Friday, May 29, 2026
Friday, May 29, 2026

ಬ್ಯಾನ್ಫ್‌ ರಾಷ್ಟ್ರೀಯ ಉದ್ಯಾನ

ಈ ಸೇತುವೆಗಳು ಕೇವಲ ಕಾಂಕ್ರೀಟ್ ರಚನೆಗಳಲ್ಲ; ಇವು ಕಾಡಿನೊಳಗಿನ ಒಂದು ಭಾಗವೇ ಹೌದು. ಇಂಜಿನಿಯರ್‌ಗಳು ಮತ್ತು ಜೀವಶಾಸ್ತ್ರಜ್ಞರು ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡಿ ಇದನ್ನು ವಿನ್ಯಾಸಗೊಳಿಸಿದ್ದಾರೆ. ಉದಾಹರಣೆಗೆ, ಕೂಗರ್ಸ್‌ ಮತ್ತು ಕಪ್ಪು ಕರಡಿಗಳಂಥ ಪ್ರಾಣಿಗಳು ಸ್ವಲ್ಪ ಸಂಕೋಚದ ಸ್ವಭಾವದವು. ಅದಕ್ಕಾಗಿಯೇ, ಅವುಗಳಿಗಾಗಿ ಕತ್ತಲೆಯಿಂದ ಕೂಡಿದ, ತೇವಾಂಶವಿರುವ ಸುರಂಗ ಮಾರ್ಗಗಳನ್ನು ರೂಪಿಸಲಾಗಿದೆ. ಬೂದು ನರಿಗಳು ತಮ್ಮ ಗುಂಪುಗಳೊಂದಿಗೆ ಸುರಂಗಗಳ ಮೂಲಕ ಸಾಗುತ್ತವೆ. ಕಪ್ಪೆ, ಹಾವು ಮತ್ತು ಮೊಲಗಳಂಥ ಪುಟ್ಟ ಜೀವಿಗಳಿಗಾಗಿ ವಿಶೇಷವಾದ ಪೈಪ್‌ಗಳು ಮತ್ತು ಸಣ್ಣ ಸುರಂಗಗಳೂ ಇವೆ.

  • ಡಾ. ಕೆ. ಬಿ. ಸೂರ್ಯಕುಮಾರ್, ಮಡಿಕೇರಿ

ಕೆನಡಾದ ಪಶ್ಚಿಮ ಕರಾವಳಿಯಿಂದ ಆರಂಭವಾಗಿ ದೂರದ ಪರ್ವತಗಳವರೆಗೆ ಚಾಚಿರುವ 'ಟ್ರಾನ್ಸ್-ಕೆನಡಾ ಹೆದ್ದಾರಿ'ಯಲ್ಲಿ ಪ್ರವಾಸ ಮಾಡುವುದೇ ಒಂದು ವಿಭಿನ್ನ ಅನುಭವ. ಈ ರಾಜಪಥದ ಮೇಲೆ ನೀವು ಪ್ರಯಾಣಿಸುತ್ತಿದ್ದರೆ, ನಿಮ್ಮ ಸುತ್ತಲೂ ಆಕಾಶವನ್ನು ಚುಂಬಿಸುವ ಕಡಿದಾದ ಬಂಡೆಗಳು, ದಟ್ಟವಾದ ಪೈನ್ ಅರಣ್ಯಗಳು ಮತ್ತು ಕಣ್ಣಿಗೆ ತಂಪೆರೆಯುವ ನೀಲಿ ಸರೋವರಗಳು ಸ್ವಾಗತಿಸುತ್ತವೆ. ರಾಕೀಸ್ ಪರ್ವತ ಶ್ರೇಣಿಯ ಈ ಮನಮೋಹಕ ಸೌಂದರ್ಯದ ಮಧ್ಯೆ, ಕೇವಲ ಪ್ರವಾಸಿಗರನ್ನು ಮಾತ್ರವಲ್ಲದೆ, ವನ್ಯಜೀವಿಗಳನ್ನೂ ಸುರಕ್ಷಿತವಾಗಿ ದಾಟಿಸುವ ಒಂದು ಕ್ರಾಂತಿಕಾರಿ ವಾಸ್ತುಶಿಲ್ಪದ ವಿಸ್ಮಯ ಅಡಗಿದೆ. ಅದೇ ಬ್ಯಾನ್ಫ್‌ ರಾಷ್ಟ್ರೀಯ ಉದ್ಯಾನದ 'ವನ್ಯಜೀವಿ ಪರಿಸರ ಸೇತುವೆಗಳು'.

