- ಸುಮನ್‌ ನಗರ್ಕರ್‌

ಬರುವ ಏಪ್ರಿಲ್‍ನಲ್ಲಿ ನಾನು, ಗುರು ಮತ್ತು ಕೆಲವು ಸ್ನೇಹಿತರು ಕೂಡಿ ಎವರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ (ಚಾರಣ) ಮಾಡಲು ಈಗ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಈ ಚಾರಣದ ವ್ಯವಸ್ಥೆಯನ್ನು ಬೆಂಗಳೂರಿನ "ಟ್ರೆಕ್ ನೊಮಾಡ್ಸ್" ಸಂಸ್ಥೆಯ ನವೀನ್ ಮಲ್ಲೇಶ್ ಮಾಡುತ್ತಿದ್ದಾರೆ. ಈ ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣ ನೇಪಾಳದ ಹಿಮಾಲಯದಲ್ಲಿರುವ ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಸವಾಲಿನ ಟ್ರೆಕ್ಕಿಂಗ್ ಮಾರ್ಗ. ನವೀನ್ ಅವರು ಅಲ್ಲಿ ಎಲ್ಲ ವ್ಯವಸ್ಥೆಯನ್ನೇನೋ ಮಾಡುತ್ತಿದ್ದಾರೆ. ಆದರೆ ನಾವು ಆ ಚಾರಣಕ್ಕೆ ಬೇಕಾಗುವ ದೈಹಿಕ ತಯಾರಿಯನ್ನು ಮಾಡಿಕೊಳ್ಳಬೇಕು. ಈ ತಯಾರಿಯ ಸಂದರ್ಭದಲ್ಲಿ ನನಗೆ ತುಂಬಾ ಜ್ಞಾಪಕ ಬರ್ತಾ ಇರೋದು ನಾವು ಕೆಲವು ವರ್ಷಗಳ ಹಿಂದೆ ಮಾಡಿದ UNESCO ವಿಶ್ವ ಪಾರಂಪರಿಕ ತಾಣವಾದ “ಮಾಚು ಪಿಚು” ಚಾರಣ ಮಾಡಿದ್ದು.

ಇದನ್ನೂ ಓದಿ: ಬಿಟ್ಟೆನೆಂದರೂ ಬಿಡದೀ ಪ್ರವಾಸದ ಮಾಯೆ

ಕಳೆದು ಹೋದ ನಗರ

“ಮಾಚು ಪಿಚು” ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು. ಇದು ದಕ್ಷಿಣ ಅಮೆರಿಕದಲ್ಲಿರುವ ಪೆರು ದೇಶದ, ಕುಸ್ಕೊ ಪ್ರಾಂತ್ಯದ ಆಂಡಿಸ್ ಪರ್ವತ ಶ್ರೇಣಿಯಲ್ಲಿದೆ. ಮಾಚು ಪಿಚುವಿನ ಕಟ್ಟಡ ಕಲೆ ಹದಿನೈದನೆಯ ಶತಮಾನದ ಇಂಕಾ ಸಾಮ್ರಾಜ್ಯದ ಒಂದು ಅದ್ಭುತ ನಿರ್ಮಾಣ. ಇಂಕಾ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ 'ಕಳೆದುಹೋದ ನಗರ'ವೆಂದು ಕರೆಯಲ್ಪಡುವ ಮಾಚು ಪಿಚು, ಪರ್ವತಗಳ ನಡುವೆ ನಿರ್ಮಿಸಲಾದ ಅದ್ಭುತ ಕಲ್ಲಿನ ವಾಸ್ತುಶಿಲ್ಪ. ಮಾಚು ಪಿಚುವಿಗೆ ಕುಸ್ಕೋ ನಗರದಿಂದ ರೈಲಿನಲ್ಲಿ ಹೋಗಬಹುದು. ಆದರೆ ಚಾರಣ ಮಾಡಿಕೊಂಡು ಹೋಗುವುದು ಒಂದು ಅದ್ಭುತ ಅನುಭವ.

Untitled design - 2026-04-17T185608.735

ಈ ಮಾಚು ಪಿಚುಗೆ ಚಾರಣ ಹೋಗಲು ಮೂರು ನಾಲ್ಕು ದಾರಿಗಳಿವೆ. ನಾವು ಮಾಡಿದ್ದು ಸಾಲ್ಕಾಂಟೆ ಟ್ರೇಯ್ಲ್. ಈ ಚಾರಣ ಐದು ದಿನಗಳದ್ದಾಗಿದ್ದು, ನಾಲ್ಕು ದಿನಗಳು ಒಟ್ಟು ಸುಮಾರು ಐವತ್ತು ಮೈಲಿಗಳಷ್ಟು ನಡೆದು ಅಗುವಾ ಕಲಿಯೆಂಟಿಸ್ ಅನ್ನುವ ಜಾಗ ತಲುಪಿ, ಐದನೇ ದಿನ ಅಲ್ಲಿಂದ ಬಸ್ಸಿನಲ್ಲಿ ಮಾಚು ಪಿಚುಗೆ ಹೋದೆವು. ವಾಪಸ್ಸು ಬರುವಾಗ ಅಲ್ಲಿಂದ ರೈಲಿನಲ್ಲಿ ಕುಸ್ಕೋ ತಲುಪಿದೆವು.

