ಮಾಲ್ಡೀವ್ಸ್ ಹನಿಮೂನ್ ಕಪಲ್ ಗಳ ಸ್ವರ್ಗ ಎನ್ನಲಾಗುತ್ತದೆ. ಆದರೆ ಸ್ವರ್ಗವೇ ನರಕವಾಗಿ ಬದಲಾದ ವಿಚಿತ್ರ ಕಥೆಯಿದು. ಡೆಸ್ಟಿನೇಷನ್‌ ವೆಡ್ಡಿಂಗ್...ಸೆಲೆಬ್ರಿಟಿಗಳಲ್ಲಷ್ಟೇ ಅಲ್ಲದೆ ಇಂದಿನ ಯುವ ಜನಾಂಗದಲ್ಲೂ ಹೆಚ್ಚುತ್ತಲೇ ಇರುವ ಆಸಕ್ತಿಯಿದು.‌ ಅದರಲ್ಲೂ ಕಡಲ ತೀರದಲ್ಲಿ ಹಾರ ಬದಲಾಯಿಸಿಕೊಂಡು ವಿವಾಹ ಬಂಧನಕ್ಕೆ ಒಳಗಾಗಬೇಕೆಂಬ ಕನಸು ಅನೇಕರಲ್ಲಿ ಮನೆ ಮಾಡಿದೆ. ವಿದೇಶಿಗರಲ್ಲೂ ಬೀಚ್‌ ವೆಡ್ಡಿಂಗ್‌ ಕಾನ್ಸೆಪ್ಟ್‌ ಹೊಸತೇನಲ್ಲ. ಅದರಲ್ಲೂ ಮಾಲ್ಡೀವ್ಸ್‌ನ ಬಿಳಿ ಮರಳಿನ ಕಡಲಿನ ತೀರದಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌ ಮಾಡಿಕೊಳ್ಳಬೇಕೆಂಬುದು ಈಗಂತೂ ಹೊಸ ಟ್ರೆಂಡ್‌.

ಇಂಥ ಸುಂದರ ಕನಸುಗಳೊಂದಿಗೆ ಫೆಬ್ರವರಿ 22 ರಂದು ಮಾಲ್ಡೀವ್ಸ್‌ನ ಮಾಲೆ-ವೆಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದವರೇ ಆಮ್ ಸ್ಟರ್ ಡಮ್ ಮೂಲದ ಸಿಮೋನಾ ಮುಸು ಮತ್ತು ಡೀನ್ ಶೀಪರ್ಸ್. ದಕ್ಷಿಣ ಆಫ್ರಿಕಾದ ಮೂಲದ ಈ ದಂಪತಿ ಆಮ್ ಸ್ಟರ್ ಡಮ್ ನಲ್ಲಿ ವಾಸಿಸುತ್ತಿದ್ದರು. ನೆಚ್ಚಿನ ದ್ವೀಪ ದೇಶಕ್ಕೆ ತೆರಳಿ ಬೀಚ್‌ ಸೆರಮನಿಯ ಮೂಲಕ ವಿವಾಹ ಬಂಧನಕ್ಕೊಳಗಾಗುವ ಮಹತ್ತರದ ಕನಸು ಅವರದ್ದಾಗಿತ್ತು. ಅಂದುಕೊಂಡಂತೆ ಅಚ್ಚುಕಟ್ಟಾಗಿ ಈ ಸಮಾರಂಭವನ್ನು ನೆರವೇರಿಸಿಕೊಂಡ ಅವರ ಒಂದು ವಾರದ ಕಾಲ ಮಾಲ್ಡೀವ್ಸ್ನಲ್ಲಿಯೇ ತಮ್ಮ ಅಮೂಲ್ಯವಾದ ಕ್ಷಣಗಳನ್ನೂ ಕಳೆದಿದ್ದರು.

ಮನಾಲಿಯಲ್ಲಿ ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ ಮಾಡಿಸಿಕೊಳ್ಳುವ ಯೋಚನೆಯಲ್ಲಿದ್ದೀರಾ ?

