• ಬಂಡು ಕಟ್ಟಿ

ಬಾಲಿ ದ್ವೀಪವು ಕೇವಲ ದೇವಾಲಯಗಳಿಗೆ ಮಾತ್ರವಲ್ಲದೇ ಮನೋಲ್ಲಾಸ, ಕ್ರೀಡೆ, ಸಾಹಸಮಯ ಸ್ಥಳಗಳಿಗೂ ಪ್ರಸಿದ್ಧವಾಗಿದೆ. ಉತ್ತಮ ಪ್ರವಾಸಿ ತಾಣಗಳು ರೂಪುಗೊಳ್ಳಲು ಇಲ್ಲಿ ನಿಸರ್ಗವು ಅನುಪಮ ಕೊಡುಗೆಗಳನ್ನು ನೀಡಿದೆ. ದಟ್ಟ ಅರಣ್ಯಗಳು, ಹಲವಾರು ಸರೋವರಗಳು, ಅಕ್ಕಿ ಬೆಳೆಯುವ ಹಸಿರು ಟೆರೇಸ್ಗಳು ಪ್ರವಾಸಿಗರ ಮನಸೂರೆಗೊಳ್ಳುತ್ತವೆ. ಉಬುಡ್ ಹಾಗೂ ಕುಟಾಗಳಲ್ಲಿ ಸುಲಭ ಬೆಲೆಗೆ ಉತ್ತಮ ವಿಲ್ಲಾಗಳು ರೆಸಾರ್ಟ್‌ಗಳನ್ನು ಪಡೆಯಬಹುದು. ರೆಸಾರ್ಟ್‌ಗಳಲ್ಲಿ ಟು ವ್ಹೀಲರ್ ಬಾಡಿಗೆಗೆ ನೀಡುವ ವ್ಯವಸ್ಥೆ ಇರುತ್ತದೆ.

ಇದನ್ನೂ ಓದಿ: ನೀರಿನ ಮಟ್ಟ ಏರಿದರೆ ಮೇಲೇಳುವ ಮನೆಗಳು

ಜೋಕಾಲಿ ಜೀಕೋಣ ಬಾ

ಉಬುಡ್ ಹತ್ತಿರವಿರುವ ಸಿಡಾನ್ ಗ್ರಾಮದ ಹತ್ತಿರವಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಉಯ್ಯಾಲೆಯ ವ್ಯವಸ್ಥೆಯಿದೆ. ಪ್ರವೇಶಕ್ಕೆ ಒಂದು ಜೋಡಿಗೆ 40 ಡಾಲರ್ ಟಿಕೆಟ್ ಬೆಲೆಯಿದೆ. ಮಹಿಳೆಯರಿಗೆ ತೊಟ್ಟುಕೊಳ್ಳಲು ಗಾಢ ಬಣ್ಣದ ಉದ್ದನೆಯ ವಸ್ತ್ರಗಳು ಬಾಡಿಗೆಗೆ ಸಿಗುತ್ತವೆ. ಅವುಗಳನ್ನು ತೊಟ್ಟುಕೊಂಡು ಜೋಕಾಲಿ ಜೀಕಿದರೆ ಭೂಮ್ಯಾಕಾಶವನ್ನು ವ್ಯಾಪಿಸಬಹುದು! ಇಲ್ಲಿ ರುಚಿಯಾದ ಬಾಲಿ ಊಟವನ್ನು ಕಾಂಪ್ಲಿಮೆಂಟರಿಯಾಗಿ ಕೊಡುತ್ತಾರೆ. ವಯಸ್ಸಿಗನುಗುಣವಾಗಿ ಹತ್ತಾರು ವೈವಿಧ್ಯಮಯ ಜೋಕಾಲಿಗಳಲ್ಲಿ ನಾವು ವಿಹರಿಸಬಹುದು. ನಮ್ಮ ಮೊಬೈಲ್ ಪಡೆದು ನಂಬಲಾಗದಷ್ಟು ಸುಂದರವಾಗಿರುವ ನಮ್ಮ ಫೊಟೋ ತೆಗೆದುಕೊಡುತ್ತಾರೆ. ಜೀವನದಲ್ಲಿ ಒಮ್ಮೆ ಅನುಭವಿಸಲೇಬೇಕಾದ ರಮ್ಯತಾಣವಿದು.

