ರಾಯಲ್ ಫೊಟೋಗ್ರಫರ್‌ನ ರೋಚಕ ಜೀವನಗಾಥೆ
ಆ ಫೊಟೋ ನಂತರದಲ್ಲಿ ಸ್ಪಿರಿಟ್ ಆಫ್ ಯೂನಿಯನ್ ಲೋಗೋ ಗುರುತಿಸಲ್ಪಡುತ್ತದೆ. ಅಷ್ಟೇ ಅಲ್ಲ ಯುಎಇ ಕರೆನ್ಸಿ ದಿನಾರ್ ನಲ್ಲಿ ಆ ಫೊಟೋಗೆ ಮಾನ್ಯತೆ ಲಭಿಸುತ್ತದೆ. ಯುಎಇಯ ಸಂಕೇತ ಎಂಬಂತೆ ಆ ಫೊಟೋ ಪ್ರಖ್ಯಾತವಾಗುತ್ತದೆ. ಶೇಖ್ ಸಹಿ ಮಾಡುವ ಫೊಟೋ ಮತ್ತು ಏಳು ರಾಜರು ಬಾವುಟದ ಮುಂದೆ ನಿಂತಿರುವ ಫೊಟೋ ಎರಡೂ ರಮೇಶ್ ಶುಕ್ಲಾ ಕ್ಯಾಮೆರಾದಿಂದ ಹೊರಬಂದ ಫೊಟೋಗಳೇ.
- ನವೀನ್ ಸಾಗರ್
ಕಳೆದ ವಾರದ ಪ್ರವಾಸಿ ಪ್ರಪಂಚ ಪತ್ರಿಕೆಯ ಮುಖಪುಟದಲ್ಲಿ ಹಂಪಿಯ ಅದ್ಭುತ ಚಿತ್ರವೊಂದನ್ನು ಬಳಸಿದ್ದೆವು. ಆ ಫೊಟೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು ಶಿವಶಂಕರ್ ಬಣಗಾರ್ ಎಂಬ ಛಾಯಾಗ್ರಾಹಕ. ರಾಜ್ಯ ಕಂಡ ಅತ್ಯುತ್ತಮ ಸ್ಥಿರಚಿತ್ರ ಛಾಯಾಗ್ರಾಹಕರಲ್ಲಿ ಖಂಡಿತವಾಗಿಯೂ ಅವರಿಗೊಂದು ಸ್ಥಾನವಿರುತ್ತದೆ. ದೇಶದ ಅತ್ಯುತ್ತಮರಲ್ಲೂ ಅವರೊಬ್ಬರಾಗಬಹುದು. ಆದರೆ ಶಿವಶಂಕರ ಬಣಗಾರ್ ಅವರನ್ನು ರಾಜ್ಯವಾಗಲೀ ದೇಶವಾಗಲೀ ಹೇಗೆ ನಡೆಸಿಕೊಳ್ಳುತ್ತದೆ? ಲಕ್ಷಾಂತರ ಫೊಟೋಗ್ರಫರ್ ಗಳಲ್ಲಿ ಅವರೂ ಒಬ್ಬರು ಎಂಬಂತೆ.
