ಇಲ್ಲಿ ದೆವ್ವ ಬಂದು ಕ್ಯಾಂಡಿ ಕೇಳುತ್ತೆ!
ಕಂಟ್ರಿಸೈಡ್ ಎಂದು ಇವರು ಕರೆಯುವ ಹಳ್ಳಿಯೂರಿನ ಹೊಲ ಗದ್ದೆಗಳಲ್ಲಿ ಭರ್ಜರಿ ಕುಂಬಳಕಾಯಿ ಫಸಲು ಇರುವ ಸಮಯ ಇದು. ಈ ಸಮಯದಲ್ಲಿ 'ಕೆಟ್ಟ' ಪ್ರೇತಗಳು ಬಂದು ಕಾಡದಂತೆ ಮಾಡಲು ರೈತರೇ ಭೂತಗಳ ಹಾಗೆ ಚಿತ್ರ-ವಿಚಿತ್ರ ವೇಷ ತೊಟ್ಟು ರಾತ್ರಿ ಇಡೀ ತಂದು ಕುಡಿದು ಹಬ್ಬ ಮಾಡುತ್ತಿದ್ದರಂತೆ.
- ಜಯಶ್ರೀ ದೇಶಪಾಂಡೆ
ʻಭೂತಗೀತಗಳೇ? ಹೇ ಹೇ ಅದೆಲ್ಲ ನಾನು ನಂಬಲ್ಲʼ ಎಂದು ನಕ್ಕಳು ನನ್ನ ಮೊಮ್ಮಗಳು. ಮತ್ತೆ ನೀನೇ ಮಾಂತ್ರಿಕಳಂತೆ ಡ್ರೆಸ್ ಹಾಕಿ ಹೊರಟಿದ್ದೀಯಲ್ಲ ದೊಡ್ಡ ಕುಂಬಳಕಾಯಿ ತೊಗೊಂಡು ಕ್ಯಾಂಡಿ ತುಂಬಿಸೋಕೆ? ಎಂದು ಅವಳನ್ನು ನಾನು ಕೆಣಕಿದೆ. ಅದಾ? ಕ್ಯಾಂಡಿ ಅಂದರೆ ಫನ್ ಅಲ್ವಾ? ಎಂದು ಹೇಳಿ, ನನ್ನ ಕೈಗೊಂದು ಚಾಕೊಲೇಟ್ ಇಟ್ಟು ಹೊರಗೆ ಓಡಿದಳು.
ಮನೆಯ ಹೊರಗೆ ಇವರಂಥವೇ ಭೂತ, ಪ್ರೇತ, ಶಾಕಿನಿ, ಡಾಕಿನಿ, ಕಳ್ಳ, ಅಸ್ಥಿಪಂಜರ, ಪೈರೇಟು, ಮಾಂತ್ರಿಕ, ಡೀಮನ್ನು, ಜತೆಗೆ ಏಂಜಲ್ ಕೂಡ ಇದ್ದವು. ಅದು ಯಾರು ಯಾರೆಂದು ಗುರುತು ಕೂಡ ಸಿಕ್ಕದ ದೊಡ್ಡ ಗುಂಪು. ಕ್ಯಾಂಡಿ ಸಂಗ್ರಹದ ಸ್ಪರ್ಧೆ. ಅದರಲ್ಲಿ ಬರೀ ಕ್ಯಾಂಡಿ ಅಲ್ಲ ಇನ್ನೂ ಏನೇನೋ ಮಕ್ಕಳ ಇಷ್ಟದ ಆಟಿಕೆಗಳೂ ಬೀಳುತ್ತವೆ. ಸರಿಯಪ್ಪ, ಮೊದಲು ನನಗೆ ಈ ಹ್ಯಾಲೋವೀನ್‌ನ ಪೂರ್ಣಸಂಗತಿ ಹೇಳಿಹೋಗು ಎಂದು ಹೇಳಿದೆ ಅವಳಿಗೆ.