Untitled Design (33)

ಪವಿತ್ರೀಕರಣ ಸ್ನಾನ

ಬಾಲಿಯ ಕೆಲವು ತೀರ್ಥಕ್ಷೇತ್ರಗಳಲ್ಲಿ ಪವಿತ್ರಸ್ನಾನ ಮಾಡಲು ಅವಕಾಶವಿದೆ. ಇವುಗಳಲ್ಲಿ ತೀರ್ಥ ಎಂಪುಲ್ ತುಂಬಾ ಜನಪ್ರಿಯವಾಗಿದೆ. ಆದರೆ ನಾವು ಹೋದಾಗ ತೀರ್ಥ ಎಂಪುಲ್‌ನಲ್ಲಿ ಒಡಲಾನ್ ವಾರ್ಷಿಕ ಉತ್ಸವ ನಡೆದಿದ್ದರಿಂದ ನಮಗೆ ಪವಿತ್ರಸ್ನಾನಕ್ಕೆ ಅವಕಾಶವಾಗಲಿಲ್ಲ. ನಮ್ಮ ಮನಸನ್ನರಿತ ಡ್ರೈವರ್ ವಾಹ್ಯು ನಮ್ಮನ್ನು ಹತ್ತಿರದಲ್ಲಿದ್ದ ಬುಡುಂಗ್ ಗ್ರಾಮದ ಬೇಜಿ ತೋಟದ ಮನೆಗೆ ಕರೆದೊಯ್ದ. ತೋಟದೊಳಗೆ ಹೋಗುವಾಗಲೇ ನಮ್ಮ ಮನಸು ಅರಳಿತ್ತು. ಪವಿತ್ರೀಕರಣದ ಟಿಕೆಟ್ ಮಾಡಿಸಿದೆವು. ನಮ್ಮ ಸರದಿ ಬರುವವರೆಗೂ ಕೆಫೆಯಲ್ಲಿ ಬಾಲಿ ಸಂಗೀತ ಕೇಳುತ್ತಾ ಕುಳಿತೆವು. 15- 20 ನಿಮಿಷಗಳಲ್ಲಿ ನಮ್ಮ ಸರದಿ ಬಂತು.

ಅಲ್ಲಿ ನಾಲ್ಕು ಸಣ್ಣ ದೊಡ್ಡ ಜಲಪಾತಗಳಿವೆ. ಜಲಪಾತ ತಲುಪುವವರೆಗೆ ಪೂಜೆ ಮಾಡಿಸುತ್ತಾ ಕರೆದೊಯ್ಯುತ್ತಾರೆ. ಮೂರು ಜಲಪಾತಗಳ ಕೆಳಗೆ ನಿಂತು ಸ್ನಾನ ಮಾಡಬೇಕು. ಒಂದರಲ್ಲಿ ಅವರೇ ತಲೆಗೆ ನೀರು ಹಾಕುತ್ತಾರೆ. ಇದು ಹೊಸ ಅನುಭವ ನಮಗೆ. ಉಟ್ಟುಕೊಳ್ಳಲು ಸೆರಾಂಗ್ ಎಂಬ ಮಡಿವಸ್ತ್ರವನ್ನೂ, ಒರೆಸಿಕೊಳ್ಳಲು ಸ್ವಚ್ಛ ಟವೆಲ್‌ಗಳನ್ನೂ ನೀಡುತ್ತಾರೆ. ಬಟ್ಟೆ ಬದಲಾಯಿಸಲು ರೂಮುಗಳಿವೆ. ನಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ಲಾಕರ್ ಕೊಡುತ್ತಾರೆ.