ಆದರೆ ಮದುವೆ, ಹನಿಮೂನ್‌ ಎಂಬ ಖುಷಿಯ ಕ್ಷಣಗಳಿಗಾಗಿ ಮಾಲ್ಡೀವ್ಸ್‌ಗೆ ಬಂದ ಅವರು, ಸಂಘರ್ಷದಲ್ಲಿ ಸಿಲುಕಿಕೊಂಡರು. ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಮಧ್ಯೆ ಮಾಲ್ಡೀವ್ಸ್‌ನಲ್ಲಿ ಸಿಲುಕಿಕೊಂಡ ಆಮ್ ಸ್ಟರ್ ಡಮ್ ದಂಪತಿಗೆ ವಾರದ ನಂತರ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಆಘಾತವೇ ಕಾದಿತ್ತು. ತಮ್ಮ ನಾಡಿಗೆ ಹಿಂದಿರುಗಲು ಬುಕ್‌ ಮಾಡಿಕೊಂಡಿದ್ದ ವಿಮಾನವಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಸಾವಿರಾರು ಇತರ ವಿಮಾನಗಳ ಹಾರಾಟವೂ ರದ್ದಾಗಿದ್ದವು.

ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಗಳಿಂದ ವಾಯುಯಾನ ವಲಯವನ್ನೇ ಅಡ್ಡಿಪಡಿಸಿತ್ತು. ಇದು ಲಕ್ಷಾಂತರ ಪ್ರಯಾಣಿಕರನ್ನು ತಮ್ಮೂರಿಗೆ ಮರಳುವುದಕ್ಕೂ ಆಗದೆ ಪ್ರಪಂಚದ ವಿವಿಧ ಭಾಗಗಳಲ್ಲಿ ಸಿಲುಕಿಸಿಬಿಟ್ಟಿತ್ತು. ಅವರಲ್ಲಿ ಸಿಮೋನಾ ಮುಸು ಮತ್ತು ಡೀನ್ ಶೀಪರ್ಸ್ ದಂಪತಿಯೂ ಸೇರಿಕೊಂಡಿದ್ದರು.

New Project (46)

ದುಸ್ವಪ್ನವಾದ ವಿವಾಹ ಸಂಭ್ರಮ

ಐಷಾರಾಮಿ ಫೈವ್‌ ಸ್ಟಾರ್‌ ಹೊಟೇಲ್‌ ವಾಸ್ತವ್ಯ, ಖಾಸಗಿ ಬಿಳಿ ಮರಳಿನ ಕಡಲತೀರದಲ್ಲಿ ಹೂಗಳಿಂದ ಅಲಂಕಾರಗೊಂಡಿರುವ ವಿಶೇಷ ವೇದಿಕೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕು ಹೀಗೆ ಸಾಲು ಸಾಲು ಕನಸುಗಳೊಂದಿಗೆ ಮಾಲ್ಡೀವ್ಸ್‌ಗೆ ಬಂದಿದ್ದ ಈ ಜೋಡಿಯ ಕನಸು ಯಾವುದೇ ತೊಂದರೆಯೂ ಇಲ್ಲದೇ ಸರಳವಾಗಿಯೇ ಈಡೇರಿತ್ತಾದರೂ ಮುಸು ಮತ್ತು ಶೀಪರ್ಸ್ ದಂಪತಿಗೆ ವಿವಾಹವೇ ದುಸ್ವಪ್ನದಂತೆ ಕಾಡುವುದಕ್ಕೆ ಪ್ರಾರಂಭಿಸಿತ್ತು. ವಾರಕ್ಕೆ ಒಪ್ಪುವಂಥ ಯೋಜನೆಯೊಂದಿಗೆ ಬೀಚ್‌ ದೇಶಕ್ಕೆ ಬಂದಿದ್ದ ಇವರು ವಿಮಾನಗಳ ಹಾರಾಟ ರದ್ದಾಗುತ್ತಲೇ ಮುಂದೇನು ಎಂಬ ಚಿಂತೆಗೆ ಸಿಲುಕಿಕೊಂಡರು.

