• ಜ್ಯೋತಿ ಪ್ರಸಾದ್

ಹಾಲೆಂಡ್ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಣವೆಂದರೆ ಬಣ್ಣಬಣ್ಣದ ಹೂವುಗಳು.ವಿವಿಧ ರೀತಿಯ ಹೂಗಳನ್ನರಳಿಸಿ , ವಿಶ್ವದೆಲ್ಲೆಡೆಗಳಿಂದ ಪ್ರವಾಸಿಗಳನ್ನು ತನ್ನೆಡೆಗೆ ಸೆಳೆಯುತ್ತದೆ ಹಾಲೆಂಡಿನ ಹೂದೋಟ “ಕ್ಯುಕೆನ್ ಹಾಫ್”.

ನೆದರ್ಲೆಂಡಿನ ದಕ್ಷಿಣ ಹಾಲೆಂಡ್ ಪ್ರಾಂತದ ಲಿಸ್ಸೆ ಪಟ್ಟಣದಲ್ಲಿರುವ ಈ ಜಗತ್ಪ್ರಸಿದ್ಧ ಸುಂದರ ಹೂದೋಟವನ್ನು 'ಯುರೋಪ್ಸ್ ಗಾರ್ಡನ್' ಎಂದೂ ಕರೆಯುತ್ತಾರೆ. ಪ್ರತಿ ವಸಂತ ಕಾಲದಲ್ಲಿ, ಮಾರ್ಚ್ ಕೊನೆಯವಾರದಿಂದ ಮೇ ಮಧ್ಯದವರೆಗೆ ಕೇವಲ ಎಂಟು ವಾರಗಳ ಕಾಲ ಮಾತ್ರ ತೆರೆದಿರುವ ಈ ತೋಟ, ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

ನೆದರ್ಲೆಂಡಿನ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌ನಿಂದ ಸುಮಾರು 40 ಕಿ.ಮಿ ದೂರದಲ್ಲಿದ್ದು ಕೇವಲ ಅರ್ಧ ಗಂಟೆ ಪ್ರಯಾಣದಲ್ಲಿ “ಕ್ಯೂಕೆನ್ಹಾಫ್ “ ತಲುಪಬಹುದು.

ವಿಮಾನ ಮತ್ತು ರೈಲು ನಿಲ್ದಾಣಗಳೂ ಸೇರಿದಂತೆ ಆಮ್‌ಸ್ಟರ್‌ಡ್ಯಾಮ್‌ ನ ಪ್ರಮುಖ ಜಾಗಗಳಿಂದ ಹಲವಾರು ಬಸ್ಸುಗಳು ಇಲ್ಲಿಗೆ ಓಡಾಡುತ್ತಲೇ ಇರುತ್ತವೆ.ಅಲ್ಲದೇ ನಿಮಗೆ ಪೂರ್ತಿ ದಿನದ ಕ್ಯುಕೆನ್ ಹಾಫ್ ತೋಟದ ಪ್ರವಾಸ ಮಾಡಿಸಿ ವಾಪಸ್ಸು ಕರೆತರುವ ಪ್ರವಾಸಿ ವಾಹನಗಳೂ ದೊರೆಯುತ್ತವೆ.

Keukenhof (1)

