• ಅರ್ಪಿತಾ ಅರ್ಜುನ್

ಕಾರ್ ಕಾರ್ ಎಲ್ನೋಡಿ ಕಾರ್.. ನನ್ನ ಪ್ರೀತಿಯ ಹುಡುಗಿ ಸಿನಿಮಾದಂತೆ ಬಹುಶಃ ಕಾರು ಇಲ್ಲದ ಒಂದೇ ಒಂದು ಸ್ಥಳವನ್ನು ನೀವು ಕಾಣದೇ ಇರೋದಕ್ಕೆ ಸಾಧ್ಯವೇ ಇಲ್ಲವೇನೋ. ಬಹುತೇಕ ಮಂದಿಗೆ ಈಗ ಕಾರ್ ಎಂಬುದು ಲಕ್ಸುರಿಗಿಂತ ಹೆಚ್ಚಾಗಿ ಮೂಲಭೂತ ಅಗತ್ಯ. ಸೈಕಲ್ ಮತ್ತು ಬೈಕ್ ಹೊಂದಿರದವರೂ ಈಗಿನ ಕಾಲದಲ್ಲಿ ಕಾರು ಕೊಳ್ಳುತ್ತಾರೆ. ಕಾರು ಎಂಬುದು ಅಷ್ಟು ಸರ್ವವ್ಯಾಪಿ. ದುಬೈ ಮತ್ತಿತರ ವಿದೇಶಿ ರಸ್ತೆಗಳಲ್ಲಿ ನಿಮಗೆ ಟೂ ವೀಲರ್ ಕಾಣದಿರಬಹುದು. ಆದರೆ ಥರಥರದ ಕಾರುಗಳಂತೂ ಕಾಣಿಸದೇ ಇರುವುದಿಲ್ಲ. ಅಮೆರಿಕವೂ ಇದಕ್ಕೆ ಹೊರತಲ್ಲ. ಅಮೆರಿಕ ದೇಶವು ಕಾರುಗಳಿಂದಲೇ ತುಂಬಿ ಹೋಗಿದೆ ಅನ್ನಬಹುದು. ಅಂಥದ್ರಲ್ಲಿ ಅಮೆರಿಕದ ಒಂದು ದ್ವೀಪದಲ್ಲಿ ಕಾರುಗಳೇ ಇಲ್ಲ ಅಂದ್ರೆ ನಂಬುತ್ತೀರಾ? ನಿಮಗೆ ವಿಚಿತ್ರ ಅನಿಸಬಹುದು, ಆದರೆ ಇದು ಸತ್ಯ. ಅಮೆರಿಕದ ಮ್ಯಾಕಿನಾಕ್ ದ್ವೀಪದಲ್ಲಿ ಶತಮಾನಗಳಿಂದಲೂ ನಿಮಗೆ ಒಂದೇ ಒಂದು ಕಡೆಯೂ ಕಾರು ಕಾಣಸಿಗುವುದಿಲ್ಲ. ಕಾರಿನ ಬದಲು ಇಲ್ಲಿ ಕುದುರೆಗಳದ್ದೇ ಕಾರುಬಾರು.

ಕಾರು ನಿಷಿದ್ಧವಂತೆ!

