ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚಾದಾಗ, ನಾವು ಯಾವಾಗಲೂ ಮಾತನಾಡಲು ಇಷ್ಟಪಡುವ ಒಂದು ನೆಚ್ಚಿನ ವಿಷಯವೆಂದರೆ ಸುರಕ್ಷಿತ ಆಶ್ರಯದ ಆಸ್ತಿಗಳು. ಮಾರುಕಟ್ಟೆಗಳು ಅಸ್ಥಿರಗೊಂಡಾಗ, ಹೂಡಿಕೆದಾರರು ಸಾಮಾನ್ಯವಾಗಿ ಈಕ್ವಿಟಿಗಳಿಂದ ಹೊರಬಂದು ತಮ್ಮ ಹಣವನ್ನು ಹೂಡಿಕೆ ಮಾಡಲು ಸುರಕ್ಷಿತ ಸ್ಥಳಗಳನ್ನು ಹುಡುಕುತ್ತಾರೆ. ಇದರರ್ಥ ಸಾಮಾನ್ಯವಾಗಿ ಸರ್ಕಾರಿ ಬಾಂಡ್‌ಗಳು, ಬಲಗೊಳ್ಳುತ್ತಿರುವ ಯುಎಸ್ ಡಾಲರ್, ಅಥವಾ ಸಾರ್ವಕಾಲಿಕ ನೆಚ್ಚಿನ ಆಯ್ಕೆ ಎಂದರೆ ಅದು ಚಿನ್ನ.

ಲಂಡನ್ ಬೆಂಚ್‌ಮಾರ್ಕ್ ಪ್ರಕಾರ, ಚಿನ್ನದ ಬೆಲೆಯು ಪ್ರತಿ ಟ್ರಾಯ್ ಔನ್ಸ್ (ಸುಮಾರು 31 ಗ್ರಾಂ) ಗೆ 5,300 ಡಾಲರ್‌ ಇಂದ ಸರಿಸುಮಾರು 5,000 ಡಾಲರ್‌ಗೆ ಕುಸಿದಿದೆ. ಇದು ವಿಚಿತ್ರವಾಗಿದೆ, ಏಕೆಂದರೆ ಭೌಗೋಳಿಕ ರಾಜಕೀಯ ಒತ್ತಡದ ಸಮಯದಲ್ಲಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆಯೇ ಹೊರತು ಅದರಿಂದ ದೂರ ಸರಿಯುವುದಿಲ್ಲ.

ಆದರೆ ಚಿನ್ನದ ಇತ್ತೀಚಿನ ಈ ವರ್ತನೆಯ ಹಿಂದೆ ಅಷ್ಟೊಂದು ಸ್ಪಷ್ಟವಾಗಿ ಕಾಣಿಸದ ಮತ್ತೊಂದು ಅಂಶವಿದೆ. ಅದು ದುಬೈ.

ನೀವು ದುಬೈಗೆ ಭೇಟಿ ನೀಡಿದ್ದರೆ ಅಥವಾ ಅದರ ಬಗ್ಗೆ ಕೇಳಿದ್ದರೆ, ಅಲ್ಲಿನ ಪ್ರಖ್ಯಾತ ʼಗೋಲ್ಡ್ ಸೂಕ್ʼ(Gold Souk) ಅಥವಾ ಚಿನ್ನದ ಮಾರುಕಟ್ಟೆಯ ಬಗ್ಗೆ ನಿಮಗೆ ತಿಳಿದಿರುತ್ತದೆ. ಜಗತ್ತಿನ ಒಟ್ಟು ಚಿನ್ನದ ವ್ಯಾಪಾರದಲ್ಲಿ ಸುಮಾರು ಶೇ. 25ರಷ್ಟು ಭಾಗ ದುಬೈನ ಮೂಲಕವೇ ನಡೆಯುತ್ತದೆ. ಆದರೆ, ಮರುಭೂಮಿಯಾಗಿದ್ದ ದುಬೈ ಈ ಮಟ್ಟದ ಸಾಧನೆ ಮಾಡಿದ್ದು ಹೇಗೆ? ಇದರ ಹಿಂದೆ ಒಂದು ಆಸಕ್ತಿದಾಯಕ ಇತಿಹಾಸವಿದೆ.

