Thursday, July 9, 2026
Thursday, July 9, 2026

ಜೀವನ ಪಾಠಗಳು ಚಿತ್ರಕ್ಕಿಳಿದಾಗ

ಬ್ರುಗೆಲ್‌ ತಾನು ಸಂಗ್ರಹಿಸಿದ ಗಾದೆಗಳನ್ನು ಹಲವಾರು ಪಾತ್ರಗಳಲ್ಲಿ, ಕಟ್ಟಡ ಮತ್ತು ಭೂದೃಶ್ಯಗಳಲ್ಲಿ ಕಲ್ಪನಾತೀತವಾಗಿ ಅಡಗಿಸಿದ್ದಾನೆ. ಪ್ರತಿಯೊಂದು ದೃಶ್ಯವೂ ಒಂದು ಗಾದೆಯ ಅರ್ಥವನ್ನು ತಿಳಿಸುತ್ತದೆ. ಸಾಮಾನ್ಯ ಜನರ ಜೀವನ, ಮೂರ್ಖತನ, ಲೋಭ, ಕಪಟ, ಜಾಣ್ಮೆ ಹಾಗೂ ಸಮಾಜದ ವ್ಯಂಗ್ಯವನ್ನು ಗಾದೆಗಳ ಮೂಲಕ ಚಿತ್ರಿಸಿದ್ದಾನೆ. ಪ್ರವಾಹಕ್ಕೆ ಎದುರಾಗಿ ಈಜುವುದು, ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರಂತೆ… ಮುಂತಾದ ಗಾದೆಗಳ ಅರ್ಥ ನೀಡುವ ಚಿತ್ರಗಳನ್ನು ಇಲ್ಲಿ ನೋಡಬಹುದು.

- ವಿದ್ಯಾ ವಿ. ಹಾಲಭಾವಿ

ಜರ್ಮನಿಯ ಬರ್ಲಿನ್‌ನಲ್ಲಿನ ಜರ್ಮಾಲ್ಡಿ ಗ್ಯಾಲರಿ ಆರ್ಟ್ ಮ್ಯೂಸಿಯಂನಲ್ಲಿ ಅತ್ಯಂತ ವಿಶಿಷ್ಟವಾದ ಕಲಾಕೃತಿಯನ್ನು ತೂಗುಹಾಕಲಾಗಿದೆ. ಇದು ತೈಲವರ್ಣದಿಂದ ರಚಿಸಲಾದ ಪೇಂಟಿಂಗ್. ಓಕ್ ಮರದ 64×46 ಇಂಚುಗಳ ಅಳತೆಯ ಹಲಗೆಯಲ್ಲಿ 16ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಸಾಕಷ್ಟು ಜನ ಗಂಡಸರು, ಹೆಂಗಸರು, ಮಕ್ಕಳು ಮತ್ತು ಪ್ರಾಣಿಗಳ ಪುಟ್ಟ ಪುಟ್ಟ ಚಿತ್ರಗಳಿವೆ. ಇದರಲ್ಲಿನ ಪ್ರತಿಯೊಬ್ಬರೂ ಅತ್ಯಂತ ವಿಲಕ್ಷಣ ಕಾರ್ಯಗಳಲ್ಲಿ ತೊಡಗಿದ್ದಾರೆ. ಇಬ್ಬರು ಕಿಟಕಿ ಹೊರಗೆ ಮಲವಿಸರ್ಜನೆ ಮಾಡುತ್ತಿದ್ದರೆ, ಒಬ್ಬ ಮರದ ಕಂಬವನ್ನು ಹಲ್ಲಿನಿಂದ ಕಚ್ಚುತ್ತಿದ್ದಾನೆ. ಗೋಡೆಗೆ ತಲೆ ಚಚ್ಚಿಕೊಳ್ಳುತ್ತಿರುವ ಒಬ್ಬ, ಕರುವನ್ನು ಹೂಳುತ್ತಿರುವ ಮತ್ತೊಬ್ಬ, ಬೆಕ್ಕಿಗೆ ಗಂಟೆ ಕಟ್ಟುತ್ತಿರುವವ, ಚಲ್ಲಿದ ಗಂಜಿಯನ್ನು ಹೆಕ್ಕುತ್ತಿರುವವ. ಈ ರೀತಿ ಒಂದಕ್ಕೊಂದು ಹೊಂದಾಣಿಕೆ ಇಲ್ಲದ ಕೆಲಸಗಳನ್ನು ಮಾಡುತ್ತಿರುವವರ ದೃಶ್ಯಗಳನ್ನು ಚಿತ್ರಿಸಲಾಗಿದೆ.

