Tuesday, October 13, 2026
Tuesday, October 13, 2026

ಗ್ಯಾಸ್‌ಟೌನ್ ದಾಟಿ ಗ್ರ್ಯಾನ್ವಿಲ್ ದ್ವೀಪದ ಕಡೆಗೆ

ಗ್ಯಾಸ್‌ಟೌನ್‌ಗೆ ಈ ಹೆಸರು ಬರಲು ಕಾರಣವಾದ ವ್ಯಕ್ತಿ ‘ಜಾನ್ ಡಿಟನ್’ಗೆ ಹರಟೆ ಹೊಡೆಯುವ ಮತ್ತು ಸ್ವಾರಸ್ಯಕರವಾಗಿ ಕಥೆಗಳನ್ನು ಹೇಳುವ ಅದ್ಭುತ ಕಲೆ ಸಿದ್ಧಿಸಿತ್ತು. ಆತನ ಈ ಮಾತಿನ ಚತುರತೆ ಮತ್ತು ಅತಿಯಾದ ಹರಟೆಯ ಸ್ವಭಾವದಿಂದ (gassy) ಆತನಿಗೆ ‘ಗ್ಯಾಸಿ ಜಾಕ್’ ಡಿಟನ್ ಎಂಬ ಅಡ್ಡಹೆಸರು ಬಂದಿತು. ಈತ 1867 ರಲ್ಲಿ ಈ ಜಾಗದಲ್ಲಿ ಮೊದಲ ಬಾರಿಗೆ ಒಂದು ಸಣ್ಣ ಹೊಟೇಲ್ ತೆರೆಯುವ ಮೂಲಕ ಇಲ್ಲಿನ ನಾಗರಿಕತೆಯ ಬೆಳವಣಿಗೆಗೆ ನಾಂದಿ ಹಾಡಿದ.

  • ಜ್ಯೋತಿ ಪ್ರಸಾದ್

ಕೆನಡಾದ ವ್ಯಾಂಕೋವರ್ ನಗರಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಯ ಮನಸಿನಲ್ಲಿ ಕೆಲವು ಚಿತ್ರಗಳು ಅಚ್ಚೊತ್ತಿ ಉಳಿಯುತ್ತವೆ. ವ್ಯಾಂಕೋವರ್‌ನ ಪ್ರಕೃತಿ ಸೌಂದರ್ಯದ ಜತೆಗೆ ಇಲ್ಲಿ ಇನ್ನಿತರ ಪ್ರವಾಸಿ ಆಕರ್ಷಣೆಗಳಿವೆ. ಅವುಗಳಲ್ಲಿ ಪ್ರಮುಖವಾದುದು ಇಲ್ಲಿನ ‘ಗ್ಯಾಸ್ ಟೌನ್.’ ಇದು ವ್ಯಾಂಕೋವರ್ ನಗರದ ಅತ್ಯಂತ ಹಳೆಯ ಮತ್ತು ಆಕರ್ಷಕ ಬಡಾವಣೆ. ಬ್ರಿಟಿಷ್ ಕೊಲಂಬಿಯಾದ ಇತಿಹಾಸದ ಬೇರುಗಳು ಇಲ್ಲಿವೆ. ಆಧುನಿಕ ಗಗನಚುಂಬಿ ಕಟ್ಟಡಗಳ ನಡುವೆ, ಕಲ್ಲುಹಾಸಿನ ರಸ್ತೆಗಳು ಮತ್ತು ವಿಕ್ಟೋರಿಯನ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ಪ್ರದೇಶವು ಪ್ರವಾಸಿಗರ ನೆಚ್ಚಿನ ತಾಣ.

