ನ್ಯಾಚುರಲ್ ಬ್ರಿಜ್ ಎಂಬ ನೈಸರ್ಗಿಕ ವಿಸ್ಮಯ
ಸುಮಾರು 215 ಅಡಿ ಎತ್ತರ ಮತ್ತು 90 ಅಡಿ ಅಗಲವಿರುವ ಈ ಬೃಹತ್ ಸುಣ್ಣದ ಕಲ್ಲಿನ ಸೇತುವೆ ಪ್ರಕೃತಿಯ ಕೆತ್ತನೆಯೇ ಸರಿ. ಸಾವಿರಾರು ವರ್ಷಗಳ ಹಿಂದೆ 'ಸೀಡರ್ ಕ್ರೀಕ್' ತೊರೆಯು ಪರ್ವತದ ಒಳಗಿನಿಂದ ಹರಿಯುವಾಗ ಸುಣ್ಣದ ಕಲ್ಲುಗಳು ಕರಗಿ ಈ ಬೃಹತ್ ಸೇತುವೆಯಂಥ ಆಕಾರ ನಿರ್ಮಾಣವಾಗಿದೆ. ಇದರ ಮೇಲೆ ಇಂದು ಹೆದ್ದಾರಿ ಹಾದುಹೋಗುತ್ತದೆ ಎಂಬುದು ವಿಶೇಷ. ಈ ಸೇತುವೆಯ ಕೆಳಗೆ ನಿಂತು ಮೇಲಕ್ಕೆ ನೋಡಿದಾಗ ನಾವು ಪ್ರಕೃತಿಯ ಮುಂದೆ ಎಷ್ಟು ಕುಬ್ಜರು ಎಂಬ ಭಾವನೆ ಮೂಡುತ್ತದೆ.
- ಜ್ಯೋತಿ ಪ್ರಸಾದ್
ಪ್ರಕೃತಿಯ ಅದ್ಭುತ ಸೃಷ್ಟಿಗಳು ಮನುಷ್ಯನ ಕಲ್ಪನೆಗೂ ಮೀರಿದವು. ಅವುಗಳಲ್ಲಿ ಒಂದು ವಿಸ್ಮಯದ ತಾಣ ಅಮೆರಿಕದ ವರ್ಜೀನಿಯಾ ರಾಜ್ಯದ ಬ್ಲೂ ರಿಡ್ಜ್ ಪರ್ವತಗಳ ತಪ್ಪಲಿನಲ್ಲಿನ 'ನ್ಯಾಚುರಲ್ ಬ್ರಿಡ್ಜ್'. ಈ ಜಾಗವು ಮೊದಲು ವರ್ಜೀನಿಯಾ ಕಣಿವೆಯಲ್ಲಿ ವಾಸಿಸುತ್ತಿದ್ದ ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗವಾದ 'ಮೋನಾಕನ್' ಜನರಿಗೆ ಪವಿತ್ರ ಸ್ಥಳವಾಗಿತ್ತು. ಬುಡಕಟ್ಟು ಜನರ ಜೀವನಶೈಲಿಯನ್ನು ಬಿಂಬಿಸುವ ‘ಮೋನಾಕನ್ ವಿಲೇಜ್’ನ ಐತಿಹಾಸಿಕ ಪ್ರದರ್ಶನವನ್ನು ಈಗಲೂ ಇಲ್ಲಿ ಕಾಣಬಹುದು.
ಇದನ್ನೂ ಓದಿ: ಇಲ್ಲಿಗೆ ಭೇಟಿ ಕೊಟ್ಟವರು ಸತ್ತರೆ ಇಲ್ಲೇ ಸಾಯಬೇಕು ಎನ್ನುವುದೇಕೆ?
ಸರಕಾರದ ಸುಪರ್ದಿಯಲ್ಲಿ ನಿಸರ್ಗದ ವಿಸ್ಮಯ
ದಶಕಗಳ ಕಾಲ ಈ ನೈಸರ್ಗಿಕ ವಿಸ್ಮಯ ಖಾಸಗಿ ಒಡೆತನದಲ್ಲಿತ್ತು. ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡಬೇಕೆಂಬ ಉದ್ದೇಶದಿಂದ, ಸೆಪ್ಟೆಂಬರ್ 2016ರಲ್ಲಿ ಇದನ್ನು ಅಧಿಕೃತವಾಗಿ 'ನ್ಯಾಚುರಲ್ ಬ್ರಿಡ್ಜ್ ಸ್ಟೇಟ್ ಪಾರ್ಕ್' ಎಂದು ಘೋಷಿಸಲಾಯಿತು. ಅಂದಿನಿಂದ ಈ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಸರಕಾರ ವಹಿಸಿಕೊಂಡಿದೆ. ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳು, ಮಾಹಿತಿ ಕೇಂದ್ರಗಳು ಮತ್ತು ಕೆಫೆಟೇರಿಯಾ ವ್ಯವಸ್ಥೆಗಳನ್ನು ಈಗ ಇಲ್ಲಿ ಕಲ್ಪಿಸಲಾಗಿದೆ.

