Wednesday, February 4, 2026
Wednesday, February 4, 2026

ಹಿರೋಶಿಮಾ ನೆಲದಲ್ಲೀಗ ಶಾಂತಿಯ ದಿಗ್ವಿಜಯ

1945ರಲ್ಲಿ ಅಣುಬಾಂಬ್ ದಾಳಿಯಿಂದ ಭಸ್ಮವಾಗಿದ್ದ ಹಿರೋಶಿಮಾ, ಕೇವಲ ಶೋಕದಲ್ಲಿ ಮುಳುಗಿಹೋಗದೆ, ತನ್ನೆಲ್ಲಾ ನೋವನ್ನು ಬದಲಾವಣೆಗಾಗಿ ಬಳಸಿ, ಶಾಂತಿ ಮತ್ತು ಪ್ರಗತಿಯ ಮಾರ್ಗವನ್ನು ಆರಿಸಿತು. ಇಂದು ಅದು ಪ್ರಪಂಚಕ್ಕೆ ಶಾಂತಿಯ ಸಂದೇಶ ಸಾರುವ ನಗರವಾಗಿದೆ. ಶಿಕ್ಷಣ ತಂತ್ರಜ್ಞಾನ, ಪರಿಸರ ಸ್ನೇಹಿ ಯೋಜನೆಗಳಲ್ಲಿ ಹಿರೋಶಿಮಾ ವಿಶ್ವಮಟ್ಟದಲ್ಲಿ ಮುಂಚೂಣಿಯಲ್ಲಿದೆ.

  • ಗಣೇಶಪ್ರಸಾದ (ಸಗಮಿಹರ, ಜಪಾನ್)

2025ರ ಜೂನ್ 16 ಈ ದಿನಾಂಕ ನನ್ನ ಜೀವನದಲ್ಲಿ ಕೇವಲ ಮತ್ತೊಂದು ದಿನವಲ್ಲ – ಅದು ನನ್ನ ಅಣು ವಿಜ್ಞಾನದ ದುರಂತದ ಬಗ್ಗೆ ಅಂತರ್‌ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ ದಿನ. ಟೋಕಿಯೋದಿಂದ ವಿಮಾನದಲ್ಲಿ ಪ್ರಯಾಣಿಸಿ ನಾನು ಮೊದಲ ಬಾರಿಗೆ ಹಿರೋಶಿಮಾ ನಗರಕ್ಕೆ ಕಾಲಿಟ್ಟೆ. ನನ್ನ ಮನಸು ಕುತೂಹಲ ಮತ್ತು ಗಂಭೀರತೆಯ ಮಧ್ಯೆ ತೇಲಾಡುತ್ತಿತ್ತು. ಈ ಪ್ರವಾಸದಿಂದ ಇತಿಹಾಸವನ್ನು ಕಣ್ಣಾರೆ ನೋಡುವ ಅವಕಾಶವಾಗಲಿದೆ ಎಂಬ ಭಾವನೆ ಮನಸಿನಲ್ಲಿ ಮೂಡಿತ್ತು.

ಅಲ್ಲಿಗೆ ತಲುಪಿದ ಮೊದಲ ದಿನವೇ ನಾನು Peace Memorial Parkಗೆ ತೆರಳಿದೆ. ನನ್ನ ಭಾಗ್ಯವಶಾತ್ ಭೇಟಿಯಾದವರು Noda-san, 1945ರ ಅಣು ಬಾಂಬ್ ದುರಂತದ ವೇಳೆ ಅವರು ಕೇವಲ ಆರು ತಿಂಗಳ ಮಗು. ಹಿರೋಶಿಮಾದ ground zeroದಿಂದ 1.3ಕಿಮೀ ದೂರದಲ್ಲಿ ಅವರ ಮನೆ ಇತ್ತು. ಇಂದು ಅವರು ತಮ್ಮ ಜೀವನವನ್ನೇ ಶಾಂತಿಯ ಸಂದೇಶದ ಹರಿಕಾರನಾಗಿ ರೂಪಿಸಿಕೊಂಡಿದ್ದಾರೆ. ಅವರು ಬಹು ಚುರುಕಾಗಿ ನಮ್ಮನ್ನು ಕೈಹಿಡಿದು ನಡೆಸಿದಂತೆ ಎಲ್ಲಾ ಸ್ಥಳಗಳಿಗೆ ಮಾರ್ಗದರ್ಶನ ನೀಡಿದರು – ಮಾತುಗಳಲ್ಲಿ ನಿರೀಕ್ಷೆಯ ಛಾಯೆಯಿದ್ದರೂ, ಇತಿಹಾಸದ ಆಳವೂ ಇತ್ತು.

