• ಸಂತೋಷ್ ರಾವ್ ಪೆರ್ಮುಡ

ಪ್ರತಿ ವರ್ಷವೂ ಲಕ್ಷಾಂತರ ಜನರು ʻಮೊಸೆಸ್ ಮಿರಾಕಲ್ʼ ಸಮುದ್ರದ ಮಾರ್ಗ ಹಬ್ಬದಲ್ಲಿ ಪಾಲ್ಗೊಳ್ಳಲು ದಕ್ಷಿಣ ಕೊರಿಯಾದ ದಕ್ಷಿಣದ ತುದಿಗೆ ಬರುತ್ತಾರೆ. ಮೊಸೆಸ್ ಮಿರಾಕಲ್ ನೈಸರ್ಗಿಕವಾಗಿ ಜರಗುವ ವಿದ್ಯಮಾನ. ಇದನ್ನು ಇಲ್ಲಿನ ಜನರು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಇಲ್ಲಿನ ಸಮುದ್ರವು ಜಿಂಡೋ ಪ್ರಾಂತ್ಯ ಮತ್ತು ಮೊಡೋ ದ್ವೀಪಗಳನ್ನು ಸಂಪರ್ಕಿಸುವ 1.8 ಮೈಲಿ ಉದ್ದದ ಮರಳಿನ ರಸ್ತೆಯನ್ನು ಹೊರಜಗತ್ತಿಗೆ ಗೋಚರಿಸುವಂತೆ ಮಾಡುತ್ತದೆ. ವರ್ಷಪೂರ್ತಿ ಈ ರಸ್ತೆಯು ಸಂಪೂರ್ಣ ಸಮುದ್ರದ ನೀರಿನಲ್ಲಿ ಮುಳುಗಿರುತ್ತದೆ. ಈ ವಿದ್ಯಮಾನವನ್ನು ಕಾಲ್ಪನಿಕವಾಗಿ ಸಮುದ್ರ ದೇವರ ಪ್ರಭಾವ ಎಂದು ಇಲ್ಲಿನ ಜನರು ನಂಬುತ್ತಾರೆ.