ಇದನ್ನೂ ಓದಿ: ಬ್ರಿಟನ್‌ನ ಪ್ರಸಿದ್ಧ ಮೃಗಾಲಯದಲ್ಲಿ ಚಿಟ್ಟೆಗಳಿಗೊಂದು ಕೋತಿಗಳಿಗೆ ಮತ್ತೊಂದು ಉದ್ಯಾನ

ರಚಿಸಿದವರಾರು, ಚಿತ್ರದ ಹೆಸರೇನು?

ಈ ವಿಚಿತ್ರವಾದ ಕಲಾಕೃತಿಯನ್ನು ರಚಿಸಿದ ಕಲಾವಿದನ ಹೆಸರು ʻಪೀಟರ್ ಬ್ರುಗೆಲ್ ದಿ ಎಲ್ಡರ್ʼ. ಪುನರುಜ್ಜೀವನ ಕಾಲದ ಪ್ರಮುಖ ಡಚ್ ಕಲಾವಿದರಲ್ಲಿ ಈತನೂ ಒಬ್ಬ. ‘ನೆದರ್ ಲ್ಯಾಂಡಿಶ್ ಪ್ರಾವರ್ಬ್ಸ್ʼ ಎಂಬ ಶೀರ್ಷಿಕೆಯ ಈ ಚಿತ್ರಕಲೆಯಲ್ಲಿ ಒಂದು ನೂರಕ್ಕೂ ಅಧಿಕ ಡಚ್ ಗಾದೆಗಳು ಹಾಗೂ ನುಡಿಗಟ್ಟುಗಳ ದೃಷ್ಟಾಂತಗಳನ್ನು ಚಿತ್ರಿಸಿದ್ದಾನೆ. ಇದನ್ನು ಮೊದಲು ‘ದಿ ಬ್ಲೂ ಕ್ಲೋಕ್’ ಅಥವಾ ‘ದಿ ಫೊಲಿ ಆಫ್ ದಿ ವರ್ಲ್ಡ್ʼ ಎಂದು ಕರೆಯುತ್ತಿದ್ದರು.

ಇದು ಗಾದೆಗಳ ಅಥವಾ ನುಡಿಗಟ್ಟುಗಳ ದೃಷ್ಟಾಂತವನ್ನು ನೀಡುವುದರ ಜತೆಗೆ, ಮನುಷ್ಯರ ಮೂರ್ಖತನವನ್ನು ಸಚಿತ್ರವಾಗಿ ವಿವರಿಸುವುದು ಬ್ರುಗೆಲ್‌ನ ಉದ್ದೇಶವಾಗಿತ್ತು. ಕಲಾಕೃತಿಯಲ್ಲಿನ ಗಾದೆಗಳು ಮನುಷ್ಯನ ಅಸಂಬದ್ಧ ನಡುವಳಿಕೆಯ ಬಗ್ಗೆ ಬೆಳಕು ಚಲ್ಲುತ್ತವೆ. ಇನ್ನೂ ಅನೇಕ ಗಂಭೀರವಾದ ಉಕ್ತಿಗಳು, ಅವಿವೇಕಿಗಳಿಂದಾಗುವ ಅಪಾಯಗಳನ್ನು ಚಿತ್ರ ಸಮೇತ ವಿವರಿಸುತ್ತವೆ.

Untitled design (45)

