ಮೊದಲ ವಿಮಾನಯಾನಕ್ಕೆ ಸರ್ಟಿಫಿಕೇಟ್ ಸಂಭ್ರಮ!
ತಾಯಿ-ತಂದೆಯರಿಗೆ ತಮ್ಮ ಮಕ್ಕಳೆಂದರೆ ಕಾಳಜಿ, ಪ್ರೀತಿ, ಮುದ್ದು. ಮಗು ಸಣ್ಣ ನಗು ಬೀರಿದರೂ ಖುಷಿಯಾಗುತ್ತದೆ. ಅವರಿಗೆ ಮಗುವಿನ ಮೊದಲ ಅನುಭವ ಯಾವತ್ತಿದ್ದರು ವಿಶೇಷ. ಒಬ್ಬ ತಾಯಿ ತನ್ನ ಮಗುವಿನ ಪ್ರತಿ ಮೊದಲ ಅನುಭವವನ್ನು ನೋಡಿ ಆನಂದ ಪಡುತ್ತಾಳೆ, ತಾನೂ ಅದರಲ್ಲಿ ಜೀವಿಸುತ್ತಾಳೆ. ಮೊದಲಸಲ ಅಮ್ಮ ಎಂದು ಕರೆದ ಕ್ಷಣ, ಮೊದಲ ನೋಟ, ಹೆಜ್ಜೆ, ಅಂಗಿ, ಮೊದಲ ತೊದಲು, ಮುನಿಸು ಹೀಗೆ ಮಗುವಿನ ಎಲ್ಲ ಮೊದಲುಗಳು ಆಕೆಗೆ ಅತ್ಯಮೂಲ್ಯ.
- ಸಚಿನ್ ಹೊನ್ನೇಸರ
ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಅನುಭವಗಳ ದಾಖಲೀಕರಣ ಸುಲಭ ಮತ್ತು ಸಾಮಾನ್ಯವಾಗಿದೆ. ಫೊಟೋ, ವಿಡಿಯೋ ಮಾತ್ರವಲ್ಲದೆ ಹೊಸ ಹೊಸ ರೀತಿಯಲ್ಲಿಯೂ ಮಾಡಬಹುದು. ಮಗು ಬಳಸಿದ ಎಲ್ಲ ಬಟ್ಟೆಗಳನ್ನು ಜೋಡಿಸಿ ಚಂದನೆಯ ಹಾಸನ್ನು ತಯಾರಿಸುವುದು, ಮೊದಲ ಬಾರಿ ಮಗುವಿನ ಕೂದಲು ಕತ್ತರಿಸಿದಾಗ ಅದನ್ನ ವಿಶೇಷ ರೀತಿಯಲ್ಲಿ ಫ್ರೇಮ್ ಮಾಡಿಸುವುದು, ಮೊದಲ ಹೆಜ್ಜೆಯ ನೆನಪಿಗೆ ಮಗುವಿನ ಪಾದದ ಅಚ್ಚನ್ನು ತಯಾರಿಸುವುದು, ಹೀಗೆ ಹಲವು ಹೊಸ ಉಪಾಯಗಳು ಇಂದು ಪ್ರಚಲಿತದಲ್ಲಿವೆ.
ತಾಯಂದಿರ ಈ ಮಿಡಿತವನ್ನು ಅರ್ಥ ಮಾಡಿಕೊಂಡ ವಿಮಾನಯಾನ ಉದ್ಯಮಗಳು ಮಗುವಿನ ಮೊದಲ ವಿಮಾನ ಪ್ರಯಾಣವನ್ನು ವಿಶೇಷವಾಗಿಸಿ, ನೆನಪಿನಲ್ಲಿ ಉಳಿಸುವ ಸಲುವಾಗಿ ಒಂದು ಯೋಜನೆಯನ್ನು ಹಮ್ಮಿಕೊಂಡಿತು. ಅದೇ ಮೊದಲ ವಿಮಾನಯಾನದ ಪ್ರಮಾಣ ಪತ್ರ (ಫರ್ಸ್ಟ್ ಫ್ಲೈಟ್ ಸರ್ಟಿಫಿಕೇಟ್).
ಏನಿದು ಪ್ರಮಾಣಪತ್ರ?
