ಮಲಗಾ: ಸಮುದ್ರದ ಅಂಚಿನಲ್ಲಿ ಹಾದುಹೋಗುವ ಇತಿಹಾಸ
ನಗರದ ಮಧ್ಯಭಾಗದ Calle Larios ರಸ್ತೆಯಲ್ಲಿ ನಡೆದುಕೊಂಡು ಹೋದರೆ, ನೆಲದಲ್ಲೇ ಅಳವಡಿಸಿರುವ ಒಂದು ಸ್ಮಾರಕ ಫಲಕ ಕಣ್ಣಿಗೆ ಬೀಳುತ್ತದೆ. ಇದು 1978ರಲ್ಲಿ ನಡೆದ ಸ್ಪ್ಯಾನಿಷ್ ಸಂವಿಧಾನ ಜನಾಭಿಪ್ರಾಯ ಸಂಗ್ರಹವನ್ನು ಸ್ಮರಿಸುವುದು. ʼSí abrumadorʼ ಎಂದು ಬರೆದಿರುವುದು- ಜನರ ಬಹುಮತವು ಹೊಸ ಸಂವಿಧಾನಕ್ಕೆ ನೀಡಿದ ಭಾರೀ ಬೆಂಬಲದ ಸಂಕೇತ. ಇದು ನೇರವಾಗಿ ಗೃಹಯುದ್ಧದ ನಂತರದ ಘಟನೆ ಅಲ್ಲ; ಆದರೆ ಫ್ರಾನ್ಸಿಸ್ಕೊ ಫ್ರಾಂಕೊ ಅವರ ದೀರ್ಘ ಆಡಳಿತದ ನಂತರ, 1970ರ ದಶಕದಲ್ಲಿ ಸ್ಪೇನ್ ಪ್ರಜಾಪ್ರಭುತ್ವದತ್ತ ಸಾಗಿದ ಮಹತ್ವದ ಹಂತ.
- ದಿವ್ಯಾ ಹೊಸೂರ್
ಇತ್ತೀಚೆಗೆ ನಾವು ಮಲಗಾ ನಗರದಲ್ಲಿ ಇದ್ದೆವು. ದಕ್ಷಿಣ ಸ್ಪೇನ್‌ನಲ್ಲಿರುವ ಈ ಊರು, ಸಮಯ ಕಳೆದಷ್ಟು ಹೆಚ್ಚು ಆಕರ್ಷಕವಾಗಿ ಹಾಗೂ ಹೆಚ್ಚು ಸುಂದರವಾಗಿ ಕಾಣಿಸುತ್ತದೆ.
ಅರ್ಧ ಬೇಯಿಸಿದ ಬ್ರೆಡ್‌ನ ಘಮ, ಕಾಫಿಯ ಸುವಾಸನೆ, ನಿಧಾನ ಹೆಜ್ಜೆಯ ಜನ, ಇವೆಲ್ಲ ಒಂದಾಗಿ ಒಂದು ಚಿತ್ರವಾಗುತ್ತಾ ಹೋಗುತ್ತದೆ. ಯುರೋಪಿನ ಬೇಸಗೆಯಲ್ಲಿ ಜನರು ಏನು ಮಾಡದಿದ್ದರೂ, ಅದನ್ನೇ ಚೆನ್ನಾಗಿ ಮಾಡುವ ಕಲೆಯನ್ನು ಅರಿತವರಂತೆ ಕಾಣುತ್ತಾರೆ. ನಾವು ಮಾತ್ರ ಯಾವಾಗಲೂ ʼಇದನ್ನೂ ನೋಡ್ಬೇಕು, ಅದನ್ನೂ ನೋಡ್ಬೇಕುʼ ಅಂತ ಓಡ್ತಾ ಇರುತ್ತೇವೆ. ಆದರೆ ಮಲಗಾ ನಿಧಾನವೇ ಪ್ರಧಾನ ಎನ್ನುತ್ತದೆ.
