ಕ್ಯಾಲಿಫೋರ್ನಿಯಾದಲ್ಲೂ ಕನ್ನಡದ ಕಂಪು
ಪರದೇಶದಲ್ಲೂ ನಮ್ಮ ಆಹಾರ ಬೇಕನಿಸಿದಾಗ ಆಪತ್ಬಾಂಧವರಂತೆ ನೆರವಿಗೆ ಬರುವುದು ಮದ್ರಾಸ್ ಕೆಫೆ ಮತ್ತು ಇಡ್ಲಿ ಎಕ್ಸ್‌ಪ್ರೆಸ್ ರೆಸ್ಟೋರೆಂಟ್‌ಗಳು. ಮದ್ರಾಸ್ ಕೆಫೆಯ ಮಸಾಲೆ ದೋಸೆ ಮತ್ತು ಇಡ್ಲಿ ಎಕ್ಸ್‌ಪ್ರೆಸ್‌ನ ಮಲ್ಲಿಗೆಯಂಥ ಇಡ್ಲಿಗಳು, ಸಾಂಬಾರಿನ ಅಧಿಕೃತ ದಕ್ಷಿಣ ಭಾರತದ ರುಚಿ ನಮ್ಮನ್ನು ಕ್ಷಣಕಾಲ ದಕ್ಷಿಣ ಭಾರತಕ್ಕೇ ಕರೆದೊಯ್ಯುತ್ತವೆ.
- ಸ್ವಾಮಿನಾಥನ್
ಅಮೆರಿಕದ ಪಶ್ಚಿಮ ತೀರದ ಕ್ಯಾಲಿಫೋರ್ನಿಯಾ, ಮಾನವನ ಮಹತ್ವಾಕಾಂಕ್ಷೆ ಮತ್ತು ಪ್ರಕೃತಿಯ ಅಪ್ರತಿಮ ಸೌಂದರ್ಯ ಮುಖಾಮುಖಿಯಾಗುವ ತಾಣ. ಈ ವರ್ಷ ಜನವರಿಯಲ್ಲಿ ನಾವು ಕೈಗೊಂಡ ಕ್ಯಾಲಿಫೋರ್ನಿಯಾ ಪ್ರವಾಸವು ನನಗೆ ಅದ್ಭುತ ಅನುಭವ ನೀಡಿತು. ಸುಮಾರು ಆರು ವಾರಗಳ ಕಾಲ ನಡೆದ ಈ ಪಯಣದಲ್ಲಿ ನಾವು ನೋಡಿದ ತಾಣಗಳು ಇಂತಿವೆ.
ಇದನ್ನೂ ಓದಿ: ಸಿಯಾಟಲ್‌ನ ಹೆಗ್ಗುರುತುಗಳ
ಇತಿಹಾಸ ಮತ್ತು ಹೂವಿನ ಲೋಕ ಫಿಲೋಲಿ
ನಮ್ಮ ಪ್ರವಾಸದ ಮೊದಲ ತಾಣ ವುಡ್‌ಸೈಡ್‌ನಲ್ಲಿನ ಫಿಲೋಲಿ ಎಸ್ಟೇಟ್. ಸುಮಾರು 654 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ತೋಟ ಮತ್ತು ಇಲ್ಲಿನ ಬೃಹತ್ ಭವನ ಅಮೆರಿಕದ ಶ್ರೀಮಂತ ಇತಿಹಾಸವನ್ನು ಸಾರುತ್ತದೆ. ಇಲ್ಲಿನ ಉದ್ಯಾನ ಜಗತ್ತಿನ ಸುಂದರ ತೋಟಗಳಲ್ಲಿ ಒಂದು. ಪ್ರತಿ ಋತುಗಳಲ್ಲೂ ಇಲ್ಲಿನ ಹೂವುಗಳು ಬದಲಾಗುತ್ತವೆ. ಇಲ್ಲಿನ ವಾಸ್ತುಶಿಲ್ಪ ಇಂಗ್ಲಿಷ್ ಶೈಲಿಯನ್ನು ನೆನಪಿಸುತ್ತದೆ. ಇದನ್ನು ಕಣ್ತುಂಬಿಕೊಂಡು ನಂತರ ಮದ್ರಾಸ್ ಕೆಫೆ ಮತ್ತು ಇಡ್ಲಿ ಎಕ್ಸ್‌ಪ್ರೆಸ್‌ನಲ್ಲಿ ತಿಂಡಿ ಸವಿದೆವು.

