• ಜ್ಯೋತಿ ಡಿ. ಬೊಮ್ಮಾ

ವಿಶ್ವದ ಅತಿ ದೊಡ್ಡ ಜಾತ್ರೆ ದುಬೈನಲ್ಲಿ ನಡೆಯುತ್ತದೆ. ಅರಬ್ ಎಮಿರೇಟ್ಸ್‌ನ ಒಂದು ದೊಡ್ಡ ನಗರ ದುಬೈನಲ್ಲಿ ಈ ಜಾತ್ರೆ ನೋಡಲು ಉತ್ಸಾಹದಿಂದಲಢ ಹೋದೆವು. ವಿಶ್ವದ ಆಹಾರ, ಉಡುಗೆ, ಸಂಸ್ಕೃತಿಯನ್ನು ಇಲ್ಲಿ ಕಾಣಬಹುದು. ಅತಿ ವಿಶಾಲವಾದ ಪ್ರದೇಶದಲ್ಲಿ ಪ್ರಪಂಚದ ಎಲ್ಲಾ ದೇಶಗಳ ಸಂಸ್ಕ್ರತಿಯನ್ನು ಬಿಂಬಿಸುವ ಪ್ರತ್ಯೇಕ ಕಟ್ಟಡಗಳಿರುತ್ತವೆ. ಬಹರೈನ್, ಈಜಿಪ್ಟ್‌, ಕುವೈತ್, ಮೊರೊಕ್ಕೊ‌, ಇರಾನ್‌, ಪರ್ಷಿಯನ್, ತಾಲಿಬಾನ್, ಪಾಕಿಸ್ತಾನ್, ಯುಎಇ, ಇಟಲಿ, ಆಫ್ರಿಕಾ, ರಷ್ಯಾ ಹೀಗೆ ವಿಶ್ವದ ಎಲ್ಲಾ ದೇಶಗಳ ಉಡುಗೆ, ಸಂಸ್ಕೃತಿ, ತಿನಿಸು ಮತ್ತಿತರ ವಸ್ತುಗಳನ್ನು ನಾವಿಲ್ಲಿ ನೋಡಬಹುದು.

ಒಂದೇ ಪ್ರದೇಶದಲ್ಲಿ ಪ್ರಪಂಚದ ಅನೇಕ ದೇಶಗಳ ಸಂಸ್ಕೃತಿಯನ್ನು ಈ ಗ್ಲೋಬಲ್ ವಿಲೇಜ್ ಪರಿಚಯಿಸುತ್ತದೆ. ಆದರೆ ಇವುಗಳನ್ನು ನೋಡಲು ಸಮಯ ಮತ್ತು ಸಂಯಮ ಬೇಕು. ಒಂದೊಂದು ದೇಶದ ಮಳಿಗೆಯಲ್ಲಿ ಸುತ್ತಾಡಲು ಸುಮಾರು ಒಂದೊಂದು ಗಂಟೆಯಾದರೂ ಬೇಕೇ ಬೇಕು. ರಾಜಸ್ಥಾನದ ಹವಾ ಮಹಲ್‌ನಂಥ ವಿಶಾಲ ಮಳಿಗೆಯಲ್ಲಿ ನಮ್ಮ ದೇಶದ ವಿವಿಧ ರಾಜ್ಯದ ಉಡುಗೆ, ಅಲಂಕಾರಿಕ ವಸ್ತು- ಒಡವೆಗಳು, ಪ್ರಖ್ಯಾತ ಖಾದ್ಯಗಳು, ಸಾಂಸ್ಕೃತಿಕ ನೃತ್ಯಗಳೆಲ್ಲವನ್ನೂ ಆಯೋಜಿಸಿರುತ್ತಾರೆ.

Untitled design (55)

