ಬಾಲಿಯಲ್ಲಿ ನಡೆದಾಡುತ್ತಿದ್ದರೆ ಹಿಂದೂ ರಾಷ್ಟ್ರದ ಊರಲ್ಲಿ ಓಡಾಡುತ್ತಿರುವ ಅನುಭವವಾಗುತ್ತದೆ. ಇಲ್ಲಿನ ಪುರಾತನ ದ್ವಾರಗಳಿಂದ ನಾವು ಯಾವುದೋ ನಾಟಕದ ಸೆಟ್‌ನಲ್ಲಿರುವಂತೆ ಭಾಸವಾಗುತ್ತದೆ. ಗಲ್ಲಿಗಲ್ಲಿಗಳಲ್ಲೂ ಗಣೇಶನ ಮೂರ್ತಿಗಳನ್ನು ಕಾಣಬಹುದು. ನೃತ್ಯ, ವಿಗ್ರಹಗಳಲ್ಲಿ ರಾಮಾಯಣವನ್ನು ಅಳವಡಿಸಿಕೊಂಡಿರುವ ಇಲ್ಲಿ ರಾಮ ಮತ್ತು ಕೃಷ್ಣರಿಗೆ ಪೂಜೆ ಇಲ್ಲವಂತೆ. ಸರ್ಕಲ್‌ಗಳಲ್ಲಿ ದೇವರ ವಿಗ್ರಹಗಳೇ ಇರಬೇಕು ಎಂದಿಲ್ಲ, ರಾಕ್ಷಸ, ಋಷಿಗಳ ವಿಗ್ರಹಗಳೂ ಇವೆ.

ಇದನ್ನೂ ಓದಿ: ಪರದೇಶದಲ್ಲಿ ಪರದೇಸಿಯಾಗದಿರಿ

ಬಾಲಿಯ ಜನರದೂ ಪ್ರಕೃತಿಯನ್ನು ಆರಾಧಿಸುವ ಧರ್ಮ. ಇಲ್ಲಿನ ದೇವಾಲಯಗಳೂ ನಮ್ಮಲ್ಲಿನಂತೆ ಪ್ರಕೃತಿಯ ಮಧ್ಯದಲ್ಲಿ ಅಂದರೆ ಬೆಟ್ಟದ ಮೇಲೆ, ನದಿ, ಸಮುದ್ರ ತೀರದಲ್ಲಿವೆ. ಕುಟುಂಬ, ಊರಿಗೆ ಸಂಬಂದಿತ ದೇವಾಲಯಗಳೂ ಇವೆ. ನಮ್ಮ ಜಾತ್ರೆಗಳಲ್ಲಿ ಕಟ್ಟೆ ಪೂಜೆ ನಡೆಸಲು ಇರುವಂತೆ ಬಾಲಿಯ ಹಳ್ಳಿಗಳಲ್ಲೂ ಕಟ್ಟೆಗಳಿವೆ. ದೇವಸ್ಥಾನಗಳಲ್ಲಿ ಅವರು ತಮ್ಮ ಸಂಪ್ರದಾಯಿಕ ಧಿರಿಸು ಅಂದರೆ ಗಂಡಸರು 'ಸಾರಂಗ್', ಹೆಂಗಸರು ಪಂಚೆಯಂಥ ಬಟ್ಟೆಯ ಮೇಲೆ ಟಾಪ್ ಧರಿಸಿ ತಲೆಯ ಮೇಲೆ ತೆಂಗಿನ ಗರಿಯ ಬುಟ್ಟಿಯಲ್ಲಿ ಹೂವು, ಧೂಪದ ಕಡ್ಡಿ ಮುಂತಾದ ದ್ರವ್ಯಗಳನ್ನು ಕೊಂಡೊಯ್ಯುತ್ತಾರೆ. ಗಂಡಸರು ದೇವರ ಪ್ರಸಾದವಾಗಿ ಹೂವನ್ನು ಕಿವಿಯಲ್ಲಿ ಧರಿಸುತ್ತಾರೆ. ದೇವರ ವಿಗ್ರಹದ ಮುಂದೆ ನೈವೇದ್ಯಕ್ಕಾಗಿ ಚಾಕಲೇಟ್, ಬಿಸ್ಕೆಟ್ ಇಟ್ಟಿದ್ದನ್ನೂ ನಾವು ನೋಡಿದೆವು. ಆಶ್ಚರ್ಯವೆಂದರೆ ದೇವಾಲಯದೊಳಗೂ ಚಪ್ಪಲಿ ಹಾಕಬಹುದು. ನಾವು ವಾಪಾಸು ಬರುವಾಗ ರಸ್ತೆಯಲ್ಲಿ ಬೈಕ್ ರ್ಯಾಲಿ ಇತ್ತು. ಇದೇನೆಂದು ಡ್ರೈವರ್ ಅನ್ನು ಕೇಳಿದಾಗ ದೇವಾಲಯದ ಜಾತ್ರೆಯಂಥ ಸಂದರ್ಭದಲ್ಲಿ ಪುಷ್ಕರಿಣಿಯ ಪವಿತ್ರ ಜಲವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಎಂದರು. ಇಲ್ಲಿ ಹೆಚ್ಚಿನ ಕಟ್ಟಡ, ರೆಸ್ಟೋರೆಂಟ್, ಅಂಗಡಿಗಳ ಹೆಸರುಗಳು ಹಿಂದೂ ಹೆಸರುಗಳು. ಹೀಗೆ ಬಾಲಿಯಲ್ಲಿ ನಮ್ಮ ಹಿಂದೂ ಸಂಸ್ಕೃತಿ ಬಹಳಷ್ಟು ಮಿಳಿತವಾಗಿದೆ.

