ಯುರೋಪಿನ ಕಪ್ಪು ಕಾಡಿನ ನಡುವೆ ಕುಕೂ ಗಡಿಯಾರಗಳ ಸದ್ದು
ಇಲ್ಲಿ ಈ ದಟ್ಟ ಮತ್ತು ಉದ್ದವಾದ ಮರಗಳು ಸೂರ್ಯನ ಬೆಳಕು ನೆಲಕ್ಕೆ ಬೀಳುವುದನ್ನು ತಪ್ಪಿಸಿ, ಅದರ ನೆರಳು ಗಾಢ ಅಥವಾ ಕಪ್ಪು ಬಣ್ಣದಲ್ಲಿ ಕಾಣುತ್ತದೆ. ಹಾಗಾಗಿ ಈ ಕಾಡುಗಳಿಗೆ ಕಪ್ಪು ಕಾಡು (ಬ್ಲಾಕ್ ಫಾರೆಸ್ಟ್) ಎನ್ನುತ್ತಾರೆ. ಇದು ಎತ್ತರವಾದ ಫೈನ್ ಮರಗಳ ಕಾಡು.
ಯುರೋಪ್ ಪ್ರವಾಸವೆಂದರೆ ಪ್ರಕೃತಿಯ ಅದ್ಭುತ ವೈಭವವನ್ನು ಕಣ್ತುಂಬಿಕೊಳ್ಳುವ ಅಪರೂಪದ ಅನುಭವ. ನಾವು ನಮ್ಮ ಮೂರು ದಿನದ ಫ್ರಾನ್ಸ್ ಪ್ರವಾಸ ಮುಗಿಸಿ ಪ್ಯಾರಿಸ್‌ನಿಂದ ಬುಲೆಟ್ ಟ್ರೇನ್‌ನಲ್ಲಿ ಐದು ಗಂಟೆ ಪ್ರಯಾಣದ ಮೂಲಕ ಸ್ವಿಟ್ಜರ್ಲ್ಯಾಂಡ್‌ನ ಜ್ಯೂರಿಚ್‌ಗೆ ಬಂದಿಳಿದೆವು. ಅದು ಮಧ್ಯರಾತ್ರಿ! ಮರುದಿನ ಬೆಳಗ್ಗೆ ಜ್ಯೂರಿಚ್ ನಗರದಿಂದ ಹೊಟೆವು. ಸ್ವಿಟ್ಜರ್ಲ್ಯಾಂಡ್ ಪ್ರವಾಸ ಮಾಡಿ ಪ್ರಕೃತಿಯನ್ನು ಕಣ್ತುಂಬಿಸಿಕೊಂಡು ಜರ್ಮನಿಯ ಪ್ರಸಿದ್ಧ ಬ್ಲಾಕ್ ಫಾರೆಸ್ಟ್ ಪ್ರದೇಶದತ್ತ ಸಾಗುತ್ತಿದ್ದೆವು. ದಟ್ಟವಾದ ಕಾಡು, ಎತ್ತರವಾದ ಫೈನ್ ಮರಗಳು, ಹಸಿರು ಗುಡ್ಡಗಳು ನಮ್ಮ ಪ್ರಯಾಣವನ್ನು ಮನಮೋಹಕವಾಗಿಸಿದ್ದವು. ದೂರದಲ್ಲಿ ಕಾಣುವ ಹಿಮಾಚ್ಛಾದಿತ ಪರ್ವತಗಳು, ಹುಲ್ಲುಗಾವಲು, ಸರೋವರಗಳು ಸ್ಪಟಿಕಶುದ್ಧ ನೀರು, ಹಸಿರು ಕಾಡುಗಳು ಮನಸಿಗೆ ಶಾಂತಿ ನೀಡುತ್ತಿದ್ದವು.
ಇದನ್ನೂ ಓದಿ: ಫುಕೆಟ್ ನಗರದ ಆಧ್ಯಾತ್ಮಿಕ ಕೇಂದ್ರ
ಬ್ಲಾಕ್ ಫಾರೆಸ್ಟ್ ಯಾಕೆ?