ಇದನ್ನೂ ಓದಿ: ಹನುಮನನ್ನೇ ಬಂಧಿಸಿದ ಜಗನ್ನಾಥ!

Ground Zero – ನಾಶದ ಕೇಂದ್ರ ಬಿಂದು

Noda-san ಮೊದಲಿಗೆ ನಮ್ಮನ್ನು ಕರೆದುಕೊಂಡು ಹೋದುದು Ground Zero, ಅಂದರೆ ಅಣುಬಾಂಬ್ ಬಿದ್ದ ನಿಖರ ಸ್ಥಳ. ಈ ಸ್ಥಳಕ್ಕೂ 580ಮೀಟರ್ ಮೇಲೆ 1945ರ ಆಗಸ್ಟ್ 6ರಂದು ಬೆಳಗ್ಗೆ 8:15ಕ್ಕೆ ʻLittle Boyʼ ಅಣುಬಾಂಬ್ ಸ್ಫೋಟಗೊಂಡಿತು. ಅದು ಬಿದ್ದದ್ದು Shima Hospital ಮೇಲಾಗಿದ್ದು, ಇದೇ ಪ್ರದೇಶವು ಇಂದು Ground Zero ಎನಿಸಿದೆ.

ಈ ಬಾಂಬ್ ಬೀಳುವುದರ ಹಿಂದಿರುವ ತಂತ್ರಜ್ಞರ ನಿರ್ಧಾರ ಒಂದು ಭೀಕರ ನಿರ್ಧಿಷ್ಟತೆ ಹೊಂದಿತ್ತು. ಹಿರೋಶಿಮಾ ನಗರವನ್ನು ಅಮೆರಿಕಾದ Target Committee ಪಟ್ಟಿ ಮಾಡಿದಾಗ, ಈ ಕೆಳಗಿನ ವಿಚಾರವನ್ನು ಪರಿಗಣಿಸಿತ್ತು:

  1. Heavy industrial city and also Military Ammunition Factory (ಅಂದಿನ ಕಾಲಕ್ಕೆ ಹಿರೋಶಿಮಾ ದಕ್ಷಿಣ ಜಪಾನಿನಲ್ಲಿ ಅತಿದೊಡ್ಡ Army base)
  2. ಸಮತಟ್ಟಾದ ನಗರ, ಹೆಚ್ಚು ಪರಿಣಾಮ ಬೀರುವ ಭೂಪ್ರದೇಶ. ದಕ್ಷಿಣ ಜಪಾನೀನ ಮುಖ್ಯ ಬಂದರು.
  3. ಇತರ ಬಾಂಬ್‌ಗಳಿಗೆ ದಾಳಿಗೊಳಗಾಗಿಲ್ಲದ ಜಪಾನ್‌ನ ನಗರ.
  4. Aioi Bridge – ʻTʼ ಆಕಾರದ ವಿಶಿಷ್ಟ ಸೇತುವೆ – ವಿಮಾನದಿಂದ ಸುಲಭವಾಗಿ ಗುರುತಿಸಬಹುದಾದ ಗುರಿ ಹಾಗೂ ಅದರ ಪಕ್ಕದಲ್ಲೇ ಇರುವ industrial promotion hall.

