Friday, April 17, 2026
Friday, April 17, 2026

ಬಿಟ್ಟೆನೆಂದರೂ ಬಿಡದೀ ಪ್ರವಾಸದ ಮಾಯೆ

ಫ್ನಾಮ್ ಪೆನ್ನಲ್ಲಿ ಚೆಕ್ಕಿನ್ ಇನ್ ಮಾಡುವಾಗ ಸಿಬ್ಬಂದಿಯ ಬಳಿ ಸಿಂಗಾಪುರದಲ್ಲಿ ಟರ್ಮಿನಲನ್ನು ಬದಲಾಯಿಸಬೇಕೇ ಎಂದು ಕೇಳಿದೆ. ಆಕೆ “ಇಲ್ಲ” ಎಂದು ಹೇಳಿದಾಗ ಸಮಾಧಾನ ಪಡುವಷ್ಟರಲ್ಲಿ ಆಕೆಯ ದನಿ ಪುನಃ ಕೇಳಿಸಿತು. “ ಸಧ್ಯದ ಮಟ್ಟಿಗೆ ಟರ್ಮಿನಲ್ ಒಂದೇ. ಆದರೆ ಏನಕ್ಕೂ ನೀವು ಅಲ್ಲಿ ಇಳಿದಾಗ ಚೆಕ್ ಮಾಡಿ” ಎಂದು ನನ್ನ ತಲೆಯೊಳಗೆ ಒಂದು ಹುಳ ಬಿಟ್ಟರು! ವಿಮಾನವನ್ನೇರಿ ನೋಡಿದಾಗ ನನಗೆ ಈ ಬಾರಿ ಸಿಕ್ಕಿದ್ದೂ ಮಧ್ಯದ ಸೀಟೇ.

  • ವಾಣಿ ಸುರೇಶ್‌ ಕಾಮತ್‌

ನಾನಿದ್ದ ಸಿಂಗಾಪುರ ಏರ್‌ಲೈನ್ಸ್‌ ವಿಮಾನ ಸಿಂಗಾಪುರದ ಚಾಂಗಿ ಏರ್‌ಪೋರ್ಟ್ ತಲುಪಿದಾಗ ಆಗಷ್ಟೇ ಸೂರ್ಯೋದಯವಾಗಿದ್ದು ಗಮನಕ್ಕೆ ಬಂದಿತ್ತು. ಮೊಬೈಲನ್ನು ಕ್ಯಾಬಿನ್ನಿನಲ್ಲಿ ಇಟ್ಟ ಕಾರಣ ಸಮಯ ಎಷ್ಟಾಗಿತ್ತೆಂದು ತಿಳಿಯಲಿಲ್ಲ. ವೆಬ್ ಚೆಕ್ಕಿನ್ ಮಾಡುವಾಗ ಸೀಟನ್ನು ಆಯ್ಕೆ ಮಾಡುವ ಅವಕಾಶ ನೀಡದ ಕಾರಣ ನನಗೆ ಕೊನೆಯ ಸೀಟು ಬೇರೆ ಸಿಕ್ಕಿತ್ತು. ಇಬ್ಬರು ಗಂಡಸರ ನಡುವೆ ನಾನು ಕೂರಬೇಕಾಗಿದ್ದುದನ್ನು ನೋಡಿ ಒಂದು ಕ್ಷಣಕ್ಕೆ ಆ್ಯಂಕ್ಸೈಟಿ ಕಾಡಿದರೂ, ಕೂಡಲೇ ಸುಧಾರಿಸಿಕೊಂಡಿದ್ದೆ.

