ನಮ್ಮ ಹಿರಿಯ ನಾಗರೀಕರ ಸಮಾನ ಮನಸ್ಕರ 10 ಜನರ ತಂಡ ಕಳೆದ ಜನವರಿಯಲ್ಲಿ ಥೈಲ್ಯಾಂಡ್ ಪ್ರವಾಸ ಕೈಗೊಂಡಿತ್ತು. ಫುಕೆಟ್, ಕ್ರಾಬಿ, ಪಟ್ಟಾಯ ನಗರಗಳ ಪ್ರವಾಸ ಮುಗಿಸಿ, ಕೊನೆಯದಾಗಿ ಬ್ಯಾಂಕಾಕ್ ನಗರಕ್ಕೆ ನಮ್ಮನ್ನು ಕರೆದೊಯ್ಯಲು ಪಟ್ಟಾಯದಲ್ಲಿ ನಾವಿಳಿದುಕೊಂಡಿದ್ದ ‘Mountain Beach Resort’ Hotel ಗೆ ಎರಡು ವಾಹನಗಳು ಬಂದಿದ್ದವು. ಬೆಳಗ್ಗೆ ಹೊಟೇಲ್‌ನಲ್ಲಿಯೇ ಉಪಾಹಾರ ಸೇವಿಸಿದ್ದ ನಾವು ಬ್ಯಾಂಕಾಕ್ ನಗರ ನೋಡಲು ತುಂಬಾ ಉತ್ಸುಕರಾಗಿದ್ದೆವು. ಮಾರ್ಗ ಮಧ್ಯೆ ‘Gems Gallery ವೀಕ್ಷಿಸಿ Tiger Topia ನಲ್ಲಿ Crocodile Show ಮತ್ತು Tiger Show ಗಳನ್ನು ನೋಡಿಕೊಂಡು ಬ್ಯಾಂಕಾಕ್ ನಗರಕ್ಕೆ ಪ್ರವೇಶಿಸುತ್ತಿಂದಂತೆಯೇ ಟ್ರಾಫಿಕ ನಲ್ಲಿ ಸಿಕ್ಕಿ ಹಾಕಿಕೊಂಡೆವು. ಆಗಲೇ ಅಪರಾಹ್ನ 2 ಗಂಟೆ ಆಗಿತ್ತು. ಬೆಳಗಿನ ಉಪಾಹಾರ ಉದರದಲ್ಲಿ ಕರಗಿ ಮಧ್ಯಾಹ್ನದ ಊಟಕ್ಕೆ ನಮ್ಮ ಹೊಟ್ಟೆ ಹಾತೊರೆಯುತ್ತಿತ್ತು. ಬ್ಯಾಂಕಾಕ್‌ನ ಚೋಳಾ’ಸ ರೆಸ್ಟೊರೆಂಟ್‌ನಲ್ಲಿ ನಮ್ಮ ಲಂಚ್ ನಿಗದಿಯಾಗಿತ್ತು. ಅಲ್ಲಿಗೆ ಹೋಗುವ ಮಾರ್ಗ ಮಧ್ಯೆಯೇ ಇದ್ದ ‘Golden Buddha’ ‘Mini Reclinning Buddha’ ದೇವಾಲಯಗಳು ಅಂದು ಬೇಗನೆ ಮುಚ್ಚಲಿರುವ ಕಾರಣ ಮೊದಲು ಈ ಎರಡು ದೇವಾಲಯಗಳನ್ನು ವೀಕ್ಷಿಸಿ ನಂತರ ಲಂಚ್ ಗೆ ಹೋಗುವುದೆಂದು ಎಲ್ಲರ ಸಮ್ಮತಿಯೊಡನೆ ನಿರ್ಧರಿಸಿದೆವು.
ಇದನ್ನೂ ಓದಿ: ವರ್ಜೀನಿಯಾ ಸಫಾರಿ ಪಾರ್ಕ್‌

