Tuesday, September 16, 2025
Tuesday, September 16, 2025

ಊರನ್ನು ಉಳಿಸಿದ ಒಂದು ಗ್ಲಾಸ್ ವೈನ್!

ಬೇರೆಯವರ ಜೀವನದಲ್ಲಿ ಮೂಗು ತೂರಿಸುವ ಈ ಅಪರಾಧದ ಸಂಕೇತವೆಂಬಂತೆ ಮಾಸ್ಕ್ ಗೆ ಮೊನಚಾದ ಮೂಗು ಹಾಗೂ ಸೀಟಿಯನ್ನು ಬಾಯಿಗೆ ಅಳವಡಿಸಲಾಗಿತ್ತು. ಅರ್ಥಾತ್ ಮಾಸ್ಕ್ ತೊಟ್ಟವರು ಉಸಿರಾಡಿದಾಗೆಲ್ಲ ಶಿಳ್ಳೆ ಹೊಡೆದಂತಾಗಿ ಸುತ್ತ ಮುತ್ತಲಿನ ಜನರು ಇವರನ್ನು ಮಾತಿಗೆ ಎಳೆಯುತ್ತಲೇ ಇರಲಿಲ್ಲ ! ಅವಮಾನಿಸಲೆಂದೇ ಮಾಡಲಾದ ಈ ಮಾಸ್ಕ್ ಗೆ ಶೇಮ್ ಮಾಸ್ಕ್ ಎಂಬ ಹೆಸರಿತ್ತು.

ಸುಳ್ಳು ಹೇಳಿದಾಗೆಲ್ಲ ಮೂಗು ಉದ್ದವಾಗಿಬಿಡುವ 'ಪಿನೋಕಿಯೋ' ಕಥೆ ನಿಮಗೆ ಬಹುಶಃ ತಿಳಿದೇ ಇದೆ. ಮಧ್ಯಕಾಲೀನ ಪಟ್ಟಣದ ಸುಂದರವಾದ ಬೀದಿಗಳಲ್ಲಿ ಅಡ್ಡಾಡುತ್ತಿರುವ ಪ್ರೀತಿಯ ಹುಡುಗ ಪಿನೋಕಿಯೋನನ್ನು ಒಂದು ಕ್ಷಣ ಕಲ್ಪಿಸಿಕೊಳ್ಳಿ. ಅನಿಮೇಷನ್ ಚಿತ್ರಗಳನ್ನು ತಯಾರಿಸುವ ವಾಲ್ಟ್ ಡಿಸ್ನಿ ಸ್ವತಃ ರೋಥೆನ್‌ಬರ್ಗ್ ಒಬ್ ಡೆರ್ ಟೌಬರ್‌ ಎಂಬ ಜರ್ಮನ್ ಪಟ್ಟಣಕ್ಕೆ ನೀಡಿದ ಭೇಟಿಯಿಂದ ಪ್ರೇರಿತರಾಗಿ ಪಿನೋಕಿಯೋ ಚಲನಚಿತ್ರ ದೃಶ್ಯದ ಸೆಟ್ಟಿಂಗ್‌ಗೆ ಈ ಪಟ್ಟಣವನ್ನು ಮಾದರಿಯಾಗಿ ಬಳಸಿದರು ಎಂದು ಹೇಳಲಾಗುತ್ತದೆ.

ಕಲ್ಲುಹಾಸಿನ ಬೀದಿಗಳು, ಅರ್ಧ-ಮರದ ( ಹಾಫ್ ಟಿಂಬರ್ಡ್) ಕಟ್ಟಡಗಳು ಬಾಲ್ಕನಿಗಳನ್ನು ಅಲಂಕರಿಸಿದ ಹೂವುಗಳೊಂದಿಗೆ ಹಳ್ಳಿಯ ಪ್ರತಿಯೊಂದು ಮೂಲೆಯೂ ಒಂದು ಕಾಲ್ಪನಿಕ ಕಥೆಗೆ ಸೇರಿದಂತೆ ಕಾಣುತ್ತಿತ್ತು. ಇದು ನಾನು ಭೇಟಿ ನೀಡಿದ ಅತ್ಯಂತ ಚಿತ್ರಾತ್ಮಕ ಸ್ಥಳಗಳಲ್ಲಿ ಒಂದು!

