ಸಾಗಬೇಕಿದ್ದರೆ ಇಕ್ಕೆಲಗಳಲ್ಲೂ ಹೇರಳವಾಗಿ ಹಬ್ಬಿಕೊಂಡಿರುವ ವಿಧವಿಧದ ಕಾಡುಹೂವುಗಳು ನಗುತ್ತಾ ಕಂಗೊಳಿಸುತ್ತಿದ್ದವು. ಅವುಗಳಲ್ಲಿ ನನ್ನನ್ನು ಅತೀವವಾಗಿ ಆಕರ್ಷಿಸಿದ್ದು ಇಕ್ಕೆಲಗಳಲ್ಲಿಯೂ ಅರಳಿ ನಿಂತಿದ್ದ ಚಿನ್ನದ ಹಳದಿ ಬಣ್ಣದ, ದುಂಡನೆಯ ಗ್ಲೋಬ್ ಆಕೃತಿಯ ಟ್ರಾಲ್ಲಿಸ್ ಯುರೋಪಿಯಸ್ (Trollius Europaeus) ಅಥವಾ ʼಯುರೋಪಿಯನ್ ಗ್ಲೋಬ್ ಫ್ಲವರ್ಸ್ʼ ಎಂದೇ ಕರೆಸಿಕೊಳ್ಳುವ ಈ ಮನಮೋಹಕ ಹೂವುಗಳು. ನಡೆಯುವ ಹಾದಿಯೇ ಇಷ್ಟೊಂದು ರಮ್ಯವಾಗಿದ್ದುಬಿಟ್ಟರೆ ಹೆಜ್ಜೆ ಮುಂದಕ್ಕೆ ಸಾಗುವುದಾದರೂ ಹೇಗೆ ?!?
ಅಂತೂ ಎಲ್ಲ ಹೂವುಗಳನ್ನು ಮಾತನಾಡಿಸುತ್ತಾ ಕಾಡು ದಾಟಿ ಪರ್ವತಗಳ ಬುಡ ತಲುಪಿದ್ದಾಯ್ತು. ಇಲ್ಲಿಂದ ಮುಂದಿನ ಹಾದಿಯೂ ಅಂಥ ಕಠಿಣವಿಲ್ಲದ್ದಾದರೂ ಬೃಹತ್ ಬಂಡೆಗಲ್ಲಿನ ಪರ್ವತಗಳ ಪಕ್ಕದಲ್ಲಿ, ಕಲ್ಲುಗಳು ತುಂಬಿರುವ ಕೊಟರಾದ ಹಾಗೂ ಕಿರಿದಾದ ದಾರಿಯಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಹತ್ತುತ್ತ ಸಾಗಬೇಕು. ತಿರುಗಿ ಬರಲೂ ಇದೇ ದಾರಿ ಆದುದರಿಂದ ಕೆಲವೊಂದು ಇಡುವಾದ ಜಾಗಗಳಲ್ಲಿ ಸ್ವತಃ ಟ್ರಾಫಿಕ್ ಸಿಗ್ನಲ್ ಹಾಕಿಕೊಂಡು, ಮರಳುತ್ತಿರುವವರಿಗೆ ದಾರಿ ಬಿಟ್ಟುಕೊಡುತ್ತ, ಸಂಭಾಳಿಸುತ್ತ ಮುಂದೆ ಸಾಗುವುದು ಅನಿವಾರ್ಯ.