ಇದನ್ನೂ ಓದಿ: ವ್ಯಾಟಿಕನ್ ಸಿಟಿ ಪ್ರವಾಸ

ಗ್ಯಾಸ್‌ಟೌನ್‌ಗೆ ಈ ಹೆಸರು ಬರಲು ಕಾರಣವಾದ ವ್ಯಕ್ತಿ ‘ಜಾನ್ ಡಿಟನ್’ಗೆ ಹರಟೆ ಹೊಡೆಯುವ ಮತ್ತು ಸ್ವಾರಸ್ಯಕರವಾಗಿ ಕಥೆಗಳನ್ನು ಹೇಳುವ ಅದ್ಭುತ ಕಲೆ ಸಿದ್ಧಿಸಿತ್ತು. ಆತನ ಈ ಮಾತಿನ ಚತುರತೆ ಮತ್ತು ಅತಿಯಾದ ಹರಟೆಯ ಸ್ವಭಾವದಿಂದ (gassy) ಆತನಿಗೆ ‘ಗ್ಯಾಸಿ ಜಾಕ್’ ಡಿಟನ್ ಎಂಬ ಅಡ್ಡಹೆಸರು ಬಂದಿತು. ಈತ 1867 ರಲ್ಲಿ ಈ ಜಾಗದಲ್ಲಿ ಮೊದಲ ಬಾರಿಗೆ ಒಂದು ಸಣ್ಣ ಹೊಟೇಲ್ ತೆರೆಯುವ ಮೂಲಕ ಇಲ್ಲಿನ ನಾಗರಿಕತೆಯ ಬೆಳವಣಿಗೆಗೆ ನಾಂದಿ ಹಾಡಿದ. ಆತನ ಜನಪ್ರಿಯ ವ್ಯಕ್ತಿತ್ವದ ಕಾರಣ ಇಡೀ ಪ್ರದೇಶಕ್ಕೆ ಆತನ ಹೆಸರನ್ನೇ ಇಡಲಾಯಿತು. ಪ್ರಸ್ತುತ ಮೇಪಲ್ ಟ್ರೀ ಸ್ಕ್ವೇರ್‌ನಲ್ಲಿ ಈತನ ಪ್ರತಿಮೆಯಿದ್ದು, ಇದು ನಗರದ ಉಗಮದ ಕಥೆಯನ್ನು ಸಾರುತ್ತದೆ.

ಇಲ್ಲಿನ ಸುಂದರ, ಸ್ವಚ್ಛ ರಸ್ತೆಗಳಲ್ಲಿ ನಡೆಯುವುದೇ ಒಂದು ಆಹ್ಲಾದಕರ ಅನುಭವ. ಆಧುನಿಕ ಟಾರ್ ರಸ್ತೆಗಳ ಬದಲಿಗೆ, ಹಳೆಯ ಕಾಲದ ‘ಕಾಬಲ್ ಸ್ಟೋನ್’ ರಸ್ತೆಗಳನ್ನು ಇಲ್ಲಿ ಉಳಿಸಿಕೊಳ್ಳಲಾಗಿದೆ. ಕೆಂಪು ಇಟ್ಟಿಗೆಯ ಕಟ್ಟಡಗಳು ಮತ್ತು ಕಬ್ಬಿಣದ ಅಲಂಕಾರಿಕ ಬೀದಿ ದೀಪಗಳು ನಮ್ಮನ್ನು 19ನೆಯ ಶತಮಾನಕ್ಕೆ ಕರೆದೊಯ್ಯುತ್ತವೆ. ಅಂದಿನ ಹಲವಾರು ಹಳೆಯ ಕಟ್ಟಡಗಳನ್ನು ಈಗ ಸುಂದರವಾದ ಕೆಫೆಗಳು ಮತ್ತು ಕಲಾ ಪ್ರದರ್ಶನ ಮಳಿಗೆಗಳಾಗಿ ಪರಿವರ್ತಿಸಲಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆ ವಿಶ್ವವಿಖ್ಯಾತ ‘ಸ್ಟೀಮ್ ಕ್ಲಾಕ್.’ 1977ರಲ್ಲಿ ರೇಮಂಡ್ ಸೌಂಡರ್ಸ್ ಎಂಬುವವರಿಂದ ನಿರ್ಮಾಣವಾದ ಇದು, ವಿಶ್ವದ ಕೆಲವೇ ಕೆಲವು ಕಾರ್ಯನಿರ್ವಹಿಸುವ ಹಬೆ ಗಡಿಯಾರಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ರಸ್ತೆಯ ಮೇಲಿದ್ದ ಒಂದು ಸ್ಟೀಂ ಗ್ರೇಟ್ (Steam Grate) ಅನ್ನು ಮುಚ್ಚಲು ಮತ್ತು ವಿಕ್ಟೋರಿಯನ್ ಶೈಲಿಯ ರೂಪ ನೀಡಲು ಇದನ್ನು ನಿರ್ಮಿಸಲಾಯಿತು.