ಇದನ್ನೂ ಓದಿ: ಸಾಹಸ ಮತ್ತು ಭಕ್ತಿಯ ತಾಣ ನೇಪಾಳ
ಸೃಜನಶೀಲತೆಗೆ ಸ್ಫೂರ್ತಿ
ಈ ಊರು ಪಾಬ್ಲೊ ಪಿಕಾಸೊ ಹುಟ್ಟಿದ ಊರು ಎಂದರೆ ಅಚ್ಚರಿಯೇನಿಲ್ಲ. ಅವನಿಗೆ ಸ್ಫೂರ್ತಿ ನೀಡಿದಂಥ ಅದ್ಭುತ ಸೌಂದರ್ಯ ಈ ಊರಿನಲ್ಲಿ ಈಗಲೂ ಎದ್ದು ಕಾಣುತ್ತದೆ. ಸೌಂದರ್ಯ ಅಷ್ಟೇ ಅಲ್ಲ, ಇತಿಹಾಸವೂ ಇಲ್ಲಿ ತುಂಬಿಕೊಂಡಿದೆ. ಚಿತ್ರಕಲೆ, ಸೃಜನಶೀಲತೆ ಬಗ್ಗೆ ಆಸಕ್ತಿ ಇರುವವರು- ʼನಾನೂ ಏನಾದರು ಇಲ್ಲಿ ನೋಡಿ ಪ್ರೇರಣೆ ಪಡೆಯಬಹುದೇ?ʼ ಅನ್ನೋ ಕುತೂಹಲದಿಂದಲೇ ಮಲಗಾಕ್ಕೆ ಬರಬಹುದು.
ಇತಿಹಾಸ
ಮಲಗಾ ಇತಿಹಾಸ ತುಂಬ ಹಳೆಯದು. ಕ್ರಿ.ಪೂ. ಸುಮಾರು 8ನೆಯ ಶತಮಾನದಲ್ಲಿ ಫಿನೀಷಿಯನ್ಸ್ (Phoenicians) ಇಲ್ಲಿ ಮಲಕಾ (Malaka) ಎಂಬ ವ್ಯಾಪಾರ ಬಂದರನ್ನು ಸ್ಥಾಪಿಸಿದರು. ಮಲಕಾ ಎಂಬ ಪದವು ಫೀನೀಷಿಯನ್ ಭಾಷೆಯ mlḥ (ಉಪ್ಪು) ಎಂಬ ಪದದಿಂದ ಬಂದಿದೆ ಎನ್ನಲಾಗುತ್ತದೆ. ಮೀನುಗಳನ್ನು ಉಪ್ಪಿನಲ್ಲಿ ಸಂರಕ್ಷಿಸಿ ವ್ಯಾಪಾರ ಮಾಡುತ್ತಿದ್ದುದರಿಂದ ಈ ಹೆಸರು. ನಂತರ ರೋಮನ್ ಕಾಲದಲ್ಲಿ ಇದು ಮಹತ್ವದ ನಗರವಾಗಿ ಬೆಳೆಯಿತು. ಅದರ ನಂತರ ಮುಸ್ಲಿಂ ಆಳ್ವಿಕೆ, ಮೂರಿಷ್ ಸಂಸ್ಕೃತಿ, ನಗರದ ಮೇಲೆ ಆಳವಾದ ಗುರುತು ಬಿಟ್ಟಿತು. ಹೀಗೆ ಪದರ ಪದರವಾಗಿ ಸಿವಿಲೈಸೇಷನ್‌ಗಳು ಇಲ್ಲಿ ನೆಲೆಸಿವೆ.

ಇಲ್ಲಿನ ಧಾರ್ಮಿಕ ಕಟ್ಟಡಗಳಲ್ಲೂ ಅದೇ ಕಥೆ. ಹೇಗೆ ನಾವು ಭಾರತದಲ್ಲಿ ದೇವಸ್ಥಾನಗಳು ಮಸೀದಿಗಳಾಗಿರುವ ಉದಾಹರಣೆಗಳನ್ನು ನೋಡುತ್ತೇವೋ, ಹಾಗೆಯೇ ಇಲ್ಲಿ ಮಸೀದಿಯೂ ನಂತರ ಕ್ರಿಶ್ಚಿಯನ್ ಚರ್ಚ್ ಆಗಿರುವ ನಿದರ್ಶನಗಳು ಕಂಡುಬರುತ್ತವೆ. ನಗರ ಯಾವ ಇತಿಹಾಸವನ್ನೂ ತಳ್ಳಿ ಹಾಕುವುದಿಲ್ಲ; ಅದನ್ನು ಹೊತ್ತುಕೊಂಡೇ ಮುಂದುವರಿಯುತ್ತದೆ.