ಈ ಎಲ್ಲಾ ಕಾರಣಗಳಿಂದಾಗಿ, ಹಿರೋಶಿಮಾ ನಗರ ಆಯ್ಕೆಯಾಯಿತು. ಆದರೆ ಅಲ್ಲಿ ಬದುಕುತ್ತಿದ್ದ ಜನರಿಗೆ ಮತ್ತು ಜಪಾನ್‌ಗೆ ಆ ದಿನ ಅಂಧಕಾರವಾಗಿತ್ತು – ಸಾವಿರಾರು ಅಮಾಯಕರು ಕ್ಷಣಮಾತ್ರದಲ್ಲಿ ಜೀವ ಕಳೆದುಕೊಂಡರು.

Untitled design (44)

Noda-san ಇದನ್ನು ನಕ್ಷೆಯಲ್ಲಿ ತೋರಿಸುತ್ತಾ ಹೇಳಿದರು ʻನಾವು ನಮ್ಮ ನೆಲೆಯಲ್ಲಿ ಬದುಕುತ್ತಿದ್ದವರು. ಅದು ನಮಗೆ ಊರು, ಅವರಿಗೋ ಗುರಿ!ʼ ಅವರ ಮಾತುಗಳು ಗದ್ಗದಿತವಾಗಿತ್ತು.

Atomic Bomb Dome – ಮೌನದ ಶಿಲ್ಪ

Ground Zero ಪಕ್ಕದಲ್ಲೇ ನಿಂತಿರುವುದು Atomic Bomb Dome. ಇದರ ಮೂಲ ಹೆಸರು Hiroshima Prefectural Industrial Promotion Hall. 1915ರಲ್ಲಿ Czech ಮೂಲದ ಆರ್ಕಿಟೆಕ್ಟ್ Jan Letzel ರಚಿಸಿದ ಈ ಕಟ್ಟಡ, ಅಂದಿನ ಹಿರೋಶಿಮಾದ ಅಭಿವೃದ್ಧಿಯ ಸಂಕೇತವಾಗಿತ್ತು. ಆದರೆ, 1945ರ ಸ್ಫೋಟದಲ್ಲಿ ಕಟ್ಟಡ ಸಂಪೂರ್ಣವಾಗಿ ನಾಶವಾಗಲಿಲ್ಲ. ಸ್ಫೋಟದ ಕೇಂದ್ರದಿಂದ ಕೇವಲ 160 ಮೀಟರ್ ದೂರದಲ್ಲಿದ್ದರೂ, ಇದರ ಉದ್ದದ ಗೋಡೆಗಳು ಮತ್ತು ಕಂಬಗಳು ಭಾಗಶಃ ಉಳಿದವು.

ಈ ರಚನೆ ಇಂದು ಜಪಾನ್‌ನ ಶ್ರಮ, ಸಹನೆ, ಮನುಷ್ಯತ್ವದ ಗೆಲುವು, ಯುದ್ಧದ ತೀವ್ರತೆಯ ನೆನಪಿನ ಪ್ರತೀಕವಾಗಿದ್ದು, 1996ರಲ್ಲಿ UNESCO ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ.

Noda-san ಶಾಂತವಾಗಿ ಹೇಳಿದರು `ಇದು ಕೇವಲ ಇಟ್ಟಿಗೆಗಳ ಕಟ್ಟಡವಲ್ಲ… ಇದು ನಮ್ಮ ನೆನಪಿನ ದೀಪ’ ಎಂದು.

ಈ ಹಂತದಲ್ಲಿ ನನ್ನ ಹೃದಯ ತೀವ್ರವಾಗಿ ಸ್ಪರ್ಶಿತವಾಗಿತ್ತು. ಈ ದಿನ ನನಗೆ ಇತಿಹಾಸವಲ್ಲ, ಮಾನವತೆಯ ಪಾಠವಾಯಿತು.

