ಇಸ್ಲಾಮಿಕ್ ಸಂಸ್ಕೃತಿಯ ಕೇಂದ್ರವೆಂದು ಪರಿಚಿತವಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಭಾರತೀಯ ಸಂಸ್ಕೃತಿ, ಸಹಿಷ್ಣುತೆ ಮತ್ತು ಆಧ್ಯಾತ್ಮಿಕತೆಯ ಪ್ರತೀಕವಾಗಿ ಒಂದು ಅದ್ಭುತ ದೇವಸ್ಥಾನ ತಲೆ ಎತ್ತಿದೆ. ಅದರ ಹೆಸರು ಅಬುಧಾಬಿಯ ಬಾಪ್ಸ್ ಅಕ್ಷರಧಾಮ ಹಿಂದೂ ದೇವಸ್ಥಾನ.

ಇದನ್ನೂ ಓದಿ: ಜಾಗವೊಂದು, ಜಗತ್ತುಗಳು ಹಲವು – ಗ್ಲೋಬಲ್ ವಿಲೇಜ್!

ಈ ದೇವಸ್ಥಾನವನ್ನು ಬಾಪ್ಸ್ ಸಂಸ್ಥೆ ನಿರ್ಮಿಸಿದ್ದು, ಸುಮಾರು 27 ಎಕರೆ ಭೂಮಿಯಲ್ಲಿ ಹಬ್ಬಿ ನಿಂತಿದೆ. ಇದಕ್ಕೆ ಬೇಕಾದ ಜಮೀನನ್ನು ಯುಎಇ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತ–ಯುಎಇ ಸ್ನೇಹದ ಸಂಕೇತವಾಗಿ ಮತ್ತು ಪ್ರಧಾನಮಂತ್ರಿ ಮೋದಿಯವರ ಮಧ್ಯಸ್ಥಿಕೆಯ ಕಾರಣದಿಂದಾಗಿ ನೀಡಿದ್ದಾರೆ. ಸುಮಾರು 700 ಕೋಟಿ ರುಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ದೇವಸ್ಥಾನವು ಕೇವಲ ಪೂಜಾ ಸ್ಥಳವಲ್ಲ — ಅದು ಸಂಸ್ಕೃತಿ, ಶಾಂತಿ ಮತ್ತು ಜಾಗತಿಕ ಸಹಬಾಳ್ವೆಯ, ಸರ್ವಧರ್ಮ ಸಮನ್ವಯತೆಯ ಸಂದೇಶ ಸಾರುವ ಆಧ್ಯಾತ್ಮಿಕ ಸ್ಥಳವಾಗಿದೆ. ಈ ದೇವಸ್ಥಾನ ಅದೆಷ್ಟು ವಿಶಾಲವಾದ ಜಾಗದಲ್ಲಿ ಹರಡಿಕೊಂಡಿದೆ ಎಂದರೆ ನನಗೆ ನಮ್ಮ ತಿರುಪತಿ ದೇವಸ್ಥಾನವನ್ನು ನೆನಪಿಸಿಬಿಟ್ಟಿತು. ಇಲ್ಲಿಂದ ಅಲ್ಲಿ ತನಕ ನಡೆದು ಹೋಗುವಷ್ಟರಲ್ಲಿ ಸುಸ್ತೋ ಸುಸ್ತು! ಆದರೂ ಬಿಸಿಲಾಗದಂತೆ ಛಾವಣಿಯನ್ನು ನಿರ್ಮಿಸಿ, ಕಾಲು ಸುಡದಂತೆ ಅಮೃತಶಿಲೆಯ ಕಲ್ಲುಗಳನ್ನು ಹಾಸಿ ಭಕ್ತರೆಡೆಗೆ ಅತೀವ ಕಾಳಜಿಯನ್ನು ತೋರಿದ್ದಾರೆ.