ಇದನ್ನೂ ಓದಿ: ಕಲ್ಲು ಕಲ್ಲೆನುತಾವ್‌ ಹೆಜ್ಜೆ..

ಮಾನವ-ವನ್ಯಜೀವಿಗಳ ಸಾಮರಸ್ಯದ ಸೇತುವೆಗಳು

ಒಂದು ಕಾಲದಲ್ಲಿ ಮನುಷ್ಯನ ಅಭಿವೃದ್ಧಿಯ ಸಂಕೇತವಾಗಿದ್ದ ಈ ಹೆದ್ದಾರಿ ವನ್ಯಜೀವಿಗಳಿಗೆ ಒಂದು ದುಃಸ್ವಪ್ನವಾಗಿತ್ತು. ಬ್ಯಾನ್ಫ್‌ ಮತ್ತು ಲೇಕ್ ಲೂಯಿಸ್ ನಡುವಿನ ಈ 82 ಕಿಮೀ ಉದ್ದದ ರಸ್ತೆ ವನ್ಯಜೀವಿಗಳಿಗೆ ತಮ್ಮ ಆಹಾರ ಮತ್ತು ಸಂಗಾತಿಗಳ ಹುಡುಕಾಟಕ್ಕಾಗಿ ದಾಟಲೇಬೇಕಾದ ಅನಿವಾರ್ಯದ ಪಥವಾಗಿತ್ತು. ಆಗ ವಾಹನಗಳ ಅಬ್ಬರ ಮತ್ತು ವೇಗಕ್ಕೆ ಸಿಲುಕಿ ಅದೆಷ್ಟೋ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದವು. ಪರಿಸರವಾದಿಗಳು ಮತ್ತು ಜೀವಶಾಸ್ತ್ರಜ್ಞರ ದೀರ್ಘಕಾಲದ ಹೋರಾಟದ ಫಲವಾಗಿ 1990ರ ದಶಕದಲ್ಲಿ ಒಂದು ಹೊಸ ಪ್ರಯೋಗಕ್ಕೆ ಚಾಲನೆ ಸಿಕ್ಕಿತು. ಅದುವೇ 'ವನ್ಯಜೀವಿ ಮೇಲ್ಸೇತುವೆ' ಮತ್ತು 'ಕೆಳ ಸೇತುವೆ'ಗಳ ನಿರ್ಮಾಣ. ಇಂದು ಇಲ್ಲಿರುವ 6 ಮೇಲ್ಸೇತುವೆಗಳು ಮತ್ತು 38 ಕೆಳ ಸೇತುವೆಗಳು, ಮಾನವ ಮತ್ತು ಪ್ರಕೃತಿಯ ನಡುವಿನ ಕಂದಕವನ್ನು ಮುಚ್ಚುವ 'ಸಾಮರಸ್ಯದ ಸೇತುವೆ'ಗಳಾಗಿ ನಿಂತಿವೆ.

Untitled design (75)

ಪ್ರಾಣಿಗಳದೇ ವಿಶಿಷ್ಟ ಸಂಚಾರ ಪಥ!