ಮುಕ್ತ ವ್ಯಾಪಾರ ನೀತಿ: 1900ರ ದಶಕದ ಆರಂಭದಲ್ಲಿ, ದುಬೈನ ಅಂದಿನ ಆಡಳಿತಗಾರರು ಒಂದು ದೊಡ್ಡ ನಿರ್ಧಾರ ಮಾಡಿದರು. ಅವರು ದುಬೈ ಬಂದರಿಗೆ ಬರುವ ವ್ಯಾಪಾರಿಗಳಿಗೆ ತೆರಿಗೆ ವಿನಾಯಿತಿ ನೀಡಿದರು. ಇದರಿಂದಾಗಿ ನೆರೆಯ ಇರಾನ್ ಮತ್ತು ಭಾರತದ ವ್ಯಾಪಾರಿಗಳು ದುಬೈನತ್ತ ಆಕರ್ಷಿತರಾದರು. ದುಬೈ ಒಂದು 'ಮುಕ್ತ ವ್ಯಾಪಾರ ಕೇಂದ್ರ'ವಾಗಿ ಹೊರಹೊಮ್ಮಿತು.

ಇದನ್ನೂ ಓದಿ: ಹಕ್ಕಿ ಹಾರುತಿದೆ ನೋಡಿದಿರಾ…

ಭಾರತದ ಪಾತ್ರ: ದುಬೈ ಚಿನ್ನದ ನಗರಿಯಾಗಲು ಭಾರತದ ಪಾತ್ರ ಬಹಳ ದೊಡ್ಡದಿದೆ. ಸ್ವಾತಂತ್ರ್ಯಾನಂತರ ಭಾರತದಲ್ಲಿ ಚಿನ್ನದ ಆಮದಿನ ಮೇಲೆ ಕಟ್ಟುನಿಟ್ಟಿನ ನಿಯಮಗಳಿದ್ದವು ಮತ್ತು ತೆರಿಗೆ ಹೆಚ್ಚಾಗಿತ್ತು. ಆದರೆ ಭಾರತೀಯರಿಗೆ ಚಿನ್ನದ ಮೇಲೆ ಅಪಾರ ವ್ಯಾಮೋಹ. 1960 ಮತ್ತು 70ರ ದಶಕದಲ್ಲಿ, ದುಬೈನಿಂದ ಭಾರತಕ್ಕೆ ಕಾನೂನುಬಾಹಿರವಾಗಿ ಚಿನ್ನವನ್ನು ಸಾಗಿಸಲಾಗುತ್ತಿತ್ತು. ದುಬೈನಲ್ಲಿ ಚಿನ್ನದ ಮೇಲೆ ಯಾವುದೇ ಆಮದು ತೆರಿಗೆ ಇರಲಿಲ್ಲ. ಈ “ತೆರಿಗೆ ರಹಿತ” ನೀತಿಯಿಂದಾಗಿ ಅಲ್ಲಿ ಚಿನ್ನದ ಬೆಲೆ ಜಗತ್ತಿನಲ್ಲೇ ಅತ್ಯಂತ ಕಡಿಮೆಯಿತ್ತು. 1960ರ ದಶಕದ ವೇಳೆಗೆ, ದುಬೈ ಚಿನ್ನದ ವ್ಯಾಪಾರದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿತ್ತು. ಈ ಹೆಚ್ಚಿನ ಚಿನ್ನವು ಅಂದಿನ ಕಾಲದ ವಿಶ್ವದ ಪ್ರಮುಖ ಬುಲಿಯನ್ ಮಾರುಕಟ್ಟೆಗಳಲ್ಲಿ ಒಂದಾಗಿದ್ದ ಲಂಡನ್‌ನಿಂದ ಹರಿದು ಬರುತ್ತಿತ್ತು. ಇದರ ಪ್ರಮಾಣ ಎಷ್ಟಿತ್ತೆಂದು ನಿಮಗೆ ಅಂದಾಜು ನೀಡಬೇಕೆಂದರೆ, ಕೇವಲ 1968ರಲ್ಲಿಯೇ ದುಬೈ ಸುಮಾರು 56 ಮಿಲಿಯನ್ ಪೌಂಡ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿತ್ತು.