ನಗರದ ಮಧ್ಯಭಾಗದ Calle Larios ರಸ್ತೆಯಲ್ಲಿ ನಡೆದುಕೊಂಡು ಹೋದರೆ, ನೆಲದಲ್ಲೇ ಅಳವಡಿಸಿರುವ ಒಂದು ಸ್ಮಾರಕ ಫಲಕ ಕಣ್ಣಿಗೆ ಬೀಳುತ್ತದೆ. ಇದು 1978ರಲ್ಲಿ ನಡೆದ ಸ್ಪ್ಯಾನಿಷ್ ಸಂವಿಧಾನ ಜನಾಭಿಪ್ರಾಯ ಸಂಗ್ರಹವನ್ನು ಸ್ಮರಿಸುವುದು. ʼSí abrumadorʼ ಎಂದು ಬರೆದಿರುವುದು- ಜನರ ಬಹುಮತವು ಹೊಸ ಸಂವಿಧಾನಕ್ಕೆ ನೀಡಿದ ಭಾರೀ ಬೆಂಬಲದ ಸಂಕೇತ. ಇದು ನೇರವಾಗಿ ಗೃಹಯುದ್ಧದ ನಂತರದ ಘಟನೆ ಅಲ್ಲ; ಆದರೆ ಫ್ರಾನ್ಸಿಸ್ಕೊ ಫ್ರಾಂಕೊ ಅವರ ದೀರ್ಘ ಆಡಳಿತದ ನಂತರ, 1970ರ ದಶಕದಲ್ಲಿ ಸ್ಪೇನ್ ಪ್ರಜಾಪ್ರಭುತ್ವದತ್ತ ಸಾಗಿದ ಮಹತ್ವದ ಹಂತ. ಈ ಜನಮತ ಸಂಗ್ರಹಣೆಯ ಮೂಲಕ ಜನರು ಹೊಸ ಸಂವಿಧಾನವನ್ನು ಅಂಗೀಕರಿಸಿ, ದೇಶವನ್ನು ಆಧುನಿಕ ರಾಜತಾಂತ್ರಿಕ ಪ್ರಜಾಪ್ರಭುತ್ವದ ದಾರಿಯಲ್ಲಿ ಮುಂದೂಡಿದರು. ರಸ್ತೆಯ ಮಧ್ಯದಲ್ಲಿ ಶಾಂತವಾಗಿ ಮಲಗಿರುವ ಈ ಫಲಕ, ಒಂದು ದೇಶದ ರಾಜಕೀಯ ಪುನರ್ಜನ್ಮದ ನೆನಪನ್ನು ಹೇಳಿಕೊಳ್ಳುತ್ತದೆ.
ಕಲೆಗಾರ ಪಿಕಾಸೊ
ಇನ್ನು ಪಿಕಾಸೊ ಬಗ್ಗೆ ಹೇಳಲೇಬೇಕು. ತಂದೆಯೇ ಚಿತ್ರಕಾರ. ಎಂಟನೆಯ ವಯಸ್ಸಿನಲ್ಲೇ ಚಿತ್ರ ಬಿಡಿಸಲು ಶುರು ಮಾಡಿದವನು. ಮಲಗಾದ ಬೆಳಕು, ಬಣ್ಣಗಳು, ಜನರ ಜೀವನ ಎಲ್ಲವೂ ಅವನನ್ನು ಪ್ರೇರೇಪಿಸಿದವು. ಆದರೆ ಇಪ್ಪತ್ತರ ವಯಸ್ಸಿನಲ್ಲಿ ಪ್ಯಾರಿಸ್‌ಗೆ ತೆರಳಿ ತನ್ನದೇ ಶೈಲಿಯನ್ನು ಕಟ್ಟಿಕೊಂಡ. ಬ್ಲೂ ಪೀರಿಯಡ್‌ನ ದುಃಖಭರಿತ ಚಿತ್ರಗಳು, ನಂತರ ಕ್ಯೂಬಿಸಮ್‌ನ ಕ್ರಾಂತಿ ಮತ್ತು ನಂತರ ಯುದ್ಧ ವಿರೋಧಿ ಚಿತ್ರಗಳು, ವಿಶೇಷವಾಗಿ ಸ್ಪೇನ್‌ನ ಗೃಹಯುದ್ಧದ ಹಿನ್ನೆಲೆಯಲ್ಲಿನ ವಿಷಯಗಳು ಅವನ ಕಲೆಗಳಾದವು. ಅವನ ಬದುಕಿನ ದೊಡ್ಡ ಭಾಗ ಮಲಗಾದ ಹೊರಗೆ ಕಳೆದರೂ ಮಲಗಾ ಅವನನ್ನು ಬಿಡಲೇ ಇಲ್ಲ. ಅವನ ಮನೆ, ಮ್ಯೂಸಿಯಂ, ಒಂದು ಪ್ರತಿಮೆ, ಇವು ಅವನನ್ನು ನೆನಪಿಸುತ್ತವೆ.
