• ಸೀತಾ ಎಸ್. ನಾರಾಯಣ

ಅಮೆರಿಕದ ಮಿಜೌರಿ ರಾಜ್ಯಕ್ಕೆ `ಕೇವ್ ಸ್ಟೇಟ್’ ಎಂಬ ಹೆಸರಿದೆ. ಸರ್ವೆ ಪ್ರಕಾರ ಈ ರಾಜ್ಯದಲ್ಲಿ 6000 ಗುಹೆಗಳಿವೆ. ಅವುಗಳಲ್ಲಿ ಸೇಂಟ್ ಲೂಯಿಸ್‌ನ ಪಶ್ಚಿಮದ 40ಕಿಮೀ ದೂರದ ಸ್ಟಾಯಂಟನ್ ಎಂಬಲ್ಲಿರುವ `ಮೆರಮೆಕ್ ಕೆವರನ್ಸ್’ ಅತ್ಯಂತ ದೊಡ್ಡ ಗುಹೆಯಾಗಿದ್ದು ಕಮರ್ಷಿಯಲ್ ಆಗಿಯೂ ಖ್ಯಾತಿಗಳಿಸಿದೆ.

ನಮ್ಮ ಅಮೆರಿಕ ಪ್ರವಾಸದಲ್ಲಿ ನಮಗೆ ರಂಜನೀಯವೆನಿಸಿದ ಸ್ಥಳಗಳಲ್ಲಿ ಈ `ಮೆರಮೆಕ್ ಕೆವರನ್ಸ್’ ಕೂಡ ಒಂದು. ನಾವು ಅಲ್ಲಿಗೆ ಹೋದಾಗ ಮೂವತ್ತೈದು ಡಿಗ್ರಿಯಷ್ಟು ಮೈಸುಡುವ ಬಿಸಿಲು ಹೊರಗಿದ್ದರೂ ಗುಹೆಯ ಒಳಗೆ 14.44 ಡಿಗ್ರಿ ಇತ್ತು. ವರ್ಷದ ಯಾವುದೇ ಋತುವಿನಲ್ಲೂ ಅಲ್ಲಿ ಅದೇ ತಾಪಮಾನ ಇರುತ್ತದೆಯಂತೆ.

meramec caves

ಕೆವರನ್ಸ್ ಎಂಬ ಪದ ಫ್ರೆಂಚ್ ಭಾಷೆಯ `ಕೆವರನ್’ ಎಂಬ ಪದದಿಂದ ಬಂದಿದೆ. ಕೆವರನ್ಸ್ ಎಂದರೆ ದೊಡ್ಡ ಗುಹೆಯ ಭಾಗಗಳು ಎಂಬರ್ಥವಿದೆ. ಈ ಗುಹೆಯು ನಲವತ್ತೇಳು ಸಾವಿರ ಮೈಲಿ ಹರಡಿರುವ ಓಝರ್ಕ್ಸ್‌ನ ಒಂದು ಭಾಗದಲ್ಲಿದೆ. ಮೆರಮೆಕ್ ನದಿಯ ಬಳಿ ಇರುವುದರಿಂದ `ಮೆರಮೆಕ್ ಕೆವರನ್ಸ್’ ಎಂಬ ಹೆಸರಿದೆ. ನದಿಯು ಸ್ವಚ್ಛ ಸುಂದರವಾಗಿದೆ. ಇಲ್ಲಿ ಬೋಟಿಂಗ್, ಜಿಪ್ ಲೈನ್ ಮುಂತಾದ ಮನರಂಜನೆಗೂ ಅವಕಾಶವಿದೆ.

ಗುಹೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಹೆಸರಿನೊಂದಿಗೆ `ಜೆಸ್ಸಿ ಜೇಮ್ಸ್ ಹೈಡ್ ಔಟ್’ ಎಂಬ ಫಲಕ ಕಾಣಿಸುತ್ತದೆ. ಗುಹೆಯಲ್ಲಿ ಅಡಗಿದ್ದ ಜೆಸ್ಸಿ ಜೇಮ್ಸ್ ಎಂಬ ಬ್ಯಾಂಕ್ ಹಾಗೂ ರೈಲು ದರೋಡೆಕೋರರನ್ನು 1870ರಲ್ಲಿ ಪೊಲೀಸಿನವರು ಬೆನ್ನಟ್ಟಿ ಮುತ್ತಿಗೆ ಹಾಕಿದಾಗ ಅವರು ಗುಹೆಯ ಇನ್ನೊಂದು ಬದಿಯಿಂದ ತಪ್ಪಿಸಿಕೊಂಡರಂತೆ. ಆಗ ಈ ಗುಹೆಯು ಬೆಳಕಿಗೆ ಬಂದಿತಂತೆ.

ಸುಣ್ಣದ ಕಲ್ಲಿನಿಂದ ಸೃಷ್ಟಿಯಾದ ಮೆರಮೆಕ್ ಗುಹೆಯು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಗುಹೆಯಾಗಿದೆ. ಇದು ಭೂಮಿಯ ಆಳದಲ್ಲಿ ಸೃಷ್ಟಿಯು ನಿರ್ಮಿಸಿದ ಅದ್ಭುತವಾದ ಆಭರಣದಂತಿದೆ. ಈ ಗುಹೆಯು ಸ್ಟೆಲ್ಯಾಗ್ಮೆಂಟ್ ಸ್ಟೆಲ್ಯಾಕ್ಟೆಂಟ್‌ಗಳಿಂದ ವಿವಿಧ ಆಕೃತಿಗಳನ್ನು ಪಡೆದ ಗುಹೆಗಳಲ್ಲಿಯೇ ಅತ್ಯಂತ ವಿಶಿಷ್ಟವೆನಿಸಿದೆ. ನೋಡುಗರನ್ನು ಬೆರಗುಗೊಳಿಸಿ ರಂಜಿಸುವ ಈ ಗುಹೆಯು 4-6 ಕಿಮೀ. ನಷ್ಟು ದೊಡ್ಡದಿದ್ದರೂ ಒಂದೂಕಾಲು ಮೈಲಿಯಷ್ಟು ಮಾತ್ರ ನಾವು ನೋಡಲು ಸಾಧ್ಯ. ಅಷ್ಟನ್ನೂ ನೋಡಲು ಒಂದು ಗಂಟೆ ಇಪ್ಪತ್ತು ನಿಮಿಷ ಬೇಕಾಗುತ್ತದೆ. ಇಲ್ಲಿರುವ ಐದು ಭಾಗಳಲ್ಲೂ ವಿವಿಧ ನೋಟವಿದೆ.

meramec caverns visit

ತರಬೇತಿ ಪಡೆದ ಗೈಡ್‌ಗಳು ಅರ್ಧ ಗಂಟೆಗೊಮ್ಮೆ ಹೊರಡುವ 30-40 ಜನರ ಗುಂಪಿಗೆ ಕತ್ತಲು ತುಂಬಿದ ಗುಹೆಯಲ್ಲಿ ದೀಪ ಬೆಳಗಿಸುತ್ತಾ ವಿವರಣೆ ನೀಡುತ್ತಾರೆ. ಸುಮಾರು 400 ಮಿಲಿಯನ್ ವರ್ಷಗಳಿಂದ ರೂಪುಗೊಂಡಿವೆ ಇಲ್ಲಿಯ ಕಲಾಕೃತಿಗಳು. ಈ ಕಲಾಕೃತಿಗಳು ಒಂದು ಇಂಚು ರೂಪುಗೊಳ್ಳಲು ನೂರು ವರ್ಷ ತೆಗೆದುಕೊಳ್ಳುತ್ತದೆಯಂತೆ. ಈ ಗುಹೆಯನ್ನು ಐದು ಹಂತದಲ್ಲಿ ವೀಕ್ಷಣೆ ಮಾಡಬಹುದು.

