Tuesday, March 24, 2026
Tuesday, March 24, 2026

ವರ್ಜೀನಿಯಾ ಸಫಾರಿ ಪಾರ್ಕ್‌

'ವರ್ಜೀನಿಯಾ ಸಫಾರಿ ಪಾರ್ಕ್ʼನಲ್ಲಿ ದಾರಿಯುದ್ದಕ್ಕೂ ಬೃಹತ್ ಗಾತ್ರದ ಬುಲ್, ಎಲ್ಕ್ ಮತ್ತು ಬೈಸನ್‌ಗಳಂಥ ಗಂಭೀರ ಪ್ರಾಣಿಗಳು ನಮ್ಮ ವಾಹನಕ್ಕೆ ದಾರಿ ಕೊಡದೆ ರಸ್ತೆಯ ಮಧ್ಯದಲ್ಲೇ ನಿಲ್ಲುವ ರಾಜಗಾಂಭೀರ್ಯ ನಮ್ಮನ್ನು ಬೆರಗಾಗಿಸುತ್ತದೆ. ಆದರೆ ಇಲ್ಲಿ ಪ್ರಾಣಿಗಳು ರಸ್ತೆಯಲ್ಲಿ ಅಡ್ಡಗಟ್ಟಿದಾಗ ಹಾರ್ನ್ ಮಾಡದೇ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಅಲ್ಲದೆ 'ಡ್ರೈವ್-ಥ್ರೂ' ಸಫಾರಿ ಹಾಗೂ ನಮ್ಮ ಕೈಯಾರೆ ನಾವು ಪ್ರಾಣಿಗಳಿಗೆ ಆಹಾರ ನೀಡುವ ಅನುಭವವನ್ನು ಮಿಸ್‌ ಮಾಡಿಕೊಳ್ಳಲೇಬಾರದು.

ಅಮೆರಿಕದ ವರ್ಜೀನಿಯಾ ರಾಜ್ಯದ ಬ್ಲೂ ರಿಡ್ಜ್ ಪರ್ವತಗಳ ಶೆನಾಂಡೋವಾ ವ್ಯಾಲಿಯ ಸುಂದರವಾದ ಬೆಟ್ಟಗಳ ನಡುವೆ ಇರುವ 'ವರ್ಜೀನಿಯಾ ಸಫಾರಿ ಪಾರ್ಕ್' ಪ್ರಾಣಿ ಪ್ರಿಯರಿಗೊಂದು ಸ್ವರ್ಗ. ಇಲ್ಲಿ ಪ್ರಾಣಿಗಳು ಮುಕ್ತವಾಗಿ ವಿಹರಿಸುತ್ತವೆ, ನಾವು ಕಾರಿನೊಳಗೆ ಕುಳಿತು ಅವುಗಳ ಪ್ರಪಂಚಕ್ಕೆ ಅತಿಥಿಗಳಾಗಿ ಹೋಗುತ್ತೇವೆ!

180 ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಪಾರ್ಕು, ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಮತ್ತು ಅವುಗಳೊಂದಿಗೆ ಒಡನಾಟ ನಡೆಸುವ ಅಪರೂಪದ ಅವಕಾಶವನ್ನು ಕಲ್ಪಿಸುತ್ತದೆ.ಈ ಅದ್ಭುತವಾದ 'ಡ್ರೈವ್-ಥ್ರೂ' ಸಫಾರಿ ಪಾರ್ಕು, ನೈಸರ್ಗಿಕ ಪರಿಸರದಲ್ಲಿ ಮುಕ್ತವಾಗಿ ಸಂಚರಿಸುವ, ಜಗತ್ತಿನ ಬೇರೆ ಬೇರೆ ಭಾಗದ 1,200ಕ್ಕೂ ಹೆಚ್ಚು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಆಶ್ರಯ ತಾಣವಾಗಿದೆ.

