ನಾಪಾ ವ್ಯಾಲಿಯಲ್ಲಿ ವೈನ್‌ಗಾಗಿ ರೌಂಡ್
ಹೊಳೆಯುವ ವೈನ್ ಗ್ಲಾಸ್‌ನಲ್ಲಿ ಸುರಿಯುತ್ತಿದ್ದ ವೈನ್ ಅನ್ನು ನಿಧಾನವಾಗಿ ಗುಟುಕರಿಸುತ್ತಾ ವಿವಿಧ ಚೀಸ್ ತುಂಡುಗಳ ರುಚಿ ಸವಿದೆವು. ಆಗ ತಕ್ಷಣ ನನಗೆ ನೆನಪಾಗಿದ್ದು ಬೋದಿಲೇರನ ʻOne should always be drunk... But what with? With wine, with poetry, or with virtue, as you choose. But get drunkʼ ಎಂಬ ಮಾತುಗಳು. 8,000 ವರ್ಷಗಳಷ್ಟು ಹಳೆಯದಾದ ವೈನ್‌ನ ಇತಿಹಾಸ ಹಾಗೂ ಸಂಸ್ಕೃತಿಗಳಲ್ಲಿ ಅದಕ್ಕಿದ್ದ, ಇರುವ ಮಹತ್ವವನ್ನು ಹೇಳಲು ಹೊರಟರೆ ಅದೇ ಒಂದು ದೊಡ್ಡ ಲೇಖನವಾಗುತ್ತದೆ!
- ಡಾ. ಸುಮಾ ರಮೇಶ್, ಬೆಂಗಳೂರು
ಕ್ಯಾಲಿಫೋರ್ನಿಯದ ‘ಸ್ಯಾನ್ ಹೊಸೆ’ ಊರಿನಲ್ಲಿ ಒಂದು ಇಡೀ ದಿನ ಸೋದರಳಿಯನ ಮನೆಯಲ್ಲಿ ಕಳೆಯುವ ಅವಕಾಶ ದೊರೆತಿತ್ತು. ಅಂದು ಅವನು ಹಾಗೂ ಅವನ ಪತ್ನಿಗೆ ಮುಖ್ಯವಾದ ಮೀಟಿಂಗ್ ಇತ್ತು. ಹಾಗಾಗಿ ನಾವಿಬ್ಬರೂ ಮಗನೊಡನೆ ಬೆಳಗಿನಿಂದ ಸಂಜೆಯವರೆಗೆ ಸುತ್ತಾಡಿ ಬರುವುದೆಂದು ನಿರ್ಧರಿಸಿದ್ದೆವು. ಎಲ್ಲಿಗೆ ಹೋಗುವುದು ಎಂದು ಯೋಚಿಸುತ್ತಿರುವಾಗ ಅನುಷಾ ‘ನಾಪಾ ವ್ಯಾಲಿ’ ನೋಡಿಬನ್ನಿ ಎಂದು ಸಲಹೆ ನೀಡಿದಳು. ತಮ್ಮ ಕಾರಿನಲ್ಲೇ ಹೋಗಿಬನ್ನಿ ಎರಡು ಗಂಟೆಗಳ ಪಯಣ ಎಂದಾಗ ನಾವೂ ಉತ್ಸಾಹದಿಂದ ಸಿದ್ಧರಾದೆವು. ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ರಸ್ತೆಯ ಇಕ್ಕೆಲಗಳಲ್ಲಿ ವಿಶಾಲವಾದ ಬಯಲು, ದ್ರಾಕ್ಷಿಯ ತೋಟಗಳು ಮನಸೆಳೆಯಲಾರಂಬಿಸಿದವು. ಮಗ ಆಗಲೇ ಆನ್‌ಲೈನ್ ಮೂಲಕ ನಾಪ ವ್ಯಾಲಿಯ ಒಂದು ಉತ್ತಮ ವೈನರಿಯಲ್ಲಿ ವೈನ್ ಟೇಸ್ಟಿಂಗ್‌ಗೆ ಶುಲ್ಕ ಕೊಟ್ಟು ಜಾಗ ಕಾಯ್ದಿರಿಸಿದ್ದ. ನಾವು ಹೊಸ ಅನುಭವಕ್ಕೆ ತೆರೆದುಕೊಳ್ಳುವ ಉತ್ಸಾಹದಲ್ಲಿದ್ದೆವು. ದಾರಿಯುದ್ದಕ್ಕೂ ಸುಂದರ ದ್ರಾಕ್ಷಿ ತೋಟಗಳು, ಆಕರ್ಷಕ ವೈನರಿಗಳು ನಮ್ಮ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದವು. ಕಡೆಗೆ ನಾವು ವೈನರಿ ʻಕ್ಯಾಸ್ಟೆಲ್ಲೊ ಡಿ ಅಮೊರೊಸಾʼದ ದೊಡ್ಡ ಗೇಟ್‌ನ ಒಳ್ಳಹೊಕ್ಕಾಗ ನಮ್ಮ ಕಣ್ಣುಗಳನ್ನೇ ನಂಬಲಾಗದಂತೆ ಬೆಕ್ಕಸಬೆರಗಾದೆವು.