ಜರ್ಮನ್ ಭಾಷೆಯಲ್ಲಿ, "ರೋಥೆನ್‌ಬರ್ಗ್ ಒಬ್ ಡೆರ್ ಟೌಬರ್" ಎಂದರೆ "ಟೌಬರ್‌ನ ಮೇಲಿರುವ ಕೆಂಪು ಕೋಟೆ." 'ಟೌಬರ್' ಎಂಬುದು ಪಟ್ಟಣದ ಕೆಳಗಿನ ಬೆಟ್ಟದ ಉದ್ದಕ್ಕೂ ಹರಿಯುವ ನದಿಯ ಹೆಸರಾಗಿದೆ. ಒಂದು ಗ್ಲಾಸ್ ವೈನ್, ಈ ಊರನ್ನು ನಶಿಸಿಹೋಗುವುದರಿಂದ ಉಳಿಸಿದೆ ಎಂದರೆ ನೀವು ನಂಬಲೇಬೇಕು.

Germany

1631ರಲ್ಲಿ ಶಕ್ತಿಶಾಲಿ ಕ್ಯಾಥೊಲಿಕ್ ಸೈನ್ಯವು ಈ ಪಟ್ಟಣವನ್ನು ಮುತ್ತಿಗೆ ಹಾಕಿತು. ದಾಳಿಯ ಎರಡನೇ ಹಂತದಲ್ಲಿ, ಕ್ಯಾಥೊಲಿಕ್ ಪಡೆಗಳು ಪಟ್ಟಣವನ್ನು ಪ್ರವೇಶಿಸಿ ಎಲ್ಲವನ್ನೂ ಲೂಟಿ ಮಾಡಿ ನಾಶಮಾಡುವುದಾಗಿ ಬೆದರಿಕೆ ಹಾಕಿದವು. ಪಟ್ಟಣದ ಜನರು ಕ್ಯಾಥೊಲಿಕ್ ಪಡೆಯ ಜನರಲ್ ಟಿಲ್ಲಿಯನ್ನು ಪಟ್ಟಣವನ್ನು ಉಳಿಸುವಂತೆ ತೀವ್ರವಾಗಿ ಬೇಡಿಕೊಂಡರು. ಪಟ್ಟಣವನ್ನು ನಾಶಮಾಡದಂತೆ ಟಿಲ್ಲಿಯನ್ನು ಮನವೊಲಿಸುವ ಪ್ರಯತ್ನದಲ್ಲಿ ಅವನಿಗೆ ಸಾಂಪ್ರದಾಯಿಕ ಮೂರು ಲೀಟರ್ ಜಗ್ ರೋಥೆನ್‌ಬರ್ಗ್ ವೈನ್ ಅನ್ನು ನೀಡಿದರು. ದುರದೃಷ್ಟವಶಾತ್ ಜನರಲ್ ಟಿಲ್ಲಿಗೆ ಕುಡಿಯುವ ಅಭ್ಯಾಸವೇ ಇರಲಿಲ್ಲ. ಬದಲಾಗಿ, ಪಟ್ಟಣದವರೇ ಯಾರಾದರೂ ಈ ಬೃಹತ್ ಲೋಟವನ್ನು ಒಂದೇ ಗುಟುಕಿನಲ್ಲಿ ಕುಡಿಯಲು ಸಾಧ್ಯವಾದರೆ ಪಟ್ಟಣವನ್ನು ಉಳಿಸುತ್ತೇನೆ ಎಂಬ ಸವಾಲನ್ನು ಜನರ ಮುಂದಿಡಲಾಯಿತು . ಆ ಕಾಲದಲ್ಲಿ ಪಟ್ಟಣದ ಮೇಯರ್‌ಗಳೇ ಹೆಚ್ಚು ಕುಡುಕರಾಗಿದ್ದರು. ಪಟ್ಟಣ ರಕ್ಷಿಸುವುದೇ ಮೇಯರ್‌ನ ಕೆಲಸವಾದ್ದರಿಂದ ಅವರೇ ಟಿಲ್ಲಿಯ ಸವಾಲನ್ನು ಸ್ವೀಕರಿಸಿದರು. ದಂತಕಥೆಯ ಪ್ರಕಾರ ರೊಥೆನ್ ಬರ್ಗ್ ಪಟ್ಟಣದ ಮೇಯರ್ ನಶ್ ವೈನ್ ನನ್ನು ಒಂದೇ ಗುಟುಕಿನಲ್ಲಿ ಕುಡಿದಾಗ ಕ್ಯಾಥೋಲಿಕ್ ಸೈನ್ಯವು ಪಟ್ಟಣವನ್ನು ತೊರೆಯಿತು. ಪಟ್ಟಣದ ಮಧ್ಯದ ಚೌಕದಲ್ಲಿರುವ ಪ್ರಸಿದ್ಧ ಹಳೆಯ ಗಡಿಯಾರ ಗೋಪುರದ ಗಂಟೆಗಳು ಪ್ರತಿ ಗಂಟೆಗೊಮ್ಮೆ ಮೊಳಗುತ್ತವೆ ಮತ್ತು ಜನರಲ್ ಟಿಲ್ಲಿ ಹಾಗು ಮೇಯರ್ ನಶ್ ನ ಎರಡು ಮರದ ಪಾತ್ರಗಳು ಕಿಟಕಿಗಳಿಂದ ಹೊರಬಂದು ಪ್ರಸಿದ್ಧ ಸವಾಲನ್ನು ಪುನರಾವರ್ತಿಸುವಂತೆ ತೋರುತ್ತದೆ.