ಜರ್ಮನಿಯ ನೈಋತ್ಯ ಭಾಗದ ನಿತ್ಯಹರಿದ್ವರ್ಣ ಕಾಡುಗಳ ಪ್ರದೇಶವೇ ಬ್ಲಾಕ್ ಫಾರೆಸ್ಟ್. ಎತ್ತರವಾದ ಫಿರ್ ಮತ್ತು ಫೈನ್ ಮರಗಳು ಇಲ್ಲಿ ಗಾಢವಾಗಿ ಕಾಣಸಿಗುತ್ತವೆ. ಸುಂದರವಾದ ಸರೋವರಗಳು, ಪರ್ವತಗಳು, ಸುಂದರ ಹಳ್ಳಿಗಳು, ಪ್ರಸಿದ್ಧ ಕುಕೂ ಗಡಿಯಾರಗಳಿಗೆ ಈ ಪ್ರದೇಶ ಹೆಸರುವಾಸಿಯಾಗಿದೆ. ಪ್ರಕೃತಿ ಪ್ರಿಯರಿಗೆ ಇದು ಹೇಳಿ ಮಾಡಿಸಿದಂತಿದೆ. ಈ ಕಾಡನ್ನು ಹಸಿರು ಎನ್ನುವ ಬದಲು ಕಪ್ಪು ಎಂದು ಕರೆಯಲು ಕಾರಣ ಸಾಕಷ್ಟು ಆಸಕ್ತಿದಾಯಕವಾಗಿದೆ. ಇಲ್ಲಿ ಈ ದಟ್ಟ ಮತ್ತು ಉದ್ದವಾದ ಮರಗಳು ಸೂರ್ಯನ ಬೆಳಕು ನೆಲಕ್ಕೆ ಬೀಳುವುದನ್ನು ತಪ್ಪಿಸಿ, ಅದರ ನೆರಳು ಗಾಢ ಅಥವಾ ಕಪ್ಪು ಬಣ್ಣದಲ್ಲಿ ಕಾಣುತ್ತದೆ. ಹಾಗಾಗಿ ಈ ಕಾಡುಗಳಿಗೆ ಕಪ್ಪು ಕಾಡು (ಬ್ಲಾಕ್ ಫಾರೆಸ್ಟ್) ಎನ್ನುತ್ತಾರೆ. ಇದು ಎತ್ತರವಾದ ಫೈನ್ ಮರಗಳ ಕಾಡು.

ಕುಕೂ ಕ್ಲಾಕ್ ವರ್ಕ್‌ಶಾಪ್
ಈ ಕಾರ್ಯಗಾರದಲ್ಲಿ ಮರದಿಂದ ತಯಾರಾಗುವ ಕುಕೂ ಗಡಿಯಾರಗಳ ನಿರ್ಮಾಣ ಪ್ರಕ್ರಿಯೆಯನ್ನು ನೋಡುವ ಅವಕಾಶ ದೊರಕಿತು. ನಮಗೆ ಇಲ್ಲಿ ಕುಕೂ ಫ್ಯಾಕ್ಟರಿಯ ಮಾಲೀಕ ಮತ್ತು ಅವರ ಇಬ್ಬರು ಮಕ್ಕಳು ಈ ಗಡಿಯಾರವನ್ನು ಹೇಗೆ ತಯಾರಿಸುತ್ತಾರೆ ಎಂದು ವಿವರಿಸಿದರು. ಶುದ್ಧ ರೋಸ್‌ವುಡ್ ಮರದಿಂದ ಈ ಗಡಿಯಾರಗಳನ್ನು ಹೇಗೆ ತಯಾರಿಸುತ್ತಾರೆ ಎಂದು ಸ್ವಲ್ಪ ಕೆತ್ತಿ, ಬಿಡಿ ಭಾಗಗಳನ್ನು ಜೋಡಿಸಿ ತೋರಿಸಿದರು. ಪ್ರತಿ ಗಂಟೆಗೆ ಸಣ್ಣ ಹಕ್ಕಿ ಹೊರಬಂದು ಕೂ ಕೂ ಎಂದು ಕೂಗುವ ವ್ಯವಸ್ಥೆ ಮಾಡುವ ಅದ್ಭುತ ಕಲೆಯನ್ನು ವಿವರಿಸಿದರು.