ಅಮೆರಿಕದ ವಾಹನ ಉದ್ಯಮದ ಜನ್ಮಸ್ಥಳವಾಗಿ ಮಿಶಿಗನ್ ರಾಜ್ಯವು ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಆದರೆ ವಿಪರ್ಯಾಸ ನೋಡಿ; ಅದೇ ರಾಜ್ಯದ ಒಂದು ದ್ವೀಪ ಮಾತ್ರ ಈ ಕಾರ್ ಪರಂಪರೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಮ್ಯಾಕಿನಾಕ್ ದ್ವೀಪ ಕಾರ್ ಇಲ್ಲದ ಕುದುರೆಗಳೇ ವಾಹನವಾಗಿರುವ ದ್ವೀಪ. ಅಚ್ಚರಿ ಅಂದ್ರೆ ಕಳೆದ 120 ವರ್ಷಗಳಲ್ಲಿ ಮ್ಯಾಕಿನಾಕ್ ದ್ವೀಪದಲ್ಲಿ ಕಾರುಗಳೇ ಓಡಾಡುತ್ತಿಲ್ಲ. 3.8 ಚದರ ಕಿಲೋಮೀಟರ್ ಗಾತ್ರದ ಈ ಮ್ಯಾಕಿನಾಕ್ ದ್ವೀಪದಲ್ಲಿ 1898ರಲ್ಲಿ ಮೊದಲ ಬಾರಿ ಕಾರು ಪ್ರವೇಶಿಸಿದಾಗ ಕುದುರೆಗಳು ಭಯದಿಂದ ಓಡಲು ಶುರು ಮಾಡಿದ್ದ್ದವು. ಇದಾದ ಬಳಿಕ 1900ರಲ್ಲಿ ಸಂಪೂರ್ಣವಾಗಿ ಇಡೀ ದ್ವೀಪದಿಂದಲೇ ಕಾರನ್ನು ನಿಷೇಧಿಸಲಾಯಿತು. ದ್ವೀಪದ ಸುರಕ್ಷತೆ ಮತ್ತು ಶಾಂತಿಯುತ ವಾತಾವರಣವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ, ಹಳ್ಳಿಯವರು ತಕ್ಷಣವೇ ಎಂಜಿನ್ ಚಾಲಿತ ವಾಹನಗಳನ್ನು ನಿಷೇಧಿಸಿದರು. ಅಂದಿನಿಂದ ಇಂದಿನವರೆಗೂ ಮ್ಯಾಕಿನಾಕ್ ದ್ವೀಪದಲ್ಲಿ ಒಂದೇ ಒಂದು ವಾಹನದ ಸದ್ದು ಕೇಳಲು ಸಿಗೋದಿಲ್ಲ. ಇಲ್ಲಿ ಕುದುರೆಗಳು ಓಡುವ ಹೆಜ್ಜೆಯ ಸದ್ದನ್ನು ಮಾತ್ರ ಆಲಿಸಬಹುದು.

600 ಕುದುರೆಗಳ ಮ್ಯಾಕಿನಾಕ್ ದ್ವೀಪ

america tour

ವಾಹನಗಳಿಲ್ಲದೆ, ಮ್ಯಾಕಿನಾಕ್ ದ್ವೀಪದ ಜೀವನ ಸುಮಾರು 600 ಕುದುರೆಗಳ ಮೂಲಕ ನಡೆಯುತ್ತದೆ ಈ ದ್ವೀಪದಲ್ಲಿ ಒಟ್ಟು 600 ಕುಟುಂಬಗಳು 600 ಕುದುರೆಯನ್ನು ಹೊಂದಿವೆ. ಅಂದರೆ ಪ್ರತಿ ಕುಟುಂಬಕ್ಕೂ ಒಂದು ಕುದುರೆ ಇದೆ ಅಂದುಕೊಳ್ಳಬಹುದು. ದ್ವೀಪದ ಜನರ ಪ್ರಕಾರ ಮ್ಯಾಕಿನಾಕ್ ದ್ವೀಪದಲ್ಲಿ ಕುದುರೆಯೇ ರಾಜ. ಕುದುರೆಗಳು ಈ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಅವುಗಳನ್ನು ಕಸದ ಸಂಗ್ರಹಕ್ಕಾಗಿ, ವಸ್ತುಗಳ ವಿತರಣೆಗಾಗಿ ಮತ್ತು ಟ್ಯಾಕ್ಸಿ ಸೇವೆಯ ರೂಪದಲ್ಲಿ ಬಳಸಿಕೊಳ್ಳಲಾಗುತ್ತದೆ. ಅಂದಹಾಗೆ ಪ್ರವಾಸೋದ್ಯಮವೇ ಸ್ಥಳೀಯರ ಆದಾಯ. ಅದರಲ್ಲೂ ಬೇಸಗೆ ಕಾಲದಲ್ಲಿ, 12 ಲಕ್ಷಕ್ಕೂ ಅಧಿಕ ಪ್ರವಾಸಿಗರು ಮ್ಯಾಕಿನಾಕ್ ದ್ವೀಪಕ್ಕೆ ಭೇಟಿ ನೀಡುತ್ತಾರೆ.

ವಿಶೇಷ ವಾಹನರಹಿತ ಹೆದ್ದಾರಿ

ದ್ವೀಪದ 80 ಶೇಕಡಾ ಭಾಗವನ್ನು ಮ್ಯಾಕಿನಾಕ್ ಐಲ್ಯಾಂಡ್ ಸ್ಟೇಟ್ ಪಾರ್ಕ್ ಆಗಿ ಸಂರಕ್ಷಿಸಲಾಗಿದೆ. ದಟ್ಟ ಕಾಡುಗಳ ಈ ಪ್ರದೇಶದಲ್ಲಿ 70 ಮೈಲುಗಳ ನಡಿಗೆ ದಾರಿಗಳಿದೆ. ಈ ದ್ವೀಪದ ಅತ್ಯಂತ ಪ್ರಸಿದ್ಧ ನೈಸರ್ಗಿಕ ಆಕರ್ಷಣೆಯೆಂದರೆ ಆರ್ಚ್ ರಾಕ್. 50 ಅಡಿ ಅಗಲದ ಈ ನೈಸರ್ಗಿಕ ಕಲ್ಲಿನ ಸೇತುವೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಾರೆ.

ಈ ದ್ವೀಪವನ್ನು ಸುತ್ತಾಡಲು ಮೂರು ಬಗೆಯ ಮಾರ್ಗಗಳಿವೆ.

ಸೈಕಲ್ ಸವಾರಿ

ಮ್ಯಾಕಿನಾಕ್ ದ್ವೀಪದಲ್ಲಿ ಸೈಕಲ್‌ಗಳನ್ನು ಉಪಯೋಗಿಸುವ ಅಭ್ಯಾಸವಿದೆ. ಪ್ರವಾಸಿಗರು ದ್ವೀಪದ ಸುತ್ತಲೂ ಸೈಕಲ್ ಸವಾರಿ ಮಾಡುವ ಅನುಭವವನ್ನು ಇಷ್ಟಪಡುತ್ತಾರೆ. ಸುಮಾರು 1,500 ಸೈಕಲ್‌ಗಳು ಬಾಡಿಗೆಗೆ ಲಭ್ಯವಿದ್ದು, 8.5 ಮೈಲು ಉದ್ದದ ದ್ವೀಪದ ತೀರ ರಸ್ತೆ ಸೈಕಲ್ ಸವಾರಿಗಾಗಿ ಅತ್ಯುತ್ತಮ ಮಾರ್ಗವಾಗಿದೆ.

ಕುದುರೆ ಸವಾರಿ ಪ್ರವಾಸ!

ಪ್ರಕೃತಿಯ ಮಧ್ಯದಲ್ಲಿ ಕುದುರೆ ಮೇಲೆ ಸವಾರಿ ಮಾಡುವ ಅನುಭವವನ್ನು ಕೇಳುವವರಿಗೆ, ಗೈಡ್ ಗಳೊಂದಿಗೆ ಕುದುರೆ ಸವಾರಿ ಪ್ರವಾಸವನ್ನು ವ್ಯವಸ್ಥೆ ಮಾಡಲಾಗುತ್ತದೆ.

ಕಾಲ್ನಡಿಗೆಯ ದಾರಿ

ನಡೆಯುವವರಿಗೆ ಮ್ಯಾಕಿನಾಕ್ ದ್ವೀಪವು ಒಂದು ಸ್ವರ್ಗ. 70 ಮೈಲುಗಳಷ್ಟು ದೂರವಿರುವ ನಡಿಗೆ ದಾರಿಯಲ್ಲಿ, ದಟ್ಟ ಕಾಡುಗಳು, ಬೆಟ್ಟಗಳು ಮತ್ತು ಸರೋವರದ ತೀರಗಳು ಮನಸಿಗೆ ಇನ್ನಿಲ್ಲದ ಮುದ ನೀಡುತ್ತವೆ. ಪ್ರಕೃತಿಯ ಸುಂದರ ದೃಶ್ಯಾವಳಿಗಳ ಮಧ್ಯೆ ಕಾಲ ಕಳೆಯಲು ಬಯಸುವವರಿಗೆ ಮ್ಯಾಕಿನಾಕ್ ದ್ವೀಪ ವಿಶಿಷ್ಟ ಅನುಭವ ನೀಡೋದರಲ್ಲಿ ಸಂಶಯವಿಲ್ಲ.