ಭಾರತ, ಮಸಾಲೆ ಪದಾರ್ಥಗಳಿಗೆ ಪ್ರಖ್ಯಾತ ಎಂದು ತಿಳಿದಿದ್ದ ನನಗೆ ಅಲ್ಲಿನ ಅರಬ್‌ ದೇಶಗಳಾದ ಯೆಮನ್, ಬಹರೈನ್ ಮುಂತಾದ ದೇಶದವರು ಬೆಳೆಯುವ ಮಸಾಲಾ ಪದಾರ್ಥಗಳನ್ನು ನೋಡಿ ಆಶ್ಚರ್ಯವಾಯಿತು. ಒಂದೊಂದು ಮೊಳಕೈಯಷ್ಟು ಉದ್ದದ ಚಕ್ಕೆ ಮತ್ತು ಎಂದೂ ನೋಡಿರದ ಮಸಾಲಾ ಪದಾರ್ಥಗಳಾದ ಹೂ ಮೊಗ್ಗುಗಳು, ಒಣಗಿಸಿದ ಈರುಳ್ಳಿ, ದಪ್ಪ ದಪ್ಪ ಬೆಳ್ಳುಳ್ಳಿ, ಲವಂಗ, ಮೆಣಸು ಇನ್ನೂ ಅನೇಕ ಮಸಾಲ ಪದಾರ್ಥಗಳು ನೋಡುತ್ತ ಸಾಗಿದರೆ ಸೋಜಿಗವೆನಿಸುತ್ತದೆ.

ಅರಬ್‌ ಜನರು ಬಳಸುವ ಪೂರ್ಣ ನಿಲುವಂಗಿಗಳು, ಹೆಣ್ಣು ಮಕ್ಕಳು ಧರಿಸುವ ಬುರ್ಖಾಗಳು, ಯುರೋಪಿಯನ್ನರು ಮೊಳಕಾಲಿನವರೆಗೆ ಧರಿಸುವ ಸ್ಕರ್ಟ್‌ಗಳು ಮತ್ತು ತಲೆಗೊಂದು ಟೋಪಿ, ಉಣ್ಣೆಯ ಸ್ವೆಟ್ಟರ್‌ ಹೀಗೇ ವೈವಿಧ್ಯ ಉಡುಗೆಗಳನ್ನು ನೋಡುತ್ತಾ ಸಾಗಿದರೆ ಇಡೀ ವಿಶ್ವ ಒಂದೇ ಕಡೆ ಮೇಳೈಸಿದಂತೆ ಭಾಸವಾಗುತ್ತದೆ.

ಇಡೀ ಜಾತ್ರೆಯಲ್ಲಿ ಜನವೋ ಜನ. ವಿವಿಧ ಪೋಷಾಕು, ವಿವಿಧ ಭಾಷೆಯ ಜನರು ತುಂಬಿರುತ್ತಾರೆ. ಆಯಾ ದೇಶದ ರೆಸ್ಟೋರೆಂಟ್‌, ಸ್ಟ್ರೀಟ್ ಫುಡ್ ಮತ್ತು ಜಾತ್ರೆಗಳಲ್ಲಿರುವಂತೆ ಮಕ್ಕಳಿಗೆ, ವಯಸ್ಕರಿಗೆ ಆಡಲು ರೈಡ್‌ಗಳು, ಆ ರೋಚಕ ರೈಡ್‌ಗಳಲ್ಲಿ ಭಾಗವಹಿಸಿದವರ ಕೂಗು, ಆಕಾಶದೆತ್ತರಕ್ಕೆ ಒಯ್ದು ಅಷ್ಟೇ ವೇಗವಾಗಿ ಕೆಳಗೆ ತರುವ ಡ್ರ್ಯಾಗನ್ ರೈಡ್ ನೋಡಿದರೆ ಎದೆ ಝಲ್ ಎನ್ನುತ್ತದೆ. ಥ್ರಿಲ್‌ಗಾಗಿ ಭೂತ ಬಂಗಲೆಗಳು, ಗ್ಲಾಸ್ ಹೌಸ್ ಮತ್ತು ರೋಬೋಟ್ ಹೌಸ್‌ಗಳಿರುತ್ತವೆ.

Untitled design (57)