Untitled design (14)

ಪುರ ತಮನ್ ಆಯುನ್

ನಾವು ಮೊದಲು ಹೋಗಿದ್ದು 'ಪುರ ತಮನ್ ಆಯುನ್' ದೇವಸ್ಥಾನಕ್ಕೆ. ಇದು ಸುಮಾರು ಹತ್ತು ಎಕರೆಯಷ್ಟು ವಿಸ್ತಾರವಾದ ಜಾಗದಲ್ಲಿ ಹರಡಿದೆ. ದೇವಾಲಯದಲ್ಲಿ 3 ಭಾಗಗಳಿವೆ. ನಿಸ್ತ ಮಂಡಲ (ಹೊರ ಅಂಗಣ), ಮಧ್ಯ ಮಂಡಲ(ಮಧ್ಯ ಅಂಗಣ), ಉತ್ತಮ ಮಂಡಲ(ಪವಿತ್ರ ಪ್ರಾಂಗಣ) ಎಂದು. ಪವಿತ್ರ ಪ್ರಾಂಗಣದೊಳಗೆ ವಿದೇಶಿಯರಿಗೆ ಪ್ರವೇಶ ನಿಷಿದ್ಧ. ಈ ದೇವಾಲಯವನ್ನು 1627ರಲ್ಲಿ ಪ್ರಸಿದ್ಧ ಮೆನ್ಗ್ವಿ ರಾಜ ವಂಶಸ್ಥರು ತಮ್ಮ ಪೂರ್ವಜರ ಆರಾಧನೆಗಾಗಿ ಕಟ್ಟಿಸಿದ್ದರು ಎನ್ನಲಾಗಿದೆ. ಪುರ ತಮನ್ ಆಯುನ್ ಎಂದರೆ ʻನೀರಿನಲ್ಲಿನ ಉದ್ಯಾನ ದೇವಾಲಯʼ ಎಂದರ್ಥ. ಈ ದೇವಾಲಯದ ಸುತ್ತಲೂ ತಾವರೆಗಳಿಂದ ಕೂಡಿದ ಕೊಳವಿದೆ. ಪವಿತ್ರ ಪ್ರಾಂಗಣದ ಸುತ್ತ ಮತ್ತೊಂದು ಕೊಳವಿದೆ. ದೇವಾಲಯವು ಮಾವು, ಚಂಪಕ, ಪುನ್ನಾಗದಂಥ ದೊಡ್ಡ ಮರಗಳಿಂದ ಆವೃತವಾಗಿದೆ. ಮಧ್ಯ ಹಾಗೂ ಹೊರ ಪ್ರಾಂಗಣದ ನೆಲದ ಮೇಲೆ ಹುಲ್ಲುಹಾಸು ಇದ್ದು ಕುಳಿತುಕೊಳ್ಳಲು ಆರಾಮದಾಯಕವಾಗಿತ್ತು.