ಈ ಸೇತುವೆಗಳು ಕೇವಲ ಕಾಂಕ್ರೀಟ್ ರಚನೆಗಳಲ್ಲ; ಇವು ಕಾಡಿನೊಳಗಿನ ಒಂದು ಭಾಗವೇ ಹೌದು. ಇಂಜಿನಿಯರ್‌ಗಳು ಮತ್ತು ಜೀವಶಾಸ್ತ್ರಜ್ಞರು ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡಿ ಇದನ್ನು ವಿನ್ಯಾಸಗೊಳಿಸಿದ್ದಾರೆ. ಉದಾಹರಣೆಗೆ, ಸುಮಾರು 600 ಕೆಜಿ ತೂಕದ ಬೃಹತ್ ಗ್ರಿಜ್ಲಿ ಕರಡಿಗಳು ವಿಶಾಲವಾದ ದೃಶ್ಯಾವಳಿಯನ್ನು ಇಷ್ಟಪಡುತ್ತವೆ. ಅವುಗಳಿಗೆ ದಟ್ಟಣೆಯಿಲ್ಲದ, ಗಿಡಮರಗಳಿಂದ ಕೂಡಿದ ಮೇಲ್ಸೇತುವೆಗಳು ಅತಿ ಪ್ರಿಯ. ಹಣ್ಣಿನ ಕಣಿವೆಗಳಿಗೆ ಹೋಗಲು ಅವು ಇದನ್ನೇ ಬಳಸುತ್ತವೆ. ಕೂಗರ್ಸ್‌ ಮತ್ತು ಕಪ್ಪು ಕರಡಿಗಳಂಥ ಪ್ರಾಣಿಗಳು ಸ್ವಲ್ಪ ಸಂಕೋಚದ ಸ್ವಭಾವದವು. ಅವು ಬಯಲು ಪ್ರದೇಶದಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ, ಅವುಗಳಿಗಾಗಿ ಕತ್ತಲೆಯಿಂದ ಕೂಡಿದ, ತೇವಾಂಶವಿರುವ ಸುರಂಗ ಮಾರ್ಗಗಳನ್ನು ರೂಪಿಸಲಾಗಿದೆ. ಇನ್ನು ಬೂದು ನರಿಗಳು ತಮ್ಮ ಗುಂಪುಗಳೊಂದಿಗೆ ಸುರಂಗಗಳ ಮೂಲಕ ಸಾಗುತ್ತವೆ. ಹಿಮದ ಕುರಿಗಳು ಮತ್ತು ಪರ್ವತ ಮೇಕೆಗಳು ತಮ್ಮ ಎತ್ತರದ ನಿವಾಸಗಳ ಹಾದಿ ಮುಚ್ಚಿದಾಗ ಈ ಸೇತುವೆಗಳನ್ನು ಆಶ್ರಯಿಸುತ್ತವೆ. ಕಪ್ಪೆ, ಹಾವು ಮತ್ತು ಮೊಲಗಳಂಥ ಪುಟ್ಟ ಜೀವಿಗಳಿಗಾಗಿ ವಿಶೇಷವಾದ ಪೈಪ್‌ಗಳು ಮತ್ತು ಸಣ್ಣ ಸುರಂಗಗಳೂ ಇವೆ.

ಬಳಕೆಗೆ 5-10 ವರ್ಷಗಳೇ ಬೇಕಾಯಿತು

ಆರಂಭದಲ್ಲಿ ಪ್ರಾಣಿಗಳು ಈ ಸೇತುವೆಗಳನ್ನು ಬಳಸಲೇ ಇಲ್ಲ. ವಿಜ್ಞಾನಿಗಳ ಪ್ರಕಾರ, ಪ್ರಾಣಿಗಳು ಈ ಹೊಸ ಹಾದಿಯನ್ನು ನಂಬಲು ಮತ್ತು ರೂಢಿಸಿಕೊಳ್ಳಲು 5 -10 ವರ್ಷಗಳ 'ಕಲಿಕೆಯ ಅವಧಿ' ಬೇಕಾಯಿತು. ತಾಯಿ ಪ್ರಾಣಿಗಳು ತಮ್ಮ ಮರಿಗಳಿಗೆ ಈ ಹಾದಿಯನ್ನು ತೋರಿಸಿಕೊಟ್ಟ ನಂತರವಷ್ಟೇ, ಇದು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುವ ಸುರಕ್ಷಿತ ಮಾರ್ಗವಾಗಿ ಬದಲಾಯಿತು.

ಯಶಸ್ಸು ಅಳೆಯಲು ಡಿಎನ್‌ಎ ಪರೀಕ್ಷೆ

ಈ ಯೋಜನೆಯ ಯಶಸ್ಸನ್ನು ಅಳೆಯಲು ಬಳಸುವ ತಂತ್ರಜ್ಞಾನ ಅದ್ಭುತವಾಗಿದೆ. ಸೇತುವೆಗಳ ಪಕ್ಕದಲ್ಲಿ ಅಳವಡಿಸಲಾದ ಸೂಕ್ಷ್ಮ ತಂತಿಗಳಿಗೆ ಪ್ರಾಣಿಗಳ ಕೂದಲು ಅಂಟಿಕೊಳ್ಳುತ್ತವೆ. ಆ ಕೂದಲಿನ ʻಡಿಎನ್‌ಎʼ ಪರೀಕ್ಷೆ ಮಾಡುವ ಮೂಲಕ, ಯಾವ ಪ್ರಾಣಿ ಎಷ್ಟು ಬಾರಿ ದಾಟಿದೆ ಮತ್ತು ಅವುಗಳ ಸಂತತಿ ಹೇಗೆ ವೃದ್ಧಿಸುತ್ತಿದೆ ಎಂಬ ನಿಖರ ಮಾಹಿತಿ ಪಡೆಯಲಾಗುತ್ತದೆ. ವಾಹನ ಡಿಕ್ಕಿಗಳ ಪ್ರಮಾಣ ಶೇ. 80ಕ್ಕೂ ಹೆಚ್ಚು ಕುಂಠಿತಗೊಂಡಿರುವುದು ಈ ಯೋಜನೆಯ ಅತಿದೊಡ್ಡ ಗೆಲುವು.