ಇದನ್ನೂ ಓದಿ: ನಾಪಾ ವ್ಯಾಲಿಯಲ್ಲಿ ವೈನ್‌ಗಾಗಿ ರೌಂಡ್‌

ಈ ಪಾರ್ಕಿನ ಪ್ರಮುಖ ಆಕರ್ಷಣೆಯೇ 'ಡ್ರೈವ್-ಥ್ರೂ' ಸಫಾರಿ ಹಾಗೂ ನಮ್ಮ ಕೈಯಾರೆ ನಾವು ಪ್ರಾಣಿಗಳಿಗೆ ಆಹಾರ ನೀಡುವ ಅನುಭವ. ನಮ್ಮ ಕಾರಿನಲ್ಲೇ ಕುಳಿತು ನಾವು ಎಂಟೆಲೋಪ್‌ಗಳು, ಕಾಡೆಮ್ಮೆಗಳು, ಬುಲ್ ಎಲ್ಕ್,ವಿಶೇಷವಾದ ಪೆರೆ ಡೇವಿಡ್ ಜಿಂಕೆಗಳು, ಎಮುಗಳು, ಆಸ್ಟ್ರಿಚ್‌ಗಳು, ವೈಲ್ಡ್‌ಬೀಸ್ಟ್‌ಗಳು ಹೀಗೆ ಹತ್ತು ಹಲವಾರು ಅಪರೂಪದ ಪ್ರಾಣಿಗಳನ್ನು ನೋಡಬಹುದು.ಸುಮಾರು ಮೂರು ಮೈಲಿಯುದ್ದಕ್ಕೂ ಪ್ರಾಣಿಗಳು ಅಲ್ಲಲ್ಲಿ ನಿಲ್ಲುವುದು, ಅಡ್ಡಾಡುವುದು ಮತ್ತು ನಮ್ಮ ವಾಹನದ ಕಿಟಕಿಯ ಮೂಲಕ ತಮ್ಮ ತಲೆಯನ್ನು ಚಾಚುವುದು ಇಲ್ಲಿನ ಸಾಮಾನ್ಯ ದೃಶ್ಯ.ಕಾರಿನ ಕಿಟಕಿಯನ್ನು ಕೆಳಗಿಳಿಸಿ ಆಹಾರದ ಬಕೆಟ್ ಅನ್ನು ಹೊರಗೆ ಚಾಚಿದರೆ, ಉಪಾಹಾರವನ್ನು ನಿರೀಕ್ಷಿಸುತ್ತಾ ಹಲವು ಪ್ರಾಣಿಗಳು ನಮ್ಮ ಬಳಿಯೇ ಬರುತ್ತವೆ. ಹಸಿದ ಎಮುಗಳು,ಬೃಹತ್ ಆಸ್ಟ್ರಿಚ್‌ಗಳು ತಮ್ಮ ಕತ್ತನ್ನು ಕಾರಿನ ಕಿಟಕಿಯೊಳಗೆ ಹಾಕಿ ಆಹಾರ ಕೇಳುವುದು, ಪ್ರಾಣಿಗಳು ನಮ್ಮ ಕೈಯಿಂದಲೇ ಆಹಾರ ತಿನ್ನುವುದು ರೋಮಾಂಚನಕಾರಿ ಅನುಭವ.ಆದರೆ ನಾವು ಪಾರ್ಕಿನ ಪ್ರವೇಶ ದ್ವಾರದಲ್ಲಿ ದೊರೆಯುವ ವಿಶೇಷ ‘ಪ್ರಾಣಿ ಆಹಾರದ ಬಕೆಟ್‌’ ಖರೀದಿಸಿ ಅದನ್ನು ಮಾತ್ರವೇ ಪ್ರಾಣಿಗಳಿಗೆ ನೀಡಬಹುದೇ ಹೊರತು ಬೇರೇನನ್ನೂ ನೀಡಕೂಡದು. ಅದು ಕಾನೂನು ರೀತಿಯಲ್ಲಿ ಅಪರಾಧವೆಂದು ಪರಿಗಣಿಸಲ್ಪಡುತ್ತದೆ.

Untitled design - 2026-03-24T171516.698

ಕಾರಿಗೆ ಪ್ರಾಣಿಗಳ ಬಾಯಿನ ಜೊಲ್ಲು ಅಂಟುವುದು ಅಥವಾ ಕೊಂಬುಗಳ ಗೀರು ಬೀಳುವ ಸಾಧ್ಯತೆ ಇರುವುದರಿಂದ, ನೀವು ನಿಮ್ಮ ಸ್ವಂತ ಕಾರನ್ನು ಬಳಸಲು ಇಷ್ಟಪಡದಿದ್ದರೆ, ವಾರದ ದಿನಗಳಲ್ಲಿ ಲಭ್ಯವಿರುವ ಸಾರ್ವಜನಿಕ ಟ್ರ್ಯಾಕ್ಟರ್-ಚಾಲಿತ “ವ್ಯಾಗನ್ ರೈಡ್” ನ ಟಿಕೆಟ್ ಕೊಂಡು ಸಫಾರಿ ಗೈಡ್ ನೊಂದಿಗೆ ಸಂಚರಿಸಬಹುದು.