ಇದನ್ನೂ ಓದಿ: ನಯನ ಮನೋಹರ ನೈನಿತಾಲ್

ಈ ವಿದ್ಯಮಾನ ಮಾರ್ಚ್ ಮತ್ತು ಜುಲೈ ನಡುವೆ ಸಂಭವಿಸುತ್ತದೆ. ಈ ಅವಧಿಯಲ್ಲಿ ಈ ರಸ್ತೆಯಲ್ಲಿ ಹಬ್ಬದಂತೆ ಮೂರು ದಿನಗಳವರೆಗೆ ಉತ್ಸವವನ್ನು ಆಚರಿಸುತ್ತಾರೆ. ಈ ಉತ್ಸವಕ್ಕೆ ಹೋಗುವವರು ಜಿಂಡೋ ಕೌಂಟಿಯಿಂದ ಮೋಡೋ ದ್ವೀಪದವರೆಗೆ ಸಮುದ್ರದ ಮಧ್ಯದಲ್ಲಿ ನಿರ್ಮಾಣವಾಗುವ ತಾತ್ಕಾಲಿಕ ಮರಳಿನ ರಸ್ತೆಯಲ್ಲಿ ನಿಧಾನವಾಗಿ ನಡೆಯುತ್ತಾ ಇಲ್ಲಿನ ಮರಳನ್ನು ಅಗೆಯುತ್ತಾ, ಚಿಪ್ಪುಗಳನ್ನು ಹೆಕ್ಕುತ್ತಾ ದಾರಿಯುದ್ದಕ್ಕೂ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾ ಸಾಗುತ್ತಾರೆ. ಕೆಂಪು ಸಮುದ್ರದಲ್ಲಿ ಸಂಭವಿಸುವ ಈ ವಿದ್ಯಮಾನವನ್ನು 1970ರ ದಶಕದಲ್ಲಿ ‘ಪಿಯರೆ ಲ್ಯಾಂಡಿ’ ಎನ್ನುವವರು ಜಗತ್ತಿನ ಗಮನಕ್ಕೆ ತಂದರು. ಇದೊಂದು ಜಿಂಡೋ ಪ್ರಾಂತ್ಯ ಮತ್ತು ಮೊಡೋ ದ್ವೀಪಗಳ ಗಡಿಯನ್ನು ವಿಭಜಿಸುವ ಪ್ರಸಿದ್ಧ ಘಟನೆ. 1975ರಲ್ಲಿ ದಕ್ಷಿಣ ಕೊರಿಯಾದ ಮಾಜಿ ಫ್ರೆಂಚ್ ರಾಯಭಾರಿ ಪಿಯರೆ ರಾಂಡಿ ಅವರು ಈ ವಿದ್ಯಮಾನವನ್ನು ‘ಮೋಸೆಸ್‌ನ ಪವಾಡ’ ಎಂದು ಫ್ರೆಂಚ್ ವೃತ್ತಪತ್ರಿಕೆಯಲ್ಲಿ ಬರೆಯುವವರೆಗೂ ಇದು ಹೊರಜಗತ್ತಿಗೆ ತಿಳಿದಿರಲಿಲ್ಲ. ಈ ಪವಾಡಕ್ಕೆ ವೈಜ್ಞಾನಿಕ ಹಿನ್ನೆಲೆ ಇದ್ದು, ಭೂಮಿಯ ಮೇಲ್ಮೈನಲ್ಲಿ ನಡೆಯುವ ಸೂರ್ಯ ಮತ್ತು ಚಂದ್ರನ ಗುರುತ್ವಾಕರ್ಷಣೆಯ ಪರಿಣಾಮವಾಗಿ ಉಂಟಾಗುವ ಉಬ್ಬರವಿಳಿತ ಅಥವಾ ಸಮುದ್ರದ ಅಲೆಗಳ ಏರಿಕೆ ಮತ್ತು ಇಳಿಕೆಯಿಂದ ಉಂಟಾಗುತ್ತದೆ.

Untitled design (60)

ವೈಜ್ಞಾನಿಕ ಕಾರಣ

ಭೂಮಿಯ ತಿರುಗುವಿಕೆಯ ಚಕ್ರ, ಭೂಮಿ ಮತ್ತು ಚಂದ್ರನ ಚಲನೆಗಳ ನಡುವಿನ ವಿಭಿನ್ನ ಅಂತರ ಉಂಟುಮಾಡುವ ಸಮುದ್ರದಲ್ಲಿ ಉಬ್ಬರವಿಳಿತವನ್ನು ಉಂಟುಮಾಡುತ್ತದೆ. ಇದನ್ನು ‘ಟೈಡಲ್ ಹಾರ್ಮೋನಿಕ್ಸ್’ ಎಂದು ಕರೆಯಲಾಗುತ್ತದೆ. ಈ ಎರಡೂ ಪ್ರಕ್ರಿಯೆಗಳು ವಿಭಿನ್ನ ಗುರುತ್ವಾಕರ್ಷಣೆಯ ಬಲಗಳನ್ನು ಉತ್ಪಾದಿಸುತ್ತವೆ. ಇದರಿಂದ ಉಯಂಟುಗುವ ಉಬ್ಬರವಿಳಿತದಿಂದ ಜಿಂಡೋ ಸಮುದ್ರದ ನೀರು ಗಣನೀಯವಾಗಿ ತಗ್ಗುತ್ತದೆ. ಇದರಿಂದ ಮೋಡೋ ದ್ವೀಪ ಮತ್ತು ಜಿಂಡೋ ಪ್ರಾಂತ್ಯಗಳ ಮಧ್ಯದ 40-60ಮೀ ಭೂಪ್ರದೇಶವನ್ನು ದೂರದಿಂದ ನೋಡಿದಾಗ ರೇಖೆಯ ರೀತಿ ಗೋಚರಿಸುತ್ತದೆ.