ಉಲುನ್ ಡಾನು ತೇಲುವ ದೇವಸ್ಥಾನ

ದೂರದಿಂದ ನೋಡಿದಾಗ ಈ ದೇವಾಲಯವು ನೀರಿನಲ್ಲಿ ತೇಲುತ್ತಿದೆ ಎಂದು ಭಾಸವಾಗುತ್ತದೆ. ಈ ದೇವಾಲಯ ಸರೋವರದಲ್ಲಿ ದಿವ್ಯತೆಯಿಂದ ಕಂಗೊಳಿಸುತ್ತದೆ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಬಾಲಿ ಜನರು ತುಂಬಾ ಪ್ರಯಾಸಪಡುತ್ತಾರೆ. ಪ್ರಕೃತಿ, ನೀರು, ಅರಣ್ಯಗಳು ಅವರಿಗೆ ಪೂರಕವಾಗಿವೆ. ಈ ಸ್ಥಳವು ಎಂಥವರನ್ನು ಮೈಮರೆಸುತ್ತದೆ. ಫೊಟೋಗಳು ಅದ್ಭುತವಾಗಿ ಮೂಡುತ್ತವೆ. ಇಲ್ಲಿಯ ಬಣ್ಣದ ಚಿತ್ತಾರಗಳು ಮೈಮರೆಸುತ್ತವೆ. ರಾಜ ಮಹಾರಾಜ ವೇಷಭೂಷಣಗಳೊಂದಿಗೆ ಫೊಟೋ ತೆಗೆಸಿಕೊಳ್ಳಲು ಇಲ್ಲಿ ಅವಕಾಶವಿದೆ.

Untitled Design (35)

ಉಲುವಾಟು ದೇವಸ್ಥಾನ ಹಾಗೂ ಕೆಚಕ್ ನೃತ್ಯ

ಬಾಲಿಯ ದಕ್ಷಿಣ ದಿಕ್ಕಿನ ತುತ್ತತುದಿಗೆ ಹೋದರೆ ನಮಗೆ ಉಲುವಾಟು ದೇವಾಲಯ ಸಿಗುತ್ತದೆ. ಎತ್ತರದ ಬೆಟ್ಟದಿಂದ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡುವುದೇ ಒಂದು ಮಜ. ಇಲ್ಲಿ ಇಂಡೋನೇಶಿಯನ್ ಕೋತಿಗಳು ವಿಪರೀತ ಇವೆ. ಒಂದು ಕೋತಿಯು ನನ್ನ ಐಫೋನ್ ಕಸಿದುಕೊಳ್ಳಲು ತುಂಬಾ ಪ್ರಯತ್ನಿಸಿತು. ಆದರೆ ನಾನು ತುಂಬಾ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಬಚಾವಾದೆ.

ದೇವಾಲಯದ ಆವರಣದಲ್ಲಿರುವ ಆ್ಯಂಫಿಥೇಟರ್ನಲ್ಲಿ ಪ್ರತಿದಿನವೂ ರಾಮಾಯಾಣ ಪ್ರಸಂಗದ ಎರಡು ಶೋ ನಡೆಯುತ್ತವೆ. ಇದನ್ನು ಅವರು ಕೆಚಕ್ ಡಾನ್ಸ್‌ ಎನ್ನುತ್ತಾರೆ. ಹಿನ್ನೆಲೆ ಸಂಗೀತವಿಲ್ಲ, ಸಹ ಕಲಾವಿದರು ಸುತ್ತಲೂ ಕುಳಿತು ಕೆಚ್ ಕೆಚ್ ಎಂದು ಲಯಬದ್ಧವಾಗಿ ಸದ್ದು ಮಾಡುತ್ತಾರೆ. ರಾಮಾಯಣದ ಬಗ್ಗೆ ಏನೂ ಗೊತ್ತಿರದ ವಿದೇಶಿಯರು ಕೂಡ ಇದನ್ನು ಆಸಕ್ತಿಯಿಂದ ನೋಡುತ್ತಾರೆ. ಹನುಮಂತ ಬಂದ ಕೂಡಲೇ ಕೇಕೆ ಹಾಕಿ ಸಂಭ್ರಮಿಸುತ್ತಾರೆ. ಜಟಾಯು ಸಾಯುವಾಗ ಕಣ್ಣೀರು ಸುರಿಸುತ್ತಾರೆ. ಇಡೀ ಕಥಾನಕವು ಹೃದಯಸ್ಪರ್ಶಿಯಾಗಿರುತ್ತದೆ.