ಕಾರ್ಖಾನೆಯಲ್ಲಿ ಸಾಲಾಗಿ ವಿವಿಧ ರೀತಿಯ ಕುಕೂ ಗಡಿಯಾರಗಳನ್ನು ಜೋಡಿಸಲಾಗಿತ್ತು. ನೋಡಲೂ ಆಕರ್ಷಕವಾಗಿದ್ದವು. ಆದರೆ, ಅತ್ಯಂತ ದುಬಾರಿಯಾದ್ದರಿಂದ ನಾವ್ಯಾರೂ ಆ ಗಡಿಯಾರಗಳನ್ನು ಕೊಳ್ಳಲು ಮುಂದಾಗಲಿಲ್ಲ. ಈ ಪ್ರದೇಶದಲ್ಲಿ ಮತ್ತೊಂದು ವಿಶೇಷ ಎಂದರೆ ಅದು ಬ್ಲಾಕ್ ಫಾರೆಸ್ಟ್ ಕೇಕ್. ಅದನ್ನು ಸವಿಯುವ ಅವಕಾಶವನ್ನು ಅವರು ನೀಡಿದರು. ಕೆಲವು ಚಾಕೊಲೆಟ್ ಮತ್ತು ಗಿಫ್ಟ್ ಐಟಂಗಳನ್ನು ಖರೀದಿಸಿ ನಾವು ಅಲ್ಲಿಂದ ಟಿಟಿಸಿ ಸರೋವರವನ್ನು ನೋಡಲು ಹೊರಬಂದೆವು.
ಟಿಟಿಸಿ ಲೇಕ್
ಇದು ಜರ್ಮನಿಯ ಬ್ಲಾಕ್ ಫಾರೆಸ್ಟ್ ಪ್ರದೇಶದಲ್ಲಿನ ಪ್ರಸಿದ್ಧ ಹಿಮ ಸರೋವರ. ಸಿಹಿ ನೀರಿನಿಂದ ತುಂಬಿರುತ್ತದೆ. ಸುಮಾರು ಎರಡ್ಮೂರು ಕಿಮೀ ಉದ್ದವಾಗಿದ್ದು, ಸುತ್ತಲು ಹಸಿರು, ದಟ್ಟವಾದ ಅರಣ್ಯ ಮತ್ತು ಪರ್ವತಗಳಿಂದ ಸುತ್ತುವರಿದಿದೆ. ಪ್ರವಾಸಿಗರು ಇಲ್ಲಿ ದೋಣಿ ವಿಹಾರ, ಪ್ರಕೃತಿ ನಡಿಗೆಯನ್ನು ಆನಂದಿಸಬಹುದು. ಅತ್ಯಂತ ಶಾಂತ ಮತ್ತು ಮನಮೋಹಕ ದೃಶ್ಯವನ್ನು ಸೃಷ್ಟಿಸುವ ಈ ಸರೋವರದ ತೀರದಲ್ಲಿ ನಿಂತು ಸುತ್ತಲಿನ ಪ್ರಕೃತಿಯನ್ನು ನೋಡುತ್ತಿರುವಾಗ ನನಗಂತೂ ಮನಸು ಅಲ್ಲೇ ಮಂತ್ರಮುಗ್ಧವಾಯಿತು. ಈ ಸರೋವರದ ತೀರದಲ್ಲಿ ಅನೇಕ ಕೆಫೆ, ರೆಸ್ಟೋರೆಂಟ್ ಮತ್ತು ಗಿಫ್ಟ್ ಮಾರಾಟದ ಅಂಗಡಿಗಳೂ ಇವೆ. ಮಧ್ಯಾಹ್ನದ ಊಟ ಮಾಡಿ, ಶಾಪಿಂಗ್ ಮುಗಿಸಿ ಸ್ವಿಟ್ಜರ್ಲ್ಯಾಂಡ್‌ನ ಆಕರ್ಷಕ ಜಲಪಾತವನ್ನು ನೋಡಲು ಹೊರಟೆವು.

