ಸ್ಕಾಟ್ಲೆಂಡ್ನಲ್ಲಿ ಕುದುರೆಮುಖ..!
ಗ್ಲ್ಯಾಸ್ಗೊ ನಗರದಿಂದ ಸುಮಾರು ಮೂವತ್ತೈದ ಮೈಲಿ ದೂರದಲ್ಲಿದೆ ಫಾಲ್ ಕಿರ್ಕ್ ಎಂಬ ಸ್ಕಾಟ್ಲೆಂಡಿನ ಏತನೀರಾವರಿ ಚಾತುರ್ಯಕ್ಕೆ ನಿದರ್ಶನವಿರುವ ಮತ್ತೊಂದು ಊರು. ಇದರ ಸಮೀಪ 240 ಎಕರೆ ವಿಸ್ತಾರದ ಹೆಲಿಕ್ಸ್ ಪಾರ್ಕ್ ನಲ್ಲಿ ಈ ಉಕ್ಕಿನ ನಿರ್ಮಾಣದ ಕಲಾಕೃತಿಗಳನ್ನು ಪ್ರತಿಷ್ಠಾಪಿಸಲಾಗಿದೆ. 2013ರಲ್ಲಿ ನಿರ್ಮಾಣಗೊಂಡ ಈ ಕಲ್ಪನಾ ಚಾತುರ್ಯವನ್ನು 2014ರಲ್ಲಿ ರಾಣಿ ಎರಡನೇ ಎಲಿಜಬೆತ್ ಉದ್ಘಾಟಿಸಿದರು.
- ಎಸ್. ಶಿವಲಿಂಗಯ್ಯ
ಒಂದು ಶನಿವಾರದ ಸಂಜೆ, ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕರ್ನಾಟಕದ ಬಗೆಗಿನ ಸಾಕ್ಷ್ಯಚಿತ್ರ ನೋಡುತ್ತಿದ್ದೆ. ವಿದೇಶವಾಸಿಯಾಗಿರುವ ನನ್ನ ಮಗನಿಗೂ ಕರ್ನಾಟಕದ ಸೊಬಗನ್ನು ವರ್ಣಿಸುತ್ತಾ, ಪಶ್ಚಿಮ ಘಟ್ಟದ ಎತ್ತಿನ ಭುಜ, ಕುದುರೆ ಮುಖ ಗಿರಿಶ್ರೇಣಿಯ ಚಾರಣವನ್ನು ಗ್ಲ್ಯಾಸ್ಗೊದಲ್ಲಿಯ ಬೋಳು ಗುಡ್ಡಗಳೊಂದಿಗೆ ಹೋಲಿಸುತ್ತಿದ್ದೆ. ಆಗ ಸ್ವಲ್ಪ ಉತ್ತೇಜಿತನಾದಂತೆ ಕಂಡ ಅವನು, “ ನಮ್ಮಲ್ಲೂ ಎರಡು ಕುದುರೆ ಮುಖಗಳಿವೆ” ಎಂದ. ಲಾಕ್ ಲಮಂಡ್ ಗೆ ಹೋಗುವ ದಾರಿಯಲ್ಲಿ ಹಸಿರು ಹೊದ್ದ ಕೆಲವು ಬೋಳು ಗುಡ್ಡಗಳನ್ನು ನೋಡಿದ್ದ ನೆನಪು. ಆದರೆ ಯಾವುದೂ ಕುದುರೆ ಮುಖವನ್ನು ಹೋಲುವಂತವುಗಳಲ್ಲವಲ್ಲ ಎಂದು ಅನುಮಾನಿಸಿದಾಗ, “ಈಗ ಸಂಜೆಯಾಗಿದೆ, ನಾಳೆಗೆ ರೆಡಿಯಾಗಿ ಕುದುರೆಮುಖ ದರ್ಶನ ಮಾಡಿಸುತ್ತೇನೆ “ ಎಂದಾಗ ಕುತೂಹಲದಲ್ಲಿಯೇ ರಾತ್ರಿ ಕಳೆದೆವು.

ಸ್ಕಾಟಿಷ್ ಜಾನಪದ ನಂಬಿಕೆಯಂತೆ, ನದಿ / ಸರೋವರದಲ್ಲಿ ಭಾರವಾದ ವಸ್ತುಗಳನ್ನು ಸಾಗಿಸುವಾಗ ಎಳೆಯಲು ನೆರವಾಗುವ ಶಕ್ತಿಯುತ ನಾಯಿ / ಕುದುರೆ ಮಾದರಿಯ ಜಲಚರವನ್ನು ಕೆಲ್ಪೀ ಎಂದು ಕರೆಯಲಾಗುವುದು. ವಾಸ್ತವದಲ್ಲಿ ಸ್ಕಾಟ್ಲೆಂಡಿನ ಕ್ಲೈಡೆಸ್ಡೇಲ್ ಪ್ರದೇಶದ ವಿಶಿಷ್ಟ ಜಾತಿಯ ಕುದುರೆಯನ್ನೂ ಕೆಲ್ಪೀ ಎಂದೇ ಕರೆಯುತ್ತಾರೆ. ಇವು ಆಕಾರದಲ್ಲಿ ಎತ್ತರವಾಗಿದ್ದು, ದಷ್ಟಪುಷ್ಟವಾಗಿರುತ್ತವೆ. ಹತ್ತು ಸಾಮಾನ್ಯ ಕುದುರೆಗಳ ಸಾಮರ್ಥ್ಯದ ಈ ತಳಿಯ ಕುದುರೆಗಳನ್ನು ಬೇಸಾಯಕ್ಕೆ, ಸಾಮಾನು ಸಾಗಾಟಕ್ಕೆ ಹೆಚ್ಚಾಗಿ ಬಳಸುತ್ತಿದ್ದರು. ಕೈಗಾರಿಕೀಕರಣದ ಕಾಲದಲ್ಲಿ , ಸ್ವಯಂಚಾಲಿತ ಯಂತ್ರಗಳ ಅನ್ವೇಷಣೆಗೆ ಮುನ್ನ ಭಾರವಸ್ತುಗಳನ್ನು ಸಾಗಿಸುವಲ್ಲಿ ಇವು ಪ್ರಧಾನ ಪಾತ್ರ ವಹಿಸುತ್ತಿದ್ದವು. ಪ್ರಥಮ ಮಹಾಯುದ್ದ ಕಾಲದಲ್ಲಿಯೂ ಇವು ನೆರವಿಗೆ ಬಂದಿವೆ. ಯಂತ್ರ ಆವಿಷ್ಕಾರದ ನಂತರ ಬೇಸಾಯಕ್ಕೆ ಇವುಗಳ ಬಳಕೆ ಕಡಿಮೆಯಾಗಿ, ಈಗ ಮೆರವಣಿಗೆಯ ಮೆರುಗಿಗೆ ಮಾತ್ರ ಸೀಮಿತವಾಗಿವೆ.