ಅವನು ಚಿನ್ನದ ಬುದ್ಧ

ನಮ್ಮ ವಾಹನ ‘Golden Buddha’ ದೇವಾಲಯ ತಲುಪಿದಾಗ ಅಪರಾಹ್ನ 3.30 ಆಗಿತ್ತು. ನಮ್ಮ ಗೈಡ್ ಒಬ್ಬರಿಗೆ ಪ್ರವೇಶ ಶುಲ್ಕ 40 ಬಹತ್ ನಂತೆ (ಸುಮಾರು 120 ರುಪಾಯಿಗಳು) ಟಿಕೆಟ್‌ ತಂದು ಕೊಟ್ಟರು. ಪ್ರವಾಸಿಗರು ಸರಿಯಾದ ಸಾದಾ ಉಡುಪು ಧರಿಸಬೇಕು, ಭುಜಗಳು ಮತ್ತು ಮೊಣಕಾಲು ಮುಚ್ಚಿದ ಉಡುಪು ಧರಿಸುವುದು ಉತ್ತಮ. ದೇವಾಲಯದ ಮುಂದೆ ನಿಂತು ನೋಡಿದ ನಾನು ಅಲ್ಲಿನ ದಿವ್ಯತೆಗೆ ಚಕಿತನಾದೆ. ಬ್ಯಾಂಕಾಕ್‌ನ ಚೈನಾಟೌನ್ ಹೃದಯದಲ್ಲಿ ಚಿನ್ನದ ಪ್ರಕಾಶದಂತೆ ಹೊಳೆಯುವ ದೇವಾಲಯವೆಂದರೆ ‘ವಾಟ್ ಟ್ರೈಮಿಟ್ ವಿಥಾಯಾರಾಮ್ ವೊರವಿಹಾನ್. ʼಗೋಲ್ಡನ್ ಬುದ್ಧ ದೇವಾಲಯʼ ಎಂದೇ ಪ್ರಸಿದ್ಧಿಯಾದ ಈ ಪವಿತ್ರ ಕ್ಷೇತ್ರವು, ಭಕ್ತಿ, ಇತಿಹಾಸ ಮತ್ತು ಸಂಸ್ಕೃತಿಯ ಸಂಗಮವಾಗಿರುವ ಅದ್ಭುತ ತಾಣವಾಗಿದೆ. ಅಚಂಚಲ ಸಂಸ್ಕೃತಿಯಲ್ಲೂ ಜೀವಂತವಾಗಿರುವ Bangkok ನಗರದ ಹೃದಯದಲ್ಲಿ, ಗದ್ದಲದ ನಾಡಿಯ ಮಧ್ಯೆ, ಒಂದು ಮೌನದ ದ್ವೀಪದಂತೆ ನಿಂತಿದೆ ಚಿನ್ನದ ಬುದ್ಧನ ಈ ದೇವಾಲಯ.

ಮೌನರೂಪಿ ಬುದ್ಧ

ಸುಮಾರು ಏಳು ಶತಮಾನಗಳ ಹಿಂದೆ, ಸುಖೋಥಾಯ ಕಾಲದ ಶಿಲ್ಪಿಗಳ ಕೈಯಲ್ಲಿ ಚಿನ್ನ ಕರಗಿ ಬುದ್ಧನ ರೂಪ ಪಡೆದಿದೆ. 5.5 ಟನ್ ಘನ ಚಿನ್ನದಿಂದ ನಿರ್ಮಿಸಲಾದ ಧ್ಯಾನಸ್ಥ ಮುಖಭಾವ, ಶಾಂತಿಯ ಮುದ್ರೆ, ತುಟಿಗಳಲ್ಲಿ ಮೃದುವಾದ ಕರುಣೆಯುಕ್ಕಿಸುವ ಬುದ್ಧನ ಪ್ರತಿಮೆ ಮನಸೂರೆಗೊಳ್ಳುತ್ತದೆ. ಆದರೆ ಇತಿಹಾಸದ ಕಾಲ ಘಟ್ಟ ಸದಾ ಸೌಮ್ಯ ಅಲ್ಲ. ಆಕ್ರಮಣಗಳ ಭೀತಿ ಎದುರಾದಾಗ, ಈ ಚಿನ್ನದ ಮೂರ್ತಿಯನ್ನು ಪ್ಲಾಸ್ಟರ್ ಮತ್ತು ಮಣ್ಣುಪದರಗಳಿಂದ ಮುಚ್ಚಲಾಗಿತ್ತು ಎಂದು ತಿಳಿದು ಬಂತು. ಪ್ರತಿಮೆಯ ಚಿನ್ನದ ತೇಜಸ್ಸು ಮರೆಯಾಗಿ, ಶತಮಾನಗಳ ಕಾಲ, ಚಿನ್ನದ ಪ್ರತಿಮೆ ಸಾದಾರಣ ಪ್ರತಿಮೆ ಎಂದೇ ಪರಿಗಣಿಸಲ್ಪಟ್ಟಿತ್ತು. ಮುಂದೆ, 1955ರಲ್ಲಿ ಪ್ರತಿಮೆಯನ್ನು ಸ್ಥಳಾಂತರಿಸುವಾಗ, ಪ್ಲಾಸ್ಟರ್ ಬಿರುಕು ಬಿಟ್ಟು ಪದರದ ಒಳಗಿನಿಂದ ಚಿನ್ನದ ಹೊಳಪು ಹೊರಚಿಮ್ಮಿತು ಎಂದು ನಮ್ಮ ಮಾರ್ಗದರ್ಶಿ ತಿಳಿಸಿದರು.