ದೃಶ್ಯಕಾವ್ಯ
ಸ್ವಲ್ಪವೇ ಮುಂದಕ್ಕೆ ಸಾಗಿದಂತೆ ಎಡಕ್ಕೆ ಆಳವಾದ ಕಣಿವೆಯ ಜತೆ ವಿಶಾಲವಾದ ಪನೋರಮಾ ತೆರೆದುಕೊಂಡು ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುತ್ತದೆ. ಹತ್ತಾರು ಮೈಲಿಗಳವರೆಗಿನ ಸೂಚಿಪರ್ಣ ಕಾಡುಗಳು, ಮಿಸುರೀನಾ, ಟ್ರೆ ಚಿಮೆ (Tre cime) ಪರ್ವತಗಳು ಹಾಗೂ ಕಾಡಿನಿ ಶಿಖರಗಳ(Cadini Towers)ವರೆಗಿನ ದೃಶ್ಯಕಾವ್ಯ ಮೂಡುತ್ತಾ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಹಾಗಂತ ಎಲ್ಲೂ ಎಚ್ಚರ ತಪ್ಪುವ ಹಾಗಿಲ್ಲ, ಒಂಚೂರು ಮೈಮರೆತರೂ ಹಾದಿಯ ಪಕ್ಕದಲ್ಲಿಯೇ ಆಳವಾದ ಕಣಿವೆಗಳಿಗೆ ಬೀಳುವ ಸಾಧ್ಯತೆಯಿರುತ್ತದೆ. ಎತ್ತರಗಳ ಭಯ ಇಲ್ಲದಿರುವುದು ಹಾಗೂ ಗಟ್ಟಿಯಾದ ಹೆಜ್ಜೆಗಳನ್ನು ಇಡುವುದು (Sure footedness) ಈ ಚಾರಣಕ್ಕೆ ಅತ್ಯಗತ್ಯ. ಚಾರಣಿಗರಿಗೆ ಸುರಕ್ಷಿತವೆನ್ನಿಸಲು ಅಲ್ಲಲ್ಲಿ ಏಣಿಗಳನ್ನೂ, ಬಲವಾದ ಕಬ್ಬಿಣದ ತಂತಿಗಳನ್ನೂ ಜೋಡಿಸಲಾಗಿದೆ.

ಸರೋವರದ ಸಂಭ್ರಮ
ಇನ್ನೂ ಮುಂದಕ್ಕೆ ಸಾಗಿದಂತೆ ತೆರೆದುಕೊಳ್ಳುವ ಭವ್ಯ ಸೋರಾಪಿಸ್ ಶಿಖರಗಳ ಸಾಲು ಇಟಲಿಯ ಡೋಲೋಮಿಟಿ ಪರ್ವತಗಳ ಸಾಲಿನ ಹೆಗ್ಗುರುತುಗಳೆಂದೇ ಹೇಳಬೇಕು. ಆ ಶಿಖರಗಳಲ್ಲಿನ ಗಾಳಿಯೇ ಕೊರೆದಿಟ್ಟಂತೆ ಭಾಸವಾಗುವ ನಿಸರ್ಗದತ್ತ ಶಿಲ್ಪಕಲಾಕೃತಿಗಳನ್ನು ನೋಡುವಾಗ ನಿಂತಲ್ಲೇ ಸ್ವತಃ ಕರಗಿಹೋಗುವ ಅನುಭವವಾಗುತ್ತದೆ. ಸೋರಾಪಿಸ್ ಶಿಖರಗಳಿಂದ ಆವೃತವಾದ, ಹಾಲು ಮಿಶ್ರಿತವಾದಂತೆ ಭಾಸವಾಗುವ ಈ ತಿಳಿನೀಲಿ ಸರೋವರವಾದ ಹೆಸರೇ ʼಲಾಗೋ ಡಿ ಸೋರಾಪಿಸ್ʼ. ಸೊರಾಪಿಸ್ ಹಿಮನದಿ (ಗ್ಲೇಶಿಯರ್)ಯಿಂದ ಹರಿದು ಬರುವ ನೀರು ಜತೆ ಜತೆಗೇ ಮಿಶ್ರಿತವಾಗಿ ತರುವ ಕಲ್ಲುಧೂಳಿನ ಕಣಗಳು ಬೆಳಕಿನ ಕಿರಣಗಳೊಂದಿಗೆ ಆಡುವ ಪ್ರತಿಫಲನದ ಫಲಶ್ರುತಿಯೇ ಸರೋವರದ ಈ ತಿಳಿನೀಲಿ ಸೌಂದರ್ಯ.