ಮ್ಯಾಗ್ನಿಫಿಷಿಯೆಂಟ್ ರೈನ್ ಫಾಲ್ಸ್
ಇದು ಯುರೋಪಿನ ಅತಿದೊಡ್ಡ ಜಲಪಾತವಾಗಿದೆ. ಇದು ಸ್ವಿಟ್ಜರ್ಲ್ಯಾಂಡ್‌ನ ಉತ್ತರ ಭಾಗದ ಜರ್ಮನಿ ಗಡಿ ಸಮೀಪದಲ್ಲಿದೆ. ಸುಮಾರು 150 ಮೀ ಅಗಲ ಮತ್ತು 23 ಮೀ ಎತ್ತರವಿದೆ. 15,000 ವರ್ಷಗಳಷ್ಟು ಹಳೆಯದಾದ ಈ ಜಲಪಾತವು ಬೇಸಗೆಯಲ್ಲಿ ಭವ್ಯವಾಗಿ ಕಾಣುತ್ತದೆ. ಕಾರಣ ಆ ಸಮಯದಲ್ಲಿ ಹಿಮ ಕರಗಿ ನೀರು ಹೆಚ್ಚಾಗಿರುತ್ತದೆ. ಇದನ್ನು ನೋಡಲು ಪ್ರವಾಸಿಗರು ದೋಣಿ ಮೂಲಕ ಜಲಪಾತದ ಹತ್ತಿರ ಹೋಗಬಹುದು. ಜಲಪಾತದ ಮಧ್ಯದಲ್ಲಿನ ಬಂಡೆಯ ಮೇಲೂ ಹತ್ತಬಹುದು. ನಾವೂ ಬೋಟ್ ಮೂಲಕ ಈ ಆಕರ್ಷಕ ಜಲಪಾತ ನೋಡಲು ಹೊರಟೆವು. ವಿಸ್ತಾರವಾಗಿ ರಭಸದಿಂದ ಧುಮ್ಮಿಕ್ಕುವ ನೀರಿನ ಸಿಂಚನದ ಅನುಭವ ಹೇಳಿತೀರದು. ಜಲಪಾತದ ಸನಿಹ ಹೋದಂತೆ ನೀರಿನ ಸಿಂಚನ ನಮ್ಮನ್ನು ಸ್ವಾಗತಿಸುತ್ತದೆ. ಅದು ಮುಖಕ್ಕೆ ತಟ್ಟುವಾಗ ವಿಚಿತ್ರ ಸಂತೋಷದ ಅನುಭವ ಕೊಡುತ್ತದೆ. ದೊಡ್ಡ ಪ್ರಮಾಣದಲ್ಲಿ ಹರಿದು ಬರುವ ನೀರು ಕೆಳಗೆ ಬಿದ್ದು ಬಿಳಿ ನೊರೆಯಾಗಿ ಹರಡುತ್ತಿರುವ ದೃಶ್ಯ ರಮ್ಯವಾಗಿತ್ತು! ಈ ಜಲಪಾತ ರೈನ್ ನದಿಯ ಮೇಲೆ ನಿರ್ಮಾಣವಾಗಿದ್ದು, ಜಲಪಾತದ ಬಳಿ ಹೋದಾಗ ಪ್ರಕೃತಿಯ ಅದ್ಭುತ ಶಕ್ತಿಯನ್ನು ನೋಡುವಾಗ ಮನಸು ಮಂತ್ರಮುಗ್ಧವಾಗುತ್ತದೆ.
ಸ್ವಿಟ್ಜರ್ಲ್ಯಾಂಡಿನ ಅದ್ಭುತವಾದ ರೈನ್ ಫಾಲ್ಸ್, ಜರ್ಮನಿಯ ಹಸಿರು ಕಾಡುಗಳು, ಟಿಟಿಸಿ ಸರೋವರದ ಶಾಂತತೆ, ಬ್ಲಾಕ್ ಫಾರೆಸ್ಟ್‌ನ ಸೌಂದರ್ಯ ಮತ್ತು ಅಲ್ಲಿನ ಕೇಕ್‌ನ ಸಿಹಿ, ಕುಕೂ ಕ್ಲಾಕ್ ಫ್ಯಾಕ್ಟರಿ ಇವೆಲ್ಲವೂ ನನ್ನ ಮನಸಿನಲ್ಲಿ ಅಚ್ಚಳಿಯದ ನೆನಪುಗಳನ್ನು ಮೂಡಿಸಿದೆ. ಈ ಪ್ರವಾಸ ಪ್ರಕೃತಿಯ ಅದ್ಭುತ ವೈಭವವನ್ನು ನನಗೆ ಹತ್ತಿರದಿಂದ ಪರಿಚಯಿಸಿತು ಮತ್ತು ಅದನ್ನು ಅನುಭವಿಸಲು ದೊರೆತ ಅಮೂಲ್ಯ ಅವಕಾಶವಾಗಿತ್ತು.