ಜನಪದ ಹಿನ್ನೆಲೆ

ಈ ವಿದ್ಯಮಾನಕ್ಕೆ ಒಂದು ದಕ್ಷಿಣ ಕೊರಿಯನ್ ಜನಪದ ಕಥೆಯಿದೆ. ಅದರ ಪ್ರಕಾರ ಒಂದು ಕಾಲದಲ್ಲಿ ಜಿಂಡೋ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳು ವಾಸಿಸುತ್ತಿದ್ದವು. ಇವುಗಳು ಇಲ್ಲಿನ ಹಳ್ಳಿಯ ಜನರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು. ಇಲ್ಲಿನ ಹಳ್ಳಿಗರು ಮೋಡೋ ದ್ವೀಪಕ್ಕೆ ಪಲಾಯನ ಮಾಡುವುದು ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ. ಅದರಂತೆ ಜೀಂಡೋ ಪ್ರಾಂತ್ಯದ ಎಲ್ಲಾ ಹಳ್ಳಿಗರು ಮೋಡೋ ದ್ವೀಪದ ಕಡೆಗೆ ಪಲಾಯನ ಮಾಡುತ್ತಿದ್ದರು. ಆದರೆ ಇವರ ಪೈಕಿ ಬ್ಬಯೋಂಗ್ ಎಂಬ ಮಹಿಳೆಯು ಎಲ್ಲರಿಗಿಂತ ತೀರಾ ಹಿಂದಕ್ಕೆ ಉಳಿದು ತನ್ನ ಕುಟುಂಬದ ಸದಸ್ಯರಿಂದ ಬೇರ್ಪಟ್ಟು ಹತಾಶಳಾಗಿದ್ದಳು. ಹೇಗಾದರೂ ಸರಿ ಮುಂದೆ ಹೋಗಿರುವ ತನ್ನ ಕುಟುಂಬದ ಸದಸ್ಯರನ್ನು ಸೇರಲೇಬೇಕು ಎಂದು ಅವಳು ಸಮುದ್ರದ ದೇವರಾದ ಯೋಂಗ್ವಾಂಗ್ಟನ್‌ನನ್ನು ದಿನವಿಡೀ ಪ್ರಾರ್ಥಿಸಿದಳು. ಕೊನೆಗೆ ದೇವರು ಅವಳಿಗೆ ಕನಸಿನಲ್ಲಿ ಕಾಮನಬಿಲ್ಲಿನ ರೂಪದಲ್ಲಿ ಸಮುದ್ರದಲ್ಲಿ ಕಾಣಿಸಿಕೊಂಡು ನಾಳೆ ನೀನು ಸಮುದ್ರವನ್ನು ಸುಲಭವಾಗಿ ದಾಟಬಹುದು ಎಂದು ಹೇಳಿತು. ಮರುದಿನ ಬೆಳಗ್ಗೆ ಬ್ಬಯೋಂಗ್ ಎಚ್ಚರ ಆದಾಗ ಸಮುದ್ರವು ಇಬ್ಭಾಗವಾಗಿತ್ತು ಮತ್ತು ಕಾಮನಬಿಲ್ಲಿನ ರೂಪದ ರಸ್ತೆಯು ಅವಳನ್ನು ತನ್ನ ಕುಟುಂಬವು ಅವಳಿಗಾಗಿ ಕಾಯುತ್ತಿದ್ದ ಮೋಡೋ ದ್ವೀಪಕ್ಕೆ ಕರೆದೊಯ್ದಿತ್ತು ಎನ್ನಲಾಗಿದೆ. ಈ ಕಾಮನಬಿಲ್ಲಿನ ರೂಪದ ರಸ್ತೆಯೇ ‘ಮೋಸೆಸ್‌ನ ಪವಾಡ’ ಎಂದು ಇಲ್ಲಿನ ಸ್ಥಳಿಯರು ನಂಬುತ್ತಾರೆ.