ಸಿಂಗಾಪುರದವರ ಮುಖಚರ್ಯೆ ಹೊಂದಿದ್ದ ಅವರಲ್ಲಿ ಒಬ್ಬರು ಸಣ್ಣ ವಯಸ್ಸಿನವರಾದರೆ ಮತ್ತೊಬ್ಬರು ಮಧ್ಯವಯಸ್ಸಿನವರು. ನಾನು ಕುಳಿತುಕೊಳ್ಳುತ್ತಿದ್ದಂತೆ ಇಬ್ಬರೂ ತಮ್ಮ ದೇಹವನ್ನು ಒಂದು ಬದಿಗೆ ಸರಿಸಿ, ಕಾಲುಗಳನ್ನು ಒಂದರ ಮೇಲೊಂದಿರಿಸಿ ನನ್ನ ಜತೆಗೆ ಅಂತರ ಕಾಯ್ದುಕೊಂಡರು. ಅವರಿಬ್ಬರು ಸಂಪೂರ್ಣವಾಗಿ ಅಪರಿಚಿತರಾಗಿದ್ದರೂ ಅವರ ಈ ವರ್ತನೆ ನೋಡಿ ಬಹುಶಃ ಇಬ್ಬರೂ ಒಂದೇ ದೇಶಕ್ಕೆ ಸೇರಿದವರೂ, ಮಹಿಳೆಯರೊಂದಿಗಿನ ವರ್ತನೆಯ ಬಗ್ಗೆ ಶಿಕ್ಷಣ ಪಡೆದವರಿರಬೇಕು ಅನ್ನಿಸಿತು. ಆಗಲೇ ಮಧ್ಯರಾತ್ರಿಯಾಗಿದ್ದರಿಂದಲೂ, ಸುರಕ್ಷತೆಯ ಭಾವ ಮೂಡಿದ್ದರಿಂದಲೂ ಮಹಾರಾಣಿಯಂತೆ ಆರಾಮದಲ್ಲಿ ಕುಳಿತು ನಿದ್ರೆಗೆ ಜಾರಿದ್ದೆ.

ಇದನ್ನೂ ಓದಿ: ಸಮುದ್ರದ ಅಲೆಗಳ ಮೇಲೆ ತೇಲಿಬಂದ ದೈವಿಕ ವಿಸ್ಮಯ

ವಿಮಾನ ನಿಂತ ಮೇಲೆ ಯಾವುದೇ ಧಾವಂತವಿಲ್ಲದೆ ನನ್ನ ಮುಂದೆ ಇದ್ದವರೆಲ್ಲಾ ನಿಧಾನಕ್ಕೆ ಕ್ಯಾಬಿನ್ನಿಂದ ಬ್ಯಾಗುಗಳನ್ನು ತೆಗೆದು ಹೊರ ನಡೆಯುತ್ತಿದ್ದುದನ್ನು ನೋಡಿ ನಾನು ಗಾಬರಿಗೊಂಡಿದ್ದೆ. ಕಾಂಬೋಡಿಯಾದ ಫ್ನಾಮ್ ಪೆನ್ಗೆ ನನ್ನ ಮುಂದಿನ ವಿಮಾನ ಇದ್ದುದರಿಂದ ನನ್ನಲ್ಲಿ ಚಡಪಡಿಕೆ ಶುರುವಾಗಿತ್ತು. ಆ ಏರ್ ಬಸ್ಸಿನಲ್ಲಿ ನನ್ನ ಸಾಲಿನಲ್ಲಿದ್ದ ಸುಮಾರು ನೂರರಷ್ಟು ಜನರ ಹಿಂದೆ ಕೊನೆಯವಳಾಗಿ ನಿಂತು ನನ್ನ ಬ್ಯಾಗನ್ನು ಹಿಡಿದು ಹೊರನಡೆದೆ. ನಡೆಯುತ್ತಿದ್ದಂತೆ ಮೊಬೈಲನ್ನು ಹೊರತೆಗೆದು ನೋಡಿದಾಗ ನನ್ನೆದೆ ಧಸಕ್ಕೆಂದಿತು! ಆಗ ಸಮಯ 6:22 ಆಗಿದ್ದರೆ, ನನ್ನ ಮುಂದಿನ ವಿಮಾನದ ಬೋರ್ಡಿಂಗ್ ಶುರುವಾಗುತ್ತಿದ್ದದ್ದು 6:55 ಕ್ಕೆ. ಆಗ ನನ್ನೆದುರಿಗೆ ಇದ್ದದ್ದು ಮೂರು ಸವಾಲುಗಳು. ಮೊದಲನೆಯದು, ಟರ್ಮಿನಲ್ ಅನ್ನು ಬದಲಾಯಿಸುವುದು. ಎರಡನೆಯದು, ಟಿಕೆಟಿನಲ್ಲಿ ಗೇಟ್ ಸಂಖ್ಯೆಯನ್ನು ನಮೂದಿಸದೆ ಇದ್ದುದರಿಂದ ಅದನ್ನು ಹುಡುಕುವುದು. ಮೂರನೆಯದು, ವಾಶ್ ರೂಮನ್ನು ಬಳಸುವುದು. ಹಲ್ಲುಜ್ಜದೆ, ಕೆದರಿದ ಕೂದಲಿನೊಂದಿಗೆ ಮುಂದಿನ ವಿಮಾನವನ್ನು ಹತ್ತುವುದು ನನ್ನಿಂದಾಗದ ಮಾತಾಗಿತ್ತು.