ದಾರಿಯುದ್ದಕ್ಕೂ ಬೃಹತ್ ಗಾತ್ರದ ಬುಲ್, ಎಲ್ಕ್ ಮತ್ತು ಬೈಸನ್‌ಗಳಂಥ ಗಂಭೀರ ಪ್ರಾಣಿಗಳು ನಮ್ಮ ವಾಹನಕ್ಕೆ ದಾರಿ ಕೊಡದೆ ರಸ್ತೆಯ ಮಧ್ಯದಲ್ಲೇ ನಿಲ್ಲುವ ರಾಜಗಾಂಭೀರ್ಯ ನಮ್ಮನ್ನು ಬೆರಗಾಗಿಸುತ್ತದೆ.ಆದರೆ ಇಲ್ಲಿ ಪ್ರಾಣಿಗಳು ರಸ್ತೆಯಲ್ಲಿ ಅಡ್ಡಗಟ್ಟಿದಾಗ ಹಾರ್ನ್ ಮಾಡದೇ ತಾಳ್ಮೆಯಿಂದ ಕಾಯಬೇಕು.

ಕಾರಿನ ಸಫಾರಿ ಮುಗಿದ ನಂತರ ಮುಂದೆ ಕಾಲ್ನಡಿಗೆಯಲ್ಲಿ ಸಾಗುವ ‘ವಾಕ್ ಥ್ರೂ’ ಸಫಾರಿ ವಿಲೇಜ್ ಎಂಬ 10 ಎಕರೆಗಳಷ್ಟು ವಿಸ್ತಾರವಾದ ನಡೆದಾಡುವ ಮೃಗಾಲಯವಿದೆ.ಇಲ್ಲಿ ಪಕ್ಷಿಗಳ ಲೋಕ, ಜಿರಾಫೆ ಫೀಡಿಂಗ್ ಸ್ಟೇಷನ್, ಪೆಂಗ್ವಿನ್ ಪಾಯಿಂಟ್, ಕಾಂಗರೂ ವಾಕ್ ಔಟ್ ಗಳಂಥ ಮತ್ತಷ್ಟು ಆಕರ್ಷಕ ತಾಣಗಳಿವೆ.

ಇಲ್ಲಿನ ಪಕ್ಷಿಧಾಮದಲ್ಲಿ ಹಕ್ಕಿಗಳು ನಮ್ಮೊಂದಿಗೆ ಆಟವಾಡಲು ಸಿದ್ಧವಾಗಿರುತ್ತವೆ.ಇವುಗಳಲ್ಲಿ “ಲೊರಿಕಿಟ್ ಲ್ಯಾಂಡಿಂಗ್” ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣ. ಇಲ್ಲಿನ ವರ್ಣರಂಜಿತ ಗಿಳಿಗಳಿಗೆ ಸಿಹಿ ದ್ರವದ ಕಪ್ ಹಿಡಿದು ಒಳಹೋದರೆ ಸಾಕು, ಹತ್ತಾರು ಹಕ್ಕಿಗಳು ಹಾರಿ ಬಂದು ನಮ್ಮ ಕೈ, ಭುಜ ಮತ್ತು ,ತಲೆಯ ಮೇಲೂ ಕುಳಿತುಕೊಳ್ಳುತ್ತವೆ! ಅವುಗಳ ಪುಟ್ಟ ಬಾಯಿಂದ ದ್ರವವನ್ನು ಕುಡಿಯುವ ರೀತಿ ಮನಮೋಹಕ.

ಹಾಗೇ ನೂರಾರು ಪುಟ್ಟ ಬಡ್ಜಿ ಗಿಳಿಗಳ ಲೋಕವಾದ 'ಬಡ್ಜೀ ಅಡ್ವೆಂಚರ್ ಏವಿಯರಿ' ಒಂದು ವಿಶಿಷ್ಟ ಅನುಭವ. ವಿವಿಧ ಧಾನ್ಯಗಳಿರುವ 'ಸೀಡ್ ಸ್ಟಿಕ್' ಗಳನ್ನು ಕೈಯಲ್ಲಿ ಹಿಡಿದು ನಿಂತರೆ ಸಾಕು, ಗಿಳಿಗಳ ಸಣ್ಣ ಸೈನ್ಯವೇ ನಮ್ಮ ಕೈ,ತೋಳು, ತಲೆಗಳ ಮೇಲೆ ಬಂದು ಕುಳಿತುಕೊಳ್ಳುತ್ತವೆ! ಅವುಗಳ ಮೃದುವಾದ ಸ್ಪರ್ಶ ಮತ್ತು ಇಂಪಾದ ಕಲರವ ಮಕ್ಕಳಿಗಷ್ಟೇ ಅಲ್ಲದೆ ಹಿರಿಯರಿಗೂ ಅಪಾರ ಮುದ ನೀಡುತ್ತದೆ. ಪ್ರವಾಸಿಗರ ಸುರಕ್ಷತೆಗಾಗಿ ಇಲ್ಲಿ ಪಕ್ಷಿಗಳಿಗೆ ಆಹಾರ ನೀಡಿದ ನಂತರ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವ ವ್ಯವಸ್ಥೆಯೂ ಇದೆ. ಇಲ್ಲಿನ ಇಂಥ ಅನೇಕ ಪ್ರವಾಸಿ ಸ್ನೇಹಿ ಕಾಳಜಿ ನಿಜಕ್ಕೂ ಮೆಚ್ಚುವಂತದ್ದು ಮತ್ತು ಅನುಕರಣೀಯವೂ ಹೌದು.