Untitled Design (5)

ಇದರ ಕಾರ್ಯವೈಖರಿ ಬಹಳ ಕುತೂಹಲಕರವಾಗಿದೆ. ರಸ್ತೆಯ ಅಡಿಯಲ್ಲಿರುವ ‘ಅಂಡರ್ ಗ್ರೌಂಡ್ ಸ್ಟೀಂ ನೆಟ್‌ವರ್ಕ್’ನ ಶಕ್ತಿಯನ್ನು ಬಳಸುತ್ತಾ ಇದು ಭಾರವಾದ ಉಕ್ಕಿನ ಬಾಲ್‌ಗಳನ್ನು ಮೇಲೆತ್ತುತ್ತದೆ, ಅದು ಗಡಿಯಾರದ ಯಾಂತ್ರಿಕ ವ್ಯವಸ್ಥೆಯನ್ನು ಚಾಲನೆ ಮಾಡುತ್ತದೆ. ಗಡಿಯಾರದ ಒಳಗೆ ಚಲಿಸುವ ಯಾಂತ್ರಿಕ ಭಾಗಗಳು ಮತ್ತು ಹಬೆಯ ಶಕ್ತಿಯಿಂದ ಓಡುವ ಪೆಂಡುಲಂಗಳನ್ನು ನೋಡುತ್ತಾ ಮೈ ಮರೆತುಬಿಡುತ್ತೇವೆ. ಪ್ರತಿ 15 ನಿಮಿಷಕ್ಕೊಮ್ಮೆ ಐದು ಸಣ್ಣ ಶಿಳ್ಳೆ (whistle) ಗಳ ಮೂಲಕ ಈ ಗಡಿಯಾರವು ‘ವೆಸ್ಟ್‌ಮಿನಿಸ್ಟರ್ ಚೈಮ್ಸ್’ ಎಂಬ ನಾದವನ್ನು ಹೊರಡಿಸುತ್ತದೆ. ಪ್ರತಿ ಗಂಟೆಗೊಮ್ಮೆ ಆಕಾಶಕ್ಕೆ ಹಬೆಯನ್ನು ಚಿಮ್ಮುತ್ತಾ ಪೂರ್ಣ ಮಟ್ಟದ ಸಂಗೀತದ ಸದ್ದು ಮಾಡುತ್ತದೆ. ಈ ಹಬೆಯ ನೃತ್ಯವನ್ನು ನೋಡಲು ಪ್ರವಾಸಿಗರು ಮೌನವಾಗಿ ಕಾದು ನಿಲ್ಲುತ್ತಾರೆ. ಇದರ ಧ್ವನಿಯನ್ನು ಹಬೆಯು ನಿಯಂತ್ರಿಸಿದರೂ, ಕರಾರುವಕ್ಕಾದ ಸಮಯಕ್ಕಾಗಿ ಒಂದು ಸಣ್ಣ ವಿದ್ಯುತ್ ಮೋಟಾರ್ ಕೂಡ ಇಲ್ಲಿ ಕೆಲಸ ಮಾಡುತ್ತದೆ.