ಹಲವು ಏರ್‌ಲೈನ್ ಸಂಸ್ಥೆಗಳು ನಿಮ್ಮ ಮಗು ಮೊಟ್ಟ ಮೊದಲ ಬಾರಿಗೆ ವಿಮಾನಯಾನ ಮಾಡಿದಾಗ ಒಂದು ಪ್ರಮಾಣಪತ್ರವನ್ನು ನೀಡುವ ಸೌಕರ್ಯವನ್ನು ಅಳವಡಿಸಿಕೊಂಡಿದೆ. ಈ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರು, ಮಗು ಪ್ರಯಾಣ ಮಾಡುತ್ತಿರುವ ವಿಮಾನದ ಸಂಖ್ಯೆ, ದಿನಾಂಕ, ಹೊರಡುವ ಮತ್ತು ತಲುಪುವ ಸ್ಥಳ ಇವುಗಳನ್ನು ದಾಖಲಿಸುತ್ತದೆ. ಪ್ರಮಾಣಪತ್ರಕ್ಕೆ ವಿಮಾನದ ಕ್ಯಾಪ್ಟನ್ ಹಾಗು ಕ್ಯಾಬಿನ್ ಸಿಬ್ಬಂದಿ ಸಹಿ ಹಾಕಿ ಮತ್ತಷ್ಟು ವಿಶೇಷವಾಗಿಸುತ್ತಾರೆ. ಇದು ಮಗುವಿನ ಜೀವನದಲ್ಲಿ ಉಳಿಯುವ ಒಂದು ದಾಖಲೆ.
ಇದನ್ನೂ ಓದಿ: ವಿದೇಶ ಪ್ರವಾಸ ಸಸ್ಯಾಹಾರಿಗಳಿಗೆ ಸಾಹಸ
ಮಗು ಮೊದಲ ಬಾರಿ ಪ್ರಯಾಣ ಮಾಡುತ್ತಿದೆ ಎಂದು ಪ್ರಯಾಣಿಸುತ್ತಿರುವ ಏರ್‌ಲೈನ್ ಸಂಸ್ಥೆಗೆ ತಿಳಿಸುವ ಜವಾಬ್ದಾರಿ ನಿಮ್ಮದು. ಪ್ರಯಾಣದ ಒಂದೆರಡು ದಿನ ಮೊದಲೇ ಸಂಸ್ಥೆಯ ಗ್ರಾಹಕ ಪ್ರತಿನಿಧಿಗಳಿಗೆ ಕರೆ ಮಾಡಿ ಇದನ್ನು ತಿಳಿಸಿದರೆ ಒಳ್ಳೆಯದು. ಇಲ್ಲವಾದರೆ, ಏರ್‌ಪೋರ್ಟ್ ತಲುಪಿ ಚೆಕ್‌ಇನ್ ಮಾಡುವಾಗ ಅವರಿಗೆ ಹೇಳಿ. ವಿಮಾನ ಏರಿದ ನಂತರ ಅಲ್ಲಿರುವ ವಿಮಾನ ಸಿಬ್ಬಂದಿಗೆ ಮತ್ತೊಮ್ಮೆ ಹೇಳುವುದನ್ನು ಮರೆಯದಿರಿ.
ಪೈಲೆಟ್ ಒಪ್ಪಿದರೆ, ಕೆಲವೊಮ್ಮೆ ಪೈಲೆಟ್ ಕ್ಯಾಬಿನ್‌ನಲ್ಲಿ ಕೂಡ ಫೋಟೋ ತೆಗೆದುಕೊಳ್ಳಲು ಅವಕಾಶ ಸಿಗಬಹುದು. ಅಷ್ಟೇ ಅಲ್ಲದೆ, ನಿಮ್ಮ ಮಗು ಮೊದಲ ಬಾರಿ ವಿಮಾನಯಾನ ಮಾಡುತ್ತಿದೆ ಎಂಬ ಕುರಿತು ಚಂದನೆಯ ಅನೌನ್ಸ್ಮೆಂಟ್ ಕೂಡ ಮಾಡಬಹುದು. ಜತೆಗೆ, ಮಗುವಿಗೆ ಉಡುಗೊರೆಗಳನ್ನು ಸಹ ನೀಡಬಹುದು. ಈ ಸೌಲಭ್ಯಗಳು ಎಲ್ಲ ವಿಮಾನಗಳಲ್ಲಿ ಇರುವುದಿಲ್ಲ.

ಸರ್ಟಿಫಿಕೆಟ್ ಇಲ್ಲದಿದ್ದರೆ?
