ಇವಳು ಸಿಕ್ಕಿಂನ ಪರಮ ಸುಂದರಿ...
ಜೂನ್, ಜುಲೈ ತಿಂಗಳಿನಲ್ಲಿ ಸಿಕ್ಕಿಂ, ಹಿಮಾಲಯದ ಕಣಿವೆಗಳಲ್ಲಿ ಕಾಣಸಿಗುವ ವಿಶೇಷ ಪ್ರಬೇಧದ ಸಸ್ಯವೇ ನೋಬಲ್ ರುಬಾರ್ಬ್. ಸ್ಥಳೀಯವಾಗಿ ಸಿಕ್ಕಿಂ ಸುಂದರಿ ಎಂಬುದಾಗಿ ಕರೆಸಿಕೊಳ್ಳುವ ಈ ಸಸ್ಯ, ಅದರಲ್ಲಿ ಅರಳಿ ನಿಲ್ಲುವ ಹೂವಂತೂ ಪ್ರವಾಸಿಗರನ್ನು ಅಚ್ಚರಿಗೊಳಿಸದೇ ಇರದು.
ಡಾಲ್ಸ್ ಐ, ಘೋಸ್ಟ್ ಪ್ಲಾಂಟ್, ಬ್ಲ್ಯಾಕ್ ಬ್ಯಾಟ್ ಫ್ಲವರ್ ಹೀಗೆ ಹೆಸರುಗಳ ಮೂಲಕವೇ ಅಚ್ಚರಿ ಹುಟ್ಟಿಸುವ ಅದೆಷ್ಟೋ ಬಗೆಯ ಸಸ್ಯ ಪ್ರಬೇಧಗಳು ನಮ್ಮ ಸುತ್ತಲಿನ ಜಗತ್ತಿನಲ್ಲಿವೆ. ಆದರೆ ನೀವೆಂದಾದರೂ ಸಿಕ್ಕಿಂ ಸುಂದರಿಯ ಬಗೆಗೆ ಕೇಳಿದ್ದೀರಾ..? ಹೆಸರಿನಿಂದಲೇ ಕಚಗುಳಿಯಿಡುವ ಈ ಸಸ್ಯವನ್ನು ಸಿಕ್ಕಿಂ ರುಬಾರ್ಬ್, ನೋಬಲ್ ರುಬಾರ್ಬ್ ಅಥವಾ ರುಯಮ್ ನೋಬಲ್ ಎಂದೂ ಕರೆಯುತ್ತಾರೆ. ಈ ಗಿಡವನ್ನು ನೋಡಬೇಕೆಂದರೆ ನೀವು ಸಿಕ್ಕಿಂಗೆ ತೆರಳಲೇಬೇಕು. ಅಲ್ಲಿನ 4,000-4,800 ಮೀಟರ್‌ಗಳಷ್ಟು ಎತ್ತರದ ಪ್ರದೇಶಗಳಲ್ಲಿ, ಬೆಟ್ಟ-ಗುಡ್ಡ, ನೀರಿನ ಪರಿಸರಗಳಲ್ಲಿ ಅಲೆದಾಡಿದರೆ ಈ ವಿಭಿನ್ನವಾದ ಸಸ್ಯಗಳನ್ನು ಕಾಣಲು ಸಿಗಬಹುದೇನೋ. ಅದೂ ಇಲ್ಲವೆಂದರೆ ಹಿಮಾಲಯ, ನೇಪಾಳ, ಭೂತಾನ್ ಮತ್ತು ಟಿಬೆಟ್‌ಗೆ ಸ್ಥಳೀಯವಾಗಿರುವ ಈ ಸಸ್ಯವನ್ನು ಖುದ್ದು ಅಲ್ಲಿಗೆ ಭೇಟಿ ನೀಡುವ ಮೂಲಕವೂ ನೋಡುವ ಅವಕಾಶ ನಿಮ್ಮದಾಗಲಿದೆ.

ಸಿಕ್ಕಿಂ ಸಿಂಗಾರಿ ಹೇಗಿದ್ದಾಳೆ ಗೊತ್ತಾ?
ವರುಷಕ್ಕೊಮ್ಮೆ, ಅಂದರೆ ಜೂನ್ ಹಾಗೂ ಜುಲೈ ತಿಂಗಳಿನಲ್ಲಷ್ಟೇ ಪ್ರವಾಸಿಗರಿಗೆ ದರ್ಶನ ನೀಡುವ ಈಕೆ, ಸುಮಾರು ಎರಡು ಮೀಟರ್ ಎತ್ತರಕ್ಕೂ ಬೆಳೆದುನಿಲ್ಲುತ್ತಾಳೆ. ರಾತ್ರಿಯ ವೇಳೆಯಲ್ಲಿ ಬೆಳೆದು ನಿಂತ ಈ ವಿಶೇಷ ಸಸ್ಯವನ್ನು ನೋಡಿದವರಿಗಂತೂ ಮರಿ ಭೂತವೇ ಬಂತೇನೋ ಎಂದು ಭಾಸವಾಗಿಬಿಡಬಹುದು. ಇದೇ ಕಾರಣಕ್ಕೆ ಈ ಸಸ್ಯವನ್ನು ʼಹಿಮಾಲಯದ ಪ್ರೇತ ಸಸ್ಯʼ ಎಂಬುದಾಗಿಯೂ ಆಡಿಕೊಳ್ಳುವುದಿದೆ.