ಇನ್ನು ಈ ಪ್ರದೇಶದಲ್ಲಿ ಖಾದ್ಯ ಪ್ರಿಯರಿಗೆ ಹಳೆಯ ಶೈಲಿಯ ಪಬ್‌ಗಳು, ಆಧುನಿಕ ಫೈನ್ ಡೈನಿಂಗ್ ರೆಸ್ಟೋರೆಂಟ್‌ಗಳು ಮತ್ತು ಯುರೋಪಿಯನ್ ಶೈಲಿಯ ಸಣ್ಣಸಣ್ಣ ಕಾಫಿ ಕೆಫೆಗಳು ಕೈಬೀಸಿ ಕರೆಯುತ್ತವೆ. ಹಾಗೆಯೇ ಶಾಪಿಂಗ್ ಪ್ರಿಯರಿಗೆ ಕೆನಡಾದ ಮೂಲನಿವಾಸಿಗಳ (First Nations) ಕಲಾಕೃತಿಗಳು, ಕೆನಡಿಯನ್ ಮೇಪಲ್ ಸಿರಪ್, ವ್ಯಾಂಕೋವರ್‌ನ ಸೊವನಿಯರ್‌ಗಳು ಮತ್ತು ಫ್ಯಾಷನ್ ವಸ್ತ್ರಗಳು ದೊರೆಯುತ್ತವೆ. ಸೂರ್ಯಾಸ್ತದ ನಂತರ ದೀಪಗಳ ಬೆಳಕಿನಲ್ಲಿ ಈ ಪ್ರದೇಶವು ಅತ್ಯಂತ ರಮಣೀಯವಾಗಿರುತ್ತದೆ. ಪ್ರವಾಸಿಗರು ಇಲ್ಲಿನ ಕಲ್ಲುಹಾಸಿನ ರಸ್ತೆಯ ಮೇಲೆ ನಡೆದುಕೊಂಡೇ ಇಡೀ ಗ್ಯಾಸ್ ಟೌನ್‌ನ ಸೌಂದರ್ಯವನ್ನು ಆನಂದಿಸಬಹುದು. ಈ ಬಡಾವಣೆಯ ಮೂಲೆ ಮೂಲೆಯೂ ಛಾಯಾಗ್ರಹಣಕ್ಕೆ ಹೇಳಿಮಾಡಿಸಿದ ತಾಣವಾಗಿದೆ.

Untitled Design (6)

ಇಲ್ಲಿಂದ ಕಾಲ್ನಡಿಗೆಯಲ್ಲಿ 5 ನಿಮಿಷ ದೂರದಲ್ಲಿ, 550 ಅಡಿಗಳ ಎತ್ತರದ ‘ವ್ಯಾಂಕೋವರ್ ಲುಕ್‌ಔಟ್’ ಇದೆ. ಗ್ಲಾಸ್ ಎಲಿವೇಟರ್ ಮೂಲಕ ಏರಿ ಕೇವಲ 40 ಸೆಕೆಂಡುಗಳಲ್ಲಿ ನಾವು ನಗರದ ಶಿರದಮೇಲಿರುತ್ತೇವೆ. ಇಡೀ ವ್ಯಾಂಕೋವರ್ ನಗರ ನಮ್ಮ ಪಾದದಡಿಯಲ್ಲಿ ಹರಡಿಕೊಂಡಿರುತ್ತದೆ. ಒಂದು ಬದಿಯಲ್ಲಿ ವಿಶಾಲವಾದ ಪೆಸಿಫಿಕ್ ಸಾಗರ, ಇನ್ನೊಂದು ಬದಿಯಲ್ಲಿ ಹಿಮಚ್ಛಾದಿತ ಪರ್ವತಗಳು ಮತ್ತು ಮಧ್ಯದಲ್ಲಿ ಆಧುನಿಕ ನಗರ. ಸಂಜೆಯ ಕೆಂಬಣ್ಣದ ಸೂರ್ಯಾಸ್ತವನ್ನು ಇಲ್ಲಿಂದ ನೋಡುವುದು ರಮಣೀಯ ಅನುಭವ.