ಈ ತೋಟದೊಳಗೆ ಕಾಲಿಟ್ಟ ಕೂಡಲೇ ಯಾವುದೋ ಒಂದು ಮಾಂತ್ರಿಕ ಲೋಕಕ್ಕೆ ಕಾಲಿಟ್ಟ ಭಾವನೆ ಮೂಡುತ್ತದೆ. ಮುಖ್ಯ ದ್ವಾರದಿಂದ ಒಳಗೆ ಹೋಗುತ್ತಿದ್ದಂತೆ, ಕಣ್ಣು ಕುಕ್ಕುವಂತಹ ಬಣ್ಣಬಣ್ಣದ ಟ್ಯೂಲಿಪ್‌ಗಳು,ಹೈಯಸಿಂತ್‌ಗಳು,ಡಾಫೊಡಿಲ್ ಗಳು, ಲಿಲ್ಲಿಗಳು ಮತ್ತು ಆರ್ಕಿಡ್‌ಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಈ ತೋಟವು ಸುಮಾರು 32 ಹೆಕ್ಟೇರ್ ಪ್ರದೇಶದಲ್ಲಿ ಹರಡಿದ್ದು, ಜಗತ್ತಿನ ಅತಿ ದೊಡ್ಡ ಟ್ಯೂಲಿಪ್ ಉದ್ಯಾನವನವೆಂಬ ಖ್ಯಾತಿ ಗಳಿಸಿದೆ.ಇಲ್ಲಿ ಪ್ರತಿ ವರ್ಷ ಸುಮಾರು 7 ದಶಲಕ್ಷಕ್ಕೂ ಹೆಚ್ಚು ಹೂವಿನ ಬಲ್ಬ್‌ಗಳನ್ನು ನೆಡಲಾಗುತ್ತದೆ. ಇಲ್ಲಿರುವ ಪ್ರತಿ ಹೂವಿನ ತಳಿ, ಅದರ ಬಣ್ಣ ಮತ್ತು ವಿನ್ಯಾಸ ಅನನ್ಯವಾಗಿರುತ್ತದೆ. ಕೆಂಪು, ಹಳದಿ, ನೀಲಿ, ನೇರಳೆ ಮತ್ತು ಗುಲಾಬಿ ಬಣ್ಣದ ಟ್ಯೂಲಿಪ್‌ಗಳು ಅಲೆ ಅಲೆಯಾಗಿ ಹರಡಿರುವಂತೆ ಕಾಣುತ್ತವೆ.ಹಾಗೆಯೇ ಕೆಲವು ಟ್ಯೂಲಿಪ್‌ಗಳು ಹಲವು ಬಣ್ಣಗಳ ಮಿಶ್ರಣದಿಂದ ಕೂಡಿ ವಿಶಿಷ್ಟ ವಿನ್ಯಾಸಗಳನ್ನು ಹೊಂದಿರುತ್ತವೆ. ಈ ದೃಶ್ಯ ನೋಡಲು ಕಣ್ಣುಗಳು ಸಾಲದು ಹಾಗೂ ಈ ಸೊಬಗನ್ನು ವರ್ಣಿಸಲು ಪದಗಳು ಸಾಲವು.ನಾನು ಇಲ್ಲಿ ಮೊದಲಬಾರಿ ಕಪ್ಪುಬಣ್ಣದ ಹೂಗಳನ್ನು ಕಂಡು ಆಶ್ಚರ್ಯ ಚಕಿತಳಾದೆ.

ಈ ಉದ್ಯಾನವನದಲ್ಲಿ ಕೇವಲ ಟ್ಯೂಲಿಪ್‌ಗಳಷ್ಟೇ ಅಲ್ಲದೇ ಹಲವಾರು ವಿಷಯಾಧಾರಿತವಾದ - theme based ತೋಟಗಳನ್ನು ರಚಿಸಲಾಗಿದೆ. ಉದಾಹರಣೆಗೆ, 'ಜಪಾನೀಸ್ ಗಾರ್ಡನ್' ಮತ್ತು 'ಹರ್ಬ್ ಗಾರ್ಡನ್' ಇಲ್ಲಿನ ಪ್ರಮುಖ ಆಕರ್ಷಣೆಗಳು. ಅಲ್ಲದೆ ‘ವಿಲ್ಲೆಂ- ಅಲೆಂಕ್ಸಾಂಡರ್ ಪೆವಿಲಿಯನ್‌’ ನಲ್ಲಿ ಸಾವಿರಾರು ಟ್ಯೂಲಿಪ್‌ಗಳನ್ನು ಮತ್ತು ಇತರ ವಸಂತಕಾಲದ ಹೂವುಗಳನ್ನು ಪ್ರದರ್ಶಿಸಲಾಗುತ್ತದೆ. ‘ಆರ್ಕಿಡ್ ಹೌಸ್‌’ ನಲ್ಲಿ ವಿವಿಧ ಬಣ್ಣ ಮತ್ತು ಆಕಾರಗಳ ಆರ್ಕಿಡ್‌ಗಳನ್ನು ನೋಡಬಹುದು.ಉದ್ಯಾನವನದ ಮಧ್ಯದಲ್ಲಿ ಸುಂದರವಾದ ನೀರಿನ ಕೊಳಗಳು, ಕಲಾತ್ಮಕ ಕಾರಂಜಿಗಳು ಮತ್ತು ಸುಂದರ ಶಿಲ್ಪಕಲಾಕೃತಿಗಳೂ ಇವೆ. ಇವು ಹೂವಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ ಹಾಗೂ ಪ್ರವಾಸಿಗಳಿಗೆ ಅತ್ಯುತ್ತಮ ‘ಫೋಟೋ ಸ್ಪಾಟ್ ‘ ಆಗಿದೆ.

