• ಚಿತ್ರಾ ಹೆಗ್ಡೆ

ಹೊನೊಲುಲುವಿನಲ್ಲಿದ್ದ ತಂಗಿಯ ಮನೆಗೆ ಹೋಗಿದ್ದೆ. ಅದೇ ಸಮಯದಲ್ಲಿ ಅಲ್ಲಿ ಹೊಗೆ ಉಗುಳುತ್ತಿರುವ ಅಗ್ನಿಪರ್ವತವೊಂದರ ಕುಳಿಯಲ್ಲಿ ಲಾವಾ ಸರೋವರ activate ಆಗ್ತಿದೆ ಅಂತ ಸುದ್ದಿ ಇತ್ತು. ಅದಕ್ಕೇ ಒಂದು ವೀಕೆಂಡ್ ನಲ್ಲಿ ಅಗ್ನಿ ಪರ್ವತಗಳು ತುಂಬಿದ ಬಿಗ್ ಐಲ್ಯಾಂಡ್ ಗೆ ಹೋಗಿದ್ವಿ. ನಾವು ಉಳಿದುಕೊಂಡ Air BnB ಮನೆ ಒಂಥರಾ ಕಾಡಿನ ಅಂಚಲ್ಲೇ ಇದ್ದ ಹಾಗೆ ಇತ್ತು. ಸುತ್ತಲೂ ಎತ್ತರದ ಮರಗಳ, ದಟ್ಟ ಪೊದೆಗಳ ನಡುವೆ ಇದ್ದ ಮನೆ!

ಕಗ್ಗತ್ತಲ ರಾತ್ರಿ. ಆಗಾಗ ಕಿಟಕಿಯಾಚೆಯಿಂದ ಕೇಳುವ ಜೀರುಂಡೆಯಂತ ಕೀಟಗಳ ಧ್ವನಿ ಬಿಟ್ಟರೆ ಬೇರೆಲ್ಲ ನಿಶ್ಶಬ್ದ! ನಾನು ಇನ್ನೇನು ಓದುತ್ತಿರುವ ಪುಸ್ತಕ ಬದಿಗಿಟ್ಟು ಮಲಗಬೇಕು ಅಂತಿರುವಾಗ ಮೆಲ್ಲಗೆ ರೂಮಿಗೆ ಬಂದ ಅಕ್ಷತಾ ʼಅಕ್ಕಾ, ಲಾವಾ ಲೇಕ್ ಆಕ್ಟಿವ್ ಇದ್ಯಂತೆ. ಗ್ಲೋ ತುಂಬಾ ಕಾಣಿಸ್ತಿದ್ಯಂತೆ, ಈಗ ನ್ಯೂಸ್‌ನಲ್ಲಿ ನೋಡಿದೆ. ನೋಡ್ಕೊಂಡ್ ಬರೋಣ್ವಾʼ ಅಂದ್ಲು. ಮೊಬೈಲ್ ನೋಡಿದೆ. ಗಂಟೆ ಹತ್ತೂವರೆ ! ನಾನು ಅನುಮಾನದಿಂದ ʼಈಗಲಾ ?ʼ ಅಂದೆ. ʼಹೂ. ಏನು ಯೋಚನೆ ಮಾಡಬೇಡ. ಏನೂ ಭಯ ಇಲ್ಲ ಬಾ ಹೋಗೋಣʼ ಅಂದ್ಲು.

Untitled design (34)

ʼಮತ್ತೆ, ಪುಟ್ಟಿ?ʼ ʼಅವಳು ಮಲಗಿದ್ದಾಳೆ. ಎದ್ದರೆ ನೋಡ್ಕೋತೀನಿ ಅಂದಿದ್ದಾರೆ ಅಪ್ಪ. ನಾವಿಬ್ರೂ ಹೋಗೋಣʼ ಅಂದ್ಲು. ಇನ್ನೇನು? ನಾನು ಜೈ ಅಂದೆ.