ಎಲ್ಲ ವಿಮಾನಗಳಲ್ಲಿ ಪ್ರಮಾಣಪತ್ರದ ವ್ಯವಸ್ಥೆ ಇಲ್ಲದಿರಬಹುದು. ಆಗ ಪ್ರಯಾಣದ ಮೊದಲೇ ಅಂತರ್ಜಾಲದಲ್ಲಿ ಸಿಗುವ ಸಿದ್ಧಮಾದರಿಯ ಸರ್ಟಿಫಿಕೇಟ್ ಪ್ರಿಂಟ್ ಮಾಡಿ ತೆಗೆದುಕೊಂಡು ಹೋಗಿ. ಅಲ್ಲಿರುವ ವಿಮಾನ ಸಿಬ್ಬಂದಿಯ ಬಳಿ ವಿನಂತಿ ಮಾಡಿಕೊಳ್ಳಿ. ಖುಷಿಯಿಂದ ಸಹಿ ಹಾಕಿಕೊಡುತ್ತಾರೆ. ಇದರಿಂದ ನಿಮ್ಮ ಮಗುವಿನ ಮೊದಲ ವಿಮಾನ ಪ್ರಯಾಣ ನೆನಪಿನಲ್ಲಿ ಉಳಿಯುವ ದಾಖಲೆಯಾಗುತ್ತದೆ.
ಮಗಳ ಮೊದಲ ಅನುಭವ
ಇತ್ತೀಚೆಗೆ ನನ್ನ ಮಗಳು ತನ್ನ ಮೊದಲ ವಿಮಾನಯಾನ ಮಾಡಿದಳು. ಅಂದಹಾಗೆ, ಎರಡು ವರ್ಷ ಆಗುವ ಮೊದಲು ವಿಮಾನಯಾನ ಮಾಡಿದರೆ ಮಕ್ಕಳಿಗೆ ಪ್ರತ್ಯೇಕ ಟಿಕೆಟ್ ಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಪ್ರಯಾಣದ ಅಂತ್ಯದಲ್ಲಿ ಕ್ಯಾಬಿನ್ ಸಿಬ್ಬಂದಿ ಸರ್ಟಿಫಿಕೇಟ್ ನೀಡಿ ಮಗಳ ಮೊದಲ ವಿಮಾನ ಪ್ರಯಾಣವನ್ನು ಸ್ಮರಣೀಯವಾಗಿಸಿದರು.
ನಮ್ಮ ಪ್ರಕಾರ ಅವಳಿಗೆ ವಿಮಾನ ನೋಡಿ ಖುಷಿಯಾಗುತ್ತದೆ. ಆದರೆ ಅವಳಿಗೆ ಹೆಚ್ಚು ಸಂತೋಷ ಕೊಟ್ಟಿದ್ದು ವಿಮಾನ ನಿಲ್ದಾಣದಲ್ಲಿದ್ದ ಕಾರ್ ಹಾಗೂ ಟ್ರಕ್. ಟೇಕ್ ಆಫ್ ಸಂದರ್ಭದಲ್ಲಿ ಒಂದು ವಿಚಿತ್ರ ಅನುಭವವಾಗುತ್ತದೆ, ಅದು ಆಕೆಗೆ ಹೊಸತೆನಿಸಿ ನಕ್ಕಳು. ಮೊಡವನ್ನು ನೋಡಿ ‘ಮೊಡ ಗುಡ್ಡೆ ಗುಡ್ಡೆಯಾಗಿದೆ’ ಎಂದು ಹೇಳಿ ಅಲ್ಲೇ ಆಟವಾಡಿದಳು. ವಿಮಾನ ಲ್ಯಾಂಡ್ ಆಗಿದ್ದೆ ಕಿಟಕಿಯ ಸುತ್ತ-ಮುತ್ತ ತಡಕಾಡಲು ಪ್ರಾರಂಭಿಸಿದಳು. ಏನೂ ಸಿಗದಿದ್ದಾಗ ‘ಬಾಗಿಲು ಎಲ್ಲಿದೆ, ಕಾಣ್ತಾ ಇಲ್ಲ’ ಎಂಬ ಅವಳ ತೊದಲು ಮಾತುಗಳನ್ನು ಕೇಳಿದಾಗ ಮೊದಲ ವಿಮಾನಯಾನದ ಸಂಭ್ರಮ ಮನದಲ್ಲಿತ್ತು.