ಇದನ್ನೂ ಓದಿ: ಸೌರಾಷ್ಟ್ರ ಸುತ್ತಲು ಸಪ್ತ ದಿನಗಳ ಪ್ರವಾಸ
ಕ್ಯಾಮೆರಾ ಹೊಂದಿರುವವರೆಲ್ಲ ಫೊಟೋಗ್ರಫರ್ ಗಳಲ್ಲ. ಫೊಟೋಗ್ರಫಿಯ ತಾಂತ್ರಿಕತೆ ಅರಿತು ಅತ್ಯುತ್ತಮವಾಗಿ ಕ್ಲಿಕ್ಕಿಸುವವರೆಲ್ಲ ಅದ್ಭುತ ಫೊಟೋಗ್ರಫರ್ ಎನಿಸಿಕೊಳ್ಳುವುದಿಲ್ಲ. ಫೊಟೋಗ್ರಫಿಗೊಂದು ಉದ್ದೇಶವಿದ್ದಾಗ ಮಾತ್ರ ಫೊಟೋಗ್ರಫರ್ ಗೂ ಆತ ಕ್ಲಿಕ್ ಮಾಡಿದ ಫೊಟೋಗಳಿಗೂ ಸಾರ್ಥಕತೆ ಲಭಿಸುತ್ತದೆ. ರಾಜಕೀಯ, ಸಿನಿಮಾ, ಕ್ರೀಡೆ, ಪ್ರವಾಸ ಇವೆಲ್ಲ ವಿಭಾಗದ ಫೊಟೋಗ್ರಫರ್ ಗೂ ಇದು ಅನ್ವಯ. ಫೊಟೋಗ್ರಫರ್ ಒಬ್ಬ ಇತಿಹಾಸಕಾರನಿಗೆ ಸಮ. ಆತ ಬರಹಗಳ ಬದಲಾಗಿ ತನ್ನ ಫೊಟೋಗಳ ಮೂಲಕ ಇತಿಹಾಸ ದಾಖಲಿಸುವವ. ಫೊಟೋಗ್ರಫರ್ ತನ್ನ ಪ್ರತಿ ಫೊಟೋವನ್ನೂ ಮುಂದೊಂದು ದಿನ ಇದು ಇತಿಹಾಸದ ಪುಟವಾಗಬೇಕು ಎಂದು ಕ್ಲಿಕ್ ಮಾಡಬೇಕು. ಫೊಟೋಗ್ರಫರ್ ಕೇವಲ ಫೊಟೋ ಕ್ಲಿಕ್ ಮಾಡುವುದಷ್ಟೇ ಅಲ್ಲ. ಅದನ್ನು ಶಿಸ್ತಾಗಿ ಸಂಗ್ರಹ ಮಾಡಬೇಕು. ಅದಕ್ಕೊಂದು ಕ್ರೊನಾಲಜಿ ಕೊಡಬೇಕು. ಒಂದು ಪದದಲ್ಲಾದರೂ ಅದಕ್ಕೊಂದು ಶೀರ್ಷಿಕೆ ಅಥವಾ ವಿವರ ಬರೆದುಕೊಂಡಿರಬೇಕು. ಆ ಫೊಟೋಗ್ರಫರ್ ಇತಿಹಾಸಕಾರನಾಗುತ್ತಾನೆ. ತಾನೂ ಇತಿಹಾಸವಾಗುತ್ತಾನೆ. ಹಂಪಿಯನ್ನೇ ಬದುಕಾಗಿಸಿಕೊಂಡಿರೋ ಶಿವಶಂಕರ ಬಣಗಾರ್ ಅವರ ಬೆಲೆ ಈಗ ಅರ್ಥವಾಗದಿರಬಹುದು. ಆದರೆ ಮುಂದೊಂದು ದಿನ ಅವರನ್ನು ಈ ಕಾಲಘಟ್ಟದ ಇತಿಹಾಸಕಾರರೆಂದು ನೋಡುತ್ತದೆ ಜಗತ್ತು. ಅಂಥ ಛಾಯಾಗ್ರಾಹಕರನ್ನು ರಾಜ್ಯ, ದೇಶ ಮತ್ತು ಸರಕಾರಗಳು ಕಾಪಿಟ್ಟುಕೊಳ್ಳಬೇಕು.

ಶಿವಶಂಕರ್ ಬಣಗಾರ್ ಅವರ ಎಂಬ ಪ್ರತಿಭೆ ಈ ಲೇಖನದ ಪೀಠಿಕೆಯಷ್ಟೆ. ಶಿವಶಂಕರ್ ಬಣಗಾರ್ ಅವರಿಗೆ ಸ್ಫೂರ್ತಿ ಇದ್ದಿರಬಹುದಾದ ಅಥವಾ ಈ ಲೇಖನದ ಮೂಲಕ ಸ್ಫೂರ್ತಿಯಾಗಬಹುದಾದ ಒಬ್ಬ ಫೊಟೋಗ್ರಫರ್ ಬಗ್ಗೆ ಈ ಕಿರು ಲೇಖನ.
ಹೆಸರು ರಮೇಶ್ ಶುಕ್ಲಾ.