ಅಲ್ಲದೇ ಅಲ್ಲಿನ ಸರೋವರದಲ್ಲಿ ಸಾಂಪ್ರದಾಯಿಕ ಡಚ್ ಬೋಟ್ ಸವಾರಿ ಮಾಡುವುದು ಕೂಡ ಒಂದು ವಿಶಿಷ್ಟ ಅನುಭವ. ನೀಲಿ ಆಕಾಶದಡಿಯಲ್ಲಿ, ಹಸಿರು ಹುಲ್ಲು ಮತ್ತು ಬಣ್ಣಬಣ್ಣದ ಹೂವುಗಳ ಮಧ್ಯದಲ್ಲಿ ಪ್ರಯಾಣಿಸುತ್ತಾ ಕಣ್ಣು ಹಾಯಿಸಿದಷ್ಟು ದೂರಕ್ಕೂ ಚಾಚಿರುವ ರಂಗುರಂಗಿನ ಹೂಗಳ ಸಾಲುಗಳನ್ನು ನೀರಿನಲ್ಲಿ ಸಂಚರಿಸಿತ್ತಾ ನೋಡುವುದು ನಿಜವಾಗಿಯೂ ಒಂದು ಅವಿಸ್ಮರಣೀಯ ಕ್ಷಣ.

ಉದ್ಯಾನವನದಲ್ಲಿ ಮಕ್ಕಳಿಗೆ ಮತ್ತು ಹಿರಿಯರಿಗೆ ಹಲವಾರು ಚಟುವಟಿಕೆಗಳಿವೆ. ಮಕ್ಕಳಿಗಾಗಿ ಪ್ರತ್ಯೇಕ ಆಟದ ಮೈದಾನ, ಮೃಗಾಲಯ ಮತ್ತು ಸುಂದರವಾದ ವಾದ್ಯ-ಸಂಗೀತ ಪ್ರದರ್ಶನಗಳಿವೆ. ಇವುಗಳ ಜೊತೆಗೆ, ಪ್ರವಾಸಿಗರಿಗೆ ಹಾಯಾಗಿ ನಡೆದಾಡಲು, ಕುಳಿತು ಹೂವುಗಳನ್ನು ವೀಕ್ಷಿಸಲು ಅಲ್ಲಲ್ಲಿ ಬೆಂಚುಗಳು ಮತ್ತು ಪಿಕ್ನಿಕ್ ಟೇಬಲ್ಗಳೂ ಇವೆ.

ಹಲವಾರು ಹಸಿರುಮನೆಗಳು,ಹೂವುಗಳನ್ನು ಮಾರಾಟ ಮಾಡುವ ಮಳಿಗೆಗಳೂ ಇವೆ.ಅಲ್ಲಿ ಪ್ರವಾಸಿಗರು ಬಗೆ ಬಗೆಯಾದ ಹೂಗಿಡಗಳ ಬಲ್ಬ್‌ಗಳನ್ನು ಖರೀದಿಸಿ ಕೊಂಡೊಯ್ಯಬಹುದು.

ತೋಟದ ಒಳಗಿರುವ ಡಚ್ಚರ ಸಾಂಪ್ರದಾಯಿಕ ವಿಂಡ್ ಮಿಲ್ - ಪ್ರವಾಸಿಗರಿಗೆ ಇನ್ನೊಂದು ವಿಶೇಷ ಆಕರ್ಷಣೆ. ಈ ಗಾಳಿಗಿರಣಿಯ ಮೇಲೆ ಹತ್ತಿ ಅಲ್ಲಿನ ವೀಕ್ಷಣಾಲಯದಿಂದ ಇಡೀ ತೋಟದ ವಿಹಂಗಮ ನೋಟವನ್ನು ಕಾಣಬಹುದು.ಅಲ್ಲಿಂದ ಹಾಲೆಂಡಿನ ಸುಂದರವಾದ ಹೂದೋಟಗಳ ಸಾಲುಗಳನ್ನೂ,ಹೂವಿನ ಕಣಿವೆಯನ್ನೂ ನೋಡುವುದು ಅದ್ಭುತ ಅನುಭವ.

ಇಲ್ಲಿನ ವಿವಿಧ ಆಕರ್ಷಣೆಗಳನ್ನು ಕಣ್ತುಂಬಿಕೊಳ್ಳುತ್ತಾ ಇಡೀ ದಿನ ಆಹ್ಲಾದಕರ ಅನುಭವವನ್ನು ಪಡೆಯಬಹುದು.ಪ್ರತಿ ವರ್ಷವೂ ಹೊಸತನಗಳನ್ನು ತುಂಬಿಕೊಂಡು ಶೋಭಿಸುವುದರಿಂದ, ನೀವು ಇಲ್ಲಿಗೆ ಎಷ್ಟು ಬಾರಿ ಭೇಟಿ ನೀಡಿದರೂ ನಿಮಗೆ ಬೇಸರವಾಗುವುದಿಲ್ಲ.