ಇಲ್ಲಿನ ಸಣ್ಣ ಥಿಯೇಟರ್ನಲ್ಲಿ ರಾಜವಂಶಸ್ಥರು ಅಲ್ಲಿನ ಸಾಂಸ್ಕೃತಿಕ ಆಚರಣೆಗಳ ಬಗ್ಗೆ ಫೊಟೋ ಗ್ಯಾಲರಿಯಿದೆ. ಆಶ್ಚರ್ಯವೆಂದರೆ ತುಳುನಾಡಿನ ಜಾನಪದ ಆಟ ಕೋಳಿ ಅಂಕದ ಪ್ರತಿಕೃತಿಯನ್ನು ವಿಶಾಲ ಜಾಗದಲ್ಲಿ ನಿರ್ಮಿಸಿದ್ದಾರೆ.

ತನಹ ಲಾಟ್ ಹಾಗೂ ಬುಟು ಬೊಲೊಂಗ್ ದೇವಾಲಯ

ಪ್ರವೇಶ ದ್ವಾರದಿಂದಲೇ ಭೋರ್ಗರೆಯುವ ಶುದ್ಧ ನೀಲಿ ಸಮುದ್ರ ಕಾಣುತ್ತದೆ. ಈ ದೇವಾಲಯ ಸಮುದ್ರದ ಮಧ್ಯದಲ್ಲಿದೆ. ಈ ದೇವಾಲಯವೂ ಸಮುದ್ರ ಅಲೆಗಳು ಸತತವಾಗಿ ಕಲ್ಲುಗಳಿಗೆ ಬಡಿದು ಉಂಟಾದ ಕೊರೆತದಿಂದ ನಿರ್ಮಿತವಾಗಿದೆ. ದೇವಾಲಯದ ಮೊದಲ ಆವರಣ ನೆಲದ ಮೇಲಿದೆ. ಎರಡನೆಯದಕ್ಕೆ ಸುಮಾರು 50ಮೀ ಸಮುದ್ರದಲ್ಲಿ ನಡೆದು ಹೋಗಬೇಕು. ಅಲ್ಲಿಯೂ ಪೂಜೆ ನಡೆಯುತ್ತದೆ.

ಉಬುಡು ಅರಮನೆ ಮತ್ತು ಸರಸ್ವತಿ ದೇವಸ್ಥಾನ

ಉಬುಡು ಅರಮನೆಗೆ ನಾವು ಹೋದ ದಿನ ಜಾತ್ರೆಯೋ, ಹಬ್ಬವೋ ಇತ್ತು. ಎಲ್ಲಾ ಕಡೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಕೆಲವು ಕಡೆ ತೆಂಗಿನ ಗರಿಗಳನ್ನು ನೇಯ್ದು, ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ನಾವು ಅಲ್ಲಿನ ಸರಸ್ವತಿ ದೇವಸ್ಥಾನಕ್ಕೆ ಹೋದೆವು. ದೇವಾಲಯದ ಮಧ್ಯೆ ತಾವರೆ ಕೊಳವಿದೆ. ದೇವಾಲಯದ ಪ್ರಾಕಾರವಿದ್ದು ವಿವಿಧ ಪ್ರತಿಮೆಗಳಿಂದ ಆವೃತವಾಗಿದೆ. ಪ್ರಾಕಾರದ ಸುತ್ತಲೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮತ್ತು ಫೊಟೋ ತೆಗೆದುಕೊಳ್ಳಲು ಬೇಕಾದ ಸಿಂಹಾಸನದಂಥ ಕುರ್ಚಿಗಳು ಇದ್ದವು.

Untitled design (16)