ಯುನೈಟೆಡ್ ಅರಬ್ ಎಮಿರೇಟ್ಸ್ ನ (ಯುಎಇ) ರಾಯಲ್ ಫೊಟೋಗ್ರಫರ್ ಎಂದೇ ಖ್ಯಾತರಾದವರು ರಮೇಶ್ ಶುಕ್ಲಾ. ಮೊನ್ನೆ ಫೆಬ್ರವರಿ 16ರಂದು ತಮ್ಮ ಎಂಬತ್ತೇಳನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ರಮೇಶ್ ಶುಕ್ಲಾ ಅವರ ಕಹಾನಿ ನಿಜಕ್ಕೂ ರೋಚಕ. ಯಾವುದೇ ಫೊಟೋಗ್ರಫರ್ ಗೂ ಪ್ರೇರಣೆಯಾಗಬಲ್ಲ ಜೀವನ ಅವರದ್ದು. ಫೊಟೋಗ್ರಫರ್ ಮನಸು ಮಾಡಿದರೆ ಒಂದು ದೇಶದ ಇತಿಹಾಸಕಾರನಾಗಬಲ್ಲ. ಎರಡು ದೇಶಗಳ ನಡುವಿನ ರಾಯಭಾರಿಯಾಗಬಲ್ಲ ಎಂಬುದಕ್ಕೆ ಸಾಕ್ಷಿ ರಮೇಶ್ ಶುಕ್ಲಾ.
ಪ್ರತಿ ಯಶಸ್ವಿ ವ್ಯಕ್ತಿಯೂ ತನ್ನ ಹಳೆಯ ಕಥೆ ಹೇಳಿಕೊಳ್ಳುವಾಗ ಖಾಲಿ ಜೇಬಲ್ಲಿ ಬಂದೆ, ಐವತ್ತು ರುಪಾಯಿ ಇತ್ತು, ಉಪವಾಸ ಅನುಭವಿಸಿದೆ, ಬಸ್ ಸ್ಟಾಂಡ್ ನಲ್ಲಿ ಮಲಗಿದೆ ಅಂತ ಕಥೆ ಹೇಳಿಕೊಳ್ಳುವುದನ್ನು ಕೇಳಿ ಅಂಥವು ಸವಕಲು ಅನಿಸಿರಬಹುದು. ಅಫ್ ಕೋರ್ಸ್ ಯಶಸ್ಸು ಕಂಡ ವ್ಯಕ್ತಿ ಆ ಕಥೆಯನ್ನು ಹೇಳಿಕೊಂಡರೆ ಮಾತ್ರವೇ ಅದಕ್ಕೆ ಬೆಲೆ. ಆದರೆ ಪ್ಯಾಶನ್ ಬೆನ್ನತ್ತಿ ಹೋಗುವವರು ಎಷ್ಟೋ ಸಲ ಇರುವ ಸುಖವ ಬಿಟ್ಟು ರಿಸ್ಕುಗಳಿಗೆ ಎದೆಯೊಡ್ಡಿರುತ್ತಾರೆ.
ರಮೇಶ್ ಶುಕ್ಲಾ ಅಹಮದಾಬಾದ್ ನ ಮಧ್ಯಮವರ್ಗದ ಕುಟುಂಬದಲ್ಲೇ ಹುಟ್ಟಿಬೆಳೆದವರು. ಅಪ್ಪ ಉಡುಗೊರೆಯಾಗಿ ಕೊಟ್ಟ ರೊಲಿಕಾರ್ಡ್ ಕ್ಯಾಮೆರಾ ಅವರ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ. ಫೊಟೋಗ್ರಫಿಯ ಹುಚ್ಚು, ಹೊಸತೇನನ್ನೋ ಕೊಡಬೇಕು, ಏನನ್ನೋ ದಾಖಲಿಸಬೇಕು ಎಂಬ ತುಡಿತ ಇಪ್ಪತ್ತೆರಡನೇ ವಯಸ್ಸಿನಲ್ಲೇ ಅವರನ್ನು ಒಂದು ದೋಣಿಗೆ ಹತ್ತಿಸಿಬಿಡುತ್ತದೆ. ಜೇಬಲ್ಲಿ ಐವತ್ತು ರುಪಾಯಿ, ಕೊರಳಲ್ಲಿ ರೊಲಿಕಾರ್ಡ್ ಕ್ಯಾಮೆರಾ. 