Untitled design - 2026-04-17T183526.282

ಅಂತೂ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಸೂಚನಾಫಲಕಗಳನ್ನು ನೋಡುತ್ತಾ ದಾಪುಗಾಲು ಹಾಕುತ್ತಿದ್ದಂತೆ ಸಮವಸ್ತ್ರಧಾರಿ ಹುಡುಗಿಯರಿಬ್ಬರು ಕಣ್ಣಿಗೆ ಬಿದ್ದರು. ಅವರ ಬಳಿ ಹೋಗಿ ಎರಡನೇ ಟರ್ಮಿನಲ್ಲಿಗೆ ಹೋಗುವುದು ಹೇಗೆಂದು ಕೇಳಿದೆ. ಅವರಲ್ಲೊಬ್ಬಳು ತನ್ನ ಮೊಬೈಲಿನಲ್ಲಿ ನನ್ನ ವಿಮಾನದ ಸಂಖ್ಯೆಯನ್ನು ಬಳಸಿ, ನಾನು ಹೋಗಬೇಕಾಗಿರುವ ಗೇಟಿನ ಸಂಖ್ಯೆಯನ್ನು ಹುಡುಕಿ ತೋರಿಸಿದಳು. ನಂತರ ಸ್ಕೈ ಟ್ರೈನು ಹಿಡಿಯಲು ಹೋಗಬೇಕಾದ ದಾರಿಯನ್ನು ತೋರಿಸುತ್ತಾ, ನನಗಿದ್ದ ಸಮಯಾಭಾವವನ್ನು ಎರಡೆರಡು ಬಾರಿ ತಿಳಿಸಿದಳು. ಅಂತೂ ಆಕೆ ಹೇಳಿದಂತೆ ಸ್ಕೈ ಟ್ರೈನು ಬಳಸಿ, ಓಡುತ್ತಲೇ ಗೇಟನ್ನು ತಲುಪಿದಾಗ ನನ್ನ ಬಳಿ ಇನ್ನೂ ಏಳು ನಿಮಿಷಗಳು ಮಿಕ್ಕಿದ್ದವು! ಅಲ್ಲೇ ಇದ್ದ ವಾಶ್ ರೂಮನ್ನು ಬಳಸಿ, ಸೆಕ್ಯೂರಿಟಿ ಚೆಕ್ ಮುಗಿಸಿ, ವಿಮಾನವನ್ನೇರಿದ ನಂತರವೇ ನಾನು ನೆಮ್ಮದಿಯ ಉಸಿರು ಬಿಟ್ಟದ್ದು. ಕೊನೆಯ ಕ್ಷಣದ ಧಾವಂತವನ್ನು ಇಷ್ಟಪಡದ ನನಗೆ ಆ ದಿನದ ಒಂದು ಕಿಮೀನಷ್ಟಿದ್ದ ಓಟ ಮಾತ್ರ ಮರೆಯಲಾಗದ್ದು.