ನದಿಯೇ ಕಟ್ಟಿದ ನೈಸರ್ಗಿಕ ಸೇತುವೆ
ಸುಮಾರು 215 ಅಡಿ ಎತ್ತರ ಮತ್ತು 90 ಅಡಿ ಅಗಲವಿರುವ ಈ ಬೃಹತ್ ಸುಣ್ಣದ ಕಲ್ಲಿನ ಸೇತುವೆ ಪ್ರಕೃತಿಯ ಕೆತ್ತನೆಯೇ ಸರಿ. ಸಾವಿರಾರು ವರ್ಷಗಳ ಹಿಂದೆ 'ಸೀಡರ್ ಕ್ರೀಕ್' ತೊರೆಯು ಪರ್ವತದ ಒಳಗಿನಿಂದ ಹರಿಯುವಾಗ ಸುಣ್ಣದ ಕಲ್ಲುಗಳು ಕರಗಿ ಈ ಬೃಹತ್ ಸೇತುವೆಯಂಥ ಆಕಾರ ನಿರ್ಮಾಣವಾಗಿದೆ. ಇದರ ಮೇಲೆ ಇಂದು ಹೆದ್ದಾರಿ ಹಾದುಹೋಗುತ್ತದೆ ಎಂಬುದು ವಿಶೇಷ. ಈ ಸೇತುವೆಯ ಕೆಳಗೆ ನಿಂತು ಮೇಲಕ್ಕೆ ನೋಡಿದಾಗ ನಾವು ಪ್ರಕೃತಿಯ ಮುಂದೆ ಎಷ್ಟು ಕುಬ್ಜರು ಎಂಬ ಭಾವನೆ ಮೂಡುತ್ತದೆ. ಪ್ರವಾಸಿಗರಿಗೆ ʻನ್ಯಾಚುರಲ್ ಬ್ರಿಡ್ಜ್ʼ ಕೇವಲ ಒಂದು ಕಲ್ಲಿನ ಸೇತುವೆಯಲ್ಲ. ಅದೊಂದು ದಟ್ಟವಾದ ಅರಣ್ಯ, ಹಸಿರು ಹುಲ್ಲುಗಾವಲುಗಳು ಮತ್ತು ಸುತ್ತಲಿನ ಪರ್ವತಗಳ ಸುಂದರ ನೋಟಗಳನ್ನು ನೀಡುವ ಅದ್ಭುತ ತಾಣ. ಸುಮಾರು 10 ಮೈಲಿಗಳಷ್ಟು ಉದ್ದದ ಚಾರಣದ ಹಾದಿ, ಜಲಪಾತ ಮತ್ತು ಝುಳುಝುಳು ಹರಿಯುವ ತೊರೆಗಳಿಂದ ಕೂಡಿದ ಈ ಜಾಗ ಪ್ರಕೃತಿಪ್ರಿಯರ ಪಾಲಿನ ಸ್ವರ್ಗವೆನಿಸಿಕೊಂಡಿದೆ.