Untitled design (62)

ವಿಸ್ತೀರ್ಣದ್ದು ಒಂದು ಕತೆಯಾದರೆ, ಆ ದೇವಸ್ಥಾನದಲ್ಲಿರುವ ಭದ್ರತಾ ವ್ಯವಸ್ಥೆಯ ಬಗ್ಗೆ ಹೇಳಲೇಬೇಕು. ಅದೆಷ್ಟು ಚೆಕ್ ಮಾಡ್ತಾರೆ ಅಂತೀರಿ ಅಲ್ಲಿ? ಥೇಟು ನಮ್ಮ ವಿಮಾನ ನಿಲ್ದಾಣಗಳ ಹಾಗೆ, ಶೂ ಬಿಚ್ಚಿಸಿ, ಬೆಲ್ಟ್ ಬಿಚ್ಚಿಸಿ, ಬ್ಯಾಗು ಟ್ರೈನೊಳಗೆ ಎಸೆದು, ಮೆಟಲ್ ಡಿಟೆಕ್ಟರ್ ಮೂಲಕ ಬಾಡಿ ಚೆಕ್ ಮಾಡಿ, ಪಾಸ್ಪೋರ್ಟ್ ಪರಿಶೀಲಿಸಿ ನಂತರ ಒಳಗಡೆ ಬಿಡುತ್ತಾರೆ! ಜನರಿಲ್ಲದೇ ಇದ್ದಾಗ ನಡೆದು ಹೋಗುತ್ತೆ. ಆದರೆ ಹೆಚ್ಚು ಜನರು ದರ್ಶನಕ್ಕೆ ನಿಂತುಬಿಟ್ಟರಂತೂ ಹೈರಾಣಾಗಬೇಕಾಗುತ್ತದೆ. ಒಂದು ವೇಳೆ ಅಬುದಾಬಿಯ ಹಿಂದೂ ದೇವಾಲಯದಲ್ಲಿ ಏನಾದರೂ ಆಗಬಾರದ್ದು ಆದರೆ, ಎರಡೂ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಧಕ್ಕೆಯಾಗಬಹುದು ಎಂಬ ಎಚ್ಚರಿಕೆಯಿಂದ ಇಷ್ಟೆಲ್ಲಾ ಮುತುವರ್ಜಿವಹಿಸಿರಬಹುದು.

ಇನ್ನು ಅಲ್ಲಿನ ಸ್ವಚ್ಛತೆ ಮತ್ತು ಶಿಸ್ತು ಯಾವುದೇ ಸ್ಟಾರ್ ಹೊಟೇಲ್‌ನನ್ನೂ ಮೀರಿಸುವಂತಿದೆ. ಒಂದು ಕಿಮೀ.ನಷ್ಟು ದೂರ ನಡೆದರೂ ಎಲ್ಲೂ ಒಂದು ಪ್ಲಾಸ್ಟಿಕ್, ಕಸ, ಕಾಗದ ಕಾಣಿಸುವುದಿಲ್ಲ! ನೆನಪಿಡಿ; ಅಲ್ಲಿಗೆ ಭೇಟಿಕೊಡುವವರೂ ಭಾರತೀಯರೇ! ಅಲ್ಲಿ ಅಷ್ಟು ಸ್ಪಚ್ಚತೆಯನ್ನು ಕಾಪಾಡಿಕೊಳ್ಳಬಹುದು ಎನ್ನುವುದಾದರೆ, ನಮ್ಮಲ್ಯಾಕೆ ಎಲ್ಲೆಂದರಲ್ಲಿ ಕಸದ ಗುಂಡಿಗಳನ್ನಾಗಿಸುತ್ತೇವೆ ಎಂಬ ಪ್ರಶ್ನೆ ನನ್ನದು. ಅದು ಬಿಡಿ; ಈ ದೇವಾಲಯದ ನಿರ್ಮಾಣದಲ್ಲಿ ರಾಜಸ್ಥಾನದ ಗುಲಾಬಿ ಮರಳುಗಲ್ಲು ಹಾಗೂ ಇಟಾಲಿಯನ್ ಅಮೃತಶಿಲೆಯನ್ನು ಬಳಕೆ ಮಾಡಲಾಗಿದೆ. ಒಳಾಂಗಣ ಶಿಲ್ಪಕಲೆ ನಮ್ಮ ಕರ್ನಾಟಕದ ಬೇಲೂರು–ಹಳೇಬೀಡು ದೇವಸ್ಥಾನಗಳ ಸೂಕ್ಷ್ಮ ಕಲೆಗಳನ್ನು ನೆನಪಿಸುವಷ್ಟು ನಿಖರವಾಗಿದೆ. ಸಾವಿರಾರು ಶಿಲ್ಪಿಗಳ ಕೈಚಳಕದಿಂದ ತಯಾರಾದ ಈ ಶಿಲ್ಪಗಳು ಭಾರತೀಯ ವಾಸ್ತುಶಿಲ್ಪದ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುತ್ತಿವೆ ಅನ್ನುವುದು ಹೆಮ್ಮೆಯ ವಿಷಯ.