Untitled design - 2026-03-25T104134.345

Bangkok ನಗರದ ಚೈನಾಟೌನ್ ಪ್ರದೇಶದಲ್ಲಿರುವ ಈ ದೇವಸ್ಥಾನದ ಮುಖ್ಯ ಕಟ್ಟಡವನ್ನು Phra Maha Mondop ಎಂದು ಕರೆಯುತ್ತಾರೆ. ಈ ದೇವಾಲಯ 4 ಮಹಡಿಗಳನ್ನೊಳಗೊಂಡ ಭವ್ಯ ರಚನೆಯನ್ನು ಹೊಂದಿದೆ. 1ನೆಯ ಮಹಡಿಯಲ್ಲಿ Chinatown Heritage Center ಎಂದು ಕರೆಯುತ್ತಾರೆ. ಇಲ್ಲಿ Yaowarat (Chinatown) ಇತಿಹಾಸ ಸಂಗ್ರಹಾಲಯವಿದೆ. ಬ್ಯಾಂಕಾಕ್‌ನ ಚೀನೀ ಸಮುದಾಯದ ವಾಸ್ತವ್ಯ, ವ್ಯಾಪಾರ ಮತ್ತು ಸಂಸ್ಕೃತಿ ಕುರಿತು ಪ್ರದರ್ಶಿಕೆಗಳು ಗಮನ ಸೆಳೆಯುತ್ತವೆ. ಹಳೆಯ ಫೋಟೋಗಳು, ಮಾದರಿ ಮನೆಗಳು, ಇತಿಹಾಸದ ದಾಖಲಾತಿಗಳು ಪ್ರದರ್ಶಿಸಲ್ಪಟ್ಟಿವೆ. 2ನೆಯ ಮಹಡಿಯಲ್ಲಿ, ಚಿನ್ನದ ಬುದ್ಧ ಮೂರ್ತಿಯ ಇತಿಹಾಸವನ್ನು ವಿವರಿಸುವ ಗ್ಯಾಲರಿ ಇದೆ. ಮೂರ್ತಿಯನ್ನು ಹೇಗೆ ಪ್ಲಾಸ್ಟರ್ ಒಳಗೆ ಮರೆಮಾಡಲಾಗಿತ್ತು ಮತ್ತು 1955ರಲ್ಲಿ ಹೇಗೆ ಪತ್ತೆಯಾಯಿತು ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಲಭಿಸುತ್ತದೆ. ಸುಖೋಥಾಯ್ ಶೈಲಿಯ ಕಲಾತ್ಮಕ ವೈಶಿಷ್ಟ್ಯಗಳ ವಿವರಣೆಯೂ ಇಲ್ಲಿ ಲಭ್ಯ. 3ನೆಯ ಮಹಡಿಯಲ್ಲಿ ಮುಖ್ಯ ಪ್ರಾರ್ಥನಾ ಮಂಟಪವಿದ್ದು ಇಲ್ಲಿಯೇ ಚಿನ್ನದ ಸುಮಾರು 