1965ರಲ್ಲಿ ರಮೇಶ್ ಮುಂಬಯಿಯಲ್ಲಿ ಹತ್ತಿದ ದೋಣಿ ತಲುಪಿದ್ದು ಶಾರ್ಜಾಗೆ. ಅದೊಂದು ರೀತಿ ಡಂಕಿ( ಅಕ್ರಮ ವಲಸೆ) ಟ್ರಿಪ್. ಆಗಿನ್ನೂ ಯು ಎ ಇ ಎಂಬುದು ಯುಎಇ ಆಗಿರಲಿಲ್ಲ. ಬ್ರಿಟಿಷರ ಆಳ್ವಿಕೆಗೆ ಒಳಗಾಗಿತ್ತು. ಸ್ವಾತಂತ್ರ್ಯಪೂರ್ವ ಭಾರತದ ರೀತಿಯಲ್ಲೇ ಅರಬ್ ದೇಶಗಳು ಕೂಡ ಬಿಡಿಬಿಡಿಯಾಗಿ ರಾಜರ ಅಡಿಯಲ್ಲಿದ್ದವು. ಇಂದು ದುಬೈ, ಶಾರ್ಜಾ ಅಬುಧಾಬಿ ಇನ್ನಿತರ ನಾಲ್ಕು ಎಮಿರೇಟ್ ಗಳು ಸೇರಿ ಯುಎಇ ಒಕ್ಕೂಟವಾಗಿದೆ. ಆದರೆ ಅಂದು ಎಲ್ಲವೂ ಪ್ರತ್ಯೇಕವಾಗಿದ್ದವು. ಇಂದಿನಂತೆ ಗಗನಚುಂಬಿ ಕಟ್ಟಡಗಳೂ ಇರಲಿಲ್ಲ, ತೈಲ ನಿಕ್ಷೇಪಗಳು ಸಿಕ್ಕಿರಲಿಲ್ಲ, ಯಾವ ರೀತಿಯಲ್ಲೂ ಅರಬ್ ಎಮಿರೇಟ್ಸ್ ಶ್ರೀಮಂತವಾಗಿ ಕಾಣುತ್ತಿರಲಿಲ್ಲ. ಆ ಹೊತ್ತಿನಲ್ಲಿ ಅಲ್ಲಿನ ಫೊಟೋಗಳನ್ನು ತೆಗೆಯಲಾರಂಭಿಸಿದರು ಶುಕ್ಲಾ. ಭಾರತದ ಪತ್ರಿಕೆಗಳಿಗೆ ವಿಶೇಷ ಫೊಟೋಗಳನ್ನು ಕಳಿಸತೊಡಗಿದರು. ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ಶುಕ್ಲಾ ನೀಲ್ ಕಮಲ್ ಎಂಬ ಸ್ಟುಡಿಯೋವನ್ನೂ ಸ್ಥಾಪಿಸಿದರು.
1968ರಲ್ಲಿ ಶಾರ್ಜಾದಲ್ಲಿ ನಡೆಯುವ ಒಂಟೆ ರೇಸ್ ಒಂದರ ಫೊಟೋಗಳನ್ನು ತೆಗೆಯುವ ಶುಕ್ಲಾ, ಶೇಖ್ ಜಾಯೆದ್ ಬಿನ್ ಸುಲ್ತಾನ್ ಮತ್ತು ಶೇಖ್ ರಶೀದ್ ಬಿನ್ ಸಯೀದ್ ಅಲ್ ಮಕ್ತೌಮ್ ಅವರನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ. ಅಲ್ಲಿಂದ ರಮೇಶ್ ಶುಕ್ಲಾ ಅವರ ಬದುಕು ಬದಲಾಗುತ್ತದೆ.
ಶೇಖ್ ಗಳ ಮನಗೆಲ್ಲುತ್ತಾರೆ. ಚಿನ್ನದ ಪೆನ್ ಉಡುಗೊರೆಯಾಗಿ ಸಿಗುತ್ತದೆ. ಫೊಟೋ ಮೇಲೆ ಅವರ ಸಹಿ ಬೀಳುತ್ತದೆ. ರಾಯಲ್ ಫೊಟೋಗ್ರಫರ್ ಎಂಬ ಅನಧಿಕೃತ ಮುದ್ರೆಯೂ ಅವರ ಹೆಸರ ಹಿಂದೆ ಅಚ್ಚಾಗುತ್ತದೆ.