ಕಾಂಬೋಡಿಯಾದಲ್ಲಿ ಒಂದು ವಾರದ ಪ್ರವಾಸವನ್ನು ಮಜವಾಗಿ ಕಳೆದು ಊರಿಗೆ ಹಿಂದಿರುಗುವ ದಿನ ಬಂದಾಗ ಮತ್ತದೇ ಆತಂಕ ಶುರುವಾಗಿತ್ತು. ಹಿಂದಿನ ಬಾರಿಯೂ ಸಿಂಗಾಪುರದಲ್ಲಿ ಎರಡು ಗಂಟೆಯ ಲೇ ಓವರ್ ಎಂದು ನಮೂದಿಸಿದ್ದರೂ ನಾನು ಪಟ್ಟ ಫಜೀತಿ ನೆನಪಿತ್ತಲ್ಲ! ಈ ಬಾರಿ ಫ್ನಾಮ್ ಪೆನ್ ನಲ್ಲಿ ಚೆಕ್ಕಿನ್ ಇನ್ ಮಾಡುವಾಗ ಸಿಬ್ಬಂದಿಯ ಬಳಿ ಸಿಂಗಾಪುರದಲ್ಲಿ ಟರ್ಮಿನಲನ್ನು ಬದಲಾಯಿಸಬೇಕೇ ಎಂದು ಕೇಳಿದೆ. ಆಕೆ “ಇಲ್ಲ” ಎಂದು ಹೇಳಿದಾಗ ಸಮಾಧಾನ ಪಡುವಷ್ಟರಲ್ಲಿ ಆಕೆಯ ದನಿ ಪುನಃ ಕೇಳಿಸಿತು. “ ಸಧ್ಯದ ಮಟ್ಟಿಗೆ ಟರ್ಮಿನಲ್ ಒಂದೇ. ಆದರೆ ಏನಕ್ಕೂ ನೀವು ಅಲ್ಲಿ ಇಳಿದಾಗ ಚೆಕ್ ಮಾಡಿ” ಎಂದು ನನ್ನ ತಲೆಯೊಳಗೆ ಒಂದು ಹುಳ ಬಿಟ್ಟರು! ವಿಮಾನವನ್ನೇರಿ ನೋಡಿದಾಗ ನನಗೆ ಈ ಬಾರಿ ಸಿಕ್ಕಿದ್ದೂ ಮಧ್ಯದ ಸೀಟೇ. ಕಿಟಕಿಯ ಪಕ್ಕ ಆಗಲೇ ಒಬ್ಬಳು ಆಫ್ರಿಕನ್ ಹುಡುಗಿ ಕೂತು ಕಾದಂಬರಿಯನ್ನು ಓದುತ್ತಿದ್ದಳು. ವಿಮಾನ ಚಲಿಸಿದ ನಂತರ ನಡೆದದ್ದನ್ನು ಎರಡು ಅಧ್ಯಾಯಗಳನ್ನಾಗಿ ಮಾಡಿ ಹೇಳುತ್ತೇನೆ.

ಮೊದಲನೆಯದು, ಆ ಹುಡುಗಿಯ ಬಗ್ಗೆ. ಆರಾಮವಾಗಿಯೇ ಕೂತು ಕಾದಂಬರಿ ಓದುತ್ತಿದ್ದ ಹುಡುಗಿ ವಿಮಾನ ಚಲಿಸುತ್ತಿದ್ದಂತೆ ಹೆದರಿಕೊಂಡು, ಗಗನಸಖಿಯನ್ನು ಕರೆಯಿರೆಂದೂ, ತನಗೆ ನೀರು ಬೇಕೆಂದೂ ನನಗೆ ಹೇಳಿದಳು. ಗಗನಸಖಿ ನೀರು ತರುವಷ್ಟರಲ್ಲಿ ವಿಮಾನ ವೇಗವನ್ನು ಪಡೆಯಲು ಶುರುಮಾಡಿತ್ತು. ಇತ್ತ ಈ ಹುಡುಗಿ ತನಗೆ ಭಯವಾಗುತ್ತದೆಯೆಂದು ಹೇಳಿ, ಕಿಟಕಿಯ ಸೀಟನ್ನು ನನ್ನೊಂದಿಗೆ ಬದಲಾಯಿಸಿಕೊಂಡಿದ್ದಳು. ಉಗಾಂಡಾದಿಂದ ಕಾಂಬೋಡಿಯಾಗೆ ಬೌದ್ಧಧರ್ಮದ ಬಗ್ಗೆ ಕಾಲೇಜಿನ ಪ್ರಾಜೆಕ್ಟ್ ಮಾಡಲು ಬಂದ ಹತ್ತೊಂಬತ್ತು ವರ್ಷದ ಹುಡುಗಿ ಅವಳು. ಬರುವಾಗ ಆಕೆಯ ಜತೆಗೆ ಸ್ನೇಹಿತೆಯರಿದ್ದು ಹೋಗುವಾಗ ಒಬ್ಬಂಟಿಯಾಗಿದ್ದಳು. ಅಷ್ಟೇ ಅಲ್ಲದೆ ಆಕೆ ಮೊದಲ ಬಾರಿ ವಿಮಾನವನ್ನು ಹತ್ತಿದ್ದು ಕಾಂಬೋಡಿಯಾಗೆ ಬಂದಾಗಲೇ.