3 ಮೀಟರ್ ಎತ್ತರ ಮತ್ತು 5.5 ಟನ್ ತೂಕದ ಮಂದಹಾಸ ವದನದ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಶಾಂತ ಪರಿಸರ ಉಂಟು ಮಾಡುವ ಕಂಪನದ(Vibe) ಆನಂದವನ್ನು ಶಬ್ದಗಳಲ್ಲಿ ಹಿಡಿದಿಡುವುದು ನನಗಂತೂ ಸಾಧ್ಯವಾಗಿಲ್ಲ. ಅನುಭವಿಸಿದವರಿಗೆ ಮಾತ್ರ ವೇದ್ಯವಾಗುತ್ತದೆ. ಹೀಗಾಗಿ ಕಣ್ಣುಮುಚ್ಚಿ ಧ್ಯಾನಸ್ಥರಾಗಿರುವ ದೃಶ್ಯ ಸರ್ವೇ ಸಾಮಾನ್ಯ. ಮೇಲ್ಭಾಗವು ಥಾಯ್ ಸಾಂಪ್ರದಾಯಿಕ ಶೈಲಿಯ ಬಹುಸ್ತರ ಗೋಪುರಗಳು, ಚಿನ್ನದ ಅಲಂಕಾರದಿಂದ ಕಂಗೊಳಿಸುವ ಶಿಖರಗಳಂತೆ ಗೋಚರಿಸುತ್ತವೆ. ದೂರದಿಂದಲೂ ಕಾಣುವ ದೇವಾಲಯದ ಆಕರ್ಷಕ ವಿನ್ಯಾಸ ನಮ್ಮಲ್ಲಿ ಒಂದು ಥರದ ‘ಖುಷಿ’ಯ ತರಂಗಗಳನ್ನು ಹುಟ್ಟು ಹಾಕುತ್ತದೆ. ಒಟ್ಟಾರೆ, ಸುವರ್ಣ ಬುದ್ಧನ ಈ ದೇವಾಲಯ ಧಾರ್ಮಿಕ ಮಹತ್ವ, ಇತಿಹಾಸ ಮತ್ತು ವಾಸ್ತುಶಿಲ್ಪದ ಸುಂದರ ಸಂಯೋಜನೆಯಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಒಟ್ಟಾರೆ, ಈ ಮನಮೋಹಕ ದೇವಾಲಯದ ಒಳಗೆ ಪ್ರವೇಶಿಸಿದ ಕ್ಷಣ, ಹೆಜ್ಜೆಗಳು ನಿಧಾನವಾಗುತ್ತವೆ. ಮಾತುಗಳು ಮೃದುವಾಗುತ್ತವೆ. ಅಲ್ಲಿನ ಪ್ರಶಾಂತ, ದಿವ್ಯ ಮೌನದ ಪರಿಸರದಲ್ಲಿ ನಾವುಗಳು ಒಂದಾಗಿ ನಮ್ಮನ್ನು ನಾವೇ ಮರೆಯುತ್ತೇವೆ

