ಭೂ ಲೋಕದಲ್ಲೊಂದು ಹೂ ಲೋಕ
ವಿಶಾಲ ಅಮೆರಿಕದ ಒಂದು ಭಾಗದಲ್ಲಿ ಹಾಲೆಂಡ್ ದೇಶದಿಂದ ಬಂದವರು ತಮ್ಮ ಊರಿನ ಪ್ರತಿ ಕೃತಿಯನ್ನು ಮಾಡಿದ್ದಾರೆ; ಪ್ರತಿ ವರ್ಷದ ಏಪ್ರಿಲ್ ನಲ್ಲಿ ಲಕ್ಷಾಂತರ ಟ್ಯುಲಿಪ್ ಹೂವುಗಳನ್ನು ಬೆಳೆಸಿ ಟ್ಯುಲಿಪ್ ಹಬ್ಬವನ್ನು ಮಾಡುತ್ತಿದ್ದಾರೆ. ಅದನ್ನು ಕಂಡ ನನಗನಿಸಿದ್ದೇನೆಂದರೆ ನಮ್ಮ ಕರ್ನಾಟಕದವರು ಅಮೆರಿಕದಲ್ಲಿ ಪುಟಾಣಿ ಕನ್ನಡ ನಾಡನ್ನು ಯಾಕೆ ಮಾಡಬಾರದು ಎಂದು!
- ಶಶಿಧರ ಹಾಲಾಡಿ
ನಾವು ಅಮೆರಿಕಕ್ಕೆ ಹೋದಾಗ, ಅಲ್ಲಿನವರ ಲೆಕ್ಕದಲ್ಲಿ ಬೇಸಗೆ ಆರಂಭವಾಗಿದ್ದರೂ, ನಮಗೆ, ಅಂದರೆ ಕರ್ನಾಟಕದಿಂದ ಹೋದವರಿಗೆ ಚಳಿ ಎಂದೇ ಹೇಳಬಹುದು. ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳು; ಸಾಕಷ್ಟು ಸೆಕೆ ಇರುವ ವಾತಾವರಣ. ವಿಮಾನ ಏರಿ, ಸುಮಾರು 21 ಗಂಟೆ ಪ್ರಯಾಣ ಮಾಡಿ, ಅಮೆರಿಕದ ಫಾರ್ಮಿಂಗ್‌ಟನ್ ಹಿಲ್ ಎಂಬ ಪಟ್ಟಣಕ್ಕೆ ಹೋದಾಗ, ಮಧ್ಯಾಹ್ನದ 3 ಗಂಟೆ. ವಿಮಾನವಿಳಿದು, ಮನೆಗೆ ಹೋಗಿ ಬಿಸಿಬಿಸಿ ನೀರು ಸ್ನಾನ ಮಾಡಿ ಹೊರಗೆ ಬಂದ ತಕ್ಷಣ, ನನಗೆ ಚಳಿ ಶುರುವಾಯಿತು! `"ನೀವು ಸುಡು ಸುಡು ನೀರನ್ನೇ ಸ್ನಾನ ಮಾಡಬೇಕು. ಇಲ್ಲವಾದರೆ ಚಳಿಯಾಗುತ್ತೆ" ಎಂದಳು ಮಗಳು, ನನ್ನ ಪಿಕಲಾಟ ನೋಡಿ. ತಕ್ಷಣ ಸ್ವೆಟರ್ ಹಾಕಿಕೊಂಡು, ಊಟಕ್ಕೆ ಕುಳಿತೆ! ಆ ರಾತ್ರಿ ಅಲ್ಲಿನ ತಾಪಮಾನ ಸುಮಾರು 8 ಡಿಗ್ರಿ. ನಮಗೆಲ್ಲಾ ಚಳಿ ಎನಿಸುವ ವಾತಾವರಣ. ಅಲ್ಲಿನ ಎಲ್ಲಾ ಮನೆಗಳಲ್ಲಿದ್ದಂತೆ, ಆಟೊಮ್ಯಾಟಿಕ್ ಹೀಟರ್‌ನ ಮೂಲಕ ಮನೆಯೊಳಗಿನ ತಾಪಮಾನವನ್ನು 20ಕ್ಕೆ ಸೆಟ್ ಮಾಡಿ, ಬೆಚ್ಚನೆ ಎರಡು ರಗ್ ಹೊದ್ದು ಮಲಗಿದೆ. ವಿಮಾನದ ಪಯಣದ ಸುಸ್ತು ಸ್ವಲ್ಪ ಕಡಿಮೆಯಾಯಿತು.