Untitled design (64)

ಇನ್ನೂ ಅದ್ಧೂರಿತನದ ಬಗ್ಗೆ ಎರಡು ಮಾತೇ ಇಲ್ಲ! ಅಲ್ಲಿ ಪಾದರಕ್ಷೆಗಳನ್ನು ಬಿಡಲು ನಿರ್ಮಿಸಿರುವ ಹವಾನಿಯಂತ್ರಿತ ಕಟ್ಟಡ ನಮ್ಮ ಊರಿನ ಶ್ರೀಮಂತರ ಮನೆಗಿಂತ ಚೆನ್ನಾಗಿದೆ. ಭಕ್ತರ ವಿಶ್ರಾಂತಿ ವಸತಿಗಳು, ಮ್ಯೂಸಿಯಂ, ಹಾಗೂ ಆಧ್ಯಾತ್ಮಿಕ ಪ್ರದರ್ಶನ ಕೇಂದ್ರಗಳು ದೇವಸ್ಥಾನಕ್ಕೆ ಮತ್ತಷ್ಟು ಬೆರಗನ್ನು ತುಂಬಿವೆ. ಹೊರಾಂಗಣದ ನೆಲಕ್ಕೆ ಹಾಕಿರುವ ಅಮೃತ ಶಿಲೆ, ಉರಿ ಬಿಸಿಲಿನಲ್ಲೂ ನಡೆದಾಡುವ ಕಾಲುಗಳಿಗೆ ತಂಪನ್ನು ನೀಡುವಷ್ಟು ಗುಣಮಟ್ಟದ್ದಾಗಿವೆ. ಮರುಭೂಮಿಯ ಹವಾಮಾನಕ್ಕೂ ಹೊಂದುವಂಥ ತಾಂತ್ರಿಕತೆ ಇದರ ನಿರ್ಮಾಣಕ್ಕಿದೆ ಅಂತ ಅಲ್ಲಿನವರು ಹೇಳಿದ್ದನ್ನು ಕೇಳಿಸಿಕೊಂಡೆ. ಹೇಳಿ ಕೇಳಿ ಯುಎಇ ನಲ್ಲಿ 200 ಕ್ಕೂ ಹೆಚ್ಚು ದೇಶಗಳ ಜನರು ವಾಸಿಸುತ್ತಿದ್ದಾರೆ. ಆ ಎಲ್ಲರನ್ನು ಸಮಾನವಾಗಿ ಗೌರವಿಸುವ ಗುಣ ಅಲ್ಲಿನ ದೊರೆಗಳದ್ದು. ಎಲ್ಲರಿಗೂ ಇದು ನಮ್ಮದೇ ದೇಶ ಎಂಬ ಭಾವನೆ ಬರುವಂತಹ ವ್ಯವಸ್ಥೆಗಳು ಇಲ್ಲಿನ ಹೆಗ್ಗಳಿಕೆ. ಪ್ರವಾಸೋದ್ಯಮಕ್ಕೆ ಅತಿ ಹೆಚ್ಚು ಮಹತ್ವ ನೀಡುವ ಈ ರಾಷ್ಟ್ರದಲ್ಲಿ ವಿವಿಧ ಧರ್ಮಗಳಿಗೂ ಅವಕಾಶ ನೀಡಿರುವುದು ಒಂದು ಮಾದರಿ ನಡೆ.