Untitled design - 2026-03-24T171443.600

ಮುಂದೆ ‘ಪೆಂಗ್ವಿನ್ ಪಾಯಿಂಟ್” ನಲ್ಲಿ ಆಫ್ರಿಕನ್ ಪೆಂಗ್ವಿನ್‌ಗಳು ನೀರಿನಲ್ಲಿ ಸಲೀಸಾಗಿ ಈಜುತ್ತಾ, ಸಿಬ್ಬಂದಿಗಳು ನೀಡುವ ಮೀನುಗಳನ್ನು ಹಿಡಿಯಲು ವಿಚಿತ್ರವಾಗಿ ಹೆಜ್ಜೆ ಹಾಕುವುದನ್ನು ನೋಡುವುದೇ ಒಂದು ಸಂಭ್ರಮ.

ಇದೇ ವಿಭಾಗದ “ಜಿರಾಫೆ ಫೀಡಿಂಗ್ ಸ್ಟೇಷನ್” ನಲ್ಲಿ ಅದಕ್ಕಾಗಿಯೇ ನಿರ್ಮಿಸಲಾಗಿರುವ ಎತ್ತರದ ವೇದಿಕೆಯ ಮೇಲೆ ನಿಂತು ನಾವು ಜಿರಾಫೆಗಳಿಗೆ ಸೊಪ್ಪನ್ನು ನಮ್ಮ ಕೈಯಾರೆ ತಿನ್ನಿಸಬಹುದು. ತಮ್ಮ ಉದ್ದನೆಯ ಕತ್ತನ್ನು ಚಾಚಿ ಆಹಾರ ಪಡೆಯುವ ಈ ಜಿರಾಫೆಗಳ ಸೌಮ್ಯ ಸ್ವಭಾವ ಮತ್ತು ಕಣ್ಣುಗಳ ಆಕರ್ಷಣೆ ಪ್ರವಾಸಿಗರ ಮನಗೆಲ್ಲುತ್ತದೆ.

ಇದಲ್ಲದೆ,‘ ಕಂಗಾರೂ ವಾಕ್-ಔಟ್‌ʼ ನಲ್ಲಿ ಮುದ್ದಾದ ಅಸ್ಟ್ರೇಲಿಯನ್ ಕಾಂಗರುಗಳು, ಯಾವುದೇ ಬೇಲಿಗಳಿಲ್ಲದ ಮುಕ್ತ ಆವರಣದಲ್ಲಿ ಓಡಾಡುತ್ತಾ, ಮೈಮರೆತು ವಿಶ್ರಮಿಸುವುದನ್ನು ಅಥವಾ ಕುಪ್ಪಳಿಸುವುದನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಬಹುದು.

ಈ ಸಫಾರಿ ಉದ್ಯಾನವನಕ್ಕೆ ಭೇಟಿ ನೀಡುವವರಿಗೆ ಕೆಲವು ಸಲಹೆಗಳು:

ಸಾಮಾನ್ಯವಾಗಿ ಮಾರ್ಚ್‌ನಿಂದ ನವೆಂಬರ್ ತಿಂಗಳಿನವರೆಗೆ ತೆರೆಯಲ್ಪಡುವ ಈ ಪಾರ್ಕು ಚಳಿಗಾಲದ ಡಿಸೆಂಬರ್ ವೇಳೆಯಲ್ಲಿ ಮುಚ್ಚಲ್ಪಡುತ್ತದೆ.

ಪಾರ್ಕನ್ನು ಪ್ರವೇಶಿಸಲು ಪ್ರವೇಶ ಶುಲ್ಕವಿರುತ್ತದೆ.

ಡ್ರೈವ್-ಥ್ರೂಗೆ ಕನಿಷ್ಠ 1 ಗಂಟೆ ಮತ್ತು ಸಫಾರಿ ವಿಲೇಜ್‌ಗೆ 2-3 ಗಂಟೆಗಳನ್ನು ಬೇಕಾಗುತ್ತದೆ.