ಆಗ ಗಾದೆಗಳ ಬಳಕೆ ಹೆಚ್ಚಿತ್ತು

ಬ್ರುಗೆಲ್‌ನ ಕಾಲ ಮತ್ತು ಅದಕ್ಕೂ ಮೊದಲು ಗಾದೆಗಳು ಹೆಚ್ಚು ಜನಪ್ರಿಯವಾಗಿದ್ದವು. ಡಚ್‌ ಮತ್ತು ಫ್ಲೆಮಿಶ್ ಲೇಖಕರ ಯುಗದಲ್ಲಿ ಇವುಗಳ ಬಳಕೆ ಹೆಚ್ಚಾಗಿತ್ತು ಎನ್ನಲಾಗಿದೆ. ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್ ಚಿತ್ರಕಲೆಗಿಂತ ಐವತ್ತಕ್ಕೂ ಅಧಿಕ ವರ್ಷಗಳ ಮೊದಲು, ಡಚ್ ಮಾನವತಾವಾದಿ ಡೆಸಿಡೆರಿಯಸ್ ಎರಾಸ್ಮಸ್‌ ‘ಅಡಾಜಿಯ’ ಹೆಸರಿನ ಸಂಪುಟವನ್ನು ಪ್ರಕಟಿಸಿದ್ದನು. ಇದರಲ್ಲಿ 800ಕ್ಕೂ ಹೆಚ್ಚು ಗ್ರೀಕ್ ಹಾಗೂ ಲ್ಯಾಟಿನ್ ಗಾದೆಗಳನ್ನು ಸಂಗ್ರಹಿಸಿದ್ದನು. ಎಂಟು ವರ್ಷಗಳ ನಂತರ 3000ಕ್ಕೂ ಹೆಚ್ಚು ಗಾದೆಗಳನ್ನು ಸಂಗ್ರಹಿಸಿ ಸಂಪುಟವನ್ನು ವಿಸ್ತರಿಸಿದನು. ಈ ಸಂಗ್ರಹಣೆ ಕಾರ್ಯ ಮುಂದುವರಿದು ಎರಾಸ್ಮಸ್‌ನ ಮರಣ ಕಾಲ(1536)ದಲ್ಲಿ ಗಾದೆಗಳ ಸಂಖ್ಯೆ 4000 ದಾಟಿತ್ತು. ಎರಾಸ್ಮಸ್‌ನು ಸಂಗ್ರಹಿಸಿದ ಗಾದೆಗಳ ಈ ಸಂಗ್ರಹಣೆ ಇಂದಿಗೂ ದಾಖಲೆಯಾಗಿದೆ.

ಬ್ರುಗೆಲ್‌ನ ಮೊದಲ ದೊಡ್ಡ ಕಲಾಕೃತಿ

ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್ ತಯಾರಿಸುವ ಒಂದು ವರ್ಷಕ್ಕೂ ಮೊದಲು ಬ್ರುಗೆಲ್‌ನ 12 ಗಾದೆಗಳ ಸರಣಿ ಚಿತ್ರಗಳನ್ನು ರಚಿಸಿದ್ದನು. ಬೇರೆ ಬೇರೆ ಹಲಗೆಗಳ ಮೇಲೆ ‘ಬಿಗ್ ಫಿಶ್ ಈಟ್ ಲಿಟಲ್ ಫಿಶ್’ ಹೆಸರಿನ ಕಲಾಕೃತಿಯನ್ನು 1556ರಲ್ಲಿ ರಚನೆ ಮಾಡಿದ್ದನು. ಆದರೆ ದೊಡ್ಡ ಅಳತೆಯಲ್ಲಿ ತಯಾರಿಸಿದ ಮೊದಲ ಚಿತ್ರ ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್.

ಎಷ್ಟಿವೆಯೋ ಗಾದೆಗಳು

ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್ ಕಲಾಕೃತಿಯಲ್ಲಿರುವ ಗಾದೆಗಳ ನಿಖರ ಸಂಖ್ಯೆ ಬಗ್ಗೆ ವಿದ್ವಾಂಸರ ವ್ಯಾಖ್ಯಾನ ಬೇರೆ ಬೇರೆಯಾಗಿದೆ. ಕೆಲವು ಪ್ರಕರಣಗಳಲ್ಲಿ ಒಂದಕ್ಕಿಂತ ಹೆಚ್ಚು ಗಾದೆಗಳು ಒಂದೇ ಘಟಕದಲ್ಲಿವೆ. ಅಂದಾಜು 112 ಗಾದೆಗಳು ಹಾಗೂ ನುಡಿಗಟ್ಟುಗಳನ್ನು ಗುರುತಿಸಬಹುದೆಂದು ವಿಮರ್ಶಕರು ಕಂಡುಹಿಡಿದಿದ್ದಾರೆ. ಅದಾಗ್ಯೂ ಬ್ರುಗೆಲ್‌ನು ಬೇರೆ ಬೇರೆ ಗಾದೆಗಳನ್ನು ಸೇರಿಸಿರಬಹುದು ಆದರೆ ಅವುಗಳನ್ನು ನಿರ್ಧರಿಸಲು ಆಗುವುದಿಲ್ಲ. ಕಾರಣ ಅವುಗಳ ಬಳಕೆ ಇಂದಿಗೆ ಇಲ್ಲದಿರಬಹುದು ಅಥವಾ ಭಾಷೆ ಬದಲಾಗಿರಬಹುದು.