ಮೊದಲ ನೋಟದಲ್ಲಿ ಪ್ರಕಾಶಮಾನವಾದ ಹಳದಿ ಒಳಭಾಗ, ಒರಟಾದ ಕೆಂಪು-ಕಂದು ಬಣ್ಣದ ಕವಚಗಳು, ನೋಡುತ್ತಲೇ ಮೆತ್ತನೆಯ ಅನುಭವವನ್ನು ನೀಡುತ್ತವೆ. ಇದರ ಕವಚಗಳು ನೈಸರ್ಗಿಕ UV ಕಿರಣಗಳು ಒಳಸೇರದಂತೆ ತಡೆಯೊಡ್ಡುವುದುರಿಂದ ʻನೈಸರ್ಗಿಕ ಹಸಿರುಮನೆʼ ಎಂಬುದಾಗಿಯೂ ಇದು ಕರೆಸಿಕೊಂಡಿದೆ. ರುಯಮ್ ನೋಬಲ್ ಸಸ್ಯದ ಕಾಂಡಗಳಂತೂ ಗುಣದಲ್ಲಿ ಆಮ್ಲೀಯವಾಗಿದ್ದು, ಸ್ಥಳೀಯರು ಇದನ್ನು ʼಚುಕಾʼ ಎಂಬುದಾಗಿಯೂ ಕರೆಯುತ್ತಾರೆ. ವಿಶೇಷವಾಗಿ ಮಳೆಗಾಲದಲ್ಲಿ ಸ್ಥಳೀಯರು ಈ ಗಿಡವನ್ನು ತಮ್ಮ ಆಹಾರದಲ್ಲಿ ಬಳಕೆ ಮಾಡುತ್ತಾರೆ.

ಆಹಾರ ಮಾತ್ರವಲ್ಲ, ಔಷಧಿಗೂ ಸೈ
ನೋಬಲ್ ರುಬಾರ್ಬ್ ಎನ್ನುವ ಈ ಸಸ್ಯ ಪ್ರಬೇಧದ ಔಷಧೀಯ ಉಪಯೋಗಗಳ ಬಗ್ಗೆ ನೀವು ತಿಳಿದುಕೊಂಡರೆ ಇದನ್ನು ಹುಡುಕಾಡದೇ ಇರಲು ಸಾಧ್ಯವೇ ಇಲ್ಲ. ಹೂಬಿಡುವ ಇದರ ಕಾಂಡವನ್ನು ಸಾಂಪ್ರದಾಯಿಕ ಟಿಬೆಟಿಯನ್ ಔಷಧದಲ್ಲಿ ವಾಂತಿ-ನಿರೋಧಕ, ಮೂತ್ರವರ್ಧಕ ಮತ್ತು ವಿರೇಚಕ ಗುಣಲಕ್ಷಣಗಳಿಗಾಗಿ ಬಳಸಲಾಗುತ್ತದೆ. ಅಜೀರ್ಣದಂತಹ ಸಮಸ್ಯೆಯಿಂದ ಹೊಟ್ಟೆ ತುಂಬಿಕೊಂಡಂತೆ ಭಾಸವಾಗುವುದು, ಇಲ್ಲವೇ ಶರೀರ ಊತ, ನೀರು ತುಂಬಿಕೊಂಡಂತಿದ್ದರೆ ಈ ಸಸ್ಯದ ಎಲೆ, ಕಾಂಡವನ್ನು ಭಾಗವನ್ನು ಬಳಕೆ ಮಾಡುತ್ತಾರೆ. ಆದರೆ ಔಷಧೀಯ ಉದ್ದೇಶಗಳಿಗಾಗಿ ಇದನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.
ವಿಶಿಷ್ಟವಾದ ಈ ಸಸ್ಯ ಪ್ರಭೇದವನ್ನು 1855 ರಲ್ಲಿ ಜೋಸೆಫ್ ಡಾಲ್ಟನ್ ಹೂಕರ್ ಮತ್ತು ಥಾಮಸ್ ಥಾಮ್ಸನ್ ಅವರು ಮೊದಲು ಗುರುತಿಸಿದ್ದರು. ನಂತರದ ದಿನಗಳಲ್ಲಿ ಅನೇಕ ಸಸ್ಯಶಾಸ್ತ್ರಜ್ಞರು ಮತ್ತು ಪ್ರಕೃತಿ ಪ್ರೇಮಿಗಳನ್ನು ಇದು ಆಕರ್ಷಿಸಿ, ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಪರಿಚಿತವಾಗುತ್ತಿದೆ. ಒಟ್ಟಿನಲ್ಲಿ ಮುಂಗಾರು ಮಳೆಯಲ್ಲಿ ಸಿಕ್ಕಿಂ, ಹಿಮಾಲಯದ ಕಣಿವೆಗಳು, ಭೂತಾನ್, ನೇಪಾಳ ಇಲ್ಲವೇ ಟಿಬೆಟ್ ದೇಶಗಳಿಗೆ ಭೇಟಿನೀಡುವ ಅವಕಾಶ ನಿಮಗೆ ಸಿಕ್ಕರೆ, ತಪ್ಪದೇ ಅಲ್ಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಕಾಣಸಿಗುವ ಈ ಸುಂದರಿಯರನ್ನೊಮ್ಮೆ ನೋಡಿ, ಹಾಯ್ ಹೇಳಿಬನ್ನಿ…