Monday, June 22, 2026
Monday, June 22, 2026

ಕ್ಲೀನ್‌ ನೇಷನ್‌ ಸಿಂಗಾಪುರದಲ್ಲಿ ನಾನು ನನ್ನ ಮಗಳು

ಸಿಂಗಾಪುರದ ಮಾತೃಭಾಷೆ ʻಮ್ಯಾಂಡರಿನ್ʼ ಆದರೂ, ಚೈನೀಸ್, ಇಂಗ್ಲೀಷ್, ತಮಿಳು ಭಾಷೆ ಹೆಚ್ಚಾಗಿ ಮಾತನಾಡುತ್ತಿದ್ದರು. ಸಿಂಗಾಪುರದ ರಸ್ತೆಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತವೆ. ಇಲ್ಲಿ ಸ್ವಚ್ಛತೆಗೆ ಹೆಚ್ಚು ಪ್ರಾಧಾನ್ಯತೆ. ಚಿಂಗಮ್ ಅನ್ನು ನಿಷೇಧಿಸಲಾಗಿದೆ. ಯಾರಾದರೂ ಚಿಂಗಮ್ ತಿನ್ನುವುದು ಕಂಡುಬಂದರೆ 150 ಸಿಂಗಾಪುರ ಡಾಲರ್ ದಂಡ ವಿಧಿಸುತ್ತಾರೆ. ಧೂಮಪಾನವೂ ನಿಷಿದ್ಧ. ಅದಕ್ಕಾಗಿ ಮೀಸಲಿಟ್ಟ ಏರಿಯಾದಲ್ಲಿ ಧೂಮಪಾನ ಮಾಡಿ ಅಲ್ಲಿನ ಡಬ್ಬಿಗಳಲ್ಲಿ ಹಾಕವುದು ಕಡ್ಡಾಯ. ಡ್ರಗ್ಸ್‌ ಇಲ್ಲಿ ಸಂಪೂರ್ಣ ನಿಷಿದ್ಧ. ಅಪ್ಪಿ ತಪ್ಪಿ ಕೊಂಡೊಯ್ದರೆ ಮರಣ ದಂಡನೆ…

  • ವಿನೋದಿನಿ ಜೈನ್, ಪಂಜಿಕಲ್ಲು

ಕಳೆದ ತಿಂಗಳು ಸಿಂಗಾಪುರದಲ್ಲಿ ನಡೆಯಲಿದ್ದ ಜಿನ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಿದೆ. ನನಗೆ ಇದು ಮೊದಲ ವಿಮಾನ ಪ್ರಯಾಣವೇನಲ್ಲ. ಮಗಳೊಂದಿಗೆ ಮಂಗಳೂರಿನಿಂದ ಹೈದರಾಬಾದ್, ಬೆಂಗಳೂರಿಗೆ ಪ್ರಯಾಣಿಸಿದ್ದೆ. ಆದರೆ ವಿದೇಶ ಪ್ರಯಾಣ ಇದೇ ಮೊದಲು. ಮಗಳು ಧೈರ್ಯ ಹೇಳಿ ಮನದ ದಿಗಿಲು ದೂರ ಮಾಡಿದ್ದಳು. ನಮ್ಮ ಪ್ರಯಾಣದಲ್ಲಿ 30 ಕೆಜಿಯಷ್ಟು ಲಗೇಜ್‌ ಕೊಂಡೊಯ್ಯಬಹುದು ಎಂದಿದ್ದರು. ಮೊದಲಿಗೆ ನಮಗೆ ಬೇಕಾಗುವ ಬಟ್ಟೆ, ತಿಂಡಿ-ತಿನಿಸು, ಮಾತ್ರೆಗಳನ್ನು ಪ್ಯಾಕ್ ಮಾಡಿಕೊಂಡೆವು. ಬಂಧು ಬಳಗದವರು ಫೋನ್‌ಮಾಡಿ ಮಗಳಿಗೆ ಅಭಿನಂದನೆ ತಿಳಿಸಿ, ಪ್ರಯಾಣಕ್ಕೆ ಶುಭ ಕೋರುತ್ತಿದ್ದರು.