ಇದನ್ನೂ ಓದಿ: ಇದು ಮಹಾಖೋನ್ ನೀಡುವ ಮಹದಾವಕಾಶ
ಟಸ್ಕನ್ ಕೋಟೆಯ ವೈನರಿ
ಅದು ಹಚ್ಚಹಸುರು ಬೆಟ್ಟ-ಗುಡ್ಡಗಳಿಂದ ಸುತ್ತುವರಿದ ವಿಶಾಲ ಮತ್ತು ಪ್ರಶಾಂತವಾದ ಸ್ಥಳದ ಎತ್ತರದಲ್ಲಿ ತಲೆಎತ್ತಿ ನಿಂತಿರುವ 14ನೆಯ ಶತಮಾನದ ಟಸ್ಕನ್ ಕೋಟೆ! ಇದ್ದಕ್ಕಿದ್ದಂತೆ ಯೂರೋಪ್‌ಗೆ ಹಾರಿಹೋದಂತೆ ಭಾಸವಾಗಿತ್ತು. ನಾಲ್ಕನೆಯ ತಲೆಮಾರಿನ ವೈನ್ ತಯಾರಕರಾದ ‘ಡೇರಿಯೊ ಸಟ್ಟುಯಿ’ ತಮ್ಮ ಇಟಾಲಿಯನ್ ಪರಂಪರೆ ಮತ್ತು ಮಧ್ಯಕಾಲೀನ ವಾಸ್ತುಶಿಲ್ಪದ ಮೇಲಿನ ಗಾಢವಾದ ಅಭಿಮಾನದ ಸಲುವಾಗಿ ಈ ʻಟಸ್ಕನ್ ಕೋಟೆಯ ವೈನರಿʼಯನ್ನು ನಿರ್ಮಿಸಿರುವುದೆಂದು ತಿಳಿಯಿತು.

ಕೋಟೆಯೊಳಗೇನಿದೆ
ಈ ಕೋಟೆ ಮತ್ತು ದ್ರಾಕ್ಷಿ ತೋಟಗಳು ಒಟ್ಟು ಸೇರಿ 136,000 ಚದರ ಅಡಿಗಳಷ್ಟು ವಿಶಾಲವಾಗಿದೆ. ಕೋಟೆಯಲ್ಲಿ 107 ಕೊಠಡಿಗಳಿವೆ. ಯಾವ ಕೊಠಡಿಗಳೂ ಒಂದರಂತೆ ಮತ್ತೊಂದಿಲ್ಲ. ಎಲ್ಲವೂ ಒಂದು ವಿಶಿಷ್ಟವಾದ ರಚನೆ ಹೊಂದಿವೆ. ನಾಲ್ಕು ನೆಲಮಹಡಿ ಹಾಗೂ ನಾಲ್ಕು ಮೇಲ್ಮಹಡಿಗಳಿವೆ. ಇದು ಕೈಯಿಂದ ಕೆತ್ತಿದ ದೊಡ್ಡ ಕಲ್ಲುಗಳ ಕಟ್ಟಡ. ಎತ್ತರದ ರಕ್ಷಣಾತ್ಮಕ ಗೋಡೆಗಳು ಹಾಗೂ ಅಂಗಳಗಳು, ಕಂದಕ, ಸೇತುವೆ, ಐದು ಗೋಪುರಗಳು, ಒಂದು ಪ್ರಾರ್ಥನಾ ಮಂದಿರ, ಅಶ್ವಶಾಲೆ, ಶಸ್ತ್ರಾಗಾರ ಮತ್ತು ತೆರೆದ ಬದಿಗಳನ್ನು ಹೊಂದಿರುವ ಗ್ಯಾಲರಿ ಇಲ್ಲಿವೆ. ಇವು ʻಕ್ಯಾಸ್ಟೆಲ್ಲೊ ಡಿ ಅಮೊರೊಸಾʼದ ಸೌಂದರ್ಯವನ್ನು ಇನಷ್ಟು ಹೆಚ್ಚಿಸಿವೆ. ಉತ್ತರ ದಿಕ್ಕಿನ ಗೋಪುರದ ಬಳಿ ನಿಂತು ಹೊರಗೆ ಕಣ್ಣು ಹಾಯಿಸಿದರೆ ಬೆಟ್ಟ-ಗುಡ್ಡಗಳ ಹಿನ್ನಲೆಯಲ್ಲಿ ಹಸಿರು ಹೊತ್ತ ದ್ರಾಕ್ಷಿ ತೋಟಗಳು ಕಣ್ಸೆಳೆಯುತ್ತವೆ.
ಗ್ಯಾಲರಿಯಲ್ಲೇ ಗಮ್ಮತ್ತು
ಗ್ಯಾಲರಿಯಲ್ಲಿಯೇ ಅಚ್ಚುಕಟ್ಟಾಗಿ ಮೇಜು ಕುರ್ಚಿಗಳನ್ನು ಜೋಡಿಸಿಟ್ಟಿದ್ದರು. ನಮ್ಮ ನಿಗದಿತ ಸ್ಥಳದಲ್ಲಿ ಕುಳಿತ ನಂತರ ನಮ್ಮ ಆತಿಥ್ಯಕ್ಕೆ ಸಿಂಡಿ ಬಂದಳು. ಅರವತ್ತು ವಯಸ್ಸಿನ ಉತ್ಸಾಹಿ ಮಹಿಳೆ ಆಕೆ. ಬಹಳ ಸಂತೋಷ ಹಾಗೂ ಸಹನೆಯಿಂದ ಮೆನು ಪಟ್ಟಿಯಲ್ಲಿದ್ದ ವೈನ್‌ಗಳ ಬಗ್ಗೆ ವಿವರಿಸಲು ಶುರುಮಾಡಿದಳು. ರೆಡ್ ವೈನ್, ವೈಟ್ ಮತ್ತು ರೋಸ್ ವೈನ್, ಸ್ವೀಟ್ ವೈನ್‌ಗಳ ಪಟ್ಟಿಯನ್ನು ತೋರಿಸುತ್ತಾ ಒಂದೊಂದರ ವಿಶೇಷತೆಯನ್ನು ಹೇಳಲಾರಂಭಿಸಿದಳು. ಮಗನ ಸಹಾಯದೊಂದಿಗೆ ಕೆಲವು ವೈನ್‌ಗಳ ರುಚಿ ನೋಡಲು ಸಿದ್ಧರಾದೆವು. ನಮ್ಮದು ಸಸ್ಯಾಹಾರವಾದ್ದರಿಂದ ಚೀಸ್ ಬೋರ್ಡ್ ಆರ್ಡರ್ ಮಾಡಿದ್ದೆವು. ಯಾವ ವೈನ್‌ನ ಜತೆಗೆ ಯಾವ ಚೀಸ್ ತಿನ್ನಬೇಕೆನ್ನುವುದು ಎಂದು ಅರಿತಿರುವುದು ಒಂದು ಕಲೆ. ಭೌಗೋಳಿಕತೆ, ಸಂಸ್ಕೃತಿ, ಸಂಶೋಧನೆಗಳ ಮೇಲೆ ಆಧಾರವಾಗಿರುವ ಅದೇ ಒಂದು ಪ್ರತ್ಯೇಕ ಶಾಖೆಯಂತೆ! ಮಗ ಕಾರನ್ನು ಚಲಾಯಿಸಬೇಕಾಗಿದ್ದರಿಂದ ಹಣ್ಣಿನ ರಸವನ್ನಷ್ಟೇ ತೆಗೆದುಕೊಂಡ.