ರಾತ್ರಿ ಕತ್ತಲಲಿ, ದಟ್ಟ ಕಾಡಿನ ನಡುವೆ ಅಭಯಾರಣ್ಯದ ರಸ್ತೆಯಲ್ಲಿ 15 ನಿಮಿಷಗಳ ಡ್ರೈವ್. ಎದುರಿಂದ ಬಂದ ಒಂದೋ ಎರಡೋ ಕಾರುಗಳನ್ನು ಬಿಟ್ರೆ, ನಿರ್ಜನ ರಸ್ತೆ. ಕಾರಿನ ಲೈಟ್ ಬಿಟ್ರೆ ಉಳಿದೆಲ್ಲ ಕತ್ತಲೆಯೇ.

ನಿರ್ದಿಷ್ಟ ಜಾಗಕ್ಕೆ ಬಂದಾಗ, ಕಾರ್ ಪಾರ್ಕಿಂಗ್ ಅದಾಗಲೇ ಸಾಕಷ್ಟು ತುಂಬಿತ್ತು. ನಾವಷ್ಟೇ ಅಲ್ಲ, ತುಂಬಾ ಜನ ಇದ್ದಾರೆ ಅಂತ ನಂಗೆ ಒಳಗೇ ಸ್ವಲ್ಪ ಸಮಾಧಾನ. ಅಂತೂ ಒಂದು ಕಡೆ ಜಾಗ ಹುಡುಕಿ ಪಾರ್ಕ್ ಮಾಡಿದ್ದಾಯ್ತು. ಆ ನಂತರ ಸುಮಾರು 20 ನಿಮಿಷಗಳ ಕಾಲ್ನಡಿಗೆ. ಆ ಕಾಲುಹಾದಿಯತ್ತ ತಿರುಗುವಾಗ ಎದುರಿಗೆ ಆಕಾಶ ಕೆಂಪಾಗಿ ಕಂಡಿತು. ಬೇಗ ಬೇಗ ಆ ದಿಕ್ಕಿ ಗೆ ನಡೆಯೋಕೆ ಶುರುಮಾಡಿದ್ವಿ. ಕತ್ತಲಲ್ಲಿ,ಕಾಡಿನ ಮಧ್ಯದ ರಸ್ತೇಲಿ, ಮೊಬೈಲ್ ಟಾರ್ಚ್‌ನ ಬೆಳಕಲ್ಲಿ ಸುಮಾರು ಹತ್ತು ನಿಮಿಷ ನಡೆದ್ವಿ. ಒಮ್ಮೆಲೇ ಕಾಡು ಮುಗಿದು ಎದುರಿಗೆ ವಿಶಾಲವಾದ ಬಯಲು ಪ್ರತ್ಯಕ್ಷವಾಯ್ತು .ಆಕಾಶವೆಲ್ಲ ಕೆಂಪು ಹೊಳಪು! ದೂರದಲ್ಲಿ ನೆರಳಿನಂತೆ ಜನ ಕಾಣ ತೊಡಗಿದರು! ಮತ್ತೂ ಹತ್ತು ನಿಮಿಷಗಳ ನಡಿಗೆಯ ನಂತರ ನಾವು ಬಯಲಿನ ತುದಿಗೆ ನಿಂತಿದ್ವಿ! ಕೆಳಗಿರುವ ಕುಳಿಯಲ್ಲಿ ಪ್ರಕೃತಿಯ ಅದ್ಭುತ, ರುದ್ರ ಮನೋಹರ ನಾಟ್ಯ ನಡೆದಿತ್ತು! ಅದೇ ಲಾವಾ ಸರೋವರ ! ಐದು ಸಜೀವ ಜ್ವಾಲಾಮುಖಿಗಳು ಇರುವ ಬಿಗ್ ಐಲ್ಯಾಂಡ್ ನಲ್ಲಿ ʼಕೀ ಲೋ ವೆಯಾʼ ಎಂಬುದು ಹೆಚ್ಚು ಆ್ಯಕ್ಟಿವ್ ಇರುವ ಶೀಲ್ಡ್ ಜ್ವಾಲಾಮುಖಿ. ಅಂದರೆ, ಇದು ಎತ್ತರದ ಬೆಟ್ಟದಂತಿರದೆ ಭೂ ಮಟ್ಟದಲ್ಲಿ ದಿಬ್ಬದಂತೆ ಇದೆ.