ಇದನ್ನೂ ಓದಿ: ಗೋಲ್ಡನ್‌ ಡ್ರ್ಯಾಗನ್‌ ಬಾಯಲ್ಲಿ ಬೆಂಕಿ ಚೆಂಡು

ಸಿಂಗಾಪುರದ ಮೊದಲ ಪ್ರವಾಸಿ ತಾಣ ಚಾಂಗಿ ಏರ್‌ಪೋರ್ಟ್

ಇದು ಕೇವಲ ವಿಮಾನ ನಿಲ್ದಾಣವಲ್ಲ. ಪ್ರಯಾಣದ ಸುಸ್ತು, ಹೊಸ ದೇಶಕ್ಕೆ ಕಾಲಿರಿಸಿದ್ದೇವೆಂಬ ಆತಂಕವನ್ನು ದೂರ ಮಾಡಿದ ತಾಣ. ಈ ವಿಮಾಣ ನಿಲ್ದಾಣಕ್ಕೆ ಎಂಟು ಬಾರಿ ‘ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ’ ಸಂದಿದೆ. ಇಲ್ಲಿ ಟರ್ಮಿನಲ್ ಒಂದರಲ್ಲಿ ಕಾಕ್ಟಸ್ ಗಾರ್ಡನ್ ಮತ್ತು ಎರಡರಲ್ಲಿ ಬಟರ್‌ಫ್ಲೈ ಗಾರ್ಡನ್‌ಗಳು ನೋಡುಗರನ್ನು ತನ್ನತ್ತ ಸೆಳೆಯುತ್ತವೆ. ಕೈಗೆಟಕುವ ತಿಂಡಿ, ಪಾನೀಯಗಳನ್ನು ಸವಿಯಬಹುದು. ಟರ್ಮಿನಲ್‌ ಎರಡರಲ್ಲಿ ಮಕ್ಕಳಿಗಾಗಿ ವಿಡಿಯೋ ಗೆಮ್‌ ವ್ಯವಸ್ಥೆ ಇದೆ. ಟರ್ಮಿನಲ್ ಮೂರರಲ್ಲಿ ಉಚಿತ ಮಸಾಜ್ ಕುರ್ಚಿ. ಕೃತಕ ಜಲಪಾತಗಳನ್ನು ನಿರ್ಮಿಸಲಾಗಿದೆ. ಫ್ರೀ ಮೂವಿ ಥಿಯೇಟರ್ ಇದ್ದು, ದಿನವಿಡೀ ಹೊಸ ಚಲನಚಿತ್ರಗಳನ್ನು ಉಚಿತವಾಗಿ ವೀಕ್ಷಿಸಬಹುದು.

Untitled design (40)

ನಮ್ಮೊಂದಿಗೆ ಎಲ್ಲರೂ ಪರಿಚಯದವರೇ ಇದ್ದರು. ಹಾಗಾಗಿ ಮನಸಿಗೆ ನೆಮ್ಮದಿಯೆನಿಸಿತು. ಅಲ್ಲಿನ ಊಟ, ವಸತಿ, ತಿರುಗಾಟ ಅತ್ಯಂತ ತೃಪ್ತಿ ನೀಡಿತ್ತು. ಅಲ್ಲಿ ಜೈನ ಬಸದಿಯ ದರ್ಶನಮಾಡಿ ಸಂತಸಗೊಂಡೆವು. ನಾನು ಮಗಳೊಂದಿಗೆ ಶಾಪಿಂಗ್ ಮಾಡಲು ಹೋಗಿದ್ದೆ. ವಾಪಾಸ್ ಬರುವಾಗ ಲಿಫ್ಟ್‌ನಲ್ಲಿ ನಾವು ಇಳಿಯುವ ಜಾಗಕ್ಕಿಂತಲೂ ಮೊದಲೇ ಇಳಿದುಬಿಟ್ಟಿದ್ದೆ. ಆ ಕ್ಷಣಕ್ಕೆ ತುಂಬಾ ಗಾಬರಿಗೊಂಡಿದ್ದೆ. ಆದರೆ ನನ್ನ ಮಗಳ ಪರಿಚಯದವರೊಬ್ಬರು ಎದುರಾಗಿ ಧೈರ್ಯ ಹೇಳಿ, ನಾನು ಸೇರಬೇಕಾಗಿದ್ದ ಜಾಗಕ್ಕೆ ಕರೆದೊಯ್ದರು.