ನನ್ನ ಕೈಗೊಂದು ಪುಸ್ತಕ ಹಿಡಿಸಿ ಇಲ್ಲಿದೆ ಓದು ಜೀ… ಹಿಯರ್ ಯೂ ಗೋ ಎಂದು ಕಾಲು ಕಿತ್ತಳು. ಅರೇ ಇದೆಷ್ಟು ಸ್ವಾರಸ್ಯಕರ ಅನಿಸತೊಡಗಿ ಓದಿಕೊಂಡೆ.

'ಇಸವಿ 1920 – 1930ರ ಆಸುಪಾಸು ಹ್ಯಾಲೋವೀನ್ ಬರೀ ನಂಬಿಕೆಯ ಆಚರಣೆ ಆಗಿತ್ತು. ಸತ್ತು ಹೋಗಿರುವ ಹಿರಿ, ಕಿರಿಯರು ಪ್ರೇತಗಳಾಗಿ ಭೂಮಿಗೆ ಬಂದು ಮನೆಯ ಸುತ್ತ ಹಾರಾಡುತ್ತವೆ ಎಂದು ನಂಬಿದ ಪಾಶ್ಚಿಮಾತ್ಯ ದೇಶಗಳಲ್ಲಿ ಮುಖ್ಯವಾಗಿ ಉತ್ತರ ಅಮೆರಿಕ, ಕೆನಡಾ, ಐರ್ಲೆಂಡ್ ಮತ್ತು ದಕ್ಷಿಣ ಅಮೆರಿಕದ ಕೆಲವೇ ಕಡೆ ಪಿತೃಗಳನ್ನು ತೃಪ್ತಿ ಪಡಿಸುವ ಆಚರಣೆಯಾಗಿ ನಡೆಸಲಾಗುತ್ತಿತ್ತು. ಅವರಿಗಾಗಿ ಕೊರೆದ ಕುಂಬಳಕಾಯಿ ಹೊಟ್ಟೆಯೊಳಗೆ ದೀಪ, ಸಿಹಿ, ಚಾಕೋಲೇಟು ಕುಕ್ಕಿಗಳನ್ನಿಟ್ಟು ಆಹಾರ ಉಣಿಸುವ ಪದ್ದತಿ ಅದು. ಇದು ನಮ್ಮಲ್ಲಿನ ಪಿತೃ ಪಕ್ಷಾಚರಣೆ, ಶ್ರಾದ್ಧಗಳಂತೆ ಅವರ ಆಚರಣಾ ಶೈಲಿ ಎನ್ನಬಹುದು.
ಹಾಲೋಡ್ ಇವನಿಂಗ್ ಅಥವಾ ಹೋಲಿ ಇವನಿಂಗ್ ಕ್ರಿಶ್ಚಿಯನ್ ಮೂಲದ ಈ ಹೆಸರಿಗೆ ಕಾರಣ,'ಸೆಲ್ಟಿಕ್ ಪೇಗನಿಸಮಂ ರೀತಿಯಲ್ಲಿ ಸಾಮ್ಹೇನ್ ಅಥವಾ ಸಮ್ಮರ್ ಮುಗಿದು ಚಳಿ ಶುರುವಾಗುವಾಗ ಪಿತೃಗಳು ಭೂಮಿಗೆ ಬರುವರಂತೆ, ಬಂದು ಮನೆಯ ಸುತ್ತ ಸುತ್ತುವರಂತೆ, ಇನ್ನು ಮಧ್ಯಯುಗದಲ್ಲಿ ಕೆಲವು ಬಡವರು ಭೂತಗಳಂತೆ ಡ್ರೆಸ್ ಮಾಡಿಕೊಂಡು ಮನೆಮನೆಗೆ ಹೋಗಿ ನಾನು 'ಪ್ರೇತ, ಪ್ರೇತಕ್ಕೆ ಸಿಹಿ ಕೊಡಿ' ಅಂತ ಬೇಡ್ತಿದ್ದದ್ದು ಮುಂದೆ ಟ್ರಿಕ್ ಆರ್ ಟ್ರೀಟ್‌ನ ರೂಪ ಪಡೆಯಿತು.