ಡಿಸೆಂಬರ್ 2, 1971 ರಮೇಶ್ ಶುಕ್ಲಾ ಪಾಲಿನ ಜೀವಮಾನದ ಕ್ಷಣ. ಅಂದು ಎಮಿರೇಟ್ಸ್ ಗಳು ಒಂದಾದ ದಿನ. ಬ್ರಿಟಿಷರು ಬಿಟ್ಟು ಹೋದ ನಂತರ ಈ ಏಳು ಎಮಿರೇಟ್ ಗಳ ರಾಜರು ಒಟ್ಟಾಗಿ ನಿಂತು ಒಗ್ಗೂಡಲು ಸಹಿ ಹಾಕುತ್ತಾರೆ. ಇದನ್ನು ಅತ್ಯಂತ ಹತ್ತಿರ ಅಂದರೆ ಸುಮಾರು ಐದು ಅಡಿ ದೂರದಿಂದ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ ರಮೇಶ್ ಶುಕ್ಲಾ. ಆ ಫೊಟೋ ನಂತರದಲ್ಲಿ ಸ್ಪಿರಿಟ್ ಆಫ್ ಯೂನಿಯನ್ ಲೋಗೋ ಗುರುತಿಸಲ್ಪಡುತ್ತದೆ. ಅಷ್ಟೇ ಅಲ್ಲ ಯುಎಇ ಕರೆನ್ಸಿ ದಿನಾರ್ ನಲ್ಲಿ ಆ ಫೊಟೋಗೆ ಮಾನ್ಯತೆ ಲಭಿಸುತ್ತದೆ. ಯುಎಇಯ ಸಂಕೇತ ಎಂಬಂತೆ ಆ ಫೊಟೋ ಪ್ರಖ್ಯಾತವಾಗುತ್ತದೆ. ಶೇಖ್ ಸಹಿ ಮಾಡುವ ಫೊಟೋ ಮತ್ತು ಏಳು ರಾಜರು ಬಾವುಟದ ಮುಂದೆ ನಿಂತಿರುವ ಫೊಟೋ ಎರಡೂ ರಮೇಶ್ ಶುಕ್ಲಾ ಕ್ಯಾಮೆರಾದಿಂದ ಹೊರಬಂದ ಫೊಟೋಗಳೇ.

ಒಬ್ಬ ಛಾಯಾಗ್ರಾಹಕ, ಅದರಲ್ಲೂ ಪರದೇಶದಿಂದ ಬಂದ ವ್ಯಕ್ತಿಯೊಬ್ಬ ರಾಯಲ್ ಫೊಟೋಗ್ರಫರ್ ಆಗಿ, ಯುಎಇಯ ಛಾಯಾಚಿತ್ರ ಇತಿಹಾಸಕಾರನಾಗಿ ಬದಲಾದ ಕಥೆ ಇದು.
1965ರಿಂದ ತಮ್ಮ ಕೊನೆಯ ಬದುಕಿನ ದಿನದ ತನಕ ಫೊಟೋಗ್ರಫಿಯನ್ನು ಪ್ರೀತಿಸಿದ ರಮೇಶ್ ಶುಕ್ಲಾ ಕಳೆದ ಅರವತ್ತು ವರ್ಷಗಳಲ್ಲಿ ಯುಎಇ ಹೇಗೆ ಹಂತಹಂತವಾಗಿ ಬೆಳೆಯುತ್ತಾ ಹೋಯ್ತು ಎಂಬುದನ್ನು ಸಂಪೂರ್ಣವಾಗಿ ತಮ್ಮಲ್ಲಿ ಚಿತ್ರಗಳ ರೂಪದಲ್ಲಿ ಇಟ್ಟುಕೊಂಡಿದ್ದಾರೆ. ಇಂದಿಗೂ ಅವರು ತಾವು ಕ್ಲಿಕ್ಕಿಸಿದ ಫೊಟೋಗಳನ್ನು ಇಂಟರ್ ನೆಟ್ ಗೋ ಅಥವಾ ಪುಕ್ಕಟೆಯಾಗಿಯೋ ಬಿಕರಿ ಮಾಡಿಲ್ಲ. ಅದನ್ನು ಶಿಸ್ತುಬದ್ಧವಾಗಿ ಡಾಕ್ಯುಮೆಂಟ್ ಮಾಡಿದ್ದಾರೆ. ದಿ ಯುಎಇ: 50 ಇಯರ್ಸ್ ಇನ್ ಪಿಕ್ಚರ್ಸ್ ಎಂಬ ಪುಸ್ತಕವನ್ನು ಪ್ರಕಟಿಸಿರುವ ಅವರದ್ದು ಅಂಥದ್ದೇ ಇನ್ನೂ ಏಳು ಪುಸ್ತಕಗಳಿವೆ. ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಅವರು ಕ್ಲಿಕ್ಕಿಸಿದ ಎರಡು ಸಾವಿರಕ್ಕೂ ಹೆಚ್ಚು ಫೊಟೋ ರೋಲ್ ಗಳು ಹಾಗೆಯೇ ಉಳಿದಿದ್ದವಂತೆ.