1965ರಲ್ಲಿ ಸಿಂಗಾಪುರಕ್ಕೆ ಸ್ವಾತಂತ್ರ್ಯ ಬಂದಿದೆ. ಇಂಡೋನೇಷಿಯಾದ ಅರಸ, ಸುಮಂತ್ರೇನ್ ಅಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಾಗಿದ್ದುದ್ದನ್ನು ಕಂಡು ಅದಕ್ಕೆ ಸಿಂಗಾಪುರ ಎಂದು ಹೆಸರಿಟ್ಟನಂತೆ. ಅದರ ಸಂಕೇತವಾಗಿ ಸಿಂಗಾಪುರ ನದಿಯ ಮುಖ ಭಾಗದಲ್ಲಿರುವ ಸಿಂಹದ ಬಾಯಿಂದ ನೀರು ಚಿಮ್ಮುವ ‘ಮೆರ್ಲಿಯಾನ್’ ಏಕಶಿಲಾ ಮೂರ್ತಿಯನ್ನು ಕಾಣಬಹುದು. ಇದನ್ನು ಸೆಪ್ಟೆಂಬರ್ 15-1972ರಲ್ಲಿ ಸ್ಥಾಪನೆ ಮಾಡಿದರು. ಲಿಮ್ ನಾಂಗ್ ಸೆಂಗ್ ಇದನ್ನು ವಿನ್ಯಾಸಗೊಳಿಸಿದ ಕುಶಲ ಕರ್ಮಿ. ಸಿಂಗಾಪುರ ಮೀನು ಮಾರಾಟಕ್ಕೆ ಹೆಸರುವಾಸಿಯಾಗಿತ್ತು. ಮೆರ್ಲಿಯನ್ ಮೂರ್ತಿ ತಲೆಯ ಭಾಗ ಸಿಂಹದಾಗಿದ್ದು, ದೇಹದ ಭಾಗ ಮೀನಿನಾಕಾರದಲ್ಲಿದೆ. ಈ ಪ್ರತಿಮೆ 8.6 ಮೀಟರ್ ಎತ್ತರ ಮತ್ತು 70 ಟನ್ ತೂಕವಿದೆ. ಸಂಜೆಯ ದೀಪದ ಬೆಳಕಿನಲ್ಲಿ ಇದನ್ನು ನೋಡುವುದೇ ಮನೋಹರ ಅನುಭವ. ಇಲ್ಲಿನ ಮರಿನಾ ಬೇ ಸ್ಯಾಂಡ್ಸ್, ರಾಫೆಲ್ಸ್ ಲ್ಯಾಂಡಿಗ್ ಸೈಟ್, ಗಾರ್ಡನ್ಸ್ ಬೈ ದಿ ಬೇ ಜಾಗಗಳನ್ನು ನೋಡಿ ಖುಷಿಪಟ್ಟೆವು.

ಸಿಂಗಾಪುರ ಪ್ರವಾಸಕ್ಕೂ ಮುನ್ನ ಇಷ್ಟು ತಿಳಿದಿರಲಿ

ಸಿಂಗಾಪುರದ ಮಾತೃಭಾಷೆ ʻಮ್ಯಾಂಡರಿನ್ʼ ಆದರೂ, ಚೈನೀಸ್, ಇಂಗ್ಲೀಷ್, ತಮಿಳು ಭಾಷೆ ಹೆಚ್ಚಾಗಿ ಮಾತನಾಡುತ್ತಿದ್ದರು. ಸಿಂಗಾಪುರದ ರಸ್ತೆಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತವೆ. ಆ ದೇಶದಲ್ಲಿ ಸ್ವಚ್ಛತೆಗೆ ಹೆಚ್ಚು ಪ್ರಾಧಾನ್ಯತೆ. ಚಿಂಗಮ್ ಅನ್ನು ನಿಷೇಧಿಸಲಾಗಿದೆ. ಯಾರಾದರೂ ಚಿಂಗಮ್ ತಿನ್ನುವುದು ಕಂಡುಬಂದರೆ 150 ಸಿಂಗಾಪುರ ಡಾಲರ್ ದಂಡ ವಿಧಿಸುತ್ತಾರೆ. ಧೂಮಪಾನವೂ ನಿಷಿದ್ಧ. ಡೆಸಿಗ್ನೇಟೆಡ್ ಏರಿಯಾದ ಹಳದಿ ಚೇರ್ನಲ್ಲಿ ಮಾತ್ರ ಧೂಮಪಾನ ಮಾಡಬಹುದು. ಸಿಗರೇಟ್ ಸೇದಿದ ಬಳಿಕ ಅದನ್ನು ಅದಕ್ಕಾಗಿ ಮೀಸಲಿಟ್ಟ ಡಬ್ಬಿಗಳಲ್ಲಿ ಹಾಕವುದು ಕಡ್ಡಾಯ. ಡ್ರಗ್ಸ್‌ ಇಲ್ಲಿ ಸಂಪೂರ್ಣ ನಿಷಿದ್ದ. ಅಪ್ಪಿ ತಪ್ಪಿ ಕೊಂಡೊಯ್ದರೆ ಮರಣ ದಂಡನೆಗೆ ಗುರಿಯಾಗಬಹುದು. ಹಾಗಾಗಿ ಯಾವುದೇ ದೇಶವನ್ನು ಸುತ್ತುವುದಕ್ಕೂ ಮುನ್ನ ಅಲ್ಲಿನ ನಿಯಮಗಳನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ಅಲ್ಲಿನ ವ್ಯಾಪಾರಿಗಳು ಮಾತ್ರ ತುಂಬಾ ಮೋಸ ಮಾಡುತ್ತಾರೆ. ಅದನ್ನು ಕಂಡು ಬೇಸರವಾಯಿತು.