Untitled design

ಆದರೆ, ದುಬೈ “ಬಂಗಾರದ ನಗರಿ”ಯಾಗಿ ನಿಜವಾದ ರೂಪಾಂತರ ಹೊಂದಲು ಪ್ರಾರಂಭಿಸಿದ್ದು ಅದೇ ಸಮಯದಲ್ಲಿ. ಅಲ್ಲಿ ತೈಲ ನಿಕ್ಷೇಪಗಳು ಪತ್ತೆಯಾದಾಗ. ತೈಲ ಸಂಪತ್ತು ನಗರವು ಬಲಿಷ್ಠವಾದ ಮೂಲಸೌಕರ್ಯಗಳನ್ನು ನಿರ್ಮಿಸಲು ನೆರವಾಯಿತು. ದೊಡ್ಡ ಹಡಗುಗಳು ಬಂದು ನಿಲ್ಲಲು ಅನುಕೂಲವಾಗುವಂತೆ ಅಲ್ಲಿನ ಕ್ರೀಕ್ ವಿಸ್ತರಿಸಲಾಯಿತು. ನಂತರ ಬಂದರುಗಳು, ಡ್ರೈ ಡಾಕ್‌ಗಳು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಅಸ್ತಿತ್ವಕ್ಕೆ ಬಂದವು. ತೆರಿಗೆಗಳು ಕಡಿಮೆ ಇದ್ದ ಕಾರಣ ಮತ್ತು ವ್ಯಾಪಾರಕ್ಕೆ ಯಾವುದೇ ಹೆಚ್ಚಿನ ನಿರ್ಬಂಧಗಳಿಲ್ಲದ ಕಾರಣ, ದುಬೈ ವ್ಯಾಪಾರಿಗಳಿಗೆ ಇನ್ನಷ್ಟು ಆಕರ್ಷಕ ತಾಣವಾಯಿತು.

ಇದನ್ನೂ ಓದಿ: ಭಾರತೀಯರನ್ನು ಕರೆತರಲು ಏರ್ ಇಂಡಿಯಾ ಮತ್ತು ಇಂಡಿಗೋ ವಿಶೇಷ ವಿಮಾನಗಳು

ನಂತರ ಮತ್ತೊಂದು ಅನಿರೀಕ್ಷಿತ ತಿರುವು ದುಬೈಗೆ ವರದಾನವಾಯಿತು. ಅದುವರೆಗೆ ಮಧ್ಯಪ್ರಾಚ್ಯದ ಪ್ರಮುಖ ಆರ್ಥಿಕ ಮತ್ತು ವ್ಯಾಪಾರ ಕೇಂದ್ರವಾಗಿದ್ದ ಲೆಬನಾನ್‌ನಲ್ಲಿ ಅಂತರ್ಯುದ್ಧ ಪ್ರಾರಂಭವಾಯಿತು. ಸಂಘರ್ಷ ತೀವ್ರಗೊಂಡಂತೆ, ಲೆಬನಾನ್‌ನ ಅನೇಕ ಚಿನ್ನದ ವ್ಯಾಪಾರಿಗಳು, ಬ್ಯಾಂಕರ್‌ಗಳು ಮತ್ತು ಸರಕು ವ್ಯಾಪಾರಿಗಳು ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ದೇಶ ಬಿಟ್ಟು ಹೊರಬಂದರು. ದುಬೈ ಅವರನ್ನು ಸ್ವಾಗತಿಸಿತು. ಇದರಿಂದಾಗಿ ರಾತ್ರೋರಾತ್ರಿ ಎಂಬಂತೆ, ದುಬೈ ವ್ಯಾಪಾರಕ್ಕೆ ಬೇಕಾದ ಪರಿಣತ ಅನುಭವಿಗಳ ಇಡೀ ಸಮೂಹವನ್ನೇ ತನ್ನದಾಗಿಸಿಕೊಂಡಿತು.