ನೈಟ್ ಟೈಮ್‌ನಲ್ಲಿ ಲೈಟ್ ಅಂಡ್ ಸೌಂಡ್ ಶೋ
ರಾತ್ರಿಯ ಸಮಯದಲ್ಲಿ ಇಲ್ಲಿ 'ಡ್ರಾಮಾ ಆಫ್ ಕ್ರಿಯೇಷನ್’ ಎಂಬ ಅದ್ಭುತವಾದ ಲೈಟ್ ಅಂಡ್ ಸೌಂಡ್ ಶೋ ನಡೆಯುತ್ತದೆ. ಸೇತುವೆಯು ರಾತ್ರಿಯ ಸಮಯದಲ್ಲಿ ವಿಶೇಷ ಬೆಳಕುಗಳಿಂದ ಅಲಂಕೃತಗೊಂಡು, ಕತ್ತಲೆಯಲ್ಲಿ ಸಂಗೀತ, ಬೆಳಕು ಮತ್ತು ಬಣ್ಣಗಳಿಂದ ಭವ್ಯವಾಗಿ ಕಾಣುತ್ತದೆ. ಇದು ಪ್ರವಾಸಿಗರಿಗೆ ಒಂದು ಅನನ್ಯ ಅನುಭವವನ್ನು ನೀಡುತ್ತದೆ. ಈ ಕಾರ್ಯಕ್ರಮವು ದಶಕಗಳ ಕಾಲ ನ್ಯಾಚುರಲ್ ಬ್ರಿಡ್ಜ್‌ನ ಅತ್ಯಂತ ಜನಪ್ರಿಯ ಭಾಗವಾಗಿತ್ತು. ಆದರೆ, ಇತ್ತೀಚೆಗೆ ಪ್ರಕೃತಿ ಸಂರಕ್ಷಣೆಯ ದೃಷ್ಟಿಯಿಂದ ಮತ್ತು ಅಲ್ಲಿನ ಜೀವಸಂಕುಲಗಳಿಗೆ (ವಿಶೇಷವಾಗಿ ಬಾವಲಿಗಳಿಗೆ) ತೊಂದರೆಯಾಗಬಾರದು ಎಂದು ಈ ಲೈಟ್ ಶೋ ಅನ್ನು ಕೆಲವು ವಿಶೇಷ ದಿನಗಳಲ್ಲಿ ಮತ್ತು ಸೀಮಿತ ಅವಧಿಗೆ ನಡೆಸಲಾಗುತ್ತಿದೆ.
ಸೀಡರ್ ಕ್ರೀಕ್ ಟ್ರೇಲ್ ಎಂದರೆ ಚಾರಣದ ಸೊಗಸು
ಪ್ರಕೃತಿಯ ನಡುವೆ ಮೈಮರೆಯುತ್ತಾ ಸೊಬಗನ್ನು ಆಸ್ವಾದಿಸಲು ಚಾರಣಿಗರಿಗೆ ಇಲ್ಲಿನ ʻಸೀಡರ್ ಕ್ರೀಕ್ ಟ್ರೇಲ್ʼ ಹೇಳಿಮಾಡಿಸಿದ ಹಾದಿ. ʻವಿಸಿಟರ್ ಸೆಂಟರ್’ನಿಂದ ಆರಂಭವಾಗುವ ಈ ದಾರಿಯು ಬೃಹತ್ ಸೇತುವೆಯ ಕೆಳಗಿನಿಂದ ಸಾಗಿ, ಕೊನೆಯಲ್ಲಿ ಸುಮಾರು 40 ಅಡಿ ಎತ್ತರದಿಂದ ಧುಮುಕುವ ಮನಮೋಹಕ 'ಲೇಸ್ ಫಾಲ್ಸ್' ಜಲಪಾತವನ್ನು ತಲುಪುತ್ತದೆ. ಹಾದಿಯುದ್ದಕ್ಕೂ ಸೇತುವೆಯ ಅಡಿಯಲ್ಲೇ ಹರಿಯುವ 'ಸೀಡರ್ ಕ್ರೀಕ್' ತೊರೆಯ ಜತೆಗೇ ಸಾಗುತ್ತಾ ತೊರೆಯ ಶಾಂತ ಹರಿವು ಮತ್ತು ಕೊನೆಯಲ್ಲಿ ಸಿಗುವ ಈ ಜಲಪಾತದ ದರ್ಶನ ಚಾರಣಕ್ಕೆ ಒಂದು ಸಾರ್ಥಕ ಅಂತ್ಯವನ್ನು ನೀಡುತ್ತದೆ. ಈ ಮಧ್ಯೆ ಕಾಣುವ ʻಲೇಸ್ ಫಾಲ್ಸ್ʼ ಜಲಪಾತವು ಹೆಸರಿಗೆ ತಕ್ಕಂತೆ ನೋಡಲು ಬಿಳಿಯ ಲೇಸ್ ಅಥವಾ ರೇಷ್ಮೆಯ ಬಟ್ಟೆಯಂತೆ ಕಾಣುತ್ತದೆ. ಕಲ್ಲಿನ ಬಂಡೆಗಳ ಮೇಲೆ ನೀರು ಹಂತ ಹಂತವಾಗಿ ಸೀಳಿಕೊಂಡು ಹರಿಯುವ ರೀತಿ ನೋಡುವುದೇ ಇಲ್ಲಿ ಅತ್ಯಂತ ಆಕರ್ಷಕವಾಗಿರುತ್ತದೆ. ʻಸೀಡರ್ ಕ್ರೀಕ್ ಟ್ರೇಲ್ʼ ತಲುಪಲು ಸುಮಾರು 137 ಮೆಟ್ಟಿಲುಗಳನ್ನು ಇಳಿಯಬೇಕಾಗುತ್ತದೆ. ಇದು ಸ್ವಲ್ಪ ದೈಹಿಕ ಶ್ರಮ ಬೇಡುವ ಕೆಲಸ. ಆದ್ದರಿಂದ ಮೆಟ್ಟಿಲು ಹತ್ತಲು ಕಷ್ಟವಾಗುವವರು ಅಥವಾ ವಿಕಲಚೇತನರು ವಿಸಿಟರ್ ಸೆಂಟರ್‌ನಲ್ಲಿ ಮುಂಚಿತವಾಗಿ ತಿಳಿಸಿದರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಚಾರಣಕ್ಕೆ ಹೋಗುವವರು ಸರಿಯಾದ ಪಾದರಕ್ಷೆಗಳನ್ನು ಧರಿಸುವುದು ಜತೆಯಲ್ಲಿ ಕುಡಿಯುವ ನೀರನ್ನು ಇಟ್ಟುಕೊಳ್ಳುವುದು ಮತ್ತು ದೈಹಿಕವಾಗಿ ಸಿದ್ಧರಿರುವುದು ಅಗತ್ಯ.