Untitled design (39)

ಯೂನಿವರ್ಸಲ್ ಸ್ಟುಡಿಯೋ

ಯೂನಿವರ್ಸಲ್ ಸ್ಟುಡಿಯೋ ಸಿಂಗಾಪುರದ ಸೆಂಟೋಸಾದಲ್ಲಿರುವ ರೆಸಾರ್ಟ್‌. ಜೇಂಟಿಗ್ ಸಿಂಗಾಪುರ್ ಮಾಲೀಕತ್ವದ ಈ ರೆಸಾರ್ಟ್‌ 62 ಎಕರೆಯಷ್ಟು ವಿಶಾಲವಾಗಿದೆ. ಇದು ಏಷ್ಯಾದ ಎರಡನೆಯ ಯುನಿವರ್ಸಲ್ ಸ್ಟುಡಿಯೋಸ್ ಪಾರ್ಕ್‌ ಎಂದು ಗುರುತಿಸಿಕೊಂಡಿದೆ. ಇಲ್ಲಿ ಒಟ್ಟು ಏಳು ವಿವಿಧ ವಿಷಯಾಧಾರಿತ ವಲಯಗಳಿದ್ದು, 17 ಆಕರ್ಷಣೀಯ ಸ್ಥಳಗಳನ್ನು ಕಂಡು ನಮ್ಮ ಮನಸೂರೆಗೊಂಡವು. ಪ್ರತಿ ವಲಯದಲ್ಲೂ ಚಲನಚಿತ್ರಗಳು, ಟಿವಿಗಳನ್ನು ನೋಡಬಹುದು. ಇಲ್ಲಿ ಒಟ್ಟು 30 ಉಪಹಾರ ಗೃಹಗಳು, 20 ಮಾರಾಟ ಮಳಿಗೆಗಳು, ಫುಡ್ ಕಾರ್ಟ್‌ಗಳಿವೆ.

ಮೊದಲನೆಯ ಥೀಮ್ ‘ಹಾಲಿವುಡ್’ : 1970ರಲ್ಲಿ ರೂಪಿಸಲಾದ ‘ಹಾಲಿವುಡ್’ನ ಕೆತ್ತನೆಯ ಹೆಜ್ಜೆಗಳ ಪ್ರತಿಕೃತಿಯನ್ನು ಇಲ್ಲಿ ಕ್ರಿಯಾತ್ಮಕ ವಾಸ್ತುಶಿಲ್ಪದಿಂದ ಮತ್ತು ತೂಗಾಡುವ ತಾಳೆಮರಗಳ ಪ್ರತಿಕೃತಿಗಳನ್ನು ನೈಜತೆಯಿಂದ ರೂಪಿಸಲಾಗಿದೆ.

ಎರಡನೆಯ ಥೀಮ್ ‘ನ್ಯೂಯಾರ್ಕ್‌’ : ಇಲ್ಲಿ ನ್ಯೂಯಾರ್ಕಿನ ಹೆಗ್ಗುರುತಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗಿದ್ದು, ನಿಯಾನ್ ದೀಪಗಳು ಮತ್ತು ಬೀದಿಗಳು ಮುಂಭಾಗಗಳಿಂದ ಆವೃತವಾಗಿವೆ.