ಶೇಮ್ ಮಾಸ್ಕ್ !

ನಮ್ಮದೇ ನಡುವಿನ ಮನೆ ಮನೆ ಕಥೆಗಳನ್ನು ಹರಟೆ ಹೊಡೆಯುತ್ತ ಬೀದಿಗೆಳೆದು ತರುವ ಪಾತ್ರ ನಿಮಗೀಗಾಗಲೇ ಗೊತ್ತಿರಬಹುದು. ಇಂಥ ಹರಟೆಗಳನ್ನು ಮಧ್ಯಯುಗದಲ್ಲಿ ಅಪರಾಧವೆಂದೇ ಪರಿಗಣಿಸಲಾಗುತ್ತಿತ್ತು. ಪಟ್ಟಣದಲ್ಲಿರುವ ಮಿಡೀವಲ್ ಕ್ರೈಂ ಮ್ಯೂಸಿಯಂಗೆ ನೀವು ಭೇಟಿ ನೀಡಿದರೆ ಇಂಥ ಕಾಡು ಹರಟೆ ಅಥವಾ ಗಾಸಿಪ್ ಮಾಡುವವರು ಧರಿಸಲಾಗುತ್ತಿದ್ದ ಕಬ್ಬಿಣದಿಂದ ಮಾಡಿದ ಗಾಸಿಪ್ ಮುಖವಾಡವನ್ನು ಕಾಣಬಹುದು. ಬೇರೆಯವರ ಜೀವನದಲ್ಲಿ ಮೂಗು ತೂರಿಸುವ ಈ ಅಪರಾಧದ ಸಂಕೇತವೆಂಬಂತೆ ಮಾಸ್ಕ್ ಗೆ ಮೊನಚಾದ ಮೂಗು ಹಾಗೂ ಸೀಟಿಯನ್ನು ಬಾಯಿಗೆ ಅಳವಡಿಸಲಾಗಿತ್ತು. ಅರ್ಥಾತ್ ಮಾಸ್ಕ್ ತೊಟ್ಟವರು ಉಸಿರಾಡಿದಾಗೆಲ್ಲ ಶಿಳ್ಳೆ ಹೊಡೆದಂತಾಗಿ ಸುತ್ತ ಮುತ್ತಲಿನ ಜನರು ಇವರನ್ನು ಮಾತಿಗೆ ಎಳೆಯುತ್ತಲೇ ಇರಲಿಲ್ಲ ! ಅವಮಾನಿಸಲೆಂದೇ ಮಾಡಲಾದ ಈ ಮಾಸ್ಕ್ ಗೆ ಶೇಮ್ ಮಾಸ್ಕ್ ಎಂಬ ಹೆಸರಿತ್ತು. ಇದಕ್ಕೆ ಕೊಂಬುಗಳಿದ್ದರೆ, ಆ ವ್ಯಕ್ತಿ ಮೋಸ ಹೋಗುತ್ತಿದ್ದಾನೆ ಅಥವಾ ಮೋಸ ಮಾಡುತ್ತಿದ್ದಾನೆ ಎಂದರ್ಥ. ದೊಡ್ಡ ನಾಲಿಗೆ ಇದ್ದರೆ, ಆ ವ್ಯಕ್ತಿ ಗಾಸಿಪ್ ಮಾಡುವವನು ಎಂದರ್ಥ.