ಪರದೇಶದಲ್ಲೂ ನಮ್ಮ ಆಹಾರ ಬೇಕನಿಸಿದಾಗ ಇವು ಆಪತ್ಬಾಂಧವರಂತೆ ನೆರವಿಗೆ ಬರುತ್ತವೆ. ಮದ್ರಾಸ್ ಕೆಫೆಯ ಮಸಾಲೆ ದೋಸೆ ಮತ್ತು ಇಡ್ಲಿ ಎಕ್ಸ್‌ಪ್ರೆಸ್‌ನ ಮಲ್ಲಿಗೆಯಂಥ ಇಡ್ಲಿಗಳು, ಸಾಂಬಾರಿನ ಅಧಿಕೃತ ದಕ್ಷಿಣ ಭಾರತದ ರುಚಿ ನಮ್ಮನ್ನು ಕ್ಷಣಕಾಲ ದಕ್ಷಿಣ ಭಾರತಕ್ಕೆ ಕರೆದೊಯ್ಯುತ್ತವೆ.
ಹಾಫ್ ಮೂನ್ ಬೇ: ಅಲೆಗಳ ಅಬ್ಬರ
ಫಿಲೋಲಿಯಿಂದ ಸ್ವಲ್ಪ ದೂರದಲ್ಲಿ ಹಾಫ್ ಮೂನ್ ಬೇ ಇದೆ. ಇದು ಅರ್ಧಚಂದ್ರಾಕೃತಿಯ ಈ ಸಮುದ್ರ ತೀರ. ಪೆಸಿಫಿಕ್ ಮಹಾಸಾಗರದ ಭವ್ಯತೆಗೆ ಸಾಕ್ಷಿ. ಇಲ್ಲಿನ ಕಡಿದಾದ ಬಂಡೆಗಳ ಮೇಲೆ ನಿಂತು ಸಮುದ್ರದ ಅಲೆಗಳನ್ನು ನೋಡುವುದೇ ಒಂದು ಯೋಗ. ಸರ್ಫಿಂಗ್ಗೂ ಅವಕಾಶವಿದೆ.

ಪಾಯಿಂಟ್ ರೆಯ್ಸ್ ಮತ್ತು ಸೈಪ್ರೆಸ್ ಸುರಂಗ
ಸ್ಯಾನ್ ಫ್ರಾನ್ಸಿಸ್ಕೋದಿಂದ ಸುಮಾರು 30 ಮೈಲಿ ದೂರದಲ್ಲಿ ಪಾಯಿಂಟ್ ರೆಯ್ಸ್ ನ್ಯಾಷನಲ್ ಸೀಶೋರ್ ಇದೆ. ಇದೊಂದು ವಿಸ್ಮಯದ ಜಗತ್ತು. ಇಲ್ಲಿನ ಪ್ರಮುಖ ಆಕರ್ಷಣೆ ಪಾಯಿಂಟ್ ರೆಯ್ಸ್ ಲೈಟ್‌ಹೌಸ್. 1870ರಲ್ಲಿ ನಿರ್ಮಿಸಲಾಯಿತು. ಅಂದು ಇದು ನಾವಿಕರಿಗೆ ದಾರಿದೀಪವಾಗಿತ್ತು. ಇಲ್ಲಿಗೆ ಹೋಗಲು ನಾವು ಸುಮಾರು 300 ಮೆಟ್ಟಿಲುಗಳನ್ನು ಇಳಿಯಬೇಕು. ಸಮುದ್ರದ ಅಬ್ಬರ ಮತ್ತು ಮಂಜಿನ ಮಬ್ಬಿನ ಮುಸುಕು ಇಲ್ಲಿನ ವಾತಾವರಣವನ್ನು ಮಾಂತ್ರಿಕವಾಗಿಸುತ್ತದೆ.