ಹೊಳೆಯುವ ಗ್ಲಾಸ್‌ನಲ್ಲಿ ವೈನ್‌ಧಾರೆ
ಹೊಳೆಯುವ ವೈನ್ ಗ್ಲಾಸ್‌ನಲ್ಲಿ ಸುರಿಯುತ್ತಿದ್ದ ವೈನ್ ಅನ್ನು ನಿಧಾನವಾಗಿ ಗುಟುಕರಿಸುತ್ತಾ ವಿವಿಧ ಚೀಸ್ ತುಂಡುಗಳ ರುಚಿ ಸವಿದೆವು. ಆಗ ತಕ್ಷಣ ನನಗೆ ನೆನಪಾಗಿದ್ದು ಬೋದಿಲೇರನ ʻOne should always be drunk... But what with? With wine, with poetry, or with virtue, as you choose. But get drunkʼ ಎಂಬ ಮಾತುಗಳು. 8,000 ವರ್ಷಗಳಷ್ಟು ಹಳೆಯದಾದ ವೈನ್‌ನ ಇತಿಹಾಸ ಹಾಗೂ ಸಂಸ್ಕೃತಿಗಳಲ್ಲಿ ಅದಕ್ಕಿದ್ದ, ಇರುವ ಮಹತ್ವವನ್ನು ಹೇಳಲು ಹೊರಟರೆ ಅದೇ ಒಂದು ದೊಡ್ಡ ಲೇಖನವಾಗುತ್ತದೆ! ಸಂತೋಷದಿಂದ ನಿರಾಳವಾಗಿ ಕುಳಿತು ಮಾತನಾಡುತ್ತಾ ವೈನ್ ಗುಟುಕರಿಸಿದ ಮೇಲೆ ಯಾವುದು ಚೆನ್ನಾಗಿತ್ತು ಎಂಬ ಚರ್ಚೆಯೂ ನಡೆಯಿತು.
ಹೀಗೆ ತಯಾರಾಗುತ್ತೆ ವೈನ್
ಪ್ರತಿ ದ್ರಾಕ್ಷಿತೋಟದ ‘ಟೆರೋಯಿರ್’ ಅಂದರೆ ಅಲ್ಲಿಯ ವಿಶಿಷ್ಟ ಮಣ್ಣು, ಹವಾಮಾನ ಮತ್ತು ಸೂರ್ಯನ ಬೆಳಕು ಮುಂತಾದ ಅಂಶಗಳ ಸಂಯೋಜನೆಯು ವೈನ್ ದ್ರಾಕ್ಷಿಗಳಿಗೆ ಅವುಗಳ ವಿಶಿಷ್ಟ ಲಕ್ಷಣವನ್ನು ನೀಡುತ್ತದೆ. ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಆಧುನಿಕ ತಂತ್ರ ಮತ್ತು ಉಪಕರಣಗಳ ಸಹಾಯದಿಂದ ಉತ್ಕೃಷ್ಟ ರುಚಿ ಹಾಗೂ ಸುವಾಸನೆಯ ಅತ್ಯುತ್ತಮ ವೈನ್‌ಗಳನ್ನು ತಯಾರಿಸುವುದರಲ್ಲಿ ʻಕ್ಯಾಸ್ಟೆಲ್ಲೊ ಡಿ ಅಮೊರೊಸಾʼ ಮುಂಚೂಣಿಯಲ್ಲಿದೆ. ಇದಕ್ಕೆ ಸಾಕ್ಷಿಯಾಗಿ ಅನೇಕ ಪ್ರಶಸ್ತಿಗಳು ಸಂದಿರುವುದರ ಬಗ್ಗೆ ಭಿತ್ತಿ ಚಿತ್ರಗಳನ್ನು ನೋಡಿ, ನಮ್ಮ ಅನುಭವವೂ ಅದನ್ನೇ ಹೇಳುತ್ತಿದೆ ಎಂದುಕೊಂಡೆವು.