ಚಿತ್ರಗಳಿಂದ ಶಿಕ್ಷಣ ಮತ್ತು ಮನೋರಂಜನೆ

16ನೆಯ ಶತಮಾನದಲ್ಲಿ ಯುರೋಪಿನಲ್ಲಿ ಗಾದೆಗಳು ಜನಜೀವನದ ಭಾಗವಾಗಿದ್ದವು. ಆ ಸಮಯದಲ್ಲಿ ಶಿಕ್ಷಣ ಕಡಿಮೆ ಇದ್ದುದರಿಂದ ಚಿತ್ರಗಳ ಮೂಲಕ ಜನರಿಗೆ ನೈತಿಕ ಪಾಠಗಳನ್ನು ತಿಳಿಸಲಾಗುತ್ತಿತ್ತು. ಆದ್ದರಿಂದ ಈ ಚಿತ್ರಗಳು ಶಿಕ್ಷಣ ಮತ್ತು ಮನೋರಂಜನೆ ಎರಡಕ್ಕೂ ಉಪಯುಕ್ತವಾಗಿದ್ದವು.

Untitled design (44)

ಚಿತ್ರಕ್ಕಿಳಿದ ಗಾದೆಗಳು

ಬ್ರುಗೆಲ್‌ ತಾನು ಸಂಗ್ರಹಿಸಿದ ಗಾದೆಗಳನ್ನು ಹಲವಾರು ಪಾತ್ರಗಳಲ್ಲಿ, ಕಟ್ಟಡ ಮತ್ತು ಭೂದೃಶ್ಯಗಳಲ್ಲಿ ಕಲ್ಪನಾತೀತವಾಗಿ ಅಡಗಿಸಿದ್ದಾನೆ. ಪ್ರತಿಯೊಂದು ದೃಶ್ಯವೂ ಒಂದು ಗಾದೆಯ ಅರ್ಥವನ್ನು ತಿಳಿಸುತ್ತದೆ. ಸಾಮಾನ್ಯ ಜನರ ಜೀವನ, ಮೂರ್ಖತನ, ಲೋಭ, ಕಪಟ, ಜಾಣ್ಮೆ ಹಾಗೂ ಸಮಾಜದ ವ್ಯಂಗ್ಯವನ್ನು ಗಾದೆಗಳ ಮೂಲಕ ಚಿತ್ರಿಸಿದ್ದಾನೆ. ಪ್ರವಾಹಕ್ಕೆ ಎದುರಾಗಿ ಈಜುವುದು, ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರಂತೆ, ಬೆಟ್ಟ ಅಗೆದು ಇಲಿಯನ್ನು ಹುಡುಕಿದಂತೆ, ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ದಿ ಬಾಗಿಲು ಹಾಕಿದರಂತೆ ಎಂಬ ಅರ್ಥದ ಗಾದೆಗಳನ್ನೂ ಇಲ್ಲಿ ನೋಡಬಹುದು. ಒಟ್ಟಾರೆ ಮನುಷ್ಯ ಮಾಡುವ ಮೂರ್ಖತನದ ಕೆಲಸಗಳನ್ನು ಬ್ರುಗೆಲ್‌ ಸಚಿತ್ರವಾಗಿ ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್‌ನಲ್ಲಿ ತೋರಿಸಿದ್ದಾನೆ.

ಸಂರಕ್ಷಿಸಲ್ಪಟ್ಟ ಕಲಾಕೃತಿಗಳು

ಪೀಟರ್ ಬ್ರುಗೆಲ್ ದಿ ಎಲ್ಡರ್ನ ಕಲಾಕೃತಿಗಳೆಲ್ಲವೂ ಕಲಾ ವಿದ್ಯಾರ್ಥಿಗಳು, ಇತಿಹಾಸ ಅಧ್ಯಯನಕಾರರು ಹಾಗೂ ಚಿತ್ರಕಲಾ ಅಭಿಮಾನಿಗಳಿಗೆ ಅತ್ಯಂತ ಮಹತ್ವದ್ದಾಗಿವೆ. ಅನೇಕ ಮ್ಯೂಸಿಯಂ ಮತ್ತು ಕಲಾ ಪ್ರದರ್ಶನಗಳಲ್ಲಿ ಈ ಚಿತ್ರಗಳನ್ನು ಸಂರಕ್ಷಿಸಲಾಗಿದೆ. ಅವು ಮಾನವನ ಸ್ವಭಾವವನ್ನು ಹಾಸ್ಯಮಯವಾಗಿ ತೋರಿಸುವುದರಿಂದ ಇಂದಿಗೂ ಜನಪ್ರಿಯವಾಗಿವೆ.

ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್‌ನ ಚಿತ್ರಗಳು ಕೇವಲ ಸುಂದರ ಚಿತ್ರಗಳಲ್ಲ. ಅವು ಜೀವನದ ಅನುಭವ, ಜ್ಞಾನ ಮತ್ತು ಸಮಾಜದ ಸತ್ಯಗಳನ್ನು ಹೇಳುವ ದೃಶ್ಯಕಾವ್ಯಗಳಾಗಿವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...