’ನನ್ನ ಕೆಲಸವೇ ನನ್ನ ಬ್ಯಾಂಕ್ ಬ್ಯಾಲೆನ್ಸ್. ಇತಿಹಾಸವೇ ನನ್ನ ಬ್ಯಾಂಕ್ ಬ್ಯಾಲೆನ್ಸ್. ನಂಗೀಗ ಎಂಬತ್ತೈದು ವರ್ಷ. ಇವತ್ತಿಗೂ ದಿನಕ್ಕೆ ಹದಿನೆಂಟು ಗಂಟೆ ನಾನು ಫೊಟೋಗ್ರಫಿ ಸಂಬಂಧಿಸಿದ ಕೆಲಸ ಮಾಡ್ತಾನೇ ಇರ್ತೀನಿ. ನಂಗೆ ನೂರು ವರ್ಷ ತುಂಬೋ ತನಕ ನಾನು ರಿಟೈರ್ ಆಗೋದಿಲ್ಲ’ ಅಂತ ಕ್ಯಾಮೆರಾಗೆ ಪದೇಪದೆ ಮುತ್ತಿಡುತ್ತಾ ಕಳೆದ ಎರಡು ವರ್ಷಗಳ ಹಿಂದಷ್ಟೇ ಒಂದು ಸಂದರ್ಶನದಲ್ಲಿ ಮಾತನಾಡಿದ್ರು ರಮೇಶ್ ಶುಕ್ಲಾ. ಅವರು ನೂರು ವರ್ಷ ಉಳಿಯಲಿಲ್ಲ ಎಂಬತ್ತೇಳಕ್ಕೇ ಉಸಿರು ನಿಂತಿತು. ಆದರೆ ಅವರ ಹೆಸರು ಸಾವಿರ ವರ್ಷಗಳಾದರೂ ಅಳಿಯುವುದಿಲ್ಲ. ಯುಎಇ ಇರುವ ತನಕ ಅವರ ಹೆಸರು ಚಿರಸ್ಥಾಯಿ. ಅವರ ನಿಧನಕ್ಕೆ ಖುದ್ದು ಎಮಿರೇಟ್ಸ್ ನ ರಾಜ ಮನೆತನ ಶೋಕ ವ್ಯಕ್ತಪಡಿಸಿದೆ. ಭಾರತದಲ್ಲಿದ್ದಾಗ ತಮ್ಮ ಹದಿವಯಸ್ಸಿನಲ್ಲೇ ಇಪ್ಪತ್ತೆಂಟು ಪತ್ರಿಕೆಗಳಿಗೆ ಫೊಟೋ ಕೊಡುತ್ತಿದ್ದ ರಮೇಶ್ ಶುಕ್ಲಾ ಭಾರತದಲ್ಲೇ ಇದ್ದಿದ್ದರೆ ಎಲೆಮರೆಯಕಾಯಿಯಾಗಿಯೇ ಉದುರಿಹೋಗುತ್ತಿದ್ದರು. ಯುಎಇ ಅವರನ್ನು ರಾಯಲ್ ಫೊಟೋಗ್ರಫರ್ ಆಗಿ ಇತಿಹಾಸಪ್ರಸಿದ್ಧವಾಗಿಸಿತು. ಯುಎಇ ಬೆಳವಣಿಗೆಯನ್ನು ದಾಖಲಿಸಿದ ಅವರ ಕೊಡುಗೆಯನ್ನು ಸರ್ವರೀತಿಯಲ್ಲೂ ಸ್ಮರಣೀಯವಾಗಿಸಿಟ್ಟಿತು. ರಮೇಶ್ ಶುಕ್ಲಾ ಕುರಿತಾಗಿಯೇ ಒಂದು ಪುಸ್ತಕವಾಗುವಷ್ಟು ವಿಷಯವಿದೆ. ಈ ಬರಹ ಕೇವಲ ಒಂದು ಟ್ರೇಲರ್ ಅಥವಾ ಟೀಸರ್ ಅನ್ನಬಹುದಷ್ಟೆ.