ಸ್ಕಾಟ್ಲೆಂಡ್ ನ ಕೈಗಾರಿಕಾ ಸಾಮರ್ಥ್ಯವನ್ನು ಪ್ರತಿನಿಧಿಸುವಂತೆ , ಸ್ಕಾಟಿಷ್ ಶಿಲ್ಪಿ ಆಂಡಿ ಸ್ಕಾಟ್ ಈ ಬೃಹತ್ ಕೆಲ್ಪಿಗಳ ರೂಪದಲ್ಲಿ ಸಾಂಕೇತಿಕವಾಗಿ ಕಲ್ಪಿಸಿದ್ದಾನೆ. ಪ್ರಾಥಮಿಕವಾಗಿ ಹತ್ತು ಅಡಿ ಎತ್ತರದ ಮಾಡೆಲ್ ಮಾಡಿ, ನಂತರ ಒಂದೊಂದೂ ತೊಂಬತ್ತೆಂಟು ಅಡಿ ಎತ್ತರವಿರುವಂತೆ ಹಿಗ್ಗಿಸಿರುವ ಈ ಆಕೃತಿಗಳ ನಿರ್ಮಾಣಕ್ಕಾಗಿ ತಲಾ ಮುನ್ನೂರು ಟನ್ ಉಕ್ಕನ್ನು ಬಳಸಲಾಗಿದೆ. ಒಂದೊಂದು ಆಕೃತಿ ಮೈದಳೆಯಲು ವಿಶೇಷ ವಿನ್ಯಾಸದ 990 ತುಣುಕುಗಳನ್ನು ಕೈಯಿಂದ ವೆಲ್ಡ್ ಮಾಡಿ ಜೋಡಿಸಲಾಗಿದೆ. ಟೊಳ್ಳಾಗಿರುವ ಈ ಕಲಾಕೃತಿಗಳ ನಿರ್ಮಾಣದ ಸೂಕ್ಷ್ಮತೆ ಅರಿಯಬಯಸುವವರು, ಮಾರ್ಗದರ್ಶಕರ ಜೊತೆ ಒಳಹೊಕ್ಕು ವಿವರಣೆ ಪಡೆಯಬಹುದು.

ಗ್ಲ್ಯಾಸ್ಗೊ ನಗರದಿಂದ ಸುಮಾರು ಮೂವತ್ತೈದ ಮೈಲಿ ದೂರದಲ್ಲಿದೆ ಫಾಲ್ ಕಿರ್ಕ್ ಎಂಬ ಸ್ಕಾಟ್ಲೆಂಡಿನ ಏತನೀರಾವರಿ ಚಾತುರ್ಯಕ್ಕೆ ನಿದರ್ಶನವಿರುವ ಮತ್ತೊಂದು ಊರು. ಇದರ ಸಮೀಪ 240 ಎಕರೆ ವಿಸ್ತಾರದ ಹೆಲಿಕ್ಸ್ ಪಾರ್ಕ್ ನಲ್ಲಿ ಈ ಉಕ್ಕಿನ ನಿರ್ಮಾಣದ ಕಲಾಕೃತಿಗಳನ್ನು ಪ್ರತಿಷ್ಠಾಪಿಸಲಾಗಿದೆ. 2013ರಲ್ಲಿ ನಿರ್ಮಾಣಗೊಂಡ ಈ ಕಲ್ಪನಾ ಚಾತುರ್ಯವನ್ನು 2014ರಲ್ಲಿ ರಾಣಿ ಎರಡನೇ ಎಲಿಜಬೆತ್ ಉದ್ಘಾಟಿಸಿದರು. ಹಗಲಿನಲ್ಲಿ ಮಾತ್ರವಲ್ಲದೆ, ಹೊತ್ತು ಮುಳುಗಿದ ಮೇಲೂ ಇದರ ಅಚ್ಚರಿಯನ್ನು ಸವಿಯಲು ಒಳಗಿನಿಂದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ವಾರ್ಷಿಕವಾಗಿ ಸುಮಾರು ಹತ್ತು ಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ಈ ಅಪರೂಪದ ನಿರ್ಮಾಣ, ಹಗಲಿನಲ್ಲಿ ಬೆಳ್ಳಿಯ ತಗಡಿನಂತೆ ತೋರಿದರೆ, ಮುಳುಗುವ ಸೂರ್ಯ ಇದರ ಮೇಲೆ ಚಿನ್ನದ ಮೆರುಗನ್ನು ನೀಡಿ ತನ್ನ ಮೆಚ್ಚುಗೆಯನ್ನು ಸೂಚಿಸುತ್ತಾನೆ.