ಹೆದರಿ ಕಂಗಾಲಾಗಿ ನಡುಗುತ್ತಿದ್ದ ಹುಡುಗಿಯ ಕೈಗಳನ್ನು ನಾನು ಹಿಡಿದುಕೊಂಡು ಧೈರ್ಯ ನೀಡುತ್ತಿದ್ದಾಗ ಗಗನಸಖಿಯರು ಬಂದು, “ದಯವಿಟ್ಟು ಇವಳನ್ನು ನೀವು ಮ್ಯಾನೇಜ್ ಮಾಡಬಹುದೇ” ಎಂದು ಕೇಳಿದರು. ವಿಮಾನ ಆಗಲೇ ಟೇಕಾಫ್ ಮಾಡಲು ವೇಗವನ್ನು ಹೆಚ್ಚಿಸಿದ್ದರಿಂದ ಅವರು ಕೂಡ ಸೀಟಿನಲ್ಲಿ ಕೂರಲೇಬೇಕಿತ್ತು. ನನ್ನ ಮಕ್ಕಳ ಆಸುಪಾಸಿನ ವಯಸ್ಸಿನ ಆ ಹುಡುಗಿಯ ಬಗ್ಗೆ ಕನಿಕರ ಮೂಡಿ ಆಗಲೆಂದು ಒಪ್ಪಿಕೊಂಡೆ. ಅವಳ ಗಮನವನ್ನು ಬೇರೆ ಕಡೆ ಸೆಳೆಯಲು ಅವಳ ಶಿಕ್ಷಣ, ಹವ್ಯಾಸಗಳ ಬಗ್ಗೆ ಮಾತನಾಡತೊಡಗಿದೆ. ವಿಮಾನ ಟೇಕಾಫ್ ಆಗತೊಡಗಿದ್ದೇ ತಡ, ಆಕೆ ನನ್ನ ಕೈಗಳನ್ನು ಎಷ್ಟು ಬಿಗಿಯಾಗಿ ಹಿಡಿದಳೆಂದರೆ ನನ್ನ ಬೆರಳುಗಳು ಮುರಿಯಬಹುದೇನೋ ಅನ್ನಿಸಿತು. ಕಾಲುಗಳನ್ನು ಟಕಟಕನೆ ವೇಗವಾಗಿ ಅಲ್ಲಾಡಿಸುತ್ತಾ, ಕಣ್ಣನ್ನು ಬಲವಾಗಿ ಮುಚ್ಚಿ ನನ್ನನ್ನು ಅಪ್ಪಿಕೊಂಡು ಕುಳಿತವಳನ್ನು ನೋಡಿ ಚಿಕ್ಕಂದಿನಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಲು ಭಯಪಡುತ್ತಿದ್ದ ನನ್ನ ಮಕ್ಕಳ ನೆನಪಾಯಿತು. ಕೆಲವೇ ನಿಮಿಷಗಳಲ್ಲಿ ವಿಮಾನ ಮೋಡಗಳ ನಡುವೆ ಚಲಿಸಲು ಶುರುಮಾಡಿದಾಗ, “ ನೋಡು, ಇಷ್ಟಕ್ಕೇ ತಾನೇ ನೀನು ಹೆದರಿದ್ದು?” ಎಂದು ಕೇಳಿದಾಗ ಮುಗುಳ್ನಕ್ಕಳು ಅವಳು. ಗಗನಸಖಿಯರು ಬಂದು ನನಗೆ ಧನ್ಯವಾದ ಹೇಳಿ, ಅವಳಿಗೊಂದು ಗೊಂಬೆಯನ್ನು ಉಡುಗೊರೆಯಾಗಿ ಕೊಟ್ಟರು. ಭಯ ನೀಗಿ, ಸಮಾಧಾನಗೊಂಡಿರುವಂತೆ ಕಾಣುತ್ತಿದ್ದ ಹುಡುಗಿ ಆಗ ನನ್ನ ಭುಜಕ್ಕೆ ಒರಗಿ ನಿದ್ರಿಸತೊಡಗಿದಳು. ನಾನು ಕೂಡ ನೆಮ್ಮದಿಯಿಂದ ನನ್ನ ಪ್ರವಾಸದ ಸಿಹಿನೆನಪುಗಳನ್ನು ಮೆಲುಕು ಹಾಕತೊಡಗಿದೆ.