ಕ್ಯೂಕೆನ್ ಹಾಫ್ ಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಏಪ್ರಿಲ್ ತಿಂಗಳ ಮಧ್ಯ ಭಾಗ. ಈ ಸಮಯದಲ್ಲಿ ಹೂವುಗಳು ಪೂರ್ಣವಾಗಿ ಅರಳುತ್ತವೆ ಮತ್ತು ಹವಾಮಾನ ಕೂಡ ಆಹ್ಲಾದಕರವಾಗಿರುತ್ತದೆ. ವಾರಾಂತ್ಯಗಳಲ್ಲಿ ಜನಸಂದಣಿ ಹೆಚ್ಚಿರುವುದರಿಂದ, ವಾರದ ದಿನಗಳಲ್ಲಿ ಭೇಟಿ ನೀಡುವುದು ಹೆಚ್ಚು ಸೂಕ್ತ. ಪ್ರವಾಸಿಗರು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮುಂಚಿತವಾಗಿ ಕಾಯ್ದಿರಿಸುವುದು ಉತ್ತಮ, ಇದು ಟಿಕೆಟ್ ಗಾಗಿ ಕ್ಯೂನಲ್ಲಿ ನಿಲ್ಲುವ ಸಮಯವನ್ನು ಉಳಿಸುತ್ತದೆ.

ಇದು ವಿಶಾಲವಾದ ಜಾಗವಾಗಿರುವುದರಿಂದ ಇಡೀ ದಿನ ನೀವಿಲ್ಲಿ ಸಾವಕಾಶವಾಗಿ ಅಡ್ಡಾಡುತ್ತಾ ಅಲ್ಲಿನ ಎಲ್ಲ ಆಕರ್ಷಣೆಗಳನ್ನೂ ಕಣ್ತುಂಬಿಕೊಳ್ಳಬಹುದು.ಅದಕ್ಕಾಗಿ ಉತ್ತಮ ಶೂ ಗಳನ್ನು ಧರಿಸುವುದು ಒಳ್ಳೆಯದು.

ಉದ್ಯಾನವನದ ಒಳಗೆ ರೆಸ್ಟೊರೆಂಟುಗಳು,ಸಂಚಾರಿ ಕ್ಯಾಂಟೀನುಗಳಲ್ಲಿ ಸಸ್ಯಾಹಾರಿ,ಮಾಂಸಾಹಾರಿ ಮತ್ತು ವೀಗನ್. ಎಲ್ಲ ಶೈಲಿಯ ಆಹಾರಗಳೂ ದೊರೆಯುತ್ತವೆ. ನಾವು ಮನೆಯಿಂದಲೂ ಆಹಾರವನ್ನು ಕೊಂಡೊಯ್ಯಬಹುದು.

ಕ್ಯುಕೆನ್ ಹಾಫ್ ಎಂದರೆ ಡಚ್ಚರ ಭಾಷೆಯಲ್ಲಿ Kitchen garden- ಕೈದೋಟ.17ನೇ ಶತಮಾನದ ಕಾಲದಲ್ಲಿ ಈ ಜಾಗದ ಒಡೆಯರಾಗಿದ್ದ ಶ್ರೀಮಂತ ವರ್ತಕರ ಈ ಕೈದೋಟ 1949ರಿಂದ ಪುಷ್ಪೋದ್ಯಮಕ್ಕಾಗಿ ತೆರೆದುಕೊಂಡು ಇಂದು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿಯೂ ಮಾರ್ಪಾಡಾಗಿದೆ.

ಈಗಲೂ ಹೂದೋಟಕ್ಕೆ ಸ್ವಲ್ಪ ಸಮೀಪದಲ್ಲಿರುವ ಆ ಶ್ರೀಮಂತರ ಕೋಟೆ “ಕ್ಯುಕೆನ್ ಹಾಫ್ ಕ್ಯಾಸೆಲ್ “ಅನ್ನು ಕೂಡ ನೋಡಬಹುದು.ಇದಕ್ಕೆ ಪ್ರತ್ಯೇಕ ಪ್ರವೇಶ ದ್ವಾರ ಮತ್ತು ಪ್ರವೇಶ ಶುಲ್ಕವಿದೆ.