ಕೆಳ ಮಹಡಿಯಲ್ಲಿ ಗಿಫ್ಟ್ ಶಾಪ್
ಇಡೀ ಕೋಟೆಯನ್ನು ಸುತ್ತಾಡಿ ನೋಡಿದ ಮೇಲೆ ಕೆಳ ಮಹಡಿಯಲ್ಲಿದ್ದ ಗಿಫ್ಟ್ ಶಾಪ್‌ಗೆ ಹೊಕ್ಕೆವು. ಬಣ್ಣ ಬಣ್ಣದ ವಿವಿಧ ಪುಲ್ ಓವರ್, ಹೂಡೀಸ್, ವೈನ್ ಗ್ಲಾಸ್‌ಗಳು, ಕೋಸ್ಟರ್, ಪೇಂಟಿಂಗ್ ಮುಂತಾದ ವಸ್ತುಗಳ ರಾಶಿಯೇ ಅಲ್ಲಿತ್ತು. ಮಗನಿಗೆ ಆಲಿವ್ ಹಸಿರು ಬಣ್ಣದ ಪುಲ್ ಓವರ್ ಉಡುಗೊರೆ, ಮಗ ಮತ್ತು ಸೋದರಳಿಯ ಹಾಗೂ ನಮಗೆಂದು ಮೂರು ಬಾಟಲ್ ವೈನ್ ಖರೀದಿಯೂ ಆಯಿತು. ಕೋಟೆಯ ಹೊರಗೆ ದ್ರಾಕ್ಷಿ ತೋಟಗಳಲ್ಲಿ ಅಡ್ಡಾಡಿ ಕೊಟ್ಟಿಗೆಯ ಹತ್ತಿರ ಬಂದಾಗ ಕಂಡಿದ್ದು ಹಿಂಡು ಹಿಂಡಾದ ಮೇಕೆ, ಕುರಿಗಳು, ಎಮು, ನವಿಲು, ಬಾತುಕೋಳಿ, ಹಂದಿ, ನಾಯಿ, ಬೆಕ್ಕುಗಳು. ವಿಶೇಷವೆಂದರೆ ಅಲ್ಲಿದ್ದ ಒಂದು ಮುದ್ದಾದ ‘ಜಿಯಾಕೊಮೊ’ ಎಂಬ ಮೇಕೆ ವಿಶ್ವದಲ್ಲೇ ಅತಿ ಹೆಚ್ಚು ಛಾಯಾಚಿತ್ರಕ್ಕೆ ಪೋಸ್ ಕೊಟ್ಟಿರುವುದು ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಟ್ಯಾಗ್ ಆಗಿರುವುದು ಎಂಬ ಫಲಕ ನೋಡಿ ನಾವೂ ಅದರ ಜತೆ ಒಂದು ಫೊಟೋ ಕ್ಲಿಕ್ಕಿಸಿಕೊಂಡೆವು. ಮರಳುವ ದಾರಿಯಲ್ಲಿ ಅದೇ ಗುಂಗು…ʻಕ್ಯಾಸ್ಟೆಲ್ಲೊ ಡಿ ಅಮೊರೊಸಾʼದ ವೈನ್ ರುಚಿ ನೋಡಿದ ಅನುಭವದ್ದು, ಮರೆಯದ ನೆನಪಾಗಿ ಉಳಿದದ್ದು!

ಮಾಹಿತಿ ಪೆಟ್ಟಿಗೆ
ನಾಪಾ ವ್ಯಾಲಿ, ಪ್ರವಾಸ ಮತ್ತು ವೈನ್ ಉದ್ಯಮಕ್ಕೆ ವಿಶ್ವ ಪ್ರಸಿದ್ಧವಾಗಿದೆ. ಅಲ್ಲಿ ವೈನರಿಗಳ ಸಂಖ್ಯ ಅಧಿಕವಾಗಿದೆ. ಇಲ್ಲಿನ ವಾತಾವರಣ ಮತ್ತು ಮಣ್ಣ ಫಲವತ್ತತೆ ದ್ರಾಕ್ಷಿಗಳಲ್ಲಿ ವೈನ್‌ಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಇಲ್ಲಿ ತಯಾರಾಗುವ ವೈನ್‌ಗೆ ಬೇಡಿಕೆ ಹೆಚ್ಚು.