ಮೂರನೆಯ ಥೀಮ್‌ ಸೈ-ಫೈ-ಸಿಟಿ : ಇಲ್ಲಿ ನೈಜತೆ ಮತ್ತು ಕಾಲ್ಪನಿಕದ ನಡುವಿನ ಅಂತರ ಸ್ಪಷ್ಟವಾಗಿ ಗೋಚರಿಸುತ್ತದೆ. 3ಡಿ ಸವಾರಿಯ ಥ್ರಿಲ್ ಅನ್ನು ಅನುಭವಿಸಬಹುದು.

ನಾಲ್ಕನೆಯ ಥೀಮ್‌ : ಇಲ್ಲಿ 1930ರಲ್ಲಿ ವಿಕಾಸಗೊಂಡ ಈಜಿಪ್ಟ್‌ನ ಸುವರ್ಣ ಯುಗದ ವಾಸ್ತುಶಿಲ್ಪ ಮತ್ತು ಮಾನವಕೃತಿಗಳ ವಿಷಯಾಧಾರಿತ ಕೆತ್ತನೆಗಳನ್ನು ಕಾಣಬಹುದು.

ಐದನೆಯ ಥೀಮ್‌ ‘ದಿ ಲಾಸ್ಟ್ ವರ್ಲ್ಡ್’ : ಇದು ‘ಜುರಾಸಿಕ್ ಪಾರ್ಕ್’ ಮತ್ತು ‘ವಾಟರ್ ವರ್ಲ್ಡ್’ ವಿಷಯಾಧಾರಿತವಾಗಿದ್ದು, ಎರಡನ್ನೂ ಪ್ರತ್ಯೇಕ ಪ್ರದೇಶಗಳಲ್ಲಿ ನೋಡಬಹುದು.

ಆರನಬೆಯ ಥೀಮ್‌ ‘ಫಾರ್ ಫಾರ್ ಅವೇ’ : ದೂರದ ಸಾಮ್ರಾಜ್ಯದ ವಿಷಯಾಧಾರಿತ ಡೆನ್ಮಾರ್ಕ್‌ನ ಶೆರ್ಕ್ಸ್ ಅನಿಮೇಷನ್‌ನಲ್ಲಿ ಕಾಣಿಸಿಕೊಂಡಿವೆ.

ಏಳನೆಯ ಥೀಮ್‌ ʻಮಿನಿನ್ ಲ್ಯಾಂಡ್ʼ : ಇಲ್ಲಿ ಮಿನಿಯನ್ ಮಾರ್ಕೆಟ್ ಪ್ಲೇಸ್, ಗ್ರೂಸ್ ನೈಬರ್‌ಹುಡ್ ಮತ್ತು ಸೂಪರ್ ಸಿಲ್ಲಿ ಫನ್ ಲ್ಯಾಂಡ್‌ಗಳಿವೆ. ಮೋಜಿನ ಅಂಗಡಿಗಳು, ಗೃಹ ಉಪಯೋಗಿ ವಸ್ತುಗಳು, ಸಿಹಿತಿನಿಸುಗಳು, ಆಟಿಕೆಗಳು ಇಲ್ಲಿ ಹೇರಳವಾಗಿ ಸಿಗುತ್ತವೆ.

ಸಿಂಗಾಪುರದ ಸಮಯ ನಮ್ಮ ದೇಶಕ್ಕಿಂತಲೂ ಎರಡು ಗಂಟೆ ಮುಂದಿದೆ. ಅಲ್ಲಿ ಮೂರು ಗಂಟೆಯಾಗಿದ್ದರೆ ನಮ್ಮ ದೇಶದಲ್ಲಿ ಒಂದು ಗಂಟೆಯಾಗಿರುತ್ತದೆ. ಸಿಂಗಾಪುರದಿಂದ ಮಲೇಷ್ಯಾಗೆ ಹೋಗಿ, ಅನೇಕ ಸವಿ ನೆನಪುಗಳೊಂದಿಗೆ ಮರಳಿ ನಮ್ಮ ಗೂಡಿಗೆ ಸೇರಿದೆವು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...