ಇದರ ಹತ್ತಿರದಲ್ಲಿ ಸೈಪ್ರೆಸ್ ಟ್ರೀ ಟನಲ್ ಇದೆ. ರಸ್ತೆಯ ಇಕ್ಕೆಲಗಳಲ್ಲಿ ದೈತ್ಯ ಸೈಪ್ರೆಸ್ ಮರಗಳು ಪರಸ್ಪರ ಕೈಜೋಡಿಸಿ ಸುರಂಗದಂತೆ ನಿರ್ಮಾಣವಾಗಿವೆ. ಇಲ್ಲಿನ ಮಂಜಿನ ವಾತಾವರಣದಲ್ಲಿ ನಡೆಯುವಾಗ ಥೇಟ್ ಸಿನಿಮಾ ಸೆಟ್‌ನಲ್ಲಿರುವಂತೆ ಭಾಸವಾಗುತ್ತದೆ.
ಸಾಂತಾ ರೋಸಾ ಮತ್ತು ನೇಪಾಳಿ ರುಚಿ
ಸಾಂತಾ ರೋಸಾದಲ್ಲಿ ನಾವು ಭೇಟಿ ನೀಡಿದ್ದು ಯೆತಿ ರೆಸ್ಟೋರೆಂಟ್‌ಗೆ. ಇದು ಭಾರತೀಯ ಮತ್ತು ನೇಪಾಳಿ ಅಡುಗೆಗಳ ಸಂಗಮ ತಾಣ. ಹಿಮಾಲಯದ ತಪ್ಪಲಿನ ಮಸಾಲೆಗಳನ್ನು ಬಳಸಲಾಗುತ್ತದೆ. ಮಧ್ಯಾಹ್ನದ ಭೋಜನಕ್ಕೆ ಇದು ಅತ್ಯುತ್ತಮ ಸ್ಥಳ. ಪ್ರಕೃತಿಪ್ರಿಯರಿಗೆ ಸಾಂತಾ ರೋಸಾ ಒಂದು ಸುಂದರ ನಗರವಾಗಿ ಕಾಣುತ್ತದೆ.
ಮ್ಯಾಂಡೋಸಿನೋ ಮತ್ತು ಬಿಗ್ ರಿವರ್ ಬೀಚ್
ಕ್ಯಾಲಿಫೋರ್ನಿಯಾದ ಉತ್ತರ ತೀರದಲ್ಲಿ ಮ್ಯಾಂಡೋಸಿನೋ ಪಟ್ಟಣವಿದೆ. ಇಲ್ಲಿನ ಮ್ಯಾಂಡೋಸಿನೋ ಹೆಡ್‌ಲ್ಯಾಂಡ್ಸ್ ಸ್ಟೇಟ್ ಪಾರ್ಕ್ ಸಮುದ್ರ ತೀರದಲ್ಲಿದ್ದು, ಇಲ್ಲಿನ ಕಾಲುದಾರಿಗಳಲ್ಲಿ ಸಂಚರಿಸುವುದು ಅದ್ಭುತ ಅನುಭವ ನೀಡುತ್ತದೆ. ಇನ್ನು ಬಿಗ್ ರಿವರ್ ಬೀಚ್ ನದಿಯು ಸಮುದ್ರವನ್ನು ಸೇರುವ ಸಂಗಮ ತಾಣ. ಇಲ್ಲಿನ ಮರಳು ಮತ್ತು ತಿಳಿನೀರು ಮನಸಿಗೆ ಶಾಂತಿ ನೀಡುತ್ತದೆ.
ಇಲ್ಲಿ ನಮಗೆ ಹೊಸ ರುಚಿ ಪರಿಚಯಿಸಿದ್ದು ಡ್ಯಾನ್ಸಿಂಗ್ ಯಾಕ್ ರೆಸ್ಟೋರೆಂಟ್. ಬಕ್-ವ್ಹೀಟ್ ರೊಟ್ಟಿ ಇಲ್ಲಿನ ವಿಶೇಷ. ರಾಗಿಯಂಥ ಧಾನ್ಯದಿಂದ ಈ ರೊಟ್ಟಿ ತಯಾರಿಸುತ್ತಾರೆ. ನೇಪಾಳಿ ಶೈಲಿಯ ಈ ಖಾದ್ಯವಾಗಿದ್ದು, ಅತ್ಯಂತ ಪೌಷ್ಟಿಕ ಮತ್ತು ರುಚಿಕರ ಆಹಾರ.