ಒಂದು ಅಧ್ಯಾಯ ಮುಗಿಯಿತು ಅಂದುಕೊಂಡ ಸ್ವಲ್ಪ ಹೊತ್ತಿನಲ್ಲಿ ಎರಡನೆಯ ಅಧ್ಯಾಯ ಶುರುವಾಯಿತು. ವಿಮಾನದಲ್ಲಿ ಊಟ ನೀಡಲು ಶುರುಮಾಡಿದಾಗ ನಾನು ಚಿಕನ್ ಖಾದ್ಯವನ್ನು ಆರಿಸಿಕೊಂಡೆ. ಸೀಗಡಿ ಮೀನಿನ ಅಲರ್ಜಿ ಇರುವ ನಾನು ಕಾಂಬೋಡಿಯಾದಲ್ಲಿ ಇದ್ದಷ್ಟು ದಿನ ಅದರ ಬಗ್ಗೆ ವಿಚಾರಿಸಿಕೊಂಡೇ ಮಾಂಸಾಹಾರವನ್ನು ತಿನ್ನುತ್ತಿದ್ದೆ. ವಿಮಾನದಲ್ಲಿ ನೀಡಿದ ಚಿಕನ್ ರೈಸಿನ ಮೇಲ್ಭಾಗದಲ್ಲಿದ್ದ ಮಸಾಲೆಯನ್ನು ಒಂದು ಚಮಚ ಬಾಯಲ್ಲಿಟ್ಟಿದ್ದೇ ತಡ, ಅದರಲ್ಲಿ ಒಣಸೀಗಡಿಯನ್ನು ಬಳಸಿದ್ದು ನನಗೆ ಗೊತ್ತಾಗಿಹೋಗಿತ್ತು. ಒಣಸೀಗಡಿಯ ಸಣ್ಣ ಚೂರನ್ನು ತಿಂದು ಮುಖ ಊದಿಸಿಕೊಂಡು, ತೀವ್ರವಾದ ಹೊಟ್ಟೆನೋವಿನಿಂದ ಬಳಲಿ ನರಕವನ್ನು ಅನುಭವಿಸಿದ್ದ ನನಗೆ ಹೊಟ್ಟೆಯೊಳಗಿನಿಂದ ಭಯದ ಕಂಪನ ಶುರುವಾಗತೊಡಗಿತು. ಖಾದ್ಯದ ಪ್ಯಾಕೆಟನ್ನು ನೋಡಿದರೆ, ಆಹಾರ ತಯಾರಿಸಿದ ಕಂಪೆನಿಯವರು ಒಣಸೀಗಡಿಯನ್ನು ಬಳಸಲಾಗಿದೆಯೆಂದು ನಮೂದಿಸಿ ತಮ್ಮ ಕರ್ತವ್ಯವನ್ನು ಮೆರೆದಿದ್ದರು. ಮಹಾಜಾಣೆಯಾದ ನಾನು ಅಲರ್ಜಿಯ ಮಾತ್ರೆಯನ್ನು ಸೂಟ್ಕೇಸಿನಲ್ಲಿರಿಸಿ ವಿಮಾನದ ಡಿಕ್ಕಿಗೆ ಕಳಿಸಿದ್ದೆ! ಗಗನಸಖಿಯನ್ನು ಕರೆಯೋಣ ಅನ್ನಿಸಿದರೂ, ಅಲರ್ಜಿಯ ಲಕ್ಷಣವೇನಾದರೂ ಕಾಣಿಸಿದ ನಂತರ ಕರೆದರೆ ಸಾಕು ಅಂದುಕೊಂಡೆ. ದೇವರ ಮೇಲೆ ಭಾರ ಹಾಕೋಣ ಎಂದರೆ, ಅವನು ಕೊಟ್ಟ ಬುದ್ದಿಯನ್ನು ಉಪಯೋಗಿಸದೆ ಇದ್ದುದಕ್ಕೆ ನಾಚಿಕೆಯೆನಿಸಿ ಅದೂ ಬೇಡವೆನ್ನಿಸಿತು. ಕೊನೆಗೆ ನನಗಿದ್ದ ಭಂಡ ಧೈರ್ಯದ ಮೊರೆಹೊಕ್ಕು, ಬನ್ನು- ಬೆಣ್ಣೆ, ಸ್ವೀಟು ತಿಂದು, ಧಾರಾಳವಾಗಿ ಜ್ಯೂಸು- ನೀರು ಕುಡಿದು , ಅಲರ್ಜಿಯ ಅಂಶ ಡೈಲ್ಯೂಟ್ ಆಗಿದೆ ಎಂದು ನನ್ನದೇ ಆದ ಸಿದ್ಧಾಂತವನ್ನು ನಂಬಿಕೊಂಡು ಸುಮ್ಮನಾಗುವುದೇ ಉತ್ತಮವೆನಿಸಿತು.