ಪೆಂಡುಲಮ್ ರೂಮ್

ಮೊದಲನೆ ಹಂತದಲ್ಲಿ ಗುಹೆಯ ಒಳ ಹೋಗುತ್ತಿದ್ದಂತೆ ಒಂದು ವಿಶಾಲ ಕೊಠಡಿ ಸಿಗುತ್ತದೆ. 50 ಅಡಿ ಉದ್ದ 50 ಅಡಿ ಅಗಲವಿರುವ ಇಲ್ಲಿ ಹಿಂದಿನಿಂದಲೂ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದು ಇದಕ್ಕೆ `ಬಾಲ್ ರೂಮ್’ ಎಂಬ ಹೆಸರಿದೆ. 1960ರಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳು ಭೂಮಿ ತಿರುಗುತ್ತದೆ ಎಂದು ಪ್ರಮಾಣೀಕರಿಸಲು ಇಲ್ಲಿ ಪೆಂಡುಲಮ್ ಅಳವಡಿಸಿದರು. ಈ ಪೆಂಡುಲಮ್ 6 ಗಂಟೆಗೊಮ್ಮೆ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣವಾಗಿ ದಿಕ್ಕು ಬದಲಾಯಿಸುತ್ತದೆ. ಸಾವಿರ ಪೌಂಡ್ ತೂಕ ಇರಬೇಕಾಗಿದ್ದ ಇದು ಕಡಿಮೆ ತೂಕದಿಂದಾಗಿ ಅಷ್ಟು ಪರಿಪೂರ್ಣತೆ ಪಡೆಯಲಿಲ್ಲ ಎನ್ನಲಾಗಿದೆ. ಸಿವಿಲ್ ವಾರ್ ಸಮಯದಲ್ಲಿ ಇಲ್ಲಿ ಗನ್ ಪೌಡರ್ ತಯಾರಿಸಿ ಇದರ ಮುಂದೆ ಹರಿಯುತ್ತಿರುವ ಮೆರಮೆಕ್ ನದಿಯಿಂದ ಸಾಗಾಣಿಕೆ ಮಾಡಲಾಗುತ್ತಿತ್ತು.

meramec caverns mirror room

ಮಿರರ್ ರೂಮ್

ಎರಡನೇ ಹಂತವಿದು. ಇಲ್ಲಿ ಕೇವಲ ಒಂದೂವರೆ ಅಡಿಯಷ್ಟು ನೀರಿನ ಝರಿ ಇದೆ. ಬೆಳಕಿನ ಪ್ರತಿಫಲನದಿಂದಾಗಿ 50 ಅಡಿ ಇದ್ದಂತೆ ಕಾಣಿಸುತ್ತದೆ. ಮೇಲ್ಛಾವಣಿಯಲ್ಲಿ ರೂಪುಗೊಂಡಿರುವ ಕಲಾಕೃತಿಗಳು ಅದರಲ್ಲಿ ಪ್ರತಿಫಲಿಸಿ ಸುಂದರವಾಗಿ ಕಾಣಿಸುತ್ತವೆ.

ಗಾಡ್ ಬ್ಲೆಸ್ ಅಮೆರಿಕ!

ಮೂರನೆಯ ಹಂತದಲ್ಲಿ ನಿಮಗೆ ಕಾಣುವುದು ಅಚ್ಚರಿಯ ಗೋಡೆ. ಈ ಬೃಹದಾಕಾರದ ಗೋಡೆಯು ಸಾವಿರಾರು ವರ್ಷಗಳಿಂದ ನಿರ್ಮಾಣವಾಗಿದೆ. ಗೋಡೆಯು ಪರದೆಯಂತೆ ಇದ್ದು ಬೆಳಕು-ಧ್ವನಿಯ ಒಂದು ಛಾಯಾಚಿತ್ರ ಅಲ್ಲಿ ತೋರಿಸಲಾಗುತ್ತದೆ. ಆ ಸ್ಥಳದಲ್ಲಿ ಒಬ್ಬ ಮಹಿಳೆ `ಗಾಡ್ ಬ್ಲೆಸ್ ಅಮೆರಿಕಾ’ ಎಂದು ಹಾಡು ರಚಿಸಿ ಹಾಡಿದ್ದರಿಂದ ಆ ಹಾಡನ್ನು ಅಳವಡಿಸಿದ ಒಂದು ಶೋ ತೋರಿಸಲಾಗುತ್ತದೆ. ಇದು ಭೂಮಿಯ ಒಳಗಿನ ಅತ್ಯಂತ ಉತ್ಕೃಷ್ಟವಾದ ಪ್ರದರ್ಶನವಾಗಿದೆ.