Hiroshima : The Promenade of Peace

ಹಿರೋಶಿಮಾ ಹೆಸರು ಕೇಳಿದಾಗಲೇ ವಿಶ್ವದ ಚಿತ್ತ ಚಲಿಸುತ್ತದೆ. ಮಾನವ ಇತಿಹಾಸದ ಅತಿದಾರುಣ ಕ್ಷಣವೊಂದನ್ನು ಸಹಿಸಿಕೊಂಡ ಈ ನಗರ ಇಂದು ಮಾನವ ಸಹನೆಯ ಪುನರ್ ನಿರ್ಮಾಣದ ಹಾಗೂ ಶ್ರೇಷ್ಠತೆಯ ಜ್ಯೋತಿಯಾಗಿದೆ ಎನ್ನುವುದು ನಿಜಕ್ಕೂ ಅದ್ಭುತ. 1945ರಲ್ಲಿ ಅಣುಬಾಂಬ್ ದಾಳಿಯಿಂದ ಭಸ್ಮವಾಗಿದ್ದ ಹಿರೋಶಿಮಾ, ಕೇವಲ ಶೋಕದಲ್ಲಿ ಮುಳುಗಿಹೋಗದೆ, ತನ್ನೆಲ್ಲಾ ನೋವನ್ನು ಬದಲಾವಣೆಗಾಗಿ ಬಳಸಿ, ಶಾಂತಿ ಮತ್ತು ಪ್ರಗತಿಯ ಮಾರ್ಗವನ್ನು ಆರಿಸಿತು. ಇಂದು ಅದು ಪ್ರಪಂಚಕ್ಕೆ ಶಾಂತಿಯ ಸಂದೇಶ ಸಾರುವ ನಗರವಾಗಿದೆ. ಶಿಕ್ಷಣ ತಂತ್ರಜ್ಞಾನ, ಪರಿಸರ ಸ್ನೇಹಿ ಯೋಜನೆಗಳಲ್ಲಿ ಹಿರೋಶಿಮಾ ವಿಶ್ವಮಟ್ಟದಲ್ಲಿ ಮುಂಚೂಣಿಯಲ್ಲಿದೆ.

Untitled design (41)

ಹಿರೋಶಿಮಾ ಬೋಧಿಸುವ ಮಾನವೀಯತೆ ಮತ್ತು ಮೌಲ್ಯ

ಹಿರೋಶಿಮಾ ಜಪಾನಿನ ಮುಂದಿನ ಪೀಳಿಗೆಗೆ ಮಹತ್ವಪೂರ್ಣ ಪಾಠ ಕಲಿಸಿತು. ಕ್ರೌರ್ಯದ ನಡುವೆಯೂ ಮಾನವೀಯತೆ ಉಳಿಯಬಹುದು. ಈ ನಗರವು ‘ಹಿಬಾಕುಶಾ’ (ಅಣುಬಾಂಬ್ ನಿಂದ ಬದುಕುಳಿದವರು) ಅವರ ಮೂಲಕ, ಕೇವಲ ಭಾವೋದ್ವೇಗವಲ್ಲ, ಜಾಗತಿಕ ಮೌಲ್ಯಗಳ ಭಾವನೆಗಳನ್ನು ಪೋಷಿಸಿತು. ಹಿರೋಶಿಮಾದ ಶಾಲಾ-ಕಾಲೇಜುಗಳಲ್ಲಿ ಇತಿಹಾಸವನ್ನು ಬದುಕನ್ನು ರೂಪಿಸುವ ಪಾಠವಾಗಿ ಕಲಿಸಲಾಗುತ್ತಿದೆ.

ತಂತ್ರಜ್ಞಾನ ಮತ್ತು ಪರಿಸರಸ್ನೇಹಿ ಬೆಳವಣಿಗೆಗೆ ಹಿರೋಶಿಮಾ

ಹಿರೋಶಿಮಾ ತನ್ನ ಪುನರ್ ನಿರ್ಮಾಣದ ಭಾಗವಾಗಿ ಅತಿ ಪ್ರಾಥಮಿಕ ಹಂತದಲ್ಲಿಯೇ ಪರಿಸರ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುತ್ತಾ, ವಾತಾವರಣಕ್ಕೆ ಅಣುಬಾಂಬ್‌ನಿಂದಾದ ದುಷ್ಟ ಪರಿಣಾಮಗಳ ವಿರುದ್ಧ ಜಾಗೃತಿ ಮೂಡಿಸಿತು. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಟ್ರಾಮ್ ವ್ಯವಸ್ಥೆ, ಹಸಿರು ಉದ್ಯಾನಗಳು, ಕಡಿಮೆ ಕಾರ್ಬನ್ ಉತ್ಪನ್ನಗಳು ಮತ್ತು ಪ್ಲಾಸ್ಟಿಕ್ ವಿರೋಧಿ ಅಭಿಯಾನಗಳ ಮೂಲಕ ಇತರ ನಗರಗಳಿಗೆ ಮಾದರಿಯಾಗಿದೆ ಎನ್ನುವುದೇ ಗಮನಾರ್ಹ.