ಬಾಲಿ ಜೋಕಾಲಿ

ಬಾಲಿ ಜೋಕಾಲಿ ಸಾಕಷ್ಟು ಪ್ರಸಿದ್ಧವಾಗಿದೆ. ನಮ್ಮಲ್ಲಿ ವೈವಿಧ್ಯ ರೆಸಾರ್ಟ್‌ಗಳಿರುವಂತೆ ಇಲ್ಲಿ ವಿವಿಧ ಚಟುವಟಿಕೆ ಹಾಗೂ ಸಾಹಸ ಕ್ರೀಡೆಗಳಿಂದ ಕೂಡಿದ ಸ್ಥಳಗಳಿವೆ. ನಾವು ಡ್ರೈವರ್ ಬಳಿ ಜೋಕಾಲಿ ಮಾತ್ರ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದೆವು. ಅವರು ವಿವಿಧ ಬಗೆಯ ಜೋಕಾಲಿಗಳಿರುವ ಜಾಗಕ್ಕೆ ಕರೆದುಕೊಂಡು ಹೋದರು. ಬಾಲಿಯ ಬೇರೆಲ್ಲಾ ಸ್ಥಳಗಳಿಗಿಂತ ಇಲ್ಲಿನ ಪ್ರವೇಶ ದರ ಸ್ವಲ್ಪ ದುಬಾರಿಯೇ. ಅಲ್ಲದೇ ಆರೋಗ್ಯ ಸಮಸ್ಯೆ ಇದ್ದರೆ, ವೃದ್ಧರು, ಮಕ್ಕಳಿಗೆ ಜೋಕಾಲಿಯಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲ. ಬಾಲಿಗೆ ಹೋಗಬೇಕೆಂದು ನಿರ್ಧರಿಸಿದ ದಿನದಿಂದಲೂ ಬಾಲಿ ಜೋಕಾಲಿಯಲ್ಲಿ ಕೂರುವುದು ನನ್ನ ಕನಸಾಗಿತ್ತು. ಕೆಳಗೆ ತೊರೆ, ಮೇಲೆ ಮೋಡಗಳು, ನಡುವೆ ಮರದಿಂದ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಕುಳಿತು ಜೀಕಿದಾಗ ವಾಹ್! ಅನಿಸುವ ಅನುಭವ.

ಗೋವಾ ಗಝ

ಇದು ಗುಹಾಂತರ ದೇವಾಲಯ. ಇಲ್ಲಿಗೆ ಹೋಗುವ ದಾರಿ ಥೇಟ್ ನಮ್ಮ ಮಲೆನಾಡಿನ ಅನುಭವ ನೀಡುತ್ತದೆ. ಸುತ್ತಲೂ ಹಸಿರು ಮರಗಳ ಸಾಲು. ನಡುವೆ ತಿರುವಿನಿಂದ ಕೂಡಿದ ರಸ್ತೆಗಳು ಇವೆ. ಪ್ರಕೃತಿಯ ಮಧ್ಯದಲ್ಲಿ ಗುಹೆಯೊಳಗೆ ಈ ದೇವಾಲಯವಿದೆ. ಸುಮಾರು ಐವತ್ತು ಮೆಟ್ಟಿಲುಗಳನ್ನು ಇಳಿದು ಗುಹೆಯೊಳಗೆ ದೇವಸ್ಥಾನಕ್ಕೆ ಹೋಗಬೇಕು. ಇದು ಗಣೇಶನ ದೇವಸ್ಥಾನ. ಗಣೇಶನ ಜತೆಗೆ ಶಿವಲಿಂಗವೂ ಇದೆ. ದೇವಾಲಯದ ಹೊರಗಿನ ಹೆಮ್ಮರ ಹಾಗೂ ಪುಷ್ಕರಿಣಿ ಆಕರ್ಷಣೀಯವಾಗಿತ್ತು.

ಉಲುವಾಟು ದೇವಾಲಯ

ಇದು ಎತ್ತರದ ಕಲ್ಲಿನ ಮೇಲೆ ಸಮುದ್ರಕ್ಕೆ ಅಭಿಮುಖವಾಗಿರುವ ದೇವಾಲಯ. ಸುತ್ತಲೂ ಕಾಡು ಇದ್ದು, ಶಿವನನ್ನು ಇಲ್ಲಿ ಆರಾಧಿಸಲಾಗುತ್ತಿದೆ. ಇಲ್ಲಿ ಮಂಗಗಳ ಕಾಟ ವಿಪರೀತ. ಕಾಡಿನಿಂದ ಕೆಳಗಿಳಿದರೆ ಸಮುದ್ರ. ಸಮುದ್ರದ ತಟದಲ್ಲಿ ಬೆಟ್ಟ. ಬೆಟ್ಟದ ಮೆಟ್ಟಿಲುಗಳನ್ನು ಏರಿದರೆ ಈ ದೇವಾಲಯವಿದೆ. ಇಲ್ಲಿ ಬಯಲು ರಂಗ ಮಂದಿರವೂ ಇದೆ. ಸಾಯಂಕಾಲದ ಹೊತ್ತಿಗೆ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಪಾಂಡವ ಬೀಚ್