Keukenhof

ನೀವು ಅಲ್ಲಿ ಇನ್ನೊಂದು ದಿನ ಹೆಚ್ಚಿಗೆ ಇರುವಿರಾದರೆ ಕ್ಯುಕೆನ್ ಹಾಫಿನ ತೋಟದ ಈ ವೈಭವಗಳನ್ನು ಕಣ್ತುಂಬಿ ಕೊಳ್ಳುವುದರ ಜೊತೆಗೆ ಲಿಸ್ಸೆ ಪಟ್ಟಣದ ಇತರ ಆಕರ್ಷಣೆಗಳಿಗೂ ಭೇಟಿ ನೀಡಬಹುದು.

ಲಿಸ್ಸೆ ಪಟ್ಟಣವು ಕೇವಲ ನೆದರ್ಲೆಂಡಿನ ಪುಷ್ಪೋದ್ಯಮದ ರಾಜಧಾನಿ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ಪ್ರಸಿದ್ಧಿಹೊಂದಿದ ವಿಶಿಷ್ಟ ಹೂಗಳ ರಾಜಧಾನಿಯೂ ಆಗಿದೆ. ಟ್ಯೂಲಿಪ್ ಗಳಷ್ಟೇ ಅಲ್ಲದೇ ಇಲ್ಲಿನ ವಿಶಾಲವಾದ ಗದ್ದೆಗಳಲ್ಲಿ ಬಗೆಬಗೆಯ ಗೆಡ್ಡೆ(bulbs)ಗಳಿಂದ ಬೆಳೆಯಲಾಗುವ ಡ್ಯಾಫೋಡಿಲ್, ಡೇಲಿಯಾ,ಹಯಸಿಂತ್ ಮೊದಲಾದ ವಿವಿಧ ಬಗೆಯ ಹೂ ಗಿಡಗಳ ಮನಮೋಹಕ ಚಿತ್ತಾರಗಳನ್ನೂ ಸಹ ನೋಡಬಹುದು.

ಪಟ್ಟಣದ ಸುತ್ತಮುತ್ತಲಿನ ಬಯಲು ಪ್ರದೇಶಗಳು ವಸಂತಕಾಲದಲ್ಲಿ ಅದ್ಭುತವಾದ ಬಣ್ಣಗಳ ಮೊಸಾಯಿಕ್ ಆಗಿ ರೂಪಾಂತರಗೊಳ್ಳುತ್ತವೆ. ಟುಲಿಪ್ಸ್, ಡ್ಯಾಫೋಡಿಲ್ಸ್ ಮತ್ತು ಡೇಲಿಯಾ ಹೂಗಳ ರಂಜನೀಯ ಸಾಲುಗಳು ಈ ಭೂದೃಶ್ಯ(landscape) ದ ಒಂದು ಪ್ರಮುಖ ಲಕ್ಷಣವಾಗಿದ್ದು, ಕ್ಯೂಕೆನ್‌ಹಾಫ್ ಪಾರ್ಕ್ ನ ಹೊರತಾಗಿಯೂ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಒಟ್ಟಾರೆ ಈ ಪ್ರವಾಸವನ್ನು ಮುಗಿಸಿಕೊಂಡು ಅಲ್ಲಿಂದ ಹೊರಡುವಾಗ ಪ್ರತಿ ಪ್ರವಾಸಿಗನು ತನ್ನ ಮನಸ್ಸಿನಲ್ಲಿ ಹೂವುಗಳ ಬಣ್ಣ ಮತ್ತು ಸುವಾಸನೆಯನ್ನು ಕೊಂಡೊಯ್ಯುತ್ತಾನೆ.ಇದು ಕೇವಲ ಕಣ್ಣುಗಳಿಗೆ ಹಬ್ಬವಲ್ಲ, ತನುಮನಗಳಿಗೂ ಆಹ್ಲಾದಕರವಾಗಿರುತ್ತದೆ.ರಂಗು ರಂಗಿನ ಪುಷ್ಪಗಳ ಸ್ವರ್ಗದಲ್ಲಿ ಅಡ್ಡಾಡುತ್ತಾ ಆನಂದಿಸುವುದು ನಿಜಕ್ಕೂ ಒಂದು ಅಮೂಲ್ಯವಾದ ಅನುಭವ.

ನೀವು ನಿಜವಾಗಿಯೂ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಬಯಸಿದರೆ, ಕ್ಯೂಕೆನ್ ಹಾಫ್ ಖಂಡಿತವಾಗಿಯೂ ನಿಮ್ಮ ಪ್ರವಾಸಿ ಪಟ್ಟಿಯಲ್ಲಿರಬೇಕಾದ ಸ್ಥಳ.