ಲುಕ್‌ಔಟ್‌ನಿಂದ ಕೆಳಗಿಳಿದು ಹತ್ತು ನಿಮಿಷ ನಡೆದರೆ ನಾವು ವ್ಯಾಂಕೋವರ್ ನಗರದ ಹೆಗ್ಗುರುತಾಗಿರುವ ‘ಕೆನಡಾ ಪ್ಲೇಸ್’ ತಲಪುತ್ತೇವೆ. ಇಲ್ಲಿ ಅಪೂರ್ವವಾದ ‘ಫ್ಲೈ ಓವರ್ ಕೆನಡಾ’ ಎಂಬ ವರ್ಚುಯಲ್ ಫ್ಲೈಟ್ ಸಿಮ್ಯುಲೇಟರ್‌ನಲ್ಲಿ ಇಡೀ ಕೆನಡಾ ದೇಶದ ಸುಂದರ ತಾಣಗಳಲ್ಲಿ ಹಾರಾಡುವ ರೋಮಾಂಚಕ ಅನುಭವವನ್ನು ಪಡೆಯಬಹುದು.

ಇದನ್ನೂ ಓದಿ: ಮಕಾವ್‌ನಲ್ಲಿ ವಿದೇಶಿ ಅದ್ಭುತಗಳ ದಿಖಾವಾ ಇದೆ

ಇಲ್ಲಿಂದ ಮುಂದೆ ಸಿಟಿ ಬಸ್‌ ಅಥವಾ ಸ್ಕೈಟ್ರೈನ್ ಮೂಲಕ ‘ಫಾಲ್ಸ್ ಕ್ರೀಕ್’ ತೀರವನ್ನು ತಲುಪಿದರೆ ಅಲ್ಲಿ ನಮ್ಮನ್ನು ಸ್ವಾಗತಿಸುವುದು ಬಣ್ಣಬಣ್ಣದ ಆಕರ್ಷಕ ಪುಟಾಣಿ ದೋಣಿಗಳು. ಇವುಗಳನ್ನು ‘ವಾಟರ್ ಟ್ಯಾಕ್ಸಿ’ ಅಥವಾ ‘ಅಕ್ವಾ ಬಸ್’ ಎಂದು ಕರೆಯುತ್ತಾರೆ. ವ್ಯಾಂಕೋವರ್ ನಗರದ ಈ ಜಲಸಂಚಾರವು ಪ್ರವಾಸಿಗರಿಗೆ ಅಚ್ಚುಮೆಚ್ಚು. ನೀಲಿ ನೀರಿನ ಮೇಲೆ ತೇಲುತ್ತಾ, ಸುಂದರವಾದ ಸೇತುವೆಗಳ ಅಡಿಯಿಂದ ಸಾಗುವ ಈ ಪುಟ್ಟ ಪುಟ್ಟ ಬೋಟ್‌ಗಳು ನಗರದ ಗಗನಚುಂಬಿ ಕಟ್ಟಡಗಳ ಸುಂದರ ನೋಟವನ್ನು ತೋರಿಸುತ್ತವೆ. ದೋಣಿ ನೀರಿನ ಮೇಲೆ ಸಾಗುವಾಗ ನಗರದ ಗಗನಚುಂಬಿ ಕಟ್ಟಡಗಳು ನೀರಿನಲ್ಲಿ ಪ್ರತಿಫಲಿಸುವುದು ಅದ್ಭುತವಾಗಿ ಕಾಣುತ್ತದೆ. ಕಿಟಕಿಯ ಪಕ್ಕ ಕುಳಿತು ಸಮುದ್ರದ ತಂಗಾಳಿಯನ್ನು ಸವಿಯುತ್ತಾ ಸಾಗುವ ಆ 10-15 ನಿಮಿಷಗಳ ಪ್ರಯಾಣವು ಒಂದು ಮಿನಿ ಕ್ರೂಸ್‌ನಲ್ಲಿ ಹೋದಂಥ ಅನುಭವ ನೀಡುತ್ತದೆ. ಈ ಟ್ಯಾಕ್ಸಿಗಳು ಪ್ರತಿ ಕೆಲವು ನಿಮಿಷಕ್ಕೊಮ್ಮೆ ಲಭ್ಯವಿರುವುದರಿಂದ ಸಂಚಾರವು ಸುಲಭವೆನಿಸುತ್ತದೆ.

