• ಧಾರಿಣಿ ಮಾಯಾ

ಅಮೆರಿಕದ ವಾಷಿಂಗ್ಟನ್ ಸ್ಟೇಟ್‌ನ ಸಿಯಾಟಲ್ ಒಂದು ಸುಂದರವಾದ ಮತ್ತು ಪುಟ್ಟ ನಗರ. ಇಲ್ಲಿನ ಜನ ಹಾಗೂ ಪ್ರವಾಸಿಗರು ಹೆಚ್ಚು ಇಷ್ಟಪಡುವ ಜಾಗ ಎಂದರೆ ಲೇಕ್ ಯೂನಿಯನ್. ಇದು ಈ ನಗರದ ಕೇಂದ್ರಬಿಂದು. ಈ ಲೇಕ್‌ನ ಸುತ್ತಲೇ ಸಿಯಾಟಲ್ ನಗರ ಬೆಳೆದುಕೊಂಡಿದೆ. ಈ ಲೇಕ್‍ನ ಸಂಪೂರ್ಣ ಸುತ್ತು 6.4 ಮೈಲುಗಳಿದ್ದು, ನಡೆಯಲು ಸುಮಾರು 2-3 ಗಂಟೆಗಳಾಗುತ್ತದೆ. ಇಲ್ಲಿ ಕಾಲ್ನಡಿಗೆಯಲ್ಲಿ ನಡೆಯುವುದಲ್ಲದೆ, ಸೈಕ್ಲಿಂಗ್ ಕೂಡ ಮಾಡಲು ಅವಕಾಶವಿದೆ. ಜನರು ಇಲ್ಲಿ ವಾಯುವಿಹಾರಕ್ಕೆ, ಲೇಕ್ ಬದಿ ಕುಳಿತು ಪುಸ್ತಕ ಓದಲು, ಹರಟಲು, ಹೊತ್ತು ಕಳೆಯಲು ಬರುತ್ತಾರೆ. ತಮ್ಮ ಸಾಕುಪ್ರಾಣಿಗಳನ್ನು ಇಲ್ಲಿ ಸುತ್ತಾಡಿಸುತ್ತಾರೆ. ಇದರ ಬದಿ ವೈವಿಧ್ಯಮಯ ಖಾದ್ಯಗಳ ಕೆಲವು ರೆಸ್ಟೋರೆಂಟ್‌ಗಳು ಇವೆ. ಇದರ ಮಧ್ಯೆ ನಗರದ ಅನೇಕ ಪಾರ್ಕ್‌ಗಳಿಗೆ ಸಂಪರ್ಕವಾಗುವಂಥ ದಾರಿಗಳಿವೆ. ಇದರ ಬದಿಯಲ್ಲಿಯೇ ಅಮೆಜಾನಿನ ಪ್ರಧಾನ ಕಚೇರಿಯಿದೆ.

ನಾನು ನನ್ನ ಮಗನ ಜತೆಗೆ ಲೇಕ್ ಯೂನಿಯನ್‌ಗೆ ಹೋಗಿ ಕಯಾಕಿಂಗ್‌ನ ಅನುಭವ ಪಡೆದೆ. ಕಯಾಕಿಂಗ್ ಬೋಟ್ ಒಂದು ಪುಟ್ಟ ದೋಣಿಯಂತಿದ್ದು, ಒಬ್ಬರು ಅಥವಾ ಇಬ್ಬರು ಮಾತ್ರ ಕುಳಿತುಕೊಳ್ಳಬಹುದಾದಷ್ಟು ಜಾಗವಿರುತ್ತದೆ. ಕುಳಿತವರು ಎರಡೂ ಬದಿ ನೀರಿನಲ್ಲಿ ಹುಟ್ಟನ್ನು ಆಡಿಸುತ್ತಿರಬೇಕು. ಈ ಬೋಟ್‌ನಲ್ಲಿ ನಾವು ಸುಮಾರು ಮುಕ್ಕಾಲು ಗಂಟೆ ಲೇಕ್ ಯೂನಿಯನ್‌ನ ಬಹುತೇಕ ಭಾಗವನ್ನು ಕ್ರಮಿಸಿದೆವು. ನಾವಿದ್ದ ಸರೋವರದ ಸುತ್ತಲೂ ಸಿಯಾಟಲ್ ನಗರದ ಅಪಾರ್ಟ್‌ಮೆಂಟ್‌ಗಳು, ಸ್ಪೇಸ್ ನೀಡಲ್ ಗೋಪುರ, ಗ್ಯಾಸ್ ವರ್ಕ್ಸ್ ಸ್ಟೇಷನ್, ರೆಸ್ಟೋರೆಂಟ್‌ಗಳು ಮನೋಹರವಾಗಿ ಕಂಡವು.