ರೆಡ್‌ವುಡ್ಸ್ ಮತ್ತು ಪ್ರಕೃತಿಯ ದೈತ್ಯತೆ
ಜಗತ್ತಿನ ಅತ್ಯಂತ ಎತ್ತರದ ಮರಗಳಾದ ʻರೆಡ್‌ವುಡ್ಸ್ʼ ಸ್ಟೇಟ್ ಪಾರ್ಕ್‌ಗೆ ಭೇಟಿ ನೀಡದಿದ್ದರೆ ಕ್ಯಾಲಿಫೋರ್ನಿಯಾ ಪ್ರವಾಸ ಅಪೂರ್ಣ. ಸಾವಿರಾರು ವರ್ಷಗಳ ಐತಿಹ್ಯದ ಈ ಮರಗಳ ನಡುವೆ ನಿಂತಾಗ ಮನುಷ್ಯ ಜೀವನದ ಅಲ್ಪತೆ ಅರಿವಾಗುತ್ತದೆ. ಇಲ್ಲಿನ ಗಾಳಿ ಅಷ್ಟು ಶುದ್ಧವಾಗಿದ್ದು, ಮೌನವೇ ಇಲ್ಲಿನ ಭಾಷೆ.
ಸ್ಯಾನ್ ಫ್ರಾನ್ಸಿಸ್ಕೋದ ಕಲೆ ಮತ್ತು ಸಂಸ್ಕೃತಿ
ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕೆ ಬಂದಾಗ ನಮ್ಮನ್ನು ಮೊದಲು ಸ್ವಾಗತಿಸಿದ್ದು ಗೋಲ್ಡನ್ ಗೇಟ್ ಬ್ರಿಡ್ಜ್. ಇದರ ಸೌಂದರ್ಯ ಸವಿಯಲು ಕ್ರಿಸ್ಸಿ ಫೀಲ್ಡ್ಸ್ ಅತ್ಯುತ್ತಮ ತಾಣ. ಇಲ್ಲಿನ ವಿಶಾಲವಾದ ಹುಲ್ಲುಗಾವಲು ಮತ್ತು ಸಮುದ್ರದ ನೋಟ ಅದ್ಭುತವಾಗಿರುತ್ತವೆ. ಬೇಕರ್ ಬೀಚ್‌ನಿಂದ ಸೇತುವೆಯ ನೋಟ ಮತ್ತಷ್ಟು ಆಕರ್ಷಕವಾಗಿರುತ್ತದೆ.
ನಗರದ ವಾಸ್ತುಶಿಲ್ಪವನ್ನು ನೋಡಲು ಪ್ಯಾಲೇಸ್ ಆಫ್ ಫೈನ್ ಆರ್ಟ್ಸ್‌ಗೆ ಹೋಗಲೇಬೇಕು. ರೋಮನ್ ಮತ್ತು ಗ್ರೀಕ್ ಶೈಲಿಯ ಈ ಕಟ್ಟಡ ಕಲಾಪ್ರೇಮಿಗಳ ಸ್ವರ್ಗ. ಅದರ ಬೆನ್ನಲ್ಲೇ ಲೆಜಿಯನ್ ಆಫ್ ಹಾನರ್ ಮ್ಯೂಸಿಯಂನ ಐರೋಪ್ಯ ಕಲೆಗಳು ನೋಡುಗರನ್ನು ಬೆರಗುಗೊಳಿಸುತ್ತವೆ.
ಇಲ್ಲಿ ಬೇಷರಂ ಹೆಸರಿನ ರೆಸ್ಟೋರೆಂಟ್ ದೆ. ಇಲ್ಲಿ ಗುಜರಾತಿ ಅಡುಗೆಗಳನ್ನು ಕಲಾತ್ಮಕವಾಗಿ ಉಣಬಡಿಸುತ್ತಾರೆ. ಸಾಂಪ್ರದಾಯಿಕ ಅಡುಗೆಗಳಿಗೆ ಹೊಸ ರೂಪ ನೀಡುವುದು ಇಲ್ಲಿನ ವಿಶೇಷತೆ.