ಇಲ್ಲಿನ ಕಡಲ ತೀರವನ್ನು ನೋಡಲು ಕಡಿದಾದ ಕಲ್ಲಿನ ಬೆಟ್ಟದಲ್ಲಿ ಇಳಿದು ಅಥವಾ ದಟ್ಟ ಕಾಡಿನ ನಡುವೆ ಸಾಗಬೇಕು. ಪಾಂಡವ ಬೀಚ್‌ನಲ್ಲಿ ಕಲ್ಲಿನ ಬೆಟ್ಟವನ್ನು ಕಡಿದು ರಸ್ತೆಯನ್ನು ನಿರ್ಮಿಸಿ, ಬೆಟ್ಟದ ಕಲ್ಲಿನಲ್ಲಿ ಪಾಂಡವರು ಮತ್ತು ಕುಂತಿಯ ಎತ್ತರದ ಮೂರ್ತಿಗಳನ್ನು ಕೆತ್ತಿದ್ದಾರೆ. ಪಾಂಡವ ಬೀಚ್‌ನಲ್ಲಿ ಇಳಿಯುವಾಗ ಕಾಲಿನ ಅಡಿಯಲ್ಲಿ ನೈಸರ್ಗಿಕ ಕಲ್ಲಿನ ಹಾಸು ಇರುವುದರಿಂದ ತೆರೆಗಳಿಂದ ಮರಳು ಕುಸಿಯುವ ಭಯವಿಲ್ಲ.

ಗ್ರೀನ್ ಬೌಲ್ ಬೀಚ್

ಕಾಡಿನ ಮಧ್ಯೆ ಸುಮಾರು 100 ಮೆಟ್ಟಿಲುಗಳನ್ನು ಇಳಿದರೆ ಈ ಬೀಚ್ ತಲುಪಬಹುದು. ಕಡಲ ತೀರ ಆಳವಾಗಿದೆ. ಸರ್ಫಿಂಗ್‌ಗೆ ಇದು ಯೋಗ್ಯ ಬೀಚ್. ಕ್ಷಣಕ್ಕೊಮ್ಮೆ ರಕ್ಷಣೆಗಾಗಿ ಹೆಲಿಕಾಪ್ಟರ್ ಆಗಸದಲ್ಲಿ ಹಾರಾಡುತ್ತಲೇ ಇತ್ತು. ಅಲೆಗಳು ಸತತವಾಗಿ ಅಪ್ಪಳಿಸಿ ಕಲ್ಲುಗಳು ಗುಹೆಯಂಥ ವಿನ್ಯಾಸ ಪಡೆದಿರುವುದು ನೋಡಲು ಆಕರ್ಷಕವಾಗಿತ್ತು.

ಮಲಸ್ತಿ ಬೀಚ್

'ಮಲಸ್ತಿ ಬೀಚ್' ಆ ದಿನ ನಾವು ನೋಡಿದ ಕೊನೆಯ ಬೀಚ್. ಕೆಂಪು ಬಾವುಟ ತೀರದಲ್ಲೇ ಹಾರಾಡುತ್ತಿತ್ತು. ಹಾಗಾಗಿ ನೀರಿಗಿಳಿಯುವ ಸಾಹಸವನ್ನು ಮಾಡಲಿಲ್ಲ. ಅಲ್ಲಿಗೆ ತಲುಪುವುದರೊಳಗೆ ಸಂಜೆಯಾಗಿದ್ದರಿಂದ ಬಣ್ಣದ ಓಕುಳಿಯಂತೆ ಕೆಂಪು ಬಣ್ಣದ ಚಿತ್ತಾರ ಬಾನಿನಲ್ಲಿ ಮೂಡಿತ್ತು. ಈ ದೃಶ್ಯ ವೈಭವವನ್ನು ನೋಡುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದನ್ನು ನಾವು ಮರೆಯಲಿಲ್ಲ. ಕತ್ತಲಾಗುತ್ತಿದ್ದಂತೆ ಸುತ್ತ ಇದ್ದ ಹೊಟೇಲ್, ಪಬ್‌ಗಳಲ್ಲಿ ಕಿವಿಗಡಚಿಕ್ಕುವ ಪಾಶ್ಚಾತ್ಯ ಸಂಗೀತ ಆರಂಭವಾಗಿ ವಿದೇಶಿಯರಿಂದ ತುಂಬತೊಡಗಿತು.