ಇದನ್ನೂ ಓದಿ:ಅಮೆರಿಕದಲ್ಲಿ ಅತಿದೊಡ್ಡ ಹಿಂದೂ ದೇವಾಲಯ!

ಇದು ಇಂದಿಗೆ ಫ್ರೆಷ್ ವಾಟರ್ ಲೇಕ್. ಹಿಂದೆ ಕೈಗಾರಿಕೆಗಳಿಂದ ನೀರು ಮಾಲಿನ್ಯವಾಗಿ ಈಜನ್ನು ನಿಷೇಧಿಸಲಾಗಿತ್ತು. ಆದರೆ ಈಗ ಇಲ್ಲಿ ಯಾವ ಕೈಗಾರಿಕಾ ಚಟುವಟಿಕೆಗಳೂ ಇಲ್ಲದ ಕಾರಣ, ಇಲ್ಲಿನ ಜನ ಬೇಸಗೆಯಲ್ಲಿ ಈಜಿನ ಮೋಜನ್ನು ಸವಿಯುತ್ತಿದ್ದಾರೆ. ಸಿಯಾಟಲ್‌ನಲ್ಲಿ ಬಹುತೇಕ ಚಳಿ ಮತ್ತು ಮಳೆಯ ಕಾರಣ, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಬೇಸಗೆಯಲ್ಲಿ ಸ್ಥಳೀಯರು ನೀರಿನ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುತ್ತಾರೆ. ವಾರದಲ್ಲಿ 2 ರಿಂದ ಮೂರು ಬಾರಿ ಸಂಜೆ ಸಮಯ ಇಲ್ಲಿಗೆ ಬಂದು ಬೋಟಿಂಗ್, ಹೌಸ್ ಬೋಟ್, ಕಯಾಕಿಂಗ್, ಪೆಡಲ್ ಬೋಟನ್ನು ಓಡಿಸುತ್ತಾ ಜನರು ಆನಂದಿಸುತ್ತಾರೆ. ಇಲ್ಲಿನ ಸ್ಥಳೀಯರನ್ನು ಮಾತನಾಡಿಸಿದಾಗ ಅತ್ಯುತ್ಸಾಹದಿಂದ ತಮ್ಮ ದಿನಚರಿ ಹಾಗೂ ಅನುಭವಗಳನ್ನು ಹೇಳಿಕೊಂಡರು. ಬೇಸಗೆಯಲ್ಲಿ ಮಾತ್ರ ನೀರಿನಲ್ಲಿ ಮೋಜು ಮಸ್ತಿ ಸಾಧ್ಯ. ಹಾಗಾಗಿ ಇವರು ಸೂರ್ಯನ ರಶ್ಮಿಗೆ ಬರಿ ಮೈ ಒಡ್ಡಿ ವಿಹಾರಕ್ಕಾಗಿ ಅಥವಾ ಈಜಲು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ. ಸಂಜೆ ಹೊತ್ತಲ್ಲಿ ಇಲ್ಲಿ ಹರಿದಾಡುವ ಬಿಳಿ ಯಾಚ್ಟ್ (ವಿಹಾರ ನೌಕೆ) ಗಳು ದೂರದಲ್ಲಿನ ಬೆಳ್ಳಕ್ಕಿಯಂತೆ ಸುಂದರವಾಗಿ ಕಾಣುತ್ತವೆ. ಕೆಲವರು ತಮ್ಮ ಸ್ವಂತಕ್ಕೆಂದೇ ಖಾಸಗಿಯಾಗಿ ಯಾಚ್ಟನ್ನು ಇಟ್ಟುಕೊಂಡಿರುತ್ತಾರೆ.