ಮೋಸೆಸ್ (ಜಿಂಡೋ) ಮಿರಾಕಲ್‌ ಅನ್ನು ಇಲ್ಲಿನ ಜನರು ಜಿಂಡೋ ಪ್ರದೇಶದಲ್ಲಿ ಈ ಹಿಂದೆ ಉಂಟಾದ ಕ್ಷಾಮ, ಯುದ್ಧ, ನೈಸರ್ಗಿಕ ವಿಕೋಪ ಮುಂತಾದ ಸವಾಲುಗಳನ್ನು ಎದುರಿಸಿ ಗೆದ್ದಿರುವ ಜಿಂಡೋ ಜನರ ಸ್ಥಿತಿಸ್ಥಾಪಕತ್ವ ಗುಣದ ಧ್ಯೋತಕ ಮತ್ತು ಜಿಂಡೋ ಸಮುದಾಯದ ಭರವಸೆ ಮತ್ತು ಏಕತೆಯ ಸಂಕೇತವೆಂದು ಪರಿಗಣಿಸುತ್ತರೆ.

ಎಪ್ರಿಲ್ ತಿಂಗಳಲ್ಲಿ ಇಲ್ಲಿನ ಸಮುದ್ರದ ಉಬ್ಬರವಿಳಿತದಿಂದ ಈ ಮಿರಾಕಲ್‌ ಸಂಭವಿಸಿದಾಗ, ಮೋಡೋ ಮತ್ತು ಜಿಂಡೋ ಕೌಂಟಿಯ ನಡುವಿನ ಸಮುದ್ರದ ನೀರು ಸುಮಾರು ಒಂದು ಗಂಟೆಗಳ ಕಾಲ 2.9 ಕಿಮೀ ಉದ್ದ ಮತ್ತು 10-40 ಮೀಟರ್ ಅಗಲದ ತೆರೆದುಕೊಂಡು ಇಬ್ಭಾಗವಾಗಿ ರಸ್ತೆಯಂತೆ ಗೋಚರಿಸುತ್ತದೆ. ಈ ಅವಧಿಯಲ್ಲಿ ಇಲ್ಲಿನ ಸ್ಥಳೀಯರು ‘ಜಿಂಡೋ ಮಿರಾಕಲ್ ಸೀ ರೋಡ್ ಫೆಸ್ಟಿವಲ್’ ಎಂಬ ನಾಲ್ಕು ದಿನಗಳ ಹಬ್ಬವನ್ನು ಮಾಡುತ್ತಾರೆ. ಕೊರಿಯನ್ ಪೆನಿನ್ಸುಲಾದ ದಕ್ಷಿಣ ತುದಿಯಲ್ಲಿ ಪ್ರತಿ ವರ್ಷವೂ ನಡೆಯುವ ಈ ಕಾರ್ಯಕ್ರಮಕ್ಕೆ ಸಾಕಷ್ಟು ವಿದೇಶಿ ಮತ್ತು ಸ್ಥಳೀಯ ಪ್ರವಾಸಿಗರು ಆಗಮಿಸುತ್ತಾರೆ.

Untitled design (61)