ಹಾಲಿವುಡ್ ರೂಮ್

ನಾಲ್ಕನೆಯ ಹಂತ ಹಾಲಿವುಡ್ ರೂಮ್. 1973ರಲ್ಲಿ ಇಲ್ಲಿಯ ಹಲವು ಸುಂದರ ದೃಶ್ಯಗಳನ್ನು ಹಾಲಿವುಡ್ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ. ಹಾಗಾಗಿ ಈ ಹೆಸರು.

meramec caverns America

ವೈನ್ ರೂಮ್

ಐದನೇ ಹಾಗೂ ಕೊನೆಯ ಹಂತ ಇದು. ಮೇಲಿನ ಹಂತದಲ್ಲಿರುವ ಈ ಕೋಣೆಗೆ 58 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗುತ್ತದೆ. ಪ್ರಪಂಚದ ಅದ್ಭುತ ಗುಹೆಯಿದು. ಇಲ್ಲಿ ಎಲ್ಲೆಡೆ ದ್ರಾಕ್ಷಿಗೊಂಚಲಿನ ಆಕಾರದ ಕಲಾಕೃತಿಗಳು ಇವೆ, ಕ್ಯಾಲ್ಶಿಯಂ ಕಾರ್ಬೋನೇಟಿನಿಂದ ಕೆಲವು ಹರಳಿನ ರೂಪ ಪಡೆದಿವೆ. ಒಂದೆಡೆ ಆರು ಅಡಿ ಎತ್ತರದ ಮೂರು ಕಾಲುಗಳಿರುವ ಟೇಬಲ್ಲಿನ ಆಕಾರ ನಿರ್ಮಾಣವಾಗಿದೆ. ಅದಕ್ಕೆ ವೈನ್ ಟೇಬಲ್ ಎಂದು ಹೆಸರಿಸಲಾಗಿದೆ.

ಈ ಗುಹೆಯ ವೀಕ್ಷಣೆಗೆ ವರ್ಷಕ್ಕೆ ಸರಾಸರಿ ಒಂದೂವರೆ ಲಕ್ಷ ಪ್ರವಾಸಿಗರು ಭೇಟಿ ಕೊಡುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ನೋಡಬೇಕಾದ ಸ್ಥಳವೆನಿಸಿರುವ ಇದನ್ನು ವೀಕ್ಷಿಸಲು ದೊಡ್ಡವರಿಗೆ 21 ಡಾಲರ್, ಮಕ್ಕಳಿಗೆ 11 ಡಾಲರ್ ಇದ್ದು, 4 ವರ್ಷದ ಕೆಳಗಿನ ಮಕ್ಕಳಿಗೆ ಉಚಿತವಿದೆ. `ಥ್ಯಾಂಕ್ಸ್ ಗಿವಿಂಗ್ ಡೇ’ ಹಾಗೂ `ಕ್ರಿಸ್ಮಸ್ ಡೇ’ ಬಿಟ್ಟು ವರ್ಷದ ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 9 ಗಂಟೆಯಿಂದ ವೀಕ್ಷಣೆಗೆ ಅವಕಾಶವಿದೆ. ಋತುಮಾನಕ್ಕೆ ತಕ್ಕಂತೆ ಮುಚ್ಚುವ ವೇಳೆಯಲ್ಲಿ ಬದಲಾವಣೆಯಿರುತ್ತದೆ.