ತಮನ್ ತೀರ್ಥ ಗಂಗಾ

ತಮನ್ ಎಂದರೆ ಉದ್ಯಾನವನ. ಇದು ನೈಸರ್ಗಿಕ ನೀರಿನ ಸೆಲೆಯಿಂದ ಉಂಟಾಗಿರುವ ಸರೋವರ. ಇದನ್ನು ನಾಲ್ಕಾರು ವಿಭಾಗಗಳನ್ನಾಗಿ ಮಾಡಿ, ಮೀನುಗಳನ್ನು ಸಾಕಿ ರಮ್ಯ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಲಾಗಿದೆ. ಬೋಟಿಂಗ್ ವ್ಯವಸ್ಥೆ ಕೂಡ ಇದೆ. ನೀರು ಅಂಥ ಆಳವೇನೂ ಇಲ್ಲ. ಹೆಚ್ಚಿನ ನೀರು ಗದ್ದೆಗಳಿಗೆ ಹರಿದು ಹೋಗುವಂತೆ ಮಾಡಲಾಗಿದೆ. ಆವರಣದಲ್ಲಿ ಮ್ಯೂಜಿಯಂ ಕೂಡ ಇದೆ. ಇಲ್ಲಿ ನೂರಾರು ಫೊಟೋ ತೆಗೆಬಹುದಾದಷ್ಟು ಸುಂದರ ವಾತಾವರಣವಿದೆ. ನವವಿವಾಹಿತರಿಗೆ ಇದು ಸ್ವರ್ಗವಿದ್ದಂತೆ. ನೀರಿನ ನಡುವೆ ಜೋಡಿಸಿದ ಕಲ್ಲುಗಳ ಮೇಲೆ ಓಡಾಡಬಹುದು.

Untitled Design (34)

ಬಾಲಿಯಲ್ಲಿ ಹೆಜ್ಜೆ ಹೆಜ್ಜೆಗೂ ಪ್ರೇಕ್ಷಣೀಯ ಸ್ಥಳಗಳಿವೆ. ಗೋವಾ ಗಜ ಹಾಗೂ ಸುಖವಾಟಿ ಬ್ರಹ್ಮ ವಿಷ್ಣು ದೇವಾಲಯಗಳ ವಾತಾವರಣ ನಮಗೆ ತುಂಬಾ ಇಷ್ಟವಾಯಿತು. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿಯ ಜನರ ಪ್ರಾಮಾಣಿಕತೆ ಹಾಗೂ ಸರಳ ಸ್ವಭಾವಗಳು ಮೆಚ್ಚುಗೆಯಾಗುತ್ತವೆ. ಬೆಂಗಳೂರಿನಿಂದ ಡೆನೆಪಸಾರ್ ಬಾಲಿಗೆ ನೇರವಾಗಿ ವಿಮಾನಗಳು ಹೋಗುತ್ತವೆ. ನಿಮ್ಮಲ್ಲಿ ಇತ್ತೀಚಿನ ಪಾಸಪೋರ್ಟ್‌ ಇದ್ದರೆ ಒಂದೂವರೆ ನಿಮಿಷದಲ್ಲಿ ಅಟೊ ಇಮಿಗ್ರೇಶನ್ ಮುಗಿಯುತ್ತದೆ. ಏರಪೋರ್ಟ್‌ ಹೊರಗೆ ಪ್ರವಾಸಿಗರಿಗೆ ಕೈಗೆಟುಕುವ ಬೆಲೆಯಲ್ಲಿ ಟ್ಯಾಕ್ಸಿಗಳಿರುತ್ತವೆ. ಒಂದು ವಾರದ ಬಾಲಿ ಪ್ರವಾಸವು ರೋಚಕ ಅನುಭವ ನೀಡುತ್ತದೆ.

ಮಾಹಿತಿ ಪೆಟ್ಟಿಗೆ

  • ಬಾಲಿಯಲ್ಲಿ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಇಲ್ಲದ್ದರಿಂದ ಯಾರೂ ಡ್ರೈವಿಂಗ್ ಲೈಸೆನ್ಸ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
  • ದೇವಾಲಯಗಳನ್ನು ಪ್ರವೇಶಿಸಬೇಕಾದರೆ ಸೆರಾಂಗ್ ಉಟ್ಟುಕೊಳ್ಳಬೇಕು.
  • ಬಾಲಿಯ ಎಲ್ಲ ಸ್ಥಳಗಳಲ್ಲಿ ಪ್ರವಾಸಿಗರಿಗೆ ಸ್ವಚ್ಛ ಟಾಯ್ಲೆಟ್ ವ್ಯವಸ್ಥೆಗಳಿವೆ. ಕುಡಿಯುವ ನೀರಿನ ವ್ಯವಸ್ಥೆಯೂ ಇವೆ.