ಆಲ್ ಈಸ್ ವೆಲ್

ಮ್ಯೂಸಿಯಂ ನಿಂದ ಹೊರಬೀಳುತ್ತಿದ್ದಂತೆಯೇ ಕಪ್ಪು ಬಟ್ಟೆ ಧರಿಸಿದ್ದ, ಗುಂಗುರು ಕೂದಲು, ಚೂರು ಗಡ್ಡವಿದ್ದ ಇಂಗ್ಲಿಷ್ ನಲ್ಲಿ ಅತ್ಯುತ್ಸಾಹದಿಂದ ಮಾತಾಡುತ್ತಿದ್ದ ನೈಟ್ ವಾಚ್ ಮ್ಯಾನ್ ಎದುರಾದ. ಆ ಕಾಲದಲ್ಲಿದ್ದ ರಾತ್ರಿ ಕಾವಲುಗಾರ. ಕೆಲಸದ ಆಗು ಹೋಗುಗಳನ್ನು ವಿವರಿಸುವ ನೈಟ್ ವಾಚ್ ಮ್ಯಾನ್ ಟೂರ್ ತುಂಬಾ ಪ್ರಸಿದ್ಧವಾದದ್ದು.

ಅವನು ಮಾತನಾಡುತ್ತ "ಮಧ್ಯಕಾಲೀನ ರೋಥೆನ್‌ಬರ್ಗ್‌ನ ರಾತ್ರಿ ಕಾವಲುಗಾರನಾಗಿರುವುದು ಕೀಳು ಕೆಲಸವಾಗಿತ್ತು' ಎಂದು ಹೇಳಿದ. ಕಡಿಮೆ ಗೌರವ, ಕಡಿಮೆ ವೇತನ ಹಾಗು ತೀರಾ ಅಪಾಯಕಾರಿ ಕೆಲಸ. ಇದಕ್ಕಿಂತ ಕೀಳೆನಿಸುತ್ತಿದ್ದ ಕೆಲಸಗಳೆಂದರೆ ಸಮಾಧಿ ಅಗೆಯುವವನ ಕೆಲಸ ಮತ್ತು ಮರಣದಂಡನೆಕಾರನಾಗುವುದು. ನೈಟ್ ವಾಚ್ ಮ್ಯಾನ್ ರಾತ್ರಿಯಿಡೀ 'ಆಲ್' ಈಸ್ ವೆಲ್' ಎನ್ನುವ ಹಾಡು ಹಾಡುತ್ತಿದ್ದ . ಬೆಳಗಿನ ಜಾವ ಮೂರು ಗಂಟೆಗೆ ರಾತ್ರಿ ಕಾವಲುಗಾರನ ಈ ಹಾಡು ನಿಮಗೆ ಕಿರಿ ಕಿರಿ ಉಂಟು ಮಾಡಿದರೂ ಅವನು ಹೀಗೆ ನಡೆದಾಡುವುದು ಎಲ್ಲರಿಗೂ ನೆಮ್ಮದಿ ನೀಡುತ್ತಿತ್ತು ಎಂದು ಗೈಡ್ ಹೇಳಿದ.