ಮಲಗಾ ಬಂದರು
ಮಲಗಾ ಬಂದರು ಇಂದಿಗೂ ದಕ್ಷಿಣ ಸ್ಪೇನ್‌ನ ಪ್ರಮುಖ ಬಂದರುಗಳಲ್ಲಿ ಒಂದು. ದೊಡ್ಡ ಕ್ರೂಸ್ ಹಡಗುಗಳೂ ಬಂದು ಹೋಗುತ್ತವೆ. ಸಮುದ್ರದ ಅಂಚಿನಲ್ಲಿ ನಿಂತು ನೋಡಿದರೆ ಹಳೆಯ ವ್ಯಾಪಾರದ ಹಡಗುಗಳಿಂದ ಹಿಡಿದು ಇಂದಿನ ಆಧುನಿಕ ಕ್ರೂಸ್‌ಗಳವರೆಗೆ ಒಂದು ನಿರಂತರ ಸಂಚಾರ ಕಾಣಿಸುತ್ತದೆ.

ಮಲಗಾದ ಮನೆಗಳು, ರಸ್ತೆಗಳು ಕೂಡ ತಮ್ಮದೇ ಆದ ಶೈಲಿಯವು. ಸಾಮಾನ್ಯ ಮನೆಗಳಿಗೂ ಭವ್ಯವಾದ ಮರದ ಬಾಗಿಲುಗಳು, ಸುಂದರ ಕೆತ್ತನೆಗಳಿವೆ. ಇವು ಒಂದು ಹಳೆಯ ಶೈಲಿಯ ಗಂಭೀರತೆ ನೀಡುತ್ತವೆ.
ಮಧ್ಯೆ ಮಧ್ಯೆ ಸಣ್ಣ ಅಚ್ಚರಿಗಳು ಸಿಗುತ್ತವೆ. ಎಲ್ಲ ದಿಕ್ಕಿನಿಂದ ನೋಡಿದಾಗ ಬೇರೆ ಬೇರೆ ಮುಖಗಳನ್ನು ತೋರಿಸುವಂಥ 360 ಡಿಗ್ರಿ ಅನುಭವ ನೀಡುವ ಒಂದು ವಿಶಿಷ್ಟ ಶಿಲ್ಪವಿದೆ. ನಾವು ಯಾವ ಕೋಣೆಯಿಂದ ನೋಡುತ್ತೇವೆ ಎಂಬುದರ ಮೇಲೆ ಅದು ಬದಲಾಗುತ್ತದೆ. ಈ ನಗರವೂ ಹಾಗೆಯೇ, ನೀವು ನಿಧಾನವಾಗಿ ನೋಡಿದರೆ ಮಾತ್ರ ಅದರ ಬೇರೆ ಬೇರೆ ಮುಖಗಳು ಕಾಣಿಸುತ್ತವೆ.
ಮಲಗಾ ನೋಡೋದಷ್ಟೇ ಅಲ್ಲ, ಅನುಭವಿಸುವಂಥ ಒಂದು ಜಾಗ. ʼThe things you can see only when you slow downʼ ಅನ್ನುವ ಮಾತಿಗೆ ಇದು ಒಂದು ನಿದರ್ಶನ. ನೀವು ಓಡಾಡುತ್ತಾ ನೋಡಿದರೆ ಇದು ಒಂದು ನಗರ. ಆದರೆ ನಿಧಾನವಾಗಿ ನೋಡಿದರೆ, ಇದು ಒಂದು ಕಥೆ.
ಹೆಚ್ಚಿನ ವಿಷಯಗಳು
- ಮಲಗಾ ಪ್ರಾಂತ್ಯದ ರಾಜಧಾನಿ ಅಂಡಲುಸಿಯಾ ಸಂಸ್ಕೃತಿ, ಕಲೆ, ಇತಿಹಾಸದ ಸಮ್ಮಿಶ್ರಣ
- ಸ್ಪೇನ್‌ನ ಆರನೆಯ ಅತಿ ದೊಡ್ಡ ನಗರ. ಸುಮಾರು 5.7 ಲಕ್ಷ ಜನ ಇಲ್ಲಿ ವಾಸ ಮಾಡುತ್ತಿದ್ದಾರೆ.