ಹೆಚ್ಚು ಹೆಚ್ಚು ವ್ಯಾಪಾರಿಗಳು ಬಂದಂತೆಲ್ಲಾ, ಚಿನ್ನದ ವಹಿವಾಟಿನ ಪ್ರಮಾಣವೂ ಬೆಳೆಯುತ್ತಾ ಹೋಯಿತು. ಒಮ್ಮೆ ಸಾಧಾರಣವಾಗಿದ್ದ ಡೇರಾದ ʼಗೋಲ್ಡ್ ಸೂಕ್ʼ (ಚಿನ್ನದ ಮಾರುಕಟ್ಟೆ), 22-ಕ್ಯಾರೆಟ್ ಚಿನ್ನದ ಹಾರಗಳು, ಬಳೆಗಳು ಮತ್ತು ಆಭರಣಗಳಿಂದ ಕಂಗೊಳಿಸುವ ಮಿನುಗುವ ಮಾರುಕಟ್ಟೆಯಾಗಿ ವಿಸ್ತರಿಸಿತು. ಕಾಲಾನಂತರದಲ್ಲಿ ಇದು 300ಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರ ಮಳಿಗೆಗಳಿಗೆ ಆಶ್ರಯ ನೀಡಿತು.

ಅಲ್ಲಿಂದಲೇ ದುಬೈ ಅಧಿಕೃತವಾಗಿ 'ಬಂಗಾರದ ನಗರಿ'ಯಾಯಿತು.

ಗುಣಮಟ್ಟ ಮತ್ತು ನಂಬಿಕೆ: ದುಬೈ ಸರಕಾರವು ಚಿನ್ನದ ಶುದ್ಧತೆಯ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿತು. ‘ದುಬೈ ಗುಡ್ ಡೆಲಿವರಿ’ ಮಾನದಂಡವು ಜಾಗತಿಕವಾಗಿ ಮನ್ನಣೆ ಪಡೆಯಿತು. ಪ್ರವಾಸಿಗರಿಗೆ ತಾವು ಖರೀದಿಸುವ ಚಿನ್ನ ಶೇ. 100ರಷ್ಟು ಶುದ್ಧವಾಗಿದೆ ಎಂಬ ನಂಬಿಕೆ ಬಂದಿತು. ಇದು ದುಬೈ ಅನ್ನು ಪ್ರವಾಸಿಗರ ನೆಚ್ಚಿನ ಚಿನ್ನದ ಶಾಪಿಂಗ್ ತಾಣವನ್ನಾಗಿ ಮಾಡಿತು.

ಭೌಗೋಳಿಕ ಸ್ಥಾನ: ದುಬೈ ಪೂರ್ವ ಮತ್ತು ಪಶ್ಚಿಮದ ನಡುವಿನ ಸೇತುವೆಯಂತಿದೆ. ಆಫ್ರಿಕಾದಿಂದ ಗಣಿಗಾರಿಕೆಯಾದ ಚಿನ್ನವು ಸಂಸ್ಕರಣೆಗಾಗಿ ದುಬೈಗೆ ಬರುತ್ತದೆ, ನಂತರ ಅಲ್ಲಿಂದ ಭಾರತ ಮತ್ತು ಚೀನಾದಂಥ ದೊಡ್ಡ ಮಾರುಕಟ್ಟೆಗಳಿಗೆ ರಫ್ತಾಗುತ್ತದೆ. ಜಗತ್ತಿನ ಅತಿ ದೊಡ್ಡ ಚಿನ್ನ ಸಂಸ್ಕರಣಾ ಕೇಂದ್ರಗಳು ಈಗ ದುಬೈನಲ್ಲಿವೆ.

ಇದನ್ನೂ ಓದಿ: ಜಾಗವೊಂದು, ಜಗತ್ತುಗಳು ಹಲವು – ಗ್ಲೋಬಲ್ ವಿಲೇಜ್!