Untitled design - 2026-04-17T183541.475

ಇದ್ಯಾವುದರ ಪರಿವೆಯೇ ಇಲ್ಲದೆ ಆ ಹುಡುಗಿ ನನ್ನ ಭುಜಕ್ಕೆ ಒರಗಿ ಮಲಗಿದ್ದಳು. ಎಲ್ಲಿಯ ಉಗಾಂಡಾ, ಎಲ್ಲಿಯ ಬೆಂಗಳೂರು! ಅದ್ಯಾವ ಬಂಧ ನಮ್ಮನ್ನು ಇಲ್ಲಿ ಸೇರಿಸಿತ್ತೋ ಏನೋ! ವಿಮಾನ ಕೆಳಗಿಳಿಯುತ್ತಿದ್ದಂತೆ ಎಚ್ಚರಗೊಂಡವಳು ಕಿಟಕಿಯಿಂದ ಹೊರನೋಡಲು ಧೈರ್ಯವಹಿಸತೊಡಗಿದಳು. ಸಿಂಗಾಪುರದಿಂದ ಉಗಾಂಡಕ್ಕೂ ಅವಳು ಒಂಟಿಯಾಗಿಯೇ ಪ್ರಯಾಣಿಸಬೇಕಿತ್ತು. ಮುಂದಿನ ವಿಮಾನಯಾನದಲ್ಲಿ ತಾನು ಭಯಪಡಲಾರೆನೆಂದು ಅವಳು ನನಗೆ ಮಾತನ್ನೂ ಕೊಟ್ಟಳು. ವಿಮಾನದ ಬಾಗಿಲು ತೆರೆಯುತ್ತಿದ್ದಂತೆ, ನಾನು ಅವಳ ಕೆನ್ನೆ ಸವರಿ ಹೊರಟುಬಿಟ್ಟೆ.

ಈ ಬಾರಿ ಧಾರಾಳವಾಗಿ ಸಮಯವಿದ್ದುದರಿಂದ ಆರಾಮವಾಗಿಯೇ ನನ್ನ ಗೇಟಿನತ್ತ ಹೊರಟೆ. ಅಲರ್ಜಿಯ ಲಕ್ಷಣಗಳು ಕಾಣಿಸದ ಕಾರಣದಿಂದಾಗಿಯೋ ಏನೋ ಮೈಮನವೆಲ್ಲಾ ಹಗುರಾಗಿತ್ತು. ಮೊದಲ ಬಾರಿ ಭೇಟಿಯಾದ ಅಪರಿಚಿತರು ನನ್ನವರೇ ಎನಿಸಿದ ವಿಶಿಷ್ಟವಾದ ಪ್ರವಾಸ ಕಾಂಬೋಡಿಯಾದ್ದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...