ಒಂದೆರಡು ದಿನ ಮನೆಯೊಳಗೇ ಕುಳಿತು, ವಿಶಾಲವಾದ ಗಾಜಿನ ಕಿಟಕಿಯ ಮೂಲಕ, ಮನೆ ಎದುರಿನಲ್ಲೇ ಇದ್ದ ಆಟದ ಮೈದಾನ ನೋಡುತ್ತಾ ಕಾಲ ಕಳೆದೆ. ಆಗ ತಾನೆ ಅಲ್ಲಿನ ಗಿಡ ಮರಗಳು ಸಣ್ಣಗೆ ಚಿಗುರಲು ಆರಂಭಿಸಿದ್ದವು; ಚಳಿಗಾಲಕ್ಕೆಂದು ತಮ್ಮೆಲ್ಲಾ ಎಲೆಗಳನ್ನು ಉದುರಿಸಿಕೊಂಡಿದ್ದರಿಂದ ಸಾಲುಸಾಲು ಬೋಳು ಮರಗಳೇ ಎಲ್ಲಾ ಕಡೆ ಕಾಣಿಸುತ್ತಿದ್ದವು. ನಾವು ಅಲ್ಲಿದ್ದ ಸುಮಾರು 11 ವಾರಗಳಲ್ಲಿ, ಆ ಎಲ್ಲಾ ಮರಗಳು ದಟ್ಟವಾಗಿ ಎಲೆಗಳನ್ನು ತುಂಬಿಕೊಂಡು, ಆ ಪ್ರದೇಶವೆಲ್ಲಾ ಸಣ್ಣ ಕಾಡಿನಂತೆ ಕಾಣತೊಡಗಿತು!

ನಾವು ಈಗ ಜೀವಿಸುತ್ತಿರುವ ಕಾಲವನ್ನು ಆಧುನಿಕ ಎಂದು ಎಷ್ಟೇ ಹೇಳಿದರೂ, ನಮ್ಮ ದೇಶದಲ್ಲೇ ಕಾಲ ಕಳೆದಿದ್ದ ನನ್ನಂಥವರಿಗೆ, ಅಮೆರಿಕವನ್ನು ಮೊದಲ ಬಾರಿ ನೋಡುವುದೆಂದರೆ, ಬೆರಗು ಇದ್ದದ್ದೇ. ಅಲ್ಲಿನ ಎಲ್ಲವೂ ಹೊಸತಾಗಿಯೇ ಕಾಣಿಸುತ್ತದೆ! ಜನ, ಅಂಗಡಿ, ಸೂಪರ್ ಮಾರ್ಕೆಟ್, ಕಾರು, ಬಸ್, ಟ್ಯಾಕ್ಸಿ, ಆಟದ ಮೈದಾನ, ಮಾಲ್, ಪೋಸ್ಟ್ ಆಫೀಸು, ಲೈಬ್ರರಿ ಎಲ್ಲವೂ ವಿಭಿನ್ನ. ನಾವಿದ್ದ ವಸತಿ ಸಂಕೀರ್ಣದಲ್ಲಿ ಸುಮಾರು 800 ಮನೆಗಳಿರಬೇಕು; ಆದರೆ, ಜನರು ಹೊರಗೆ ಬರುವುದನ್ನು ನೋಡುವುದೇ ಅಪರೂಪ! ದೂರ ದೂರ ಮನೆಗಳು, ಪ್ರತಿ ಮನೆಯ ನಡುವೆಯೂ ವಿಶಾಲವಾದ ಮೈದಾನ, ಅದರಲ್ಲಿ ಬೆಳೆದ ಹಸಿರು ಹುಲ್ಲು. ಎಲ್ಲಾ ಮನೆಗಳ ಮುಂದೆ, ಆಚೀಚೆ ಕಾರು ನಿಲ್ಲಿಸಲು, ಪಟ್ಟಿ ಹಾಕಿದ, ಟಾರ್ ಬಳಿದ ಪಾರ್ಕಿಂಗ್ ವ್ಯವಸ್ಥೆ. ಸಾಕಷ್ಟು ಕಾರುಗಳು ಅತ್ತಿತ್ತ ಓಡಾಡುತ್ತಿದ್ದರೂ, ಜನರು ಸ್ವಲ್ಪ ಕಡಿಮೆಯೇ! ಏಪ್ರಿಲ್ ಕಳೆದು ಮೇ ತಿಂಗಳು ಬಂದಂತೆಲ್ಲಾ ಜನರು, ಮಕ್ಕಳು ಹೆಚ್ಚು ಹೆಚ್ಚು ಓಡಾಡುವುದನ್ನು ಕಾಣಬಹುದಿತ್ತಾದರೂ, ನಮ್ಮ ದೇಶದಲ್ಲಿದ್ದಂತೆ ಜನಸಂದಣಿ ಇಲ್ಲವೇ ಇಲ್ಲ!
ಮೊದಲ ಒಂದು ವಾರ ಆ ಪುಟ್ಟ ಪಟ್ಟಣದ ಮಾಲ್‌ಗಳನ್ನು, ಇಂಡಿಯನ್ ಸ್ಟೋರ್‌ಗಳನ್ನು, ಲೈಬ್ರರಿಯನ್ನು ನೋಡಿದೆವು. ಪ್ರತಿ ದಿನ ಸಂಜೆ ಕಾರಿನಲ್ಲಿ ಒಂದು ರೌಂಡ್ ಸುತ್ತಾಟ. ವಾಲ್ ಮಾರ್ಟ್ ಮಾತ್ತು ಕಾಸ್‌ಕೋ (ಕಾಸ್ಟ್ ಕೊ)ಗಳು ಸೂಪರ್‌ಮಾರ್ಕೆಟ್‌ನ ಉತ್ತಮ ಉದಾಹರಣೆ. ಅವೆರಡೂ ಒಂದು ಕಿ.ಮೀ. ಅಂತರದಲ್ಲಿದ್ದುದರಿಂದ, ಆಗಾಗ ಅಲ್ಲಿಗೆ `ನಮ್ಮ ಭೇಟಿ. ಹಾಲು, ತರಕಾರಿ, ಅಕ್ಕಿ, ಬಿಸ್ಕೀಟ್‌ಗಳ ಖರೀದಿ ಅಲ್ಲೇ; ಆ ಅಂಗಡಿಗಳಲ್ಲಿ ಕ್ಯಾಮೆರಾ, ಟೆಂಟ್, ಫರ್ನಿಚರ್‌ಗಳಿಂದ ಹಿಡಿದು, ತರಕಾರಿ, ಗುಂಡುಸೂಜಿ, ಪೆನ್ ಪೆನ್ಸಿಲ್, ಪುಸ್ತಕಗಳು ಎಲ್ಲವೂ ಇರುತ್ತಿದ್ದವು. ಅಮೆರಿಕಗೆ ಹೋದ ಮೊದಲ ಒಂದೆರಡು ವಾರ ಅವುಗಳ ಬೆಲೆಯನ್ನು ನೋಡುವುದೇ ನನ್ನ ಹವ್ಯಾಸ. ಮಾವಿನ ಹಣ್ಣಿಗೆ ಎಷ್ಟು ಡಾಲರ್, ಅದು ರುಪಾಯಿಗೆ ಬದಲಾದಾಗ ಎಷ್ಟಾಗುತ್ತದೆ ಎಂದು ಲೆಕ್ಕ ಹಾಕುವುದು! ಒಂದು ಡಾಲರ್ ಕೊಟ್ಟು ಒಂದು ಮಾವಿನ ಹಣ್ಣು ತಂದು ತಿಂದೆವು; ಆದರೆ, ಅದು ಸ್ವಲ್ಪ ಹುಳಿ, ಒಗರು. ಆ ದೇಶಕ್ಕೆ ಗ್ವಾಟೆಮಾಲಾದಿಂದ ಮಾವು ಆಮದಾಗುತ್ತದೆ. ನಮ್ಮ ದೇಶದ ಮಾವಿನ ರುಚಿ ಇರುವುದಿಲ್ಲ. ನಮ್ಮ ದೇಶದಿಂದ ಆಮದಾದ ಆಪೂಸ್ ಮೊದಲಾದ ಹಣ್ಣುಗಳು ಇನ್ನೂ ದುಬಾರಿ. ನಮ್ಮ ಮನೆಯ ಹತ್ತಿರವೇ, ಅಂದರೆ ಆ ವಸತಿ ಸಂಕೀರ್ಣದ ಹೊರ ಆವರಣದ ಗೋಡೆಗೆ ತಾಗಿಕೊಂಡು, ಒಂದು ಇಂಡಿಯನ್ ಸ್ಟೋರ್ ಇತ್ತು. ಅಲ್ಲಿ ಕಾಯಿ ತುರಿಯಿಂದ ಹಿಡಿದು, ನುಗ್ಗೆ ಕಾಯಿ, ಕೊತ್ತಂಬರಿ ಸೊಪ್ಪು, ಬಾಳೆಕಾಯಿ, ಹೀರೇ ಕಾಯಿ, ತೊಂಡೆಕಾಯಿ ಎಲ್ಲವೂ ಸಿಗುತ್ತಿತ್ತು. ಆದರೆ, ಎಲ್ಲವೂ ಕಿಲೋ ಒಂದರ ಎರಡು ಡಾಲರ್ ಅಥವಾ ಜಾಸ್ತಿ! ಎರಡೂವರೆ ಡಾಲರ್ ತೆತ್ತು, ಕಾಯಿ ತುರಿ ತಂದು ದೋಸೆ - ಚಟ್ನಿ ತಿನ್ನುವಾಗಲೆಲ್ಲಾ, ಬೆಂಗಳೂರಿನ ದೋಸೆ, ನಮ್ಮ ಹಾಲಾಡಿಯ ಪ್ರಖ್ಯಾತ ತುಪ್ಪದ ದೋಸೆಯ ನೆನಪಾಗುತ್ತಿತ್ತು!
ಹೂವುಗಳ ಹಾಲೆಂಡ್
ನಾವಿದ್ದ ಫಾರ್ಮಿಂಗ್‌ಟನ್ ಹಿಲ್ಸ್ ನಿಂದ ಉತ್ತರಕ್ಕೆ ಹೊರಟರೆ, ಹಾಲೆಂಡ್ ಎಂಬ ಊರು ಸಿಗುತ್ತದೆ. ಇದು ಯುರೋಪಿನ ಹಾಲೆಂಡ್ ಅಲ್ಲ, ಬದಲಿಗೆ, ಆ ದೇಶದವರು ಹತ್ತೊಂಬತ್ತನೆಯ ಶತಮಾನದಲ್ಲಿ ಇಲ್ಲಿಗೆ ಬಂದು ಸ್ಥಾಪಿಸಿದ ಒಂದು ಊರು. ವಿಶೇಷವೆಂದರೆ, ಆ ಯುರೋಪಿಯನ್ ಮೂಲದ ಜನರು, ಈ ಊರನ್ನು ಹಾಲೆಂಡಿನ ಹಳ್ಳಿಯ ರೀತಿಯೇ ಕಟ್ಟಿದ್ದಾರೆ. ಜಲ ಯಂತ್ರಗಳು, ಮನೆಗಳ ವಿನ್ಯಾಸ, ರೆಸ್ಟಾರೆಂಟ್‌ಗಳ ತಿಂಡಿ ಎಲ್ಲವೂ ಹಾಲೆಂಡ್‌ನ ತದ್ರೂಪು. ಜತೆಗೆ, ಪ್ರತಿ ವರ್ಷ, ಹಾಲೆಂಡ್ ದೇಶದ ರೀತಿಯೇ ಟ್ಯುಲಿಪ್ ಫೆಸ್ಟಿವಲ್ ಎಂಬ, ಬಹುಪ್ರಚಾರಿತ ಹೂವಿನ ಮೇಳವನ್ನು ನಡೆಸುತ್ತಾರೆ. ಕೆಲವು ಎಕರೆ ಪ್ರದೇಶದಲ್ಲಿ, ಲಕ್ಷಾಂತರ ಟ್ಯುಲಿಪ್ ಹೂವುಗಳು ಒಂದೇ ಸಮಯದಲ್ಲಿ ಅರಳುವ ವಿಶೇಷ ವಿದ್ಯಮಾನ ಅದು. ಫಾರ್ಮಿಂಗ್‌ಟನ್ ಹಿಲ್ಸ್ ನಿಂದ ಹಾಲೆಂಡ್ (ಮಿಶಿಗನ್)ಗೆ ಸುಮಾರು 159 ಮೈಲು. ಅಂದರೆ ಸುಮಾರು 256ಕಿ.ಮೀ. ಅಮೆರಿಕದಲ್ಲಿ ಹೆದ್ದಾರಿಗಳ ಜಾಲ ಎಷ್ಟು ವ್ಯವಸ್ಥಿತ ಮತ್ತು ದಕ್ಷ ಎಂದರೆ ಇಷ್ಟು ದೂರವನ್ನು ಕಾರಿನಲ್ಲಿ ಸುಮಾರು 2ಗಂಟೆ 15 ನಿಮಿಷದಲ್ಲಿ ಕ್ರಮಿಸಬಹುದು! ಇದು ಅಮೆರಿಕದಲ್ಲಿ ನನಗೆ ಮೊದಲ ಹೆದ್ದಾರಿ ಪ್ರಯಾಣ. ಫಾರ್ಮಿಂಗ್‌ಟನ್ ಹಿಲ್ಸ್ ನಿಂದ ಬೆಳಗ್ಗೆ ಬೇಗನೆ ಹೊರಟ ನಾವು, ಮ್ಯಾಪ್ ತೋರಿಸಿದ ಸಮಯಕ್ಕೆ ಸರಿಯಾಗಿ ಹಾಲೆಂಡ್ ಎಂಬ ಪುಟ್ಟ ಪಟ್ಟಣವನ್ನು ತಲುಪಿದೆವು.

ಬಣ್ಣ ಬಣ್ಣದ ಹೂವುಗಳು
ಮಿಶಿಗನ್ ರಾಜ್ಯದ ಉತ್ತರ ಭಾಗದಲ್ಲಿ ಹಾಲೆಂಡ್ ಊರು ಇದೆ. ಪ್ರವೇಶಿಸುತ್ತಿದ್ದಂತೆ, ರಸ್ತೆಯ ಪಕ್ಕದಲ್ಲೆಲ್ಲಾ ಟ್ಯುಲಿಪ್ ಹೂವುಗಳನ್ನು ಬೆಳೆಸಿದ್ದರು. ನಾನಾ ಬಣ್ಣದ ಹೂವುಗಳು. ನಾವು ಕಾರು ನಿಲ್ಲಿಸಿದ ಜಾಗದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಜಲಯಂತ್ರದ ಪ್ರತಿಕೃತಿಯೊಂದನ್ನು ನಿರ್ಮಿಸಿದ್ದರು. ಅದರ ಸುತ್ತಲೂ ಒಂದು ಭಾಗದಲ್ಲಿ ಕೆರೆ, ಇನ್ನೊಂದು ಭಾಗದಲ್ಲಿ ಟ್ಯುಲಿಪ್ ಹೂವುಗಳ ಹೊಲಗಳು. ಅದೇ ಊರಿನ ಇನ್ನೊಂದು ಭಾಗದಲ್ಲಿ ಖಾಸಗಿಯವರು ಹತ್ತಾರು