ಇಂಥದ್ದೇ ಇನ್ನೊಂದು Trunk or Treat ಕೂಡ ಇದೆ. ಮಕ್ಕಳು ಪಾರ್ಕ್ ಮಾಡಿದ ಕಾರುಗಳ ಬುಡಕ್ಕೆ ಹೋಗಿ ಕೂತು ʻಕ್ಯಾಂಡಿ ಕೊಡಿ ಇಲ್ಲಾಂದ್ರೆ ನಮ್ಮ (ತರಲೆ) ಪ್ರಶ್ನೆಗೆ ಉತ್ತರ ಕೊಡಿʼ ಎಂದು ತರಲೆ ಮಾಡುವುದು.
ಸೆಲ್ಟಿಕ್ ಸೆಮ್ಹೇನ್ ಹ್ಯಾಲೋವೀನ್‌ನಲ್ಲಿ ಹಳ್ಳಿಗಳೇ ಮುಖ್ಯ. ಕಂಟ್ರಿಸೈಡ್ ಎಂದು ಇವರು ಕರೆಯುವ ಹಳ್ಳಿಯೂರಿನ ಹೊಲ ಗದ್ದೆಗಳಲ್ಲಿ ಭರ್ಜರಿ ಕುಂಬಳಕಾಯಿ ಫಸಲು ಇರುವ ಸಮಯ ಇದು. ಈ ಸಮಯದಲ್ಲಿ 'ಕೆಟ್ಟ' ಪ್ರೇತಗಳು ಬಂದು ಕಾಡದಂತೆ ಮಾಡಲು ರೈತರೇ ಭೂತಗಳ ಹಾಗೆ ಚಿತ್ರ-ವಿಚಿತ್ರ ವೇಷ ತೊಟ್ಟು ರಾತ್ರಿ ಇಡೀ ತಂದು ಕುಡಿದು ಹಬ್ಬ ಮಾಡುತ್ತಿದ್ದರಂತೆ. ಈಗಲೂ ದೊಡ್ಡವರು, ಚಿಕ್ಕವರೆನ್ನದೆ ಭೂತವೇಷ ಹಾಕಿ ಕುಂಬಳಕಾಯಿ ಪಿಕ್ ಮಾಡಲು ಹೋಗುವುದು ಇನ್ನೊಂದು ಜನಪ್ರಿಯ ಪದ್ಧತಿ. ಅದಕ್ಕೇ ಊರು, ಕೇರಿ, ನಗರ, ಶಹರಗಳೆಲ್ಲ ಈ ಸಮಯ ಭೂತವೇಷಧಾರಿಗಳಿಂದ ತುಂಬಿ ಹೋಗಿರುತ್ತೆ.

9ನೇ ಶತಮಾನದಿಂದ, ಕ್ರಿಶ್ಚಿಯನ್ ಧರ್ಮವು ಸೆಲ್ಟಿಕ್ ಪ್ರದೇಶಗಳಲ್ಲಿ ಹಳೆಯ ಪೇಗನ್ ಆಚರಣೆಗಳ ಮೇಲೆ ತನ್ನ ಪ್ರಭಾವದಿಂದ ಅವನ್ನೆಲ್ಲ ಬೇರೆಡೆ ತಳ್ಳಲು ಪ್ರಾರಂಭಿಸಿತೆನ್ನುತ್ತಾರೆ.