ಈ ಜ್ವಾಲಾಮುಖಿ ಪ್ರಪಂಚದಲ್ಲಿ ಅತಿ ಹೆಚ್ಚು ಆಕ್ಟಿವ್ ಇರುವ ಜ್ವಾಲಾಮುಖಿಯಂತೆ! 1983 ರಿಂದ ಸತತವಾಗಿ ಹೊಗೆ ಉಗುಳುತ್ತಾ ಇದೆಯಂತೆ. ಇದರ ತುದಿಯಲ್ಲಿರುವ ʼಹಲೇಮಾ’ಉಮಾಉʼ ಎಂಬ ಕುಳಿಯಲ್ಲಿ ಈ ಲಾವಾ ಸರೋವರ ಕುದಿಯುತ್ತ ಇತ್ತು.

ನೂರಾರು ಮೀಟರ್ ಗಳಷ್ಟು ಕೆಳಗೆ, ಕುದಿಯುವ ಚಿನ್ನದ ನೀರಿನಂತೆ ಹೊಳೆಯುವ ಲಾವಾರಸ ಭೂಮಿಯ ಹಲವಾರು ಬಿರುಕುಗಳಿಂದ ಹರೀತಿತ್ತು. ಘಳಿಗೆಗೊಮ್ಮೆ ದಿಕ್ಕು ಬದಲಿಸುತ್ತಾ ಆಗಾಗ ಬೆಂಕಿಯ ಕಾರಂಜಿಯಂತೆ ಎತ್ತರಕ್ಕೆ ಚಿಮ್ಮುತ್ತಾ, ಅಲ್ಲೊಂದು ರುದ್ರ ರಮಣೀಯ ದೃಶ್ಯ ಸೃಷ್ಟಿ ಮಾಡಿತ್ತು!

Untitled design (36)

ಕುದಿಯುವ ಲಾವಾದ ಕಾವು ಅಷ್ಟು ದೂರದಿಂದಲೂ ನೋಡುಗರನ್ನು ಸ್ಪರ್ಶಿಸುತ್ತಿತ್ತು. ಆ ದೊಡ್ಡ ಬಯಲಲ್ಲಿ ನೂರಾರು ಜನರಿದ್ದರೂ ಸದ್ದಿಲ್ಲ. ಕೇವಲ ಮೌನ! ತೀರಾ ಪಿಸುಗುಟ್ಟುವ ಮಾತುಗಳು ಅಷ್ಟೇ. ಲಾವಾರಸ ಚಿಮ್ಮುವಾಗಿನ ಚಿಟಿಲ್ ಎಂಬ ಶಬ್ದ, ಆಚೀಚೆ ಹರಿಯುವಾಗಿನ ಸಣ್ಣಮೊರೆತ, ಎಲ್ಲವನ್ನೂ ಕಿವಿ ತುಂಬಿಸಿಕೊಳ್ಳುವ ಜನ !

ಪ್ರತಿಯೊಬ್ಬರೂ ತಮ್ಮ ಜೀವನದ ಈ ಅಪರೂಪದ ಘಳಿಗೆಯನ್ನು ತಮ್ಮೊಳಗೆ ತುಂಬಿಕೊಳ್ತಾ ಇದ್ರು. ಮೊಬೈಲ್ ನಲ್ಲಿ ಆ ಅನುಪಮ ದೃಶ್ಯವನ್ನು ಹಿಡಿದಿಡುವ ವ್ಯರ್ಥ ಪ್ರಯತ್ನ ಎಲ್ಲರದ್ದೂ!