ಎಕರೆ ಪ್ರದೇಶದಲ್ಲಿ ಟ್ಯುಲಿಪ್ ಹೂ ಬೆಳೆಸಿದ್ದರು. ಅದಕ್ಕೆ ಪ್ರವೇಶ ದರ ನೀಡಿ, ಒಳಗೆ ಹೋದರೆ, ಎಲ್ಲಾ ಕಡೆ ಸಾವಿರಾರು ಬಣ್ಣ ಬಣ್ಣದ ಹೂವುಗಳ ಮೆರವಣಿಗೆ! ಬಹು ಸುಂದರ ದೃಶ್ಯ ಇದನ್ನು ನೋಡಲೆಂದೇ ಸಾವಿರಾರು ಜನರು ಬಂದಿದ್ದರು. ನಾವು ಹೂವು ನೋಡುತ್ತಿದ್ದಾಗ, ಶಿಕಾಗೋದಿಂದ ಬಂದಿದ್ದ ಶ್ವೇತವರ್ಣೀಯ ದಂಪತಿ, ನಮ್ಮ ಫೋಟೋ ತೆಗೆಯುತ್ತೇನೆ ಎಂದು ಹೇಳಿ, ತೆಗೆದುಕೊಟ್ಟರು. ನಂತರ ಅವರ ಫೋಟೋ ನಾವು ತೆಗೆದೆವು!
ಹಾಲೆಂಡ್ ಊರಿನ ಎಲ್ಲಾ ಕಡೆ ಟ್ಯುಲಿಪ್ ಹೂವುಗಳು. ರಸ್ತೆ ಪಕ್ಕ, ಪಾರ್ಕ್, ಹೊಲ ಈ ರೀತಿ: ಮೇ ತಿಂಗಳ ಮೊದಲ ವಾರದಲ್ಲಿ ಅಲ್ಲಿ ಟ್ಯುಲಿಪ್ ಫೆಸ್ಟಿವಲ್ ಏರ್ಪಡಿಸಿ, ಪ್ರಚಾರ ನೀಡುತ್ತಾರೆ. ಆ ಸಮಯದಲ್ಲಿ ಇಡೀ ಊರಿನ ತುಂಬಾ ಹೂವುಗಳೇ ಹೂವುಗಳು. ಜತೆಯಲ್ಲೇ, ಹತ್ತೊಂಬತ್ತನೆಯ ಶತಮಾನದಲ್ಲಿ ಹಾಲೆಂಡ್ ದೇಶದವರು ಧರಿಸುವಂಥ ಬಟ್ಟೆಯನ್ನು ಧರಿಸಿದ ಗೈಡ್‌ಗಳು, ವಾಕಿಂಗ್ ಟೂರ್ ನಡೆಸುತ್ತಾರೆ. ಅಮೆರಿಕದ ವಿವಿಧ ಪ್ರದೇಶಗಳಿಂದ ಬಂದವರು, ಆ ವಾರವಿಡೀ ಅಲ್ಲಿದ್ದು, ಹಾಲೆಂಡ್‌ನ ಅಥೆಂಟಿಕ್ ಜನಗಳನ್ನು, ತಿನಿಸುಗಳನ್ನು ತಿನ್ನಬಹುದು! ಬೋಟಿಂಗ್ ಮಾಡಬಹುದು. ಒಟ್ಟಿನಲ್ಲಿ ಅದೊಂದು ಹಬ್ಬವೇ ಸರಿ.
ಹಗಲಿಡೀ ಟ್ಯುಲಿಪ್ ಹೂವುಗಳನ್ನು ನೋಡಿ, ಪುನಃ ಕಾರೇರಿ, 256 ಕಿ.ಮೀ. ದೂರವನ್ನು ಸುಮಾರು 2ಗಂಟೆ 30 ನಿಮಿಷಗಳಲ್ಲಿ ಕ್ರಮಿಸಿ, ಮನೆಗೆ ವಾಪಸಾದೆವು.