ಇತ್ತೀಚಿನ ದಿನಗಳಲ್ಲಿ, ಕೆಲಸವು ಹೆಚ್ಚು ಗೌರವಾನ್ವಿತವಾಗಿದೆ: ಜನರು ನನ್ನ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ ಈಗೇನು ಹೆಚ್ಚು ಅಪಾಯವಿಲ್ಲ ಏಕೆಂದರೆ ನೀವೆಲ್ಲರೂ ನನ್ನ ಜೊತೆಯೇ ಇದ್ದೀರಿ ಎಂದು ನೈಟ್ ವಾಚ್ ಮ್ಯಾನ್ ನಗುತ್ತ ನಮ್ಮ ಕಾಲೆಳೆದ.

1648 ರಲ್ಲಿ ಯುದ್ಧ ಮತ್ತು ಪ್ಲೇಗ್‌ಗಳು ನಿಂತಾಗ - ಶತಮಾನಗಳ ಬಡತನವಿತ್ತು . ರೋಥೆನ್‌ಬರ್ಗ್‌ನ ದುರದೃಷ್ಟವು ಪಟ್ಟಣವನ್ನು ಗಾಢ ನಿದ್ರೆಗೆ ತಳ್ಳಿತ್ತು ಈಗ ಹಾಗಿಲ್ಲ ಎಂದು ಹೇಳುತ್ತಾ ನೈಟ್ ವಾಚ್ ಮ್ಯಾನ್

ತನ್ನ ಬಳಿ ಇದ್ದ ಹಾರ್ನ್‌ನಲ್ಲಿ ( ಸಂಗೀತ ವಾದ್ಯ ) ದೀರ್ಘವಾದ ಕಾಡುವ ಸ್ವರವನ್ನು ಊದಿ 'ನನ್ನ ಸ್ನೇಹಿತರೇ, ನೀವು ಬೇಗನೆ ಮನೆಗೆ ಹೋಗಬೇಕು. ಈ ಸಮಯದಲ್ಲಿ ಒಳ್ಳೆಯ ಜನರಿಗೆ ಹಾಸಿಗೆ ಅತ್ಯುತ್ತಮ ಸ್ಥಳ' ಎಂದು ಹೇಳಿ ಟೂರ್ ಅನ್ನು ಕೊನೆಗೊಳಿಸಿದ.

ರೋಥೆನ್‌ಬರ್ಗ್ ಒಬ್ ಡೆರ್ ಟೌಬರ್‌ಗೆ ನನ್ನ ಭೇಟಿಯು ಚಿತ್ರಕಲೆಯೊಳಗೆ ಹೆಜ್ಜೆ ಹಾಕಿದಂತಿತ್ತು. ಪಟ್ಟಣದ ಕಲ್ಲುಮಣ್ಣಿನ ರಸ್ತೆಗಳಲ್ಲಿ ಹೆಜ್ಜೆ ಹಾಕುತ್ತ ' ಆಲ್ ಈಸ್ ವೆಲ್ ' ಹಾಡನ್ನು ಹಾಡುತ್ತ ಬದುಕಿನತ್ತ ನಡೆದು ಹೊರಟೆ !

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...