ಆಧುನಿಕ ಮೂಲಸೌಕರ್ಯ: ಕೇವಲ ವ್ಯಾಪಾರವಷ್ಟೆ ಅಲ್ಲದೆ, ದುಬೈ ತನ್ನ ವಿಮಾನ ನಿಲ್ದಾಣಗಳು ಮತ್ತು ಬಂದರುಗಳನ್ನು ಉತ್ತಮ ಮಟ್ಟದಲ್ಲಿ, ವರ್ಲ್ಡ್‌ ಕ್ಲಾಸ್‌ ಆಗಿ ನಿರ್ಮಿಸಿತು. ಇಂದು 'ದುಬೈ ಮಲ್ಟಿ ಕಮೋಡಿಟೀಸ್ ಸೆಂಟರ್‌’ (DMCC) ಮೂಲಕ ಜಗತ್ತಿನಾದ್ಯಂತ ಚಿನ್ನದ ವಹಿವಾಟು ಸುಲಭವಾಗಿ ನಡೆಯುತ್ತಿದೆ. ಕೆಲವು ವರ್ಷಗಳ ನಂತರ ದುಬೈ ಗೋಲ್ಡ್ ಅಂಡ್ ಕಮೋಡಿಟೀಸ್ ಎಕ್ಸ್ಚೇಂಜ್ (DGCX) ಅಸ್ತಿತ್ವಕ್ಕೆ ಬಂದಿತು, ಇದು ಸಾಂಸ್ಥಿಕ ಹೂಡಿಕೆದಾರರಿಗೆ ಚಿನ್ನದ ಫ್ಯೂಚರ್ಸ್ ವ್ಯಾಪಾರ ಮಾಡಲು ನಿಯಂತ್ರಿತ ವೇದಿಕೆಯನ್ನು ಒದಗಿಸಿತು.

ಆದರೆ ದುಬೈನ ಚಿನ್ನದ ವ್ಯಾಪಾರದ ನಿಜವಾದ ಅಡಿಪಾಯವಾಗಿ ಉಳಿದಿರುವುದು ಅಲ್ಲಿನ ತೆರಿಗೆ ನೀತಿಗಳು. ಅನೇಕ ಯುರೋಪಿಯನ್ ದೇಶಗಳಲ್ಲಿ ಖರೀದಿದಾರರು ಚಿನ್ನದ ಮೇಲೆ 15-20% ತೆರಿಗೆಯನ್ನು ಪಾವತಿಸಿದರೆ, ದುಬೈ ಸಾಂಪ್ರದಾಯಿಕವಾಗಿ ಯಾವುದೇ ತೆರಿಗೆಯನ್ನು ವಿಧಿಸುತ್ತಿರಲಿಲ್ಲ. ಕೇವಲ 2018 ರಲ್ಲಿ 5% ವ್ಯಾಟ್ ಅನ್ನು ಪರಿಚಯಿಸಲಾಯಿತು. ಮತ್ತು ವಿಶೇಷವೆಂದರೆ ಆ ತೆರಿಗೆಯನ್ನು ಸಹ ಪ್ರವಾಸಿಗರು ವಿಮಾನ ನಿಲ್ದಾಣದಲ್ಲಿ ಮರುಪಡೆಯಬಹುದು.

ದುಬೈ ತನ್ನ ಚಿನ್ನದ ವ್ಯವಸ್ಥೆಯ ಸುತ್ತ ನಂಬಿಕೆಯನ್ನು ನಿರ್ಮಿಸಲು ಸಹ ಪ್ರಯತ್ನಿಸಿದೆ. ಅಲ್ಲಿನ ಸಂಸ್ಕರಣಾಗಾರಗಳು ಈಗ ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್ (LBMA) ನ ಕಟ್ಟುನಿಟ್ಟಾದ ಮಾನದಂಡಗಳನ್ನು ಪೂರೈಸುತ್ತವೆ.