ಮಾನವರಹಿತ ವಾಹನಗಳು
ನಮ್ಮ ಈ ಇಡೀ ಪ್ರವಾಸದ ಅತ್ಯಂತ ರೋಚಕ ಮತ್ತು ತಾಂತ್ರಿಕ ಭಾಗ ಸ್ಯಾನ್ ಫ್ರಾನ್ಸಿಸ್ಕೋದ ರಸ್ತೆಗಳಲ್ಲಿ ಕಂಡ 'ಹ್ಯೂಮನ್-ಲೆಸ್ ಡ್ರೈವಿಂಗ್' ಅಥವಾ ಚಾಲಕರಿಲ್ಲದ ಕಾರುಗಳು. ಈ ಕಾರಿನಲ್ಲಿ ನಾವು ಕುಳಿತಾಗ ಮೊದಲು ಆತಂಕವಿತ್ತಾದರೂ ನಂತರ ಅದರ ಶಿಸ್ತನ್ನು ಕಂಡು ಆಶ್ಚರ್ಯವಾಯಿತು. ಈ ವಾಹನಗಳು ಕೆಲಸ ಮಾಡುವುದು ಮಷಿನ್ ಲರ್ನಿಂಗ್ ಅಲ್ಗಾರಿದಮ್‌ಗಳ ಆಧಾರದ ಮೇಲೆ. ಕಾರಿನ ಸುತ್ತಲೂ ಅಳವಡಿಸಲಾಗಿರುವ ಹಲವಾರು 'ಲಿಡಾರ್' ಸೆನ್ಸಾರ್‌ಗಳು ಮತ್ತು ಹೈ-ರೆಸಲ್ಯೂಶನ್ ಕ್ಯಾಮೆರಾಗಳು ಪ್ರತಿ ಕ್ಷಣವೂ ರಸ್ತೆಯ 3ಡಿ ನಕ್ಷೆಯನ್ನು ಸಿದ್ಧಪಡಿಸುತ್ತವೆ. ಈ ಅಲ್ಗಾರಿದಮ್‌ಗಳು ಸೆಕೆಂಡಿನ ನೂರನೆಯ ಒಂದು ಭಾಗದಲ್ಲಿ ರಸ್ತೆಯಲ್ಲಿರುವ ಚಿಕ್ಕ ಕಲ್ಲನ್ನೂ ಗುರುತಿಸುತ್ತವೆ. ಪಾದಚಾರಿಗಳು ರಸ್ತೆ ದಾಟುವಾಗ ಅಥವಾ ಇನ್ನೊಂದು ವಾಹನ ಹಠಾತ್ತಾಗಿ ಬಂದಾಗ, ಈ ಕಾರುಗಳು ಕರಾರುವಕ್ಕಾದ ನಿರ್ಧಾರ ತೆಗೆದುಕೊಳ್ಳುತ್ತವೆ. ಲಕ್ಷಾಂತರ ಕಿಮೀ ಚಾಲನಾ ದತ್ತಾಂಶವನ್ನು ವಿಶ್ಲೇಷಿಸಿರುತ್ತವೆ. ಇದು ಕೇವಲ ತಂತ್ರಜ್ಞಾನವಲ್ಲ; ಮನುಷ್ಯನ ಬುದ್ಧಿಶಕ್ತಿ ಮತ್ತು ಕಂಪ್ಯೂಟರ್ ವಿಜ್ಞಾನದ ಪರಾಕಾಷ್ಠೆ.

ಬೇ ಏರಿಯಾ: ಭಾರತೀಯರ ಪಾಲಿನ ನಂದನವನ
ಕ್ಯಾಲಿಫೋರ್ನಿಯಾದ ಬೇ ಏರಿಯಾ ಭಾಗವು ಭಾರತೀಯರಿಗೆ, ವಿಶೇಷವಾಗಿ ಕನ್ನಡಿಗರಿಗೆ ಒಂದು ಸ್ವರ್ಗವೇ ಸರಿ. ಇಲ್ಲಿನ ಜೀವನಶೈಲಿ ಮತ್ತು ಸೌಲಭ್ಯಗಳನ್ನು ಕಂಡಾಗ ನಾವು ಭಾರತವನ್ನು ಮಿಸ್ ಮಾಡಿಕೊಳ್ಳುವ ಪ್ರಸಂಗವೇ ಬರುವುದಿಲ್ಲ.