ನ್ಯಾಚುರಲ್ ಬ್ರಿಡ್ಜ್ ವೀಕ್ಷಣೆಯ ನಂತರ, ಪ್ರಾಣಿ ಪ್ರಿಯರಿಗಾಗಿ ಹತ್ತಿರದಲ್ಲೇ 'ವರ್ಜೀನಿಯಾ ಸಫಾರಿ ಪಾರ್ಕ್' ಇದೆ. ಅಲ್ಲಿ ಜಿರಾಫೆ, ಜೀಬ್ರಾ ಮತ್ತು ಅಲ್ಪಾಕಾಗಳಿಗೆ ನಿಮ್ಮ ಕಾರಿನ ಕಿಟಕಿಯಿಂದಲೇ ನೀವು ಆಹಾರ ನೀಡುವ ರೋಮಾಂಚಕ ಅನುಭವ ಪಡೆಯಬಹುದು.
ಜಗತ್ತಿನ ಎಷ್ಟೋ ಅದ್ಭುತಗಳು ಮಾನವ ನಿರ್ಮಿತವಾದರೆ ಈ ನ್ಯಾಚುರಲ್ ಬ್ರಿಡ್ಜ್ ಮಾತ್ರ ನಿಸರ್ಗವೇ ಕೆತ್ತಿದ ಒಂದು ಮಹಾನ್ ಶಿಲ್ಪ. ಇಲ್ಲಿ ಹಸಿರು ಕಾಡು, ಹರಿಯುವ ನದಿ, ಐತಿಹಾಸಿಕ ಕುರುಹುಗಳು ಮತ್ತು ಎತ್ತರದ ಕಲ್ಲಿನ ಕಮಾನು - ಇವೆಲ್ಲವೂ ಸೇರಿ ನಮ್ಮ ಪ್ರವಾಸವನ್ನು ಸ್ಮರಣೀಯವಾಗಿಸುತ್ತವೆ. ನೀವು ಅಮೆರಿಕದ ವರ್ಜೀನಿಯಾ ಕಡೆಗೆ ಪ್ರಯಾಣ ಬೆಳೆಸಿದರೆ, ಈ ವಿಸ್ಮಯವನ್ನು ನೋಡುವುದನ್ನು ಮರೆಯಬೇಡಿ.
ಮಾಹಿತಿ ಪೆಟ್ಟಿಗೆ
ದಿ ಬೆಸ್ಟ್ ಸೀಸನ್
ನ್ಯಾಚುರಲ್ ಬ್ರಿಜ್‌ಗೆ ಭೇಟಿ ನೀಡಲು ವರ್ಷದ ಎಲ್ಲಾ ಕಾಲವೂ ಸೂಕ್ತವಾಗಿದೆ. ಆದರೆ, ಶರತ್ಕಾಲದಲ್ಲಿ (ಸೆಪ್ಟೆಂಬರ್‌ನಿಂದ ನವೆಂಬರ್) ಇಲ್ಲಿನ ಮರಗಳ ಎಲೆಗಳು ಬಣ್ಣ ಬದಲಾಯಿಸುವಾಗ ಈ ಪ್ರದೇಶವು ಅತ್ಯಂತ ಮನಮೋಹಕವಾಗಿ ಕಾಣುತ್ತದೆ. ಬೇಸಗೆಯಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಪಾರ್ಕ್ ಚಾರಣ ಪ್ರಿಯರಿಗಂತೂ ಹೇಳಿ ಮಾಡಿಸಿದ ತಾಣ.