ಹದಿನೈದು -ಇಪ್ಪತ್ತು ನಿಮಿಷಗಳ ಕಾಲ ಆ ನೋಟವನ್ನು ಅನುಭವಿಸಿ ಒಲ್ಲದ ಮನಸಿಂದ ಕಾರಿನತ್ತ ನಡೆದ್ವಿ. ಇದೀಗ ಕಣ್ಣು ಕತ್ತಲೆಗೆ ಹೊಂದಿಕೊಂಡಿದ್ದರಿಂದ ಬಯಲಿನ ದಾರಿಯಲ್ಲಿ ಅದೆಷ್ಟೋ ಹಳೆಯ ಬಿರುಕುಗಳು ಕಂಡ್ವು. ಈ ಕ್ಷಣಕ್ಕೆ ಇಲ್ಲೂ ಭೂಮಿ ಬಾಯಿ ಬಿಟ್ಟು ಲಾವಾ ಉಗುಳಿದರೆ ಏನಾಗಬಹುದು ಅಂತ ಮಾತಾಡ್ಕೋತಾ ಬೇಗ ಬೇಗ ಹೆಜ್ಜೆ ಹಾಕಿದ್ವಿ. ನಾಳೆ ಮತ್ತೆ ಪುಟ್ಟಿಯನ್ನೂ , ಚಿಕ್ಕಪ್ಪನನ್ನೂ ಕರೆದುಕೊಂಡು ಬರೋದು ಅಂತ ಡಿಸೈಡ್ ಮಾಡಿದ್ವಿ.

ಮತ್ತೆ ಕಾಡು ರಸ್ತೆ ಶುರುವಾಗಿ, ಕತ್ತಲಲ್ಲಿ ಮೊಬೈಲ್ ನ ಟಾರ್ಚ್ ಹಾಕ್ಕೊಂಡು ನಡೆಯೋವಾಗ, ಮೊದಲು ತಲೆಯಲ್ಲಿ ಬಂದಿರದ ಹಲವಾರು ವಿಚಾರಗಳು ಈಗ ಬಂದು ಸ್ವಲ್ಪ ಭಯ ಪಡಿಸೋಕೆ ಶುರು ಮಾಡಿದ್ವು. ಯಾವ್ದಾದ್ರೂ ಪ್ರಾಣಿ ಎದುರು ಬಂದ್ರೆ ಅಂತೆಲ್ಲ ಭಯ ಅಗ್ತಾ ಇತ್ತು. ಅಂಥಾ ಯಾವ ಹೆದರಿಕೆಯೂ ಇಲ್ಲ ಅಂತ ಅಕ್ಷತಾ ಹೇಳ್ತಾ ಇದ್ರೂ ನನ್ ತಲೇಲಿ ಅವೇ ಕುಣೀತಾ ಇದ್ವು. ಅಷ್ಟರಲ್ಲಿ , ಮಗು ಎದ್ದು ಅಳ್ತಿದಾಳೆ ಅಂತ ಚಿಕ್ಕಪ್ಪನ ಫೋನ್ ಬಂತು. ನಾವು ಓಡು ನಡಿಗೆಲಿ ಕಾರ್ ಪಾರ್ಕ್ ಮಾಡಿದಲ್ಲಿಗೆ ಬಂದು ಉಸಿರು ಬಿಟ್ವಿ.

ಮುಂದಿನ ಹತ್ತು ನಿಮಿಷಗಳಲ್ಲಿ ಕಾರ್ ನಮ್ಮ Air BnB ಯ ಎದುರು ನಿಂತಿತ್ತು.

ನನ್ನ ಜೀವನದ ಎಂದೂ ಮರೆಯದ ಕೆಲವು ಅದ್ಭುತ ಅನುಭವಗಳಲ್ಲಿ ಇದೂ ಸೇರಿಕೊಂಡಿತು !