ದೋಣಿಯಿಂದ ಇಳಿಯುತ್ತಿದ್ದಂತೆ ವ್ಯಾಂಕೋವರ್ ನ ಜನಜಂಗುಳಿಯ ಸಂಭ್ರಮದ ತಾಣ ‘ಗ್ರ್ಯಾನ್ವಿಲ್ ಐಲ್ಯಾಂಡ್’ ನಮ್ಮನ್ನು ಸ್ವಾಗತಿಸುತ್ತದೆ. ಒಂದು ಕಾಲಕ್ಕೆ ಕೈಗಾರಿಕಾ ಪ್ರದೇಶವಾಗಿದ್ದ ಈ ದ್ವೀಪವು ಇಂದು ಕೆನಡಾದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ಇದು ಕಲೆ, ಸಂಸ್ಕೃತಿ ಮತ್ತು ವಿವಿಧ ಬಗೆಯ ಆಹಾರದ ಅಂಗಡಿಗಳ ಸಂಗಮ. ಇಲ್ಲಿನ ಪಬ್ಲಿಕ್ ಮಾರ್ಕೆಟ್‌ನಲ್ಲಿ ಸಿಗುವ ತಾಜಾ ಹಣ್ಣುಗಳು, ಬಿಸಿಬಿಸಿ ತಿಂಡಿಗಳು ಮತ್ತು ಬೀದಿ ಕಲಾವಿದರ ಸಂಗೀತ ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಇಲ್ಲಿನ ಸಣ್ಣ ಸಣ್ಣ ಆರ್ಟ್ ಸ್ಟುಡಿಯೋಗಳಲ್ಲಿ ಕಲಾವಿದರು ಮಣ್ಣಿನ ಪಾತ್ರೆಗಳಿಗೆ ಬಣ್ಣ ಹಚ್ಚುವುದು ಅಥವಾ ಗಾಜಿನ ಕಲಾಕೃತಿಗಳನ್ನು ಕೆತ್ತುವುದನ್ನು ನಾವು ಕಣ್ಣಾರೆ ನೋಡಬಹುದು. ದ್ವೀಪದ ಸುತ್ತಲೂ ಕಾಣುವ ನೀಲಿ ನೀರು ಮತ್ತು ಅಲ್ಲಲ್ಲಿ ಸಂಗೀತ ನುಡಿಸುವ ಬೀದಿ ಕಲಾವಿದರಿಂದ(Buskers) ಇಲ್ಲಿನ ಪರಿಸರ ವಿಶೇಷವಾಗಿರುತ್ತದೆ.

Untitled Design (7)

ಇತಿಹಾಸವನ್ನು ಜತನದಿಂದ ಕಾಯ್ದುಕೊಂಡಿರುವ ಗ್ಯಾಸ್‌ಟೌನ್, ಆಕಾಶದೆತ್ತರಕ್ಕೆ ಮುಟ್ಟುವ ಲುಕ್‌ಔಟ್, ಆಧುನಿಕತೆಯ ‘ಫ್ಲೈ ಓವರ್ ಕೆನಡಾ’ ಮತ್ತು ಕಲಾತ್ಮಕ ಗ್ರ್ಯಾನ್ವಿಲ್ಲೆ ದ್ವೀಪಗಳಂತಹ ನಯನಮನೋಹರ ತಾಣಗಳು ವ್ಯಾಂಕೂವರ್‌ನ ಪ್ರವಾಸವನ್ನು ಮತ್ತಷ್ಟು ಸಮೃದ್ಧಗೊಳಿಸುತ್ತವೆ ಮತ್ತು ಪ್ರತಿಯೊಬ್ಬ ಪ್ರವಾಸಿಯ ಮನದಲ್ಲಿ ಮರೆಯಲಾಗದ ಸುಂದರ ನೆನಪುಗಳನ್ನು ತುಂಬುತ್ತವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...