ದೇವಾಲಯದ ಸುತ್ತ-ಮುತ್ತ

ದೇವಾಲಯದ ಸಮೀಪ ಭೇಟಿ ನೀಡಬಹುದಾದ ಪ್ರಮುಖ ತಾಣಗಳ ಬಗ್ಗೆ ಹೇಳುವುದಾದರೆ, Yaowarat Road, ಚೈನಾಟೌನ್‌ನ ಮುಖ್ಯ ರಸ್ತೆಯಾಗಿದ್ದು, ರಾತ್ರಿ ಸಮಯದಲ್ಲಿ ಸ್ಟ್ರೀಟ್ ಫುಡ್‌ಗೆ ಬಹಳ ಪ್ರಸಿದ್ದ. ಚೈನೀಸ್ ಔಷಧ ಅಂಗಡಿಗಳು, ಚಿನ್ನದ ಅಂಗಡಿಗಳು, ಮಾರುಕಟ್ಟೆಗಳು ಇಲ್ಲಿ ಹೇರಳವಾಗಿವೆ. ಚೌಕಾಸಿ ಮಾಡಲು ಮರೆಯದಿರಿ. Wat Mangkon Kamalawat ಕೂಡ ಬ್ಯಾಂಕಾಕ್‌ನ ಅತಿ ದೊಡ್ಡ ಚೈನೀಸ್ ಬೌದ್ಧ ದೇವಸ್ಥಾನವಾಗಿದ್ದು, Wat Traimit‌ನಿಂದ ಸುಮಾರು 10–15 ನಿಮಿಷ ನಡೆದು ಹೋಗಬಹುದು. ಇಲ್ಲಿ ಚೈನೀಸ್ ಹೊಸ ವರ್ಷದ ಸಮಯದಲ್ಲಿ ವಿಶೇಷ ಆಚರಣೆಗಳು ನಡೆಯುತ್ತವೆ. ಅದೇ ರೀತಿ, Sampeng Lane Market ಇದು ಕಡಿಮೆ ದರದ ವಸ್ತುಗಳ ಮಾರುಕಟ್ಟೆ.ಬಟ್ಟೆ, ಆಟಿಕೆ, ಅಲಂಕಾರ ವಸ್ತುಗಳು ಇಲ್ಲಿ ಸಿಗುತ್ತವೆ. ಜನಸಂದಣಿ ಹೆಚ್ಚು, ಆದರೆ ಶಾಪಿಂಗ್‌ಗೆ ಸೂಕ್ತ ಸ್ಥಳ. ಕೊನೆಯದಾಗಿ, Odeon Circle ಚೈನಾಟೌನ್ ಪ್ರವೇಶದ್ವಾರ (ಚೈನೀಸ್ ಗೇಟ್). ಫೊಟೋ ತೆಗೆದುಕೊಳ್ಳಲು ಪ್ರಶಸ್ತ ತಾಣ.

ಮಾಹಿತಿ ಪೆಟ್ಟಿಗೆ

ಥೈಲ್ಯಾಂಡ್ ದೇಶದ ರಾಜಧಾನಿ ಬ್ಯಾಂಕಾಕ್ ಗೆ ನಮ್ಮ ದೇಶದ ಅನೇಕ ಪ್ರಮುಖ ನಗರಗಳಿಂದ ವಿಮಾನದ ಮೂಲಕ ‘ಸುವರ್ಣ ಭೂಮಿ’ ಅಥವಾ ಡಾನ್ ಮಿಯಾಂಗ್ ವಿಮಾನ ನಿಲ್ದಾಣ ತಲುಪಬಹುದು. ನಿಮ್ಮ ಹೊಟೇಲ್‌ನಿಂದ ಹತ್ತಿರದ MRT ಮೆಟ್ರೊ ನಿಲ್ದಾಣ ದಿಂದ Hua Lamphong ನಿಲ್ದಾಣಕ್ಕೆ ಬಂದು ನಡೆದು ಹೋಗಬಹುದು. ಅಥವಾ, ಉಳ್ಳವರು Grab/Bolt ಟ್ಯಾಕ್ಸಿ ಸೇವೆಯನ್ನು ಪಡೆಯಬಹುದಾಗಿದೆ. ಗ್ರೂಪ್ ಟೂರ್ ಮುಖಾಂತರ ಬಂದಿದ್ದಲ್ಲಿ, ಎಲ್ಲಾ ವ್ಯವಸ್ಥೆ ಟ್ರಾವೆಲ್ ಏಜೆನ್ಸಿಯೇ ಮಾಡುತ್ತದೆ. ದೇವಸ್ಥಾನವು ಸಾಮಾನ್ಯವಾಗಿ ಪ್ರತಿದಿನ ಬೆಳಗ್ಗೆ 8:00 ರಿಂದ ಸಂಜೆ 5:00 ರವರೆಗೆ ತೆರೆದಿರುತ್ತದೆ. ಬೆಳಗಿನ ಸಮಯದಲ್ಲಿ ಜನಸಂದಣಿ ಕಡಿಮೆ ಇರುತ್ತದೆ. ನಿಮ್ಮ ಮರು ಪ್ರಯಾಣ, ‘ಸುವರ್ಣ ಭೂಮಿ’ ವಿಮಾನ ನಿಲ್ದಾಣದಿಂದಲೇ ಇರಲಿ.