Untitled design (15)

ಬಾಲಿ ಸಂಪೂರ್ಣವಾಗಿ ಪ್ರವಾಸೋದ್ಯಮ ಆಧಾರಿತ ದೇಶ. ಹಾಗಾಗಿ ಎಲ್ಲೆಡೆಎ ಪ್ರವೇಶ ಶುಲ್ಕವಿದೆ. ಬೀಚ್‌ಗಳಲ್ಲೂ ಶುಲ್ಕ ವಿಧಿಸುವುದು ಸಾಮಾನ್ಯ. ಬಾಲಿಯಲ್ಲಿ ಮಾಂಸಾಹಾರ ಅಗ್ಗ. ಸಸ್ಯಾಹಾರ ದುಬಾರಿ. ಇಲ್ಲಿ ಪ್ರವಾಸಿ ತಾಣಗಳನ್ನು ನೋಡಲು ಬಾಡಿಗೆಗೆ ಸ್ಕೂಟಿ ಹಾಗೂ ಬೈಕ್‌ಗಳು ಸಿಗುತ್ತವೆ. ಕಾರ್‌ಗಳು ಬಾಡಿಗೆಗೆ ಗಂಟೆಗಳ ಲೆಕ್ಕದಲ್ಲಿ ಸಿಗುತ್ತವೆ. ನಮ್ಮ ಅನುಭವದಂತೆ ಇಲ್ಲಿನ ಜನರೂ ಪ್ರಾಮಾಣಿಕರು. ನಮ್ಮನ್ನು ಮೋಸಗೊಳಿಸಲು ಅವಕಾಶವಿದ್ದರೂ ಎಲ್ಲೂ ನಮಗೆ ಮೋಸವಾಗಲಿಲ್ಲ. ನಮಗೆ ಸಿಕ್ಕಿದ ಡ್ರೈವರ್‌ಗಳೆಲ್ಲರೂ ಪ್ರಾಮಾಣಿಕರಾಗಿದ್ದರು. ನಮ್ಮನ್ನು ಸ್ವಾಗತಿಸುವಾಗ, ಬೀಳ್ಕೊಡುವಾಗ ನಡು ಬಗ್ಗಿಸಿ ತಲೆಬಾಗಿ ನಮಸ್ಕರಿಸುತ್ತಿದ್ದರು. ಆದರೆ, ಕಿರಿಕಿರಿ ಉಂಟುಮಾಡಿದ್ದು ಅಲ್ಲಿನವರ ವಿಪರೀತ ಸಿಗರೇಟ್ ಸೇವನೆ. ಸಿಗರೇಟ್ ಸೇದದಿದ್ದರೆ ಕೈಕಾಲೇ ಆಡುವುದಿಲ್ಲವೇನೋ ಎಂಬಂತೆ ವಾಹನ ಚಲಾಯಿಸುವಾಗಲೂ ಸಿಗರೇಟ್, ರಸ್ತೆ ಕಾಮಗಾರಿ ನಡೆಸುತ್ತಿದ್ದಾಗಲೂ ಸಿಗರೇಟ್, ಮರದ ಕೆತ್ತನೆ ಕೆಲಸ ಮಾಡುವಾಗಲೂ ಸಿಗರೇಟ್ ಹೀಗೆ ಎಲ್ಲಾ ಕೆಲಸ ಮಾಡುವಾಗಲೂ, ಸಾರ್ವಜನಿಕ ಸ್ಥಳಗಳಲ್ಲಿಯೂ ಸಿಗರೇಟ್ ಸೇದುತ್ತಿದ್ದರು.

ಅಲ್ಲಿನ ಹೆಚ್ಚಿನ ಕಟ್ಟಡಗಳ ಹೊರ ರಚನೆ ದೇವಾಲಯದಂತೆ ಕಂಡು ಬರುತ್ತಿತ್ತು. ಇತ್ತೀಚಿಗೆ ನಿರ್ಮಾಣವಾಗುತ್ತಿದ್ದ ಹೊಸ ಕಟ್ಟಡಗಳೂ ಹಳೆ ವಿನ್ಯಾಸವನ್ನು ಹೊಂದಿದ್ದವು. ಹೊಸ ಚಿಗುರು, ಹಳೆ ಬೇರು ಎಂಬಂತೆ ಜನರು ತಮ್ಮತನವನ್ನು ಕಳೆದುಕೊಳ್ಳದೇ ಆಧುನಿಕತೆಗೆ ತೆರುಕೊಳ್ಳುತ್ತಿದ್ದರು. ಹೀಗೆ ಬಾಲಿಯ ಪ್ರವಾಸ ನಮ್ಮ ನೆನಪಿನಲ್ಲಿ ಉಳಿದಿದೆ.