ಪಾದಚಾರಿ ಸ್ನೇಹಿ:
ಇಲ್ಲಿನ ನಗರ ವಿನ್ಯಾಸ 'ಪಾದಚಾರಿ ಸ್ನೇಹಿ'ಯಾಗಿದೆ. ರಸ್ತೆ ದಾಟಲು ಪಾದಚಾರಿಗಳು ಮುಂದಾದಾಗ, ವಾಹನ ಸವಾರರು ದೂರದಲ್ಲಿದ್ದರೂ ತಾವಾಗಿಯೇ ವಾಹನ ನಿಲ್ಲಿಸುತ್ತಾರೆ. ಕಾನೂನಿನ ಮೇಲಿರುವ ಗೌರವ ಮತ್ತು ಪರಸ್ಪರ ಮರ್ಯಾದೆ ಇಲ್ಲಿನ ಸಂಚಾರ ವ್ಯವಸ್ಥೆಯ ಜೀವಾಳ.
ಸ್ವಚ್ಛತೆ ಮತ್ತು ಹಸಿರು:
ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಸುತ್ತಲಿನ ನಗರಗಳು ಅತ್ಯಂತ ಸ್ವಚ್ಛವಾಗಿವೆ. ಪ್ರತಿಯೊಂದು ಬಡಾವಣೆಯಲ್ಲೂ ಸುಂದರ ಉದ್ಯಾನಗಳಿವೆ. ಈ ಪಾರ್ಕ್‌ಗಳು ಕೇವಲ ಹಸಿರು ತಾಣಗಳಲ್ಲ; ಸಮುದಾಯದ ಜನರು ಸೇರುವ, ವಿಶ್ರಾಂತಿ ಪಡೆಯುವ ತಾಣಗಳು.
ಕನ್ನಡ ಕಸ್ತೂರಿ ಮತ್ತು ಭಾರತೀಯ ಸಂಸ್ಕೃತಿ:
ನಮ್ಮ ಕನ್ನಡಿಗರಿಗೆ ಇಲ್ಲಿ ʻಕನ್ನಡ ಕೂಟʼಗಳ ಸಕ್ರಿಯ ಉಪಸ್ಥಿತಿ ಒಂದು ದೊಡ್ಡ ವರದಾನದಂತಿದೆ. ಹಬ್ಬ ಹರಿದಿನಗಳಲ್ಲಿ ಕನ್ನಡದ ಸಾಹಿತ್ಯ, ಸಂಗೀತ ಮತ್ತು ನಾಟಕಗಳ ಮೂಲಕ ಇಲ್ಲಿನ ಕನ್ನಡಿಗರು ನಮ್ಮ ಮಣ್ಣಿನ ಸಂಸ್ಕೃತಿಯನ್ನು ಜೀವಂತವಾಗಿರಿಸಿದ್ದಾರೆ. ಭಾಷೆಯ ಬಾಂಧವ್ಯ ಇಲ್ಲಿನ ಜನರನ್ನು ಒಂದು ಕುಟುಂಬದಂತೆ ಬೆಸೆದಿದೆ. ಇಲ್ಲಿನ ಹಿಂದೂ ದೇವಾಲಯಗಳ ಭವ್ಯತೆ ಮತ್ತು ವಿಧಿವಿಧಾನಗಳು ಥೇಟ್ ಭಾರತದ ಪುಣ್ಯಕ್ಷೇತ್ರಗಳಲ್ಲಿರುವಂತೆ ಭಾವನೆ ಮೂಡಿಸುತ್ತವೆ. ಭಾರತದ ಪ್ರತಿಯೊಂದು ರಾಜ್ಯದ ವಿಶಿಷ್ಟ ಭೋಜನವೂ ಇಲ್ಲಿ ಲಭ್ಯ. ನೀವು ಬೇ ಏರಿಯಾದಲ್ಲಿದ್ದರೆ, ಕರ್ನಾಟಕ ಮಿಸ್ ಆಗುವುದೇ ಇಲ್ಲ. ಇಲ್ಲಿ ಬೆಂಗಳೂರು, ಮೈಸೂರಿನಲ್ಲಿರು ಫೀಲ್ ಇದೆ.