ಶೂನ್ಯದಿಂದ ಶ್ರೇಷ್ಠತೆಗೆ ಹಿರೋಶಿಮಾ

ಹಿರೋಶಿಮಾ ಶೂನ್ಯ ಸ್ಥಿತಿಗೆ ತಲುಪಿದ ಮೊದಲ ಮಹಾನಗರಗಳಲ್ಲಿ ಒಂದು. ತೆಂಗಿನ ಚಿಪ್ಪಿನಂತಿದ್ದ ಈ ನಗರ, ತ್ವರಿತಗತಿಯಲ್ಲಿ ಕೈಗೊಂಡ ಪುನರ್ ನಿರ್ಮಾಣದ ಪ್ರಯತ್ನಗಳಿಂದಾಗಿ ಕೆಲವೇ ದಶಕಗಳಲ್ಲಿ ಎತ್ತರದ ಕಟ್ಟಡಗಳು, ಆಧುನಿಕ ಸಂಚಾರ ವ್ಯವಸ್ಥೆ, ಶುದ್ಧತೆಯ ನಗರವಾಗುವವರೆಗೆ ಬೆಳೆಯಿತು. ಈ ಪುನರ್ ನಿರ್ಮಾಣದ ಮಾದರಿಯನ್ನು ಇಡೀ ಜಪಾನ್ ದೇಶ ಅಳವಡಿಸಿಕೊಂಡಿತು. ಹಿರೋಶಿಮಾ ತೋರಿದ ಶ್ರಮ ಮತ್ತು ತ್ಯಾಗ ಜಪಾನ್‌ನ ಇತರೆ ಭಾಗಗಳಿಗೂ ಸ್ಪೂರ್ತಿಯಾಗಿ, ತಾಂತ್ರಿಕ ಅಭಿವೃದ್ಧಿ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಕಾರಣವಾಯಿತು.

Untitled design (43)

ಯುದ್ಧ ತ್ಯಜಿಸಿದ ಹಿರೋಶಿಮಾ

ಅಣುಬಾಂಬ್ ದಾಳಿಯ ತೀವ್ರತೆಯಿಂದ ಪಾಠ ಕಲಿತ ಜಪಾನ್, ʻಯುದ್ಧ ತ್ಯಜಿಸುʼ ಎಂಬ ತತ್ವವನ್ನು ತನ್ನ ಸಂವಿಧಾನದಲ್ಲಿ (Article 9) ಸ್ಥಿರಗೊಳಿಸಿತು. ಹಿರೋಶಿಮಾ ಈ ನಿಟ್ಟಿನಲ್ಲಿ ಶಾಂತಿಯ ಸಂದೇಶವನ್ನು ವಿಶ್ವದ ಮೂಲೆಮೂಲೆಗೆ ಹರಡಿದೆ. Peace Memorial Park, Hiroshima Peace Memorial Museum, ಹಾಗೂ Hiroshima Peace Declaration ಪ್ರತಿವರ್ಷ ಆಗಸ್ಟ್ 6ರಂದು ನಡೆಯುವ ಶಾಂತಿ ಸಭೆಗಳ ಮೂಲಕ ಜಗತ್ತಿಗೆ ಯುದ್ಧವಿಲ್ಲದ ಜಗತ್ತಿನ ಆಶಯವನ್ನು ಸಾರುತ್ತದೆ. ಇದು ಜಪಾನ್‌ಗೆ ಶಾಂತಿಯ ದೂತನಾಗಿ ಜಾಗತಿಕ ಮಟ್ಟದಲ್ಲಿ ಮಾನ್ಯತೆಯನ್ನು ತಂದಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...