ಸುಣ್ಣದ ಕಲ್ಲಿನ ಶಿಖರಗಳ ಹಿನ್ನೆಲೆಯಲ್ಲಿ ಈ ರಮ್ಯ ರಮಣೀಯ ಸರೋವರವನ್ನೂ ಹಾಗೂ ಅದರ ವರ್ಣದೊಂದಿಗೆ ಮೋಡಗಳ ಆಡುವ ನೆರಳು - ಬೆಳಕಿನಾಟವನ್ನೂ ನೋಡುತ್ತ ಕುಳಿತರೆ ಅದೊಂದು ಪರ್ಫೆಕ್ಟ್ ಸಿನಿಮಾ. ಫೊಟೋಗ್ರಫಿಗೆ ಹೇಳಿ ಮಾಡಿಸಿದ ತಾಣವಿದು. ಆದರೆ ಮುಂಜಾವಿನಲ್ಲಿಯೇ ತಲುಪಿದರೆ ಇನ್ನಷ್ಟು ಸ್ಪಷ್ಟವಾಗಿ ಸೌಂದರ್ಯವನ್ನು ಸೆರೆಹಿಡಿಯಬಹುದಿತ್ತೇನೋ ಅನಿಸಿತು. ಬೃಹದೆತ್ತರದ ಡೋಲೋಮಿಟಿ ಶಿಖರಗಳ ನಡುವಿನಲ್ಲಿ ಪ್ರಶಾಂತವಾಗಿ ನಿದ್ರಿಸಿರುವ ಈ ನೀಲವರ್ಣದ ಸ್ವಪ್ನಸುಂದರಿಯನ್ನು ಹುಡುಕಿಕೊಂಡು ವಿಶ್ವದ ಮೂಲೆಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.
ಜವಾಬ್ದಾರಿ
ಸಮಯ ಸರಿದಂತೆ ಹತ್ತಿಬರುವ ಪ್ರವಾಸಿಗರೂ ಅಧಿಕ. ವಿಶ್ವದೆಲ್ಲೆಡೆಯಿಂದ ಆಗಮಿಸುವ ಪ್ರವಾಸಿಗರ ನಡತೆಯನ್ನು ನಿಯಂತ್ರಿಸುವುದೂ ಕಷ್ಟ. ʼಈಜು ನಿಷೇಧʼ ಅನ್ನುವ ಸ್ಪಷ್ಟ ಫಲಕವಿದರೂ ಕೆಲವರು ಅದಾಗಲೇ ನೀರಿಗಿಳಿದುಬಿಟ್ಟಿದ್ದರು. ಇನ್ನು ಕೆಲವರಂತೂ ನಾಯಿಗಳಿಗೆ ಅಲ್ಲಿಯೇ ಸ್ನಾನಮಾಡಲು ಬಿಟ್ಟು ತಾವು ವಿರಮಿಸುತ್ತಿದ್ದರು. ಇಷ್ಟು ಅಭೂತಪೂರ್ವ ನಿಸರ್ಗಸೂಕ್ಷ್ಮ ತಾಣದಲ್ಲಿಯಾದರೂ ಹೇಗೆ ಕಾಳಜಿಯಿಂದ ವರ್ತಿಸಬೇಕೆಂದು ಅರಿಯಲು ಮನುಷ್ಯನಿಗೆ ಇನ್ನೆಷ್ಟು ಶತಮಾನಗಳು ಬೇಕೋ ಏನೋ.
ಮಾಹಿತಿ ಪೆಟ್ಟಿಗೆ:
- ಫೊಟೋಗ್ರಫಿಗೆ ಹೇಳಿ ಮಾಡಿಸಿದ ತಾಣವಿದು.
- ಒಂಚೂರು ಮೈಮರೆತರೂ ಹಾದಿಯ ಪಕ್ಕದಲ್ಲಿಯೇ ಆಳವಾದ ಕಣಿವೆಗಳಿಗೆ ಬೀಳುವ ಸಾಧ್ಯತೆಯಿರುತ್ತದೆ.
- ಟ್ರೇಲ್ ರೂಟ್ ʼ215ʼ ಹಾಗೂ ʼ216ʼ ಎಂಬ ಎರಡು ಮಾರ್ಗಗಳಿವೆ
ಲೇಖಕರು: ಹವ್ಯಾಸಿ ಬರಹಗಾರರು