ಈ ಚಾರಣ ಒಂದು ಮರೆಯಲಾಗದ ಅನುಭವ. ಒಟ್ಟು ಹನ್ನೆರಡು ಜನ ಸ್ನೇಹಿತರ ಜೊತೆ ಹೋಗಿದ್ದು. ಮೊದಲ ಮೂರು ದಿನ ಬೇರೆ ಬೇರೆ ಜಾಗಗಳಲ್ಲಿ ಟೆಂಟ್ ವಾಸ. ಅಷ್ಟೆಲ್ಲಾ ಕಷ್ಟದ ಚಾರಣದ ನಂತರ, ನಾಲ್ಕನೇ ರಾತ್ರಿ ಅಗುವಾ ಕಲಿಯೆಂಟಿಸ್ ನಲ್ಲಿ ಹೊಟೇಲ್ ನಲ್ಲಿ ಮಂಚದ ಮೇಲೆ ಮಲಗಿದಾಗ, ಸ್ವರ್ಗ ಸಿಕ್ಕಂತಾಗಿತ್ತು.

ಆಮ್ಲಜನಕ ಸಿಗದಷ್ಟು ಎತ್ತರ:

ಕುಸ್ಕೋ ಇರುವುದು ಸಮುದ್ರ ಮಟ್ಟದಿಂದ ಸುಮಾರು ಹನ್ನೆರಡು ಸಾವಿರ ಅಡಿ ಎತ್ತರದಲ್ಲಿ. ಅಲ್ಲಿಂದ ಸುಮಾರು ಹದಿನೈದು ಸಾವಿರ ಅಡಿಗಿಂತ ಮೇಲಿನವರೆಗೂ ಹೋಗಿ, ನಂತರ ಕೆಳಗಿಳಿಯುವುದು. ಹಾಗಾಗಿ ಅಲ್ಲಿ ಆಮ್ಲಜನಕದ ಕೊರತೆಯಿಂದ ಸ್ವಲ್ಪ ತೊಂದರೆ ಉಂಟಾಗುತ್ತದೆ. ಆ ಎತ್ತರಕ್ಕೆ ದೇಹ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕು. ಅಲ್ಲಿಗೆ ನಾವು ಮೊದಲು ತಲುಪಿದಾಗ ಸ್ವಲ್ಪ ಕಷ್ಟವೇ ಆಯಿತು. ತಲೆ ಸುತ್ತುವುದು, ವಾಂತಿ, ಹೊಟ್ಟೆ ತೊಳಸುವುದು, ಎಲ್ಲವೂ ಆಯಿತು. ಆದರೆ, ಮಾಚು ಪಿಚುವಿನ ಸೌಂದರ್ಯ, ಆ ಕಲ್ಲಿನ ಕಟ್ಟಡದ ನಿರ್ಮಾಣ, ಸುತ್ತಲಿನ ಪರಿಸರ, ಇವೆಲ್ಲ ನೋಡಿದ ನಂತರ ನಮ್ಮ ಆ ಕಷ್ಟ ತುಂಬಾ ಚಿಕ್ಕದೆನಿಸಿಬಿಡುತ್ತದೆ.

Untitled design - 2026-04-17T185617.444

ಮಲಗಲು ಒಂದು ಟೆಂಟ್, ಊಟಕ್ಕೆ ಒಂದು ಟೆಂಟ್, ಟಾಯ್ಲೆಟ್ಗೆ ಒಂದು ಟೆಂಟ್, ಹೀಗೆ ಪ್ರತ್ಯೇಕ ವ್ಯವಸ್ಥೆ ಇರುತ್ತಿತ್ತು. ರಾತ್ರಿ ಮಲಗಿದಾಗ ದೂರದಲ್ಲಿ ಪ್ರಾಣಿಗಳ ಧ್ವನಿ ಕೇಳಿಸೋದು, ಆಂಡಿಸ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿ, ಟೆಂಟ್‌ನಲ್ಲಿ ಮಲಗಿದ್ದಾಗ ದೂರದಲ್ಲಿ ಹಿಮಪಾತದ ಸದ್ದು ಕೂಡ ಕೇಳಿಸಿತ್ತು. ಹಲವಾರು ವರ್ಷಗಳ ನಂತರವೂ ಈ ಅನುಭವದ ನೆನಪು ಮಾಸಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಸ್ನೇಹಿತರೆಲ್ಲ ಒಂದೇ ಕುಟುಂಬದವರಂತೆ ಒಟ್ಟಾಗಿ ಕಾಲ ಕಳೆದಿದ್ದು ನಿಜಕ್ಕೂ ತುಂಬಾ ಖುಷಿಯ ವಿಷಯ.

ನಮಗೆ ಅವಕಾಶ ಸಿಕ್ಕಾಗ ಸಾಧ್ಯವಾದಷ್ಟೂ ಸುತ್ತಬೇಕು. "ದೇಶ ಸುತ್ತು, ಕೋಶ ಓದು" ಅನ್ನೋ ಕನ್ನಡದ ಗಾದೆ ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. ಪ್ರಪಂಚ ಸುತ್ತಾಡುವುದರಿಂದ ಬೇರೆ ಸಂಸ್ಕೃತಿಗಳು, ಜನರ ಜೀವನಶೈಲಿ, ಭಾಷೆ ಮತ್ತು ಪ್ರಕೃತಿಯ ಬಗ್ಗೆ ನೇರ ಅನುಭವ ಸಿಗುತ್ತದೆ. ಗುರು ಹಾಗೂ ನನ್ನ ಜೀವನದ ಧ್ಯೇಯ, ಪ್ರವಾಸಿಯಾಗಿ ಪ್ರಪಂಚ ನೋಡುವುದು.

ಲೇಖಕರು: ನಟಿ