ಈ ಹಬ್ಬದ ಜತೆಯಲ್ಲಿ ‘ಗಂಗಂಗ್ಸುವೊಲ್ಲೆʼ (ಕೊರಿಯನ್ ಸಾಂಪ್ರದಾಯಿಕ ನೃತ್ಯ), ‘ಸಿಟ್ಕಿಮ್-ಗುಟ್’ (ಶಮನ ಆಚರಣೆ, ಸತ್ತವರ ಆತ್ಮಗಳನ್ನು ಶಾಂತಗೊಳಿಸುವುದು), ‘ಡೀಲ್ ನೊರೆ’ (ಸಾಂಪ್ರದಾಯಿಕ ರೈತರ ಹಾಡುಗಳು), ‘ಮಂಗಾ’ (ಸಮಾಧಿ ಸಮಾರಂಭದ ಹಾಡುಗಳು), ಜಿಂಡೋ ಶ್ವಾನ ಪ್ರದರ್ಶನ, ನಾಯಿಗಳ ಓಟದ ಸ್ಪರ್ಧೆ, ಬುಕ್‌ನೋರಿ (ಡ್ರಮ್ ಪ್ರದರ್ಶನ) ಮತ್ತು ಪಟಾಕಿ ಪ್ರದರ್ಶನ ಇತ್ಯಾದಿಗಳನ್ನು ಅದ್ದೂರಿಯಾಗಿ ನಡೆಸುತ್ತಾರೆ. ಅದೇ ರೀತಿ ಕಾರ್ಯಕ್ರಮದಲ್ಲಿ ಜಾನಪದ ಗೋಷ್ಠಿಗಳು ಮತ್ತು ಬೀದಿ ಪ್ರದರ್ಶನ, ಕಲಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಇರುತ್ತವೆ. ಈ ಉತ್ಸವವು ಕೊರಿಯನ್ ಸಂಸ್ಕೃತಿಯ ಪರಂಪರೆಯನ್ನು ಪ್ರದರ್ಶಿಸುವ ಒಂದು ಆಚರಣೆಯಾಗಿದೆ. ಪ್ರವಾಸಿಗರಿಗೆ ಕೊರಿಯನ್ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುವ ವಿವಿಧ ಚಟುವಟಿಕೆಗಳು ಮತ್ತು ಪ್ರದರ್ಶನಗಳಿರುತ್ತವೆ. ಇಲ್ಲಿ ತೆರೆದ ಸಮುದ್ರದ ತಳದುದ್ದಕ್ಕೂ ನಡೆಯತ್ತಾ ವಿಸ್ಮಯಕಾರಿ ನೈಸರ್ಗಿಕ ವಿದ್ಯಮಾನ ವೀಕ್ಷಿಸಬಹುದು. ಉತ್ಸವವದಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು, ಸಾಂಪ್ರದಾಯಿಕ ಸಂಗೀತ, ನೃತ್ಯ ಪ್ರದರ್ಶನಗಳು ಮತ್ತು ಕುಂಬಾರಿಕೆ ತಯಾರಿಕೆ ಮತ್ತು ಕ್ಯಾಲಿಗ್ರಫಿ ಮೊದಲಾದ ಕೊರಿಯನ್ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ಕಲೆಗಳನ್ನು ವೀಕ್ಷಿಸಬಹುದು. ಈ ಸಂದರ್ಭ ಜಿಂಡೋ ದ್ವೀಪ ಮತ್ತು ಸುತ್ತಲಿನ ಪ್ರಕೃತಿ ವೀಕ್ಷಣೆ, ಬೆರಗುಗೊಳಿಸುವ ಕಡಲ ತೀರಗಳು, ಒರಟು ಬಂಡೆಗಳನ್ನು ಏರುವುದು, ಹೈಕಿಂಗ್, ಕಯಾಕಿಂಗ್ ಮತ್ತು ಮೀನುಗಾರಿಕೆ ಮುಂತಾದ ವ್ಯಾಪಕ ಹೊರಾಂಗಣ ಚಟುವಟಿಕೆಗಳನ್ನು ನಡೆಸಬಹುದು.

ದಾರಿ ಹೇಗೆ?

ಮಧ್ಯ ಸಿಯೋಲ್ ಅಥವಾ ಗ್ವಾಂಗ್ಜುಯಿಂದ ಬಸ್, ಟ್ಯಾಕ್ಸಿ ಮತ್ತು ರೈಲುಗಳ ಸಂಚಾರ ಸೌಲಭ್ಯವಿದ್ದು, ನಾಲ್ಕು ಗಂಟೆಯ ಪ್ರಯಾಣದ ಮೂಲಕ ಜಿಂಡೋ ದ್ವೀಪಕ್ಕೆ ತಲುಪಬಹುದು..