6ನೇ ಪೋಪ್ ಗ್ರೆಗೊರಿ ಮಾಡಿದ ಆಜ್ಞೆಯ ಕಾರಣಕ್ಕೆ, 'ಆಲ್ ಹ್ಯಾಲೋಸ್ ಡೇ' ಅನ್ನು ನವೆಂಬರ್ 1ರಂದು ಅಂದರೆ ಸೆಲ್ಟಿಕ್‌ನ ಹೊಸ ವರ್ಷದ ಮೊದಲ ದಿನ ಮಾಡಬೇಕೆಂದು ಖಚಿತವಾಗಿತ್ತು. ಆದರೂ ಪೋಪ್ ಉಳಿದೆಲ್ಲಾ ಕ್ರಿಶ್ಚಿಯನ್ ಸಂತರ ಗೌರವಾರ್ಥವಾಗಿ ಈ ಕಾರ್ಯಕ್ರಮಮಕ್ಕೆ 'ಆಲ್ ಸೇಂಟ್ಸ್ ಡೇ' ಎಂದು ಕರೆದು ಹೊಸ ಹೆಸರಿಟ್ಟರು. 'ಆಲ್ ಸೇಂಟ್ಸ್ ಡೇ' ಮತ್ತು 'ಆಲ್ ಹ್ಯಾಲೋಸ್ ಡೇ' ಎಂಬ ಶಬ್ದಗಳು ಇತಿಹಾಸದುದ್ದಕ್ಕೂ ಪರ್ಯಾಯವಾಗಿ ಬಳಸಲ್ಪಟ್ಟಿವೆ. ಈ ತಾರೀಕುಗಳ ಹಿಂದಿನ ದಿನವನ್ನೇ 'ಹ್ಯಾಲೋವೀನ್' ಎಂದು ಕರೆಯಲಾಗುತ್ತಿತ್ತು. ಹ್ಯಾಲೋಸ್ ಇವ್‌ನಿಂಗ್‌ನ ಸಂಕ್ಷಿಪ್ತ ರೂಪ ಇದೇ.
ಕಳೆದ ಶತಮಾನದಲ್ಲಿ ಪ್ರಪಂಚವಿಡೀ ಆಚರಿಸುವ ಶ್ರದ್ಧಾಳುಗಳಿಗೆ ಘೋಷಣೆಯಾಗಿರುವ ಈ ರಜೆಗೆ, 'ಹ್ಯಾಲೋವೀನ್ ರಜೆ' ಎಂದೇ ಸರಳವಾಗಿ ಕರೆದರು. ಇದನ್ನು ಅಕ್ಟೋಬರ್ 31ರಂದು ಹ್ಯಾಲೋಸ್ ದಿನದ ಮೊದಲಿನ ದಿನದ 'ಈವ್' ಇರುವಾಗ ಆಚರಿಸಲಾಗುತ್ತದೆ.
ಪುಸ್ತಕ ತುಂಬ ದೊಡ್ಡದಿತ್ತು. ಎಲ್ಲಾ ಓದಿ ತಲೆ ಭಾರ ಅಗುವುದು ಬೇಡ ಅಂತ ಎತ್ತಿಟ್ಟೆ. ಈಗ ಅದೇ ಪ್ರಶ್ನೆ, ನಮ್ಮಲ್ಲಿಯೂ ಈಗೀಗ ಹ್ಯಾಲೋವೀನ್ ಆಚರಣೆ ಮಾಡುತ್ತಿದ್ದಾರೆ. ಇದು ಸರಿಯೋ ತಪ್ಪೋ? ಅಥವಾ ಬರೀ ಭೂತವೇಷ, ವಿಚಿತ್ರ ವೇಷ ಹಾಕಿ ಕ್ಯಾಂಡಿ ಕೇಳುತ್ತ ಮಕ್ಕಳು ಮನೆ ಮನೆ ತಿರುಗಿದರೆ ಪರವಾಗಿಲ್ಲವೇ? 'ಪ್ರೇತಪ್ರೀತ್ಯರ್ಥ ಭೋಜನ' ನಮ್ಮಲ್ಲೂ ಬೇರೆಯೇ ಸಾಂಪ್ರದಾಯಿಕ ವಿಧದಲ್ಲಿ ಇದೆ. ಸಂಸ್ಕೃತಿಗಳು ವಿಭಿನ್ನವಾದರೂ ಆಚರಣೆಗಳಲ್ಲಿ ಸಾಮ್ಯತೆಯಿರುವುದೇ ಮನುಕುಲದ ವೈಶಿಷ್ಟ್ಯ.