ಗ್ಲೋಬಲ್ ವಿಲೇಜ್‌ನ ಪ್ರಮುಖ ಆಕರ್ಷಣೆ ಎಂದರೆ ವಿವಿಧ ಖಾದ್ಯಗಳು. ಪ್ರಪಂಚದ ಎಲ್ಲಾ ಥರದ ಆಹಾರಗಳು ಇಲ್ಲಿ ದೊರೆಯುತ್ತವೆ. ಎಂದೂ ನೋಡಿರದ ಕೇಳಿರದ ಅದೆಷ್ಟೋ ಖಾದ್ಯಗಳು, ತರಹೇವಾರಿ ಹಣ್ಣುಗಳು ಅಲ್ಲಿರುತ್ತವೆ. ವಿವಿಧ ಹಣ್ಣುಗಳ ಮಿಕ್ಸ್‌ ಸಲಾಡ್ ನೀವಿಲ್ಲಿ ಸವಿಯಬಹುದು. ವೈವಿಧ್ಯಮಯ ಜೇನು ತುಪ್ಪಗಳು ದೊಡ್ಡ ದೊಡ್ಡ ಗಾಜಿನ ಬಾಟಲಿನಲ್ಲಿ ಕಂದು ಬಣ್ಣದಲ್ಲಿ ಕಂಗೊಳಿಸುತ್ತವೆ. ಅದನ್ನು ಉಚಿತವಾಗಿಯೇ ಟೇಸ್ಟ್ ಮಾಡಲು ಕೊಡುತ್ತಾರೆ. ಅರಬ್‌ ದೇಶಗಳ ಮಳಿಗೆಗಳ ಮುಖ್ಯ ಆಕರ್ಷಣೆ ಒಣ ಖರ್ಜೂರ. ಅತೀ ರುಚಿ, ಒಂದೆರಡು ತಿನ್ನುವಷ್ಟರಲ್ಲಿ ಹೊಟ್ಟೆ ತುಂಬುತ್ತೆ. ಅಕ್ರೋಟ್, ಬಾದಾಮಿ, ಗೋಡಂಬಿ ಹೀಗೆ ಡ್ರೈ ಫ್ರೂಟ್‌ಗಳ ರಾಶಿ ರಾಶಿ ಇರುತ್ತವೆ. ಆದರೆ ಎಲ್ಲಕ್ಕಿಂತ ಹೆಚ್ಚು ಜನಜಂಗುಳಿ ಇದ್ದದ್ದು ನಮ್ಮ ಭಾರತೀಯ ತಿನಿಸಿನ ಮಳಿಗೆಯ ಮುಂದೆ, ವಿದೇಶಿ ಜನರೂ ಅಲ್ಲಿ ಪಾನಿಪುರಿ ತಿನ್ನುತ್ತಿದ್ದರು.

ಇಲ್ಲಿ ಸಿಗುವಷ್ಟು ವೈವಿಧ್ಯ ಸುಗಂಧ ದ್ರವ್ಯಗಳನ್ನು ಬಹುಶಃ ನೀವು ಬೇರೆಲ್ಲೂ ಕಾಣಲು ಸಿಗದು.

ಈ ಸಮಯದಲ್ಲಿ ವಿಶಾಲವಾದ ಹುಲ್ಲು ಹಾಸಿನ ಮೇಲೆ ಜನ ಗುಂಪಾಗಿ ಕುಳಿತು ಲಲ್ಲೆಗರೆಯುತ್ತಾ ಇಷ್ಟದ ತಿನಿಸು ಮೆಲ್ಲುತ್ತತ್ತಾ ಸುಖಿಸುತ್ತಾರೆ. ಇಲ್ಲಿ ಪ್ರವಾಸಿಗರ ಸಂಖ್ಯೆಯೇ ಹೆಚ್ಚು. ದುಬೈ ವಾಸಿಗಳು ಕುಟುಂಬ ಸಮೇತವಾಗಿ ತಮ್ಮ ಮನೆಯಿಂದ ಆಹಾರ ಕಟ್ಟಿಕೊಂಡು ಕುರ್ಚಿ ಮೇಜುಗಳೊಂದಿಗೆ ಬಂದು ಪಿಕ್‌ನಿಕ್ ರೀತಿಯಲ್ಲಿ ಎಂಜಾಯ್ ಮಾಡುತ್ತಾರೆ.

ಐದಾರು ಗಂಟೆ ಓಡಾಡಿ ಎಲ್ಲವನ್ನೂ ನೋಡಿದೆವು. ಪಂಜಾಬಿ ರೆಸ್ಟೊರೆಂಟ್‌ನಲ್ಲಿ ದಾಲ್ ರೋಟಿ ಸಬ್ಜಿ ರೈಸ್‌ ಥಾಲಿ ಸವಿದಿದ್ದಾಯಿತು. ದುಬೈ ಜಾತ್ರೆಯು ನಮ್ಮೂರಿನ ಜಾತ್ರೆಯ ನೆನಪು ತರಿಸುತಿತ್ತು. ವಿವಿಧತೆಯಲ್ಲೂ ಏಕತೆಯ ಭಾವ ಮೂಡಿಸುತಿತ್ತು.