- ಬೀಚಸ್‌ಗೆ ಹೆಸರುವಾಸಿ. La Malagueta, Pedregalejo, El Palo- ಈ ಕಡಲತೀರಗಳು ಮೆಡಿಟರೇನಿಯನ್ ಸಮುದ್ರವನ್ನು ಮುಟ್ಟಿಕೊಂಡಿವೆ.
- ಮಾನವನಿಂದ ನಿರ್ಮಿಸಲಾದ ಹಳೆಯ ಕೇವ್ ಆರ್ಟ್‌ನ ಕೆಲವು ಉದಾಹರಣೆಗಳೂ ಇಲ್ಲಿ ಸಿಗುತ್ತವೆ.
- ಗ್ರೀಕರು, ರೋಮನ್ನರು, ಮೂರರು, ಕ್ರಿಶ್ಚಿಯನ್ನರು ಪ್ರತಿಯೊಬ್ಬರೂ ತಮ್ಮ ಗುರುತು ಬಿಟ್ಟು ಹೋಗಿದ್ದಾರೆ. ಅದಕ್ಕೇ ಈ ನಗರ ಇಷ್ಟು ವೈವಿಧ್ಯಮಯ.
- Malaga Cathedral ಅನ್ನು “La Manquita” ಎಂದೂ ಕರೀತಾರೆ. ಅಂದರೆ ʼಒಂದು ಕೈ ಇಲ್ಲದ ಮಹಿಳೆʼ. ಏಕೆಂದರೆ ಇದಕ್ಕೆ ಒಂದು ಟವರ್ ಮಾತ್ರ ಇದೆ. ತನ್ನ ಅಪೂರ್ಣ ಸೌಂದರ್ಯವೇ ಇದರ ವೈಶಿಷ್ಟ್ಯ. 1528ರಿಂದ 1782ರವರೆಗೆ ನಿರ್ಮಾಣವಾದರೂ ಸಂಪೂರ್ಣ ಮಾಡಲಾಗಲಿಲ್ಲವಂತೆ.
- ಊಟದ ವಿಷಯದಲ್ಲಿ ಮಲಗಾ ಸಿಂಪಲ್ ಆದರೂ ಸೊಗಸು. pescaíto frito (ಫ್ರೈ ಮಾಡಿದ ಮೀನು) ಹಾಗೂ ಕಾರ್ಟೊಜಲ್ ಬಹಳ ಪ್ರಸಿದ್ಧ.
- Easter ಸಮಯದಲ್ಲಿ ನಡೆಯುವ ʼಸೆಮನ ಸಂತʼ ಇಲ್ಲಿ ಒಂದು ವಿಭಿನ್ನ ಅನುಭವ.
- ಡಿಸೆಂಬರ್‌ನಲ್ಲಿ Calle Larios ರಸ್ತೆ ಬೆಳಕಿನಿಂದ ಮಿನುಗುತ್ತದೆ. ಮ್ಯೂಸಿಕ್ ಜತೆಗೆ ಲೈಟ್ ಶೋ- ಯೂರೋಪಿನಲ್ಲೇ ಪ್ರಸಿದ್ಧ ಕ್ರಿಸ್‌ಮಸ್ ಪ್ರದರ್ಶನಗಳಲ್ಲಿ ಒಂದು.
ಮಾಹಿತಿ ಪೆಟ್ಟಿಗೆ:
ಏಪ್ರಿಲ್‌ನಿಂದ ಜೂನ್‌ವರೆಗೆ ಇಲ್ಲಿಗೆ ಹೋಗಲು ಬೆಸ್ಟ್ ಸಮಯ. ಇಲ್ಲಿ ಸ್ಪ್ಯಾನಿಷ್ ಮುಖ್ಯ ಭಾಷೆ. ಆದರೆ ವಿದೇಶಿ ಪ್ರವಾಸಿಗಳಿಂದಾಗಿ ಜರ್ಮನ್, ಫ್ರೆಂಚ್ ಎಲ್ಲವೂ ಸ್ವಲ್ಪ ಕೇಳಿಸುತ್ತದೆ.
ಲೇಖಕರು: ಪ್ರಸ್ತುರ ಡಿಫೆನ್ಸ್ ಎಸ್ಟೇಟ್ ಆಫೀಸರ್ (ಕರ್ನಾಟಕ ಸರಕಾರ)