Untitled design (77)

ಕೆನಡಾದ ಈ ಮಾದರಿ ಇಂದು ಜಗತ್ತಿಗೆ ದಾರಿದೀಪವಾಗಿದೆ. ಭಾರತದಲ್ಲೂ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ನಾಗ್ಪುರ-ಜಬಲ್ಪುರ ಹೆದ್ದಾರಿಯಲ್ಲಿ ಇಂಥ ಮೇಲ್ಸೇತುವೆಗಳು ನಿರ್ಮಾಣಗೊಂಡಿವೆ. ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆಯಂಥ ಅರಣ್ಯ ಭಾಗಗಳಲ್ಲಿ ನಿರಂತರವಾಗಿ ನಡೆಯುವ ಪ್ರಾಣಿಗಳ ವಲಸೆಯನ್ನು ಗಮನದಲ್ಲಿಟ್ಟುಕೊಂಡು ಇಂಥ ಹಸಿರು ಕಾರಿಡಾರ್‌ಗಳ ನಿರ್ಮಾಣದ ಅವಶ್ಯಕತೆ ಬಹಳಷ್ಟಿದೆ. ಪ್ರವಾಸೋದ್ಯಮ ಎಂದರೆ ಕೇವಲ ಪ್ರವಾಸಿಗರಿಗೆ ಸೌಕರ್ಯ ನೀಡುವುದಲ್ಲ; ಆ ತಾಣದಲ್ಲಿ ವಾಸಿಸುವ ಪ್ರತಿಯೊಂದು ಜೀವಿಗೂ ಅಲ್ಲಿ ಗೌರವ ಮತ್ತು ಸುರಕ್ಷಿತ ಬದುಕನ್ನು ನೀಡುವುದು. ಕೆನಡಾದ ಈ ಸೇತುವೆಗಳು ನಮಗೆ ಸಾರುವ ಸಂದೇಶ ʻನಾವು ಪ್ರಕೃತಿಯ ಒಡೆಯರಲ್ಲ, ಅದರೊಂದಿಗೆ ಸಾಮರಸ್ಯದಿಂದ ಬದುಕಬೇಕಾದ ಸಹವಾಸಿಗಳುʼ ಎಂಬುದು.

ಮುಂದಿನ ಬಾರಿ ನೀವು ಕಾಡಿನ ಹಾದಿಯಲ್ಲಿ ಸಂಚರಿಸುವಾಗ, ಮನುಷ್ಯನ ತಂತ್ರಜ್ಞಾನ ಮತ್ತು ಪ್ರಕೃತಿಯ ಮೌನ ಹೇಗೆ ಬೆಸೆದುಕೊಂಡಿವೆ ಎಂಬುದನ್ನು ಕಣ್ಣುಂಬಿಕೊಳ್ಳಿ.

  • 'ಟ್ರಾನ್ಸ್-ಕೆನಡಾ ಹೈವೇ' ಬ್ಯಾನ್ಫ್‌ ಉದ್ಯಾನದ ಮಧ್ಯೆ ಹಾದುಹೋಗುತ್ತದೆ.
  • ವನ್ಯಜೀವಿಗಳನ್ನು ರಸ್ತೆ ಅಪಘಾತದಿಂದ ತಪ್ಪಿಸಲು ಸೇತುವೆಗಳನ್ನು ಕಟ್ಟಲಾಗಿದೆ.
  • ಅಂಡರ್‌ಪಾಸ್‌ ಮತ್ತು ಓವರ್‌ಪಾಸ್‌ ಸೇರಿ ಒಟ್ಟು 44 ಸೇತುವೆಗಳಿವೆ.
  • ಆಯಾ ಪ್ರಾಣಿಯ ಅಗತ್ಯಕ್ಕೆ ತಕ್ಕಂತೆ ಸೇತುವೆಗಳನ್ನು ವಿನ್ಯಾಸಗೊಳಿಸಲಾಗಿದೆ.
  • ಸ್ಥಳೀಯ ಮರ-ಗಿಡಗಳನ್ನು ಅಲ್ಲಿ ನೆಟ್ಟಿದ್ದು, ಕಾಡಿನ ಒಂದು ಭಾಗದಂತೆಯೇ ನಿರ್ಮಿಸಲಾಗಿದೆ.
  • ಸೇತುವೆ ನಿರ್ಮಾಣದ ನಂತರ ರಸ್ತೆ ಅಪಘಾತದಿಂದ ಪ್ರಾಣಿಗಳ ಸಾವಿನ ಸಂಖ್ಯೆ ಕಡಿವೆಯಾಗಿದೆ.
Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...