ಹೀಗಿದ್ದರೂ, ದುಬೈನ ಚಿನ್ನದ ವ್ಯಾಪಾರವು ವಿವಾದಗಳಿಂದ ಹೊರತಾಗಿಲ್ಲ. ಆಫ್ರಿಕಾದಿಂದ ಕಳ್ಳಸಾಗಣೆಯಾದ ಚಿನ್ನಕ್ಕೆ ದುಬೈ ಸೇರಿದಂತೆ ಯುಎಇ ಪ್ರಮುಖ ತಾಣವಾಗಿದೆ ಎಂದು ಆಗಾಗ್ಗೆ ಆರೋಪಿಸಲಾಗುತ್ತದೆ. ಉದಾಹರಣೆಗೆ, ಸ್ವಿಸ್ಸೈಡ್ ವರದಿಯೊಂದರ ಪ್ರಕಾರ, ಕೇವಲ 2022 ರಲ್ಲೇ ಸುಮಾರು 31 ಬಿಲಿಯನ್ ಡಾಲರ್ ಮೌಲ್ಯದ ಸುಮಾರು 435 ಟನ್ ಚಿನ್ನವು ಯಾವುದೇ ಘೋಷಣೆಯಿಲ್ಲದೆ ಆಫ್ರಿಕಾವನ್ನು ತೊರೆದಿದೆ ಮತ್ತು ಇದರಲ್ಲಿ ಹೆಚ್ಚಿನ ಭಾಗ ಯುಎಇ ತಲುಪಿರಬಹುದು ಎಂದು ಅಂದಾಜಿಸಲಾಗಿದೆ. ಇದು ಆ ಖಂಡದ ಒಟ್ಟು ಉತ್ಪಾದನೆಯ ಸುಮಾರು ಶೇ. 40 ಅಥವಾ ಜಾಗತಿಕ ಗಣಿಗಾರಿಕೆಯ ಒಟ್ಟು ಪೂರೈಕೆಯ ಸುಮಾರು ಶೇ.12 ರಷ್ಟಿದೆ.

ಇದನ್ನೂ ಓದಿ: ಆ ಕಿಬ್ಬಲ್ ಪ್ಯಾಲೇಸ್ ಈ ಗಾಜಿನ ಮನೆಗೆ ಸ್ಫೂರ್ತಿ!

ಆದರೆ ಹೌದು, ಯಾವುದೇ ವ್ಯಾಪಾರವು ತನ್ನದೇ ಆದ ಮೈನಸ್ ಅಂಶಗಳಿಲ್ಲದೆ ಇರುವುದಿಲ್ಲ. ಆದಾಗ್ಯೂ, ಸ್ವಂತ ಚಿನ್ನದ ಗಣಿಗಳನ್ನು ಹೊಂದಿಲ್ಲದ ನಗರವೊಂದು ವರ್ಷಕ್ಕೆ ಸುಮಾರು 1,500 ಟನ್ ಚಿನ್ನದ ವಹಿವಾಟಿನೊಂದಿಗೆ ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಕೇಂದ್ರವಾಗಿ ಹೇಗೆ ಮಾರ್ಪಟ್ಟಿದೆ ಎಂಬುದು ನಿರಾಕರಿಸಲಾಗದ ಸತ್ಯ.

ದುಬೈ ಇಲ್ಲಿಗೇ ನಿಂತಿಲ್ಲ. ತನ್ನ 'ಬಂಗಾರದ ನಗರಿ' ಎಂಬ ಹೆಸರನ್ನು ಮತ್ತಷ್ಟು ಸಾರ್ಥಕಗೊಳಿಸಲು, ಡೇರಾದಲ್ಲಿನ ಹೊಸ ಗೋಲ್ಡ್ ಡಿಸ್ಟ್ರಿಕ್ಟ್‌ನಲ್ಲಿ ಅಂದರೆ ಪ್ರಸ್ತುತ 1000ಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳಿರುವ ಗೋಲ್ಡ್ ಸೂಕ್ ಇರುವ ಪ್ರದೇಶದಲ್ಲೇ ಚಿನ್ನದಿಂದ ಆವೃತವಾದ 800 ಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.