ಬಲು ದುಬಾರಿ ಮಾಲ್ಡೀವ್ಸ್‌

New Project (44)

ಯುದ್ಧ ಪ್ರಾರಂಭವಾದ ನಂತರ ವಿಮಾನಗಳ ಹಾರಾಟವಿರಲ್ಲದೆ ಸ್ವದೇಶಕ್ಕೆ ಹೋಗುವುದಕ್ಕೂ ಆಗದೇ ಮಾಲ್ಡೀವ್ಸ್‌ನಲ್ಲಿಯೇ ಉಳಿದುಕೊಂಡ ದಂಪತಿಗೆ ಅನೇಕ ಸವಾಲುಗಳೇ ಎದುರಾದವು. ಒಂದು ವಾರದ ಕಾಲ ಇರಬೇಕೆಂದು ಯೋಚಿಸಿ ಬಂದಿದ್ದ ದೇಶದಲ್ಲಿ ಸುಮಾರು 22ಕ್ಕೂ ಹೆಚ್ಚು ದಿನಗಳ ಕಾಲ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಮೊದಲೇ ದುಬಾರಿ ದೇಶವೆಂದೇ ಹೆಸರು ಮಾಡಿರುವ ಮಾಲ್ಡೀವ್ಸ್‌ನಲ್ಲಿ ಉಳಿಯಲು ಸ್ಥಳವಿಲ್ಲದೆ, ಕೈಯಲ್ಲಿದ್ದ ದುಡ್ಡೆಲ್ಲವನ್ನೂ ಖಾಲಿ ಮಾಡಿಕೊಂಡಿದ್ದ ಈ ದಂಪತಿ, ಗೊಂದಲ ಮತ್ತು ಆತಂಕದ ನಡುವೆಯೇ ಕಾಲ ಕಳೆದಿದ್ದರು.

ಆದರೂ ಭರವಸೆ ಕಳೆದುಕೊಳ್ಳದ ಅವರು, ವಿಮಾನ ಲಭ್ಯತೆಯ ಬಗ್ಗೆ ನಿತ್ಯವೂ ವೆಬ್‌ಸೈಟ್ ಪರಿಶೀಲಿಸುತ್ತಲೇ ಇದ್ದರು. ಕೊನೆಗೂ ಮಾರ್ಚ್ 13 ರಂದು ನಿಗದಿಯಾಗಿದ್ದ ಸೌದಿಯಾ ವಿಮಾನದಲ್ಲಿ ಎರಡು ಸೀಟುಗಳು ಲಭ್ಯವಿರುವುದನ್ನು ಕಂಡು ಈ ನವಜೋಡಿ ಅನೇಕರ ಸಹಾಯದೊಂದಿಗೆ ಆ ಸೀಟ್‌ ಬುಕ್‌ ಮಾಡಿಕೊಂಡು, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ನಡುವೆಯೇ ಸುರಕ್ಷಿತರಾಗಿ ತಮ್ಮ ಊರನ್ನು ಸೇರಿಕೊಂಡರು. ಆದರೂ ಸಿಹಿ ಕ್ಷಣಗಳ ಆಚರಣೆಗೆ ಬಂದು ಕಹಿ ನೆನಪುಗಳೊಂದಿಗೆ ಮರಳುವಂತಾಗಿದ್ದು ಇವರ ವಿಧಿ ಬರಹ. ಒಟ್ಟಿನಲ್ಲಿ ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಹೀಗೆ ಅದೆಷ್ಟೋ ಮಂದಿಯ ಸುಂದರ ಕ್ಷಣಗಳನ್ನು ಕಿತ್ತುಕೊಂಡಿದೆ. ಲೆಕ್ಕವಿಲ್ಲದಷ್ಟು ಮಂದಿಯ ಪ್ರಾಣವನ್ನೇ ಇಲ್ಲವಾಗಿಸಿದೆ. ಇಂಥ ಯುದ್ಧಗಳ ಅಗತ್ಯವಾದರೂ ಏನು?!