ಬೆಳಗಿನ ಪಾರ್ಕ್ ತೆರೆಯುವ (ಬೆಳಗಿನ 9 ಗಂಟೆ) ವೇಳೆಗೆ ಹೋಗುವುದು ಉತ್ತಮ. ಈ ವೇಳೆಯಲ್ಲಿ ಪ್ರಾಣಿಗಳು ಲವಲವಿಕೆಯಿಂದಲೂ ಹೆಚ್ಚು ಉತ್ಸಾಹದಿಂದಲೂ ಇರುತ್ತವೆ ಮತ್ತು ಆಹಾರಕ್ಕಾಗಿ ನಮ್ಮ ಹತ್ತಿರ ಓಡಿಬರುತ್ತವೆ. ಸಮಯ ಸರಿದಂತೆ ಮಧ್ಯಾಹ್ನದ ವೇಳೆಗೆ ಹೊಟ್ಟೆ ತುಂಬಿ,ಆಯಾಸಗೊಂಡು ವಿಶ್ರಾಮಕ್ಕೆ ಜಾರುವ ಸಾಧ್ಯತೆ ಹೆಚ್ಚು.

ಪ್ರತಿಯೊಬ್ಬರೂ ಕನಿಷ್ಠ ಒಂದು ಬಕೆಟ್ ಆಹಾರವನ್ನು ಖರೀದಿಸುವುದು ಉತ್ತಮ, ಏಕೆಂದರೆ ಪ್ರಾಣಿಗಳು ಹಸಿದಿದ್ದು ಬೇಗನೆ ಆಹಾರ ಖಾಲಿಯಾಗಬಹುದು.

Untitled design - 2026-03-24T171503.989

ಪ್ರಾಣಿಗಳಿಗೆ ಆಹಾರ ನೀಡುವಾಗ ವಾಹನದ ಕಿಟಕಿಯನ್ನು ಪೂರ್ತಿ ಕೆಳಗೆ ಇಳಿಸಬೇಡಿ. ಅರ್ಧದಷ್ಟು ಮಾತ್ರ ಇಳಿಸಿ ಆಹಾರ ನೀಡಿದರೆ ಪ್ರಾಣಿಗಳು ವಾಹನದೊಳಗೆ ಪೂರ್ತಿಯಾಗಿ ತಲೆ ಹಾಕುವುದನ್ನು ತಡೆಯಬಹುದು.

ನಿಮ್ಮ ಕಾರನ್ನು ಶುಚಿಗೊಳಿಸಲು ಮತ್ತು ಕೈಗಳನ್ನು ಒರೆಸಲು ಒದ್ದೆಯಾದ ಒರೆಸುವ ಬಟ್ಟೆಗಳನ್ನು (wet wipes) ಇಟ್ಟುಕೊಳ್ಳಿ.

ಬಯಲು ಪ್ರದೇಶದಲ್ಲಿ ಓಡಾಡುವುದರಿಂದ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹ್ಯಾಟ್, ಸನ್ ಗ್ಲಾಸ್ ಮತ್ತು ಸಾಕಷ್ಟು ಕುಡಿಯುವ ನೀರನ್ನು ಜತೆಯಲ್ಲಿ ಇಟ್ಟುಕೊಳ್ಳಿ.

ನಗರದ ಜಂಜಾಟದಿಂದ ದೂರವಾಗಿ, ಪ್ರಕೃತಿಯ ಮಡಿಲಲ್ಲಿ ಪ್ರಾಣಿಗಳೊಂದಿಗೆ ಒಂದು ದಿನ ಕಳೆಯಲು “ ವರ್ಜೀನಿಯಾ ಸಫಾರಿ ಪಾರ್ಕ್” ಅತ್ಯಂತ ಸೂಕ್ತ ಜಾಗ. ವಿಶಾಲವಾದ ಹಸಿರಿನ ಬಯಲಿನಲ್ಲಿ ಮುಕ್ತವಾಗಿ ಓಡಾಡುವ ಮತ್ತು ನಮ್ಮ ಕೈಯಿಂದ ಆಹಾರ ಸ್ವೀಕರಿಸುವ ವಿವಿಧ ಬಗೆಯ ಪ್ರಾಣಿ ಪಕ್ಷಿಗಳ ಪ್ರಪಂಚದ ಬಗ್ಗೆ ಮಕ್ಕಳಿಗೂ ಅರಿವು ಮೂಡಿಸುವ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಸುಂದರ ಲೋಕ ಇದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...