Q (2)

ಗ್ಯಾಸ್ ವರ್ಕ್ಸ್ ಪಾರ್ಕ್

ನಾರ್ತ್ ಲೇಕ್ ಯೂನಿಯನ್ನನ್ನು ‘ಗ್ಯಾಸ್ ವರ್ಕ್ಸ್ ಪಾರ್ಕ್’ ಎಂದು ಕರೆಯುತ್ತಾರೆ. ಇದು 1906ರಲ್ಲಿ ಪ್ರಾರಂಭವಾಗಿ ಸುಮಾರು 50 ವರ್ಷಗಳ ಕಾಲ ಕಾರ್ಯಗತವಾಗಿತ್ತು. ಇಲ್ಲಿ ಇದ್ದಿಲಿನಿಂದ ಗ್ಯಾಸ್‌ ತಯಾರಿಸಿ ಇಡೀ ಸಿಯಾಟಲ್ ನಗರಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಇದೀಗ ಈ ಕೈಗಾರಿಕೆ ಸ್ಥಗಿತಗೊಂಡಿದ್ದರೂ ಹೊರಗಿನಿಂದ ಇದನ್ನು ನೋಡಬಹುದಾಗಿದೆ.

ಈ ನಾರ್ತ್ ಲೇಕ್ ಯೂನಿಯನ್ನಿನಲ್ಲಿ ಒಂದು ಪುಟ್ಟ ಗುಡ್ಡವಿದೆ. ಅದು ವಿಹಾರ ಸ್ಥಳ. ಅಲ್ಲಿಗೆ ತಲುಪಲು ಎಲಿಕ್ಟ್ರಿಕ್ ಲೈಮ್ ಸ್ಕೂಟರ್‌ಗಳನ್ನು ಬಳಸಬಹುದು. ಸುಮಾರು 30 ಸ್ಕೂಟರ್‌ ಓಡಿಸಿ ತಲುಪಿದೆ. ಕಿರಿದಾದ ರಸ್ತೆಯಲ್ಲಿ ಎದುರು ವಾಹನವನ್ನು ನಿಗಾ ಇಟ್ಟುಕೊಂಡು ಓಡಿಸುವುದು ಒಂದು ಸವಾಲಾದರೆ, ನಗರದ ದೊಡ್ಡ ರಸ್ತೆಗಳಲ್ಲೂ ಓಡಿಸಿದ್ದು ಒಂದು ಅನನ್ಯ ಅನುಭವವಾಗಿತ್ತು. ಸ್ಥಳೀಯರು ಹಾಗೂ ಪ್ರವಾಸಿಗರು ಹೆಚ್ಚಾಗಿ ಸೂರ್ಯಾಸ್ತ ಸಮಯದಲ್ಲಿ ಇಲ್ಲಿ ಬಂದು ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ವಾಯುವಿಹಾರಕ್ಕೆ ಬರುವವರು ಈ ಗುಡ್ಡಕ್ಕೂ ತಮ್ಮ ಸಾಕುಪ್ರಾಣಿಗಳನ್ನು ಕರೆತರುತ್ತಾರೆ. ಸೂರ್ಯಾಸ್ತವನ್ನು ಆನಂದಿಸುತ್ತಾ, ಗಂಟೆಗಟ್ಟಲೆ ಹರಟುತ್ತಾ ಅತ್ತ ಬದಿಯಲ್ಲಿ ಮನೋಹರವಾಗಿ ಕಾಣುವ ಸಿಯಾಟಲ್ ನಗರವನ್ನು ಕಣ್ತುಂಬಿಕೊಳ್ಳುತ್ತಾರೆ. ಇದು ಒಮ್ಮೆ ಭೇಟಿ ನೀಡಿದವರನ್ನು ಮತ್ತೊಮ್ಮೆ ತನ್ನತ್ತ ಕರೆಯಿಸಿಕೊಳ್ಳುವ ತಾಣ.